Sunday, August 8, 2010

ಅಪೂರ್ಣನಾದ ಪೂರ್ಣಚಂದ್ರ !

ಅಪೂರ್ಣನಾದ ಪೂರ್ಣಚಂದ್ರ !

ಸುಮಾರು ಹದಿನೈದು ವರ್ಷಗಳ ಹಿಂದೆ ನೆಡೆದ ಘಟನೆಯಿದು.

ಒಂದು ಶುಕ್ರವಾರ ಸಂಜೆ ಹೀಗೇ ಕಾಫೀ ಹೀರುತ್ತ ಸೋಫಾದ ಮೇಲೆ ಕುಳಿತಿದ್ದಾಗ ಮನೆ ಫೋನು ಟ್ರಿನ್’ಗುಟ್ಟಿತು.

ನನ್ನ ಕಸಿನ್ ಕರೆ ಮಾಡಿದ್ದ. "ಏನೋ ಡುಮ್ಮ. ಭಾನುವಾರ ಎಡಮುರಿ’ಗೆ ಹೋಗೋಣ ಅಂತ ಪ್ಲಾನ್ ಮಾಡ್ತಾ ಇದ್ದೀವಿ .. ಬರ್ತೀಯಾ ತಾನೇ?" ಅಂತ. ಜಂಜಟ್ಟಿಲ್ಲದ ಜೀವನದ ದಿನಗಳು. ಸರಿ ಅಂದೆ.

ಯಾರು ಯಾರು ಬರುತ್ತಾರೆ, ಊಟ ತಿಂಡಿ ವ್ಯವಸ್ತೆ ಏನು, ಯಾರ ಮನೆಯಿಂದ ಹೊರಡುವುದು ಇತ್ಯಾದಿ ಮಾತುಕಥೆಗಳು ನೆಡೆದವು.

ಒಟ್ಟು ಹತ್ತು ಜನ ಒಂಟೀ ಜೀವಿಗಳ ಗುಂಪು ಭಾನುವಾರ ಬೆಳಿಗ್ಗೆ ಚಿಕ್ಕಪ್ಪನ ಮನೆ ಮುಂದೆ ಸೇರಿದೆವು. ನಮ್ಮಿಷ್ಟು ಜನರ ಮಧ್ಯೆ ಒಬ್ಬರು ಮಾತ್ರ ಬೇರೆ ಯಾರೋ ಇದ್ದರು. ಪರಿಚಯ ಮಾಡಿಕೊಂಡೆ. ಅವರು ನನ್ನ ಕಸಿನ್’ನ ಸ್ನೇಹಿತರು. ಇವನ ಮನೆಯಿಂದ ನಾಲ್ಕು ಮನೆ ದಾಟಿದರೆ ಅವರ ಮನೆ. ವಯಸ್ಸಿನಲ್ಲಿ ನಮಗಿಂತ ಸ್ವಲ್ಪ ದೊಡ್ಡವರು. ಬರೀ ಹುಡುಗು ಪಾಳ್ಯ ಹೊರಟಿದ್ದಾರೆ, ದೊಡ್ಡವ್ರು ಅಂತ ನೀವೂ ಇದ್ದರೆ ಚೆನ್ನಾಗಿರುತ್ತೆ ಅಂತ ಯಾರೋ ಊದಿದರಂತೆ. ಹಾಗಾಗಿ ಅವರೂ ನಮ್ಮೊಂದಿಗೆ!

’ರಾಮೇಗೌಡ’ರು ನಮಗಿಂತ ವಯಸ್ಸಿನಲ್ಲಿ ಐದಾರು ವರ್ಷ ಹಿರಿಯರಿರಬಹುದು ಅಷ್ಟೇ!

ಎಲ್ಲ ಸಿದ್ದತೆ ಆಯಿತು. ಹೊರಡುವ ಮುನ್ನ ಗಾಡಿಗೆ ದೃಷ್ಟಿ ನೀವಾಳಿಸಿ ಹೊರಟೆವು. ಹೊರಡುವ ಮುನ್ನ ಮೀಟರ್ ಮೇಲೆ ನಂಬರ್ ಬರೆದುಕೊಳ್ಳಲು ಮರೆಯಲಿಲ್ಲ ಅನ್ನಿ!

ಇನ್ನೇನು ವ್ಯಾನ್ ಹೊರಡಬೇಕೂ ... ಆಗ ಒಬ್ಬ ಕೂಗಿದ "ಲೋ, ಪೂರ್ಣಿ ಹತ್ತಿದನೇನೋ?" "ಯಾಕೋ ಗಾಂಪಾ, ಕಣ್ ಕಾಣಲ್ವಾ? ಇಲ್ಲೇ ಇದ್ದಾನಲ್ಲೋ" "ಇನ್ನೂ ದೇವರ ಮುಂದೆ ಮೂಗು ಹಿಡಿದುಕೊಂಡು ಕೂತಿದ್ದೀಯೇನೋ ಅಂತ ಕೇಳ್ದೆ ಅಷ್ಟೇ" "ಲೋ! ಪೂರ್ಣಿ. ಬರೋದು ರಾತ್ರಿ ಆಗುತ್ತೆ. ನದೀ ತೀರದಲ್ಲಿ ಸಾಯಂ ಸಂಧ್ಯಾವಂದನೆಗೆ ಪಾತ್ರೆ ತಂದಿದ್ದೀಯಾ ತಾನೇ?" "ಲೋ ಬಿಡ್ರೋ ... ಅದೇನು ಗೋಳು ಹೊಯ್ದುಕೊಳ್ತೀರಾ ಪಾಪ ಅವನನ್ನ?"

ಪೂರ್ಣಿ ... ಅಂದರೆ ಪೂರ್ಣಚಂದ್ರ. ನನ್ನ ಸಂಬಂಧಿ. ಹೇಗೆ ಎಂದು ಹೇಳಲು ಹೊರಟರೆ, ಸುಮ್ಮನೆ ತಲೆ ಕೆರೆದುಕೊಳ್ತೀರ ... ಬೇಡ ಬಿಡಿ.

ಇಷ್ಟೆಲ್ಲ ಅವನ ಬಗ್ಗೆ ಮಾತನಾಡುತ್ತಿದ್ದರೂ ಅವನು ಮಾತ್ರ ಏನೂ ಹೇಳಲಿಲ್ಲ. ಅವನಿಗೆ ಇದು ಮಾಮೂಲು.

ನಿಮ್ಮ ಗಲಾಟೆ ನಿಮ್ಮದು ಆದರೆ ನನ್ನ ಪಾಡಿಗೆ ನನ್ನನ್ನು ಬಿಟ್ಟುಬಿಡಿ ಎಂಬಂತೆ ಯಾವುದೋ ದೇವರ ಪುಸ್ತಕ ಕೈಯಲ್ಲಿ ಹಿಡಿದುಕೊಂಡು ಓದುತ್ತಿದ್ದ. ಮೊದಲಿಂದಲೂ ಅವನು ಹಾಗೇ ! ಎಲ್ಲರೊಂದಿಗೆ ಇರುತ್ತಾನೆ. ಎಲ್ಲರಿಗೂ ಸಹಾಯ ಮಾಡುತ್ತಾನೆ. ಆದರೂ ಒಂದು ರೀತಿ ವಿಮುಖನಾಗೇ ಇರುತ್ತಾನೆ. ಪೂಜೆ, ಪುನಸ್ಕಾರ, ಏಕಾದಶಿ ಉಪವಾಸ ಇತ್ಯಾದಿಗಳು ದೇಹದಲ್ಲಿ ಒಂದು ಭಾಗವಿದ್ದಂತೆ. ಹೊರಗಡೆ ತಿನ್ನೋಲ್ಲ. ಮಹಾ ಮಡಿವಂತ.

ವ್ಯಾನಿನ ತುಂಬ ಕಲ ಕಲ ಅಂತ ಗಲಭೆಯೋ ಗಲಭೆ. ಕೆಟ್ಟ ದನಿಯಲ್ಲಿ ನಮ್ಮ ಹಾಡುಗಳು, ಎಲ್ಲ ರೀತಿ ಜೋಕುಗಳು, ಹಳೆಯ ನೆನಪುಗಳು ಹೀಗೆ .. ಯಾವುದಕ್ಕೂ ಕಡಿಮೆ ಇರಲಿಲ್ಲ. ಹೆಚ್ಚಿನ ಸಮಯ ಬರೀ ಒಬ್ಬರ ಕಾಲನ್ನು ಇನ್ನೊಬ್ಬರು ಎಳೆಯುವುದರಲ್ಲೇ ಕಳೆಯಿತು. ಅದೇ ಮಜಾ ನೋಡಿ.

ಮಾರ್ಗ ಮಧ್ಯೆ ಒಂದೆಡೆ ನರಸಿಂಹದೇವರ ಗುಡಿಯ ಬಳಿ ನಿಂತೆವು. ಯಾವ ಸ್ಥಳ ಎಂದು ಈಗ ನೆನಪಿಲ್ಲ. ಮನೆಯ ದೇವರು ನರಸಿಂಹ. ಪೂಜೆ ಮಾಡಿಸಿಕೊಂಡೇ ಹೋಗಬೇಕೆಂದು ಮನೆಯಲ್ಲಿ ಹೇಳಿದ್ದರು. ಗುಡಿಯ ಬಳಿ ಗಾಡಿ ನಿಲ್ಲಿಸಿ, ಕೈ-ಕಾಲು ತೊಳೆದು ಒಳಗೆ ಹೊರಟೆವು.

ತನ್ನ ಸುಶ್ರಾವ್ಯ ಕಂಠದಿಂದ ಸೊಗಸಾದ ದೇವರನಾಮ ಹಾಡಿದ ಪೂರ್ಣಿ. ನಾವೆಲ್ಲ ಹೊರಗೆ ಬಂದು ಅಲ್ಲೇ ಸ್ವಲ್ಪ ದೂರದ ಒಂದು ಸಣ್ಣ ತೋಪಿನಲ್ಲಿ ಬೆಡ್-ಶೀಟ್ ಹಾಸಿ ಕುಳಿತು ಜೊತೆಗೆ ತಂದಿದ್ದ ತಿಂಡಿ, ಕಾಫೀ ಮುಗಿಸಿದೆವು.

ಹೊರಡುವ ಹೊತ್ತಾದರೂ ದೇವರನ್ನು ಬಿಟ್ಟು ಬಂದಿರಲಿಲ್ಲ ಈ ಪುಣ್ಯಾತ್ಮ.

ಅಂತೂ ಇಂತೂ ಅವನೂ ಬಂದ. "ಉಪ್ಪಿಟ್ಟು ಕೊಡಲೇನೋ" ಅಂತ ಯಾರೋ ಕೇಳಿದರು. "ಬೇಡ ಕಣೋ. ಬೆಳಿಗ್ಗೆ ಆಯ್ತು. ಬಾಳೆಹಣ್ಣು ತಿಂತೀನಿ" ಅಂದ. ಎಲ್ಲರೂ ಹೊಟ್ಟೆ ಭರ್ತಿ ಮಾಡಿಕೊಂಡ ಮೇಲೆ ಹೊರಟೆವು.

ಟ್ರಾಫಿಕ್ ಜ್ಯಾಮ್ ಅದೂ ಇದೂ ಅಂತ ಅಲ್ಲಿ ಸೇರೋ ಹೊತ್ತಿಗೆ ಮಧ್ಯಾನ್ನ ಹನ್ನೆರಡೂವರೆ. ಮೊದಲೇ ಮೆಟಡೊರ್ ವ್ಯಾನು ... ಕುಲುಕಿದ್ದೇ ಕುಲುಕಿದ್ದು. ಮೈ-ಕೈ ಎಲ್ಲ ನೋವು ಬಂದಿತ್ತು.

ಎಲ್ಲರೂ ಕೆಳಗೆ ಇಳಿದೆವು. ಬಿಸಿಲು ಜೋರಾಗಿತ್ತು. ಆ ಬಿಸಿಲಿನ ಬೇಗೆಗೆ, ಮೊದಲು ನೀರಿಗೆ ಹೋದರೆ ಸಾಕು ಎನಿಸುತ್ತಿತ್ತು. ಅಲ್ಲೇ ನಿಂತಿದ್ದರೆ ನಾವೇ ಒಣಗಿ ಹೋಗುತ್ತೇವೆ ಇನ್ನು ಬಟ್ಟೆಯೇನು ಮಹಾ ಎಂದು ಬಟ್ಟೆ ಬದಲಿಸೋ ಗೋಜಿಗೇ ಹೋಗಲಿಲ್ಲ. ಪ್ಯಾಂಟನ್ನು ಮಂಡಿಯವರೆಗೂ ಮಡಿಸಿಕೊಂಡು, ಶರಟನು ಕಳಚಿ ನೀರಿಗೆ ಧಾವಿಸಿದೆವು.

ನನಗೆ ಈಜು ಬರುತ್ತಿರಲಿಲ್ಲ. ಹಾಗಾಗಿ ನೀರಿನಲ್ಲಿ ಇಳಿದರೂ ತುಂಬಾ ಒಳಗೆ ಹೋಗುವುದಿಲ್ಲ ಎಂದು ನಿರ್ಧರಿಸಿದ್ದೆ. ಸ್ವಲ್ಪ ಹೊತ್ತು ದಂಡೆಯ ಬಂಡೆಯ ಮೇಲೆ ಕುಳಿತು ಆಮೇಲೆ ನೀರಿಗೆ ಇಳಿಯೋಣ ಎಂದು ಕುಳಿತೆ. ’ಪ್ಲಾಸ್ಟಿಕ್ ತಂಬಿಗೆ ಕೊಡ್ಲೇನೋ. ಸ್ನಾನಾ ಮಾಡ್ತೀಯಾ?’ ಅಂತ ಒಬ್ಬ ರೇಗಿಸಿದ. "ನೀರು ಸ್ವಲ್ಪ ಬೆಚ್ಚಗೆ ಆಗಲಿ ಅಂತ ಕಾದಿದ್ದಾನೆ ಕಣೋ" ಅಂತ ಇನ್ನೊಬ್ಬ.

ದೂರದಲ್ಲಿ ಪೂರ್ಣಿ ಬರುವುದನ್ನು ಕಂಡೆ. ಕಚ್ಚೆ ಪಂಚೆ ಧರಿಸಿ ಬರುತ್ತಿದ್ದ !! ಮಿಕ್ಕವರು ಅಷ್ಟು ಹೊತ್ತಿಗಾಗಲೇ ಕೆಲವರು ನೀರಿನಲ್ಲಿ ಆಟ ಆಡುತ್ತಿದ್ದರು.

ಪೂರ್ಣಿ, ನೀರಿನಲ್ಲಿ ಇಳಿದು, ಬೊಗಸೆಯಲ್ಲಿ ನೀರು ತುಂಬಿಕೊಂಡು ಕಣ್ಣು ಮುಚ್ಚಿ ನಿಂತ. ಕಣ್ಣು ಬಿಟ್ಟ ಮೇಲೆ ನನ್ನನ್ನು ನೋಡಿ ಹೇಳಿದ "ನೀರಿನಲ್ಲಿ ಇಳಿಯುವ ಮುನ್ನ ಪ್ರಾರ್ಥನೆ ಮಾಡಿ ಇಳಿಯಬೇಕು" ಅಂತ.

ಇನ್ನೂ ಏನೇನು ಮಾಡುತ್ತಾನೆ ಎಂದು ಕುತೂಹಲದಿಂದ ನೋಡುತ್ತಲೇ ಕುಳಿತಿದ್ದೆ.

ಹಾಗೇ ಸ್ವಲ್ಪ ಮುಂದೆ ನೆಡೆದು ಹೋದ ...

ಮೂಗು ಹಿಡಿದು ಒಮ್ಮೆ ಮುಳುಗಿ ಮೇಲೆದ್ದ ....

ಎರಡನೇ ಬಾರಿ ಮುಳುಗಿ ಮೇಲೆದ್ದ ...

ಮೂರನೇ ಬಾರಿ ಮುಳುಗುತ್ತಿದ್ದ .... ಮುಳುಗಿದ ... ಮುಳುಗಿದ್ದ !!

ಈಗ ಏಳುತ್ತಾನೆ ... ಆಗಾ ಏಳುತ್ತಾನೆ ಎಂದೇ ಕಾದಿದ್ದೆ ....

ನಿಮಿಷವಾಯ್ತು ... ನಿಮಿಷ ಎರಡಾಯ್ತು ...

ಪೂರ್ಣಿ, ಮೇಲೆ ಬರಲೇ ಇಲ್ಲ !!!

ಅಲ್ಲಲ್ಲೇ ಹಲವಾರು ಜನ ನೀರಿನಲ್ಲಿ ನಿಂತು ಆಡುತ್ತಿದ್ದರು. ಅಂದರೆ ಆಳ ಇಲ್ಲ ಅಂತ ತಾನೇ?

ಮೊದಲು ಅನುಮಾನ ಬಂತು ... ಅನುಮಾನ ಬಲವಾಯ್ತು ...

ಧಡಕ್ಕನೆ ಮೇಲೆದ್ದು ಆ ಕಡೆ ಈ ಕಡೆ ಕಣ್ಣು ಹಾಯುವಷ್ಟು ದೂರಕ್ಕೂ ನೋಡಿದೆ. ಮೇಲೆದ್ದ ಸುಳಿವೇ ಇಲ್ಲ !!

ನೀರಿನಲ್ಲಿ ಆಡುತ್ತಿದ್ದ ನನ್ನವರಿಗೆ ಕೂಗಿ ಹೇಳಿದೆ. "ನೀನು ಸುಮ್ಮನೆ ಟೆನ್ಶನ್ ಮಾಡ್ಕೋಬೇಡ್ವೊ, ಅವನಿಗೆ ಈಜು ಬರುತ್ತೆ" ಅಂದ ಒಬ್ಬ.

ಪೂರ್ಣಿಗೆ ಈಜು ಗೊತ್ತಿತ್ತು ಎಂದು ಕೇಳಿದ್ದೆ ಆದರೆ ಖಚಿತವಾಗಿ ಗೊತ್ತಿರಲಿಲ್ಲ. ಮೊದಲಿಗೆ ಯಾರೂ ಅಷ್ಟು ಸೀರಿಯಸ್ಸಾಗಿ ತೆಗೆದುಕೊಳ್ಳದೇ ಇದ್ದರೂ ಮುಂದಿನ ಕೆಲವೇ ನಿಮಿಷದಲ್ಲಿ ಪರಿಸ್ಠಿತಿ ಅರಿವಾಯ್ತು. ಇದ್ದಲ್ಲೇ ನೀರಲ್ಲಿ ಮುಳುಗಿ ನೋಡಿದರು.

ಅಲ್ಲೇ ಇದ್ದವರಾರೋ ’ಸೆಕ್ಯೂರಿಟಿಯವರನ್ನು ಕರೀರಿ. ಬೋಟಿನಲ್ಲಿ ಬಂದು ಹುಡುಕುತ್ತಾರೆ’ ಅಂತ ಸಲಹೆ ಕೊಟ್ಟರು. ವಿಷಯ ತಿಳಿದ್ದೇ ತಡ ನಾನೂ ಮತ್ತಿಬ್ಬರು ಸೆಕ್ಯೂರಿಟಿ ಎಲ್ಲಿರುತ್ತಾರೆ ಎಂದು ಹುಡುಕುತ್ತ ಹೋದೆವು. ನಾವು ಅವರನ್ನು ಹುಡುಕಿ, ಅವರು ಸ್ಥಳಕ್ಕೆ ಬರುವಷ್ಟರಲ್ಲಿ ಅರ್ಧ ಘಂಟೆಯಾಯಿತು.

ಬಂದವರು ಬೋಟಿನಲ್ಲಿ ಕೂಡುತ್ತಿದ್ದವರಿಂದ "ಎಷ್ಟು ಹೊತ್ತಾಯ್ತು ಮುಳುಗಿ" ಎಂಬ ಧೋರಣೆ ಪ್ರಶ್ನೆ ತೂರಿ ಬಂತು. ಎಷ್ಟು ಹೊತ್ತು ಕಳೆದಿತ್ತು ಎಂಬ ಅರಿವೂ ಇಲ್ಲದೆ ’ಹತ್ತು ನಿಮಿಷ’ ಎಂದೆವು. "ಇಷ್ಟು ಬೇಗ ಬಾಡಿ ಹೊರಗೆ ಬರಲ್ಲ. ಇನ್ನೆರಡು ಘಂಟೆ ತಡೆದುಕೊಳ್ಳಿ" ಎಂದ !!

ಈ ಮಾತುಗಳನ್ನು ಕೇಳಿದ ಒಬ್ಬನಿಗೆ ಫ಼ಿಟ್ಸ್ ಶುರುವಾಯ್ತು.

ನಾವು ಪೂರ್ಣಿಯನ್ನು ಹುಡುಕಿ ಕೊಡಿ ಎಂದರೆ, ಈತ ’ಬಾಡಿ’ ಇಷ್ಟು ಬೇಗ ಸಿಗೊಲ್ಲ ಅನ್ನೋದೇ ? "ಹಾಗೆಲ್ಲ ಅನ್ನಬೇಡ್ರೀ ಸ್ವಲ್ಪ ಹುಡುಕಿ" ಎಂದದ್ದಕ್ಕೆ ಅತ್ತ "ಇಷ್ಟು ಹೊತ್ತಾದ್ರೂ ಇನ್ನೂ ಬದುಕಿರ್ತಾರೇನ್ರೀ? ಸುಮ್ಮನೆ ಕುಡ್ಕೊಂಡ್ ಬಂದು ನೀರಲ್ಲಿ ಬಿದ್ದು ಸಾಯ್ತಾರೆ. ನಂ ತಲೆ ತಿಂತಾರೆ" ಎಂದು ಕೆಟ್ಟದಾಗಿ ನುಡಿದು ಬೋಟು ತಳ್ಳಿಕೊಂಡು ಹೋದರಿಬ್ಬರು.

ನಾವೆಲ್ಲ ದಂಡೆಯ ಬಳಿ ಕುಳಿತಿದ್ದೆವು. ದೂರದಿಂದ ಬೋಟು ವಾಪಸ್ಸು ಬರುವುದು ಕಂಡಿತು. ಎಲ್ಲರಿಗೂ ವಾಸ್ತವದ ಅರಿವಿದ್ದರೂ ಒಪ್ಪಿಕೊಳ್ಳಲು ಯಾರೂ ಸಿದ್ದರಿರಲಿಲ್ಲ ! ಬೋಟು ದಡಲ್ಲಿ ನಿಲ್ಲಿಸಿದರು, ಐದೂ ಮುಕ್ಕಾಲಡಿ ದೇಹದ ಒಳ್ಳೆಯ ದೇಹ ಗಾತ್ರದ ಪೂರ್ಣಿಯನ್ನು, ಒಬ್ಬ ತಲೆಯ ಬಳಿ ಮತ್ತೊಬ್ಬ ಕಾಲುಗಳನ್ನು ಹಿಡಿದು ನೆಲದ ಮೇಲೆ ಮಲಗಿಸಿದರು !

ಮುಖದಲ್ಲಿ ನೋವೇನೂ ಕಾಣಲಿಲ್ಲ. ಮಡಿ ಪಂಚೆಯುಟ್ಟು ಶುಚಿರ್ಭೂತನಾಗಿ ನಮ್ಮೆಲ್ಲರನ್ನೂ ಅಗಲಿದ್ದ ಪೂರ್ಣಿ.

ಒಬ್ಬ ವ್ಯಕ್ತಿ ನನ್ನ ಕಣ್ಣ ಮುಂದೆ ನೀರಿನಲ್ಲಿ ಮುಳುಗಿ ಸತ್ತಿದ್ದನು ನಾನು ಕಂಡಿದ್ದೆ !!!

ತನ್ನೆದುರಿಗೆ ಮಲಗಿದ್ದ ಹೆಣವನ್ನು ಕಂಡು ಆಘಾತಕ್ಕೊಳಗಾದ ರಾಮೇಗೌಡರು ಧರೆಗುರುಳಿದರು ! ಅವರನ್ನು ಆರೈಕೆ ಮಾಡಲು ಒಬ್ಬ ಮುಂದಾದ. ಪೂರ್ಣಿಯ ಅಣ್ಣನಿಗೆ ಮಾತೇ ಹೊರಡುತ್ತಿಲ್ಲ. ಕೈಕಾಲೆಲ್ಲ ನಡುಗುತ್ತಿತ್ತು, ಪಾಪ. ಹೀಗೇ .. ಒಬ್ಬೊಬ್ಬರದು ಒಂದೊಂದು ಕಥೆ. ಪೋಲೀಸ್ ಕೇಸ್ ಆಯ್ತು. ವ್ಯಾನಿನಲ್ಲಿ ಬಂದವರೆಲ್ಲರೂ ಪೋಲೀಸ್ ಸ್ಟೇಷನ್ ಮೆಟ್ಟಿಲು ಹತ್ತಿದೆವು.

ವ್ಯಾನಿನ ತಪಾಸಣೆ ಆಯ್ತು. ಯಾವ ಬಾಟ್ಲಿಯೂ ಸಿಗಲಿಲ್ಲ. ತರಹಾವರಿ ಪ್ರಶ್ನಾವಳಿ ಶುರುವಾಯ್ತು "ಸತ್ತವನು ಕುಡುಕನೇ? ದಾರಿಯಲ್ಲೇನಾದರೂ ಕುಡ್ಕೊಂಡ್ ಬಂದ್ರಾ? ನೀರಿನಲ್ಲಿ ಇಳಿದ ಮೇಲೆ ಕುಡಿದಿನಾ?". ಪೂರ್ಣಿಯ ಬಗ್ಗೆ ಒಂದಿಷ್ಟು ಹೇಳಿದ ಮೇಲೆ, ನಮ್ಮ ಮುಖಗಳನ್ನು ನೋಡಿದ ಮೇಲೆ ಅವರಿಗೂ ನಮ್ಮ ಮೇಲೆ ನಂಬಿಕೆ ಬಂತು ಎಂಬುದು ಖಚಿತವಾಯ್ತು ’ನಾವು ಕೊಲೆಗಾರರಲ್ಲ’ ಎಂದು !!!

ನಾವು ಮುಕ್ತರಾದೆವು ಆದರೆ ಪೋಲೀಸರು ದೇಹವನ್ನು ಬಿಟ್ಟು ಕೊಡಲಿಲ್ಲ. ಇನ್ನೂ ಕಾಗದ ಪತ್ರ ಆಗಬೇಕು ಎಂದೂ, ಮೃತನ ಮನೆ ಹಿರಿಯರನ್ನು ಕರೆಸಿ ಎಂದೂ ತಿಳಿಸಿದರು.

ಅದು ಮೊಬೈಲ್ ಫೋನಿನ ಯುಗವಲ್ಲ. ... ಇನ್ನೂ ಕಾಯಿನ್ ಬೂತಿನ ಕಾಲ. ಅದೂ ಬೀದಿಗೆ ನಾಲ್ಕು ಅಂಗಡಿಗಳಲ್ಲಿ ಬೂತ್ ಇರುವ ದಿನಗಳಲ್ಲ!! ಕೆಲವು ವರ್ಷಗಳ ಹಿಂದಿನಂತೆ ಎಲ್ಲೆಡೆ ಬೂತ್’ಗಳೂ ಇರಲಿಲ್ಲ. ನಾನೂ ಮತ್ತಿಬ್ಬರು ಅಲ್ಲಿ, ಇಲ್ಲಿ ಎಂದು ಎಲ್ಲೆಲ್ಲೋ ಹುಡುಕಿಕೊಂಡು ಹೊರಟೆವು. ಅಂತೂ ಇಂತೂ ಒಂದು ಅಂಗಡಿಯಲ್ಲಿ ಫೋನು ಮಾಡುವ ಅವಕಾಶ ಸಿಕ್ಕಿತು.

ಇನ್ನಿಬ್ಬರು ಫೋನು ಮಾಡಲು ಸಿದ್ದವಿಲ್ಲ ! ಆ ಕೆಲಸ ನನಗೇ ಬಿಟ್ಟರು. ಪೂರ್ಣಿಯ ಮನೆಯಲ್ಲಿ ಫೋನ್ ಇರಲಿಲ್ಲ. ಹಾಗಾಗಿ ಅವನ ಎದುರು ಮನೆಯವರ ಫೋನು ನಂಬರ್’ಗೆ ಕರೆ ಮಾಡಿದೆ. ಅವನ ತಂದೆಯನ್ನು ಬಿಟ್ಟು ಮನೆಯಲ್ಲಿ ಯಾರಾದರೂ ದೊಡ್ಡವರು ಇದ್ದರೆ ಕರೆಯಿರಿ ಎಂದು ಸ್ಪಷ್ಟವಾಗಿ ತಿಳಿಸಿದೆ.

ಆದರೆ ಫೋನಿನಲ್ಲಿ ಬಂದವರು ಪೂರ್ಣಿಯ ತಂದೆಯೇ ಆಗಿತ್ತು. ವಿಷಯವನ್ನು ಹೇಳುವಾಗಲೂ ಸರಿಯಾಗಿ ಹೇಳಬೇಕು ಏಕೆಂದರೆ ಪೂರ್ಣಿಯ ತಂದೆಗೆ ವಯಸ್ಸಾಗಿತ್ತು ! ಸಾವಧಾನವಾಗಿ ವಿಷಯವನ್ನು ಅರುಹಿದೆ. ಆದರೆ ನನಗೆ ಕೇಳಿಸಿದ್ದು ಆ ಕಡೆಯಲ್ಲಿ ಅವರು ಕುಸಿದು ಬಿದ್ದ ಸದ್ದು !!

ಮತ್ತೆ ಇನ್ನೊಬ್ಬರು ಫೋನಿನ ಬಳಿ ಬಂದರು. ಅವರಿಗೆ ವಿಷಯವನ್ನು ತಿಳಿಸಿ ಸಾಧ್ಯವಾದಷ್ಟು ಬೇಗ ಪೋಲೀಸ್ ಸ್ಟೇಶನ್ ಬಳಿ ಬರುವಂತೆ ತಿಳಿಸಿದೆವು.

ಆಗಲೇ ಮುಸ್ಸಂಜೆಯಾಗುತಿತ್ತು. ಸಂಜೆಯ ಮೇಲೆ ದೇಹವನ್ನು ರಿಲೀಸ್ ಮಾಡುವುದಿಲ್ಲವಂತೆ. ಹಾಗಾಗಿ ದೇಹವನ್ನು ಸಮೀಪದ ಮಾರ್ಚುರಿಗೆ ಸಾಗಿಸಿ ಬೆಳಗಿನವರೆಗೂ ದೇಹವನ್ನು ಅಲ್ಲೇ ಇಡಬೇಕು. ನಮ್ಮೊಂದಿಗೆ ಬಂದ ಪೋಲೀಸಿನವನ ಜೊತೆ ನಾವು ಒಂದಿದ್ದರು ಹೋದೆವು. ಇಷ್ಟೆಲ್ಲ ಆಗುವ ಹೊತ್ತಿಗೆ ಸಂಪೂರ್ಣ ಕತ್ತಲಾಗಿತ್ತು.

ಗಾಡಿ ಮಾರ್ಚುರಿ ಬಳಿ ನಿಂತಿತು. ಪೋಲೀಸಿನವನು ತಲೆಯ ಬಳಿ ನಾನು ಹಿಡಿದುಕೊಳ್ಳುತ್ತೇನೆ ನೀವುಗಳು ಕಾಲುಗಳನ್ನು ಹಿಡಿಯಿರಿ ಅಂದ. ಮಿಕ್ಕಿಬ್ಬರಿಗೂ ಅಲ್ಲಿ ಒಳಗೆ ಬರಲು ಭಯ. ನಾನು ಕಾಲುಗಳನ್ನು ಹಿಡಿದೆ. ಹೆಣಭಾರ ಎಂದರೇನು ಅಂದು ಅರ್ಥವಾಯಿತು !

ಒಳಗೆ ಒಂದು ಕಲ್ಲಿನ ಬೆಂಚಿನ ಮೇಲೆ ಮಲಗಿಸಿದೆವು. ನಾನು ಹಾಗೇ ಆ ಕಡೆ ಈ ಕಡೆ ನೋಡಿದೆ. ಬೋಗಿಯ ಕಂಪಾರ್ಟ್ಮೆಂಟ್’ಗಳ ಹಾಗೆ ಮೂರು ಕಂಪಾರ್ಟ್ಮೆಂಟ್’ಗಳು ಇದ್ದವು. ಅಲ್ಲಲ್ಲೇ ಹೆಣಗಳು. ಒಂದರ ಕೈ ಮೇಲೆತ್ತಿದ್ದರೆ, ಮತ್ತೊಂದರ ಕಾಲು ಹೊರಗೆ ಬಂದಿತ್ತು. ಕತ್ತಲಾದ್ದರಿಂದ ಮುಖ ಕಾಣಲಿಲ್ಲ !!

ಅಷ್ಟು ಹೊತ್ತಿಗೆ ಊರಿನಿಂದ ಮೂರೋ ನಾಲ್ಕೋ ಹಿರಿಯರು ಬಂದಿದ್ದರು. ಎಲ್ಲರೂ ಅಲ್ಲಿರುವ ಅವಶ್ಯಕತೆ ಇಲ್ಲ ಎಂದು ಹಿರಿಯರು ನಿರ್ಧರಿಸಿ, ವ್ಯಾನಿನಲ್ಲಿ ಬಂದವರನ್ನೆಲ್ಲ ವಾಪಸ್ಸು ಕಳಿಸಿದರು.

ಜೀವನದಲ್ಲಿ ಎಂದೂ ಆಗಿರದ ಅನುಭವಗಳು ಅಂದು ಆಗಿತ್ತು.

ಪೂರ್ಣಿ’ಯೊಡನೆ ಬಂದಿದ್ದ ನಾವು, ಪೂರ್ಣಿ ಇಲ್ಲದೆ ಅಪೂರ್ಣರಾಗಿ ಹಿಂದಿರುಗಿದೆವು.


ಪ್ರಬಂಧದ ಶೀರ್ಷಿಕೆ ಏನೆಂದು ಊಹಿಸಿ

ಸನ್ನಿವೇಶ ೧:
ಶಾಲೆಯೆ ಮುಗಿದ ಮೇಲೆ ಡೇ ಕೇರ್’ಗೆ ಹೋಗುವ ಮಗಳು. ಕೆಲಸ ಮುಗಿಸಿ ಮಗಳನ್ನು ಮನೆಗೆ ಕರೆದುಕೊಂಡು ಹೋಗಲು ಬರುವ ತಾಯಿ.

"ಹಾಯ್, ಚಿನ್ನುಮಿನ್ನು, How was your day?"

ಖುಷಿಯಿಂದ ಜೋರಾಗಿ ನುಡಿದಳು ಮಗಳು " it was so fun ಅಮ್ಮ, ನಾನು ಇವತ್ತು ಈ ಡ್ರಾಯಿಂಗ್ ಮಾಡಿದೆ, ನೋಡು !"

ತಾಯಿ ಹಗುರಾಗಿ ಗದರುತ್ತ ಅವಳಿಗೆ ಮಾತ್ರ ಕೇಳಿಸುವಂತೆ ನುಡಿದಳು "ಆನ್ನಾ, ಹುಷ್, Dont scream ok? this is Day Care. speak in English .. do you understand? "

ಮಗುವಿನ ಮುಖ ಸಪ್ಪಗಾಯಿತು ... ತನ್ನ ಡ್ರಾಯಿಂಗ್ ಬಗ್ಗೆ ತಾಯಿ ಏನೂ ಹೇಳದೆ ಇದ್ದುದಕ್ಕೆ.

ಕಾರಿನಲ್ಲಿ ಕೂತರು ತಾಯಿ-ಮಗಳು.

ಮಗಳು ಕೇಳಿದಳು "Which party are we going tonight ಅಮ್ಮ?"

ಥಟ್ಟನೆ ನುಡಿದಳು ತಾಯಿ "not you. Its just me and Mad'. you will stay with ajji, ok? "

ಮಗುವಿಗೆ ಅಳುವೇ ಬಂದುಬಿಡ್ತು "why not me ಅಮ್ಮ?"

ಭದ್ರವಾಗಿ ಕಾರಿನ ಬಾಗಿಲು ಜಡಿದ ತಾಯಿ ನುಡಿದಳು "ಅಲ್ಲಿ ಬಂದು ನೀನು ಎಲ್ಲರ ಮುಂದೆ ಕನ್ನಡದಲ್ಲಿ ಮಾತನಾಡಿ ಬಿಡ್ತೀಯ. I dont feel good. Fine, Did you finish your homework? How about your test scores? Did you score more than Mark? "

ಮಗಳು ನುಡಿದಳು "ಯಸ್ ಅಮ್ಮ. you know what ಅಮ್ಮ, ಇವತ್ತು ನಮ್ ಕ್ಲಾಸ್’ಗೆ ಹೊಸಾ "Language Teacher" ಬಂದ್ರು"

ತಾಯಿ: "ಗುಡ್. Spanish or French? "

ಮಗಳು: "its ಕನ್ನಡ ಟೀಚರ್ ಅಮ್ಮ. ಏನೇನೋ ಕಾಂಪ್ಲಿಕೇಟೆಡ್ ಆಗಿ ಟಾಕ್ ಮಾಡಿದ್ರು. ಅಜ್ಜಿ ಟಾಕ್ ಮಾಡ್ತಾರಲ್ಲ ಹಾಗೆ."

ತಾಯಿ: "Never mind. If the teacher has given any homework, ask Ajji ok?"


ಸನ್ನಿವೇಶ ೨:

ಮನೆ ಮುಂದೆ ಕಾರು ನಿಂತಿತು. ತಾಯಿ ಸೀದ ಒಳನೆಡೆದು, ಸಿದ್ದಳಾಗಲು ಮಹಡಿ ಏರುತ್ತ "Mad, are you ready? "

ಒಳಗಿನಿಂದ ಅಜ್ಜಿ ಹೊರಬಂದು "ನನ್ನ ಅನ್ನಪೂರ್ಣ ಮರಿ ಬಂತಾ ?"

ತಾಯಿ ಸಿಡುಕುತ್ತ ನುಡಿದಳು "Mad, your mom is making me mad ... ಆನ್ನಾ ಅಂತ ಕರೀರಿ ಅಂತ ಎಷ್ಟು ಹೇಳಿದರೂ ಇವರಿಗೆ ಅರ್ಥವೇ ಆಗೋಲ್ಲ."

ಸ್ವಲ್ಪ ಹೊತ್ತಾದ ಮೇಲೆ ಮ್ಯಾಡ್ ಅರ್ಥಾತ್ ಮಾಧವಮೂರ್ತಿ ಜೊತೆ ಆ ತಾಯಿ "ಬಾಯ್" ಎನ್ನುತ್ತ ಹೊರಗೆ ಹೊರಟಳು.

ಆನ್ನಾ ಅಲಿಯಾಸ್ ಅನ್ನಪೂರ್ಣ ಕೇಳಿದಳು "ಅಜ್ಜಿ, Is Mark coming here now? "

ಅಜ್ಜಿ ಅಂದರು "ಮಾರ್ಕ್ ಅನ್ನಬೇಡವೇ ಪುಟ್ಟಮ್ಮ. ಬಾಯ್ತುಂಬ ಮಾರ್ಕಂಡೇಯ ಅನ್ನು"

ಅನ್ನಪೂರ್ಣ ಅಜ್ಜಿಗೆ ಹೋಮ್ ವರ್ಕ್ ತೋರಿಸುತ್ತ ಹೇಳಿದಳು "ಅಜ್ಜಿ, ಈ topic ’ಗೆ one paragraph writeup ಬರ್ಕೊಂಡ್ ಬನ್ನಿ ಅಂದ್ರು ಟೀಚರ್. can you help me ಅಜ್ಜಿ"

ಟಾಪಿಕ್ ಏನೆಂದು ಓದಿದ ಅಜ್ಜಿಯ ಕಣ್ಣಾಲಿಗಳಲ್ಲಿ ನೀರು ತುಂಬಿತು .....

----

ಸನ್ನಿವೇಶಗಳನ್ನು ಮನದಲ್ಲಿ ಊಹಿಸಿಕೊಂಡಿರಾ?

ಈಗ ಊಹಿಸಿ: ಅಜ್ಜಿಯ ಕಣ್ಣಲ್ಲಿ ನೀರು ತರಿಸಿದ ಆ ಪ್ರಬಂಧದ ಶೀರ್ಷಿಕೆ ಏನೆಂದು ......

ಅನಸೂಯಾಬಾಯಿ ಮನೆಗೆ ಬಿಗ್ ಸ್ಕ್ರೀನ್ ಬಂತು !

ಅನಸೂಯಾಬಾಯಿ ಮನೆಗೆ ಬಿಗ್ ಸ್ಕ್ರೀನ್ ಬಂತು !

ಶುದ್ದ ಸೋಮವಾರ, ಅಮಾವಾಸ್ಯೆಯ ಸಂಜೆ. ಬಸ್ಸಿಳಿದು, ಬಸವಳಿದು ಬರುತ್ತ, ಬಿಸಿ ಬಿಸಿ ಕಾಫೀ ಹೀರುವ ಫ್ರೋಗ್ರಂ ಹಾಕಿಕೊಂಡು ನಮ್ಮ ಬೀದಿಗೆ ತಿರುಗಿ ಬರುತ್ತಿದ್ದಂತೆಯೇ ನನಗೆ, ಅರ್ಥಾತ್, ರಾಮಣ್ಣಿಯ ಕಣ್ಣಿಗೆ ಬಿದ್ದ ದೃಶ್ಯ .. ರಮಣಮೂರ್ತಿಗಳ ಮನೆ ಮುಂದೆ ಹಲವು ಜನ ಸೇರಿದ್ದರು !

ಬೆಳಿಗ್ಗೆ ಚೆನ್ನಾಗಿದ್ದರು ... ಪಾಪ ... ಒಂದೇ ಏಟಿಗೆ ಒಂದು ತಟ್ಟೆ ಉಪ್ಪಿಟ್ಟು ತಿನ್ನುತ್ತಿದ್ದರು ! ದಿನವೂ ಸಂಜೆ ಬಿಟ್ಟಿ ಕಾಫಿಗೆ ನಮ್ಮ ಮನೆಗೇ ಬರುತ್ತಿದ್ದರು ... ಇನ್ನು ಮುಂದೆ ಯಾರು ಬರ್ತಾರೆ ಅಂತ ಜೋರಾಗಿ ಹೇಳಿದರೆ, ಹತ್ತು ಜನ ಕ್ಯೂ ನಿಲ್ತಾರೆ !! ಪಾಪ, ಒಬ್ಬರ ತಂಟೆಗೆ ಹೋಗದೇ ಇರುತ್ತಿರಲಿಲ್ಲ, ಒಬ್ಬರಿಗೆ ಕೈ ಎತ್ತಿ ಏನೂ ಕೊಟ್ಟವರಲ್ಲ ... ದಿವ್ಯಾತ್ಮ! ಪಾಪ, ಬಹಳ ದಿನಗಳಿಂದ ಅವರು ಹೋಗುತ್ತಾರೆ ಎಂದುಕೊಂಡರೂ, ಈಗ ಇದ್ದಕ್ಕಿದ್ದಂತೆ ಹೋಗಿದ್ದು ತರವಲ್ಲ. ಒಂದು ಮಾತು ನನಗೆ ಹೇಳಿ ಹೋಗಬಹುದಿತ್ತು ! ತುಂಬಲಾರದ ನಷ್ಟ ... ಅವರ ಕುರ್ಚಿಗೆ ... ಅವರು ಹೋದ ಮೇಲೆ ಆ ಕುರ್ಚಿ ಹೋಗೋದು ತಿಪ್ಪೆಗೆ ..

ಬಸ್ಸಿಳಿದು ಬಂದಾಗ ಇದ್ದ ಕೆಟ್ಟ ಮುಖವನ್ನು ಇನ್ನೂ ಸ್ವಲ್ಪ ಕಿವುಚಿದೆ ... ನಾನು ಸಮಾಜಕ್ಕೆ ಹೆದರೋ ಪ್ರಾಣಿ ಕಣ್ರೀ!

ಮನೆಯ ಬಳಿ ಸಾಗುತ್ತಿದ್ದಂತೆಯೇ ... ಅಯ್ಯೋ? ಇದೇನಿದು. ಕುರ್ಚಿ ಭರ್ತಿ ಕೂತಿದ್ದಾರೆ ರಮಣಮೂರ್ತಿಗಳು. ಮತ್ತೆ ಹೋಗಿದ್ದು? ಇಲ್ಲ, ಇಲ್ಲ, ಖಂಡಿತ ಅನಸೂಯಾಬಾಯಿಯವರಲ್ಲ! ಯಾಕೇ ಅಂದರೆ ಅವರ ಸ್ವರ ಬೀದಿ ಕೊನೆಗೇ ಕೇಳಿಸಿತು!!

ವಿಷಯ ಏನಪ್ಪಾ ಅಂದರೆ ... ರಮಣಮೂರ್ತಿಗಳ ಮನೆಗೆ ಬಿಗ್ ಸ್ಕ್ರೀನ್ ಟಿ.ವಿ ಬಂದಿತ್ತು. ನಾಳೆ ಶುಕ್ಲ ಪಕ್ಷದ ಪಾಡ್ಯದ ದಿನ ಬಂದು ಇನ್ಸ್ಟಾಲ್ ಮಾಡು ಅಂದರೆ, ತಾನು ರಜೆ ಹಾಕಿದ್ದೀನಿ ಎಂದು ಇಂದೇ ಇನ್ಸ್ಟಾಲ್ ಮಾಡಿ ಹೋಗಿದ್ದಾನೆ ಎಂದು ಅಲವತ್ತುಕೊಳ್ಳುತ್ತಿದ್ದರು ... ದಿನ ಶುದ್ದಿ, ವಾರ ಶುದ್ದಿ ಏನೂ ಗೊತ್ತಾಗೊಲ್ಲ ಜನಕ್ಕೆ ಎಂದು ಬೈದು ಕೊಳ್ಳುತ್ತಿದ್ದರು. ಇಷ್ಟು ಜನ ತಮ್ಮ ಟಿ.ವಿ ನೋಡಲು ಬಂದಿದ್ದಾರೆ ಎಂಬೋ ಹೆಮ್ಮೆ ಮನದಲ್ಲೇ ಸುತ್ತಾಡುತ್ತಿತ್ತು ಎಂಬುದು ಬೇರೆ ವಿಷಯ.

ಥೆಳ್ಳಗಿರೋ ಸ್ಕ್ರೀನ್ ನೋಡ್ರೀ... ಒಳ್ಳೇ ಕರೀನಾ ಕಪೂರ್ ಇದ್ದ ಹಾಗೆ ಇದೇ ಅಂತ ಯಾರೋ ಉಸುರಿದರು ! ದೃಷ್ಟಿ ನೀವಾಳಿಸಿ ತೆಂಗಿನಕಾಯಿ ಒಡೆದು ಬಿಡಿ ಅಂತ ಲೈಟಾಗಿ ಉಪದೇಶ ಕೊಟ್ಟರು ಇನ್ಯಾರೋ .. ದೃಷ್ಟಿ ತೆಗೀಬೇಕಿದ್ದುದು ಸ್ಕ್ರೀನ್’ಗೋ ಕರೀನಾ’ಗೋ ಗೊತ್ತಾಗಲಿಲ್ಲ !! ಹೇಳಿದವರ ಪತ್ನಿ ಅವರ ಪಕ್ಕದಲ್ಲೇ ಇದ್ದುದರಿಂದ, ಅಷ್ಟು ಧೈರ್ಯ ಮಾಡಿರಲಾರರು ಎಂದುಕೊಂಡು ನಾನು "ಪಾಪ, ತೆಂಗಿನಕಾಯಿ ಒಡೀಬೇಕಿರೋದು ಟಿ.ವಿ ಸ್ಕ್ರೀನ್ ಮೇಲೇ?" ಎಂದು ತಮ್ಮ ಅದ್ಬುತ ಜ್ಞ್ನಾನ ಪ್ರದರ್ಶನ ಮಾಡಿಯೇಬಿಟ್ಟೇ !

ನನ್ನ ಸೂಪರ್ ಡೂಪರ್ ಎಂಟ್ರಿ ತಿಳಿದು, ವಿಶಾಲೂ ಜನರ ಮಧ್ಯದಿಂದ ಹೊರಬಂದು, ನನ್ನನ್ನು ಕರೆದುಕೊಂಡು (ಎಳೆದುಕೊಂಡು) ಮನೆಗೆ ಹೊರಟಳು. ನಾನಾಡಿದ ಮಾತಿಗೆ ಸಿಟ್ಟೋ ಅಥವಾ ನಮ್ಮ ಮನೆಗೆ ದೊಡ್ಡ ಟಿ.ವಿ ತರಲಿಲ್ಲ ಎಂದು ಕೋಪವೋ ನನಗೆ ಗೊತ್ತಿಲ್ಲ.

ಇರಲಿ, ಈಗ ವಿಷಯ ರಮಣಮೂರ್ತಿಗಳದು. ಟಿ.ವಿ ಕೊಂಡಿದ್ದು ಏನು ದೊಡ್ಡ ವಿಷಯ ಅಂದಿರಾ? ಇಲ್ಲಿ ಬಿಗ್ ಸ್ಕ್ರೀನ್ ಬಂದದ್ದಲ್ಲ ವಿಷಯ... ರಮಣಮೂರ್ತಿಗಳ ಮನೆಗೆ ಟಿ.ವಿ ಬಂದಿದ್ದು.

ಒಂಬತ್ತನೇ ಏಷ್ಯನ್ ಗೇಮ್ಸ್ ಸಮಯದಲ್ಲಿ ’ಅಪ್ಪು’ವನ್ನು ನೋಡಲು ತಂದಿದ್ದ ’ಕಪ್ಪು-ಬಿಳುಪು’ ಟಿ.ವಿ’ಯ ನಂತರ, ಐಶ್ವರ್ಯ ಮಿಸ್.ವರ್ಲ್ಡ್ ಆದಾಗಲೇ ಕಲರ್ ಟಿ.ವಿ ತಂದಿದ್ದು !

ಅರ್ಥವಾಗುತ್ತೋ ಇಲ್ವೋ ಗೊತ್ತಿಲ್ಲ ... ಮೊನ್ನೆ ವಿಶ್ವ ಕಪ್ ಸಾಕರ್ ಪಂದ್ಯಗಳು ಆರಂಭಗೊಂಡಂತೆ ಅನೇಕರು ದೊಡ್ಡ ಟಿ.ವಿ ಖರೀದಿಸಿದರು ಅಂತ ಅನಸೂಯಾಬಾಯಿ ಕೂಡ ಒಂದು ದೊಡ್ಡ ಎಲೆಕ್ಟ್ರಾನಿಕ್ ಅಂಗಡಿಗೆ ದಾಳಿ ಇಟ್ಟು, ಬಿಗ್ ಸ್ಕೀನ್ ಟಿ.ವಿ. ಖರೀದಿ ಮಾಡಿಯೇಬಿಟ್ಟರು.

ತಮ್ಮ ಸೇವಿಂಗ್ಸ್ ಹಣ ’ಶೇವಿಂಗ್’ ಆಗಿದ್ದ ಕಂಡು ರಮಣಮೂರ್ತಿಗಳು ಮೂರು ದಿನ ಊಟ ಬಿಡಬೇಕು ಅಂದುಕೊಂಡರು, ಆದರೆ ಬಿಡಲಿಲ್ಲ. ಮೊದಲೇ ಸಕ್ಕರೆ ಖಾಯಿಲೆ .... ಒಂದು ಹೊತ್ತು ಊಟ ಬಿಟ್ಟರೇನೇ ಮೈ-ಕೈ ಎಲ್ಲ ಕುಣಿಸುತ್ತ ಮೈಕೇಲ್ ಜ್ಯಾಕ್ಸನ್ ತರಹ ಆಡ್ತಾರೆ. ಒಮ್ಮೆ ಹೀಗೇ, ಈ ರೀತಿಯ ವೇಷದಲ್ಲಿ ನೋಡಿದವರಾರೋ ಉಪಚಾರ ಮಾಡೋದು ಬಿಟ್ಟು ’ವಾವ್! ಥೇಟ್ ಮೈಕೇಲ್ ಜ್ಯಾಕ್ಸನ್ ತರಹ ಕಾಣ್ತೀರ್ರೀ ...’ ಅಂದಿದ್ರು.

ಇದೊಂದು ಬಿಟ್ರೆ, ಇವರಿಬ್ಬರಿಗೂ ಒಂದೇ ಸಾಮ್ಯತೆ ಅಂದರೆ ಮೊದಲೆಲ್ಲ ಕಪ್ಪಗಿದ್ದ ರಮಣಮೂರ್ತಿಗಳು ವಯಸ್ಸಾದ ಮೇಲೆ ರಕ್ತ ಕಡಿಮೆಯಾಗಿ ಬಿಳಿಚಿಕೊಂಡಿದ್ದರು. ಈ ಬಿಳಿಪು ಕಾಲೇಜಿನ ದಿನಗಳಲ್ಲಿ ಇದ್ದಿದ್ದರೆ, ಎಷ್ಟು ಜನರು ತಮ್ಮ ಹಿಂದೆ ಬೀಳುತ್ತಿದ್ದರೋ ಏನೋ ಎಂದು ಸಾವಿರ ಸಾರಿ ಅಂದುಕೊಂಡಿದ್ದಾರೆ.

ಕಾಲೇಜೂ ಮುಗೀತು, ಸರಕಾರಿ ಕೆಲಸವೂ ಸಿಕ್ತು. ಒಂದು ’ಲೇಡಿ’ ಬಿಡಿ ’ಲೇಡಿ ಸೊಳ್ಳೇ’ನೂ ಇವರತ್ತ ನೋಡಲಿಲ್ಲ ಅಂತ ನೀವು ಅಂದುಕೊಂಡಿದ್ದರೆ, ಅದು ತಪ್ಪು. ಪ್ಯಾಂಟ್ ಧರಿಸುವ ಕಾಲದಲ್ಲೂ, ಸಂಪ್ರದಾಯದ ಹೆಸರಿನಲ್ಲಿ, ಗರಿಗರಿಯಾಗಿ ಕಚ್ಚೆ ಪಂಚೆ ಉಟ್ಟು, ಕೆಲಸಕ್ಕೆ ಹೋಗುತ್ತಿದ್ದ ಇವರನ್ನು, ಮೂಲೆ ಮನೆ ’ಜರಿ ಲಂಗದ ಜಾಣೆ’ ಅನಸೂಯ ಮಾತ್ರ ಮೆಚ್ಚಿದ್ದಳು. ಇವರನ್ನಲ್ಲ, ಇವರು ಪಂಚೆಯ ಮೇಲಿನ ಜರಿಯನ್ನ. ಇವರನ್ನು ಮದುವೆಯಾದರೆ ಜರಿ’ಗೆ ’ವರಿ’ ಇಲ್ಲ ಅಂತ.

ಕಿಟಕಿ ಬಳಿ ನಿಂತು, ಮೈಮೇಲೆ ಅರಿವಿಲ್ಲದೆ, ಸಕ್ಕರೆ ಹಾಕದ ಕಾಫಿಯನ್ನೇ ಕುಡಿಯುತ್ತಿದ್ದರೂ, ರಮಣಮೂರ್ತಿಗಳ ಪಂಚೆಯ ಜರಿಯನ್ನು, ಮುಖ ಅರಳಿಸಿಕೊಂಡು ನೋಡುತ್ತಿದ್ದುದನ್ನು ಕಂಡು, ಅನಸೂಯಳ ತಾಯಿ ಸುಕನ್ಯಾಬಾಯಿ, ಅಪಾರ್ಥ ಮಾಡಿಕೊಂಡು, ಅದೇ ರಾತ್ರಿ, ಊಟವಾದ ಮೇಲೆ ವೀಳ್ಯ ಜಗಿಯುತ್ತ ತಮ್ಮ ಯಜಮಾನರಾದ ಗರುಡಮೂರ್ತಿಗಳಿಗೆ ’ನಿಮ್ಮ ಮಗಳಿಗೆ ರಮಣನ ಮೇಲೆ ಮನಸ್ಸಾಗಿದೆ’ ಎಂಬ ವಿಷಯವನ್ನು ಅರುಹಿದರು.

ಹಳೇ ಕಾಲದಲ್ಲೂ ಈ ರೀತಿ ಮಾತುಗಳು ಇತ್ತೇ ಅಂತೀರಾ? ಸುಕನ್ಯಾಬಾಯಿ ತಕ್ಕ ಮಟ್ಟಿಗೆ ದೊಡ್ಡ ಮನೆತನದವರು. ಗರುಡಮೂರ್ತಿಗಳೂ ಸ್ವಲ್ಪ ದೊಡ್ಡ ಪೋಸ್ಟ್ ಎನ್ನಬಹುದಾದ ಕೆಲಸದಲ್ಲೇ ಇದ್ದುದರಿಂದ ಇಬ್ಬರದೂ ಒಂದು ತೂಕ. ಇಬ್ಬರೂ ದೈಹಿಕವಾಗಿಯೂ ದೊಡ್ಡ ತೂಕದಲ್ಲೇ ಇದ್ದಾರೆ ಬಿಡಿ. ಇವರದು ಒಂದು ಲೆವಲ್ ಆದರೆ ಮಗಳದು ಒಂದೇ ಲೆವಲ್. ಏಳನೇ ತರಗತಿಯನ್ನು ಐದು ವರ್ಷವಾದರೂ ಮುಗಿಸದೇ ಇದ್ದದ್ದು ನೋಡಿ ಮೇಷ್ಟ್ರು ’ಪರವಾಗಿಲ್ಲ ಬಿಡಿ ಪಾಪ’ ಅಂತ ಹೇಳಿದರು. ಆ ಸಂದರ್ಭದಲ್ಲಿ ನೆಡೆದಿದ್ದೇ ಈ ಘಟನೆ.

ಎದೆ ತಟ್ಟಿ ಹೇಳಿಕೊಳ್ಳುವ ವಿಷಯವಾದರೆ ’ನನ್ನ ಮಗಳು’ ಎನ್ನುವುದು, ಎದೆ ಬಡ್ಕೊಳ್ಳೋ ವಿಷಯವಾದರೆ ’ನಿಮ್ಮ ಮಗಳು’ ಎಂದು ಸಂಭೋಧಿಸುವ ಪತ್ನಿಯ ಪರಿ ಗರುಡಮೂರ್ತಿಗಳಿಗೆ ಹೊಸದೇನಲ್ಲ !

ಅಲ್ಲದೇ, ಸೀರಿಯಸ್ ವಿಷಯವನ್ನು ಸುಕನ್ಯಾಬಾಯಿಯವರು ಎಲೆ-ಅಡಿಕೆ ಹಾಕಿಕೊಂಡಾಗಲೇ ಹೇಳುವುದು. ಗರುಡಮೂರ್ತಿಗಳಿಗೂ ಈ ವಿಷಯ ಗೊತ್ತಿರುವುದರಿಂದ ಹೆಚ್ಚು ವಿರೋಧವಿಲ್ಲದೆ ಪತ್ನಿ ಹೇಳಿದ್ದಕ್ಕೆಲ್ಲ ’ಸರಿ’ ಎಂದುಬಿಡುತ್ತಾರೆ. ಇವರ ಹೆಸರು ಗರುಡಮೂರ್ತಿ ಆದರೂ ಇನ್ನೊಬ್ಬರ ಮನೆಯ ವಿಷಯಕ್ಕೆ ’ಮೂಗು’ ತೂರಿಸುತ್ತಿರಲಿಲ್ಲ. ಅದನ್ನು ಪತ್ನಿಗೇ ಬಿಟ್ಟಿದ್ದರು.

ಹಾಗಾಗಿ ಸುಕನ್ಯಾಬಾಯಿ ಹಾಗೂ ರಮಣನ ಮನೆಯವರಿಗೂ ಮಾತುಕಥೆಗಳು ನೆಡೆಯಿತು. ಮಗಳ ಮದುವೆ ಮಾಡಿ ಮುಗಿಸಿದರೆ, ಇದ್ದ ಒಂದು ಜವಾಬ್ದಾರೀನೂ ಮುಗಿಯುತ್ತೆ. ಸರಕಾರೀ ಕೆಲಸದ ಹುಡುಗ ಬೇರೆ. ಹುಡುಗ ಕಪ್ಪು. ಅದಕ್ಕೇನು. ಹಸೆಮಣೆ ಏರೋ ಮುನ್ನ ಒಂದು ಸಾರಿ ಸೋಪ್ ಹಾಕಿ ಮುಖ ತೊಳೆದರೆ ಸಾಕು, ಎಂದುಕೊಂಡು ’ರಮಣನು ಪಂಚೆಯುಟ್ಟು ತಮ್ಮ ಮನೆ ಮುಂದೆ ದಿನವೂ ಸಾಗುತ್ತಿದ್ದುದರಿಂದಲೇ ಈ ರೀತಿ ಎಡವಟ್ಟಾಯಿತು’ ಎಂದು ಸಾಧಿಸಿದರು ಸುಕನ್ಯಾಬಾಯಿ.

ಉಟ್ಟ ಪಂಚೆ ಬಿಸುಟು, ಪಂಚೆಯ ಪಂಚಾಯಿತಿಯೇ ಬೇಡ, ಇನ್ನು ಮುಂದೆ ಪ್ಯಾಂಟ್ ಧರಿಸುತ್ತೇನೆ ಎಂದು ಹೇಳೋಣವೆಂದರೆ, ಸಂಪ್ರದಾಯವೆಂಬ ಭೂತ. ಪಂಚೆ ತೊರೆದರೆ ಪಂಚಭೂತಗಳಲ್ಲಿ ಲೀನವಾದರೂ ದೋಷ ಹೋಗೋಲ್ಲ ಎಂದು ಯಾರೋ ಪುಸ್ ಎಂದು ಉಸುರಿದ್ದರು.

ತಪ್ಪಿಸಿಕೊಳ್ಳಲು ಬೇರೆ ದಾರಿ ಇಲ್ಲ ! ಜೊತೆಗೆ ಈ ಸಂಬಂಧ ತಪ್ಪಿದರೆ ಬೇರೆ ಸಂಬಂಧ ರಮಣನಿಗೆ ಕೂಡಿ ಬರುತ್ತೋ ಇಲ್ಲವೋ ಎಂದು ಹೆದರಿ, ಮದುವೆಗೆ ಅಸ್ತು ಎಂದುಬಿಟ್ಟರು ಅವರಪ್ಪ-ಅಮ್ಮ ... ಧಾಮ್-ಧೂಮ್ ಎಂದು ಮದುವೆ ನೆಡೆದೇ ಹೋಯಿತು.

ಮದುವೆಯಾದ ಮೇಲೆ ’ಬಾಯಿ’ ಹೆಚ್ಚಾದ್ದರಿಂದ ’ಅನಸೂಯ’ ಎಂಬ ಹುಡುಗಿ ’ಅನಸೂಯಾಬಾಯಿ’ ಆದರೆ, ಈ ಬಾಯಿ ಹೇಳಿದ್ದನ್ನೆಲ್ಲ ಶಿಲೆಯಂತೆ ಕುಳಿತು ಕೇಳುತ್ತಿದ್ದರಿಂದ ’ರಮಣ’ ಅವರು ’ರಮಣಮೂರ್ತಿ’ ಎನಿಸಿಕೊಂಡರು.

ಇದಿಷ್ಟು ಫ್ಲಾಶ್-ಬ್ಯಾಕ್.

ಈಗ ಟಿ.ವಿ ವಿಷಯಕ್ಕೆ ಬರೋಣ. ಆಯ್ತು ಟಿ.ವಿ ಮನೆಗೆ ಬಂತು. ಊಟ ಬಿಡಲಿಕ್ಕೆ ಆಗದೆ ಇದ್ದರೆ ಏನು, ನೋಟ ಬಿಡಬಹುದಲ್ಲ ಎಂದುಕೊಂಡು, ಮನೆಯಲ್ಲಿ ಟಿ.ವಿ ಹಾಕಿದಾಗಲೆಲ್ಲ ಹೊರಗೆ ಬಂದು ತಮ್ಮ ’ಧರಣಿ ಕುರ್ಚಿ’ಯಲ್ಲಿ ಕೂಡುತ್ತಿದ್ದರು. ಉಪವಾಸ ಸತ್ಯಾಗ್ರಹ ಎಂದು ವಿಧಾನಸೌಧದ ಪಕ್ಕದಲ್ಲಿ ಸರದಿ ಕುಳಿತು, ಮಧ್ಯಾನ್ನದ ವೇಲೆ ಸರದಿ ಪ್ರಕಾರ ಊಟ ಮಾಡಿ ಬರುತ್ತಾರಲ್ಲ, ಹಾಗಲ್ಲ ಇದು! ಧರಣಿ ಅಂದರೆ ಧರಣಿ ಅಷ್ಟೇ! ಟಿವಿ ಆರಿಸೋವರೆಗೂ ಕುರ್ಚಿ ಬಿಟ್ಟು ಕದಲುತ್ತಿರಲಿಲ್ಲ. ಮನೆಯ ಹಿಂದಿನ ಬಚ್ಚಲಿಗೆ, ಓಣಿ ಕಡೆಯಿಂದಲೂ ಹೋಗಬಹುದು!

ಅನಸೂಯಾಬಾಯಿ’ಯವರಂತೂ ಬಿಟ್ಟ ಬಾಯಿ ಬಿಟ್ಟುಕೊಂಡೇ ಕೂತು ಧಾರಾವಾಹಿಗಳನ್ನು ನೋಡುತ್ತಿದ್ದರು. ಕ್ಯಾಮೆರಾ ಕ್ಲೋಸ್-ಅಪ್’ನಲ್ಲಿ ತೆಗೆದುಕೊಂಡು ಹೋಗುತ್ತಿದ್ದಂತೆ, ನಾಯಕಿಯ ಕಣ್ಣಲ್ಲಿ ಹನಿ ಮೂಡಿ ನುಣುಪಾದ ಕೆನ್ನೆಯಂ ಜಾರಿ ಉದುರುವಾಗ, ಇವರು ನೆಲ ಒರೆಸುತ್ತಿದ್ದರು !!

ರಮಣಮೂರ್ತಿಗಳು ಟಿ.ವಿ ನೋಡದಿದ್ದರೆ ಏನಂತೆ ... ನಾಲ್ಕು ಬೀದಿಗೆ ಕೇಳೊ ಹಾಗೆ ಜೋರಾಗಿ ಹಾಕಿರುವುದರಿಂದ ಕಿವಿಗಂತೂ ಡೈಲಾಗುಗಳು ಕಿವಿಗೆ ಬಿದ್ದೇ ಬೀಳುತ್ತೆ. ಅಲ್ಲದೇ, ರಾತ್ರಿ ವೇಳೆ ಬರುವ ಸೀರಿಯಲ್ ಸಮಯದಲ್ಲಿ ಹೊರಗೆ ಛಳಿಯಲ್ಲಿ ಕೂಡಲು ಸಾಧ್ಯವೇ?

ಹಂಗೂ, ಹಿಂಗೂ ಎರಡು ಮೂರು ದಿನ ಟಿ.ವಿ ದಿಕ್ಕಿನಲ್ಲಿ ತಲೆಯಿಟ್ಟೂ ಮಲಗದ ರಮಣಮೂರ್ತಿಗಳು, ಒಮ್ಮೆ ಹೀಗೆ ಮರೆತು ಹಾದಿ ತಪ್ಪಿ, ಹಿಂದಿನ ಬಾಗಿಲಿನಿಂದ ಹಾದು, ಮನೆ ಒಳಗಿನಿಂದ, ಮುಂಬಾಗಿಲ ಬಳಿಯ, ತಮ್ಮ ’ಧರಣಿ ಕುರ್ಚಿ’ಯ ಬಳಿ ಸಾಗುತ್ತಿರಬೇಕಾದರೇ ........

ಮೊಮ್ಮಗ ಚಾನಲ್ ಬದಲಿಸಿದ್ದನೋ ಏನೋ? ಕಣ್ಣಿಗೆ ಬಿದ್ದೇ ಬಿಟ್ಟಿತು ಕಣ್ರೀ ದೃಶ್ಯ ! ಯಾರೋ ಏನೋ .... ಹೆಸರು ಗೊತ್ತಿಲ್ಲ ... ಕುಲ ಗೊತ್ತಿಲ್ಲ ... ದೇಶ ಮೊದಲೇ ಗೊತ್ತಿಲ್ಲ ... ಒಟ್ಟಿನಲ್ಲಿ ರಪ ರಪ ಅಂತ ಟೆನ್ನಿಸ್ ರ್‍ಯಾಕೆಟ್ ಹಿಡಿದು ಪಾಪ ಹಳದೀ ಚೆಂಡನ್ನು ಹಿಗ್ಗಮುಗ್ಗ ಬಡಿದಿದ್ದೇ ಬಡಿದಿದ್ದು .... ಕೆಲವು ವರ್ಷಗಳ ಮುಂಚೆ, ಇನ್ನೂ ತಮ್ಮ ಅಕೌಂಟ್’ಗೆ ಜಮಾ ಆಗದ ತಮ್ಮ ಪಿ.ಎಫ್ ಹಣದ ಬಗ್ಗೆ ವಿಚಾರಿಸಲು ಹೋದ ಇವರಿಗೆ ಇದೇ ಅನುಭವಾಗಿತ್ತು. ಈ ಕಡೆಯಿಂದ ಆಕಡೆ, ಆ ಕಡೆಯಿಂದ ಈಕಡೆ ಎಂದು ಜನ ಅಡ್ಡಾಡಿಸಿದ್ದೇ ಅಡ್ಡಾಡಿಸಿದ್ದು. ಬೇಸರದಿಂದ ಚಾನಲ್ ಬದಲಿಸೋ ಮುನ್ನ ’ಆದರೂ ಏನು ಚೆನ್ನಾಗಿ ಕಾಣ್ತಾರೆ ಈ ಹುಡುಗೀರು’ ಅಂದೇ ಬಿಟ್ಟರು ...

ಧಾರಾವಾಹಿ ಮೂಡಿ ಬಂತು.

ಯಥಾಪ್ರಕಾರ, ಅತ್ತೆ-ಸೊಸೆ ಸ್ಕ್ರೀನಿನ ಮೇಲೆ. ಇಪ್ಪತ್ತು ಸಾವಿರ ಬೆಲೆ ಬಾಳುವ ಸೀರೆ ಉಟ್ಟ ಬಡತನದ ಮನೆಯ ಸೊಸೆ ಕಣ್ಣೀರು ಒರೆಸಿಕೊಳ್ಳುತ್ತಿದ್ದಳು. ಡೈನಿಂಗ್ ಟೇಬಲ್’ನ ಕುರ್ಚಿಯ ಮೇಲೆ ಕುಳಿತ ನೂರೈವತ್ತು ಕೇಜಿ ತೂಕದ ಅತ್ತೆ ಕಾಯುತ್ತಿದ್ದರು. ಅಡುಗೆ ಮನೆಯಿಂದ ಹೊರಬಂದ ಸೊಸೆ ಕೇಳಿದಳು "ಹತ್ತೇ!, ಹನ್ನ ಆಕ್ಲಾ?" ಅಂತ. ಮರು ಕ್ಷಣದಲ್ಲೇ ಢಮ ಢಮ ಎಂಬ ಮ್ಯೂಸಿಕ್. ರಮಣಮೂರ್ತಿಗಳಿಗೆ ಅರ್ಥವೇ ಆಗಲಿಲ್ಲ. ಅವಳು ಏನಂದಳು? ಈ ಮ್ಯೂಸಿಕ್ ಯಾಕೆ? ತಲೆ ಕೆರೆದುಕೊಳ್ಳೋಣ ಎಂದರೆ ಇನ್ನುಳಿದಿರೋದು ಮೂರೇ ಕೂದಲು. ಸುಮ್ಮನಾದರು. ಅನಸೂಯಾಬಾಯಿಯವರಂತೂ ಸದಾ ಬಿಟ್ಟಿರೋ ಬಾಯಿಯನ್ನು ಇನ್ನೂ ಹಿಗ್ಗಲಿಸಿಕೊಂಡು ಧಾರಾವಾಹಿ ನೋಡುತ್ತಿದ್ದರು.

ಕರ್ನಾಟಕದಲ್ಲೇ ಕೊಲೆಯಾಗುತ್ತಿರುವ ಕನ್ನಡದ ಪರಿಸ್ಥಿತಿಯನ್ನು ಕಂಡು ಮಮ್ಮಲ ಮರುಗಿದರೂ ಮನ, ಆ ಅತ್ತೆ ಪಾತ್ರಧಾರಿ ಉಟ್ಟ ಸೀರೆಯ ಮೇಲಿನ ಜರಿ’ಯನ್ನು ಕಂಡು ’ಈ ಜರಿಯಿಂದಲೇ ನಾನು ವರನಾಗಿದ್ದು ವರಿ ಹೆಚ್ಚಾಗಿದ್ದು’ ಎನಿಸದೇ ಇರಲಿಲ್ಲ !

ನಂತರ ಮೂಡಿ ಬಂತು ಜಾಹೀರಾತುಗಳ ಸರಮಾಲೆ. ಇಷ್ಟು ದಿನ ಚಿಕ್ಕದಾದ ಟಿ-ವಿ’ಯಲ್ಲಿ ನೋಡುತ್ತಿದ್ದು ಈಗ ಇವರನ್ನೆಲ್ಲ ದೊಡ್ಡದ್ದಾಗಿ ನೋಡಿ ’ಎಷ್ಟು ಚೆನ್ನಾಗಿದ್ದರೇ ಇವರೆಲ್ಲಾ?’ ಅಂದರು. ಅನಸೂಯಾಬಾಯಿ ತಕ್ಷಣವೇ ’ಬರೀ ಮುಖಕ್ಕೆ ಬಣ್ಣ ಹೊಡೆದುಕೊಂಡಿದ್ದಾರೆ. ಆ ತರಹ ಬಣ್ಣ ಹೊಡೆದುಕೊಂಡರೆ ನಾ ಹಾಗೇ ಕಾಣ್ತೀನಿ’ ಅಂದರು. ಮೂರ್ತಿಗಳು "ಚೆನ್ನಾಗಿ ಜೋಕ್ ಮಾಡ್ತೀಯ ಕಣೆ" ಅಂದರು. "ಏನಂದ್ರ್ರೀ" ಅನ್ನುತ್ತಿದ್ದ ಹಾಗೇ ಫೋನು ಟ್ರಿಣ್’ಗುಟ್ಟಿತು.

’ಯಾರು ಅಂತ ನೋಡಬಾರದೇ?’ ಇನ್ನೊಂದು ಮಾತಾಡದೆ ಕರೆ ಸ್ವೀಕರಿಸಿ ಪತ್ನಿಗೆ ಹೇಳಿದರು ’ಯಾರೋ ರಂಗಮ್ಮ ಅಂತೆ. ನಿನಗೇ ಫೋನು’ ಅಂತ ಕೊಟ್ಟರು.

ಅವರು ಫೋನಿನತ್ತ ಹೋದ ಕೂಡಲೇ, ಚಾನೆಲ್ ಬದಲಿಸಿ ಟೆನ್ನಿಸ್ ನೋಡುತ್ತಿದ್ದರು. ಇಪ್ಪತ್ತು ನಿಮಿಷ ಕಳೆದು, ಅವರು ಬರುವ ಸದ್ದಿಗೆ ಎಚ್ಚೆತ್ತು, ಚಾನೆಲ್ ಬದಲಿಸಿದರು. ’ಯಾವುದೋ ರಾಂಗ್ ನಂಬರ್ರೂ... ಸರಿಯಾಗಿ ವಿಚಾರಿಸಿ ಫೋನು ಕೊಡಬಾರದೇ?’ ಎಂದು ಮೂದಲಿಸುತ್ತ ಟಿ.ವಿ ಮುಂದೆ ಕೂತರು. ಅಲ್ರೀ! ರಾಂ ನಂಬರ್ ಅಂತ ತಿಳಿದಿದ್ದು ಇಪ್ಪತ್ತು ನಿಮಿಷಗಳಾದ ಮೇಲೇ?

ಮುಂದಿನ ಒಂದು ವಾರ, ನಾನು ಸಂಜೆ ಮನೆಗೆ ಬಂದೊಡನೆ, ನನ್ನೊಂದಿಗೆ ಕಾಫೀ ಹೀರುತ್ತ ತಮ್ಮ ಟಿ.ವಿ.ಯನ್ನು ಹೊಗಳಿದ್ದೂ ಹೊಗಳಿದ್ದೇ ! ನನ್ನಲ್ಲಿ ಕುತೂಹಲ, ಆಸೆ ಹೆಚ್ಚುತಿದ್ದಂತೇ, ಬೆಲೆ ನೋಡಿ ಬಾಯಿ ಮುಚ್ಚಿಕೊಳ್ಳುತ್ತಿದೆ.

ರಾಮಾಯಣ ಅಥವಾ ಮಹಾಭಾರತದ ಪುಸ್ತಕ ಕೈಯಲ್ಲಿ ಹಿಡಿದೂ, ಬೀದಿಯಲ್ಲಿ ಹೋಗಿ ಬರೋ ಜನರನ್ನೆಲ್ಲ ಮಾತನಾಡಿಸಿಕೊಂಡು ಕಾಲ ಕಳೆಯುತ್ತಿದ್ದ ರಮಣಮೂರ್ತಿಗಳು, ಈ ನಡುವೆ ಟಿ.ವಿ’ಗೆ ಅಂಟಿದ್ದು, ಸಾಮಾನ್ಯ ಜನಜೀವನದ ಮುಖ್ಯವಾದದ್ದೇನೋ ಕಳೆದುಕೊಂಡಿದ್ದೀವೇನೋ ಎನಿಸುತ್ತಿತ್ತು ಬೀದಿ ಜನರಿಗೆ.

ಧಾರಾವಾಹಿಗಳ ಪಾತ್ರಗಳ ಬಗ್ಗೆ ರಮಣಮೂರ್ತಿಗಳು ಮನೆಯಲ್ಲಿ ಪತ್ನಿಯೊಡನೆ discuss ಮಾಡುವಾಗ, ಇಷ್ಟೂ ವರ್ಷಗಳು ಒನ್-ವೇ ಟ್ರಾಫಿಕ್’ನಂತೆ ತಮ್ಮದೇ ಮಾತಿದ್ದ ಅನಸೂಯಾಬಾಯಿಗೂ ಏನೋ ಇರುಸು-ಮುರುಸಾಗುತ್ತಿತ್ತು.

ಅನಸೂಯಾಬಾಯಿಯವರು ಟಿ.ವಿ ಮಾರುತ್ತಾರಂತೆ. ಕೊಳ್ಳುವವರು ಯಾರಾದರೂ ಇದ್ದರೆ ತಿಳಿಸಿ !

ಕೊಕ್

ಒಮ್ಮೆಲೇ ಕಗ್ಗತ್ತಲ ರಾತ್ರಿಯಲ್ಲಿ ಕಣ್ಣು ಕೋರೈಸುವ ಬೆಳಕು ಮೂಡಿದ್ದನ್ನು ಕಂಡು, ಎಲ್ಲರೂ ಒಮ್ಮೆಲೆ ಭೀತರಾದರು!

ಆ ಪ್ರಕಾಶಕ್ಕೋ ಏನೋ ಗೊತಿಲ್ಲ, ಇನ್-ಫ್ರಾ-ರೆಡ್ ಕ್ಯಾಮೆರಾದ ಲೆನ್ಸ್ ಭಸ್ಮವಾಗಿತ್ತು ! ರೆಕಾರ್ಡಿಂಗ್ ಇಲ್ಲದಿದ್ದರೆ ತನ್ನ ಮಾತನ್ನು ಯಾರು ನಂಬುತ್ತಾರೆ? ತ್ರಿಕರ್ಣ ಮೂಕನಾಗಿದ್ದ !!

ಮೊದಲೇ ಭೀತನಾಗಿದ್ದ ರಾಮಚಂದ್ರ ... ಹೃದಯ ಇನ್ನೂ ನಿಂತಿರಲಿಲ್ಲ ಎಂಬುದು ಬಿಟ್ಟರೆ, ಜೀವಚ್ಚವವಾಗಿದ್ದ ! ಬೆಳಕು ಬಂದೆಡೆ ನೋಡಿದವನೇ, ಆ ಪ್ರಕಾಶದ ತೀವ್ರತೆ ತಡೆಯಲಾರದೆ ಕಣ್ಣುಗಳನ್ನು ಭದ್ರವಾಗಿ ಮುಚ್ಚಿದ್ದ !!

ಒಕ್ಕಣ್ಣ ಸರ್ಪಭೂಷಣ, ತಾನು ಇನ್ನೊಂದು ಕಣ್ಣು ಈಗ ತೆರೆದರೂ ತನ್ನಾಟ ಏನೂ ನೆಡೆಯದು ಎಂದು ಬಾಲ ಮುದುರಿದ್ದ !

ಇನ್ನುಳಿದವರು ಯಾರು ? ಭರಮಾಚಾರಿ ಮತ್ತು ......

ಭೀತನಾಗಿದ್ದರೂ ಮೆದುಳು ಕೆಲಸ ಮಾಡುತ್ತಿದ್ದುದು ಭರಮಾಚಾರಿ ಒಬ್ಬನಿಗೇ !

ದೀಪ ಆರಿದ್ದು ... ಗುರುಗಳು ಬೇಡವೆಂಬಂತೆ ಹಸ್ತ ತೋರಿದ್ದು ... ತಾನು ಮಂಡಲದಿಂದ ಎದ್ದು ಹೊರ ಬಂದಿದ್ದು ... ಗುರುಗಳನ್ನೇ ಮೀರಿಸಲು ಹೊರಟಿದ್ದು ... ಒಂದೇ ಎರಡೇ .. ಎಲ್ಲವೂ ಭೀಕರ ತಪುಗಳು .. ಒಬ್ಬ ವಾಮಾಚಾರಿಯ ಸಾಧನೆಯ ಹಾದಿಯಲ್ಲಿ ಯಾವುದು ನೆಡೆಯುವುದಿಲ್ಲವೋ ಅಥವಾ ನೆಡೆಯಬಾರದೋ ಅವೆಲ್ಲವೂ ಇಂದು ನೆಡೆದಿದೆ ...

ಭರಮಾಚಾರಿಯ ಮನದಲ್ಲಿ ಬಂದ ಕೊನೆಯ ಆಲೋಚನೆ "ಇಷ್ಟೆಲ್ಲ ತಪ್ಪುಗಳನ್ನು ಎಸಗಿದ ತನಗೆ, ಸರಿಯಾದ ಶಾಸ್ತಿ ಮಾಡಲು, ಗುರುಗಳೇ ಎದ್ದು ಬರುತ್ತಾರೆ ಎಂಬ ಕಿಂಚಿತ್ ಅರಿವು ನನಗೆ ಇರಬೇಕಿತ್ತು!"

********

ಕಾರು ಮನೆಯ ಮುಂದೆ ನಿಂತಿತು. ಡ್ರೈವರ್ ಬಾಗಿಲು ತೆರೆದು ನಿಂತ. ಗಾಡಿ ನಿಂತರೂ ಶರಣಬಸಪ್ಪ ಕೂತಲ್ಲಿಂದ ಮಿಸುಕಾಡಲಿಲ್ಲ ! ಡ್ರೈವರ್ ಮೆಲ್ಲಗೆ ’ಸಾರ್’ ಎಂದ. ಯಾವ ಪ್ರತಿಕ್ರಿಯೆಯೂ ಇಲ್ಲ ! ಮತ್ತೊಮ್ಮೆ ಸ್ವಲ್ಪ ಜೋರಾಗಿ ಕೂಗಿದ !! ಇನ್ನೂ ಯಾವ ಪ್ರತಿಕ್ರಿಯೆಯೂ ಇಲ್ಲ !! ಮುಚ್ಚಿದ್ದ ಕಣ್ಣುಗಳು ಹಾಗೇ ಮುಚ್ಚಿತ್ತು!!!

ಡ್ರೈವರ್’ಗೆ ಏನೋ ಅನುಮಾನವಾಯಿತು ! ಅವರನ್ನು ಮುಟ್ಟಲೋ ಬೇಡವೋ ಎಂಬ ಅನುಮಾನದಿಂದ, ಹಾಗೇ ಸುಮ್ಮನೆ ಭುಜ ತಟ್ಟಿ ’ಸಾರ್’ ಎಂದ.

ದೇಹ ಥಣ್ಣಗೆ ಇತ್ತು ! ಶರಣಬಸಪ್ಪ ಪಕ್ಕಕ್ಕೆ ವಾಲಿದ !!

ಹಚ್ಚಿದ ದೀಪಕ್ಕೆ ಮಳೆ ನೀರು ಬೀಳದಿರಲಿ ಎಂದು, ಹಣತೆಯ ಮೇಲೆ, ಬಿಲ್ಲಿನಾಕಾರದಲ್ಲಿ ತನ್ನನ್ನು ಬಾಗಿಸಿ ನಿಲ್ಲಿಸಿದ್ದು, ಸ್ವಲ್ಪವೂ ಅಲುಗಾಡಬಾರದು ಎಂದು ಭರಮಾಚಾರಿ ತಾಕೀತು ಮಾಡುತ್ತಿರುವಂತೆ .. ಕಾರು ನಿಂತಾಗ ದೇಹ ಅಲುಗಾಡಿದಾಗ .. ಭರಮಾಚಾರಿಯೇ ’ಸಾರ್’ ಎಂದು ಕೂಗಿ, ಕೈಗೆ ಸಿಕ್ಕ ಆಯುಧದಿಂದ ಭುಜಕ್ಕೆ ಹೊಡೆದಂತೆ ಅನ್ನಿಸಿ, ಕೆಟ್ಟದಾಗಿ ಕಿರುಚಿ ಕಣ್ಣು ಬಿಟ್ಟ, ಶರಣಬಸಪ್ಪ !!!

ಮಳೆಯಲ್ಲಿ ನೆಂದ ಬಟ್ಟೆಯನ್ನೇ ಇನ್ನೂ ಹಾಕಿಕೊಂಡಿದ್ದರಿಂದ ಮೈ ಥಣ್ಣಗೆ ತಾನೇ ಇರುತ್ತೆ? ಆ ಯೋಚನೆ ಮಾಡದೆ, ತನ್ನೆಜಮಾನ ಸತ್ತಿರುವನೆಂದು ಅಂದುಕೊಳ್ಳುತ್ತಿರುವಾಗಾಲೇ ಈ ಕೆಟ್ಟ ದನಿಯ ಕಿರುಚುವಿಕೆಯಿಂದ, ಹೆಣದಲ್ಲಿ ದೆವ್ವ ಸೇರಿದೆ ಎಂದು ಅಂದುಕೊಂಡು ಎದ್ದು ಬಿದ್ದು ಓಡಿ ಹೋದ !!

ನಿಂತವನೇನೋ ಜೀವರಕ್ಷಣೆಗೆ ಓಡಿದ. ಆದರೆ ಆಪತ್ತು ಬಂದಿದ್ದು ಕುಳಿತವನಿಗೆ ! ಇವನು ಕಿರುಚಿದ ಸದ್ದು ಎಷ್ಟು ಜೋರಿತ್ತೆಂದರೆ, ಮನೆಯೊಳಗೆ ಇವನಿಗಾಗಿ ಕಾದು ಕುಳಿತಿದ್ದ ಅರುಣ್ ಕುಮಾರನಿಗೂ ಕೇಳಿಸಿ, ಅವನು ತಕ್ಷಣ ಹೊರಗೆ ಓಡಿ ಬಂದ !!!

’ಕೆಟ್ಟ ಕನಸು’ ಎಂದರಿತು ಸೀಟಿನಿಂದ ಎದ್ದು ಹೊರಬಂದ ಶರಣಬಸಪ್ಪನಿಗೆ, ಭರಮಾಚಾರಿಗಿಂತಲೂ ಕ್ರೂರನಾಗಿ ಕಂಡಿದ್ದು ಖಾಕಿ ಬಟ್ಟೆಯವ. ’ಇವನೇನು ಮಾಡುತ್ತಿದ್ದಾನೆ ಇಲ್ಲಿ’ ಎಂಬ ಆಲೋಚನೆ ಮನದಲ್ಲಿ ಮೂಡಿ ಇನ್ಸ್ಪೆಕ್ಟರ್’ನನ್ನೇ ದಿಟ್ಟಿಸಿ ನೋಡುತ್ತ ನಿಂತ ಶರಣ ಬಸಪ್ಪ..... ನಗರದಲ್ಲಿ ಶುಭ್ರ ವಾತಾವರಣವಿದ್ದರೂ, ಮಳೆಯಲ್ಲಿ ತೊಯ್ದಂತೆ ಬಟ್ಟೆ ಧರಿಸಿ ನಿಂತಿದ್ದ ಲೀಡರ್’ನನ್ನು ತೀವ್ರ ಅನುಮಾನದಿಂದ ನೋಡುತ್ತ ನಿಂತಿದ್ದ ಅರುಣ್ ಕುಮಾರ್ !!

ಶರಣ ಬಸಪ್ಪ ಪಕ್ಕಾ ರಾಜಕಾರಣಿ ಶೈಲಿಯಲ್ಲಿ "ನಮಸ್ಕಾರ" ಎಂದು ಕೈ ಜೋಡಿಸಿದ. ತಾನು ಈಗ ರಾಜೀನಾಮೆ ಕೊಟ್ಟರೆ, ಪವರ್ ಇಲ್ಲದ ತನ್ನನ್ನು ಏನೆಲ್ಲ ಅನುಮಾನದ ಮೇಲೆ ಹಿಗ್ಗಾಮುಗ್ಗ ಎಳೆದಾಡುತ್ತಾರೆ ಎಂದು ಅನ್ನಿಸಿ, ರಾಜೀನಾಮೆಯ ಯೋಚನೆಯನ್ನು ಬದಿಗಿರಿಸಿ "ಒಳಗೆ ಬನ್ನಿ" ಎಂದು ಅರುಣ್ ಕುಮಾರನನ್ನು ಆಹ್ವಾನಿಸಿ, ಮುಂದೇನು ಎಂದು ಯೋಚಿಸುತ್ತ, ಒಳ ನೆಡೆದ.

ಅರುಣ್ ಕುಮಾರನ ತಲೆಯಲ್ಲಿ ನೂರಾರು ಪ್ರಶ್ನೆಗಳು ಓಡಾಡುತ್ತಿದ್ದವು "ಇಷ್ಟು ಹೊತ್ತೂ ಈತ ಎಲ್ಲಿದ್ದರು? ಬಟ್ಟೆಯೆಲ್ಲ ಒದ್ದೆಯಾಗಿದೆ. ಮಳೆ ಎಲ್ಲಿ ಆಗಿರಬಹುದು? ಬಟ್ಟೆಗೆ ಮಣ್ಣು ಮೆತ್ತಿದಂತಿದೆಯಲ್ಲ ಏಕೆ? ಡ್ರೈವರ್ ಎಲ್ಲೂ ಕಾಣಿಸುತ್ತಿಲ್ಲ. ಅವನು ಎಲ್ಲಿ ಹೋದ? ಎಲ್ಲಕ್ಕಿಂತ ಮುಖ್ಯವಾಗಿ ಇಷ್ಟು ಕೆಟ್ಟದಾಗಿ ಕಿರುಚಿದ್ದು ಯಾಕೆ?"

ಯಾವುದೂ ಅರ್ಥವಾಗದೆ, ಶರಣಬಸಪ್ಪನವರ ಹಿಂದೆಯೇ ಒಳಗೆ ನೆಡೆದ ಅರುಣ್ ಕುಮಾರ್.

*********

ತ್ರಿಕರ್ಣನ ಮನದಲ್ಲಿ ಆಲೋಚನೆಗಳು ಮೂಡಲು ತೊಡಗಿತ್ತು ....

ಎಂಟು ಅಡಿ ಆಕೃತಿಯನ್ನು ತಾನು ಜೀವಮಾನದಲ್ಲೇ ಕಂಡಿಲ್ಲ ! ಇದೇನು ಮಾನವನೇ, ಪ್ರಾಣಿಯೇ ಅಥವಾ ನೆಡೆದಾಡುವ ಭೂತವೇ ? ಮಹಾ ಅಘೋರಿಯೇ? ಮೈ-ಕೈಗೆ ಮೆತ್ತಿಕೊಂಡಿರುವುದು ಬೂದಿಯೇ ಅಥವಾ ಮಣ್ಣೇ? ತಲೆಯ ಮೇಲಿರುವುದು ಸುರುಳಿಯುಕ್ತ ಜಡೆಯೋ ಅಥವಾ ಜೀವಂತ ಸರ್ಪಗಳೋ? ಆ ಆಕೃತಿ ಇಡುತ್ತಿರುವ ಒಂದೊಂದು ಹೆಜ್ಜೆಯೂ ಒನಕೆಯಿಂದ ಎದೆಯ ಮೇಲೆ ಕುಟ್ಟಿದಂತೆ ಭಾಸವಾಗುತ್ತಿದೆಯೆಲ್ಲ ? ನನ್ನಂತಹ ಮಾನವರು ಇದರ ಕೈಗೆ ಸಿಕ್ಕರೆ ಬದುಕುವ ಆಸೆಯೇ ಬಿಡಬೇಕಾಗುತ್ತದೆ. ಅಬ್ಬಾ .. ಅದರ ಬಲವೇ? ಹಾದಿಗೆ ಅಡ್ಡ ಬಂದ ಆ ಮರವನ್ನು ಒಂದೇ ಏಟಿಗೆ ಬುಡ ಸಮೇತ ಕಿಟ್ಟು ಹಾಕಿತಲ್ಲ?

ಅಲ್ಲಾ.... ಅದ್ಯಾಕೆ ಹಾಗೇ ನಿಂತಿದ್ದು ? ಅರ್ರೇ ! ಒಂದೆಡೆ ಆ ಆಕೃತಿ .... ಈ ಕಡೆ ಭರಮಾಚಾರಿ .... ಮಧ್ಯದಲ್ಲಿ ಅದು ಯಾರು? .....

ಅದು ಬೇರೆ ಯಾರೂ ಅಲ್ಲ .... ಇಷ್ಟು ಹೊತ್ತು ಮರದ ಹಿಂದೆ ನಿಂತು ಭರಮಾಚಾರಿಯನ್ನು ನೋಡುತ್ತಿದ್ದ ರಾಮಚಂದ್ರ ! ಕಲ್ಲು ಹೊಡೆದು ದೀಪವನ್ನು ಆರಿಸಿದ ರಾಮಚಂದ್ರ !! ಭರಮಾಚಾರಿಯ ಕೈಗೆ ಸಾವಂತ್ರಿಯ ಹೆಣ ಸಿಗದಂತೆ ಯತ್ನ ಮಾಡಿದ್ದ ರಾಮಚಂದ್ರ !!! ಯಾವ ಪವಾಡ ಅರಿಯದ, ಮಹಾ ಶಕ್ತಿವಂತನೂ ಅಲ್ಲದ, ನಿಷ್ಕಲ್ಮಶ ಮನದ ಪ್ರೇಮಿ ರಾಮಚಂದ್ರ !!!! ತನ್ನ ಪ್ರೇಮ ದಿಕ್ಕರಿಸಿದರೂ, ಅವಳ ದೇಹ ಸಂಸ್ಕಾರ ಮಾಡುವೆನೆಂಬ ಏಕೈಕ ಧ್ಯೇಯ ಹೊತ್ತ ಪ್ರೇಮಿ !!!!!

ಈಗ ಗುರುಗಳೇ ಎದ್ದು ಬಂದಿರುವುದು ಏಕೆ?

ತಮ್ಮ ಮಾತನ್ನು ಮೀರಿ, ತಮ್ಮ ಸಾಧನೆಗಳನ್ನೇ ಮೀರಿಸಲು ಹೊರಟ ಶಿಷ್ಯನ ದಮನಕ್ಕೋ ? ಅಥವಾ ಗುರುಗಳನ್ನೇ ಮೀರಿಸಲು ಹೊರಟ ಶಿಷ್ಯನ ಸಾಧನೆಯನ್ನು ತಡೆಯುವವರ ನಿರ್ಮೂಲನಕ್ಕೋ ? ಅಥವಾ ....?

.... ಕೊಕ್

ಅರಮನೆಯ ಒಂದು ಕೋಣೆಯ ಕಥೆ

ಅರಮನೆಯ ಒಂದು ಕೋಣೆಯ ಕಥೆ

ರಾಜ್ಯದಲ್ಲೆಲ್ಲ ಹಬ್ಬದ ವಾತಾವರಣ. ಬೀದಿ ಬೀದಿಗಳಲ್ಲಿ ದೀಪಾಲಂಕಾರ. ಸ್ವಚ್ಚತೆಯ ಕೆಲಸ ಭರದಿಂದ ಸಾಗಿತ್ತು. ಬರಲಿರುವ ಶುಕ್ರವಾರ ಸಂಜೆಯಿಂದ ಆರಂಭವಾಗಿ ಭಾನುವಾರ ರಾತ್ರಿಯವರೆಗೂ ನೆಡೆಯಲಿರುವ ಈ ಸಂಭ್ರಮಕ್ಕೆ ಹದಿನೈದು ದಿನಗಳಿಂದ ಸಿದ್ದತೆ ನೆಡೆದಿದೆ. ಎಲ್ಲ ಜನತೆ ಸಕ್ರಿಯವಾಗಿ ಭಾಗವಹಿಸಲೇಬೇಕೆಂಬ ಆಗ್ರಹ ಬೇರೆ.

ಇಂತಹ ದಿನಕ್ಕೆಂದೇ ಕಾದಿದ್ದರೆಂಬಂತೆ ತಾತ್ಕಾಲಿಕ ವ್ಯಾಪಾರ ಮಳಿಗೆಗಳು ಮೊದಲೇ ನಿಗದಿ ಪಡಿಸಿದ ಸ್ಥಳಗಳಲ್ಲಿ ಎದ್ದವು. ಜಾಗಕ್ಕೆ, ಒಂದಕ್ಕೆ ನಾಲ್ಕರಂತೆ ಬೆಲೆ. ಜನ ನಿಬಿಡತೆ ಹೆಚ್ಚೆಲ್ಲಿರುವುದೋ ಅಂತಹ ಸ್ಥಳಗಳಲ್ಲಿ ಮಳಿಗೆ ಎಬ್ಬಿಸಲು ಸಂಬಂಧಪಟ್ಟ ಅಧಿಕಾರಿಗಳೊಡನೆ ಹೇಗೆ ವ್ಯವಹರಿಸಬೇಕು ಎಂಬುದು ನಗ್ನ ಸತ್ಯ.

ಗುರುವಾರ ರಾತ್ರಿ ಅರಮನೆಯ ಮೂಲೆಯ ಕೋಣೆಯಲ್ಲಿ ಮಹಾರಾಜರು ದೀರ್ಘವಾಗಿ ಅಲೋಚಿಸುತ್ತ ಕುಳಿತಿದ್ದಾರೆ. ಮಹಾರಾಜರು ಈ ಕೋಣೆಯಲ್ಲಿ ಇದ್ದಾರೆಂದರೆ ಯಾರೂ ಆ ದಿಕ್ಕಿನಲ್ಲಿ ತಲೆಯಿಟ್ಟೂ ಮಲಗುವುದಿಲ್ಲ. ಇದು ಅರಮನೆಯಲ್ಲಿ ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಮಹಾರಾಜರ ಹುಟ್ಟಿದ ದಿನದ ಅಂಗವಾಗಿ ಮೂರು ರಾತ್ರಿಗಳ ಆಚರಣೆಗೆ ಇಷ್ಟೆಲ್ಲ ಸಿದ್ದತೆಗಳು ಭರದಿಂದ ನೆಡೆಯುತ್ತಿರುವಾಗ, ಈ ಕೋಣೆಯಲ್ಲಿ ಇಂದೇನು ಅಂತಹ ಗಂಭೀರ ವಿಚಾರ? ಮಾರನೆಯ ದಿನಕ್ಕೆ ಎಲ್ಲರೂ ಅಣಿಯಾಗುತ್ತಿರುವಾಗ, ಈ ಕಡೆ ಯಾರೂ ಹೆಚ್ಚು ಗಮನವೂ ಹರಿಸಿಲ್ಲ.

ಹಿಂದೆ, ಇದೇ ಕೋಣೆಯಲ್ಲಿ ಏನೇನೋ ನೆಡೆದಿತ್ತು ... ಇಂದು ಏನೇನೋ ನೆಡೆಯಲಿದೆ .... ಇದೇ ಅರಮನೆಯ ಒಂದು ಕೋಣೆಯ ಕಥೆ .....

ಮಂತ್ರಿಗಳು ಕೋಣೆಯನ್ನು ಹೊಕ್ಕು ಯಥಾಪ್ರಕಾರ ಬಾಗಿಲು ಬಡಿದುಕೊಂಡರು. ಈ ಕೋಣೆಯೊಂದು ನಿಶ್ಶಬ್ದದ ಗೂಡು. ಹೆಚ್ಚು ವೈಭವವಿಲ್ಲ. ಈ ಕೋಣೆಯಲ್ಲಿ ರಾಜನಿಗೆ ಪರಾಕು, ಶಿರಬಾಗಿ ವಂದನೆ ಎಂಬೆಲ್ಲ ನಿಯಮಗಳು ಇರುವುದಿಲ್ಲ. ನೇರವಾಗಿ ವ್ಯವಹಾರದ ಮಾತುಗಳು ಅಷ್ಟೇ !

"ಪ್ರಭು, ಖರ್ಚು ಈಗಾಗಲೇ ವಿಪರೀತ ಆಗಿದೆ. ಬೊಕ್ಕಸ ಬರಿದಾಗುತ್ತಿದೆ. ಹಣದ ವ್ಯವಸ್ತೆಯಾಗಬೇಕು. ಪಕ್ಕದ ರಾಜ್ಯದವರಿಗೆ ಇದರ ಸುಳಿವು ತಿಳಿದಿದ್ದು ಯಾವ ಕ್ಷಣದಲ್ಲಾದರೂ ಆಕ್ರಮಣ ಮಾಡಬಹುದು."

ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು ಎಂಬಂತಿದೆ ಈ ಪರಿಸ್ಥಿತಿಯಲ್ಲೂ ಏರ್ಪಡಿಸಿರುವ ಮೂರು ದಿನಗಳ ವೈಭವ.

ಅದಕ್ಕೆ ಮಹಾಪ್ರಭುಗಳು "ಹೌದು ಮಂತ್ರಿಗಳೇ. ಖರ್ಚಿನ ಅರಿವು ನಮಗೂ ಇದೆ. ಪ್ರತಿ ವರ್ಷದಂತೆ ಈ ವರ್ಷವೂ ಅದೇ ಅದ್ದೂರಿತನದಿ ಕಾರ್ಯಕ್ರಮಗಳು ನೆಡೆಯಬೇಕು ಎಂಬುದು ನಮ್ಮಾಸೆ. ಅದಕ್ಕಾಗಿ ಎಷ್ಟು ಖರ್ಚಾದರೂ ಪರವಾಗಿಲ್ಲ. ನಾನದಕ್ಕೆ ವ್ಯವಸ್ತೆ ಮಾಡುತ್ತೇನೆ. ಏಕೆಂದರೆ ಮುಂದಿನ ವರ್ಷ ಈ ಸಂಭ್ರಮಕ್ಕೆ ಆಸ್ಪದ ಇರುವುದೋ ಇಲ್ಲವೋ ನಾ ಕಾಣೆ" ಎಂದರು.

ರಾಜ್ಯದಲ್ಲೆದ್ದಿರುವ ಅರಾಜಕತೆ, ವಂಚನೆ, ಜಾತಿ-ಮತಗಳ ನಡುವೆ ದಳ್ಳುರಿ, ಹೆಚ್ಚುತ್ತಿರುವ ಅನಿಶ್ಚತೆ ಇವುಗಳು ಇಂದಿನ ಈ ಪರಿಸ್ಥಿತಿಗೆ ’ಕಾರಣ’ವಲ್ಲ ಬದಲಿಗೆ ಮೂಲ ಕಾರಣದ ಫಲ. ಹಾಗಿದ್ದರೆ ’ಕಾರಣ’ ಯಾವುದು?

ಮಹಾಪ್ರಭುಗಳು ಮತ್ತೆ ನುಡಿದರು "ಸಮಾರಂಭದ ತಯಾರಿ ಹೇಗೆ ನೆಡೆದಿದೆ? ಈಚೆಗಿನ ಆದಾಯ ಪರಿಸ್ಥಿತಿ ಹೇಗಿದೆ?" ಮಂತ್ರಿಗಳು "ಒಂದಕ್ಕೆ ನಾಲ್ಕರಂತೆ ಜಾಗ ಕೊಟ್ಟಿದ್ದರಿಂದ ಸ್ವಲ್ಪ ದುಡ್ಡು ಸೇರಿದೆ. ದೊಡ್ಡ ವ್ಯಾಪಾರಸ್ತರು ಪೈಪೋಟಿಗೆ ಬಿದ್ದಿರುವುದರಿಂದ ಸಣ್ಣವರು ಕೊಚ್ಚಿ ಹೋಗಿದ್ದಾರೆ. ಬೀದಿ ದೀಪದ ಅಲಂಕಾರದವರಿಗೆ ಈ ಸಂದರ್ಭದಲ್ಲಿ ಸನ್ಮಾನ ಪತ್ರ ನೀಡುತ್ತೇವೆಂದು ವಾಗ್ದಾನ ಮಾಡಿರುವುದರಿಂದ ಅವರು ಅಲಂಕಾರದ ಕಾರ್ಯಕ್ಕೆ ನಮ್ಮಿಂದ ಏನನ್ನೂ ಅಪೇಕ್ಷೆ ಪಡುತ್ತಿಲ್ಲ. ಕಳೆದ ಎರಡು ತಿಂಗಳಲ್ಲಿ ಹೆಚ್ಚಿದ ತೆರೆಗೆಯಿಂದಾಗಿ ಸ್ವಲ್ಪ ಹಣ ಸೇರಿದೆ. ಈಶಾನ್ಯ ದಿಕ್ಕಿನಲ್ಲಿರುವ ಪ್ರಾಂತ್ಯವನ್ನು ಪಕ್ಕದ ರಾಜ್ಯದವರಿಗೆ ವ್ಯವಸಾಯ ಮಾಡಲಿಕ್ಕೆ ಬಿಟ್ಟಿರುವುದರಿಂದ ಮುಂದಿನ ಎರಡು ವಾರದಲ್ಲಿ ಹಣ ಸೇರಲಿದೆ ... ಮತ್ತು ..."

ಪ್ರಭುಗಳು ಮಂತ್ರಿಗಳನ್ನು ಅಲ್ಲೇ ತಡೆದು "ಸಂತೋಷ. ತೆರಿಗೆ ಏರಿಕೆ ವಿಷಯದಲ್ಲಿ ಜನರ ಅಭಿಪ್ರಾಯ ಹೇಗಿದೆ? ಅವರು ಚೆನ್ನಾಗಿರಬೇಕೆಂಬುದೇ ನಮ್ಮಾಸೆ."

ನಿಟ್ಟುಸಿರು ಬಿಟ್ಟು ಮಂತ್ರಿಗಳು ಹೇಳಿದರು "ಪರಿಸ್ಥಿತಿ ಬಹಳ ಗಂಭೀರವಾಗಿದೆ. ಏರುತ್ತಿರುವ ತೆರಿಗೆ ಮತ್ತು ಬೆಲೆಗಳು, ಬೆಳೆ ಹಾನಿ, ಹೊರ ರಾಜ್ಯಗಳ ವ್ಯಾಪಾರಸ್ತರು, ಕುಶಲಕರ್ಮಿಗಳಿಂದ ಉಂಟಾಗಿರುವ ಪೈಪೋಟಿ, ಯುದ್ದ ಭೀತಿಗಳ ನಡುವೆಯೂ ನೆಡೆಯುತ್ತಿರುವ ಈ ಮೋಜಿನ ವಿರುದ್ದ, ಜನರು ದಂಗೆ ಏಳುವ ಸಾಧ್ಯತೆ ಹೆಚ್ಚಾಗಿದೆ. ವೀರನಾಯಕನು, ಬಿಸಿರಕ್ತದ ತರುಣರ ಒಂದು ದೊಡ್ಡ ಪಡೆಯನ್ನೇ ಸಿದ್ದ ಮಾಡುತ್ತಿರುವಂತಿದೆ. ಶನಿವಾರ ರಾತ್ರಿ ಕುಸ್ತಿ ಪಂದ್ಯದ ಸಮಯದಲ್ಲಿ ಏನೋ ನೆಡೆಯಲಿದೆ ಎಂಬ ವರದಿ ಬಲ್ಲ ಮೂಲಗಳಿಂದ ತಿಳಿದುಬಂದಿದೆ"

ಮಂತ್ರಿಗಳು ’ಮೋಜು’ ಎಂಬ ಪದ ಬಳಸಿ ಹಂಗಿಸಿದ್ದು ಪ್ರಭುಗಳಿಗೆ ರುಚಿಸಲಿಲ್ಲ. ಆದರೂ ತೋರ್ಪಡಿಸಲಿಲ್ಲ.

ಮಹಾಪ್ರಭುಗಳು ಇಂತೆಂದರು "ಕುಸ್ತಿ ಪಂದ್ಯದ ಕ್ರೀಡಾಪಟುಗಳು ಹೆಚ್ಚಾಗಿ ಅವನ ಕಡೆಯವರೇ ಇರುವಂತೆ ನೋಡಿಕೊಳ್ಳಿ. ಒಬ್ಬನನ್ನು ಬಿಟ್ಟು ನಮ್ಮವರೆಲ್ಲರೂ ಪ್ರಾರಂಭಿಕ ಹಂತದಲ್ಲೇ ಸೋಲಲಿ. ಹಾಗಾಗಿ ಕೊನೆಯ ಸ್ಪರ್ಧೆ ನೋಡಲು ಬರುವವರಲ್ಲಿ ವೀರನಾಯಕನ ಕಡೆಯವರೇ ಹೆಚ್ಚು ಮಂದಿ ಇರುತ್ತಾರೆ. ವೀರನಾಯಕನು ಅಲ್ಲಿರುವ ಸಮಯ ನೋಡಿ, ನಾ ಅಲ್ಲಿಗೆ ಬರುತ್ತಿರುವುದಾಗಿ ತಿಳಿಸಿ. ನಂತರ ಸೂಕ್ತ ರೀತಿಯಲ್ಲಿ ಜಾತಿ ಮತದ ದಳ್ಳುರಿಯನ್ನು ಎಬ್ಬಿಸಿ. ಯಾವ ರೀತಿ ಪೊಳ್ಳು ಸುದ್ದಿ ಹಬ್ಬಿಸಬೇಕೆಂದು ನಾ ಹೇಳಲಾರೆ. ಗಲಭೆ ಎದ್ದಾಗ, ಯಾರೂ ತಪ್ಪಿಸಿಕೊಂಡು ಹೋಗದಂತೆ ಅಖಾಡದ ಮುಂಬಾಗಿಲನ್ನು ಅಡ್ಡಗಟ್ಟಿ. ಮುಖ್ಯವಾಗಿ ವೀರನಾಯಕನು ತಪ್ಪಿಸಿಕೊಂಡು ಹೋಗದಂತೆ ಅಡ್ಡಗಟ್ಟಿಸಿ, ಆ ಗಲಭೆಯಲ್ಲಿ ಅವನನ್ನು ಇಲ್ಲವಾಗಿಸಿ. ಆ ಪ್ರಯತ್ನದಲ್ಲಿ ನಮ್ಮವರಿಗೆ ತೊಂದರೆಯಾದರೂ ಚಿಂತೆಯಿಲ್ಲ. ಅಲ್ಲಿರುವ ಅವನೂ ಅವನ ಪಡೆಯವರೂ ಸಂಪೂರ್ಣ ನಾಶವಾಗಲಿ. ನಾವು ಬರುವ ವೇಳೆಗೆ ಆ ಕೆಲಸ ನೆಡೆಯುವುದರಿಂದ ಅವನ ಕಡೆಯವರಿಂದಲೇ ಆ ಕೆಲಸ ನೆಡೆಸಲ್ಪಟ್ಟಿತೆಂದು ಎಲ್ಲೆಡೆ ಸುದ್ದಿ ಹಬ್ಬಿಸಿ".

ಕ್ರೂರತನದ ಪ್ರತೀಕವಾದ ಮಹಾರಾಜನನ್ನು ಮೂಕರಾಗಿ ನೋಡುತ್ತ, ಮನದಲ್ಲಿ ಏಳುತ್ತಿದ್ದ ಆಕ್ರೋಶವನ್ನು ತಡೆದುಕೊಳ್ಳುತ್ತ ಮಂತ್ರಿಗಳು "ಅದೇನೋ ಸರಿ, ಆದರೆ ಹೆಂಗಸರು, ಮಕ್ಕಳು ಎಲ್ಲ ಇರುವವರಲ್ಲ, ಪ್ರಭು?" ಎಂದು ಅನುಕಂಪ ತೋರಿದರು.

ಪ್ರಭುಗಳು ಅದಕ್ಕೆ ಖಾರವಾಗಿಯೇ ನುಡಿದರು "ನಮಗೂ ಇರುವರಲ್ಲ? ಅದಕ್ಕೇನು ಮಾಡಲಾಗುತ್ತದೆ? ನಮಗೆ ಕೇಡುಂಟು ಮಾಡಿ, ಅವನು ರಾಜ್ಯ ಕಸಿದುಕೊಂಡರೆ ಮಹಾರಾಣಿ ಬೀದಿಗೆ ಬರುವುದಿಲ್ಲವೇ? ಅಥವಾ ತಲೆ ತಪ್ಪಿಸಿಕೊಂಡು ಹೋಗುವುದಾದರೂ ಎಲ್ಲಿಗೆ? ಇದು ಅಳಿವು-ಉಳಿವಿನ ಪ್ರಶ್ನೆ. ನಿಮಗದು ಅರ್ಥವಾಗದು. ಹೇಳಿದಷ್ಟು ಮಾಡಿ"

ಮಹಾರಾಜರು ಮುಂದುವರೆಸಿದರು "ಹಾಗೆಯೇ, ಭಾನುವಾರ ಬೆಳಿಗ್ಗೆ ಸಂತಾಪ ಸೂಚಕವಾಗಿ ಜನತೆಯನ್ನುದ್ದೇಶಿಸಿ ನಾವು ಮಾತನಾಡುವಾಗ ಭಲ್ಲೂಕನನ್ನು ಹಿಡಿದು ವಿಚಾರಣೆ ನೆಡೆಸುವುದಾಗಿ ಮತ್ತೊಮ್ಮೆ ವಾಗ್ದಾನ ಮಾಡುತ್ತೇನೆ. ಅದಕ್ಕಾಗಿ ಈ ಬಾರಿ ನಿಮ್ಮನ್ನೇ ನೇಮಿಸಿರುವುದಾಗಿ ಹೇಳುತ್ತೇನೆ".

ಮಂತ್ರಿಗಳು "ಖಂಡಿತ ಪ್ರಭು. ಅವನ ಉಪಟಳ ಬಹಳ ಹೆಚ್ಚಾಗಿದೆ. ಹಲವಾರು ಮುಗ್ದ ಜೀವಿಗಳ ಪ್ರಾಣ ಕಿತ್ತಿದ್ದಾನೆ. ನಮ್ಮ ರಾಜ್ಯ ಉಪ್ಪುಂಡು ನಮಗೇ ಮುಳ್ಳಾಗಿದ್ದಾನೆ. ನನ್ನ ಪ್ರಾಣ ಮುಡುಪಾಗಿಟ್ಟು ಅವನನ್ನು ನಿಮ್ಮಡಿಗೆ ಒಪ್ಪಿಸುತ್ತೇನೆ".

ಪ್ರಭುಗಳು ಗಟ್ಟಿಯಾಗಿ ನಗುತ್ತ "ಅವನೆಲ್ಲಿರುವನೆಂಬ ಗೊಡವೆ ನಿಮಗೆ ಬೇಡ. ನಮಗೆ ಗೊತ್ತು. ನಮ್ಮ ಹೇಳಿಕೆಯ ನಂತರ ಸಮಾಜದ ಹಲವಾರು ಧುರೀಣರು ನಿಮ್ಮನ್ನು ಖುದ್ದಾಗಿ ಭೇಟಿ ಮಾಡಿ, ಭಲ್ಲೂಕ’ನನ್ನು ಹಿಡಿಯದಿರುವಂತೆ ವಿನಂತಿಸಿ ನಮ್ಮ ಬೊಕ್ಕಸ ತುಂಬುತ್ತಾರೆ. ಅದರ ವರದಿ ನಮಗೆ ತಿಳಿಸಿ, ಸಾಕು. ಕೆಲವೊಮ್ಮೆ ನಿಮ್ಮ ನಿಷ್ಟೆ ಮೆಚ್ಚುಗೆಯಾದರೆ, ಮತ್ತೊಮ್ಮೆ ನಿಮ್ಮ ಬೋಳೆ ಸ್ವಭಾವ ನಗು ಬರಿಸುತ್ತದೆ" ಎಂದರು.

ಮಂತ್ರಿಗಳ ಎದೆಯಲ್ಲಿ ಉರಿಯುತ್ತಿದ್ದ ದಳ್ಳುರಿ ಮತ್ತೊಂದು ಮಜಲನ್ನು ಏರಿತು. ಅದರ ನಡುವೆ ತನ್ನನ್ನು ಬೋಳೆ ಸ್ವಭಾವದವನೆಂದ ಅರಸನ ಮಾತಿಗೆ ಮನದಲ್ಲೇ ನಕ್ಕರು.

ಮಂತ್ರಿಗಳು ದೀರ್ಘವಾಗಿ ಉಸಿರೆಳೆದುಕೊಂಡು ಹೊರಬಿಡುವಾಗಲೇ ಮಹಾರಾಜರು ನುಡಿದರು "ಈಚೆಗೆ ವಿಕ್ರಮಸೇನರಿಂದ ಹೆಚ್ಚು ವಿಷಯಗಳು ತಿಳಿದು ಬರುತ್ತಿಲ್ಲ. ಕೆಲಸಗಳು ಹೇಗೆ ನೆಡೆದಿವೆ?".

ಮಂತ್ರಿಗಳು "ವಿಕ್ರಮಸೇನರ ಬಗ್ಗೆ ಜನಕ್ಕೆ ತೀವ್ರ ಆಕ್ರೋಶವಿದೆ ಮಹಾಪ್ರಭು. ಅವರು ಪಕ್ಕದ ರಾಜ್ಯದವರ ಜೊತೆ ಸೇರಿಕೊಂಡು ನಮ್ಮ ಗಂಧದ ಮರಗಳನ್ನು ಹೊರದೇಶಕ್ಕೆ ಮಾರಿಕೊಳ್ಳುತ್ತಿದ್ದಾರೆಂದು ವರದಿಯಾಗಿದೆ. ನೀವೊಮ್ಮೆ ಅಪ್ಪಣೆ ಕೊಟ್ಟರೆ ಅವರನ್ನು ಸೂಕ್ತ ರೀತಿಯಲ್ಲಿ ವಿಚಾರಣೆ ಮಾಡಿಸಬಹುದು. ಇದೇ ವಿಷಯ ಹಲವು ಬಾರಿ ನಿಮ್ಮ ಗಮನಕ್ಕೆ ತಂದಿದ್ದೇನೆ" ಎಂದು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದರು.

ಪ್ರಭುಗಳು ಉಡಾಫೆಯಿಂದ ನುಡಿದರು "ವಿಕ್ರಮಸೇನರಿಗೆ ಆ ಕೆಲಸವನ್ನು ವಹಿಸಿದವರು ನಾವೇ. ನಮ್ಮ ಬೊಕ್ಕಸ ತುಂಬಲು ಈ ಏರ್ಪಾಡು ಮಾಡಿದ್ದೇನೆ. ಸಮಯ ಬಂದಾಗ ನಾನೇ ಹೇಳೋಣವೆಂದಿದ್ದೆ."

ಇಂತಹ ಸದಾವಕಾಶಕ್ಕಾಗಿ ಕಾದಿದ್ದ ಮಂತ್ರಿಗಳು ಅಷ್ಟೇ ಶಾಂತರಾಗಿ ನುಡಿದರು "ನನಗೆ ಇದರ ಬಗ್ಗೆ ತಿಳಿದಿತ್ತು. ಮೊದಲು ನೀವೇ ದಾಳ ನೆಡೆಸಲಿ ಎಂದು ಸುಮ್ಮನಿದ್ದೆ. ವಿಕ್ರಮಸೇನನ ಬಗ್ಗೆ ಇತ್ತೀಚೆಗೆ ನಿಮಗೆ ವರದಿಗಳು ಬಂದಿಲ್ಲ. ಏಕೆಂದರೆ ಪಾಪ ವಿಕ್ರಮಸೇನನ ತಲೇ ಮೇಲೆ ಸಣ್ಣ ಬೇವಿನ ಮರವೊಂದು ಬಿದ್ದು ಅಲ್ಲೇ ಅಸುನೀಗಿದರು. ನಂಬಿಕೆಯೇ ಬರುವುದಿಲ್ಲ, ಆದರೂ ನಿಜ" ಎಂದು ತುಟಿ ಅಂಚಿನಲ್ಲೇ ನಕ್ಕರು.

ರಾಜರಿಗೆ ಇದು ಕುಹಕವೋ, ಕಪಟತನವೋ ಇಲ್ಲ ತಮ್ಮ ಬಾಣ ತಮ್ಮತ್ತಲೇ ತಿರುಗುತ್ತಿದೆಯೋ ಅರ್ಥವಾಗಲಿಲ್ಲ.

ಇದ್ದಕ್ಕಿದ್ದಂತೆ ವಿಷಯವೇ ಬದಲಾದ್ದರಿಂದ ಚಕಿತಗೊಂಡ ಪ್ರಭುಗಳು ರಾಣಿಯ ಕಡೆ ಒಮ್ಮೆ ಕ್ರೂರ ದೃಷ್ಟಿ ಬೀರಿದರು. ಈ ವಿಷಯ ಹೊರಬರಲು ಏಕ ಮಾತ್ರ ಮಾರ್ಗವೆಂದರೆ ಅದು ಮಹಾರಾಣಿ ಮಾತ್ರ. ರಾಣಿ ಚಂಡಿಕಾದೇವಿ ಸುಮ್ಮನೆ ಹೂನಗೆ ಚೆಲ್ಲಿದರಷ್ಟೇ !

ಆ ನಗೆಯಲ್ಲಿ ಸಾವಿರ ಅರ್ಥಗಳಿದ್ದವು. ವಯಸ್ಸಿನಲ್ಲಿ ಹಿರಿಯರಾದ ತಮಗೆ ಕಿರಿ ವಯಸ್ಸಿನ ರಾಣಿ ಇರುವಾಗ, ಈ ಕಿರಿ ವಯಸ್ಸಿನ ಮಂತ್ರಿಗಳನ್ನು ದೂರ ಇಡಬೇಕಿತ್ತು ಎಂದು ತಿಳಿಯಲಿಲ್ಲವೇ? ಎಂಬುದೂ ಒಂದು!!

ಕಾಲ ಮಿಂಚಿದ ಹಾಗಿದೆ !!

ಮಂತ್ರಿಗಳು ಮತ್ತೆ ನುಡಿದರು "ನಿಮ್ಮ ಸುಖಕ್ಕಾಗಿ, ನಿಮ್ಮ ವೈಭೋಗಕ್ಕಾಗಿ, ನಮ್ಮ ನಾಡಿನ ಮರ, ಭೂಮಿಯನ್ನೇ ಮಾರಿಕೊಳ್ಳುತ್ತ, ಜನರ ಹಿತಾಸಕ್ತಿಯನ್ನು ಬದಿಗೊತ್ತಿ, ಬಡವರ ಕಣ್ಣಿಗೆ ಮಣ್ಣೆರಚುತ್ತ ಮೆರೆವ ನಿಮ್ಮ ಅಟ್ಟಹಾಸವನ್ನು ಎಲ್ಲಿಯವರೆಗೆ ಜನರು ತಡೆಯುತ್ತಾರೆ? .... ಪ್ರಭೂ".

ಕೊನೆಯಲ್ಲಿ ’ಪ್ರಭೂ’ ಎಂದದ್ದು ವ್ಯಂಗ್ಯವಾಗಿ ಎಂದರಿತು, ರೋಷಾಗ್ನಿಯಿಂದ ಮಂತ್ರಿಗಳತ್ತ ನೋಡುತ್ತಿದ್ದರು.

ಮಂತ್ರಿಗಳು ಅದಕ್ಕೇನೂ ಹೆದರದೆ "ಸತ್ಯ ಹೇಳಿ ಪ್ರಭು, ಭಲ್ಲೂಕ ಎಂಬೊಬ್ಬ ಜೀವಿ ನಿಜಕ್ಕೂ ಇದ್ದಾನೆಯೇ? ಅವನು ನಿಮ್ಮ ಸೃಷ್ಟಿ ಮಾತ್ರವೇ ತಾನೇ? ನಿಮಗಾಗದವರನ್ನು ಕಡೆಗಾಣಿಸಲು ನೀವು ಬಳಸುತ್ತಿರುವ ಒಂದು ನಾಮಧೇಯ ಮಾತ್ರ ಈ ಭಲ್ಲೂಕ, ಅಲ್ಲವೇನು?" ಎಂದು ರೋಷದಿ ನುಡಿದರು.

ರಾಜ ಮೂಕನಾಗಿದ್ದ. ಒಳ್ಳೆಯತನದ ಬೋಳೇ ಸ್ವಭಾವದವನು ಎಂದು ಎಣಿಸಿದವನು, ಬೇರೆಯೇ ರೂಪ ತಾಳಿದ್ದಾನೆ. ತನ್ನವನು ಎಂದುಕೊಂಡವನೇ ತನ್ನ ಎದುರು ನಿಂತಿದ್ದಾನೆ. ಇನ್ನು ಇವನನ್ನು ಉಳಿಸಬಾರದು !

ಇಬ್ಬರ ಮನದಲ್ಲೂ ಒಂದೇ ಆಲೋಚನೆ ಬಂದಂತಿದೆ !!

ಈರ್ವರೂ ಕತ್ತಿ ಹಿರಿದು, ಒಬ್ಬರನ್ನೊಬ್ಬರು ದಿಟ್ಟಿಸಿ ನೋಡುತ್ತ ನಿಂತರು.

ರಾಜ ಗೆದ್ದರೆ, ಅವನ ಅಟ್ಟಹಾಸಕ್ಕೆ ಮತ್ತೊಬ್ಬರು ಉಸಿರೆತ್ತುವುದಿಲ್ಲ. ಮಂತ್ರಿ ಗೆದ್ದಲ್ಲಿ ರಾಜ್ಯಕ್ಕೆ ಒಬ್ಬ ಉತ್ತಮ ದೊರೆ ದೊರೆತಾನು. ಒಬ್ಬನದು ರಾಜಕೀಯದ ಅನುಭವ ಮತ್ತೊಬ್ಬನದು ಬಿಸಿರಕ್ತ. ಒಬ್ಬ ಮುದಿಯ, ಕಪಟಿ. ಮತ್ತೊಬ್ಬನದು ಕಿರಿ ವಯಸ್ಸು, ಅನುಭವವಿಲ್ಲದ ವೀರ.

ಗೆಲುವು ಯಾರದು?

ತನಗಿಂತ ಶಕ್ತಿವಂತನಾದ ಮಂತ್ರಿಯೊಡನೆ ಹೋರಾಡಿ ಗೆಲ್ಲುವ ವಿಶ್ವಾಸ ಪ್ರಭುಗಳಿಗಿರಲಿಲ್ಲ. ಇಂತಹ ಒಂದು ದಿನ ಬರಬಹುದು ಎಂದು ಮೊದಲೇ ಎಣಿಸಿದ್ದ ರಾಜ, ಮಂತ್ರಿಯ ಬೆನ್ನ ಹಿಂದಿನ ಕಂಬದ ಕಡೆ ನೋಡಿ ಸುಮ್ಮನೆ ತಲೆದೂಗಿ, ಅಪ್ಪಣೆ ಹೊರಡಿಸಿದರು.

ಆ ಒಂದು ಕ್ಷಣ ಬೇರೆಡೆ ಹರಿದ ರಾಜನ ಗಮನವನ್ನು ಉಪಯೋಗಿಸಿಕೊಂಡು, ತನ್ನ ಖಡ್ಗವನ್ನು ನೇರವಾಗಿ ಅವನ ಎದೆಗೆ ಬಲವಾಗಿ ಚುಚ್ಚಿದ್ದ, ಮಂತ್ರಿ.

ರಾಜ ಕೆಳಗೆ ಉರುಳುತ್ತಿದ್ದಂತೆ, ಆತ ತನ್ನ ಹಿಂದೆ ನೋಡಿದ್ದು ಯಾರನ್ನು ಎಂದು ಯೋಚಿಸಿ ತಿರುಗುವಷ್ಟರಲ್ಲಿ, ಮಂತ್ರಿಯ ಬೆನ್ನ ಹುರಿಯಲ್ಲಿ ಬಲವಾಗಿ ಇಳಿದ ಖಡ್ಗ, ಅವನ ಪ್ರಾಣವನ್ನು ಒಂದೇ ಏಟಿಗೆ ತೆಗೆದಿತ್ತು.

ರಾಜನು ತನ್ನ ರಕ್ಷಣೆಗೆಂದು ನಿಯೋಜಿಸಿದ್ದ ವ್ಯಕ್ತಿ, ಮಂತ್ರಿಯ ಪ್ರಾಣ ತೆಗೆದಿರಲಿಲ್ಲ! ಬದಲಿಗೆ, ರಾಣಿಯು ನಿಯೋಜಿಸಿದ್ದ ವ್ಯಕ್ತಿ ಮಂತ್ರಿಯ ಬಲಿ ತೆಗೆದುಕೊಂಡಿದ್ದ. ರಾಜನೇನಾದರೂ ಉಳಿದಿದ್ದಲ್ಲಿ ಅವನ ಪ್ರಾಣವನ್ನೂ ತೆಗೆವುದೇ ಈ ಯೋಜನೆಯಾಗಿತ್ತು !!

ತನ್ನ ಮುಸುಕು ತೆಗೆದು, ರಾಣಿಗೆ ಶಿರಬಾಗಿ ವಂದಿಸಿದ, ಮಂತ್ರಿಯ ಆಪ್ತನಾದ ವೀರನಾಯಕ.

ರಾಣಿಯ ಮನದಲ್ಲಿ ಮೂಡಿ ಬಂದ ಯೋಚನೆ ಹೀಗಿತ್ತು. ರಾಜನ ಅಳಿವಿನಿಂದ ರಾಜ್ಯವು ಮಂತ್ರಿಯದಾಗಿ ಹೋಗುತ್ತಿತ್ತು. ಮಂತ್ರಿ ಖಂಡಿತ ಒಳ್ಳೆಯವನೇ. ರಾಜ್ಯದ ಹಿತಕ್ಕಾಗಿ, ಜನರಿಗಾಗಿ ತನ್ನ ಪ್ರಾಣವನ್ನೇ ಮೀಸಲಿಟ್ಟಿದ್ದ. ತಾನು ಪಟ್ಟದರಾಣಿಯಾಗುವುದು ಖಚಿತವೇ ಆಗಿತ್ತು. ರಾಜಕೀಯದಲ್ಲಿ, ಆಡಳಿತದಲ್ಲಿ ತೀರಾ ಒಳ್ಳೆಯತನ ಬೇಡ ಅಲ್ಲವೇ? ಪ್ರಾಣವನ್ನು ಮೀಸಲಿಟ್ಟವನ ಪ್ರಾಣ ತೆಗೆಯುವುದು ತಪ್ಪೇನಿಲ್ಲ ತಾನೇ? ವಿರೋಚಿತ ಮರಣ ಎಂದು ಮರಣೋತ್ತರ ಪುರಸ್ಕಾರ ಮಾಡಿದರಾಯ್ತು.

ವೀರನಾಯಕನ ಚಾಣಕ್ಯತನದ ಮುಂದೆ ಮಂತ್ರಿಯ ಬುದ್ದಿವಂತಿಕೆ ಸೊನ್ನೆ. ತಾನು ಮಂತ್ರಿಯೊಡನೆ ಕೈಗೂಡಿಸಿದರೆ, ಮುಂದೆ ವೀರನಾಯಕ ನಮ್ಮನ್ನು ಬಿಡುತ್ತಾನೆ ಎಂದು ನಂಬುವುದಾದರೂ ಹೇಗೆ? ಒಂದೇಟಿಗೆ ಎರಡು ಹಕ್ಕಿ ಉರುಳಿದ್ದರಿಂದ ಜನ ಬಲವೂ ಸಿಕ್ಕಿತು, ರಾಜ್ಯವೂ ದಕ್ಕಿತು.

ಒಳ್ಳೆಯತನವು ಕೆಟ್ಟತನಗಳನ್ನು ನಿರ್ಮೂಲ ಮಾಡುತ್ತಿದ್ದಂತೆಯೇ, ಕಪಟತನ ಒಳ್ಳೇಯತನವನ್ನು ಇಲ್ಲವಾಗಿಸಿತು.

ಇದೇ ರಾಜಕೀಯ !

ಹಾಡ್ಕೊಂಡ್ ರಾಜಣ್ಣನ ನೆನೆಯೋಣ ಬನ್ನಿ !

ಹಾಡ್ಕೊಂಡ್ ರಾಜಣ್ಣನ ನೆನೆಯೋಣ ಬನ್ನಿ !

ಓ! ಬನ್ನಿ .. ಬನ್ನಿ ... ಬನ್ನಿ...
ಹಾಡುಗಳ ಮೂಲಕ ಡಾ| ರಾಜ್ ಅವರನ್ನು ನೆನಪಿಸಿಕೊಳ್ಳಲು ಬಂದ ನಿಮಗೆ ಸ್ವಾಗತ

ಬರೀ ಹಾಡುಗಳೇ ಅಲ್ಲದೇ ನಿಮ್ಮ ಬುದ್ದಿಗೆ ಕಸರತ್ತೂ ಇದೆ ಇಲ್ಲಿ. ಏನೆಂದು ಹೇಳಲೇ?

ಕೆಳಗೆ ನೀಡಿರುವ ಹಾಡುಗಳನ್ನು ಹಾಡಿಕೊಳ್ಳುತ್ತ, ಮನದಲ್ಲೇ ಡಾ|ರಾಜ್ ಅವರನ್ನು ನೆನಪಿಸಿಕೊಳ್ಳಿ. ಮರೆತಿದ್ದರೆ ಅಲ್ಲ್ವೇ ನೆನಪಿಸಿಕೊಳ್ಳಲು ಎನ್ನುತ್ತೀರಿ. ಡಾ|ರಾಜ್ ಅವರನ್ನು ಬಲ್ಲವರೆಲ್ಲರೂ ಇದೇ ಮಾತೇ ಹೇಳೋದು.

ಇರಲಿ, ಹಾಡಿಕೊಳ್ಳುತ್ತ, ಅದಾವ ಚಲನಚಿತ್ರ’ದ್ದು ಎಂದು ಬರೆದುಕೊಳ್ಳಿ. ಎಲ್ಲ ಚಿತ್ರಗಳ ಹೆಸರನ್ನು ಬರೆದ ಮೇಲೆ, ಪ್ರತಿ ಹಾಡಿನ ಆರಂಭದಲ್ಲಿ ನಾನು ಹೇಳಿರುವ ಸಂಖ್ಯೆಯಲ್ಲಿನ ಅಕ್ಷರವನ್ನು ಪ್ರತ್ಯೇಕವಾಗಿ ಬರೆದಿಟ್ಟುಕೊಳ್ಳಿ.

ಉದಾಹರಣೆ: (ಸಂಖ್ಯೆ ೪) ಸುಖವನ್ನೇ ನೀಡೆಂದು ಎಂದೂ ಕೇಳೆನು ನಾನು ರಾಘವೇಂದ್ರ
ಅಂತ ಇಟ್ಟುಕೊಳ್ಳಿ. ಈ ಹಾಡು ’ದೇವತಾ ಮನುಷ್ಯ’ ಚಿತ್ರದ್ದು. (ಸಂಖ್ಯೆ ೪) ಅಂದರೆ "ದೇವತಾ ಮನುಷ್ಯ" ಹೆಸರಿನಲ್ಲಿ ನಾಲ್ಕನೇ ಅಕ್ಷರ "ಮ" ಎಂದರ್ಥ

ಒಟ್ಟು ಹದಿನಾರು ಅಕ್ಷರಗಳು ಸಿಗುತ್ತವೆ. ಆ ಅಕ್ಷರಗಳನ್ನು ಒಂದು ವಾಕ್ಯವಾಗಿ ಜೋಡಿಸಿ.

(ಸಂಖ್ಯೆ ೫): ನಾವಿರುವಾ ತಾಣವೇ ಗಂಧದ ಗುಡಿ, ಅಂದದ ಗುಡಿ, ಚಂದದ ಗುಡಿ ಶ್ರೀಗಂಧದ ಗುಡಿ
(ಸಂಖ್ಯೆ ೪): ಆಡಿಸಿದಾತ ಬೇಸರ ಮೂಡಿ, ಆಟ ಮುಗಿಸಿದಾ, ಸೂತ್ರವ ಹರಿದ ಬೊಂಬೆಯ ಮುರಿದಾ, ಮಣ್ಣಾಗಿಸಿದಾ..
(ಸಂಖ್ಯೆ ೩): ಕೈ ಕೆಸರಾದರೆ ಬಾಯಿ ಮೊಸರೆಂಬಾ ಹಿರಿಯರ ಅನುಭವ ಸತ್ಯ, ಅದ ನೆನಪಿಡಬೇಕು ನಿತ್ಯಾ
(ಸಂಖ್ಯೆ ೫): ಸೋಲನೆಂದು ಕಾಣದಂಥಾ ವೀರ ಪಾರ್ಥನು, ನಿನ್ನ ಕಣ್ಣ ಬಾಣಕಿಂದು ಸೋತುಹೋದನು
(ಸಂಖ್ಯೆ ೩): ಮೃಗಗಳ ತಣಿಸೇ, ಖಗಗಳ ಕುಣಿಸೇ, ಸಡಗದಿಂದ ಗಗನದ ಅಂಚಿಂದಾ
(ಸಂಖ್ಯೆ ೨): ನಿನದೇ ನೆನಪೂ ದಿನವೂ ಮನದಲ್ಲೀ, ನೋಡುವಾ ಆಸೆಯೂ ತುಂಬಿದೇ ನನ್ನಲೀ ನನ್ನಲೀ ನನ್ನಲೀ
(ಸಂಖ್ಯೆ ೧): ಮಡದಿ, ಮಕ್ಕಳು, ಸ್ನೇಹಿತರನ್ನು ಮಣ್ಣಿನ ವಶ ಮಾಡಿ, ಸಾಯುವ ಮುನ್ನ ಜನಿಸಿದ ಮಣ್ಣ
(ಸಂಖ್ಯೆ ೪): ಆಕಾಶದಾಚೆಗೆಲ್ಲೋ ದೇವನಿಲ್ಲವೋ, ಹುಡುಕ ಬೇಡವೋ, ಆ ಮಾಯಗಾರ ತಾನು ಇಳಿಯಲಿಲ್ಲವೋ ಕುಣಿಯಲಿಲ್ಲವೋ
(ಸಂಖ್ಯೆ ೩): ಎಲ್ಲೇ ಹೋದರೂ, ನೆರಳಿನ ಹಾಗೇ ಹಿಂದೇ ಬರುತಿದೆ
(ಸಂಖ್ಯೆ ೩): ಆ ಕೆಂಪು ತಾವರೆ ಆ ನೀರಿಗಾದ್ರೆ ಈ ಹೊನ್ನ ತಾವರೆ ನನ್ನಾಸೆಯಾ ಸೆರೆ
(ಸಂಖ್ಯೆ ೫): ನೀರಿನಲ್ಲಿ ದೋಣಿ ಮುಳುಗೆ ಈಜಿ ದಡವೆ ಸೇರುವೆ, ಸುಳಿಗೆ ದೋಣಿ ಸಿಲುಕಿದಾಗ ಬದುಕಲೆಲ್ಲಿ ಓಡುವೆ ?
(ಸಂಖ್ಯೆ ೧): ನಿನ್ನನ್ನು ನೋಡುತಿರೆ ಕೈ ಮುಗಿವಾ ಆಸೆ ಏಕೋ ಕಾಣೆ ನಾ,
(ಸಂಖ್ಯೆ ೪): ಬಿಸಿಲಾಗಲಿ, ಮಳೆಯಾಗಲಿ, ನೆರಳಾಗಿ ನಾನು ಬರುವೆನು ಜೊತೆಗೆ
(ಸಂಖ್ಯೆ ೪): ಜೀವ ಹೂವಾಗಿದೆ ಭಾವ ಜೇನಾಗಿದೆ ಬಾಳು ಹಾಡಾಗಿದೆ ನಿನ್ನ ಸೇರಿ ಇಂದು
(ಸಂಖ್ಯೆ ೨): ಹುಟ್ಟು ಸಾವು ಬಾಳಿನಲ್ಲಿ ಎರಡು ಕೊನೆಗಳು, ಬಯಸಿದಾಗ ಬಾರದಿರುವ ಎರಡು ಮುಖಗಳು
(ಸಂಖ್ಯೆ ೫): ಒಂದು, ಎರಡು, ಮೂರು, ನಾಲ್ಕು ಆಮೇಲೆ ಏನು?

ಆ ವಾಕ್ಯ ಏನೆಂದು ಗೊತ್ತಾಯಿತೇ? ತಡವೇಕೆ, ಪ್ರತಿಕ್ರಿಯೆ ಹಾಕಿ ಹಾಗಿದ್ರೆ !!!!!

ಸುಳಿವು (ಬೇಕಿದ್ದವರಿಗೆ) : ವಾಕ್ಯದಲ್ಲಿ ಒಟ್ಟು ಆರು ಪದಗಳಿದ್ದು, ಆ ಪದಗಳಲ್ಲಿನ ಅಕ್ಷರಗಳ ಸಂಖ್ಯೆ ಇಂತಿವೆ: (೪) (೨) (೩) (೨) (೨) (೩)

================