Saturday, October 31, 2009

ಸತ್ಯದರ್ಶನ

ಶುದ್ದ ಸೋಮವಾರ ಬೆಳಿಗ್ಗೆ. ಆರಾಮಾವಗಿ ಎಂಟಕ್ಕೆ ಎದ್ದೆ, ಕಾರಣ ರಜೆ ಹಾಕಿದ್ದೆ. ಹತ್ತು ಘಂಟೆಗೆ ಯಾವುದೋ ಕಂಪನಿಯಲ್ಲಿ ಇಂಟರ್ವ್ಯೂ ಇತ್ತು. ಮನೆಯಿಂದ ಹತ್ತು ನಿಮಿಷದ ದಾರಿ ಮಾತ್ರ. ಹಾಗಾಗಿ ಗಡಿಬಿಡಿ ಇಲ್ಲ. ನಿತ್ಯಕರ್ಮಗಳನ್ನು ಮುಗಿಸಿ, ಕಾಫೀ ಹೀರಿ, ತಿಂಡಿ ಏನಿದೆ ಎಂದು ನೋಡಲು ರೆಫ್ರಿಜಿರೇಟರ್ ಕದವನ್ನು ತೆರೆದೆ. ಅಮ್ಮ ಮಾಡಿಟ್ಟು ಹೋಗಿದ್ದ ಉಪ್ಪಿಟ್ಟು ಇತ್ತು. ಸ್ವಲ್ಪ ಹೊರ ತೆಗೆದಿಟ್ಟೆ, ಆಮೇಲೆ ಬಿಸಿ ಮಾಡಿಕೊಳ್ಳೋಣ ಎಂದು. ಲ್ಯಾಪಿನ ಮೇಲೆ ಲ್ಯಾಪುಟಾಪನ್ನೇರಿಸಿ ಸೋಫಾದ ಮೇಲೆ ಕುಳಿತು, ಹಾಗೇ ಟೀವಿಯನ್ನೂ ಆನ್ ಮಾಡಲು ರಿಮೋಟ್ ಕೈಗೆತ್ತಿಕೊಂಡೆ. ಅಷ್ಟರಲ್ಲಿ, ನನ್ನ ಹಿಂದಿನಿಂದ ದನಿಯೊಂದು ಮೂಡಿ ಬಂತು "ಇನ್ನೂ ತಿಂಡಿ ತಿಂದಿಲ್ಲವೇ?" ಅಂತ

ತಿರುಗಿ ನೋಡಿದೆ. ಬಿಳೀ ಪಂಚೆ ಬಿಳೀ ಶರಟು ತೊಟ್ಟ ತಾತ ನಿಂತಿದ್ದರು. "ರೂಮ್ ಟೆಂಪರೇಚರ್’ಗೆ ಬರಲಿ ಅಂತ ಹಾಗೇ ಎತ್ತಿಟ್ಟಿದ್ದೇನೆ" ಅಂದೆ ... ಅದು ಹಾಗೇ ಹೊರಳಿ ಬಂದ ಮಾತಾಗಿತ್ತು ಅಷ್ಟೇ, ಮರು ಕ್ಷಣ ಸಣ್ಣ ದನಿಯಲ್ಲಿ ಕಿರುಚಿಯೇ ಬಿಟ್ಟೆ !!

ಅಪ್ಪ-ಅಮ್ಮ ಇಬ್ಬರೂ ಅಜ್ಜಿಯನ್ನು ತೀರ್ಥಯಾತ್ರೆಗೆ ಕರೆದುಕೊಂಡು ಹೋಗಿದ್ದರು. ಹಾಗಾಗಿ ನಾನೊಬ್ಬನೇ ... ಈಗ ನನ್ನ ಜೊತೆಯಲ್ಲಿ ನನ್ನ ತಾತ ... ನನ್ನ ಪ್ರೀತಿಯ ತಾತ ! ... ಹತ್ತು ವರ್ಷಗಳ ಹಿಂದೆ ನಮ್ಮನ್ನೆಲ್ಲ ಅಗಲಿ ಹೋದ ತಾತ !! .... ಈಗ ಸಡನ್ನಾಗಿ ಎಂಟ್ರಿ ಕೊಟ್ಟರು ಅಂದರೇ ... ಇಲ್ಲ... ಭ್ರಮೆಯಲ್ಲ !! ನಿಜಕ್ಕೂ ನಿಂತಿದ್ದಾರೆ ...

ಕಳೆದ ಪಿತೃಪಕ್ಷದಲ್ಲೊಂದು ದಿನ, ಹೊರಗೆ ಕಾಗೆಯೊಂದು ಒಂದೇ ಸಮನೆ ಕಾವ್-ಕಾವ್ ಎಂದು ಕೂಗುತ್ತಿರುವಾಗ ನಾನು ಅಜ್ಜಿಯೊಡನೆ ಹಾಸ್ಯ ಮಾಡಿದ್ದೆ "ನೋಡಜ್ಜೀ, ಯಾರೋ ನಮ್ಮ ಬಳಗ ಇರಬೇಕು, ಬಂದಿದ್ದಾರೆ" ಅಂತ. ಅಜ್ಜಿ ಅದಕ್ಕೆ ರೇಗಿಕೊಂಡೇ ನುಡಿದಿದ್ದರು "ಈಗಿನ ಕಾಲದ ಹುಡುಗರಿಗೆ, ನಮ್ಮ ಸಂಪ್ರದಾಯ ಅಂದರೆ ಅಷ್ಟಕ್ಕಷ್ಟೇ. ಎಲ್ಲ ಹಾಸ್ಯ ಇವಕ್ಕೇ. " ಹೀಗೇ ಸಾಗಿತ್ತು. "ನಾನು ಸುಮ್ಮನೆ ಹೇಳಿದೆ ಅಜ್ಜಿ. ನನ್ನ ಬಿಟ್ಟುಬಿಡಿ" ಅಂತ ನಾನು ಕಾಲಿಗೆ ಬೀಳೋದು ಬಾಕಿ ಇತ್ತು. ಅಜ್ಜಿಯನ್ನು ರೇಗಿಸಿದರ ಫಲವೋ ಏನೋ ಎಂಬಂತೆ ಈಗ ತಾತ ದರ್ಶನ.

ಅದೇ ಶಾಂತತೆಯಲ್ಲಿ ನನ್ನನ್ನು ಸಮಾಧಾನಗೊಳಿಸಿ ನಿನಗೆ ಸತ್ಯದರ್ಶನ ಮಾಡಿಸಲೆಂದೇ ಬಂದಿದ್ದೀನಿ, ಹೆದರಬೇಡ ಎಂದೆಲ್ಲಾ ಸಾಂತ್ವನಗೊಳಿಸಿ, ಮೊದಲು ನನ್ನನ್ನು ತಿಂಡಿ ತಿಂದು ಮುಗಿಸೆಂದು ಬಲವಂತ ಮಾಡಿದರು. ಮೊದಲಿಂದಲೂ ಹೀಗೆ ಈ ತಾತ ’ಹೊರಗಡೆ ಹೊರಡುವ ಮುನ್ನ ಅಮ್ಮ ಏನು ಮಾಡಿದ್ದಾರೋ ಅದನ್ನು ಹೊಟ್ಟೆಗೆ ಹಾಕಿಕೊಂಡು ಹೋಗಿ. ಬರುವುದು ಒಂದರ್ಧ ಘಂಟೆ ತಡವಾದರೂ ಚಿಂತೆಯಿಲ್ಲ’ ಅಂತ ... ಓ! ಅಂದರೆ ನಾವೀಗ ಹೊರಗಡೆ ಹೊರಟಿದ್ದೀವಿ ಅಂತಾಯ್ತು ... ಈಗ ನಾವು ಹೊರಗೆ ಹೊರಟರೆ, ತಾತನನ್ನು ಬಲ್ಲವರು ಅವರನ್ನು ನೋಡಿ ಎಲ್ಲರೂ ಭೀತಿಯಿಂದ ಎದ್ದು ಬಿದ್ದು ಓಡುತ್ತಾರೆ ... ಅಲ್ಲದೇ, ನನಗೆ ಇಂಟರ್ವ್ಯೂ ಬೇರೆ ಇದೆ"

ತಾತ ನುಡಿದರು "ನೀನೇನೂ ಚಿಂತೆ ಮಾಡಬೇಡ. ನಾನು ನಿನ್ನ ಕಣ್ಣಿಗೆ ಬಿಟ್ಟು ಇನ್ಯಾರ ಕಣ್ಣಿಗೂ ಕಾಣಿಸುವುದಿಲ್ಲ. ಹಾಗೇ ನೀನು ನನ್ನೊಂದಿಗೆ ಮಾತನಾಡುತ್ತಿರುವಾಗ ಬೇರೊಬ್ಬರಿಗೆ ಕೇಳಿಸುವುದೂ ಇಲ್ಲ, ಯಾಕೆಂದರೆ ನಮ್ಮಿಬ್ಬರ ಸಂಭಾಷಣೆ ಏನಿದ್ದರೂ ಮನದಲ್ಲಿ ಮಾತ್ರ". "ಹೌದಲ್ವೇ? ನಾನು ಆಗಿಂದಲೂ ಬಾಯೇ ಬಿಟ್ಟಿಲ್ಲ ಹಾಗಿದ್ರೂ ಇಬ್ರೂ ಮಾತನಾಡುತ್ತಿದ್ದೇವಲ್ಲ ?"

ನಾನೂ, ತಾತ ಇಬ್ಬರೂ ಕಾರಿನಲ್ಲಿ ಹೊರಟೆವು. ಇನ್ನೂ ಕಾಲು ಘಂಟೆ ಇರುವಂತೆಯೇ ನಾವು ಅಲ್ಲಿದೆವು. ತಾತ ಏನೂ ಮಾತನಾಡದೆ ಸುಮ್ಮನಿದ್ದರು. ನಾನು ಒಳಗೆ ಹೋಗಿ ಅರ್ಧ ಘಂಟೆಯಲ್ಲಿ ಹೊರಗೆ ಬಂದೆ. ಇಬ್ಬರೂ ಹೊರಟು ಕಾರಿನಲ್ಲಿ ಕುಳಿತೆವು. ತಾತ ಕೇಳಿದರು "ಹೇಗಾಯ್ತು ?" ನಾನೆಂದೆ "ಚೆನ್ನಾಗೇ ನೆಡೆಯುತ್ತಿತ್ತು. ಆಮೇಲೆ ಯಾವುದೋ ಫೋನ್ ಬಂತು. ನಂತರ ಇಂಟರ್ವ್ಯೂ ಸಡನ್ನಾಗಿ ಮುಗಿದು ಹೋಯ್ತು. ಆಮೇಲೆ ತಿಳಿಸ್ತೀನಿ ಅಂದು ಕಳಿಸಿಬಿಟ್ರು. ಬರೀ ಮೋಸ ಅನ್ನಿಸುತ್ತೆ. ಅವನನ್ನಾ ಹಿಡ್ಕೊಂಡ್ ಹೊಡೆದುಬಿಡೋ ಅಷ್ಟು ಸಿಟ್ಟು ಬಂತು"

ತಾತ ನುಡಿದರು "ನಿನ್ನ ಊಹೆ ಸರಿ. ನಿನಗೆ ಈ ಕೆಲಸ ಸಿಗೋಲ್ಲ. ಅದು ಬೇರೆಯವರಿಗೆ ಸಿಗಲಿದೆ. ಅದು ಬೇರೆ ಯಾರೂ ಅಲ್ಲ. ನಿನ್ನನ್ನು ಇಂಟರ್ವ್ಯೂ ಮಾಡಿದ ’ರಾಜಾರಾಯ’ನ ಹೆಂಡತಿಯ ತಮ್ಮನಾದ ’ಪ್ರತಾಪ’ನಿಗೆ. ಈ ರಾಜಾರಾಯನಿಗೆ ಪ್ರತಾಪನನ್ನು ತಂದು ತನ್ನ ಕಂಪನಿಯಲ್ಲಿ ಕೆಲಸ ಕೊಡಲು ಇಷ್ಟವಿಲ್ಲ, ಕಾರಣ ಅವನಿಗಿರೋ ರಾಜಕೀಯದ ನಂಟು. ರಾಜಾರಾಯನನ್ನೇ ಎತ್ತಂಗಡಿ ಮಾಡಿ ಆ ಸ್ಥಾನದಲ್ಲಿ ಕುಳಿತುಕೊಳ್ಳೋ ತಾಕತ್ತು ಪ್ರತಾಪನಿಗಿದೆ. ಆದರೆ ಹೆಂಡತಿಯ ಬಲವಂತ. ಆಗ ಬಂದಿದ್ದು ಅವಳದೇ ಫೋನ್. ಅವಳು ಬಲವಂತ ಮಾಡುತ್ತಿರುವುದಕ್ಕೂ ಕಾರಣ ಇದೆ".

"ತನ್ನ ತಂದೆಯಿಂದ ಮದುವೆ ಸಮಯದಲ್ಲಿ ಬಳುವಳಿಯಾಗಿ ಬಂದ ಕಂಪನಿಯಲ್ಲಿ ತನ್ನ ತಮ್ಮನಿಗೆ ಜಾಗ ಕೊಡಲು ಇವಳು ಸಿದ್ದವಿಲ್ಲ. ಪ್ರತಾಪನ ಕಂಪನಿ ಮುಳುಗಿ ಎರಡು ವರ್ಷ ಆಯ್ತು. ಗಂಡನ ಕಂಪನಿಗಿಂತ ಇವಳದು ತುಸು ದೊಡ್ಡದಾದ್ದರಿಂದ, ಪ್ರತಾಪನನ್ನು ಅಲ್ಲಿ ಬಿಟ್ಟು, ನಂತರ ಇವಳೂ ’ಬೋರ್ಡ್ ಆಫ್ ಡೈರೆಕ್ಟರ್ಸ್’ನಲ್ಲಿ ಒಬ್ಬಳಾಗಬಹುದು ಅಂತ. ಗಂಡ ಅವಳನ್ನು ತನ್ನ ಆಫೀಸಿನ ಬೋರ್ಡ್’ಗೆ ಬರಲು ಬಿಟ್ಟಿರಲಿಲ್ಲ. ಹಾಗೇ ಅವಳು ತನ್ನ ಕಂಪನಿಯ ವ್ಯವಹಾರದಲ್ಲಿ ಗಂಡನನ್ನು ಕಾಲಿಡಲು ಬಿಟ್ಟಿರಲಿಲ್ಲ. ಅಲ್ಲದೇ, ಗಂಡನಿಗೂ ಅವನ ಸೆಕ್ರೆಟರಿಗೂ ಇರೋ ಸಂಬಂಧವನ್ನು ಬೇಗ ಮುರಿಯದಿದ್ದರೆ, ಅವನ ಆಸ್ತಿ ಎಲ್ಲಿ ಅವಳ ಕೈಗೆ ಹೊರಟುಹೋಗುವುದೋ ಎಂಬ ಆತಂಕ. ಆದರೆ ಅವಳ ತಮ್ಮನ ಹಿಂದೆ ಬಿದ್ದಿರುವ ಆ ಸೆಕ್ರೆಟರಿ, ತಾನೂ ಕಂಪನಿಯ ದೊಡ್ಡ ಸ್ಥಾನಕ್ಕೆ ಏರಬಹುದೆಂಬ ಆಸೆ ಹೊಂದಿದ್ದಾಳೆ ಎಂಬುದು ಈ ಗಂಡ-ಹೆಂಡತಿಗೆ ಗೊತ್ತಿಲ್ಲ. ಎಲ್ಲ ದೊಡ್ಡವರ ಆಟ. ಈ ಇಡೀ ಆಟದಲ್ಲಿ ನಿನ್ನಂಥವರ ಪಾತ್ರ ಇಲ್ಲವೇ ಇಲ್ಲ ಎನಿಸುವಷ್ಟು. ಆ ಸೆಕ್ರೆಟರಿಯಂಥವರ ಪಾತ್ರ ಪಗಡೆ ಆಟದ ಕಾಯಿಯಂತೆ. ಇನ್ನೊಂದು ತಿಂಗಳಲ್ಲಿ ಅವಳಿಗಾಗುವ ಅನ್ಯಾಯ ನೆನಸಿಕೊಂಡರೆ ಬೇಜಾರಾಗುತ್ತೆ". ಕೇಳ್ತಾ ಕೇಳ್ತಾ ತಲೆ ತಿರುಗತೊಡಗಿತು.

ಉಪ್ಪಿಟ್ಟು ಸಾಕಾಗಲಿಲ್ಲವೆಂದು ತೋರುತ್ತೆ. ಹಸಿವಾಗ ತೊಡಗಿತು. ಹಾಗೇ ಬದಿಯಲ್ಲಿ ತೆಗೆದುಕೊಂಡು ನನ್ನ ನೆಚ್ಚಿನ ಹೋಟೆಲ್’ಗೆ ಕಡೆ ಹೋದೆ. ಬೀದಿ ಕೊನೆಯಲ್ಲಿದ್ದ ಕುರುಡು ಬಿಕ್ಷುಕನನ್ನು ಕಂಡು ಅಯ್ಯೋ ಎನ್ನಿಸಿ ದುಡ್ಡು ಕೊಟ್ಟೆ. ತಾತ ಸುಮ್ಮನೆ ನಕ್ಕರು ಅಷ್ಟೇ ! ಒಳಗೆ ಹೋದ ಮೇಲೆ ತಾತನನ್ನು ಕೇಳಿದೆ "ನಕ್ಕಿದ್ದೇಕೆ ?" ಅಂತ.

ತಾತ ನುಡಿದರು "ನಿನ್ನಿಂದ ನೆಡೆದದು ಅಪಾತ್ರದಾನ. ಏಕೆಂದರೆ ಅವನು ಕುರುಡನೂ ಅಲ್ಲ ಭಿಕ್ಷುಕನಂತೂ ಮೊದಲೇ ಅಲ್ಲ. ನೀನು ತ್ರಿಕಾಲಜ್ಞ್ನಾನಿ ಅಂತ ಭಕ್ತಿಯಿಂದ ತಲೆ ಬಾಗೋ ಆಷಾಡಭೂತಿ ಸ್ವಾಮೀಜಿಯ ಶಿಷ್ಯ ಅಥವಾ ಪಾರ್ಟನರ್. ಜನರ ಮಧ್ಯೆ ಇದ್ದು, ಎಲ್ಲರ ವಿಷಯ ತಿಳಿದುಕೊಂಡು ತನ್ನ ಕಳ್ಳ ಗುರುವಿಗೆ ಒಪ್ಪಿಸುತ್ತಾನೆ. ನಿನ್ನ ಮುಖ ನೋಡುತ್ತಲೇ ನಿನ್ನ ಸಂಪೂರ್ಣ ಜಾತಕ ನುಡಿವ ’ಅದ್ಭುತ ಶಕ್ತಿ’ಯ ಸ್ವಾಮೀಜಿಗೆ ಇವನಿಂದಲೇ ವಿಷಯ ದೊರಕೋದು. ಜೊತೆಗೆ ಅವನಿಗಿರೋ ಸೂಕ್ಷ್ಮ ಬುದ್ದಿ. ಉದಾಹರಣೆಗೆ ಪಂಚೆಯುಟ್ಟ ಚಿಂತಿತ ಮುಖದಿ ಸ್ವಾಮೀಜಿಯ ಬಳಿ ಹೋದವನೊಬ್ಬನನ್ನು ನೋಡಿದ ಕೂಡಲೇ ಆ ಸ್ವಾಮಿ ಕೇಳೋ ಪ್ರಶ್ನೆ ’ಮಗಳ ಮದುವೆ ಚಿಂತೆ ಅಥವಾ ಮಗ ನೌಕರಿ ಚಿಂತೆ ಅಲ್ಲವೇ ?’ ಎನ್ನುತ್ತಾರೆ. ಈ ಪ್ರಶ್ನೆ ಕೇಳಲು ಸ್ವಾಮೀಜಿಯೇ ಆಗಬೇಕೆ? ಇನ್ನೊಂದು ವಿಷಯ ಗೊತ್ತಾ ? ಈ ಸ್ವಾಮಿಗೆ ಮತ್ತೊಬ್ಬ ಅಸಿಸ್ಟೆಂಟ್ ಇದ್ದಾನೆ. ಅವನು ಆಟೋ ಓಡಿಸುತ್ತಾನೆ. ಆಟೋ ಡ್ರೈವರ್’ಗೆ ಎಷ್ಟು ಮನೆಗಳ ಒಳ ವಿಚಾರಗಳು ಗೊತ್ತಿರುತ್ತೋ ಆ ಪರಮಾತ್ಮನಿಗೇ ಗೊತ್ತು !".

ಇವೆಲ್ಲ ನನಗೇಕೆ ಅರಿಯಲಿಲ್ಲ ? ಯೋಚಿಸುತ್ತಿರುವಾಗಲೇ, ನನ್ನ ಮುಂದಾಗಿ ಶಂಕರಪ್ಪ ಹಾದು ಹೋದರು. ಅವರನ್ನು ಕಂಡು ವಿಶ್ ಮಾಡಿ ಒಂದು ನಿಮಿಷ ಮಾತನಾಡಿದೆ. ಅವರು ಹೋದ ಮೇಲೆ ತಾತನಿಗೆ ಹೇಳಿದೆ "ನನಗೆ ಅಂಕ ಕಡಿಮೆ ಬಂದಾಗ ಇಂಜಿನೀರಿಂಗ್ ಸೀಟಿಗಾಗಿ ಪರದಾಡುತ್ತಿದ್ದೆ. ಇವರು ಎರಡು ಲಕ್ಷಕ್ಕೆ ಬೆಂಗಳೂರಿನಲ್ಲೇ ಸೀಟು ಕೊಡಿಸ್ತೀನಿ ಅಂದರು. ಆಮೇಲೆ ಯಾರೋ ಮಧ್ಯೆ ಬಂದು ಕೆಲಸಾ ಕೆಡಿಸಿದರು. ಕೊನೆಗೆ ಇವರು ಬಹಳ ಕಷ್ಟಪಟ್ಟು ರಾಯಚೂರಿನಲ್ಲಿ ಸೀಟು ಕೊಡಿಸಿದರು. ಐವತ್ತು ಸಾವಿರ ವಾಪಸ್ಸು ಕೊಟ್ಟರು". ತಾತ ನಕ್ಕರು.

ಪ್ರತಿ ನಗುವಿಗೂ ಒಂದೊಂದು ಸತ್ಯ ದರ್ಶನ ಆಗುತ್ತಿದೆ. ಈಗೇನು ಎಂಬಂತೆ ನೋಡಿದೆ. ತಾತ ನುಡಿದರು "ಎರಡು ಲಕ್ಷಕ್ಕೆ ಬೆಂಗಳೂರಿನ ಕಾಲೇಜಿನಲ್ಲಿ ಸೀಟು ಅಂದರೆ ನಗದೆ ಇನ್ನೇನು ಮಾಡಲಿ. ಯಾರೋ ಮಧ್ಯೆ ಬರಲಿಲ್ಲ. ಇದು ಅವರಾಡಿದ ಆಟ ಅಷ್ಟೆ. ಮೊದಲ ದೀಪಾವಳಿ ಪ್ರಯುಕ್ತ ಅಳಿಯನಿಗೆ ಒಂದು ಕಾರು ಕೊಡಿಸುವ ಯೋಚನೆಯಲ್ಲಿದ್ದಾಗ ಸಿಕ್ಕಿದ್ದು ನೀನು. ನೀ ಕೊಡೋ ಎರಡು ಲಕ್ಷ ಅವರಿಗೆ ಯಾಕೆ ಸಾಕು? ಆ ಸಮಯದಿ ಸಿಕ್ಕಿದ್ದು ಒಬ್ಬ ಉತ್ತರ ಭಾರತೀಯ. ಅವನಿಂದ ಹತ್ತು ಲಕ್ಷ ತೆಗೆದುಕೊಂಡು ಬೆಂಗಳೂರಿನಲ್ಲಿ ಸೀಟು ಕೊಡಿಸಿ, ನಿನ್ನನ್ನು ರಾಯಚೂರಿಗೆ ಕಳಿಸಿದರು. ಗುರುತಿನವನು ಅಂತ ನಿನ್ನ ಕಣ್ಣೊರೆಸಲು ಐವತ್ತು ಸಾವಿರ ವಾಪಸ್ಸು ಕೊಟ್ಟರು, ಅಷ್ಟೇ! "

ಎಲ್ಲ ಕಡೆ ವಂಚನೆ, ಮೋಸ, ಹಗಲು ದರೋಡೆ ! ತಲೆ ತಿರುಗುವಿಕೆ ಹೆಚ್ಚಾಯಿತು. ಥಟ್ಟನೆ ಹೋದವಾರ ನೆಡೆದ ಮದುವೆ ಮನೆ ಗಲಾಟೆ ವಿಷಯ ನೆನಪಿಗೆ ಬಂತು. ಹೆಣ್ಣಿನ ಕಡೆಯವರ ವಜ್ರದ ನೆಕ್ಲೇಸು ವರ ಮಹಾಶಯನ ಶರಟಿನ ಜೋಬಿನಲ್ಲಿ ಸಿಕ್ಕಿತಲ್ಲ ಅದರ ಗುಟ್ಟೇನು? ಮದುವೆ ನಿಲ್ಲಿಸಲು ಅವನ ಗೆಳೆಯ ಮಾಡಿದ ಹುನ್ನಾರ ತಾನೇ? ಅವನನ್ನು ಹಿಡಿದು ತದುಕಿದಾಗ ಇರಲಿ ಅಂತ ನಾನೂ ಒಂದು ಧರ್ಮದೇಟು ಕೊಟ್ಟು ಛತ್ರದಿಂದ ಹೊರ ಹಾಕಿದೆವು. ಅವನು ಹಾಗೇಕೆ ಮಾಡಿದ ? ತಾತ ವಿಷಾದದಿಂದ ನಕ್ಕರು.

"ಆ ವರಮಹಾಶಯನಿಗೆ ಮೊದಲೇ ಮದುವೆಯಾಗಿತ್ತು. ಈ ಸುಳಿವನ್ನು ಅರಿತ ಅವನ ಗೆಳೆಯ ನೆಕ್ಲೇಸು ಕದ್ದ ಅರೋಪವನ್ನು ವರನ ಮೇಲೆ ಬರಿಸಿದರೆ ಮದುವೆ ನಿಲ್ಲುತ್ತೆ, ಹುಡುಗಿಯ ಬಾಳೂ ಉಳಿಯುತ್ತೆ ಅಂತ ಹಾಗೆ ಮಾಡಿದ. ಅವನ ದುರಾದೃಷ್ಟ. ಏನೋ ಮಾಡಲು ಹೋಗಿ ಏನೋ ಆಯ್ತು."

ಮಾಣಿ ಊಟ ತಂದಿಟ್ಟ.

ಮನಸ್ಸು ಸುಸ್ಥಿತಿಯಲ್ಲಿದ್ದರೆ ಊಟವೂ ರುಚಿಯಾಗಿರುತ್ತೆ. ಆದರೆ ಈಗ ಖಂಡಿತ ನನಗೆ ಊಟ ರುಚಿಸಲಿಲ್ಲ. ಕೋಳಿ ಕೆದಕಿದಂತೆ ಕೆದಕಿ ಊಟ ಮುಗಿಸಿ ತಟ್ಟೆಗೆ ನೀರು ಹಾಕಿದೆ. ತಾತ ಮತ್ತೆ ನಕ್ಕರು. ನೊಂದ ನಗುವಿನಂತೆ ಕಂಡಿತು ನನಗೆ. ಏಕೆಂದು ಕೇಳಿದೆ. ತಾತ ನುಡಿದರು "ಪ್ರತಿ ರಾತ್ರಿ ಈ ಹೋಟೆಲ್ಲಿನ ಹಿಂದೆ ಒಂದು ವಹಿವಾಟು ನೆಡೆಯುತ್ತದೆ. ಹೋಟೆಲ್ಲಿನವರು ನಿನ್ನಂತಹವರು ಎಸೆದಿರುವ ಈ ಊಟವನ್ನು ಒಂದು ಡಬ್ಬಕ್ಕೆ ತುಂಬಿರುತ್ತಾರೆ. ಒಬ್ಬ ತನ್ನ ಸೈಕಲ್ಲಿನಲ್ಲಿ ಬಂದು ಆ ಡಬ್ಬವನ್ನು ಹೆಕ್ಕಿ ’ತಿನ್ನಬಹುದು’ ಎನಿಸುವ ಖದ್ಯಗಳನ್ನು ಒಂದು ಪಾತ್ರೆಗೆ ಹಾಕಿಕೊಳ್ಳುತ್ತಾನೆ. ಅವನು ತೆಗೆದುಕೊಂಡ ಊಟಕ್ಕೆ ಹಣ ಪಾವತಿ ಮಾಡುತ್ತಾನೆ. ಹೋಟೆಲ್ಲಿನವರು ಬೇಡವೆಂದರೂ ಅವನು ಕೊಡುತ್ತಾನೆ. ಕಾರಣ ಕೇಳಿದರೆ, ಬಿಟ್ಟಿ ಬಂದದ್ದಕ್ಕೆ ಬೆಲೆ ಇರೋಲ್ಲ ಅಂತಾನೆ ಪುಣ್ಯಾತ್ಮ. ಅವನು ಹೆಕ್ಕಿಕೊಂಡ ಊಟವನ್ನು ಮನೆಗೆ ಒಯ್ದು ತನ್ನ ಮಕ್ಕಳಿಗೆ ನೀಡುತ್ತಾನೆ. ರಾತ್ರಿ ಪಾಳಿ ಮಾತ್ರ ಅವರ ಊಟ."

ಈಗ ನಿಜಕ್ಕೂ ತಲೆ ಗಿರಕಿ ಹೊಡೆದು ಕೆಳಗೆ ಬಿದ್ದೆ. ತಾತ ಹಿಡಿದುಕೊಳ್ಳಲಿಲ್ಲ ... ಏಕೆಂದರೆ ಅವರು ಅಲ್ಲಿರಲಿಲ್ಲ !! ನಾನು ಲ್ಯಾಪ್ ಟಾಪ್ ಮೇಲೆ ಬಿದ್ದೆ. ಹಾಗಿದ್ದರೆ ನಾನು ಇಷ್ಟು ಹೊತ್ತೂ ಕಂಡಿದ್ದು ಕನಸೇ? ರಾತ್ರಿಯೆಲ್ಲ ನಿದ್ದೆ ಮಾಡಿ ಸೋಫಾದ ಮೇಲೆ ಕುಳಿತ ಕೂಡಲೆ ನಿದ್ದೆ ಬರುವುದೇ? ತಾತ ನಮ್ಮ ಮನೆಗೆ ಬಂದದ್ದು ಮಿಥ್ಯವೇ? ಸತ್ಯ ದರ್ಶನವಾಗಿದ್ದು ಸತ್ಯವೇ? ಇಲ್ಲಾ ಮಿಥ್ಯವೇ?

ನನಗಂತೂ ಏನೂ ಗೊತ್ತಾಗುತ್ತಿಲ್ಲ. ನಿಮಗೆ?




Friday, October 23, 2009

ಸಂಸಾರ ಸಾಗರದಲ್ಲಿ ಕಂಪ್ಯೂಟರ್ conceptsಉ - ಭಾಗ ೨

ಅಶೋಕನು ಹೊರದೇಶಕ್ಕೆ ಹೊರಡೋ ಮುನ್ನ, ನನ್ನ, ಅರ್ಥಾತ್ ರಾಮಣ್ಣಿಯ, ತಲೆಯಲ್ಲಿ ಕಂಪ್ಯೂಟರ್ ಹುಳ ಬಿಟ್ಟು ಹೋದಾಗಿನಿಂದ ವಿಚಿತ್ರವಾಗಿ ಆಡಲು ಶುರು ಮಾಡಿದ್ದೀನಿ. ಮನೆಯಲ್ಲಿ ನೆಡೆವ ಸಾಮಾನ್ಯ ಸಂಭಾಷಣೆಯಲ್ಲೂ ಈ ಕಂಪ್ಯೂಟರ್ ಲೋಕದ ಮಾತುಗಳು ಹಾಗೇ ಹೊರಳಿ ಬರುತ್ತಿದೆ.

ಮೊನ್ನೆ ವಿಶಾಲೂ ಜೊತೆ ಮಾರ್ಕೆಟ್’ಗೆ ಹೋಗಿದ್ದೆ. ಅಂಗಡಿಯಾತನಿಗೆ ಒಂದು ಕೇಜಿ ಬೂದುಗುಂಬಳಕಾಯಿ ಕೊಡಲು ಹೇಳಿದೆ. ಅವನು ಒಂದು ಪೀಸ್ ಹೆಚ್ಚಿ ತಟ್ಟೆಗೆ ಹಾಕಿದಾಗ, ಆ ಸ್ಕೇಲಿನ ಕಡ್ಡಿ ಒಂದು ಕೇಜಿಗಿಂತ ಸ್ವಲ್ಪ ದಾಟಿ ನಿಂತಿತು. ಅದಕ್ಕೆ ಅವನು ’ಸ್ವಲ್ಪ ಜಾಸ್ತಿ ಇದೆ, ಹಾಕಿ ಬಿಡ್ಲಾ?" ಅಂದ. ವಿಶಾಲೂ ಜೊತೆಗಿದ್ದಾಳೆ ಎಂಬೋ ಧೈರ್ಯದಿಂದ, ರೇಗಿಕೊಂಡೇ ಕೇಳಿದೆ "ಎಲ್ಲಪ್ಪಾ ಜಾಸ್ತಿ ಇದೆ? ಕಡ್ಡಿ ನೋಡು ಸರಿಯಾಗಿ 1024 grams ತೋರಿಸ್ತಿದೆ." ಅಂಗಡಿಯವನಿಗೆ ಅರ್ಥವಾಗದೆ ಮಿಕ ಮಿಕ ನೋಡತೊಡಗಿದೆ. ಎಲ್ಲಿಂದ ಬಂತು ಈ ಪ್ರಾಣಿ ಅನ್ನೋ ಹಾಗೆ. ವಿಶಾಲೂ ನನ್ನನ್ನು ತಿವಿದು ಕೇಳಿದಳು "ರ್ರೀ, ಒಂದು ಕೇಜಿ ಹೇಗ್ರೀ 1024 grams ಆಗುತ್ತೆ?" ಅಂತ. ನನ್ನ ಬಿಟ್ರೆ ಇರೋ ಇಬ್ಬರಲ್ಲಿ, ಇಬ್ಬರೂ ನನ್ನ ವಿರುದ್ದವಾದ ಮೇಲೆ ತೆಪ್ಪಗಿರುವುದೇ ಲೇಸು ಎಂದು ಸುಮ್ಮನಾದೆ.

ನೆನ್ನೆ ಆಫೀಸಿಗೆ ವಕ್ರ ಮೂತಿ ಸುಂದರೇಶ ಬಂದಿರಲಿಲ್ಲ. ಯಾರೋ ಹೇಳಿದ್ರು ಅವನು ಹಿಂದಿನ ದಿನ ಯಾವುದೋ ಹೋಟಲಿನಲ್ಲಿ ಚೆನ್ನಾಗಿ ತಿಂದು ಬಂದ ಮೇಲೆ ಬೆಳಿಗ್ಗೆಯಿಂದ ಟಾಯ್ಲೆಟ್ಟಿನಲ್ಲೇ ಹಾಸಿಗೆ ಹಾಸಿಕೊಂಡು ಮಲಗಿದ್ದಾನೆ ಅಂತ. ನಾನು "Garbage In Garbage Out" ... ಅಂದೇ ಬಿಟ್ಟೆ ! ಯಾರಿಗೆ ಅರ್ಥವಾಯ್ತೋ ಯಾರಿಗೆ ಇಲ್ವೋ ನನಗೆ ಗೊತ್ತಿಲ್ಲ !!

ಯಾಕೆ ಹೀಗಾಗುತ್ತೆ ಎಂಬುದು ಹೇಳೋದು ಕಷ್ಟ. ಉದಾಹರಣೆಗೆ, ಮೇಜಿನ ಮೇಲೆ ಮಂಟಪ ಇಟ್ಟು ಗಣೇಶನನ್ನು ಕೂಡಿಸಿದಾಗ Desktop ಕಂಪ್ಯೂಟರು, ಪ್ರತಿಷ್ಟಾಪನೆ ಎಂದಾಗ 'Installation' , ವಿಸರ್ಜನೆ ಅಂದಾಗ 'Uninstall' , ಪ್ರಹ್ಲಾದ ಕುಮಾರ ನರಸಿಂಹದೇವರ ತೊಡೆಯ ಮೇಲೆ ಕುಳಿತ ಚಿತ್ರಪಟ ಕಂಡಾಗ Laptop , ರಾಮಾಯಣದ ಲಂಕಿಣಿ ಎಂದಾಗ 'Firewall' ಎಂದೆಲ್ಲಾ ಏಕೆ ನೆನಪಿಗೆ ಬರುತ್ತೆ? ಇದಕ್ಕೆಲ್ಲ ವಿವರಣೆ ಕೊಡಲು ಬಲು ಕಷ್ಟ ನೋಡಿ.

ಇಷ್ಟೆಲ್ಲಾ ಪೀಠಿಕೆ ಯಾಕಪ್ಪಾ ಅಂದರೆ, ಅಂದು ಹೊರದೇಶಕ್ಕೆ ಹೋಗಿದ್ದ ಅಶೋಕ ಇಂದು ವಾಪಸ್ಸು ಬರಲಿದ್ದಾನೆ !!

ಮಗನನ್ನು ಕರೆದುಕೊಂಡು ಹೋಗಲು ಅವನ ತಂದೆ-ತಾಯಿ ಇಬ್ಬಾರೂ ಬೆಳಿಗ್ಗೆ ಊರಿಗೆ ಬಂದಿಳಿದರು. ಅವನಿಗೇನು ದಾರಿ ಗೊತ್ತಿಲ್ಲವೇ? ಎಂದು ನೀವು ಕೇಳಬಹುದು. ಆದರೆ, ಈ ನೆಪದಲ್ಲಾದರೂ ಬೆಂಗಳೂರಿನ ಧೂಳು ಕುಡಿಯುವ ಉದ್ದೇಶ ಅವರದು, ಅಷ್ಟೇ.

ಅಶೋಕನು, ಅವರನ್ನು ಊರಾಚೆ ಇರೋ ಏರ್ಪೋರ್ಟಿಗೆ ಬರುವುದು ಬೇಡ ಎಂದು ಹೇಳಿದ್ದರಿಂದ ಇವರುಗಳು ಅವನು ಬರುವ ದಿನ ಬೆಳಿಗ್ಗೆ ನಮ್ಮಲ್ಲಿ ಬಂದಿಳಿದರು. ಬಿಸಿ ಬಿಸಿ ಉಪ್ಪಿಟ್ಟು ಮಾಡಿದ್ದಳು ವಿಶಾಲೂ. ಬೆಳಿಗ್ಗೆಯೇ ಬಂದಿಳಿದ ಅಶೋಕ ಇವರುಗಳು ಬರುವ ತನಕ ಸ್ವಲ್ಪ ಅಡ್ಡಾಗಿದ್ದ. ನಾನೇ ಹಾಗೆ ಹೇಳಿದ್ದೆ, ಇಲ್ದಿದ್ರೆ ನನ್ನ ನಿದ್ದೆ ಹಾಳಾಗುತ್ತೆ ನೋಡಿ !

ಈಗ ನಿತ್ಯಕರ್ಮಗಳನ್ನು ಮುಗಿಸಲು ಹಿಂದುಗಡೆ ಹೋಗಿದ್ದಾನೆ. "'Download' ಆದ ಮೇಲೆ, 'Upload'’ಗೆ ಬಾರಪ್ಪ" ಎಂದು ಹೇಳಬೇಕೂ ಅಂದುಕೊಂಡೆ, ಆದರೆ ಹೇಳಲಿಲ್ಲ. ತಿಂಡಿ ಕಾಫೀ ಎಲ್ಲಾ ಆದ ಮೇಲೆ, ನಾನೂ ಅಶೋಕ ಹಾಗೇ ಮಾತಿಗೆ ಕುಳಿತೆವು. ಸ್ವಭಾವತಹ ಮೂಕ ಪ್ರಾಣಿಯಾದ ನನ್ನ ನೆಂಟ ಅಲ್ಲೇ ಒಂದು ಮೂಲೆಯಲ್ಲಿ ಮುಖಕ್ಕೆ ಪೇಪರ್ ಅಡ್ಡ ಇಟ್ಟುಕೊಂಡು ಕುಳಿತಿದ್ದ.

ನಾನು ಕೇಳಿದೆ "ಇಲ್ಲಿಂದ ಅಲ್ಲೀ ತನಕ ಹೋಗಿ ಇಷ್ಟು ದಿನಗಳಲ್ಲೇ ಕೆಲಸ ಮುಗಿದು ಹೋಯ್ತೇ?" ಅಶೋಕ ಹೇಳಿದ "ಅದು ಹಾಗಲ್ಲ. ನಾನು ಹೋಗಿದ್ದು ಪ್ರಾಜಕ್ಟ್ ಕನ್ಸಲ್ಟೆಂಟಾಗಿ .." ನಾನು ಮಧ್ಯೆ ಬಾಯಿ ಹಾಕಿ "ಏನು? ಕನ್ಸ್ನಲ್ ಟೆಂಟೇ ?" ಅಶೋಕ "ಕನ್ಸಲ್ ಟೆಂಟ್ ಅಲ್ಲ Consultant.... ಒಂದು ರೀತಿಯಲ್ಲಿ, ನೀವು ಹೇಳಿದ್ದೂ ಸರಿಯಾಗಿದೆ ಅಂಕಲ್. ಹೊರ ದೇಶದಲ್ಲಿ Consultant ಜೀವನ ಹರಿಯೋ ನದಿ ಇದ್ದ ಹಾಗೆ ... ಸ್ಥಿರವಾಗಿರೋಲ್ಲ. ಆರು ತಿಂಗಳು ಒಂದು ಊರಿನಲ್ಲಾದರೆ ಇನ್ನಾರು ತಿಂಗಳು ಮತ್ತಿನ್ಯಾವುದೋ ಊರು ಆಗಿರುತ್ತೆ. ಹೆಂಡತಿ ಮಕ್ಕಳು ಒಂದು ಊರಿನಲ್ಲಿದ್ದರೆ ಗಂಡ ಇನ್ನೆಲ್ಲೋ ಇರ್ತಾನೆ. ಹೀಗಾಗಿ, Consultant ಆಗಿರುವವನಿಗೆ ಕನಸಿನಲ್ಲೊ ಟೆಂಟ್ ಕಾಣೋದು ಸಹಜ. ಒಂದು ರೀತಿ Nomads ಇದ್ದ ಹಾಗೆ" ಅಂದ.

ಹೊರಗೆ ಅಶೋಕನ ಅಮ್ಮ ಸುಮತಿ ಮತ್ತು ವಿಶಾಲೂ ಮಾತನಾಡುತ್ತಿದ್ದರು. ಅವರುಗಳು, ನಾವು ಕುಳಿತ ರೂಮಿನ ಕಿಟಕಿಯಾಚೆ ಇದ್ದುದರಿಂದ, ಅಗತ್ಯಕ್ಕಿಂತ ಹೆಚ್ಚೇ ಸ್ಪಷ್ಟವಾಗಿ ಕೇಳಿಸುತ್ತಿತ್ತು.

ಸುಮತಿ ಕೇಳಿದರು "ಹೊಸದಾಗಿ ಕಾಂಪೌಂಡ್ ಹಾಕಿಸಿದಿರಾ ?" ವಿಶಾಲೂ ಉವಾಚ "ಹೌದ್ರಿ ಸುಮತಿ.... ಮಳೆಗೆ ಕಾಂಪೌಂಡ್ ಕುಸಿದು ಬಿತ್ತು. ಹಾಗಾಗಿ ಹೊಸದಾಗಿ ಕಟ್ಟಿಸಿದ್ದು. ಎದುರಿಗೆ ಮನೆ ಕಟ್ತಾ ಇದ್ದಾರಲ್ಲ ಅಲ್ಲಿನ ಕೂಲಿಯವರ ಕೈಯಲ್ಲಿ ಮಾಡಿಸಿದ್ದು. ಆ ಮನೆ ಮುಗಿಯುವವರೆಗೆ ಇಲ್ಲಿ ಇರ್ತಾರೆ. ಇನ್ನೊಂದು ಮನೆ ಕಾಂಟ್ರಾಕ್ಟ್ ಸಿಕ್ಕಲ್ಲಿ ಇಲ್ಲಿಂದ ಎತ್ತಂಗಡಿ ಇನ್ನೊಂದು ಕಡೆ. ಈ ದಿನಗೂಲಿಗಳದು ಅಲೆಮಾರಿ ಜೀವನ ಪಾಪ" ಎಂದು ನೊಂದು ಕೊಂಡಳು. ಇಲ್ಲಿ ನಾನು ಕಣ್ಣೊರೆಸಿಕೊಂಡೆ.

ಆಮೇಲೆ ಅಂದೆ "Consultant, nomad, ಅಲೆಮಾರಿ ಎಲ್ಲ ಒಂದೇ. ಉಪಯೋಗಿಸುವ ಸಂದರ್ಭ ಬೇರೆ ಅಷ್ಟೇ ಅಲ್ವಾ ಅಶೋಕ!". ಬಿಳೀ ಕಾಲರ್ ಬದುಕಿನ ತೇಜೋವಧೆಯನ್ನು ಕಷ್ಟಪಟ್ಟು ತಡೆದುಕೊಂಡಿದ್ದ ಅಶೋಕ ಏನೂ ಉತ್ತರ ಕೊಡಲಿಲ್ಲ.

ಛಲ ಬಿಡದ ವಿಕ್ರಮನಂತೆ ಮುಂದುವರೆಸಿದ ಅಶೋಕ "ಸೂಕ್ಷ್ಮವಾಗಿ ಒಂದು ಪ್ರಾಜಕ್ಟ್ ಹೇಗೆ ನೆಡೆಯುತ್ತೆ ಅಂತ ಹೇಳ್ತೀನಿ ಕೇಳಿ ಅಂಕಲ್. ದೊಡ್ಡ ಕಂಪನಿ ಅಂದರೆ Client ಅಂತ ಕರೆಯೋಣ, ಒಂದು ಕೆಲಸವಾಗಬೇಕಾದರೆ, ಮೂರು-ನಾಲ್ಕು solution providers ಗಳನ್ನು ಸಂಪರ್ಕಿಸಿ, ವಿಚಾರ ಮಾಡ್ತಾರೆ. ಕೆಲಸ ಮುಗಿಸಲು ಬೇಕಾದ ಅವಧಿ, ದುಡ್ಡು ಇತ್ಯಾದಿಗಳನ್ನು ಲೆಕ್ಕ ಹಾಕಿ ಯಾರಾದರೂ ಒಬ್ಬರಿಗೆ ಕೊಡ್ತಾರೆ. ದೊಡ್ಡ ಪ್ರಾಜೆಕ್ಟ್ ಆದರೆ ನಾ ಮುಂದು ತಾ ಮುಂದು ಅಂತ ಈ solution providersಗಳು ಆಸಕ್ತಿವಹಿಸಿ ಬರ್ತಾರೆ. maintenance project ಆದರೆ ಸ್ವಲ್ಪ ಹಿಂದು ಮುಂದು ನೋಡ್ತಾರೆ. ಇವರುಗಳು ತಮ್ಮ ಜನರನ್ನು ಕೆಲಸಕ್ಕೆ ಕಳಿಸಿ ಕೆಲಸ ಮಾಡಿಸುತ್ತಾರೆ. Client ಇವರ ಕೆಲಸವನ್ನು monitor ಮಾಡ್ತಾ ಇರ್ತಾರೆ. ಇವರು ಮಾಡಿದ ಒಟ್ಟು ಕೆಲಸವನ್ನು ಇವರ ಕಂಪನಿಯವರು, ಆ Clientಗೆ ಬಿಲ್ ಮಾಡ್ತಾರೆ. ಎಷ್ಟೊ ಸಾರಿ ಆರು ತಿಂಗಳಿಗೆ ಆಗುವ ಕೆಲಸವನ್ನು ಮೂರೇ ತಿಂಗಳಲ್ಲಿ ಮಾಡಿ ಮುಗಿಸುತ್ತೇವೆ ಎಂದು ಕೊಚ್ಚಿಕೊಂಡು ಆಮೇಲೆ ಹತ್ತು ತಿಂಗಳವರೆಗೂ ಎಳೀತಾರೆ."

ಅತ್ತ ಕಡೆ ವಿಶಾಲೂ ತನ್ನ ಮಾತನ್ನು ಮುಂದುವೆರಿಸಿದಳು "ಮನೆ ಕಟ್ಟೋ ಕಾಂಟ್ರಾಕ್ಟರುಗಳು, ’ಬರೀ ಕಾಂಪೌಂಡ್ ಕೆಲಸ, ಇದು ಪೀಸ್ ವರ್ಕ್”’ ಅಂತ ಹೇಳಿ ಬೇಗ ಒಪ್ಪಿಕೊಳ್ಳಲೇ ಇಲ್ಲ. ಮೂರು-ನಾಲ್ಕು ಜನರ ಹತ್ತಿರ ಮಾತನಾಡಿ ಕೊನೆಗೆ ಈ ಎದುರು ಮನೆ ಕೆಲಸ ಮಾಡಿಕೊಡ್ತಿರೋ ಕಂಟ್ರಾಕ್ಟರನ್ನೇ ಹಿಡಿದ್ವಿ ಅನ್ನಿ. ಅವನೋ ಒಂದು ತಿಂಗಳಲ್ಲಿ ಮಾಡಿ ಕೊಡ್ತೀನಿ ಅಂತ ಮೂರು ತಿಂಗಳು ಮಾಡಿದ. ಇವರು ಸರಿಯಾಗಿ ಕೆಲಸ ಮಾಡ್ತಾರೋ ಇಲ್ವೋ ಅಂತ ನೋಡಿಕೊಳ್ಳೋದು, ಸಿಮೆಂಟು, ಮರಳು, ಕಲ್ಲು, ವಾರದ ಕೊನೆಗೆ ಬಟವಾಡೆ, ಹೀಗೆ ಒಂದಾ ಎರಡಾ. ಕೊನೆಗೆ ಕೆಲಸ ಮುಗಿಯುವ ಹೊತ್ತಿಗೆ, ನಾವು ಅಂದುಕೊಂಡಿದ್ದಕ್ಕಿಂತ ಎರಡರಷ್ಟು ಖರ್ಚಾಯಿತು."

ಅಲ್ಲಿನ ಸಂಭಾಷಣೆ ಪೂರ್ತಿಯಾಗಿ ಕಿವಿಗೆ ಬಿದ್ದರೂ, ಅಶೋಕ ತನಗೇನೂ ಕೇಳಿಸಲಿಲ್ಲವೆಂದೇ ಮುಂದುವರೆಸಿದ "ಈ solution provider ಮತ್ತು Client ಕಂಪನಿಯವರು ಮೊದಲು Project Initiation ಅಂತ ಮಾಡಿಕೊಳ್ಳುತ್ತಾರೆ. ನಂತರ ಇಬ್ಬರೂ ಪ್ರಾಜಕ್ಟ್’ನಲ್ಲಿ ಏನು ಬೇಕು, ಏನು ಬೇಡ, ಯಾವಾಗ ಬೇಕು ಹೀಗೆ ಅಂತ Requirements ತಯಾರು ಮಾಡ್ತಾರೆ. ಇದಕ್ಕಾಗಿ solution provider ಕಂಪನಿಯವರು client ಕಂಪನಿಯ ಹಲವಾರು ಜನರ ಹತ್ತಿರ ಮಾತನಾಡಿ ಕೆಲಸದ ಒಳ-ಹೊರಗೆ ತಿಳಿದುಕೊಂಡು ಹೀಗೆ ಮಾಡಬೇಕು, ಹಾಗೆ ಮಾಡಬೇಕು ಅಂತ ಡಿಸೈನ್ ತಯಾರು ಮಾಡುತ್ತಾರೆ. ಅದೆಲ್ಲ ಮುಗಿದ ಮೇಲೆ ಕೋಡ್ ಬರೆದು, ಟೆಸ್ಟ್ ಮಾಡುತ್ತಾರೆ. client ಕಂಪನಿಯವರು ಇಂತಹ ದಿನ ರಿಲೀಸ್ ಮಾಡಬೇಕೆಂಬ ಶೆಡ್ಯೂಲ್ ತಯಾರು ಮಾಡಿರುತ್ತಾರೆ. ಮಧ್ಯೆ ಏನಾದರೂ ತೊಡಕಾದಲ್ಲಿ ರಿಲೀಸ್ ಡೇಟ್ ಮುಂದೆ ಹೋಗುತ್ತೆ. ರಿಲೀಸ್ ಮಾಡೊ ಮುನ್ನ ಎಲ್ಲ ರೀತಿ testing ಮಾಡಿದ್ದರೂ ಏನೋ ಹುಳುಕು ಇದ್ದೇ ಇರುತ್ತೆ."

ವಿಶಾಲೂ ಮುಂದುವರೆಸಿದ್ದಳು "ಕೆಲಸ ಶುರು ಮಾಡೋ ಮುನ್ನ ಆ ಕಾಂಟ್ರಾಕ್ಟರನ್ನ ಕೇಳಿದ್ವಿ. ಯಾವ ಸಿಮೆಂಟ್ ಬೇಕು, ಎಲ್ಲಿಂದ ಮರಳು ತರಿಸಬೇಕು ಅಂತೆಲ್ಲ. ಅವನೂ ಎಲ್ಲ ಹೇಳಿದ್ದ. ಅಷ್ಟೆಲ್ಲ ಮಾಡಿ ಹಗಲಿರುಳೂ ಆ ಕೆಲಸದವರ ಜೊತೆ ಏಗಿ, ನಿಂತು ಕೆಲಸ ಮಾಡಿಸಿ ನೋಡಿಕೊಂಡಿದ್ದರೂ ಆಗಲೇ ಗೋಡೆಯಲ್ಲಿ ಕ್ರಾಕ್ ಬಂದಿದೆ". ಅದಕ್ಕೆ ಸುಮತಿ "ಏನು ಮಾಡಲಿಕ್ಕೆ ಆಗುತ್ತೆ ಹೇಳಿ ವಿಶಾಲೂ. ಕ್ರಾಕ್ ಬಂತು ಅಂತ ನೀವು ತಲೆ ಕೆಡಿಸಿಕೊಳ್ಳಬೇಡಿ. ಅದಿರಲಿ ರಂಗರಾಯರ ಮಗಳ ಮದುವೆ ವಿಷಯ ಎಲ್ಲಿಗೆ ಬಂತು ?" ಎಂದು ಟಾಪಿಕ್ ಬದಲಾಯಿಸಿದರು.

ವಿಶಾಲೂ "ಸಿಕ್ಕಾಪಟ್ಟೆ ಹುಡುಕಿದ ಮೇಲೆ ಹೋದ ತಿಂಗಳು ಗಂಡು ಸಿಕ್ಕಿದನಪ್ಪ ಸದ್ಯ. ಎಲ್ಲೆಲ್ಲೋ ಹುಡುಕಿ ಕೊನೆಗೆ ಅವರ ಬೀದಿ ಕೊನೆಯ ಮನೆಯಲ್ಲೇ ಇರೋ ಹುಡುಗ ಸಿಕ್ಕಿದ್ದು. ಎರಡೂ ಪಾರ್ಟಿಯವರೂ ಕುಳಿತು ಮಾತನಾಡಿ ಒಪ್ಪಂದ ಮಾಡಿಕೊಂಡಿದ್ದಾರಂತೆ. ಏನು ಕೊಡಬೇಕು, ಎಷ್ಟು ಕೊಡಬೇಕು ಅಂತೆಲ್ಲ. ಒಂದೇ ಬೀದಿಯಲ್ಲಿದ್ದರೂ ಸಹ, ಇವರೂ ಹಲವಾರು ಜನರ ಬಳಿ ವಿಚಾರಿಸಿ ಹುಡುಗನ ಬಗ್ಗೆ ತಿಳಿದುಕೊಂಡಿದ್ದಾರೆ. ದಿನ ಗೊತ್ತು ಮಾಡಿ, ಛತ್ರ ಸಿಕ್ಕಿ, ಬುಕ್ ಮಾಡಿದ ಮೇಲೆ ಮೊನ್ನೆ ದಿನ ಲಗ್ನಪತ್ರಿಕೇನೂ ಆಯ್ತು. ಜನವರಿಯಲಿ ಮದುವೆ. ರಂಗರಾಯರ ಅಮ್ಮನಿಗೆ ಮೈಯಲ್ಲಿ ಸರಿ ಇಲ್ಲವಂತೆ. ಸದ್ಯ ಮದುವೆ ಮುಂದೆ ಹೋಗದಿದ್ದರೆ ಸಾಕು ಅನ್ನೋ ಟೆನ್ಷನ್ನು ಇವರಿಗೆ. ಎಲ್ಲ ಸರಿಯಾಗಿ ನೆಡೆದರೆ ಸಾಕು".

ಸುಮತಿ ನುಡಿದರು "ದೇವರ ಮೇಲೆ ಭಾರ ಹಾಕ ಬೇಕು ಅಷ್ಟೇ! ನೋಡಿ ಮಾಡಿ ಮಾಡುವ ಮದುವೆಯಾದರೂ ನಮ್ಮ ಹಣೆ ಬರಹ ಚೆನ್ನಾಗಿರಬೇಕಲ್ಲಾ?".

ಅಲ್ಲಾ, ಈ ಸುಮತಿ ನುಡಿದದ್ದು ರಂಗರಾಯರ ಮಗಳ ಮದುವೆ ಬಗ್ಗೇನಾ, ಇಲ್ಲ ಅವರ ಮದುವೆ ಬಗ್ಗೇನಾ ಅಥವಾ ನನ್ನ ಬಗ್ಗೇನಾ?

ಇರಲಿ, ನಾನು ಅಶೋಕನನ್ನು ಕೇಳಿದೆ "ನಾನು ಹಾಕಿಸಿದ ಕಾಂಪೌಂಡು, ರಂಗರಾಯರ ಮಗಳ ಮದುವೆ, ನಿನ್ನ ಪ್ರಾಜೆಕ್ಟ್ ನೆಡೆಯೋ procedure ... ಇವೆಲ್ಲ ಹೆಚ್ಚು ಕಮ್ಮಿ ಒಂದೇ ಅಲ್ಲವೇ?"

ಅಶೋಕನ ಕಣ್ಣಿಗೆ ಪ್ರಾಜಕ್ಟ್ ಮೇನೇಜರ್ ಒಬ್ಬ ಮೇಸ್ತ್ರಿಯಾಗಿ, Consultant ಕೂಲಿಯಾಗಿ, client ಹೆಣ್ಣು ಕೊಡೋ ಮಾವನಾಗಿ, consulting company’ಯವರು ಗಂಡಿನ ಕಡೆಯವರ ಹಾಗೆ, ಲಗ್ನಪತ್ರಿಕೆ 'Design Document' ಆಗಿ ಕಾಣತೊಡಗಿ ತಲೆ ತಿರುಗ ಹತ್ತಿತು.

ನಾನು "ಪಾಪ, ಜೆಟ್ಲ್ಯಾಗ್ ಇರಬೇಕು, ಸ್ವಲ್ಪ ರೆಸ್ಟ್ ತೊಗೋ" ಅಂತ ಹೇಳಿ ಎದ್ದೆ.

ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಎನ್ನುವುದರ ಜೊತೆಗೆ ಪ್ರಾಜಕ್ಟ್ ಮಾಡಿ ನೋಡು ಎಂದೂ ಸೇರಿಸಬೇಕೇನೋ ?

ಸಂಸಾರ ಸಾಗರದಿ ಕಂಪ್ಯೂಟರ್ conceptsಉ - part 1

ನಮ್ಮ ಮನೆ ಬಟ್ಟೆ ಒಗೆವ ಹೆಂಗಸಿನ ಮಗ ಅಮೇರಿಕಕ್ಕೆ ಹೋಗಿಬಂದ ಮೇಲೆ ದಿನವೂ ವಿಶಾಲೂದು ಒಂದೇ ವರಾತ... ನೀವೂ ಒಂದು ಕಂಪ್ಯೂಟರ್ ಕೋರ್ಸ್ ಮಾಡಿ. ನಿಮಗೂ ಹೊರದೇಶಕ್ಕೆ ಹೋಗೋ ಅವಕಾಶ ಒದ್ದುಗೊಂಡು ಬರಬಹುದು ಅಂತ. ನಾನು ಅರ್ಥಾತ್ ರಾಮಣ್ಣಿ ಒಬ್ಬ ಸೀದಾ ಸಾದಾ ಮನುಷ್ಯ. ಅತೀ ದೊಡ್ಡ ಟೆಕ್ನಾಲಜಿ ಅಂತೆಲ್ಲ ತಲೆ ಕೆಡಿಸಿಕೊಳ್ಳುವಂತಹ ಜಾಯಮಾನದವನಲ್ಲ.... ಹಾಗಂತ ನನಗೆ ಕಂಪ್ಯೂಟರ್ ಬಗ್ಗೆ ಜ್ಞ್ನಾನ ಇಲ್ಲ ಅಂತಲ್ಲ. ನಮ್ಮ ಆಫ಼ೀಸಿನಲ್ಲೂ ಎಷ್ಟು ಬೇಕೋ ಅಷ್ಟು ಉಪಯೋಗಿಸುವದನ್ನು ಕಲಿತಿದ್ದೀನಿ.... ಈ ಜಾವಾ, ಭಾವಾ ಅಂತೆಲ್ಲ ಕಲಿಯೋದಕ್ಕೆ ಯಾಕೋ ಮನ ಹಿಂಜರಿಯುತ್ತಿದೆ...

ಹೀಗಿರುವಾಗ ದೂರದ ನೆಂಟನ ಮಗ UK ಗೆ ಹೊರಟು ನಿಂತಿದ್ದ.... ಒಂದು ವರ್ಷದ ಪ್ರಾಜೆಕ್ಟ್’ಗಾಗಿ ... ಮೊದಲ ಬಾರಿಗೆ ಹೊರದೇಶಕ್ಕೆ ಹೋಗುತ್ತಿದ್ದಾನೆ. ಹಾಗಾಗಿ ಅವನ ಜೊತೆ ಅಪ್ಪ-ಅಮ್ಮ ಇಬ್ಬರೂ ಶಿವಮೊಗ್ಗದಿಂದ ನಮ್ಮ ಮನೆಗೆ ಬಂದು ಸಂಜೆಗೆ ಇಲ್ಲಿಂದ ಏರ್ಪೋರ್ಟ್’ಗೆ ಹೋಗುವುದು ಎಂದು ತೀರ್ಮಾನ ಮಾಡಿದ್ದರು.

ಗಂಡ ಹೆಂಡತಿ ಹಾಗೂ ಮಗರಾಯನ ಸವಾರಿ ಬೆಳಿಗ್ಗೆ ಕಾಫಿ ಸಮಯಕ್ಕೇ ಆಯಿತು. ನಾನೂ ರಜೆ ಹಾಕಿದ್ದೆ ಅನ್ನಿ. ಸ್ವಲ್ಪ ಹೊತ್ತು ಮಲಗಿ ನಂತರ ಎದ್ದು ಕಾಫೀ ಕುಡಿಯುತ್ತೇನೆ ಎಂದು ಅಶೋಕ ಅಂದರೆ ನನ್ನ ನೆಂಟನ ಮಗರಾಯ ಕೋಣೆ ಸೇರಿ ಮಲಗಿದ. ಅಲ್ಲಾ, ಶಿವಮೊಗ್ಗದಿಂದ ಬೆಂಗಳೂರಿಗೆ ಬಂದೇ ಇವನಿಗೆ ಜೆಟ್ಲ್ಯಾಗ್ ಆದರೆ ಇನ್ನು ಯು.ಕೆ ಗೆ ಹೋಗಿ ಇನ್ನೆಷ್ಟು ಸುಧಾರಿಸಿಕೊಳ್ಳುತ್ತಾನೋ ಏನೋ ?

ನನ್ನ ನೆಂಟ ಹಾಗೂ ಅವನ ಮಡದಿ ಶುಚಿರ್ಭೂತರಾಗಿ ಮಿಂದೆದ್ದು ಕಾಫಿಗೆ ಬಂದರು. ಅವರವರ ನೇಮ ನಿಷ್ಟೆ ಅವರದ್ದು. ನಮಗೋ ಬೆಳಿಗ್ಗೆ ಎದ್ದ ಮೇಲೆ, ಹಲ್ಲಿಗೆ ಬ್ರಷ್ ಸೋಕಿದ ಮೇಲೆ, ತಣ್ಣೀರು ಕಣ್ಣ ಗೀಜನ್ನು ತೊಳೆದಾ ಹೊತ್ತು, ಕಾಫಿ ಲೋಟಕ್ಕೆ ತುಟಿ ಒತ್ತಿದರೇನೇ ಸಮಾಧಾನ. ಆ ಗಮ್ಮತ್ತೇ ಬೇರೆ ಬಿಡಿ. ಅವರುಗಳು ನಿತ್ಯಕರ್ಮಗಳನ್ನು ಮಾಡುತ್ತಿದ್ದಂತೆ ಹಳೇ ಡಿಕಾಕ್ಷನ್ನಿನಲ್ಲೇ ನಾನು ಮೊದಲ ಡೋಸ್ ಕಾಫಿ ಬಸಿದುಕೊಂಡಾಗಿತ್ತು. ಇನ್ನೇನು, ಅವರೊಂದಿಗೆ ಹೊಸ ಕಾಫಿ ಕುಡಿಯುತ್ತಿದ್ದಂತೇ ಅಶೋಕನೂ ಎದ್ದ. ಅವನೂ ಮುಖ ತೊಳೆದು ಬಂದು ನಮ್ಮೊಂದಿಗೆ ಕೂತ. ಹಲ್ಲುಜ್ಜಿದ ಲಕ್ಷಣ ಕಾಣಲಿಲ್ಲ. ಶುಕ್ರವಾರ ಹಲ್ಲುಜ್ಜುವ ಅಭ್ಯಾಸ ಇದೆಯೋ ಇಲ್ಲವೋ ಯಾರಿಗೆ ಗೊತ್ತು ? ಪರಚಿಂತೆ ನಮಗ್ಯಾಕೆ ?

ಅಶೋಕನು ಯಾವ ಕಂಪನಿಗೆ ಹೋಗುತ್ತಾನೆ, ಯಾವ ಊರು ಎಂಬೆಲ್ಲ ಮಾಹಿತಿಗಳನ್ನು ತಿಳಿದುಕೊಂಡೆ. ರಂಗರಾವ್ ರಸ್ತೆಯ ರಾಮರಾಯರ ಮಗ ರಮೇಶ ಅಲ್ಲೇ ಯಾವುದೋ ಊರಿನಲ್ಲಿ ಇದ್ದಾನೆ, ಕಾಂಟಾಕ್ಟ್ ಇಟ್ಟುಕೋ, ಹೊರದೇಶದಲ್ಲಿ ಬೇಕಾಗುತ್ತೆ ಎಂದು ಹೇಳಲು ಮರೆಯಲಿಲ್ಲ. ಯು.ಕೆ ಯಲ್ಲಿರೋ ಊರುಗಳೆಲ್ಲ ಪಕ್ಕಪಕ್ಕದಲ್ಲೇ ಇದೇ ಅನ್ನೋ ಪ್ರಚಂಡ ಜ್ಞ್ನಾನ ನನ್ನದು.

ಇರಲಿ, ಗಂಡುಪಾಳ್ಯ ನಾವು ಹಾಲ್’ನಲ್ಲಿ ಕುಳಿತು ಮಾತನಾಡುತ್ತಿದ್ದರೆ ಹೆಂಗಸರು ಆಗಲೇ ಅಡಿಗೆ ಮನೆ ಸೇರಿದ್ದರು. ಸ್ವಭಾವತ: ಮೂಕಪ್ರಾಣಿಯಾದ ನನ್ನ ನೆಂಟ ಮೂಕ ಪ್ರೇಕ್ಷಕ ಮಾತ್ರ. ಮಾತಿನ ಮಧ್ಯೆ ಅಲ್ಲೇ ಇದ್ದ ನನ್ನ ಕಂಪ್ಯೂಟರ್ ಅನ್ನು ತೋರಿಸಿ ಹೊಸದಾಗಿ ಖರೀದಿಸಿರುವುದಾಗಿ ಅಶೋಕನ ಮುಂದೆ ಹೇಳಿದೆ.

ನನಗೆ ಅವನಿಂದ ವಿಷಯ ತಿಳಿದುಕೊಳ್ಳುವ ಕುತೂಹಲ (ಅಲ್ಲ, ವಿಶಾಲೂ ಆಜ್ಞ್ನೆ), ಅವನಿಗೆ ತನ್ನ ಕಂಪ್ಯೂಟರ್ ಜ್ಞ್ನಾನವನ್ನು ತೋರಿಸಿಕೊಳ್ಳಬೇಕೆನ್ನುವ ಹಂಬಲ. ತಾನು Java ಕಲಿತಿರುವುದಾಗಿ ತಿಳಿಸಿದ. "ಅಂಕಲ್, ನಿಮಗೆ ಒಂದು ವಿಷಯ ಗೊತ್ತ. ಜಾವಾದಲ್ಲಿ Garbage collection ಅನ್ನೋ concept ಒಂದಿದೆ. ಅದು ಏನಂದರೆ ... " ಅಷ್ಟರಲ್ಲಿ ಒಳಗಿನಿಂದ ವಿಶಾಲೂ ಕೂಗಿ ಹೇಳಿದಳು "ರ್ರೀ ! ಹಿಂದಿನ ಬೀದೀಲಿ ಕಸ ತೆಗೆದುಕೊಂಡು ಹೋಗೋನು ಬೆಲ್ ಹೊಡೀತಿದ್ದಾನೆ. ಹಿಂದುಗಡೆ ಇಟ್ಟಿರೋ ಕಸ ತೆಗೆದು ಮುಂದುಗಡೆ ಇಡ್ತೀರಾ ?" ಅಂದಳು. ನಂತರ ವಿಶಾಲೂ ಆಕೆಯ ಅಂದರೆ ಸುಮತಿಯ ಮುಂದೆ ಹೇಳುತ್ತಿದ್ದಳು "ಮೊದಲೆಲ್ಲ ನಾವು ಕಸ ತೆಗೆದುಕೊಂಡು ಹೊರಹಾಕಬೇಕಿತ್ತು. ಈಗ ಅವರೇ ಬಂದು ತೆಗೆದುಕೊಂಡು ಹೋಗಿಬಿಡುತ್ತಾರೆ" ಅಂತ. ನಾನು ಕೆಲಸ ಮುಗಿಸಿ ವಾಪಸ್ಸು ಬಂದು ಕುಳಿತು "ಏನೋ ಹೇಳುತ್ತಿದ್ದಿ, ಸಾರಿ" ಎಂದೆ. ಅವನೆಂದ "ನಾನು ಹೇಳಬೇಕೂ ಅಂದಿದ್ದನ್ನ ವಿಶಾಲಕ್ಕ ಆಗಲೇ ಹೇಳಿ ಆಯ್ತು" ಅಂದ. ನನಗೆ ಅರ್ಥ ಆಗಲಿಲ್ಲ.

ನನಗೆ ಎಷ್ಟೋ ವಿಷಯ ಅರ್ಥ ಆಗಲ್ಲ. ವಿಶಾಲೂ ಅಕ್ಕ ಅಂತ ಕರೆಸಿಕೊಂಡರೆ ನಾನು ಹೇಗೆ "ಅಂಕಲ್" ಆದೆ ಎಂಬೋದೂ ಒಂದು.

ನಾನು ಅಶೋಕನಿಗೆ ಹೇಳಿದೆ ’ಸಿಂಪಲ್ಲಾಗಿ ಕೆಲವು concepts ಹೇಳು. ದೊಡ್ಡ ವಿಷಯ ಇನ್ನೊಮ್ಮೆ ಮಾತಾಡೋಣ’ ಅಂತ. ಅವನೆಂದ "ಕಂಪ್ಯೂಟರ್ ಮೆಮೊರಿಯಲ್ಲಿ RAM ಮತ್ತು ROM ಅಂತ ಎರಡು ವಿಧ ಇರುತ್ತೆ ಅಂಕಲ್. ROM ಅಂದರೆ ...". ವಿಶಾಲೂ ಅಡಿಗೆ ಮನೆಯಿಂದ ಮಾತಾಡುತ್ತಲೇ ಹೊರಗೆ ಬರುತ್ತ "ಆ ದೃಶ್ಯ ಇವತ್ತಿಗೂ ಕಣ್ಣು ಕಟ್ಟಿದಂತಿದೆ ಸುಮತಿ. ಕೆಲವೆಲ್ಲ ನೆನಪುಗಳು ಮನಸ್ಸಿನ್ನಲ್ಲಿ ಅಚ್ಚೊತ್ತಿದಂತೆ ಹಾಗೇ ನಿಂತುಬಿಡುತ್ತೆ. ಚಿಕ್ಕಾಪುಟ್ಟಾ ವಿಷಯಾನೇ ಮರೆತುಬಿಡೋಕ್ಕೆ ? " ಅಂತ ಹೇಳಿಕೊಂಡು ಒಂದು ಹಳೇ ಪೇಪರನ್ನು ತೆಗೆದುಕೊಂಡು ಮತ್ತೆ ಒಳಗೆ ನೆಡೆದಿದ್ದಳು. ಅಶೋಕನ ಮುಖ ನೋಡಿದೆ. ನಾನೂ ಅದನ್ನೇ ಹೇಳಬೇಕೂ ಅಂತಿದ್ದೆ ಅನ್ನೋ ಹಾಗಿತ್ತು ವದನ.

ಛಲ ಬಿಡದ ತ್ರಿವಿಕ್ರಮನಂತೆ ಅಶೋಕ ಈ ಬಾರಿ "ಅಂಕಲ್ ನಿಮಗೆ Client-Server concept ಹೇಳ್ತೀನಿ ನೋಡಿ. ಒಂದು ದೊಡ್ಡ ಕಂಪ್ಯೂಟರ್ ಇರುತ್ತೆ, ಅದನ್ನು server ಅಂತಾರೆ. ಮತ್ತೆ..." ಅಂದ. ವಿಶಾಲೂ ಮಾತು ಕಿವಿಗೆ ಬಿತ್ತು "ಪಾಪ ಸುಂದ್ರಮ್ಮ. ಯಜಮಾನ್ರು ಹೋದ ಮೇಲೆ, ಯಾವ ಮಕ್ಕಳು ಕರೀತಾರೋ ಅವರ ಮನೆ ಚಾಕರಿ ಮಾಡಿಕೊಂಡು ಇದ್ದಾರೆ. ಹಿರಿಯ ಜೀವ. ಯಾರು ಏನು ಕೇಳಿದರೂ ಇಲ್ಲ ಅನ್ನದೆ ಕೆಲಸ ಮಾಡಿಕೊಡ್ತಾರೆ. ತಾನು ಹಿಂದಿದ್ದುಕೊಂಡೇ ಎಲ್ಲ ಕೆಲಸ ನೋಡಿಕೊಳ್ತಾರೆ. ತಾನು ಮಾಡಿದೆ ಎಂದು ಯಾವತ್ತೂ ಹೇಳಿಕೊಳ್ಳೋಲ್ಲ" ಇತ್ಯಾದಿ. ಅಶೋಕ ಮಾತಾಡದೆ ಸುಮ್ಮನಾಗಿದ್ದು ನೋಡಿ ಈ ಬಾರಿಯೂ ಏನೋ ವಿಷಯ ಇದೆ ಎಂದುಕೊಂಡು ಅಶೋಕನ ಮುಖ ನಾನು ನೋಡಲಿಲ್ಲ.

ಅಶೋಕ ಮತ್ತೆ ನುಡಿದ "ಅಂಕಲ್, ನಿಮಗೆ ಇಂಟರ್ನೆಟ್ ಬಗ್ಗೆ ಸ್ವಲ್ಪ ಹೇಳ್ತೀನಿ. History ಅಂತ ಇರುತ್ತೆ. ಅಂದರೆ ನಾವು ಯಾವ ಯಾವ ಸೈಟುಗಳಿಗೆ ಇಣುಕಿದ್ದೇವೆ ಎಂಬ ಮಾಹಿತಿ ಅಲ್ಲಿರುತ್ತೆ". ಈ ಬಾರಿ ಸುಮತಿ ಉವಾಚ "ಎಲ್ಲ ನಮ್ಮ ಕೈಯಲ್ಲಿದೇ ಅಂತ ಆಡ್ತೀವಿ. ನಾವು ಮಾಡೋ ತಪ್ಪು-ಒಪ್ಪುಗಳನ್ನು ಮೇಲಿರೋ ಅವನು ಎಲ್ಲ ಲೆಕ್ಕ ಇಟ್ಟಿರ್ತಾನೆ" ಅಂತ. ಅಶೋಕ ಮತ್ತೆ ಮೌನ.

ನಾನೇ ಒಂದು ಮಾತು ಅಶೋಕನ್ನ ಕೇಳಿದೆ "ಕೆಲವೊಮ್ಮೆ ನನ್ನ ಕಂಪ್ಯೂಟರ್ ಸುಮ್ಮನೆ ಹಾಗೇ ನಿಂತು ಹೋದಂತೆ ಆಡುತ್ತಲ್ಲಾ ಯಾಕೆ? ". ಅಶೋಕ ನುಡಿದ "ಬಹುಶ: ಯಾವುದೋ ಪ್ರೋಗ್ರಾಮ್ Endless Loop ನಲ್ಲಿ ಸಿಕ್ಕಿ ಹಾಕಿಕೊಂಡಿರುತ್ತೆ ಅಂಕಲ್. ಆಗ ಹಾಗಾಗುವ ಸಂಭವ ಇರುತ್ತೆ. ಸಾಮಾನ್ಯ ಭಾಷೆಯಲ್ಲಿ ಹೇಳಿದರೆ, ಈ Endless Loop ಅನ್ನೋದು ಮಾಡಿದ್ದೇ ಕೆಲಸ ಮತ್ತೆ ಮತ್ತೆ ಮಾಡೋದು ಅಂತ ". ನಾನೆಂದೆ "ಅಂದರೆ ಒಂದು ರೀತಿ ರಾಜಾ ವಿಕ್ರಮ ಮತ್ತು ಬೇತಾಳನ ಹಾಗೆ". ಅಶೋಕ ಸಪ್ಪಗೆ ನುಡಿದ "ಒಂದು ರೀತಿ ಹಾಗೇ ಅಂಕಲ್".

ನಾನು ಕೇಳಿದೆ "ಮೊನ್ನೆ ಹೀಗೇ ಆಯ್ತು. ಆಫೀಸಿನ ಕಂಪ್ಯೂಟರಿಗೆ ಏನೋ ವೈರಸ್ ಬಂದು ಇದ್ದ ಬದ್ದ ಮಾಹಿತಿ ಎಲ್ಲ ಗುಡಿಸಿ ಗುಂಡಾಂತರ ಆಯ್ತು". ಅಶೋಕ ಕೇಳಿದ "ಅಲ್ಲಾ, ನಿಮ್ಮ ಕಂಪನಿಯ Desktop support ನವರು ಯಾವ measures ತೊಗೊಂಡಿರಲಿಲ್ಲವೇ?" ನಾನೆಂದೆ "ಅದೇನೋ ಗೊತ್ತಿಲ್ಲ. ನಮಗೆಲ್ಲ LapTop ಕೊಟ್ಟಿದ್ದಾರೆ. ಪಾಪ desktop support ನವರು ಏನು ಮಾಡ್ತಾರೆ" ಅಂತ ನನ್ನ ಅಪರಿಮಿತ ಜ್ಞ್ನಾನ ಪ್ರದರ್ಶನ ಮಾಡಿದೆ. ನನ್ನ ಮಾತಿಗೆ ಅಶೋಕ ಬೆಪ್ಪುತಕ್ಕಡಿ ಬೋಳೇಶಂಕರನಾಗಿದ್ದ. ಒಳಗೆ ವಿಶಾಲೂ ಹೇಳುತ್ತಿದ್ದಳು "ಹೇಗಿದ್ರೂ ಹೊರದೇಶಕ್ಕೆ ಹೋಗ್ತಿದ್ದಾನಲ್ಲ ಅಂತ ಅಶೋಕನಿಗೆ ಸಂಡಿಗೆ ಪ್ಯಾಕ್ ಮಾಡಿಕೊಡೋಣಾ ಅಂತ ಮೊನ್ನೆ ತೆಗೆದು ನೋಡಿದರೆ ಯಾಕೋ ಏನೋ ಎಲ್ಲ ಹುಳಹಿಡಿದಿತ್ತು. ಎಲ್ಲ ತಿಪ್ಪೆಗೆ ಎಸೆದು ದಬ್ಬಿ ತೊಳೆದಿಟ್ಟೆ".

ನಾನು ಹೇಳಿದೆ "ನನ್ನ ಹೊಸಾ ಕಂಪ್ಯೂಟರ್ ಸ್ಕ್ರೀನ್ ಮೇಲೆ ಏನೇನೋ iskcon ಗಳು ಇದೆ. ಅವೆಲ್ಲ ಏನು, ನನ್ನ ಕಂಪ್ಯೂಟರ್ ಒಳಗೆ ಎಲ್ಲಿದೆ ಅಂತ ನೋಡ್ತೀಯಾ ?" ಅಶೋಕ ನೊಂದು ನುಡಿದ "ಅಂಕಲ್, ಅದು iskcon " ಅಲ್ಲ icon ಗಳು. ಮೌಸ್’ನ ಅದರ ಮೇಲೆ ಓಡಿಸಿದಾಗ ಅದು ಎಲ್ಲಿದೆ ಅನ್ನೋ ಮಾಹಿತೀನೂ ಬರುತ್ತೆ. ಅದು ಹೇಗೆ ಅಂದರೆ, ಅಡಿಗೆ ಮನೆಯಲ್ಲಿ, ಯಾವ ಡಬ್ಬಿಯಲ್ಲಿ ಏನಿರುತ್ತೆ ಅಂತ ಅದರ ಮೇಲೆ ಚೀಟಿ ಅಂಟಿಸಿರುತ್ತಾರಲ್ಲಾ ಹಂಗೆ". ಇದೇನಾಯ್ತು, ಅಶೋಕನಿಗೆ ಎಂಬಂತೆ ನೋಡಿದೆ.

ವಿಶಾಲೂ ಹೊರ ಬಂದು "ಬಿಸಿ ಬಿಸಿ ಉಪ್ಪಿಟ್ಟು ರೆಡಿ ಇದೆ" ಅಂತ ಅನೌನ್ಸ್ ಮಾಡಿದಳು. ನಾನು ಇನ್ನೂ ಕಂಪ್ಯೂಟರ್ ಗುಂಗಿನಲ್ಲಿದ್ದೆ. "ಅಶೋಕ, ಮೊನ್ನೆ ಹೀಗೇ ಏನೋ ತೊಂದರೆ ಆಯ್ತು. ಏನು ಮಾಡೋದು ಅಂತ ಆಫೀಸಿನಲ್ಲಿ ಕೇಳಿದೆ. ಅವರು Reset ಮಾಡಿ ನೋಡಿದ್ರಾ ಅಂದರು. ಸ್ವಲ್ಪ ಬಿಡಿಸಿ ಹೇಳ್ತೀಯಾ ? "

ಅಶೋಕ "ನಾನು ಸ್ನಾನ ಮಾಡಿ ಬರುತ್ತೇನೆ" ಎಂದು ಕಣ್ಣು ಮಿಟಿಕಿಸಿ ನಗುತ್ತಾ ನುಡಿದು ಎದ್ದು ಹೋದ.

ಈ Reset ಗೂ ಸ್ನಾನಕ್ಕೂ ಏನು ಸಂಬಂಧ ? ನಿಮಗೇನಾದ್ರೂ ಗೊತ್ತಾ ?




Friday, October 16, 2009

ಏಕೆನ್ನ ಈ ರಾಜ್ಯಕ್ಕೆಳೆತಂದೆ ಹರಿಯೇ

ರಾಗ: ತೋಡಿ ತಾಳ: ದೀಪ್ ಚಂಡಿತಾಳ

ಏಕೆನ್ನ ಈ ರಾಜ್ಯಕ್ಕೆಳೆತಂದೆ ಹರಿಯೇ
ಸಾಕಲಾರದೆ ಎನ್ನ ಏಕೆ ಪುಟ್ಟಿಸಿದೆ |

ಎನ್ನ ಕುಲದವರಿಲ್ಲ ಎನಗೊಬ್ಬ ಹಿತರಿಲ್ಲ
ಮನ್ನಿಸುವ ದೊರೆಯಿಲ್ಲ ಮನಕೆ ಹಿತವಿಲ್ಲ
ಹೊನ್ನುಚಿನ್ನಗಳಿಲ್ಲ ಒಲಿಸಿಕೊಂಬುವರಿಲ್ಲ
ಇನ್ನಿಲ್ಲಿ ತರವಲ್ಲ ಇಂದಿರೇಶನೆ ಬಲ್ಲ

ದೇಶ ಪರಿಚಯವಿಲ್ಲ ದೇಹದೊಳು ಬಲವಿಲ್ಲ
ವಾಸಿಪಂಥಗಳೆಂಬೊ ಒಲುಮೆ ಎನಗಿಲ್ಲ
ಬೇಸರ ಕಳೆವರಿಲ್ಲ ಬೇರೆ ಹಿತಜನರಿಲ್ಲ
ವಾಸುದೇವನೆ ಬಲ್ಲ ಈ ರಾಜ್ಯವೆಲ್ಲ

ಕರೆದು ಕೊಡುವವರಿಲ್ಲ ಕರುಣೆ ತೋರುವವರಿಲ್ಲ
ಕಮಲಾಕ್ಷನಲ್ಲದೆ ಗತಿಯೊಬ್ಬರಿಲ್ಲ
ಕನಸಲಿ ಕಳುವಿಲ್ಲ ಮನಸಲಿ ಧೃಢವಿಲ್ಲ
ವನಜಾಕ್ಷ ಪುರಂದರವಿಠಲ ತಾ ಬಲ್ಲ

ಬದುಕಿನಲ್ಲೊಂದು ಪುಟ

ಗುರುವಾರ ಸಂಜೆ ರಾಯರ ಮಠದಲ್ಲಿ ಭಕ್ತಾದಿಗಳು ನೆರೆದಿದ್ದ ಸಮಯ. ಸುರದ್ರೂಪಿ ಕೃಷ್ಣನು ತನ್ಮಯದಿಂದ ಹಾಡುತ್ತಿದ್ದ "ಪೊಂದಿ ಬದುಕಿರೋ ರಾಘವೇಂದ್ರರಾಯರ ಕುಂದದೆಮ್ಮನು ಕರುಣದಿಂದ ಪೊರೆವರ". ಮಹಾಮಂಗಳಾರತಿ ನಂತರ ವೆಂಕಟರಾಯರು ಇನ್ಯಾರನ್ನೋ ಕೇಳಿದರು ’ಆ ಹುಡುಗ ಯಾರು ಗೊತ್ತೇ?’ ? "ಅವನು ನಮ್ಮ ಸುಬ್ಬಣ್ಣನ ಮಗ. ಸೊಗಸಾಗಿ ಹಾಡ್ತಾನೆ. ದೇವರ ಪೂಜೇನೂ ಕಲಿತಿದ್ದಾನೆ. ".... "ಹೌದೇನು? ಏನು ಮಾಡ್ಕೊಂಡಿದ್ದಾನೆ?" "ಈಗ ತಾನೇ ಡಿಪ್ಲೊಮಾ ಮುಗಿಸಿದ್ದಾನೆ. ಕೆಲಸ ಹುಡುಕಲಿಕ್ಕೆ ಶುರು ಮಾಡಿದ್ದಾನೆ. ಅದೋ ಅವನೇ ಬಂದ. ಕೃಷ್ಣಾ, ನೋಡು ಇವರು ವೆಂಕಟರಾಯರು ಅಂತ. ನಿಮ್ಮಪ್ಪನಿಗೆ ಬಹಳ ಬೇಕಾದೋರು".

ವೆಂಕಟರಾಯರಿಗೆ ನಮಸ್ಕರಿಸಿದ ಕೃಷ್ಣ. "ಸೊಗಸಾಗಿ ಹಾಡ್ತೀಯಪ್ಪ. ದೇವರು ಒಳ್ಳೇದು ಮಾಡಲಿ. ಕೆಲಸ ಹುಡುಕಲು ಶುರು ಮಾಡಿದ್ದೀಯಂತೆ.... ಹೌದೇನು?" ’ಹೌದು’ ಎಂದ ಕೃಷ್ಣ. ಭಾನುವಾರ ಬೆಳಿಗ್ಗೆ ನಮ್ಮ ಮನೆಗೆ ಬಂದು ದೇವರ ಪೂಜೆ ಮಾಡಿಕೊಡು. ಮಾತಾಡೋಣ. ನಾಲ್ಕನೇ ಬೀದಿ ಕೊನೆಗೆ ದೊಡ್ಡ ಗೇಟಿನ ಮನೆ ಇದೆಯಲ್ಲಾ, ಅದೇ ನಮ್ಮನೆ’ ಅಂದು ಹೊರಟು ಹೋದರು.

ಭಾನುವಾರ, ವೆಂಕಟರಾಯರ ಮನೆಯಲ್ಲಿ ದೇವರಪೂಜೆ ಮುಗಿಸಿದ ಮೇಲೆ ರಾಯರ ಕೋರಿಕೆಯ ಮೇರೆಗೆ ’ದೇವೀ ನಮ್ಮ ದ್ಯಾವರು ಬಂದರು ಬನ್ನಿರೇ ನೋಡ ಬನ್ನಿರೇ’ ಎಂದ ದಶಾವತಾರ ಮಹಿಮೆಯ ಹಾಡನ್ನು ಹಾಡಿ, ಊಟ ಮಾಡಿ ’ಅನ್ನ ದಾತಾ ಸುಖೀಭವ’ ಎಂದೆದ್ದ ಕೃಷ್ಣ.

ವೆಂಕಟರಾಯರು ಕೃಷ್ಣನನ್ನು ರಾಮರಾಯರಿಗೆ ಪರಿಚಯ ಮಾಡಿಸುತ್ತ "ರಾಮೂ, ಇವನು ಕೃಷ್ಣ ಅಂತ. ನಮ್ಮ ಸುಬ್ಬಣ್ಣಾಚಾರ್ಯರ ಮಗ. ಡಿಪ್ಲೊಮ ಮುಗಿಸಿದ್ದಾನೆ. ಸ್ವಲ್ಪ ನೋಡು" ಅಂದರು. ದೇವರ ಪೂಜೆ, ಹಾಡು, ಗುರುಹಿರಿಯರಲ್ಲಿದ್ದ ಗೌರವ ಎಲ್ಲವನ್ನೂ ಬಂದಾಗಿನಿಂದ ಗಮನಿಸುತ್ತಿದ್ದ ರಾಮರಾಯರು ನುಡಿದರು "ನಾಳೆ ಸೋಮವಾರದಿಂದ HAL’ಗೆ ಕೆಲಸಕ್ಕೆ ಬಂದು ಬಿಡು. ಬೆಳಿಗ್ಗೆ ಏಳು ಘಂಟೆಗೆ ಸರ್ಕಲ್ ಹತ್ತಿರ ಫ್ಯಾಕ್ಟರಿ ಬಸ್ ಬರುತ್ತೆ. ನಾನು ಬಸ್ ಸ್ಟಾಪ್’ನಲ್ಲಿ ಇರ್ತೀನಿ. ಅಲ್ಲಿಗೆ ಬಾ. ಮಿಕ್ಕ ವಿಷಯ ನಾನು ನೋಡ್ಕೋತೀನಿ"

ಇತ್ತ ಮನೆಯಲ್ಲಿ, ಶಾಮರಾಯರು "ಸುಬ್ಬಣ್ಣ, ನಿನ್ನ ಮಗನನ್ನು ನಾಳೆ ನನ್ನ ಬಂದು ನೋಡಲು ಹೇಳು. I.T.I ’ನಲ್ಲಿ ನನ್ನ ಕೆಳಗೇ ಒಂದು ಕೆಲಸ ಕೊಡಿಸ್ತೀನಿ. ನಿನಗೂ ಸಹಾಯ ಆಗುತ್ತೆ". ’ಮಹದೋಪಕಾರ ಆಯ್ತು ಶಾಮು. ಕೃಷ್ಣನಿಗೆ ಹೇಳ್ತೀನಿ.’ ಅದಕ್ಕೆ ಶಾಮರಾಯರು ನುಡಿದರು ’ಹಿರಿಯರು ಮಾಡೋ ಪುಣ್ಯ ಕಿರಿಯರನ್ನು ಕಾಯುತ್ತೆ. ನನ್ನದೇನಿದೆ. ಆ ಭಗವಂತ ಮಾಡಿಸ್ತಾ ಇದ್ದಾನೆ ಅಷ್ಟೇ !’

ಕೃಷ್ಣನು ಎರಡೂ ಕೆಲಸಗಳನ್ನು ತೂಗಿ ನೋಡಿ, HAL’ಗೆ ಕೆಲಸಕ್ಕೆ ಸೇರಿದ್ದ. ತಾನು ಕೊಡಿಸಿದ ಕೆಲಸಕ್ಕೆ ಸೇರಲಿಲ್ಲ ಎಂಬ ಮುನಿಸು ಕೆಲವು ದಿನಗಳ ಕಾಲ ಶಾಮರಾಯರಿಗೆ ಇತ್ತು.

ಅಂದು ಕೆಲಸಕ್ಕೆ ಸೇರಿದ ನನ್ನ ಪೂಜ್ಯ ತಂದೆಯವರು, ಮೂವತ್ತೈದು ವರ್ಷ ಸೇವೆ ಸಲ್ಲಿಸಿ ದೊಡ್ಡ ಹುದ್ದೆಯಿಂದ ರಿಟೈರ್ ಆಗಿ ಹೊರಬಂದು ಇಂದಿಗೆ ಇಪ್ಪತ್ತು ವರ್ಷವಾಗಿರಬಹುದು.

ಅಂದಿನ ಕಾಲ ಚೆನ್ನಾಗಿತ್ತು, ಇಂದು ಕುಲಗೆಟ್ಟು ಹೋಗಿದೆ ಎಂಬ ಮಾತು ನಾನು ಆಡಲು ಹೊರಟಿಲ್ಲ.....

ಬದುಕಿದ್ದಾಗ ತಮ್ಮ ನೆನಪನ್ನು ನಮ್ಮೊಂದಿಗೆ ಹಂಚಿಕೊಂಡದ್ದು ನನಗೆ ನೆನಪಾಗಿ ಹಾಗೇ ಬರೆದೆ .... ಎಲ್ಲ ದಿಶೆಯಲ್ಲೂ ಅಖಂಡ ಬೆಳವಣಿಗೆಯಾಗಿರುವ ಇಂದಿನ ಕಾಲದಲ್ಲಿ ಇಂತಹ ಒಂದು ಸನ್ನಿವೇಶ ಪುನರಾವರ್ತನೆ ಆಗುವ ಸಂಭವನೀಯತೆ ಎಷ್ಟು? ನಿಮಗೆ ಗೊತ್ತೆ?

Sunday, October 4, 2009

ನನ್ನೇಕೆ ದೂರುವಿರಿ ?

ಸಮಂತಪಂಚಕ ನದೀ ತೀರದಲ್ಲಿ ನಿರ್ಜೀವವಾಗಿ ಬಿದ್ದಿದ್ದಾನೆ ದುರ್ಯೋಧನ. ಹುಟ್ಟಿನಿಂದ ಸಾವಿನವರೆಗೂ ನೆಡೆದಿದ್ದ ದಾಯಾದಿ ಹಗೆತನಕ್ಕೆ ತೆರೆಬಿದ್ದಿದೆ. ತನ್ನ ಗುರುಹಿರಿಯರು, ಬಂಧುಗಳು, ಸಕಲ ಸಹೋದರರೂ, ಪ್ರಿಯಮಿತ್ರ ಹೀಗೆ ಎಲ್ಲರನ್ನೂ ಕಳೆದುಕೊಂಡು ಯುದ್ದದಲ್ಲಿ ಪರಾಜಿತನಾಗಿ, ಸತ್ತು ಬಿದ್ದಿದ್ದಾನೆ. ಆದರೆ ಅವನ ಆತ್ಮ ಮಾತ್ರ ಯಾಕೋ ಏನೋ, ಇನ್ನೂ ಅವನ ಮುಂದೆಯೇ ಕುಳಿತಿಹುದೇ ಹೊರತು ಹೊರಡಲು ಸಿದ್ದವಿಲ್ಲ. ಕುರುಕುಲಕ್ಕೆ ಶಾಪವೆಂಬಂತಾಗಿ, ಕೆಟ್ಟತನಕ್ಕೆ ಉದಾಹರಣೆಯಾಗಿ ಲೋಕತ್ಯಜಿಸಿದವನ ಜೀವನ ವಿಶ್ಲೇಷಣೆ ಮಾಡುವುದಕ್ಕಾಗಿ ಸ್ವಲ್ಪ ಕಾಲ ನಿಂತು ಮುಂದೆ ಹೋಗುವುದಾಗಿ ನಿಶ್ಚಯಿಸಿದೆ. ದೇಹದೊಂದಿಗೆ ಕಲಿತನವೂ ಹೋಗಿದ್ದುದರಿಂದಲೇ ಈ ಅವಲೋಕನ ಮಾಡಿಕೊಳ್ಳುವ ಅವಕಾಶ ದೊರೆತಂತಿದೆ.

***

ಇತಿಹಾಸದ ಪುಟಗಳಲ್ಲಿ, ನನ್ನ ಹೆಸರು ದುಷ್ಟರ ಸಾಲಿನಲ್ಲಿ ಸೇರಿಹೋಗಿದೆ. ಕೆಡುಕಿಗೆ ಉದಾಹರಣೆ ಕೊಡುವ ಸಂದರ್ಭದಲ್ಲಿ ನನ್ನ ಹೆಸರೂ ಬರುವುದರಲ್ಲಿ ಸಂಶಯವಿಲ್ಲ. ನಾನು ತಪ್ಪು ಮಾಡಿದ್ದೇನೆ ನಿಜ ಆದರೆ ಮಾಡಿದ್ದೆಲ್ಲಾ ತಪ್ಪಲ್ಲ. ಇಷ್ಟಕ್ಕೂ ನಾನು ಮಾಡಿದ ತಪ್ಪೇನು? ಮೊದಲೇ ಕಲಿಪುರುಷನನ್ನು ಹೊತ್ತಿದ್ದೆ ನಾನು. ಕಲಿಯ ಅವತಾರಿಯೇ ಆದ ಮೇಲೆ ಕೆಟ್ಟತನವಲ್ಲದೆ ಒಳ್ಳೆಯತನ ಬರಲು ಹೇಗೆ ಸಾಧ್ಯ. ಅದೂ ಅಲ್ಲದೇ, ನಾನು ಕೆಟ್ಟವನಾದ್ದರಿಂದ ತಾನೇ ಆ ಪಾಂಡವರು ಜನರ ಕಣ್ಣಿಗೆ ಒಳ್ಳೆಯವರಾಗಿ ಕಂಡಿದ್ದು?

ಇರಲಿ, ಇಷ್ಟಕ್ಕೂ ನೆಡೆದದ್ದಾದರೂ ಏನು?

ನಾ ಹುಟ್ಟಿದಾಗ ಅಪಶಕುನಗಳು ಕಾಣಿಸಿಕೊಂಡಿತಂತೆ. ಅಂದೇ ಜಗತ್ತಿಗೆ, ದುಷ್ಟನೊಬ್ಬನ ಜನ್ಮವಾಗುತ್ತಿದೆ ಅಂತ ಅರಿವಾಯಿತಂತೆ. ನಾ ಹೇಳುವುದು ಏನೆಂದರೆ, ಕಲಿಯ ಅವತಾರವಾಗುತ್ತಿದೆ ಎಂಬುದಕ್ಕೆ ಹಾಗೆ ನೆಡೆದಿರಬಹುದೋ ಏನೋ ಆದರೆ ದುರ್ಯೋಧನನ ಹುಟ್ಟಿಗಾಗಿ ಖಂಡಿತ ಅಲ್ಲ. ಹುಟ್ಟುತ್ತಲೇ ಯಾರಾದರೂ ದುಷ್ಟರಾಗಿ ಹುಟ್ಟುವರೇ? ಇಷ್ಟಕ್ಕೂ, ಹುಟ್ಟಿದ ಕೂಸಿನ ಮೇಲೆ ಈ ರೀತಿ ಅಪವಾದ ಹೊರಿಸುವುದು ಸರಿಯೇ? ನನಗರಿಯದೇ ನೆಡೆದ ಈ ವೈಚಿತ್ರ್ಯಕ್ಕೆ ನಾನು ಹೊಣೆಯೇ? ಈ ರೀತಿ ಅಪಪ್ರಚಾರ ನೆಡೆದುದ್ದರಿಂದಲೇ, ಇಡೀ ಜೀವನ, ನಾನು ಮಾಡಿದ ಪ್ರತಿ ಕಾರ್ಯವೂ ಎಲ್ಲರಿಗೂ ತಪ್ಪಾಗಿಯೇ ಕಂಡದ್ದು. ಇದೊಂದು ದುರಂತವಲ್ಲದೇ ಮತ್ತೇನು?

ಮತ್ತೊಂದು ವಿಷಯ. ನನ್ನ ಹೆಸರಿನ ಆರಂಭದಲ್ಲೇ ’ದು’ ಕಾರವಿದೆ ಹಾಗಾಗಿ ದುಷ್ಕ್ರುತ್ಯಗಳು ನೆಡೆದವು ಎನ್ನುವ ಜನರಿಗೆ ನಾನು ಕೇಳುವುದು ಏನೆಂದರೆ, ಪಂಡಿತ ಪಾಮರರು ಎನಿಸಿಕೊಂಡವರು ಅಂದು ನನಗೆ ಹೆಸರಿಡುವಾಗ ಈ ಸಣ್ಣ ವಿಷಯ ಯೋಚಿಸಲಿಲ್ಲವೇ? ಅದಲ್ಲದೇ ನನಗೆ ಸುಯೋಧನ ಎಂಬ ಹೆಸರೂ ಇತ್ತಲ್ಲಾ? ಕೇವಲ ಹೆಸರಿನಿಂದ ನಾನು ಕೆಟ್ಟವನಾದೆನೆಂದರೆ ಅದು ನಂಬತಕ್ಕ ಮಾತೇ? ಈ ಆರೋಪಕ್ಕೆ ನಗಲೇ ? ಅಳಲೇ?

ಹುಟ್ಟಿದ ದಿನದಿಂದಲೂ ಇವರು ಪಾಂಡವರು, ಇವರು ಕೌರವರು ಎಂದು ಭೇದ ತೋರಿಸುವ ಬದಲು, ಇವರೆಲ್ಲ ಕುರು ವಂಶದವರು ಎಂದೇ ಬೆಳಸಿದ್ದರೆ, ಇಷ್ಟೆಲ್ಲ ಅನಾಹುತವಾಗುತ್ತಿತ್ತೆ ? ಪಾಂಡವರು ಮಾಡಿದ್ದೆಲ್ಲ ಸರಿ, ಕೌರವರು ಮಾಡಿದ್ದೆಲ್ಲ ತಪ್ಪು ಎಂದು ಪದೇ ಪದೇ ಒಂದಲ್ಲ ಒಂದು ಕಾರಣಕ್ಕೆ ದೂರುತ್ತಿದ್ದರೆ, ಎಷ್ಟು ದಿನ ಸುಮ್ಮನಿರಲು ಸಾಧ್ಯ. ಈ ತಾರತಮ್ಯವೇ, ಮುಂದೆ, ಪಾಂಡವರ ಮೇಲೆ ದ್ವೇಷವಾಗಿ ತಿರುಗಲು ಕಾರಣವಾಯಿತು ಎಂದು ಬಿಡಿಸಿ ಹೇಳಬೇಕಿಲ್ಲವಷ್ಟೇ? ಇದಕ್ಕೆ ಕಾರಣರಾರು? ಎಲ್ಲಕ್ಕೂ ಧರ್ಮ ಹೆಸರನ್ನು ಹೇಳಿ ನಮ್ಮದು ತಪ್ಪು ಎಂದೇ ಸಾಧಿಸುವಾಗ, ದಿನ ನಿತ್ಯದ ಅವಮಾನ ಹೊರಗೆ ಬರುವುದಾದರೂ ಹೇಗೆ ?

ಚಿಕ್ಕಂದಿನಲ್ಲಿ, ತಾತ ಭೀಷ್ಮರು ತಮ್ಮ ತೊಡೆಯ ಮೇಲೆ ಅರ್ಜುನನನ್ನು ಕುಳ್ಳರಿಸಿಕೊಂಡು ಕಥೆ ಹೇಳುತ್ತ ಊಟ ಮಾಡಿಸುವುದನ್ನು ಕಂಡು ನನಗೂ ಹಾಗೇ ಕುಳಿತುಕೊಳ್ಳಬೇಕೆಂದು ಆಸೆಯಾಗುತ್ತಿತ್ತು. ಆದರೆ ಹುಟ್ಟಿನಿಂದಲೇ ಬಂದಿದ್ದ ಅಹಂ ನನ್ನನ್ನು ತಡೆದಿತ್ತು. ತಾತನಾದರೂ ನನ್ನನ್ನು ತಾವೇ ಕರೆಯಬಹುದಿತ್ತಲ್ಲವೇ? ಮೊಮ್ಮಕ್ಕಳನ್ನು ನೋಡಿಕೊಳ್ಳುವುದರಲ್ಲೂ ಈ ತಾರತಮ್ಯವೇಕೆ?

ಪಾಂಡವರು ತಂದೆ ಇಲ್ಲದ ಮಕ್ಕಳಾದರೂ, ಆಟ-ಪಾಟ ನೋಡಿ ನಲಿವ ತಾಯಿ ಇದ್ದಳು. ಆದರೆ ನಮಗೆ ? ತಂದೆಯು ಹುಟ್ಟು ಕುರುಡರಾದರೆ, ತಾಯಿಯು ಸ್ವಯಂಕೃತ ಕುರುಡು. ಲೋಕವು ಗಾಂಧಾರಿ ಮಾಡಿದ ತ್ಯಾಗವನ್ನು ಹೊಗಳುತ್ತಿದ್ದರೇ ವಿನಹ, ಇನ್ನೊಬ್ಬರ ಅಡಿಯಲ್ಲೇ ಬೆಳೆದ ನಮ್ಮ ಅಳಲು ಯಾರಿಗೂ ಕಾಣಲೇ ಇಲ್ಲವೇ? ತಂದೆ-ತಾಯಿ ಇದ್ದೂ ಅನಾಥರಾಗಿದ್ದೆವು ಎಂದರೆ ಅದು ನಮ್ಮ ದೌರ್ಭಾಗ್ಯವಲ್ಲದೆ ಮತ್ತೇನು?

ಉರಿಯುತ್ತಿದ್ದ ಬೆಂಕಿಯನ್ನು ಶಮನಗೊಳಿಸಲು ಭಗವಂತನು ಪಾಂಡವರಿಗೆ ಒಲಿದರೆ, ಬೆಂಕಿಗೆ ತುಪ್ಪವಾಗಿ ನಮಗೆ ದೊರಕಿದ್ದು ಸೋದರಮಾವ ಶಕುನಿ. ಕರ್ಣಗಳಿಗೆ ದಿವ್ಯಾಮೃತವನ್ನೇ ತುಂಬುತ್ತ ಸರಿ ದಾರಿಗೆ ನೆಡೆಸುವ ನಾವಿಕನು, ಪಾಂಡವರ ಪಾಲಿಗೆ. ಸೂರ್ಯನ ಹುಟ್ಟಿನಿಂದ ಆರಂಭವಾಗಿ ದಿನಪೂರ್ತಿ ಹಾಗೂ ಜೀವನವಿಡೀ ದ್ವೇಷ, ಅಸೂಯೆ ಎಂಬ ಮಂತ್ರಗಳನ್ನೇ ಉಲಿವ ಹಕ್ಕಿ ಶಕುನಿ, ಕೌರವರ ಪಾಲಿಗೆ. ಪ್ರತಿ ಘಳಿಗೆಯೂ ಇಂತಹ ನುಡಿಗಳೇ ಕೇಳುತ್ತಿದ್ದರೆ, ನನ್ನ ಮನದಲ್ಲಿ ಒಳಿತು ಎಂಬುದಕ್ಕೆ ಸ್ಥಾನವೇ ಇಲ್ಲದಂತಾಗುವುದಿಲ್ಲವೇ?

ನಂತರದ ನಮ್ಮ ಜೀವನವನ್ನು ಹೊಕ್ಕು, ತಾರತಮ್ಯವನ್ನು ಮತ್ತಷ್ಟು ಬೆಳೆಸಲು ಕಾರಣರಾದವರು ಆಚಾರ್ಯ ದ್ರೋಣ. ಗುರುಗಳಾಗಿ ಶಿಷ್ಯರ ನಡುವೆ ತಾರತಮ್ಯ ತೋರಿದ್ದು ಸರಿಯೇ? ಪಾಂಡವರೆಂದರೆ ಅವರಿಗೇಕೆ ಅಷ್ಟು ಒಲವು ? ತಮ್ಮ ಶಿಷ್ಯ ಅರ್ಜುನನ ಉನ್ನತಿಗೆ ಅಡ್ಡವಾಗಬಾರದೆಂದು ಪಾಪ ಏಕಲವ್ಯನ ಹೆಬ್ಬರಳನ್ನೇ ಮುರಿದುಕೊಂಡದ್ದು ಸರಿಯೇ? ಅಷ್ಟೊಂದು ಅಂಧ ಮಮತೆಯೇ ಅರ್ಜುನನನ ಮೇಲೆ? ವಿಧಿಯಾಟದ ಇನ್ನೊಂದು ಕೈಗೊಂಬೆ ಈ ಆಚಾರ್ಯರು. ಇರಲಿ ಆಚಾರ್ಯ ನಿಂದನೆ ಮಾಡಲಾರೆ. ಉಪ್ಪುಂಡ ಋಣಕ್ಕೆ ನನ್ನೊಂದಿಗೆ ಕೊನೆ ತನಕ ಇದ್ದವರು.

ಮದುವೆಗೆ ಮುನ್ನ ತಾಯಿಯಾದವಳೆಂಬ ಅಪವಾದಕ್ಕೆ ಗುರಿಯಾಗುವೆನೆಂದು ಹೆದರಿ, ಹೆತ್ತ ಮಗನನ್ನೇ ನದಿಗೆ ನೂಕಿದ ತಾಯಿ ಕುಂತಿಯ ಬಗ್ಗೆ ಏನ ಹೇಳಲಿ? ನಿನ್ನೆದುರಿಗೇ ಲೋಕವು ಅವನನ್ನು ಸೂತಪುತ್ರನೆಂದು ಜರಿಯುತ್ತಿದ್ದರೂ ಸುಮ್ಮನಿದ್ದೆಯಲ್ಲ ತಾಯಿ? ಇದು ಸರಿಯೇ? ಅದು ಹೋಗಲಿ, ನಾನು ಆ ರಾಧೇಯನ ಪರವಾಗಿ ನಿಂತು ಅಂಗ ದೇಶದ ರಾಜನನ್ನಾಗಿ ಮಾಡಿ ಅವನ ಅವಮಾನವನ್ನು ತಡೆಗಟ್ಟಿದಾಗ್ಯೂ ನನ್ನ ಬಗ್ಗೆ ಒಂದು ಒಳ್ಳೆಯ ಮಾತನ್ನೂ ಆಡದೆ ಹೋದೆಯಾ ತಾಯಿ? ಆದರೆ ನಾ ಮಾಡಿದ ಕಾರ್ಯಕ್ಕೆ ಲೋಕ ನನ್ನ ಬಗ್ಗೆ ಆಡಿದ ಮಾತೇನು ಗೊತ್ತೆ? ಅರ್ಜುನನ ವಿರುದ್ದ ಹೋರಾಡಲು ಕರ್ಣನೆಂಬ ಅಸ್ತ್ರವನ್ನು ಕಾಪಾಡಿದೆ ಎಂದು. ಅಂದರೆ, ಅಂದು ಈ ಮಾತನ್ನು ಆಡಿದ ಜನರಿಗೆ, ಕುರುಕ್ಷೇತ್ರ ಯುದ್ದ ನೆಡೆಯುತ್ತದೆ ಎಂದು ಗೊತ್ತಿತ್ತೇ?

ಇಷ್ಟಕ್ಕೂ ಆ ಸಂದರ್ಭದಲ್ಲಿ ಕರ್ಣನ ಪರವಾಗಿ ನಾನೇಕೆ ನಿಂತೆ ಎಂಬುದಕ್ಕೆ ಕಾರಣವಾದರೂ ನಿಮಗೆ ಗೊತ್ತೇ? ದಿನ ನಿತ್ಯ ತಾರತಮ್ಯವೆಂಬ ಬೇಗೆಯಲ್ಲೇ ಬೇಯುತ್ತ, ಒಂದಲ್ಲ ಒಂದು ರೀತಿ ಅವಮಾನಿತನಾಗಿಯೇ ಜೀವನ ಕಳೆಯುತ್ತಿದ್ದ ನನಗೆ, ಕರ್ಣನು ಎಲ್ಲರೆದುರಿಗೆ ಅವಮಾನಿತನಾಗಿ ಪಡುತ್ತಿದ್ದ ನೋವು ಚೆನ್ನಾಗಿ ಅರಿವಾಗಿತ್ತು. ನನ್ನನ್ನಂತೂ ಯಾರೂ ಕೈಹಿಡಿದು ಕಾಪಾಡಲಿಲ್ಲ. ನಾನಾದರೂ ಈ ಪುಣ್ಯ ಕೆಲಸ ಮಾಡಿದಲ್ಲಿ ಸಾಯುವ ಕಾಲಕ್ಕಾದರೂ ಒಳಿತಾಗುವುದೇನೋ ಎಂಬ ಹಂಬಲ.

ಕೃಪಾಚಾರ್ಯರೇ, ಅಂದು ನೀವು ಎಲ್ಲರ ಸಮ್ಮುಖದಲ್ಲಿ ಕರ್ಣನ ಜಾತಿಯ ಬಗ್ಗೆ ಪ್ರಶ್ನೆ ಮಾಡಿ ಬಹಳ ದೊಡ್ಡ ತಪ್ಪು ಮಾಡಿಬಿಟ್ಟಿರಿ. ನಿಮಗೇ ಅರಿವಿಲ್ಲದಂತೆ ಒಂದು ದೊಡ್ಡ ಅನಾಹುತಕ್ಕೆ ನಾಂದಿಯಾಗಿಬಿಟ್ಟಿರಿ. ಮುಂದಿನ ಯುಗದಲ್ಲಿ, ಕಲಿ ತಾಂಡವವಾಡುವ ಆ ಯುಗದಲ್ಲಿ, ನೀವು ಬಿತ್ತಿದ ’ಜಾತಿ’ ಎಂಬ ಬೀಜ ಹೆಮ್ಮರವಾಗಿ ಬೆಳೆದು, ಮನುಷ್ಯರ ನಡುವೆ ವೈಷಮ್ಯ ಬೆಳೆಸುವಲ್ಲಿ ಹಿರಿದಾದ ಪಾತ್ರವಹಿಸುತ್ತದೆ. ಇದು ಸತ್ಯ ! ಇದು ಸತ್ಯ !! ಇದು ಸತ್ಯ !!!

ಇನ್ನು ಧರ್ಮರಾಯನ ಅರಮನೆಯಲ್ಲಿ ನಾನು ಜಾರಿ ಬಿದ್ದ ಪ್ರಸಂಗ. ನನ್ನ ಸುತ್ತಲೂ ಒಂದು ಷಡ್ಯಂತ್ರವನ್ನೇ ರಚಿಸಿದ್ದರೋ ಎನ್ನಿಸುತ್ತಿದೆ ಈಗ. ಕುರುಕುಲದ ಸೊಸೆಯಾಗಿ ತನ್ನ ಹಿರಿಮೆಯನ್ನೇ ಮರೆತು ಮಹಾರಾಜ ದೃತರಾಷ್ಟ್ರ, ಅಂದರೆ, ನನ್ನ ಪೂಜ್ಯ ತಂದೆಯ ಬಗ್ಗೆ ಕೇವಲವಾಗಿ ಮಾತನಾಡಿದ್ದಕ್ಕೆ, ಮಗನಾದ ನಾನು ಸಿಡಿದೆದ್ದಿದ್ದು ತಪ್ಪೇ? ಕುರುಕುಲದ ಸೊಸೆ ಎಂಬ ಒಂದೇ ಕಾರಣಕ್ಕೆ ನಾನು ಸುಮ್ಮನಿದ್ದಿದ್ದರೆ ನಾನೊಬ್ಬ ಕ್ಷತ್ರಿಯನಾಗಿದ್ದೂ ವ್ಯರ್ಥವಲ್ಲವೇ? ತಮಗಾದ ಅನ್ಯಾಯಕ್ಕೆ ಪಾಂಡವರು ಶಪಥಗಳನ್ನುಗೈದು ಸೇಡು ತೀರಿಸಿಕೊಳ್ಳಬಹುದು, ಆದರೆ ಕೌರವರು ಮಾತ್ರ ಸುಮ್ಮನೆ ಕೈಕಟ್ಟಿ ಕುಳಿತುಕೊಳ್ಳಬೇಕೇ? ಇದು ಯಾವ ನ್ಯಾಯ ?

ಸಭೆಯಲ್ಲಿ ದ್ರೌಪದಿಯನ್ನು ಕರೆಸಿ ಅವಮಾನ ಮಾಡಬೇಕೆಂಬ ಉದ್ದೇಶ ನನಗೆ ಇರಲಿಲ್ಲ. ಆದರೆ ದ್ಯೂತದಲ್ಲಿ ಸೋತು ತಲೆಬಾಗಿ ಕುಳಿತವರನ್ನು ಕಂಡು ನನ್ನ ಮನ ಹುಚ್ಚೆದ್ದು ಕುಣಿದು ನಾನೇನು ಮಾಡುತ್ತಿದ್ದೆನೋ ನನಗೇ ಅರಿವಾಗಲಿಲ್ಲ. ನನ್ನ ಇಡೀ ಜೀವನದಲ್ಲಿ ಪಾಂಡವರನ್ನು ಮೀರಿ ನಿಂತ ಮಹಾಸಂತೋಷದ ಘಳಿಗೆಯದು. ತೀರಾ ಸಂತಸದಲ್ಲಿದ್ದಾಗ ನಾವೇನು ಮಾಡುತ್ತೇವೆ ಎಂಬುದು ನಮಗೇ ಅರಿವಾಗುವುದಿಲ್ಲ ಅಲ್ಲವೇ? ಆ ಸಮಯದಲ್ಲಿ, ಭೀಮನು ಗುಡುಗಿದಾಗ, ಥಟ್ಟನೆ ನನ್ನ ಮನ ಮತ್ತೆ ಮೊದಲಿನ ಸ್ಥಿತಿಗೆ ಬಂದಿತು, ನಿಜ. ಆದರೆ ಕಾಲ ಮಿಂಚಿಹೋಗಿತ್ತಲ್ಲ? ಆಳುವ ದೊರೆ ಮಾಡಬಾರದ ಕೆಲಸವನ್ನು ನಾನು ಮಾಡಿದ್ದಕ್ಕೆ ಈಗಲೂ ನನಗೆ ಪಶ್ಚಾತ್ತಾಪವಿದೆ.

ನನಗೆ ರಾಜ್ಯಾಕಾಂಕ್ಷೆ ಇತ್ತೆಂದು ಹೇಳಿದರಲ್ಲಾ ಜನ, ಪಾಂಡವರಿಗೆ ಇರಲಿಲ್ಲವೇ? ಅಧಿಕಾರದ ಆಸೆ ಇಲ್ಲದವನೂ ಒಬ್ಬ ಕ್ಷತ್ರಿಯನೇ? ನನ್ನದು ಉದ್ದಟತನ, ಅಹಂಕಾರ ಎಂದೆಲ್ಲ ಹೇಳುವಾಗ, ನಾಲ್ವರು ಪಾಂಡವರು ಆ ಸರೋವರದ ಬಳಿ ಯಕ್ಷನೊಡನೆ ತೋರಿದ್ದು ಉದ್ದಟತನ, ಅಹಂಕಾರವಲ್ಲವೇ? ಅಣ್ಣ ಧರ್ಮರಾಯನಿಲ್ಲದಿದ್ದಿದ್ದರೆ ಅತಿರಥ-ಮಹಾರಥ ಎನ್ನಿಸಿಕೊಂಡಿದ್ದವರು ಎಲ್ಲಿರುತ್ತಿದ್ದರು? ಧರ್ಮರಾಯನಿಗೆ ಕರ್ಣನ ಬಗ್ಗೆ ಸುಳಿವೇ ನೀಡಿದೆ ಇದ್ದುದೂ ಈ ಕಾರಣಕ್ಕಾಗಿಯೆ. ಕರ್ಣನು ಎಷ್ಟೇ ಆಗಲಿ ನನಗೆ ಪ್ರಿಯನಾದವನು. ಹಿರಿಯಣ್ಣ ಎಂದು ಅರಿವಾಗಿದ್ದರೆ ಅವನನ್ನೇ ಸಿಂಹಾಸನದ ಮೇಲೆ ಕುಳ್ಳರಿಸಿಬಿಡುತ್ತಿದ್ದ ಧರ್ಮರಾಯ. ಆಗ ಪಾಂಡವರಿಗಿಂತ ನನ್ನ ಕೈ ಮೇಲಾಗುತ್ತಿತ್ತು ಎಂದು ಮುಂದಾಲೋಚನೆ ಮಾಡಿ ಕರ್ಣ ಸಾಯುವವರೆಗೂ ಅವನ ಬಗ್ಗೆ ಧರ್ಮರಾಯನಿಗೆ ತಿಳಿಸಲೇ ಇಲ್ಲ. ಇದು ಮೋಸವಲ್ಲವೇ? ನನಗೀಗ ಇನ್ನೊಂದು ಅನುಮಾನವೂ ಬರುತ್ತಿದೆ. ಎಷ್ಟೇ ಆಗಲಿ ಕರ್ಣ ಧರ್ಮರಾಯನಿಗೇ ಅಣ್ಣ. ಅವನೇನಾದರೂ ತನ್ನ ಬಗ್ಗೆ ತನ್ನ ಪಾಂಡವ ಸಹೋದರರಿಗೆ ತಿಳಿಸಕೂಡದು ಎಂದು ಅವನ ಬಗ್ಗೆ ತಿಳಿದ ಹಿರಿಯರಿಂದ ಮಾತು ತೆಗೆದುಕೊಂಡಿದ್ದನೋ? ಈ ನನ್ನ ಅನುಮಾನ ಸತ್ಯವೇ ಆಗಿದ್ದರೆ, ಹೇ ಕರ್ಣ, ನಿನ್ನ ಕೀರ್ತಿ ಸೂರ್ಯ-ಚಂದ್ರರಿರುವವರೆಗೂ ಶಾಶ್ವತವಾಗಿರಲಿ ಎಂದು ನಾನು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ!

ಎಲ್ಲ ಕಾಲಕ್ಕೂ ನನ್ನ ಪರ ವಹಿಸಿದ ಮಹಾರಾಜ ದೃತರಾಷ್ಟ್ರರಿಗೆ ದೊರಕಿದ್ದು ’ಪುತ್ರವ್ಯಾಮೋಹ’ ಎಂಬ ಹಣೆಪಟ್ಟಿ. ಪುತ್ರವ್ಯಾಮೋಹ ಎಂಬುದಿಲ್ಲದಿದ್ದಿದ್ದರೆ ಅರ್ಜುನನನ್ನು ಕಾಪಾಡಲು ಇಂದ್ರನೇಕೆ ಬ್ರಾಹ್ಮಣ ವೇಷದಲ್ಲಿ ಕರ್ಣನ ಬಳಿ ಬರಬೇಕಿತ್ತು ? ಇಂದ್ರನ ಆಣತಿ ಮೀರಿ ಸೂರ್ಯನು ತನ್ನ ಪುತ್ರನನ್ನು ರಕ್ಷಿಸಲು ಬರಲಾಗಲಿಲ್ಲ ಎಂಬುದಂತೂ ನಿಜ.

ರಣರಂಗದಲ್ಲಿ ನೆಡೆದದ್ದು ಒಂದೇ ಎರಡೇ? ತಾತ ಭೀಷ್ಮರ ಸಾವು, ದ್ರೋಣರ ಶಸ್ತ್ರತ್ಯಾಗ, ಕರ್ಣನ ಸಾವು. ಎರಡೂ ಕಡೆ ಮೋಸಗಳು ನೆಡೆದವು ಆದರೆ ಎತ್ತಾಡಿದ್ದು ಮಾತ್ರ ಕೌರವರ ತಪ್ಪುಗಳು.

ನನ್ನ ಹಗೆತನ ಏನಿದ್ದರೂ ಪಾಂಡವರ, ಅದರಲ್ಲೂ ಭೀಮನ ಬಗ್ಗೆ ಮಾತ್ರ. ನನ್ನ ಪ್ರಜೆಗಳಿಗೆ ನಾನು ಎಂದಾದರೂ ಅನ್ಯಾಯ ಮಾಡಿದ್ದೇನೆಯೆ? ಧರ್ಮರಾಯನು ಈ ಕಡೆಯ ದಿನದ ಯುದ್ದದಲ್ಲಿ ಯಾರೊಂದಿಗಾದರೂ ಹೋರಾಡು ಎಂಬ ಉದಾರತನ ತೋರಿದರೂ, ನಾನು ಸೆಣಿಸಿದ್ದು ಭೀಮನೊಡನೆ ಮಾತ್ರ. ನಾನು ದುಷ್ಟಬುದ್ದಿ ಉಳ್ಳವನಾಗಿದ್ದಿದ್ದರೆ ಭೀಮನನ್ನು ಬಿಟ್ಟು ಇನ್ಯಾರೊಂದಿಗಾದರೂ ಯುದ್ದ ಮಾಡಬಹುದಿತ್ತು. ಜಯ ಖಂಡಿತ ನನಗೇ ಆಗುತ್ತಿತ್ತು. ಅಲ್ಲವೇ?

ಯಾರೂ ಹುಟ್ಟಿನಿಂದ ದುಷ್ಟರಾಗಿರುವುದಿಲ್ಲ. ಸಂದರ್ಭ ಮನುಷ್ಯನನ್ನು ಕೆಟ್ಟವನನ್ನಾಗಿ ಮಾಡುತ್ತದೆ.

ನನ್ನ ಸಮಯವಾಯಿತು. ನಾ ಮಾಡಿದ ಕಿಂಚಿತ್ ಉಪಕಾರದ ಫಲದಿಂದ ಆತ್ಮಶುದ್ದಿ ಮಾಡಿಕೊಳ್ಳಲು ಸಮಯ ದೊರೆಯಿತು. ಮುಂಬರುವ ಯುಗದಲ್ಲಿ ನನ್ನಂತಹ ದುರ್ಯೋಧನರು ಎಲ್ಲೆಲ್ಲೂ ಕಂಡುಬರುತ್ತಾರೆ. ಜೀವನವಿಡೀ ಕಲಿಯನ್ನು ಹೊತ್ತ ನನಗಲ್ಲದೇ ಇನ್ಯಾರಿಗೆ ತಿಳಿದಿರುತ್ತದೆ ಇಂತಹ ವಿಷಯ.

ನಾನಿನ್ನು ಬರುತ್ತೇನೆ. ಎಲ್ಲ ಮುಗಿದ ಈಗ ದು:ಖಿಸಿದರೆ ಫಲವೇನು ? ದುಷ್ಕೃತ್ಯಗಳನ್ನು ಮಾಡಿದೆನೆಂಬ ಹಣೆಪಟ್ಟಿಯಂತೂ ಬದಲಾಗುವುದಿಲ್ಲ. ನನ್ನ ದುರ್ವಿಧಿಗೆ ಯಾರು ಹೊಣೆ ? ಅಯ್ಯೋ, ಈ ’ದು’ ಕಾರಗಳ ಪಟ್ಟಿಗೆ ಕೊನೆಯೇ ಇಲ್ಲವೇ?


Thursday, October 1, 2009

ಇಳಿದು ಬಾ ತಾಯೀ ಇಳಿದು ಬಾ

ತಮ್ಮ ಪೂರ್ವಜರ ಬಗ್ಗೆ ತಿಳಿದುಕೊಳ್ಳಬೇಕಾದದ್ದು ಕಿರಿಯರ ಕರ್ತವ್ಯ. ಆದರೆ ಅಕ್ಕ-ಪಕ್ಕದ ಮನೆಯಲ್ಲೇ ಯಾರಿದ್ದಾರೆ ಯಾರಿಲ್ಲ ಎಂದು ತಿಳಿದುಕೊಳ್ಳುವ ಆಸಕ್ತಿ ಇಲ್ಲದ ಈ ಕಾಲದಲ್ಲಿ ಪೂರ್ವಜರ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಅಥವಾ ವ್ಯವಧಾನ ಯಾರಿಗೆ ಇದೆ. ಆದ್ದರಿಂದ, ಹಿರಿಯರು ಅವಕಾಶ ಸಿಕ್ಕಾಗ, ಸ್ವಲ್ಪ ಸ್ವಲ್ಪವೇ ಕಿರಿಯರಿಗೆ ಅವರ ಪೂರ್ವಜರ ಬಗ್ಗೆ ತಿಳಿಸಿಕೊಡಬೇಕಾದ್ದು ಕರ್ತವ್ಯ. ಕಿರಿಯರೇ ಆಸಕ್ರಿವಹಿಸಿ ತಮ್ಮ ಪೂರ್ವಜರ ಬಗ್ಗೆ ತಿಳಿದುಕೊಂಡ ಉದಾಹರಣೆಗಳು ವಿರಳ. ಅಂತಹುದೊಂದು ಉದಾಹರಣೆ ಇಲ್ಲಿದೆ.

ಹಿಂದೆ, ಪುರುಷೋತ್ತಮನಾದ ಶ್ರೀರಾಮಚಂದ್ರನು ಮಹರ್ಷಿ ವಿಶ್ವಾಮಿತ್ರರಲ್ಲಿ ತನ್ನ ಪೂರ್ವಜರ ಬಗ್ಗೆ ತಿಳಿಸಿಕೊಡುವಂತೆ ಕೇಳಿದಾಗ, ವಿಶ್ವಾಮಿತ್ರರು ಅತೀವ ಉತ್ಸುಕತೆಯಿಂದ ಒಬ್ಬೊಬ್ಬ ಮಹಾರಾಜನ ಕಥೆಯನ್ನೂ ವಿಸ್ತಾರವಾಗಿ ತಿಳಿಸಿದರಂತೆ. ಇಲ್ಲಿ ಹೇಳಿರುವುದು, ತನ್ನ ಜೀವನವನ್ನೇ ತನ್ನ ಪೂರ್ವಜರಿಗೆ ಮುಡುಪಾಗಿಟ್ಟ ಒಬ್ಬ ರಾಜಸಂತನ ಕುರಿತು.

***
ಇಳಿದು ಬಾ ತಾಯೀ ಇಳಿದು ಬಾ
ಹರನ ಜಡೆಯಿಂದ ಹರಿಯ ಅಡಿಯಿಂದ ಋಷಿಯ ತೊಡೆಯಿಂದ ನುಸುಳಿ ಬಾ
ದೇವದೇವರನು ತಣಿಸಿ ಬಾ | ದಿಗ್ದಿಗಂತದಲಿ ಹನಿಸಿ ಬಾ | ಚರಾಚರಗಳಿಗೆ ಉಣಿಸಿ ಬಾ


ಭರತ ಖಂಡದ ಇತಿಹಾಸದಲ್ಲಿ ಇಕ್ಷ್ವಾಕು ವಂಶ ಅಥವ ಸೂರ್ಯವಂಶವು ಒಂದು ವಿಶಿಷ್ಟ ಸ್ಥಾನ ಹೊಂದಿದೆ. ಈ ವಂಶದ ದೊರೆಗಳು ಅತ್ಯಂತ ಜನಪ್ರಿಯರೂ, ಉತ್ತಮ ಪ್ರಜಾಪಾಲಕರಾಗಿಯೂ, ಸತ್ಯ-ನ್ಯಾಯ-ನಿಷ್ಠೆಗೆ ಹೆಸರಾದವರು. ಈ ವಂಶದ ದೊರೆಯರಲ್ಲಿ ದಿಲೀಪ, ರಘು, ಹರಿಶ್ಚಂದ್ರ, ನಹುಷ, ಅಂಬರೀಷ, ಯಯಾತಿ, ದಶರಥ ಇವರೇ ಮೊದಲಾದ ಒಬ್ಬೊಬ್ಬರದೂ ಹೆಸರಾಂತ ಚರಿತ್ರೆ. ಮಹಾರಾಜ ರಘುವಿನ ನಂತರ ಈ ವಂಶವು ’ರಘುವಂಶ’ ಎಂದೇ ಖ್ಯಾತಿ ಹೊಂದಿತು.

ಇಂತಹ ಇಕ್ಷ್ವಾಕು ವಂಶದಲ್ಲಿ ಜನಿಸಿದ, ಅಯೋಧ್ಯೆಯ ಮಹಾರಾಜ ಸಾಗರನು ಇಬ್ಬರು ಪತ್ನಿಯರಾದ ಕೇಶಿನಿ ಮತ್ತು ಸುಮತಿಯರೊಡನೆ ಗುಣೋತ್ತಮನಾಗಿದ್ದು ದಕ್ಷ ಪ್ರಜಾಪಾಲಕನಾಗಿದ್ದನು. ಕೀರ್ತಿವಂತನಾಗಿ ಸಕಲೈಶ್ವರ್ಯ ಹೊಂದಿದವನಾದರೂ ಮಕ್ಕಳಿಲ್ಲವೆಂಬ ಕೊರತೆ ಉಳ್ಳವನಾಗಿದ್ದನು. ಪ್ರಜಾಪಾಲನೆಯನ್ನು ದಕ್ಷ ಮಂತ್ರಿವರ್ಗಕ್ಕೆ ಒಪ್ಪಿಸಿ, ತನ್ನ ಪತ್ನಿಯರೊಡನೆ ಕೂಡಿಕೊಂಡು ಭೃಗು ಮಹರ್ಷಿಯನ್ನು ಕುರಿತು ತಪಸನ್ನಾಚರಿಸಿದನು. ಹಲವಾರು ವರ್ಷಗಳ ಅವರ ತಪಸ್ಸಿನ ನಂತರ, ಪ್ರೀತನಾದ ಭೃಗು ಮಹರ್ಷಿಯು ವಂಶವನ್ನು ಬೆಳೆಸುವ ಒಬ್ಬ ಮಗನನ್ನು ಒಬ್ಬಳಿಗೂ ಅರವತ್ತು ಸಹಸ್ರ ಬಲಾಢ್ಯ ಮಕ್ಕಳನ್ನು ಇನ್ನೊಬ್ಬಳಿಗೂ ಹರಸುವುದಾಗಿ ವಚನವಿತ್ತನು. ಯಾರು ಯಾವುದನ್ನಾದರೂ ಆಯ್ಕೆ ಮಾಡಬಹುದಾದ್ದರಿಂದ ಮೊದಲ ಪತ್ನಿ ಕೇಶಿನಿಯು ವಂಶವನ್ನು ಬೆಳೆಸುವ ಒಬ್ಬ ಮಗನನ್ನು ಪಡೆಯುವುದಾಗಿಯೂ ಮತ್ತು ಸುಮತಿಯು ಅರವತ್ತು ಸಹಸ್ರ ಬಲಿಷ್ಠ ಮಕ್ಕಳನ್ನು ಪಡೆಯುವುದಾಗಿ ನಿವೇದಿಸಿಕೊಂಡು, ಸಾಗರ ಮಹಾರಾಜನೊಡನೆ ಸಂತಸದಿಂದ ನಗರಕ್ಕೆ ಹಿಂದುರಿಗಿದರು.

ಅರವತ್ತು ಸಹಸ್ರ ಮಕ್ಕಳೂ ಬೆಳೆದಂತೆ ಬಲಾಢ್ಯರೂ, ಉತ್ತಮ ಗುಣವುಳ್ಳವರಾದರು. ಆದರೆ ಕುಲೋದ್ಧಾರಕ ಪುತ್ರನಾದ ’ಅಸಮಂಜ’, ಇನ್ನೊಬ್ಬರನ್ನು ಹಿಂಸಿಸುವುದರಲ್ಲೇ ಆನಂದ ಕಾಣುತ್ತಿದ್ದ ವಿಕೃತ ಮನಸ್ಸುಳ್ಳವನಾಗಿದ್ದನು. ವಿವಾಹ ಮಾಡಿದರೆ ಅವನ ಬುದ್ದಿ ಸರಿ ಹೋಗಬಹುದು ಎಂಬ ಆಶಾಭಾವನೆಯಿಂದ ಮಹಾರಾಜನು ಅವನಿಗೆ ಮದುವೆ ಮಾಡಿಸಿದನು. ’ಅಂಶುಮಾನ್’ ಎಂಬ ಮಗನ ತಂದೆಯಾದರೂ ಅವನ ವರ್ತನೆ ಮಾತ್ರ ಸರಿಹೋಗಲಿಲ್ಲ. ಇದರಿಂದ ಬೇಸತ್ತ ಮಹಾರಾಜನು ಅವನನ್ನು ಗಡೀಪಾರು ಮಾಡಿದನು. ಮೊಮ್ಮಗನಾದ ಅಂಶುಮಾನನು ಕುಲಕ್ಕೆ ತಕ್ಕ ಪುತ್ರನಾಗಿ ತಾತನ ಆಶ್ರಯದಲ್ಲೇ ಬೆಳೆದು ದೊಡ್ಡವನಾದನು.

ಕಾಲ ಕಳೆದಂತೆ ಮಹಾರಾಜ ಸಾಗರನು ’ಅಶ್ವಮೇಧ’ ಯಾಗವನ್ನು ಮಾಡಲು ನಿಶ್ಚಯಿಸಿದನು. ಅದರ ಪದ್ದತಿಯಂತೆ ಯಜ್ಞ್ನಾಶ್ವವನ್ನು ಒಂದು ವರ್ಷಕಾಲ ಅಡ್ಡಾಡಿ ಬರಲು ಬಿಟ್ಟನು. (ಕೆಲವೆಡೆ, ಸಾಗರನು ಈ ಯಾಗವನ್ನು ತೊಂಬತ್ತೊಂಬತ್ತು ಬಾರಿ ಯಶಸ್ವಿಯಾಗಿ ಮಾಡಿ ಮುಗಿಸಿದ್ದನು ಎಂದೂ ಹೇಳಲಾಗಿದೆ) ಈ ವಿಷಯ ತಿಳಿದ ದೇವೇಂದ್ರನು ಅಸೂಯೆಯಿಂದ ಕುದುರೆಯನ್ನು ಕದ್ದು ಬಚ್ಚಿಟ್ಟನು. ಯಾಗದ ಕುದುರೆ ಇಲ್ಲದೆ ಯಾಗವನ್ನು ಪೂರ್ಣಗೊಳಿಸುವುದಾದರೂ ಹೇಗೆ? ಮಹಾರಾಜನ ಆಣತಿಯಂತೆ ಅರವತ್ತು ಸಹಸ್ರ ಮಕ್ಕಳೂ ಹಾಗೂ ಅಂಶುಮಾನನು ಕುದುರೆಯನ್ನು ಹುಡುಕುತ್ತಾ ಇಡೀ ಭೂಮಂಡಲ ಸುತ್ತಿದರು. ಭೂಮಿಯ ಅಡಿಯಲ್ಲಿ ಇರಬಹುದೆಂದು ಭೂಮಿಯನ್ನೂ ಅಗೆದು ಹುಡುಕಿದರು. ಹಿಮಾಲಯ ಪರ್ವತ ಶ್ರ್‍ಏಣಿಯಲ್ಲಿ ಕಂಡು ಬಂದ ಅಶ್ವವನ್ನು ಅಂಶುಮಾನನು ಹಿಡಿದು ತಂದು ಮಹಾರಾಜನಿಗೆ ಒಪ್ಪಿಸಿದನು. ಆದರೆ ವಿಘ್ನಗಳು ಅಲ್ಲಿಗೇ ಮುಗಿಯಲಿಲ್ಲ !

ಯಾಗವು ಮುಂದುವರೆದಿರಲು, ಸೂಕ್ತ ಸಮಯ ನೋಡಿ, ಈ ಬಾರಿ ರಕ್ಕಸನ ವೇಷದಲ್ಲಿ ಬಂದ ಇಂದ್ರನು ಯಜ್ಞ್ನಾಶ್ವವನ್ನು ಮತ್ತೆ ಕದ್ದೊಯ್ದನು. ವಿಷಯ ತಿಳಿದ ಸಾಗರನು ಕುಪಿತನಾದರೂ ಯಜ್ಞ್ನವನ್ನು ಮಾಡುತ್ತಿದ್ದುದರಿಂದ ಮಧ್ಯದಲ್ಲಿ ಬಿಟ್ಟೇಳುವಂತೆ ಇರಲಿಲ್ಲ. ಹಾಗಾಗಿ ತನ್ನ ಮಕ್ಕಳನ್ನು ಕರೆದು ’ಇಡೀ ಭೂಮಂಡಲವನ್ನು ಮತ್ತೆ ಹುಡುಕಿ. ಸಿಕ್ಕದೇ ಹೋದಲ್ಲಿ, ಪ್ರತಿಯೊಬ್ಬರೂ ಒಂದು ಯೋಜನದಷ್ಟು ಭೂಪ್ರದೇಶವನ್ನು ಅಗೆದು ಹುಡುಕಿ. ನಿಮ್ಮ ಹಾದಿಗೆ ಅಡ್ಡ ಬಂದ ಯಾವುದೇ ರೀತಿಯ ಜೀವಿಯಾಗಲಿ, ಬಿಡದೆ ಕೊಲ್ಲಿ. ಯಜ್ಞ್ನಾಶ್ವ ಸಿಗುವ ತನಕ ಹಿಂದಿರುಗಿ ಬಾರದಿರಿ’ ಎಂದು ಆಜ್ಞ್ನಾಪಿಸಿದನು. ಮತ್ತೊಮ್ಮೆ ಇಡೀ ಭೂಮಂಡಲ ಪ್ರದಕ್ಷಿಣೆ ಮಾಡಿ, ಯಜ್ಞ್ನಾಶ್ವ ಕಾಣದೆ ತಂದೆಯ ಆಣತಿಯಂತೆ, ಪ್ರತಿಯೊಬ್ಬರೂ ಒಂದೊಂದು ಯೋಜನ ವಿಸ್ತೀರ್ಣದಂತೆ ಇಡೀ ಭೂಮಿಯನ್ನು ಅಗೆಯುತ್ತಾ ಹೋದರು. ಇವರ ಹಾದಿಗೆ ಅಡ್ಡ ಬಂದ ವನ್ಯ ಪ್ರಾಣಿಗಳು, ಸರ್ಪಗಳು, ಅಸುರರೇ ಮೊದಲಾಗಿ ಯಾವುದೂ ಇವರುಗಳ ಪ್ರಚಂಡ ಶಕ್ತಿಯ ಮುಂದೆ ಉಳಿಯಲಿಲ್ಲ. ಈ ರೀತಿಯ ಹತ್ಯಾಕಾಂಡವನ್ನು ಹಾಗೂ ಭೂಮಿಯು ಛಿದ್ರ ಛಿದ್ರವಾಗುವುದ ಕಂಡು ದೇವಾನುದೇವತೆಗಳು ಬ್ರಹ್ಮನಲ್ಲಿ ಮೊರೆ ಹೋದರು. ಆಗ ಬ್ರಹ್ಮನು ಅವರಲ್ಲಿ ’ಭೂದೇವಿಯು ಮಹಾವಿಷ್ಣುವಿಗೆ ಸೇರಿದವಳಾದ್ದರಿಂದ ಅವಳನ್ನು ರಕ್ಷಿಸಲು ಅವನೇ ಸೂಕ್ತ’ ಎಂದು ನುಡಿದು ಅವರನ್ನು ಕರೆದುಕೊಂಡು ವಿಷ್ಣುವಿನ ಬಳಿ ಹೋದನು.

ಇತ್ತ ಭೂಮಿಯನ್ನು ಧ್ವಂಸ ಮಾಡಿಯೂ ಅಶ್ವವು ಕಾಣದೆ ಹೋದ್ದರಿಂದ, ಸಾಗರನ ಪುತ್ರರು ರಾಜ್ಯಕ್ಕೆ ಹಿಂದಿರುಗಿ ಸಾಗರನಲ್ಲಿ ಆ ವಿಷಯ ನಿವೇದಿಸಿದರು. ಸಾಗರ ಮಹಾರಾಜನು ಕ್ಷುದ್ರನಾಗಿ ’ಭೂಮಿಯ ಯಾವ ಭಾಗವನ್ನೂ ಬಿಡದೆ ಅಗೆಯಿರಿ. ಅಶ್ವವು ಸಿಗುವವರೆಗೂ ನಿಮ್ಮ ಮುಖಗಳನ್ನು ನನಗೆ ತೋರಿಸದಿರಿ’ ಎಂದು ಕಟುವಾಗಿ ನುಡಿದನು. ತಂದೆಯ ಕಟು ನುಡಿಯಿಂದ ಅವಮಾನಿತರಾಗಿ ಹಿಂದುರುಗಿದ ಅವರುಗಳು ಇನ್ನಷ್ಟು ರೋಷಾಯುಕ್ತರಾಗಿ ಅತಲ, ವಿತಲ, ಸುತಲ, ತಲಾತಲ, ರಸಾತಲ, ಪಾತಾಲಗಳನ್ನೂ ಬಿಡದೆ ಅಗೆಯ ತೊಡಗಿದರು.

ಆಗ ಮಹಾವಿಷ್ಣುವು ಮಹರ್ಷಿ ಕಪಿಲನಂತೆ ರೂಪ ಬದಲಿಸಿ ಹಿಮಾಲಯದಲ್ಲಿ ಕುಳಿತುಕೊಂಡು ಸಾಗರನ ಪುತ್ರರ ಅಲ್ಲಿಗೆ ಬರುವಂತೆ ಮಾಡಿದನು. ಅವರುಗಳು ಅಲ್ಲಿಗೆ ಬಂದಾಗ ಅವರ ಕಣ್ಣಿಗೆ ಕಪಿಲ ಮುನಿಯ ಹಿಂದೆ ಅಶ್ವವು ಹುಲ್ಲು ಮೇಯುವುದು ಕಾಣಿಸಿತು. ಅದನ್ನು ಕಂಡು ಅತೀ ಆಕ್ರೋಶದಿಂದ ಕಪಿಲಮುನಿಯ ಆಶ್ರಮಕ್ಕೆ ನುಗ್ಗಿ ಮುನಿವರ್ಯನನ್ನು ಕಳ್ಳನೆಂದು ಜರೆದು ಆತನನ್ನು ಹತ್ಯೆ ಮಾಡಲೂ ಮುಂದುವರೆದರು. ಆಗ ತನ್ನ ಯೋಗಮಾಯೆಯಿಂದ ವಿಷ್ಣು ಸುಮ್ಮನೆ ಒಮ್ಮೆ ’ಹೂಂ’ಕರಿಸಲು ಸಾಗರನ ಅರವತ್ತೂ ಸಹಸ್ರ ಮಕ್ಕಳು ಸುಟ್ಟು ಭಸ್ಮವಾದರು!!! ಅಲ್ಲಿಯವರೆಗೂ ಗಲಭೆಯಿಂದ ಕೂಡಿದ್ದ ಆ ಪ್ರದೇಶ ಒಮ್ಮೆಗೇ ನಿಶಬ್ದವಾಯಿತು. ಸಾಗರನ ಮಕ್ಕಳು ಭಸ್ಮರಾದ ಆ ಪ್ರದೇಶದಲ್ಲಿ ಬೂದಿಯ ಬೆಟ್ಟವೇ ನಿರ್ಮಾಣವಾಯಿತು.

ಎಷ್ಟು ದಿನಗಳಾದರೂ ತನ್ನ ಮಕ್ಕಳು ಅಶ್ವದೊಡನೆ ಹಿಂದಿರುಗದೆ ಇರುವುದ ಕಂಡು ಚಿಂತಿತನಾದ ಸಾಗರ ಮಹಾರಾಜನು ತನ್ನ ಮೊಮ್ಮಗನಾದ ಅಂಶುಮಾನನಿಗೆ ಅಶ್ವವನ್ನು ಹಾಗೂ ಚಿಕ್ಕಪ್ಪಂದಿರನ್ನೂ ಹುಡುಕಿಕೊಂಡು ಬರುವಂತೆ ಹೇಳಿ ಕಳಿಸಿದನು. ಅಪ್ರತಿಮ ವೀರನಾದ ಅಂಶುಮಾನನು ತನ್ನ ಚಿಕ್ಕಪ್ಪಂದಿರು ಹೋದ ಜಾಡನ್ನು ಅನುಸರಿಸಿ ಹೋಗುತ್ತಿರಲು ಹಾದಿಯಲ್ಲಿ ಎಲ್ಲೆಡೆ ಅವನಿಗೆ ಅಶ್ವವು ದೊರೆಯುವಂತಹ ಶುಭಲಕ್ಷಣಗಳು ಕಾಣಿಸಿದವು ಆದರೆ ಚಿಕ್ಕಪ್ಪಂದಿರ ಸುಳಿವು ಮಾತ್ರ ಸಿಗಲಿಲ್ಲ. ಆಶ್ರಮದ ಬಳಿ ಹೋಗುತ್ತಿರುವಂತೆಯೇ ಅವನ ಕಣ್ಣಿಗೆ ಬಿದ್ದಿದ್ದು ಬೂದಿಯ ಬೆಟ್ಟ !!! ಅದನ್ನು ಕಂಡು ಏನಾಗಿರಬಹುದೆಂದು ಊಹಿಸಿದ ಅವನಿಗೆ ಅತೀವ ದು:ಖವಾಯಿತು. ಪಿತೃವಾಕ್ಯ ಪರಿಪಾಲನೆ ಮಾಡಿಯೂ ಇಂತಹ ದುರ್ಗತಿ ಇವರಿಗೇಕೆ ಬಂತೆಂದು ಅರಿಯದೆ, ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತ ನೀರನ್ನು ಹಾಕಲು ನೀರು ಹುಡುಕಿದಾಗ ಅವನಿಗೆ ನೀರೇ ಸಿಗಲಿಲ್ಲ.

ಆಗ ಅಲ್ಲಿಗೆ ಬಂದ ಗರುಡದೇವನು ಅಂಶುಮಾನಿಗೆ ಹೇಳಿದನು ’ಲೋಕಕಲ್ಯಾಣಕ್ಕಾಗಿಯೇ ನಿನ್ನ ಚಿಕ್ಕಪ್ಪಂದಿರು ಹತರಾಗಬೇಕಾಯಿತು. ಅದಕ್ಕಾಗಿ ನೀನು ಚಿಂತಿಸಬೇಕಿಲ್ಲ. ಬದಲಿಗೆ ಅವರಿಗೆ ಸದ್ಗತಿ ಕೊಡುವತ್ತ ಆಲೋಚಿಸು. ಬೂದಿಯಾಗಿರುವ ಇಷ್ಟೂ ಜನರನ್ನು ಒಟ್ಟಾಗಿ ಸ್ವರ್ಗವನ್ನು ಸೇರಿಸುವಂತೆ ಮಾಡಲು ದೇವಗಂಗೆಗೆ ಮಾತ್ರ ಸಾಧ್ಯ’ ಎಂದು ನುಡಿದನು. ಅಂಶುಮಾನನು ಅಲ್ಲಿ ಮೇಯುತ್ತಿದ್ದ ಯಜ್ಞ್ನಾಶ್ವವನ್ನು ಕರೆದುಕೊಂಡು ರಾಜ್ಯಕ್ಕೆ ಹಿಂದಿರುಗಿ ಮಹಾರಾಜನ ಬಳಿ ಎಲ್ಲವನ್ನೂ ನಿವೇದಿಸಿದನು. ಯಜ್ಞ್ನವೇನೋ ಮುಗಿಯಿತು ಆದರೆ ಗಂಗೆಯನ್ನು ಭೂಮಿಗೆ ತರುವ ಪ್ರಯತ್ನ ಮಾತ್ರ ಮುಂದುವರೆಯುತ್ತಲೇ ಇತ್ತು.

ಸಾಗರನಿಗಾಗಲಿ, ಅವನ ಮೊಮ್ಮಗನಾದ ಅಂಶುಮಾನನಿಗಾಗಲೀ ಅಥವಾ ಅವನ ಪುತ್ರನಾದ ದಿಲೀಪನಿಗಾಗಲಿ ಗಂಗೆಯನ್ನು ಭೂಮಿಗೆ ತರುವ ಮಹತ್ಕಾರ್ಯ ಸಾಧ್ಯವಾಗಲಿಲ್ಲ. ದಿಲೀಪನಿಗೆ ನಿತ್ಯವೂ ಅದೇ ಚಿಂತೆಯಾಗಿತ್ತು. ಈ ಚಿಂತೆಯನ್ನು ಬಗೆಹರಿಸುವೆನೆಂದು ಪಣತೊಟ್ಟು ನಿಶ್ಚಲವಾದ ನಿಸ್ವಾರ್ಥ ಮನಸ್ಸಿನಿಂದ ತಪಸ್ಸಿಗೆ ಹೊರಟವನು ದಿಲೀಪನ ಮಗನಾದ ಭಗೀರಥ !!!

ಕೆಲಸದ ವಿಷಯದಲ್ಲಿ ಜನರಲ್ಲಿ ಹಲವು ಪೈಕಿ. ತಮ್ಮ ಕೈಯಲ್ಲಿ ಆಗುವುದಿಲ್ಲವೆಂದು ಹೆದರಿ ಕಠಿಣ ಕೆಲಸಕ್ಕೆ ಕೈಹಾಕದೆ ದೂರವುಳಿಯುವ ಪೈಕಿ ಒಂದಾದರೆ, ಮತ್ತೊಂದು ಪೈಕಿಯಲ್ಲಿ ಕೆಲಸವನ್ನು ಶುರು ಮಾಡಿ ಮಧ್ಯದಲ್ಲಿ ಕೈಬಿಡುವುದು. ತಾವು ಕೈ ಹಾಕಿದ ಕೆಲಸವು ಎಷ್ಟೇ ಕಠಿಣವಾದರೂ ಬಿಡದೆ ಸಾಧಿಸುವವರು ಕೊನೆಯ ಪೈಕಿಯ ಜನ. ಆರಂಭದಿಂದ ಉತ್ಸುಕರಾಗಿ ಎಷ್ಟೇ ಕಷ್ಟ ಬಂದರೂ ಅದನ್ನು ಎದುರಿಸಿ, ಹಿಡಿದ ಕೆಲಸ ಸಾಧಿಸುವ ಛಲದ ಮಂದಿಯ ಸಾಲಿಗೆ ಸೇರುವವನು ಈ ಭಗೀರಥ !! ’ಭಗೀರಥ ಪ್ರಯತ್ನ’ ಎಂಬ ನುಡಿ ಈಗಲೂ ಚಾಲ್ತಿಯಲ್ಲಿದೆ. ಈತನನ್ನು ರಾಜರ ಸಾಲಿಗೆ ಸೇರಿಸುವುದಕ್ಕಿಂತ ಒಬ್ಬ ಕರ್ಮಯೋಗಿಯ ಸಾಲಿಗೆ ಸೇರಿಸಬಹುದು.

ಗಂಗೆಯನ್ನು ಭೂಮಿಗೆ ತರುವ ಪ್ರಯತ್ನದಲ್ಲಿ ತಾನು ಸೋತೆನೆಂಬ ಚಿಂತೆಯಲ್ಲೇ ಅಸುನೀಗಿದ ತಂದೆಯನ್ನು ಕಂಡ ಸಂತಾನಹೀನನಾದ ಭಗೀರಥನು ರಾಜ್ಯದ ಕ್ಷೇಮವನ್ನು ತನ್ನ ಮಂತ್ರಿಮಂಡಲಕ್ಕೆ ಒಪ್ಪಿಸಿ ಬ್ರಹ್ಮನನ್ನು ಕುರಿತು ತಪವನ್ನಾಚರಿಸಲು ಹಿಮಾಲಯಕ್ಕೆ ಹೊರಟನು. ಅಲ್ಲಿ ಪುಷ್ಕರಣಿಯಲ್ಲಿ ಮಿಂದು, ಪದ್ಮಾಸನ ಹಾಕಿ ಕುಳಿತು ತಪವನ್ನು ಆರಂಭ ಮಾಡಿದನು. ಚಳಿಗಾಲದಿ ಥಣ್ಣಗೆ ಕೊರೆವ ನೀರಿನಲ್ಲಿ ಎದೆಯ ಮಟ್ಟದವರೆಗೂ ನಿಂತು ತಪವ ಮಾಡಿದರೆ, ಬೇಸಿಗೆಯಲ್ಲಿ ಪಂಚಾಗ್ನಿಯ (ನಾಲ್ಕು ದಿಕ್ಕಿನಲ್ಲಿ ಅಗ್ನಿ ಹಾಗೂ ನೆತ್ತಿಯ ಮೇಲಿನ ಸೂರ್ಯ) ಮಧ್ಯೆ ನಿಂತು ನಿದ್ರಾಹಾರ ತ್ಯಜಿಸಿ ಕಠೋರ ತಪಸ್ಸನ್ನು ಆಚರಿಸಿದನು. ಹಲವಾರು ವರ್ಷ ಹೀಗೇ ಕಳೆಯಲು, ಅವನ ತಪೋಗ್ನಿಯಿಂದ ಉಂಟಾದ ಶಾಖ ತಡೆಯಲಾರದೆ ದೇವಾನುದೇವತೆಗಳೂ ಬ್ರಹ್ಮನಲ್ಲಿ ಹೋಗಿ ನಿವೇದಿಸಿಕೊಂಡರು. ಆಗ ಬ್ರಹ್ಮದೇವನು ಭಗೀರಥನ ಮುಂದೆ ಪ್ರತ್ಯಕ್ಷನಾದನು. ಭಗೀರಥನು ಸೃಷ್ಟಿಕರ್ತನಾದ ಬ್ರಹ್ಮನನ್ನು ಕುರಿತು ತನಗೆ ಸಂತಾನ ಭಾಗ್ಯ ಕರುಣಿಸುವಂತೆಯೂ ಹಾಗೂ ಬೂದಿಯಾಗಿರುವ ತನ್ನ ಪೂರ್ವಜರಿಗೆ ಮುಕ್ತಿ ಕಾಣಿಸಲು ಗಂಗೆಯನ್ನು ಭೂಮಿಗೆ ಕಳಿಸುವಂತೆಯೂ ಪ್ರಾರ್ಥನೆ ಮಾಡಿದನು. ಭಗೀರಥನ ತಪಸ್ಸಿನಿಂದ ಪ್ರೀತನಾಗಿದ್ದ ಬ್ರಹ್ಮನು ಸಂತಾನ ಯೋಗವನ್ನು ಕರುಣಿಸಿದನು. ಹಾಗೆಯೇ, ಹಿಮವಂತನ ಪುತ್ರಿಯು ಭೂಮಿಗೆ ಹರಿವ ರಭಸವನ್ನು ತಡೆವ ಶಕ್ತಿ ತ್ರಿನೇತ್ರನಿಗೆ ಮಾತ್ರ ಇರುವುದರಿಂದ ಅವನನ್ನು ಕುರಿತು ತಪಸನ್ನಾಚರಿಸಲು ತಿಳಿಸಿದನು.

ಶಿವನನ್ನು ತಪದಿಂದ ಒಲಿಸಿಕೊಳ್ಳಲು ಭಗೀರಥನು ತನ್ನ ಕಾಲ ಹೆಬ್ಬರಳಿನ ಮೇಲೆ ನಿಂತು ಒಂದು ವರ್ಷದ ಕಾಲ ಘೋರ ತಪಸ್ಸನ್ನು ಆಚರಿಸಿದನು. ಅವನ ತಪಸ್ಸಿಗೆ ಮೆಚ್ಚಿ ಅವನ ಮುಂದೆ ಪ್ರತ್ಯಕ್ಷನಾದ ಶಿವನು, ಸ್ವರ್ಗಲೋಕದಿಂದ ಧುಮ್ಮಿಕ್ಕಿ ಹರಿಯುವ ಜಲಧಾರೆಯನ್ನು ತನ್ನ ತಲೆಯ ಮೇಲೆ ತೆಗೆದುಕೊಂಡು ಭೂಮಿಗೆ ಕಳಿಸುವುದಾಗಿ ವಚನವಿತ್ತನು. ಸಾಟಿಯಿಲ್ಲದ ರಭಸಕ್ಕೆ ಹೆಸರಾದ ಆ ಗಂಗೆಯು ಸ್ವರ್ಗದಿಂದ ಹರಿದು ಶಿವನ ತಲೆಯ ಮೇಲೆ ಬೀಳಲು ಬರುತ್ತಿರುವಾಗ ಮುಕ್ಕಣ್ಣನನ್ನು ತನ್ನ ರಭಸದಿಂದ ಕೊಚ್ಚಿ ಹಾಕುವೆನೆಂಬ ಅಹಂಕಾರದಿಂದ ಧುಮುಕಿದಳು. ಗಂಗೆಯ ಇಂಗಿತ ಅರಿತ ಶಿವನು ಅವಳಿಗೆ ಬುದ್ದಿ ಕಲಿಸುವ ಸಲುವಾಗಿ, ತಲೆಯ ಮೇಲೆ ಬಿದ್ದವಳನ್ನು ತನ್ನ ಜಟೆಯಲ್ಲೇ ಬಂಧಿಸಿಬಿಟ್ಟನು. ಗಂಗೆಯು ಜಟೆಯಿಂದ ಹೊರಬರಲು ಎಷ್ಟೇ ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ಆಗ ಭಗೀರಥನು ಮತ್ತೊಮ್ಮೆ ತಪವನ್ನಾಚರಿಸಿ ಶಿವನಲ್ಲಿ ಪ್ರಾರ್ಥನೆ ಮಾಡಿ ಗಂಗೆಯನ್ನು ಬಿಟ್ಟುಕೊಡುವಂತೆ ಕೇಳಿದನು.

ಭಗೀರಥನ ನಿಸ್ವಾರ್ಥ ಮನಸ್ಸಿನ ಧ್ಯೇಯವನ್ನು ಅರಿತ ಗಂಗಾಧರನು ಗಂಗೆಯನ್ನು ತನ್ನ ಜಟೆಯಿಂದ ಮುಕ್ತಗೊಳಿಸಿ, ಭಗೀರಥನನ್ನು ಹಿಂಬಾಲಿಸಲು ತಿಳಿಸಿದನು. ಶಿವನ ತಲೆಯ ಮೇಲಿನಿಂದ ಭೂಮಿಗೆ ಬಿದ್ದ ಗಂಗೆ ಏಳು ಭಾಗವಾಗಿ ಹರಿದಳೆಂದು, ಅದರಲ್ಲಿ ಒಂದು ಭಾಗದಲ್ಲಿ ಮಾತ್ರ ಭಗೀರಥನನ್ನು ಹಿಂಬಾಲಿಸಿದಳು ಎಂದು ಹೇಳಲಾಗಿದೆ.

ಗಂಗೆಯು ಸ್ವರ್ಗದಿಂದ ಬಂದಿಳಿದಾಗ ತನ್ನೊಡನೆ ಸಹಸ್ರಾರು ಜಲಚರಗಳನ್ನೂ ಕರೆತಂದಳು. ಶಿವನ ಜಟೆಯಿಂದ ಭುವಿಗೆ ಹರಿದು ಬರುವ ರುದ್ರರಮಣೀಯ ದೃಶ್ಯವನ್ನು ದೇವಾನುದೇವತೆಗಳು ಕುತೂಹಲದಿಂದ ನೋಡುತ್ತ ನಿಂತರು. ಧುಮ್ಮಿಕ್ಕಿ ಹರಿವ ನೀರಿನಲ್ಲಿ ಥಳ ಥಳನೆ ಹೊಳೆವ ಪ್ರಾಣಿಗಳೂ ಹರಿದು ಬರುತ್ತಿರಲು, ಅಲ್ಲಿ ಕೋಟಿ ಸೂರ್ಯಪ್ರಭೆಯೇ ಉಂಟಾಗಿತ್ತು. ಯಕ್ಷರು, ಕಿನ್ನರರು ತಮ್ಮ ವಾಹನಗಳನ್ನೇರಿ ಭುವಿಗೆ ಬಂದು ಭಗೀರಥನ ಒಡಗೂಡಿ ಕೈಮುಗಿದು ಗಂಗೆಯನ್ನು ಸ್ವಾಗತಿಸಿದರು.

ದಂ ದಂ ಎನ್ದನ್ತೆ ದುಡುಕಿ ಬಾ | ನಿನ್ನ ಕಂದನ್ನ ಹುಡುಕಿ ಬಾ | ಹುಡುಕಿ ಬಾ ತಾಯೆ ದುಡುಕಿ ಬಾ |
ಹರನ ಹೊಸತಾಗಿ ಹೊಳೆದು ಬಾ | ಬಾಳು ಬೆಳಕಾಗಿ ಬೆಳೆದು ಬಾ | ಕೈ ತೊಳೆದು ಬಾ ಮೈ ತೊಳೆದು ಬಾ
ಇಳಿದು ಬಾ ತಾಯಿ ಇಳಿದು ಬಾ | ಇಳೆಗಿಳಿದು ಬಾ ತಾಯಿ ಇಳಿದು ಬಾ

ಶಿವನ ದೇಹದ ಮೇಲೆ ಹರಿದಿಳಿದಿದ್ದರಿಂದ ಆಕೆ ಲೋಕಪಾವನೆಯೂ ಆದಳು. ಹಿಮಾಲಯದಿಂದ ಸ್ವರ್ಗಲೋಕಕ್ಕೆ, ಅಲ್ಲಿಂದ ಶಿವನ ತಲೆಯ ಮೇಲೆ ಹಾಗೂ ಕೊನೆಗೆ ಮತ್ತೆ ಭೂಮಿಗೆ ಹರಿದಿದ್ದರಿಂದ ಆಕೆಯನ್ನು ’ತ್ರಿ-ಪಥ’ ಎಂದು ಕರೆಯುತ್ತಾರೆ.

ತಲೆಬಗ್ಗಿಸಿ ರಭಸದಿಂದ ಭಗೀರಥನ ರಥದ ಹಿಂದೆಯೇ ಸಾಗುತ್ತಿದ್ದ ಭಾಗೀರಥಿಯು ಹಾದಿ ಬದಿಯಲ್ಲಿದ್ದ ಆಶ್ರಮಗಳನ್ನು ಕೆಡವುತ್ತಾ ಸಾಗಿದ್ದಳು. ಇದೇ ತುಂಟುತನದಿಂದ ತನ್ನ ಅರಿವಿಲ್ಲದೇ ’ಜಹ್ನು’ ಮುನಿಯ ಆಶ್ರಮವನ್ನೂ ಕೆಡವಿದಳು. ಜಹ್ನು ಮುನಿಯು ಇದರಿಂದ ಕುಪಿತಗೊಂಡು, ಇಡೀ ಗಂಗೆಯನ್ನು ಒಂದೇ ಗುಟುಕಿನಲ್ಲಿ ಕುಡಿದುಬಿಟ್ಟನು. ವಿಘ್ನಗಳಿಗೆ ಈಗಾಗಲೇ ಹೊಂದಿಕೊಂಡಿದ್ದ ಭಗೀರಥನು ಈ ಬಾರಿ ಜಹ್ನು ಮುನಿಯಲ್ಲಿ ತನ್ನ ಉದ್ದೇಶವನ್ನು ನಿವೇದಿಸಿಕೊಂಡು, ಗಂಗೆಯನ್ನು ಬಿಡುವಂತೆ ಕೇಳಿಕೊಂಡನು. ಜಹ್ನು ಮುನಿಯು ಅವನ ಉದ್ದೇಶವನ್ನು ಅರಿತು, ತನ್ನ ಕಿವಿಗಳ ಮೂಲಕ ಆಕೆಯನ್ನು ಬಿಟ್ಟನು (’ತೊಡೆ’ಯಿಂದ ಎಂದು ಕೆಲವೆಡೆ ಹೇಳಲಾಗಿದೆ). ಜಹ್ನುವಿನಿಂದ ಹೊರಬಂದ ಗಂಗೆಯು ’ಜಾಹ್ನವಿ’ ಎಂದೇ ಪ್ರಸಿದ್ದಳಾದಳು.

ಭಗೀರಥನು ಗಂಗೆಯನ್ನು ಬೂದಿಯ ರೂಪದಲ್ಲಿದ್ದ ತನ್ನ ಪೂರ್ವಜರ ಬಳಿ ಕರೆದು ತಂದು ಆಕೆಯನ್ನು ಅದರ ಮೇಲೆ ಹರಿಯಲು ಹೇಳಲು, ಲೋಕಪಾವನೆ ಗಂಗೆಯ ದೆಸೆಯಿಂದ ಅವರೆಲ್ಲರಿಗೂ ಸ್ವರ್ಗಲೋಕ ಪ್ರಾಪ್ತಿಯಾಯಿತು. ತನ್ನ ಪ್ರಯತ್ನ ಕಡೆಗೂ ಫಲ ನೀಡಿದ್ದನ್ನು ಕಂಡು ಅತ್ಯಂತ ಸಂತುಷ್ಟನಾದ ಭಗೀರಥ ಮಹಾರಾಜ.

ಆ ಸಮಯದಲ್ಲಿ ಬ್ರಹ್ಮದೇವನು ಪ್ರತ್ಯಕ್ಷನಾಗಿ ಭಗೀರಥನಿಗೆ ’ನಿನ್ನ ಪ್ರಯತ್ನದಿಂದಾಗಿ ಭುವಿಗೆ ಇಳಿದ ಗಂಗೆಯು ಇನ್ನು ಮುಂದೆ ’ಭಾಗೀರಥಿ’ ಎಂದೂ ಪ್ರಸಿದ್ದಿ ಹೊಂದುತ್ತಾಳೆ. ರಜಸ್ವಲಾ ದೋಷ ಮುಕ್ತಳಾದ ಈ ಗಂಗೆಯಲ್ಲಿ ಮಿಂದವರು ಪಾಪ ಕಳೆದುಕೊಳ್ಳುತ್ತಾರೆ. ಗಂಗೆಯನ್ನು ಉಪಯೋಗಿಸಿ ತರ್ಪಣ ಕೊಟ್ಟಲ್ಲಿ ಪಿತೃಗಳಿಗೆ ಸ್ವರ್ಗ ಪ್ರಾಪ್ತಿಯಾಗುತ್ತದೆ’ ಎಂದು ಆಶೀರ್ವದಿಸಿದನು.

ಅತ್ಯಂತ ಸಂತೃಪ್ತ ಮನಸ್ಸಿನಿಂದ ಭಗೀರಥನು ತನ್ನ ರಾಜ್ಯಕ್ಕೆ ಹಿಂದಿರುಗಿ ತನ್ನ ಬಂಧುವರ್ಗವನ್ನು ಹಾಗೂ ಪ್ರಜೆಗಳನ್ನು ಸೇರಿಕೊಂಡನು. ಇತಿಹಾಸದಲ್ಲಿ ಇವನ ಹೆಸರು ಅಜರಾಮರವಾಯಿತು.

ಗಂಗಾವತರಣದ ಬಗ್ಗೆ ಹಲವು ಕಡೆ ಹಲವು ರೀತಿಯಲ್ಲಿ ಹೇಳಿದೆ. ದಶಾವತರದಲ್ಲಿ ಒಂದಾದ ವಾಮನಾವತಾರದ ಸಮಯದಿ, ವಿಷ್ಣು ತನ್ನ ಪಾದದಿಂದ ಸ್ವರ್ಗಲೋಕವನ್ನು ಮುಚ್ಚಲು, ಬ್ರಹ್ಮದೇವನು ತನ್ನ ಕಮಂಡಲದ ನೀರಿನಿಂದ ವಿಷ್ಣುವಿನ ಪಾದ ತೊಳೆಯಲು ಅದೇ ಭೂಲೋಕಕ್ಕೆ ಹರಿದು ಗಂಗೆಯಾಯಿತು ಎಂದೂ ಹೇಳುತ್ತಾರೆ.

----
"ಸ್ವರ್ಗದಿಂದ ಇಳಿದು ಬಾ" ಎಂದು ಗಂಗೆಯನ್ನು ಕರೆಯುವ ಸನ್ನಿವೇಶವನ್ನು ವರಕವಿ ಡಾ|ದ.ರಾ.ಬೇಂದ್ರೆಯವರು ತಮ್ಮ ಲೇಖನಿಯಲ್ಲಿ ಅದ್ಭುತವಾಗಿ ಮೂಡಿಸಿದ್ದಾರೆ. ಅಷ್ಟೇ ಸೊಗಸಾಗಿ, ಮೈ ಝುಮ್ಮೆನ್ನುವಂತೆ ತಮ್ಮ ಕಂಠಸಿರಿಯಲ್ಲಿ ಡಾ| ಪಿ.ಬಿ.ಶ್ರೀನಿವಾಸ್ ಅವರು ಆ ರಚನೆಯನ್ನು ವಿಜಯಭಾಸ್ಕರ್ ಅವರ ದಕ್ಷ ಸಂಗೀತ ನಿರ್ದೇಶನದಡಿ ಹಾಡಿದ್ದಾರೆ. ಲೇಖನ ಬರೆಯಲು ಪ್ರೇರಣೆಯಾದ ಈ ಎಲ್ಲ ಮಹನೀಯರಿಗೂ ನನ್ನ ಅನಂತ ವಂದನೆಗಳು.