Sunday, March 27, 2011

ಗುಸು ಗುಸು ಪ್ರಸಂಗ !

ಮೊನ್ನೆ ಹೀಗೇ ಕಾರನ್ನು ಪಾರ್ಕ್ ಮಾಡಿ ಧೂಮಪಾನ ಕ್ಷೇತ್ರವನ್ನು (smoking area) ದಾಟಿ ಹೋಗುತ್ತಿದ್ದೆ. ಸ್ವಲ್ಪವೇ ದೂರದಲ್ಲಿ ಇವರಿಬ್ಬರನ್ನು ಕಂಡೆ. ಒಬ್ಬ ಧೂಮಪಾನಿ ಮತ್ತೊಬ್ಬ ಆ ಧೂಮದ ಪಾನಿ. ಏನೋ ಮಾತನಾಡುತ್ತಿದ್ದವರು ಸುಮ್ಮನಾದರು. ಅಲ್ಲಿ ಸಿಗರೇಟ್ ಹೊಗೆ ಆಡುತ್ತಿದ್ದರೆ ನನಗೆ ಅನುಮಾನದ ಹೊಗೆಯಾಡಲು ಶುರುವಾಗಿದ್ದು ಅಂದೇ !

ನನಗೆ ಮೊದಲಿಂದಲೂ ಸ್ವಲ್ಪ ಅನುಮಾನ ಇತ್ತು ... ಅಂದಿನ ಘಟನೆ ನನ್ನ ಅನುಮಾನವನ್ನು ನಂಬಲು ಪ್ರೇರೇಪಿಸಿತು.

ನನ್ನ ಕಂಡರೆ ಮಾತ್ರ ಹೀಗೆ ಆಡ್ತಾರ ಅಥವಾ ಎಲ್ಲರ ಜೊತೆಯೂ ಹೀಗೇನಾ? ಬೇರೆಯವರು ಇದನ್ನು ತಲೆಗೆ ಹಚ್ಚಿಕೊಳ್ಳದೇ ಇರಬಹುದು. ಆದರೆ ನನ್ನ ಮನದಲ್ಲಿ ಅನುಮಾನದ ಹುಳ ಹೊಕ್ಕಾಯಿತಲ್ಲ ! ಇನ್ನು ಈ ಅನುಮಾನ ಪರಿಹಾರವಾಗುವ ತನಕ ನೆಮ್ಮದಿಯಿಲ್ಲ ...

ಮತ್ತೊಂದೆರಡು ಬಾರಿ ಹೀಗೇ ಗುಸು ಗುಸು ಪಿಸು ಪಿಸು ಆಯಿತು ...

ಏನೋ ಜಂಟಿ ಕಾರ್ಯಾಚರಣೆ ನೆಡೆದಿದೆ ... ಯಾಕೆ ಅಂದಿರಾ?

ಯಾರಾದರೂ ಇಬ್ಬರು ಸ್ನೇಹಿತರು ಒಟ್ಟಿಗೆ ಊಟಕ್ಕೆ ಹೋಗ್ತಾರೆ ಅಥವಾ ಒಟ್ಟಿಗೆ ಕಾಫಿಗೆ ಹೋಗ್ತಾರೆ ನಿಜ .... ಆದರೆ ಟಾಯ್ಲೆಟ್’ಗೆ ಒಟ್ಟಿಗೆ ಹೋಗೋದನ್ನ ನೋಡಿದ್ದೀರಾ ?

ನನ್ನಲ್ಲಿನ ಶರ್ಲಾಕ್ ಹೋಮ್ಸ್ ಎದ್ದು ನಿಂತ ! ಇನ್ನು ಪತ್ತೆಯಾಗಲೇಬೇಕು ... ಈ ಅನುಮಾನ ಬಗೆ ಹರಿಯುವ ತನಕ ನನ್ನ ತಲೇ ಮೇಲಿನ ಉಳಿದೆರಡು ಕೂದಲನ್ನು ನಾನು ಬಾಚಿಕೊಳ್ಳುವುದಿಲ್ಲವೆಂದು ಪಾಂಚಾಲಿ (ತರಹ) ಶಪಥ ಮಾಡಿ ಆಯಿತು ...

ಮತ್ತೊಮ್ಮೆ ಹೀಗೇ ಆಯಿತು ...

ನಾನು ಯಾವುದೋ ಮೀಟಿಂಗ್ ಎಂದು ನೆಡೆದು ಅತ್ತ ಹೋಗುತ್ತಿದ್ದೆ ... ದೂರದಲ್ಲಿ ಅವರು ಮಾತನಾಡುತ್ತ ನಿಂತಿದ್ದರು ... ನನ್ನ ಮುಂದೆ ಒಬ್ಬ ನೆಡೆದು ಹೋಗುತ್ತಿದ್ದ. ಆತ ಅವರತ್ತ ನೆಡೆದು ಹೋಗುವಾಗ ಆ ಇಬ್ಬರೂ ಗುಸು ಗುಸು ನಿಲ್ಲಿಸಿ, ಸ್ವಲ್ಪ ಜೋರಾಗಿ ಕೆಲಸ ವಿಷಯ ಏನೋ ಮಾತನಾಡಲು ಶುರು ಮಾಡಿದರು. ಇಷ್ಟು ಹೊತ್ತೂ ಮೆಲ್ಲಗೆ ಮಾತನಾಡುತ್ತಿದ್ದವರು ಈಗೇನು ಜೋರು?

ಅದಕ್ಕಿಂತ ಮುಖ್ಯ ವಿಷಯವೆಂದರೆ, ಅವರ ಈ ನಡುವಳಿಕೆ ನನಗೆ ಮಾತ್ರ ಸೀಮಿತವಾಗಿಲ್ಲ ! ಅಂದರೆ, ಸತ್ಯವಾಗಲೂ ಏನೋ ಸರಿ ಇಲ್ಲ !!

ಈ ವಿಷಯ ತಲೆ ಹೊಕ್ಕಾಗಿನಿಂದ ಸರಿಯಾಗಿ ನಿದ್ದೆ ಇರಲಿಲ್ಲ. ನನ್ನನ್ನು ಮಾತ್ರವಲ್ಲದೇ, ಯಾರನ್ನು ಕಂಡರೂ ಹೀಗೇ ಆಡ್ತಾರೆ ಎಂದು ತಿಳಿದ ಮೇಲೆ, ಸದ್ಯ ಒಂದು ಕಣ್ಣಲ್ಲಿ ನಿದ್ದೆ ಮಾಡಬಹುದು ಎನ್ನಿಸಿತು !

ಆಯ್ತು ... ಈಗ ನನ್ನ ಮುಂದಿನ ಹೆಜ್ಜೆ ಏನು?

ಇವರೀರ್ವರೂ ಕ್ಯಾಂಟೀನಿಗೆ ಊಟಕ್ಕೆ ಹೋಗುವ ಸಮಯವನ್ನು ಗಮನಿಸಿ, ಒಮ್ಮೆ ನಾನೂ ಹಿಂಬಾಲಿಸಿ, ಅವರು ಕುಳಿತ ಟೇಬಲ್’ಗೆ ಸಮೀಪದ ಮತ್ತೊಂದು ಟೇಬಲ್ ಬಳಿ, ಅವರಿಗೆ ಬೆನ್ನು ಹಾಕಿ ಕುಳಿತೆ. ಸದ್ಯಕ್ಕಂತೂ ಏನೋ ಮಾತಿಲ್ಲ. ಕೆಲವು ನಿಮಿಷದ ನಂತರ ಏನೋ ಗುಸು ಗುಸು.

ಮೊದಲೇ ನನಗೆ ಅಷ್ಟಾಗಿ ಕೇಳಿಸೋಲ್ಲ ! ಸ್ವಲ್ಪ ಮೆಲು ದನಿಯಲ್ಲಿ ಮಾತನಾಡಿದರೆ, ಅದು amplify ಆಗದೆ ನನ್ನ ಕಿವಿ ಸೇರೋ ಹೊತ್ತಿಗೆ faded signal ಆಗಿ ಸತ್ತಿರುತ್ತದೆ. ಅದರ ಜೊತೆ ಡಬ್ಬಿಯಲ್ಲಿನ ಬಿಸಿಬೇಳೆಬಾತ್ ಜೊತೆಗೆ ಕರಿದ ಸಂಡಿಗೆಗಳು !

ಇನ್ನೆರಡು ನಿಮಿಷ ಏನೂ ಕೇಳಲಿಲ್ಲ. ಹುಷಾರಾಗಿ ಕೇಳಿಸಿಕೊಳ್ಳುತ್ತಿದ್ದೆ. ಆಹಾ! ಕೇಳಿಸಿಯೇ ಬಿಡ್ತು ... ನನಗೆ ನಗು ತಡೆಯಲಾಗಲಿಲ್ಲ ...

ಅವರಲ್ಲಿ ಒಬ್ಬನಿಗೆ ಹೆಣ್ಣು ದನಿ .... ಹ್ಹ ಹ್ಹ ಹ್ಹ ... ಅದಕ್ಕೇ ಯಾರಿಗೂ ಕೇಳದಿರಲಿ ಅಂತ ಮೆಲ್ಲಗೆ ಮಾತನಾಡುತ್ತಾನೆ. ಊಟ ನಿಲ್ಲಿಸಿ ಹಾಗೇ ಕೇಳಿಸಿಕೊಂಡೆ ... ಮತ್ತೊಬ್ಬನದು ಮಹಾ ಕರ್ಕಶ ದನಿ .... ಅಯ್ಯೋ ಪಾಪ ... ಏನು ಮಾಡಲಾಗುತ್ತೆ ಬಿಡಿ ಅಂತ ಸಮಾಧಾನ ಹೇಳಲು ಮನಸ್ಸಾಗಿ, ಏಳುವ ಮುನ್ನ ತಲೆ ತಿರುಗುಸಿ ನೋಡಿ .... ಹಾಗೇ ಮತ್ತೆ ತಲೆ ತಿರುಗಿಸಿದೆ ...

ಸಂಡಿಗೆ ತಿನ್ನುವಾಗ ಹಿಂದೆ ಏನು ನೆಡೆದಿತ್ತೋ ಕೇಳಿಸಿರಲಿಲ್ಲ ... ಅಲ್ಲಿ, ಆ ಇಬ್ಬರ ಬದಲಿಗೆ ಯಾವುದೋ ಗಂಡು-ಹೆಣ್ಣು ಕುಳಿತಿದ್ದರು !!! ನಾನು ತಲೆ ತಿರುಗಿಸಿ ನೋಡಿದ್ದಕ್ಕೆ ಆತ ನನ್ನನ್ನು ಕೆಕ್ಕರಿಸಿಕೊಂಡು ನೋಡಿದ ...

ಹಾಗಿದ್ರೆ ಇವರಿಬ್ಬರೆಲ್ಲಿ ?

ಆ ಕಡೆ ಈ ಕಡೆ ಹುಡುಕುತ್ತ ನೋಡಿದರೆ ಮತ್ತೊಂದೆಡೆ ಕುಳಿತು ಅವರೂ ನನ್ನತ್ತ ಕೆಕ್ಕರಿಸಿಕೊಂಡು ನೋಡುವುದೇ?

ಪತ್ತೇದಾರಿಕೆ ತೋಪಾಗಿತ್ತು. ಇನ್ನು ಮುಂದೆ ಅವರಿಗೆ ಎದುರಾಗಿ ಕುಳಿತುಕೊಳ್ಳಬೇಕು .... ಆದರೆ, ಅವರ ಕಡೆ ನನಗೆ ಗಮನ ಇದೆ ಅಂತ ಇನ್ಮುಂದೆ ತೋರಿಸಿಕೊಳ್ಳಬಾರದು ....

ಅಲ್ಲಾ, ಹೀಗೆ ಮಾಡಿದರೆ ಹೇಗೆ?

ಅವರು ಟಾಯ್ಲೆಟ್’ಗೆ ಹೋದಾಗ ನಾನೂ ಹೋದರೆ ಏನಾದರೂ ತಿಳಿಯಬಹುದು ... ಆಹಾ .. ಏನು ಘನಂಧಾರಿ ಆಲೋಚನೆ? ಅವರು ಎಷ್ಟು ಹೊತ್ತಿಗೆ ಹೋಗ್ತಾರೆ ಎಂದು ನಾನು ಲೆಕ್ಕ ಇಡಲು ಹೋದರೆ ನನ್ನ ಪ್ರಾಜಕ್ಟ್ ಕೆಲಸ ಯಾರು ಮಾಡ್ತಾರೆ? ಈ ಐಡಿಯಾ ಸರಿ ಕಾಣಲಿಲ್ಲ.

ಸಾಮಾನ್ಯವಾಗಿ ಮಧ್ಯಾನ್ನ ಕಾಫಿ ಕುಡಿಯೋ ಸಮಯ ... ಕಾಫೀ ರೂಮಿನಲ್ಲಿ ಇವರನ್ನು ಹಿಡಿದು ಹಾಕಿದರೆ ಹೆಂಗೆ?

ಒಳ್ಳೇ ಐಡಿಯಾ ...

ಮರುದಿನ ಮಧ್ಯಾನ್ನ ಎರಡು ಘಂಟೆಯಿಂದ ನಾಲ್ಕೂವರೆವರೆಗೂ ಒಂದು ನಾಲ್ಕು ಬಾರಿ ಕಾಫೀ ರೂಮಿಗೆ ಹೋಗಿ ಬಂದೆ. ಅವರ ಸುಳಿವೇ ಇಲ್ಲ. ಏನಾದರಾಗಲಿ ಎಂದುಕೊಂಡು ಕೊನೆಗೆ ಐದು ಘಂಟೆ ಮತ್ತೊಮ್ಮೆ ಹೋದೆ. ನನ್ನ ಸಹೋದ್ಯೋಗಿ ಒಬ್ಬ ಕೇಳಿದ Are you alright? Looks like you are kind of lost ... ಅಂದ .. ನಾನು "ಹಾಗೇನಿಲ್ಲ ಕಣಣ್ಣಾ ... ಮೊನ್ನೆ ತಾನೇ ಚಂದ್ರ ದೊಡ್ಡದಾಗಿ ಬಂದಿದ್ನಲ್ಲ ಆಮೇಲಿಂದ ಹೀಗಾಯ್ತು" ಅನ್ನೋಣ ಅಂತಿದ್ದೆ. ಅವನಿಗೆ ನನ್ನ ಭಾಷೆ ಬರೋಲ್ಲ ಅಂತ ಸುಮ್ಮನಾದೆ!

ಅಂದು ಸೋಮವಾರ ... ಯಾಕೋ ಬೆಳಿಗ್ಗೆಯಿಂದ ತಲೆ ನೋಯುತ್ತಿತ್ತು ... ಒಂದು ಮಾತ್ರೆ ಹಾಕಿಕೊಂಡು, ಕಾಫೀ ರೂಮಿಗೆ ಹೋದೆ ... ಆ ಇಬ್ಬರೂ ಅಲ್ಲೇ ಸಮೀಪದ ಟೇಬಲ್ ಬಳಿ ನಿಂತಿದ್ದರು ... ಯಥಾಪ್ರಕಾರ, ಕಾಫೀ ಕುಡಿಯುತ್ತ ಏನೋ ಗುಸು ಗುಸು ... ಮೊದಲೇ ತಲೆ ನೋಯುತ್ತಿತ್ತು. ಸದ್ಯಕ್ಕೆ ಇವರ ಉಸಾಬರಿ ಬೇಡವೆಂದು ನಾನು ಸುಮ್ಮನೆ ಲೋಟಕ್ಕೆ ಡಿಕಾಕ್ಶನ್ ಬಗ್ಗಿಸಿಕೊಂಡು, ಕ್ರೀಮ್ ಹಾಕಿ, ಸಕ್ಕರೆ ಹಾಕಿ, ಬಿಸಿ ಬಿಸಿ ಕಾಫೀ ಸಿದ್ದಮಾಡಿಕೊಂಡೆ ....

ಆಗ, ಲಘುವಾಗಿ ಅವರ ಮಾತು ಕೇಳಿಸಿಯೇಬಿಡ್ತು .... ಮಾತುಗಳು ಅರ್ಥವಾದಂತೆ, ಕಿವಿ ನೆಟ್ಟಗಾಯಿತು ... ಸ್ವಲ್ಪ ಓರೇಗಣ್ಣಿನಲ್ಲೇ ಮಾತನಾಡುತ್ತಿರುವುದು ಅವರೇನಾ ಎಂದು ಖಚಿತಪಡಿಸಿಕೊಂಡೆ ... ಅವರ ಮಾತು ಕೇಳಿ ಏನೂ ಮಾಡಲು ತಿಳಿಯದಾಯಿತು ...

ಅವರು ಏನಂತ ಮಾತನಾಡುತ್ತಿದ್ದರು ಗೊತ್ತೇ? "ಇವನಿಗೆ ಬೇರೆ ಕೆಲ್ಸ ಇಲ್ವಾ ಗುರೂ? ನಮ್ಮ ಮಾತು ಕದ್ದು ಕೇಳೊ ತರಹ ನಿಂತಿದ್ದಾನೆ? ಸುಮ್ಮನೆ ಕಾಫೀ ಸುರ್ಕೊಂಡ್ ಹೋಗೋದ್ ತಾನೇ?" "ಲೋ! ಸುಮ್ಮನೆ ಇರೋ. ಆ ಮನುಷ್ಯನಿಗೆ ಕನ್ನಡ ಅರ್ಥವಾದ್ರೆ ಏನಂದುಕೊಳ್ತಾರೆ?" "ಹಂಗಂತೀಯಾ? ಹೋಗ್ಲಿ ನೆಡಿ" ....

ಹೊರದೇಶದ ಜನ ಯಾರಾದ್ರೂ ಕೇಳಿಸಿಕೊಂಡರೆ ಏನಂದುಕೊಳ್ಳುತ್ತಾರೋ ಎಂದುಕೊಂಡು ಮೆಲು ದನಿಯಲ್ಲಿ ಅವರು ’ಕನ್ನಡ’ದಲ್ಲಿ ಮಾತನಾಡುತ್ತಿದ್ದರು !!! ಬಹುಶ: ಇಷ್ಟೂ ದಿನ.

ಈಗ, ನಾನು ಅವರನ್ನು ಪರಿಚಯ ಮಾಡಿಕೊಳ್ಳಲಾ? ಬೇಡವಾ?


ಸಿಹಿಯ ಕಹಿ ಜೀವನ !

ಅಂದು ಶುಕ್ರವಾರ ... ಭೀಮನ ಅಮಾವಾಸ್ಯೆ. ಬೆಳಿಗ್ಗೆಯೇ ಎದ್ದು ಎಣ್ಣೆ ಸ್ನಾನ ಮಾಡಿ ಪೂಜಾದಿ ಕರ್ಮಗಳನ್ನು ಮುಗಿಸಿ ಕಮಲಮ್ಮನವರು, ಸದಾಶಿವರಾಯರನ್ನು ಎಬ್ಬಿಸಿದರು. ಕಣ್ಣು ಬಿಟ್ಟು ಮಡದಿಯ ಮುಖ ನೋಡಿ, ’ಕರಾಗ್ರೇ ವಸತೇ ಲಕ್ಷ್ಮಿ ...’ ಹೇಳಿಕೊಂಡು, ನಿತ್ಯಕರ್ಮಗಳತ್ತ ನೆಡೆದರು. ಬಹಳ ವರ್ಷಗಳಿಂದ ನೆಡೆಸಿಕೊಂಡು ಬಂದಿದ್ದ ಶಿಸ್ತಿನ ಜೀವನದ ಒಂದು ಭಾಗವದು.

ಹೆಸರಾಂತ ವೈದ್ಯರಾದ ಡಾ|ಸದಾಶಿವರಾವ್, ಡಯಾಬಿಟೀಶಿಯನ್. ಪ್ರತಿ ರೋಗಿಯನ್ನು ಕೂಲಂಕುಷವಾಗಿ ಪರೀಕ್ಷಿಸಿ, ಅವರ ಆಹಾರ ಪದ್ದತಿಗಳನ್ನು ಅರಿತು, ಅವರಲ್ಲಿ ಸಕ್ಕರೆ ಖಾಯಿಲೆಯ ಬಗ್ಗೆ ಅರಿವು ಮೂಡಿಸಿ, ವ್ಯಾಯಾಮ ಮತ್ತು ಆಹಾರದ ಮಹತ್ವ ತಿಳಿಸಿ, ದೈನಂದಿನ ಜೀವನ ಶೈಲಿಯಲ್ಲಿ ಬದಲಾವಣೆ ತರಿಸಿ, ರೋಗಿಗಳಿಗೆ ನವ ಚೈತನ್ಯ ತುಂಬುತ್ತಿದ್ದರು.

ರೋಗಿಗಳಲ್ಲಿ ಅರಿವು ಮೂಡಿಸುವ ಕೆಲವು ವಿಷಯವೆಂದರೆ, ಒಂದೇ ಬಾರಿ ರಾಶಿ ಊಟ ಮಾಡುವ ಬದಲು ಆ ಊಟವನ್ನೇ ಕಡಿಮೆ ಪ್ರಮಾಣದಲ್ಲಿ ಹಲವು ಬಾರಿ ತೆಗೆದುಕೊಳ್ಳುವುದು, ನಿತ್ಯ ಜೀವನದಲ್ಲಿ ವ್ಯಾಯಾಮವು ಅವಿಭಾಜ್ಯ ಅಂಗವಾಗಬೇಕು, ಏನಿಲ್ಲದಿದ್ದರೂ ಅತಿ ಕಡಿಮೆ ಶ್ರಮದ ಮತ್ತು ಬಹಳ ಉಪಯುಕ್ತವಾದ ’ನಡಿಗೆ’ಯನ್ನು ಖಂಡಿತ ದಿನವೂ ಅರ್ಧ ಘಂಟೆಯಾದರೂ ಮಾಡುವುದು, ಮೂರು ತಿಂಗಳಿಗೊಮ್ಮೆ ರಕ್ತ ಪರೀಕ್ಷೆ ಮಾಡಿಸಿ A1C ತಿಳಿದುಕೊಳ್ಳುವುದು, ಕಂಗಳು ಮತ್ತು ಪಾದಗಳ ಪರೀಕ್ಷೆ ಇತ್ಯಾದಿ. ಅನ್ನ ತಿನ್ನುವುದು ಕಡಿಮೆ ಮಾಡಿ, ತರಕಾರಿ, ಪ್ರೋಟೀನ್ ಮತ್ತು ಫೈಬರ್’ಯುಕ್ತ ಆಹಾರ ಹೆಚ್ಚು ಸೇವಿಸಿ ಎಂದು ಭೋದನೆ ಮಾಡುತ್ತಿದ್ದರು.

ಮೂವತ್ತು ವರ್ಷದ ತಮ್ಮ ವೈದ್ಯಕೀಯ ವೃತ್ತಿಯಲ್ಲಿ ಬಹಳಷ್ಟು ರೋಗಿಗಳನ್ನು ಕಂಡಿದ್ದರು. ಹಲವು ರೋಗಿಗಳು ಇವರು ಹಾಕಿ ಕೊಟ್ಟ ಕ್ರಮವನ್ನು ಚಾಚೂ ತಪ್ಪದೆ ಪಾಲಿಸಿ, ಆರೋಗ್ಯ ಕಾಪಾಡಿಕೊಂಡು ಉತ್ತಮ ಜೀವನ ನೆಡೆಸುತ್ತಿದ್ದರೆ, ಮತ್ತೆ ಕೆಲವರು ಇಂದಲ್ಲ ನಾಳೆ ಹೋಗೋ ಜೀವಕ್ಕೆ ಇಷ್ಟೆಲ್ಲ ನಿಯಮಗಳನ್ನು ಹೇರಬೇಕೇ ಎಂದು ಲಘುವಾಗಿ ಪರಿಗಣಿಸಿದವರೂ ಇದ್ದಾರೆ.

ಆರೋಗ್ಯವನ್ನು ಲಘುವಾಗಿ ಕಂಡವರಿಗೆ ರಾಯರು ಮನಸ್ಸಿನಲ್ಲೇ "ದೇವಾ, ಇವರೆಲ್ಲ ಅರಿತೂ ತಪ್ಪು ಮಾಡುತ್ತಿದ್ದಾರೆ. ಇವರನ್ನು ಕ್ಷಮಿಸು" ಎಂದುಕೊಳ್ಳುತ್ತಿದ್ದರು.

ಕಮಲಮ್ಮನವರ ಸೋದರ ರಂಗನಾಥ. ಇವರ ಮನೆಯ ಸಮೀಪದಲ್ಲೇ ವಾಸವಾಗಿದ್ದರು. ಮಕ್ಕಳು ಮದುವೆಯಾದ ಮೇಲೆ ಬೇರೆಡೆ ಹೋದ ಮೇಲೆ ದೊಡ್ಡ ಮನೆಯಲ್ಲಿ ಅವರೂ ಮತ್ತವರ ಮಡದಿ ಸಾವಿತ್ರಿ ಇಬ್ಬರೇ ಇದ್ದರು. ಹಬ್ಬಗಳನ್ನು ಎರಡೂ ಮನೆಯವರು ಒಟಾಗಿ ಆಚರಿಸಿ ರೂಢಿ. ಇಂದು ರಾಯರ ಮನೆಯಲ್ಲಿ ಊಟ.

ವಂಶಸ್ತರಿಂದ ಏನು ಆಸ್ತಿ ಬಂತೋ ಅಥವಾ ಬರಲಿಲ್ಲವೋ ಗೊತ್ತಿಲ್ಲ, ಆದರೆ ಸಕ್ಕರೆ ಖಾಯಿಲೆಯಂತೂ ಕೇಳದೆಯೇ ಬಳುವಳಿಯಾಗಿ ಬಂದಿತ್ತು. ಸದಾಶಿವರಾಯರಲ್ಲಿ ಆರೋಗ್ಯದ ಸಲಹೆ ಪಡೆದು ಅವರು ಹೇಳಿದಂತೆ ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದ ಶಿಸ್ತಿನ ರೋಗಿ.

ದಿನವೂ ಬೆಳಿಗ್ಗೆ, ಕಡಿಮೆ ತೂಕದ ಡಂಬಲ್ಸ್ ಹಿಡಿದು ಅರ್ಧ ಘಂಟೆ ನಡಿಗೆ. ನಂತರ ಕಾಫಿ-ತಿಂಡಿ. ಮನೆಯ ತೋಟದ ಕೆಲಸ, ಮಧ್ಯಾನ್ನ ಹನ್ನೆರಡಕ್ಕೆ ಊಟ. ಪತ್ರಿಕೆ, ಪುಸ್ತಕಗಳನ್ನು ಓದುವುದು ಅಥವಾ ಟಿ.ವಿ ನೋಡುವುದು. ಸಂಜೆಗೆ ಕಾಫಿ ಮತ್ತು ಲಘು ಉಪಹಾರ ಮತ್ತು ಆರಾಮವಾಗಿ ಕೈ ಬೀಸುತ್ತ ಮಡದಿಯೊಂದಿಗೆ ನಡಿಗೆ. ಪಾರ್ಕಿನ ಕಡೆ ಹೋಗಿ, ತಮ್ಮ ವಯೋಮಾನದವರೊಂದಿಗೆ ಹರಟೆ. ತಿರುಗಿ ಬಂದು ಸ್ವಲ್ಪ ಹೊತ್ತು ಧ್ಯಾನ ನಂತರ ರಾತ್ರಿ ಏಳೂವರೆಗೆ ಊಟ. ಮಲಗುವ ಮುನ್ನ ಒಂದು ಲೋಟ ಹಾಲು ಕುಡಿದು, ಒಂಬತ್ತೂವರೆಗೆ ನಿದ್ದೆ. ಗುರುವಾರ ಮಾತ್ರ ರಾತ್ರಿ ವೇಳೆ ಊಟ ಮಾಡುತ್ತಿರಲಿಲ್ಲ.

ಅಂದು, ತಮ್ಮ ಆಸ್ಪತ್ರೆಗೆ ತೆರಳುವ ಮುನ್ನ ಸದಾಶಿವರಾಯರು, ಬ್ಯಾಂಕಿನ ಕಡೆ ಹೋಗುವುದಿತ್ತು. ರಂಗನಾಥರೊಂದಿಗೆ ಏನೋ ಕೆಲಸವಿದ್ದುದರಿಂದ, ಅವರೂ ಅದೇ ಹೊತ್ತಿಗೆ ಅಲ್ಲಿಗೆ ಬರುವುದಾಗಿ ಹೇಳಿದ್ದರು. ರಾಯರು ಒಂಬತ್ತಕ್ಕೆ ಸಿದ್ದರಾಗಿ, ಮಡದಿಗೆ ’ಹೋಗಿ ಬರುತ್ತೇನೆ’ ಎಂದು ತಿಳಿಸಿ ಆಕೆ ಬಾಗಿಲು ಹಾಕಿಕೊಂಡ ಮೇಲೆ, ಭದ್ರವಾಗಿದೆಯೇ ಎಂದು ಖಚಿತಪಡಿಸಿಕೊಂಡು, ತಮ್ಮ ಕಾರನ್ನೇರಿ ಬ್ಯಾಂಕಿನತ್ತ ಹೊರಟರು.

ಆಗಲೇ ಬಂದು ಕಾದಿದ್ದ ರಂಗನಾಥರೊಡನೆ, ಬ್ಯಾಂಕಿನೊಳಗೆ ಅಡಿ ಇಡುತ್ತಿದ್ದಂತೆಯೇ ನಾಲ್ಕಾರು ಪರಿಚಿತ ಮುಖಗಳು ಇವರತ್ತ ನಸು ನಗೆ ಬೀರಿ ಕುಶಲ ವಿಚಾರಿಸಿದರು. ಇವರಿಗೆ ಮೇನೇಜರ್ ಬಳಿ ಕೆಲಸವಿದ್ದುದರಿಂದ ಅವರಿಗಾಗಿ ಕಾಯುತ್ತ ಕುಳಿತಿದ್ದರು.

ಅರ್ಧ ಘಂಟೆ ಕಳೆಯಿತು. ಅಂದೇಕೋ ಮೇನೇಜರ್ ತಡವಾಗಿ ಬಂದರು. ಅಲ್ಲಿಯವರೆಗೂ ಇಬ್ಬರೂ ಅಲ್ಲೇ ಇದ್ದ ಪುಸ್ತಕಗಳನ್ನು ಓದುತ್ತಿದ್ದರು. ಶಿಸ್ತಿಗೆ ಹೆಸರಾದ ವೈದ್ಯರಿಗೆ ಮೇನೇಜರ್ ಕೆಲಸಕ್ಕೆ ತಡವಾಗಿ ಬರುವುದೇ ಅಲ್ಲದೇ ತಾವು ರೋಗಿಗಳನ್ನು ನೋಡುವುದು ತಡವಾಗುತ್ತಿರುವುದು ಹಿಂಸೆಯಾಗುತ್ತಿತ್ತು. ಆದರೂ ಸಂಯಮ ಕಳೆದುಕೊಳ್ಳಲಿಲ್ಲ. ಎಷ್ಟೇ ಆಗಲಿ ವೈದ್ಯರಲ್ಲವೇ?

ಮತ್ತೈದು ನಿಮಿಷಕ್ಕೆ ಮೇನೇಜರ್ ಬಂದು, ಕೆಲವು ಮುಖ್ಯ ಕಾಗದ ಪತ್ರಗಳನ್ನು ನೋಡಿದ ಮೇಲೆ, ಮೊದಲು ಇವರಿಬ್ಬರನ್ನು ಒಳಗೆ ಕರೆಸಿದರು. ಹೆಡ್ ಆಫೀಸಿನಲ್ಲಿ ತುರ್ತು ಮೀಟಿಂಗ್ ಕರೆದಿದ್ದರಿಂದ ಬೆಳಿಗ್ಗೆ ಮೊದಲು ಅಲ್ಲಿಗೆ ಹೋಗಿ ನಂತರ ಇಲ್ಲಿಗೆ ಬಂದಿದ್ದರಿಂದ ತಡವಾಯಿತು ಎಂದು ಕ್ಷಮೆ ಕೋರಿದರು. ಹೆಸರಾಂತ ಡಾಕ್ಟರ್ ತಮ್ಮ ಬ್ಯಾಂಕಿನ ಗ್ರಾಹಕ ಎಂಬುದು ಅವರಿಗೂ ಒಂದು ಹೆಮ್ಮೆ. ಸದ್ಯಕ್ಕೆ ಮೇನೇಜರ್ ರೂಮಿನಲ್ಲಿ ಈ ಮೂವರು.

ಆದರೆ ಹೊರಗೆ ?

ನಗರದ ಹೊರವಲಯದಲ್ಲಿನ ಪ್ರತಿಷ್ಟಿತ ಕಾಲೋನಿಯೊಂದರಲ್ಲಿ ರಾಯರ ಮನೆ. ಅಲ್ಲಿಂದ ಕೆಲವೇ ಕಿಲೋಮೀಟರ್ ದೂರದಲ್ಲಿ ಇದ್ದುದು ಈ ಬ್ಯಾಂಕ್. ಮನೆಯಿಂದ ತಮ್ಮ ಆಸ್ಪತ್ರೆಗೆ ತೆರಳುವ ಹಾದಿಯಲ್ಲೇ ಇದ್ದ ಆ ಬ್ಯಾಂಕಿಗೆ ಅಂದೇಕೋ ಗ್ರಹಚಾರ ಸರಿಯಾಗಿರಲಿಲ್ಲ !!

ಹತ್ತು ಘಂಟೆಗೆ ಸರಿಯಾಗಿ ಒಂದು ಕಪ್ಪು ಬಣ್ಣದ ವ್ಯಾನ್ ಬ್ಯಾಂಕಿನ ಮುಂಭಾಗದಲ್ಲಿ ನಿಂತಿತು. ವ್ಯಾನಿನಿಂದ ಇಳಿದವರ ಮೊದಲ ಬಲಿ ಗೇಟಿನ ಬಳಿ ಇದ್ದ ಗಾರ್ಡ್. ಒಬ್ಬ ಅವನ ಕೈಯಲ್ಲಿನ ಗನ್ ಕಿತ್ತುಕೊಂಡಿದ್ದರೆ ಮತ್ತೊಬ್ಬ ಅವನ ತಲೆಗೆ ಬಲವಾಗಿ ಪೆಟ್ಟುಕೊಟ್ಟು ಅವನನ್ನು ದರ ದರ ಎಳೆದುಕೊಂಡು, ಒಳಗಿ ನೂಕಿ, ಮುಂಬಾಗಿಲು ಜಡಿದ !!!

ಒಳಗೆ ನುಗ್ಗಿದ ಮುಸುಕುಧಾರಿ ಜನ ಎಲ್ಲೆಡೆ ಹಂಚಿ ಹೋಗಿ ’ಯಾರೂ ಅಲುಗಾಡ ಕೂಡದು’ ಎಂದು ತಾಕೀತು ಮಾಡಿದರು. ಅಷ್ಟರಲ್ಲೇ ತನ್ನ ಮೊಬೈಲಿಗೆ ಕೈ ಹಾಕಿದ ಒಬ್ಬನ ತಲೆಗೆ ಬಿರುಸಾಗಿ ಹೊಡೆದು, ಮೊಬೈಲಿಗೆ ಕೈ ಹಾಕಿದರೆ ಪ್ರಾಣ ಹೋಗುತ್ತದೆ ಎಂದು ಬೆದರಿಸಿದರು. ನಿಂತವರನ್ನು, ತಮ್ಮ ಕೈಗಳನ್ನು ಹಿಂದುಗಡೆ ಕಟ್ಟಿಕೊಂಡು ಕೂಡುವಂತೆ ಆದೇಶಿಸಿದರು. ಒಬ್ಬಾತ ಗನ್ ಹಿಡಿದು ಕ್ಯಾಶಿಯರ್ ಬಳಿ ನಿಂತಿದ್ದರೆ ಮತ್ತೊಬ್ಬ ಮೇನೇಜರ್ ರೂಮಿನ ಬಳಿ ಅಡಿ ಇರಿಸಿದ್ದ.

ಹೊರಗೇನೋ ನೆಡೆಯುತ್ತಿದೆ ಎಂದರಿವಾಗಿ ಮೇನೇಜರ್ ಇಂಟರ್ ಕಾಮ್ ಮಾಡಿ ವಿಷಯ ತಿಳಿದುಕೊಳ್ಳಲು ಫೋನ್ ಎತ್ತಿದರೆ, ಬಿಜಿ ಸಿಗ್ನಲ್ ಬಂತು.

ಅದೇ ಹೊತ್ತಿಗೆ ಬಾಗಿಲು ತೆರೆದುಕೊಂಡಿತು. ಇವರ ಹಣೆಗೆ ನೇರವಾಗಿ ಪಿಸ್ತೂಲ್ ಹಿಡಿದು ನಿಂತಿದ್ದ ಯಮ ಕಿಂಕರ ಸ್ವರೂಪಿ ಮುಸುಕುಧಾರಿ !!

ಬಂದವ ರಂಗನಾಥರನ್ನು ಮತ್ತು ರಾಯರನ್ನು ಗದರಿ, ಒಂದೊಂದು ಮೂಲೆಗೆ ಹೋಗಿ ಕೈಗಳನ್ನು ಹಿಂದಕ್ಕೆ ಕಟ್ಟಿಕೊಂಡು ಕೂಡಿರೆಂದು ಆದೇಶಿಸಿದನು. ನಂತರ ಅವರಿಂದ ಮೊಬೈಲನ್ನು ಕಿತ್ತುಕೊಂಡು, ಮೇನೇಜರ್ ತಲೆಗೆ ಪಿಸ್ತೂಲು ಹಿಡಿದು ಹೊರಗೆ ಎಳೆದುಕೊಂಡು ಹೋದ. ರಾಯರಿಗೆ ಘಾಬರಿಯಾಗಿತ್ತು. ಮುಂದೇನು ಎಂದು?

ರಂಗನಾಥರಿಗೆ, ಆ ಟೆನ್ಷನ್’ಗೆ ತಲೆ ಧಿಮ್ ಎಂದಿತು. ಹಾಗೇ ಕಣ್ಣು ಮುಚ್ಚಿ ಕುಳಿತಿದ್ದರು.

ಹಿಂದಿನ ದಿನ ಗುರುವಾರ. ಒಪ್ಪತ್ತು ಊಟ. ಮಧ್ಯಾನ್ನದ ಹಬ್ಬದ ಊಟಕ್ಕೆ ರಾಯರ ಮನೆಗೆ ಹೋಗುವುದಿತ್ತು. ಹಾಗಾಗಿ ಲಘು ಉಪಹಾರ ಮಾತ್ರ ಸೇವಿಸಿದ್ದರು. ಇದ್ದಕ್ಕಿದ್ದಂತೆ ಬಂದೊದಗಿದ ಈ ಪರಿಸ್ಥಿತಿಗೆ ಟೆನ್ಷನ್ ಹೆಚ್ಚಾಗಿ, ಸಣ್ಣಗೆ ಹಸಿವೆಯೂ ಶುರುವಾಗಿತ್ತು.

ಹೊರಗೇನು ನೆಡೆಯುತ್ತಿದೆ ಎಂಬ ಅರಿವಿಲ್ಲ. ರಾಯರು ಮೆಲ್ಲಗೆ ತಲೆ ಎತ್ತಿ ಗಾಜಿನ ಮೂಲಕ ಹೊರಗೆ ನೋಡಿದರು. ಹೊರಗೆ ಗ್ರಾಹಕರು ನೆಲದ ಮೇಲೆ ಕೈಗಳನ್ನು ಹಿಂದಕ್ಕೆ ಕಟ್ಟಿಕೊಂಡು ಭೀತಿ ವದನರಾಗಿ ಕುಳಿತಿದ್ದರು. ಎಲ್ಲರಲ್ಲೂ ಆತಂಕ ಮನೆ ಮಾಡಿತ್ತು. ಯಾವ ಕ್ಷಣದಲ್ಲಿ ಏನಾಗುತ್ತೋ ಎಂಬ ಭಯ.

ರಾಯರು ಹಾಗೇ ನೋಡುತ್ತಿರಲು, ಇದ್ದಕ್ಕಿದ್ದಂತೆ ಒಬ್ಬ ಮುಸುಕುಧಾರಿ ಇವರತ್ತ ನೋಡಿ ಗನ್ ತೋರಿಸಿದ. ಇವರು ಹಾಗೇ ಕುಳಿತರು. ಅವನು ಹಾಗೇ ನೆಡೆದು ಬಂದು ಮೇನೇಜರ್ ರೂಮಿನ ಸುತ್ತಲಲ್ಲೇ ನಿಂತು ಇವರೀರ್ವರನ್ನು ಮತ್ತು ಇತರರನ್ನೂ, ಗಮನಿಸುತ್ತಾ ನಿಂತ.

ರಾಯರು ಏನೂ ಮಾಡಲು ತೋಚದೆ ಹಾಗೇ ತಮ್ಮ ದೃಷ್ಟಿಯನ್ನು ರಂಗನಾಥರತ್ತ ಹರಿಸಿದರು. ಒಂದು ಕ್ಷಣ ಆತಂಕವಾಯಿತು ಅವರಿಗೆ. ರಂಗನಾಥರ ಹಣೆಯ ಮೇಲೆ ಬೆವರ ಹನಿಗಳು. ಮುಖದಲ್ಲಿ ಸುಸ್ತು. ಸೂಕ್ಷ್ಮವಾಗಿ ಕೈ ನಡುಕ. ರಂಗನಾಥಾರಿಗೆ sugar level ಕಡಿಮೆಯಾಗುತ್ತಿದೆ ಎಂದು ರಾಯರಿಗೆ ಅರಿವಾಯಿತು !!

ಏನಾದರೂ ಮಾಡಬೇಕು. ಮೆಲ್ಲಗೆ ಕರೆದರು "ರಂಗ, ಏನಾಗ್ತಿದೆ?" ... ರಂಗನಾಥ "ಸುಸ್ತಾಗ್ತಿದೆ" .. "ಬೆಳಿಗ್ಗೆ ಏನೂ ತಿನ್ನಲಿಲ್ವಾ?" ... "ನೆನ್ನೆ ರಾತ್ರಿ ಊಟ ಮಾಡಲಿಲ್ಲ. ಇವತ್ತು ಬೆಳಿಗೆ ಎರಡು ಸ್ಲೈಸ್ ಬ್ರೆಡ್ ಮತ್ತು ಹಾಲು ಅಷ್ಟೇ" ...

ರಾಯರಿಗೆ ಆ ಸಮಯದಲ್ಲಿ ಬೇಸರವಾಯ್ತು ಮತ್ತು ರೇಗಿತು "ಆರೋಗ್ಯ ಸರಿ ಇಲ್ಲ ಅಂದ ಮೇಲೆ ಅದೆಂಥಾದ್ದು ಉಪವಾಸ, ವ್ರತ ಎಲ್ಲ. ಮಾಡೋ ಕೆಲಸದಲ್ಲಿ ದೇವರನ್ನು ಕಾಣಬೇಕು. ದೀನ ದಲಿತರಲ್ಲಿ ದೇವರನ್ನು ಕಾಣಬೇಕು. ಹಿರಿಯರ ಸೇವೆಯಲ್ಲಿ ದೇವರನ್ನು ಕಾಣಬೇಕು. ಅದು ಬಿಟ್ಟು ಹೊಟ್ಟೆ ಸುಟ್ಟರೆ ಈಗ ಅನುಭವಿಸುತ್ತಿರುವವರು ಯಾರು?" ಅಂತ ಹೇಳಲು ಬಾಯಿ ತೆರೆದವರು ಸುಮ್ಮನಾದರು.

ತಮ್ಮ ಯೋಚನೆ ತಮಗೆ ಸರಿ ಇರಬಹುದು ಆದರೆ ಅದನ್ನು ಆಡಲು ಇದು ಸಂದರ್ಭವಲ್ಲ. ಈಗ ಏನು ಮಾಡಬೇಕು? ಏನೋ ಹೇಳಲು ಹೊರಟವರಿಗೆ ಹೊರಗೆ ನಿಂತಿದ್ದವನ ಗನ್ ಸುಮ್ಮನಾಗಿಸಿತು. ರಾಯರ ’ಕಿಟ್’ ಟೇಬಲ್ ಮೇಲಿತ್ತು. ಅದರಲ್ಲಿ sugar gel ಇತ್ತು. ಒಂದು ಹನಿ ಬಾಯಿಗೆ ಹಾಕಿಕೊಂಡಲ್ಲಿ ಥಟ್ಟನೆ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗಿ, ದೇಹ ಸುಸ್ಥಿತಿಗೆ ಬರುತ್ತದೆ.

ಆದರೆ ಬ್ಯಾಗನ್ನು ಟೇಬಲ್ ಮೇಲಿನಿಂದ ತೆಗೆದುಕೊಳ್ಳುವುದು ಹೇಗೆ? ತಾವು ರಂಗನ ಜೀವ ಉಳಿಸಲು ಟೇಬಲ್ ಬಳಿ ಹೋದರೆ ಆ ರಕ್ಕಸ ನನ್ನ ಜೀವ ತೆಗೆದಾನು. ತಮ್ಮ ಜೀವ ಹೋದರೂ ರಂಗನ ಜೀವವಂತೂ ಉಳಿಯೋಲ್ಲ. ಮಾಡುವ ಪ್ರಯತ್ನ ನಿರರ್ಥಕವಾಗುತ್ತದೆ. ಹಾಗಿದ್ರೆ ಏನು ಮಾಡಲಿ?

ಅಷ್ಟರಲ್ಲಿ, ಮತ್ತೊಬ್ಬ ದಾನವ ಮೇನೇಜರ್ ತಲೆಗೆ ಪಿಸ್ತೂಲ್ ಹಿಡಿದು ಒಳಗೆ ಬಂದ. ಏನು ವಾಗ್ವಾದ ನೆಡೆದಿತ್ತೋ ಏನೋ, ಮೇನೇಜರ್ ಅಲ್ಲಿ ಇಲ್ಲಿ ಏನೋ ಹುಡುಕುತ್ತಿದ್ದರು. ಸಿಗಲಿಲ್ಲವೋ ಅಥವಾ ಬೇಕೆಂದೇ ಸಿಗಲಿಲ್ಲ ಎಂದು ನಾಟಕವಾಡುತ್ತಿದ್ದರೋ ಗೊತ್ತಾಗಲಿಲ್ಲ. ಪಿಸ್ತೂಲುಧಾರಿ ಜೋರು ಜೋರಾಗಿ ಏನೇನೋ ಬೈದಾಡುತ್ತ, ಟೇಬಲ್ ಮೇಲಿನ ವಸ್ತುಗಳನ್ನು ಅತ್ತ ಇತ್ತ ಸರಿಸುತ್ತ ನಂತರ ಡ್ರಾಯರ್’ ನಲ್ಲೆಲ್ಲಾ ತಡಕಾಡಿ, ಕೊನೆಗೊಂದು ಬೀಗದ ಕೈ ತೆಗೆದುಕೊಂಡು, ದುರುಗುಟ್ಟಿ ನೋಡಿ, ಮೇನೇಜರ್’ನನ್ನು ಎಳೆದುಕೊಂಡು ಹೋದ.

ಹತ್ತು ನಿಮಿಷಗಳ ಈ ಗಲಭೆಯಲ್ಲಿ ತಲೆ ಎತ್ತಿ ನೋಡಲೂ ಭಯ. ಯಾರ ಸಿಟ್ಟು ಯಾರ ಮೇಲೆ ತಿರುಗುತ್ತೋ ಎಂದು. ಎಲ್ಲರೂ ಹೊರಗೆ ಹೋದ ಮೇಲೆ ರಂಗನಾಥರತ್ತ ನೋಡಿದರೆ, ಕೈಗಳನ್ನು ಹಿಂದಕ್ಕೆ ಕಟ್ಟಿಕೊಂಡೆ ನೆಲಕ್ಕೆ ಒರಗಿದ್ದಾರೆ. ರಾಯರಿಗೆ ಯೋಚನೆ ಆಯ್ತು.

ಮೆಲ್ಲಗೆ "ರಂಗಾ" ಎಂದರು. ಉತ್ತರವಿಲ್ಲ. "ರಂಗಾ, ಏನಾಗ್ತಿದೆ?" .... ರಂಗನಾಥ "ಯಾರೂ ಇಲ್ಲ, ಏನೋ, ಹೋಗ್ಲಿ" ಅಂದರು. ರಾಯರು ಇನ್ನೊಮ್ಮೆ ಕೇಳಿದರು "ರಂಗ, ಏನಾಗ್ತಿದೆ?" ... ರಂಗನಾಥ "ಏನಿಲ್ಲ ... ಚೆನ್ನಾಗಿದ್ದೀನಿ"

ರಾಯರಿಗೆ ಅರ್ಥವಾಗಿತ್ತು, ರಂಗನಾಥರಿಗೆ ಅರೆಬರೆ ಪ್ರಜ್ಞ್ನಾವಸ್ತೆ ಎಂದು. ಹೀಗೇ ಬಿಟ್ಟರೆ ಸ್ಟ್ರೋಕ್ ಆಗಬಹುದು ಎಂದೂ ಅವರಿಗೆ ಗೊತ್ತು. ಬೇಗ ಏನಾದರೂ ಮಾಡಬೇಕು.

"ವೈದ್ಯೋ ನಾರಾಯಣೋ ಹರಿ: " ಎನ್ನುತ್ತಾರೆ ನಿಜ. ವೈದ್ಯನು ನಾರಾಯಣ ಸ್ವರೂಪನೇ ಹೊರತು ನಾರಾಯಣನೇ ಅಲ್ಲ ! ಈ ಮಾತು ರಾಯರಿಗೂ ಒಪ್ಪುತ್ತೆ. ತಾವು ಕುಳಿತಲ್ಲಿಂದ ಅನತಿ ದೂರದಲ್ಲೇ ಇರುವ ಒಂದು ಬ್ಯಾಗ್ ತೆಗೆದುಕೊಳ್ಳಲಾಗಲಿಲ್ಲ .... ಜೀವನ್ಮರಣಗಳ ನಡುವೆ ಹೋರಾಡುತ್ತಿರುವ ಒಬ್ಬ ಮನುಷ್ಯನನ್ನು ಉಳಿಸಲಾಗುತ್ತಿಲ್ಲ ....

ಭಗವನ್ನಾಮ ಸ್ಮರಣೆ ಮಾಡಿ, ಆಗಿದ್ದಾಗಲಿ ಎಂದುಕೊಂಡು, ಕೈ ಜೋಡಿಸಿ ಒಮ್ಮೆ ಆ ಮುಸುಕುಧಾರಿಯತ್ತ ನೋಡಿದರು. ಅವನಿಗೆ ಒಮ್ಮೆಲೇ ಗಲಿಬಿಲಿ ಆಯಿತು. ತಕ್ಷಣವೇ ವೈದ್ಯರತ್ತ ಗುರಿ ಇಟ್ಟು, ಟ್ರಿಗರ್ ಒತ್ತಲು ಸಿದ್ದನಾದ. ದೈನ್ಯತೆ ಆ ವದನ, ಮುಗಿದ ಕೈಗಳು, ತನ್ನತ್ತ ನೋಡಿ ನಂತರ ಇನ್ನೊಬ್ಬಾತ ನೋಡಿದ ಆ ನೋಟ ಅವನನ್ನು ವಿಚಲಿತಗೊಳಿಸಿತು.

ಗನ್ ಕೆಳಗಿಳಿಸಿದ ... ರೂಮಿನೊಳಗೆ ಬಂದ ... ವೈದ್ಯರತ್ತ ಒಂದು ಕಣ್ಣಿಟ್ಟು, ಸೂಕ್ಷ್ಮವಾಗಿ ರಂಗನಾಥರತ್ತ ನೋಡಿದ. ವೈದ್ಯರತ್ತ ತಿರುಗಿ ನೋಡಿ "ಏನಾಯ್ತು" ಎಂದ. ರಾಯರು ಮೆಲ್ಲಗೆ ನುಡಿದರು "ಶುಗರ್ ಲೆವಲ್ ಕಡಿಮೆ ಆಗಿದೆ. ಪ್ರಜ್ಞ್ನೆ ತಪ್ಪುತ್ತಿದೆ. ನಾನು ಡಾಕ್ಟರ್. ಒಂದು ನಿಮಿಷ ಸಮಯ ಕೊಟ್ರೆ ಅವರನ್ನು ಬದುಕಿಸಬಹುದು" ಎಂದು ಒಂದೇ ಉಸುರಿಗೆ ತಿಳಿಸಿದರು.

ಒಮ್ಮೆ ಯೋಚನೆ ಮಾಡಿ, ಇನ್ನೊಬ್ಬ ಮುಸುಕುಧಾರಿಯತ್ತ ನೋಡಿ ಏನೋ ಸನ್ನೆ ಮಾಡಿದ. ನಂತರ ರಾಯರತ್ತ ನೋಡಿ "ನೀವು ಅಲ್ಲೇ ಇರಿ. ನಿಮಗೆ ಏನು ಬೇಕು" ಅಂದ. "ಟೇಬಲ್ ಮೇಲಿರೋ ಬ್ಯಾಗ್" ಎಂದರು ರಾಯರು ... ಅನುಮಾನದಿಂದಲೇ ತೆಗೆದುಕೊಟ್ಟ. ಮೊದಲು ರಾಯರು ಅದರಿಂದ blood glucose meter ತೆಗೆದು ರಂಗನಾಥರ ಬೆರಳಿನಿಂದ ಒಂದು ಹನಿ ರಕ್ತ ತೆಗೆದುಕೊಂಡು ಪರೀಕ್ಷೆ ಮಾಡಿದಾಗ ೩೪ ಅಂತ ತೋರಿಸಿತು. ಜೊತೆಗೆ DANGER ಎಂದೂ ತೋರಿಸಿತು. ನಂತರ ಬ್ಯಾಗಿನಿಂದ ಶುಗರ್ ಜೆಲ್ ತೆಗೆದುಕೊಂಡು ಒಂದು ಹನಿ ರಂಗನಾಥರ ನಾಲಿಗೆ ಮೇಲೆ ಹಾಕಿದರು.

ರಂಗನಾಥರು ಸ್ವಲ್ಪ ಚೇತರಿಸಿಕೊಂಡರು. ಎದ್ದು ಕುಳಿತ ಮೇಲೆ ರಾಯರು ತಮ್ಮ ಬ್ಯಾಗಿನಿಂದ ಒಂದು ಜ್ಯೂಸ್ ಪ್ಯಾಕೆಟ್ ತೆಗೆದು ಕುಡಿಯಲು ಕೊಟ್ಟರು. ರಂಗನಾಥರಿಗೆ ಮಾತನಾಡುವಷ್ಟು ಚೇತರಿಕೆ ಕಂಡು ಬಂತು. ನಂತರ ಅವರಿಗೆ ತಾವು ಇನ್ನೂ ಬ್ಯಾಂಕಿನಲ್ಲೇ ಇರುವುದು ಅರಿವಾಯಿತು. ರಾಯರನ್ನು ಮೆಲ್ಲಗೆ ಕೇಳಿದರು "ಈಗ ಏನಾಗ್ತಿದೆ" ಅಂತ

ರಾಯರು ಮುಸುಕುಧಾರಿಯತ್ತ ಕೈ ತೋರಿಸಿ "ಈತನೇ ನಿನ್ನನ್ನು ಕಾಪಾಡಿದ್ದು" ಎಂದರು. ರಂಗನಾಥ ಆತನಿಗೆ ಕೈ ಮುಗಿದು ಧನ್ಯವಾದ ತಿಳಿಸಿದರು.

ಮುಸುಕುಧಾರಿಯು ಸಂಪೂರ್ಣ ವಿಚಲಿತನಾಗಿದ್ದ ... ಗಲಿಬಿಲಿಗೊಂಡಿದ್ದ ... ದಿಗ್ಮೂಢನಾಗಿದ್ದ ... ತನ್ನ ಕಣ್ಣ ಮುಂದೆ ವೈದ್ಯನೊಬ್ಬ ಹೋಗುತ್ತಿದ್ದ ಜೀವವನ್ನು ತಡೆದಿದ್ದ ... ಅದಕ್ಕೆ ಪರೋಕ್ಷವಾಗಿ ತಾನು ಕಾರಣನಾಗಿದ್ದ ... ತನ್ನಿಂದ ಹೀಗಾಗಿದ್ದೋ ಅಥವಾ ತನ್ನಿಂದ ಪ್ರಾಣ ಉಳಿದಿದ್ದೋ ಅವನಿಗೆ ಅರ್ಥವೇ ಆಗಲಿಲ್ಲ ...

ಇಬ್ಬರನ್ನೂ ಮೊದಲಿನ ಸ್ಥಾನಕ್ಕೆ ಕಳಿಸಿ, ರಾಯರ ಬ್ಯಾಗಿನಿಂದ ಪ್ಯಾಡ್ ಮತ್ತು ಪೆನ್ ತೆಗೆದುಕೊಂಡು, ಏನನ್ನೋ ಬರೆದು ಇಟ್ಟು, ರಾಯರತ್ತ ತಿರುಗಿ ಕೈ ಜೋಡಿಸಿ, ಹಾಗೇ ಹೊರ ನೆಡೆದ ...

ಮುಂದಿನ ಐದು ನಿಮಿಷದಲ್ಲಿ ಮುಸುಕುಧಾರಿಗಳೆಲ್ಲ ಬ್ಯಾಂಕಿನಿಂದ ಹೊರ ನೆಡೆದಿದ್ದರು ... ಭರ್ರನೆ ಗಾಡಿ ಹೊರಗೆ ಹೋಗಿದ್ದರ ಶಬ್ದವೂ ಕೇಳಿಸಿತು ... ಮೇನೇಜರ್ ರೂಮಿನಲ್ಲಿ ನೆಡೆದ ಕಥೆ ಯಾರಿಗೂ ಗೊತ್ತಾಗಲಿಲ್ಲ. ಜೀವ ಹಾನಿಯಾಗದೆ ಎಲ್ಲರೂ ಉಳಿದುಕೊಂಡಿದ್ದರಿಂದ ಎಲ್ಲರಿಗೂ ಒಮ್ಮೆಲೇ ನಿರಾಳವಾಗಿ, ಬದುಕುಳಿದಿದ್ದಕ್ಕೆ ಒಬ್ಬರನ್ನೊಬ್ಬರು ಅಭಿನಂದಿಸುತ್ತಿದ್ದರು.

ಮಾನಸಿಕವಾಗಿ ಸುಸ್ತಾಗಿದ್ದ ಇಬ್ಬರೂ ಕಾರನ್ನೇರಿ ರಾಯರ ಮನೆಯತ್ತಲೇ ನೆಡೆದರು. ವಾರಾಂತ್ಯಕ್ಕೆ ತಾಮ್ಮೂರಿನ ಮನೆಯ ದೇವರ ದರ್ಶನ ಮಾಡಿ ಬಂದರು.

ಬ್ಯಾಂಕಿನ ದರೋಡೆ ನಂತರ ನಗರದ ಹೊರವಲಯದಲ್ಲಿ ಪೋಲೀಸರು ಅವರನ್ನು ಅಟ್ಟಿಸಿಕೊಂಡು ಹೋಗಿ, ಗುಂಡಿನ ಚಕಾಮಕಿ ನೆಡೆದು ದರೋಡೆಕೋರರಲ್ಲಿ ಒಂದಿಬ್ಬರು ಸತ್ತರೆಂದೂ ಸುದ್ದಿ ತಿಳಿಯಿತು. ಮಿಕ್ಕವರು ಜೈಲು ಸೇರಿದ್ದರಂತೆ.

ಸುದ್ದಿ ತಿಳಿದ ಕೂಡಲೇ, ರಾಯರಿಗೆ ಆ ಮುಸುಕುಧಾರಿ ತಮ್ಮ ಕಾಗದದಲ್ಲಿ ಏನೋ ಬರೆದದ್ದು ನೆನಪಾಯ್ತು. ತಕ್ಷಣವೇ ಬ್ಯಾಗಿನಿಂದ ತಮ್ಮ ಪೇಪರ್ ಪ್ಯಾಡ್ ತೆಗೆದುಕೊಂಡು ನೋಡಿದರು

"ದಯವಿಟ್ಟು ನನ್ನ Diabetic ತಂದೆಯನ್ನು ಕಾಪಾಡಿ. ಧನ್ಯವಾದಗಳು" ಎಂದು ಬರೆದು ಹೆಸರು ಮತ್ತು ದೂರವಾಣಿ ಸಂಖ್ಯೆಯನ್ನೂ ಕೊಟ್ಟಿದ್ದ.

ರಾಯರು ಆ ನಂಬರ್’ಗೆ ಕರೆ ಮಾಡಿ ಪರಿಸ್ಥಿತಿ ಹೇಗಿದೆ ಎಂದು ತಿಳಿದುಕೊಳ್ಳೋಣ ಎಂದುಕೊಂಡರು .... ಆದರೆ ....

ಎರಡು ದಿನಗಳ ಹಿಂದೆ ಮಗನು ಕಾಲವಾಗಿದ್ದ.....

ಆ ದು:ಖ ಭರಿಸಲಾಗದೆ ಆಹಾರವೂ ಸೇರದೆ ಆ ತಂದೆಯೂ ಕಾಲವಾದರು ಎಂದು ಸುದ್ದಿ ತಿಳಿಯಿತು....


ನನಗೆ ಕಥೆ ಬರೆಯೋಕ್ಕೆ ಬರೋಲ್ಲ !

ಸಾಮಾನ್ಯವಾಗಿ ಪ್ರತಿ ಭಾನುವಾರದ ವಾರಚರಿಯಂತೆ (ಪ್ರತಿ ದಿನ ಅಲ್ಲ ನೋಡಿ ಅದಕ್ಕೆ ದಿನಚರಿ ಅಲ್ಲ) ಸ್ನಾನಾದಿ ನಿತ್ಯಕರ್ಮಗಳ ನಂತರ ತಿಂಡಿ ತಿಂದು ಮುಗಿಸಿ, ಕಾಫಿ ಹೀರುತ್ತ ಹಜಾರದಲ್ಲಿ ಕುಳಿತಿದ್ದೆ.

ರಸ್ತೆಯಲ್ಲಿ ಹಾದು ಹೋಗುತ್ತಿದ್ದ ಅನಸೂಯಾಬಾಯಿ, ನನ್ನನ್ನು ನೋಡಿದರೂ totally neglect ಮಾಡಿದವರಂತೆ ಹಾಗೇ ಹೋಗುತ್ತಿದ್ದರು !! ನಮಗೆ ಬೇಡದೆ ಇದ್ದಾಗ, ಕಚ್ಚೇಧಾರಿಯಾದ ಅವರು ಕಚ್ಚುತ್ತ ಸಕಲ ವಿಚಾರಗಳನ್ನೂ ತಿಳಿದುಕೊಳ್ಳುವ ಈ ಬಾಯಿ, ಇಂದೇಕೆ ಬಾಯಿಗೆ ದಾರ ಹೊಲೆದುಕೊಂಡು ಹೋಗುತ್ತಿದ್ದಾರೆ?

ಅವರಿಗೆ ಏನಾದರೆ ನನಗೇನಾಗಬೇಕು ಅಂತ ಅಂದುಕೊಂಡು ’ಚೆನ್ನಾಗಿದ್ದೀರಾ?’ ಅಂತ ಕೇಳಿಯೇಬಿಟ್ಟೆ ! ಅವರು ಬಾಯೇ ಬಿಡದೆ ನಕ್ಕು ಸುಮ್ಮನೆ ಹೋದರು. ಹಲವಾರು ವರ್ಷಗಳ ಹಿಂದೆ ಜಾತ್ರೆಯಲ್ಲಿ ಕಳೆದು ಹೋದ ಅನಸೂಯಾಬಾಯಿಯವರ ಅವಳಿಯೇ ಈಕೆ? (ಕಳೆದು ಹೋಗಿದ್ದರೋ ಅಥವ ಇಲ್ಲವೇ ಇಲ್ವೋ ನನಗೆ ಗೊತ್ತಿಲ್ಲ, ಸುಮ್ನೆ, ಭಾನುವಾರ ಅಲ್ವಾ, ಹಾಗೇ ರೀಲ್ ಬಿಟ್ಟೆ ಅಷ್ಟೇ!)

ಒಳಗಿನಿಂದ ತಂಗಾಳಿಯಂತೆ ಬರುತ್ತಿದ್ದ ನನ್ನಾಕೆ ವಿಶಾಲೂ, ಸಡನ್ನಾಗಿ ಬಿರುಗಾಳಿಯಂತೆ ಧಾವಿಸಿ ಬಂದು ಅನುಮಾನದಿಂದ ಕೇಳಿದಳು ’ಯಾರ್ರೀ ಅದೂ?’

ನಾನು, ಅರ್ಥಾತ್ ರಾಮಣ್ಣಿ, ಹೇಳಿದೆ ’ಅಸೂಯಾಬಾಯಿ .... ಅಲ್ಲಲ್ಲ, ಅನಸೂಯಾಬಾಯಿ ಕಣೆ’ ಅಂತ.

ಅದಕ್ಕೆ ಅವಳು ’ಅಯ್ಯೋ ರ್ರೀ, ಅದು ಕಮಲಾಬಾಯಿ ಕಣ್ರೀ. ಅನಸೂಯಾಬಾಯಿಯವರ ಅಕ್ಕ’. ನಾನು ಕೇಳಿದೆ ’ಅಲ್ಲಾ ಕಣೇ, ಅವರ ಮನೆಯಲ್ಲಿ ಒಂದೇ ರೀತಿ ಎಷ್ಟು ಬಾಯಿಗಳಿವೆ’. ನನ್ನಾಕೆ ನುಡಿದಳು ’ಅವರ ಮನೆಯಲ್ಲಿ ಎಷ್ಟು ಜನ ಇದ್ದರೆ ನಿಮಗೇನು. ಹೆತ್ತೋರಿಗೆ ಇಲ್ಲದ ಚಿಂತೆ ನಿಮಗ್ಯಾಕೆ? ವಿಷಯ ಏನಪ್ಪಾ ಅಂದರೆ, ಅನಸೂಯಾ ಬಾಯಿ ಮೊನ್ನೆ ಬಚ್ಚಲು ಮನೆಯಲ್ಲಿ ಬಿದ್ದು ಕಾಲು ಮುರಿದುಕೊಂಡರಂತೆ. ಅದಕ್ಕೆ ಅವರ ಅಕ್ಕ ಊರಿಂದ ಬಂದಿದ್ದಾರೆ."

ಈ ಎರಡು ಬಾಯಿಗಳ ಮಧ್ಯೆ ರಮಣಮೂರ್ತಿಗಳು ಖಂಡಿತ ’ಮರಣಮೂರ್ತಿಗಳೇ ಆಗಿರ್ತಾರೆ ...

ಆದರೂ "ಅಯ್ಯೋ ಪಾಪ. ಅವರ ಬಚ್ಚಲ ಮನೆಯ ಕಲ್ಲು ಒಡೀಲಿಲ್ಲ ತಾನೇ?". ವಿಶಾಲೂ ಸಿಡಿದಳು "ನಾನು, ಅವರ ಕಾಲಿನ ಬಗ್ಗೆ ಹೇಳಿದರೆ ನಿಮಗೆ ಕಲ್ಲಿನ ಬಗ್ಗೆ ಚಿಂತೆ. ನೀವ್ಯಾಕ್ರೀ ಹಿಂಗೇ?" ಎಂದಳು ರಾಗವಾಗಿ.

ನಾನೂ ರಾಗವಾಗೇ ನುಡಿದೆ

"ಕಲ್ಲನು ಜಾರಿ ಕಾಲು ಮುರಿಯಿತು ಬಾಯಿಗೆ

ಬಾಯಲ್ಲಿನ ಹಲ್ಲುದುರಿ ಸೇರಿತ್ತು ಕೈಯ್ಯಿಗೆ"

ವಿಶಾಲೂ ಸಡಗರದಿಂದ ನುಡಿದಳು "ನನಗೆ ಗೊತ್ತಿತ್ತು ಕಣ್ರೀ ... ಎಲ್ಲ ಆಗಿದ್ದು ಅವನಿಂದಲೇ"

ತಲೆಬುಡ ಅರ್ಥವಾಗಲಿಲ್ಲ ಕಣ್ರೀ ! "ಯಾರಿಂದ ಏನಾಯ್ತು" ಅಂದೆ.

ವಿಶಾಲೂ ನುಡಿದಳು "ನಿಮಗೆ ವಿಷಯ ಗೊತ್ತಿಲ್ವೇ? ಈಗ ಹೊಸದಾಗಿ ಒಂದು ರಾಶಿ ಸೇರ್ಪಡೆಯಾಗಿದೆ. 'Ophiuchus' ಅಂತ. ಅದು ಸೇರಿದ ಮೇಲೆ, ನಮ್ಮ ಜನ್ಮ ದಿನಗಳು ಆ ರಾಶಿ ಈ ರಾಶಿ ಅಂತ ಪಕ್ಷಾಂತರ ಮಾಡಿವೆ. ಪೆದ್ದು ಪೆದ್ದಾಗಿ ಇರುವವರು ರಾಶಿ ಚೇಂಜ್ ಆದ ಮೇಲೆ ಏನೇನೋ ಆಗಿದ್ದಾರಂತೆ !! ಈಗ ನೀವೇ ನೋಡಿ, ನಿಮ್ಮ ಬಾಯಲ್ಲಿ ಎಂತಹ ಅದ್ಬುತ ಕವಿತೆ ಹೊರಬಿತ್ತು?"

ಕವನವೇನೋ ಚೆನ್ನಾಗಿದೆ ನಿಜ. ಆದರೆ ಅದು ನಾನು ಹೇಳಿದ್ದಲ್ಲಾ !

ಹೋದ ವಾರ ಯಾರದೋ ಮನೆಗೆ ಊಟಕ್ಕೆ ಹೋಗಿದ್ದೆವು. ಊಟವಾದ ಮೇಲೆ ಮನೆ ಯಜಮಾನರಿಗೆ ಮಲಗಿ ರೂಢಿಯಂತೆ. ವಿಶಾಲೂ ಮತ್ತು ಆ ಮನೆಯ ಯಜಮಾನಿ ಏನೋ ಸೀರೆ-ಒಡವೆ ಅಂತ ಏನೋ ಹರಟುತ್ತಿದ್ದಳು. ಆ ಮನೆ ಯಜಮಾನ ನನಗೆ "ನಿಮ್ಮ ಮನೆಯವರು ಬಂದ ಮೇಲೆ ನೀವು ಹೊರಡಿ." ಅಂತ ಹೇಳಿ ಒಳಗೆ ಹೋಗಿ ಮಲಗೇ ಬಿಡೋದೇ?

ಇನ್ನು ಇವಳು ಬರೋವರೆಗೂ ಏನು ಮಾಡೋದು ಅಂತ ಅಲ್ಲೇ ಸಿಕ್ಕ ಯಾವುದೋ ಪುಸ್ತಕ ತೆರೆದಿಟ್ಟುಕೊಂಡೆ. ಅಲ್ಲಿ ಸಿಕ್ಕ ಕವನವಿದು. ಏನೋ ಈ ಸಂದರ್ಭಕ್ಕೆ ಸರಿಯಾಗಿತ್ತು ಅಂತ ಹೇಳಿದೆ, ಅಷ್ಟೇ !

ಅಷ್ಟರಲ್ಲಿ ವಿಶಾಲೂ ಮತ್ತೆ ನುಡಿದಳು "ಮತ್ತೊಂದು ರಾಶಿ ಹುಟ್ಟಿಕೊಂಡು, ನೀವು ಯಥಾಸ್ಥಿತಿಗೆ ಹೋಗುವ ಮುನ್ನ, ಒಂದು ಕಥೆ ಬರೀರಿ. ಕಥೆ ಹೇಗಿರಬೇಕೂ ಅಂದ್ರೆ, ಪ್ರೊಡ್ಯೂಸರ್’ಗಳು ಆ ಕಥೆಯನ್ನು ಸಿನಿಮಾ ಮಾಡಬೇಕೂ ಅಂತ ಕ್ಯೂ ನಿಲ್ಲಬೇಕು."

ಅಲ್ಲ, ಆಸೆಗೂ ಒಂದು ಮಿತಿ ಬೇಡವೇ? ಹೋಗ್ಲಿ ಬಿಡಿ, ಏನೋ ಬದಲಾವಣೆ ಆಗಿರಲೇಬೇಕು ಅಂತ ನನಗೂ ಅನ್ನಿಸುತ್ತಿದೆ. ಯಾಕೆ ಅಂದ್ರೆ, ಈ ಮುಂಚೆ ನನಗೆ ಓದಿದ್ದು ಒಂದೂ ನೆನಪಿನಲ್ಲಿ ಇರುತ್ತಿರಲಿಲ್ಲ. ಬೇಕಿದ್ರೆ ನನ್ನ ಸ್ಕೂಲ್ ಟೀಚರ್’ನೇ ಕೇಳಿ ... ಅಂಥಾದ್ರಲ್ಲಿ ಈ ಕವನ ನೆನಪಿದೆ, ಅದರಲ್ಲೂ ಸಂದರ್ಭಕ್ಕೆ ತಕ್ಕಂತೆ ಅದನ್ನು ಬಳಸಿಕೊಂಡಿದ್ದೀನಿ ಅಂದ್ರೇ ....

"ಆಯ್ತು ಕಣೆ, ಈಗ್ಲೇ ಶುರು ಮಾಡ್ತೀನಿ" ಅಂದು ಒಂದು ಪ್ಯಾಡ್’ಗೆ ಹತ್ತು ಬಿಳೀ ಹಾಳೆ ಸಿಕ್ಕಿಸಿಕೊಂಡೆ. "ಇಷ್ಟು ಸಾಕು ಅಂತೀಯಾ?" ... "ರ್ರೀ, ಮೊದಲು ಶುರು ಮಾಡ್ರೀ!"

"ನೋಡು, ಈ ಟೇಬಲ್ ಕಿಟಕಿ ಬಳಿ ಇರಲಿ. ಚೇರಿನಲ್ಲಿ ಕುಳಿತು ಬೀದಿ ನೋಡುವಾಗಲೂ ಏನಾದ್ರೂ ಐಡಿಯಾ ಬರಬಹುದು" ಎಂದು ನುಡಿಯುತ್ತ, ಟೆಬಲ್-ಕುರ್ಚಿಯನ್ನು ಸಿದ್ದ ಮಾಡಿಕೊಂಡೆ. ನಂತರ ಒರೆಸಿದೆ. "ಪೆನ್ ಬದಲು ಪೆನ್ಸಿಲ್ ವಾಸಿ. ಅಳಿಸುವುದು ಸುಲಭ" ಎಂದು ನುಡಿದು, ನಾಲ್ಕು ಪೆನ್ಸಿಲ್’ಅನ್ನು ಸಿದ್ದ ಮಾಡಿಕೊಂಡೆ. ಪೂರ್ಣವಾಗಿದ್ದ ಪೆನ್ಸಿಲ್’ಗಳು ಅರ್ಧವಾಗಿತ್ತು !!

ಹಾಳೆಯ ಮೇಲ್ಭಾಗದ ಮಧ್ಯಕ್ಕೆ ಶ್ರೀ’ಕಾರ ಹಾಕಿ ಮೂಲೆಗೆ ದಿನಾಂಕ್ ಹಾಕಿ ಸುಮ್ಮನಾದೆ. ವಿಶಾಲೂ ಹೇಳಿದಳು "ಬರೀರಿ"

"ಹಾಗೆಲ್ಲ ಸುಮ್ಮನೆ ಬರೆಯೋಕ್ಕೆ ಆಗಲ್ಲ ಕಣೇ. ಐಡಿಯಾ ಬರಬೇಕು" ... "ಅದ್ಯಾವಾಗ ಬರುತ್ತೋ ಏನೋ. ಅನ್ನಕ್ಕೆ ಇಟ್ಟು ಬರ್ತೀನಿ" ಅಂದ ಎದ್ದಳು. ನಾನು "ಬಂತೂ" ಎಂದೆ. "ವಿಷಯ ಏನು" .... "ಅಯ್ಯೋ ವಿಷಯ ಅಲ್ವೇ. ನನಗೆ ಬಂತು. ಬಚ್ಚಲಿಗೆ ಹೋಗಬೇಕೂ. ನೀನು ಅನ್ನಕ್ಕೆ ಇಡು. ಈಗ್ಲೇ ಬರ್ತೀನಿ" ಅಂತ ಎದ್ದು ಹೋದೆ ....

ಅವಳು ಕಥೆ ಬರಿ ಎಂದು ಹೇಳಿ ಎರಡು ತಾಸು ಕಳೆದರೂ ಒಂದೂ ಸಾಲು ಬರೆದಿರಲಿಲ್ಲ. ಏನು ಬರೀಬೇಕು, ಹೇಗೆ ಬರೀಬೇಕು ಅಂತ ಗೊತ್ತಾಗ್ತಾನೇ ಇಲ್ಲ. ಅದಕ್ಕಿಂತ ಮುಖ್ಯವಾದ ಪ್ರಶ್ನೆ ಎಂದರೆ ’ಯಾಕೆ ಬರೀಬೇಕು’ ಅಂತ. ಸದ್ಯದ ಸೂಚನೆ ನೋಡಿದರೆ ’ಮಧ್ಯಾನ್ನದ ನಿದ್ದೆ ಬಂದಿದೆ ಖೋತ’ ...

ಅಡುಗೆ ಸಿದ್ದವಾಯ್ತು. ಊಟವಾದ ಮೇಲೆ ಬರೆಯೋಣ ಎಂದುಕೊಂಡು ಊಟಕ್ಕೂ ಸಿದ್ದವಾದೆ. ಊಟವೂ ಆಯ್ತು. ಪೆನ್ನು ಹಿಡಿದು ಕುರ್ಚಿಯ ಮೇಲೆ ಕೂತೆ. ಹಾಗೇ ಕಣ್ಣುಗಳು ಎಳೆಯ ತೊಡಗಿತು. ಏನೋ ಶಬ್ದವಾದಂತಾಗಿ ಫಕ್ಕನೆ ಕಣ್ಣೂ ಬಿಟ್ಟರೇ, ಕಾಗದವೆಲ್ಲ ರಕ್ತ !!!

ಮೊದಲ ಕಥೆಯನ್ನೇ ರಕ್ತದಲ್ಲಿ ಬರೆಯುತ್ತಿದ್ದೇನೆ ಎನಿಸಿತು. ವಿಶಾಲೂ (ಸಿ)ನುಡಿದಳು "ಎನ್ರೀ ಇದು ... ಎಲೆ-ಅಡಿಕೆ ಹಾಕಿಕೊಂಡು ಅದರ ಕೆಂಪನ್ನೆಲ್ಲ ಹಾಳೆ ಮೇಲೆ ಒಸರಿಕೊಂಡಿದ್ದೀರಾ?" ಥತ್!

ಮೊದಲ ಹಾಳೆ ಕ.ಬು ಸೇರುತ್ತಿದ್ದಂತೇ, ಏನೋ ಬಂದಂತೆ ಆಯಿತು ... ಅದು ಐಡಿಯಾ ... ಬರೆದೆ ...

"ಒಂದಾನೊಂದು ಊರಿನಲ್ಲಿ ಹೊಸ ದಂಪತಿಗಳಿಗೆ ಹೊಸ ಮಗುವಾಯ್ತು" ಅಂತ. ವಿಶಾಲೂ ಅದನ್ನು ಓದಿ ಬಿದ್ದೂ ಬಿದ್ದೂ ನಕ್ಕಳು. ನಾನು ಸೀರಿಯಸ್ ಕಥೆ ಬರೆಯಲು ಹೊರಟೆ ಇವಳು ಅದನ್ನು ಕಾಮಿಡಿ ಮಾಡಿಬಿಟ್ಟಳಲ್ಲಾ? "ಏನಾಯ್ತು" ಎಂದೆ. "ಅಲ್ರೀ, ಯಾರಾದರೂ ಹಳೇ ಮಗು ಹೆರುತ್ತಾರಾ?" ...

ಹೌದಲ್ವೇ? ಆ ಸಾಲನ್ನು ಹೊಡೆದು ಹಾಕಿದೆ. ಹೊಸ ಹಾಳೆಯ ಬದಲು ಅದೇ ಹಾಳೆಯ ಮೇಲೆ ಬರುಯುತ್ತೇನೆ ಎಂದು ನಿರ್ಧರಿಸಿದೆ ... ವಿಶಾಲೂ ಹೇಳಿದ ಮೇಲೆ !!!

"ಮುಂಜಾವಿನ ಸೂರ್ಯ ಮುಳುಗುತ್ತಿರಲು, ಹಸಿರು ನಾಡಿನ ಹಸಿರು ಕಾಡಿನಲ್ಲಿ ಹಸಿರು ಗಿಣಿಯೊಂದು ಹಚ್ಚನೆಯ ಹಸಿರು ದನಿಯಲ್ಲಿ ಹಾಡತೊಡಗಿತ್ತು" ಅದನ್ನು ಓದಿದ ವಿಶಾಲೂ ಮೆಚ್ಚುಗೆಯ ದೃಷ್ಟಿಯಿಂದ ನೋಡುತ್ತ "ಸಕತ್ ಕಾಮಿಡಿ ಬರೀತೀರ" ಎಂದು ನಗಲು ಶುರು ಮಾಡಿದವಳು ಕಣ್ಣಲ್ಲಿ ನೀರು ಬರೋ ತನಕ ನಕ್ಕಳು.

ಪೆಚ್ಚು ಮೋರೆ ಹಾಕಿ ಕುಳಿತ ನಾನು "ಈಗೇನಾಯ್ತು ?" ಎಂದೆ

"ಅಲ್ರೀ, ಬೆಳಿಗ್ಗೆ ಸೂರ್ಯ ಮುಳುಗುತ್ತಾನಾ?" "ಅಲ್ವೇ ನಾನು ಹೇಳುತ್ತಿರೋದು, ಇಲ್ಲಿ ಅಂದರೇ ಭಾರತದ ಮುಂಜಾವಿನಲ್ಲಿ ಅಮೇರಿಕದಂತಹ ದೇಶದಲ್ಲಿ ಸೂರ್ಯ ಮುಳುಗುತ್ತಿರಲು ಅಂತ" ಎಂದೆ ... "ಅದ್ಯಾಕೆ ಅಷ್ಟೊಂದು complicated ಆಗಿ ಬರೀಬೇಕು?"

ಕಥೆಗಾರರ ದೃಷ್ಟಿಯಲ್ಲಿ ಓದಬೇಕು ಕಣೇ ಎಂದುಕೊಂಡೆ, ಆದರೆ ಹೇಳಲಿಲ್ಲ.

"ಆಮೇಲೆ, ಅದೇನು ಹಸಿರು ಗಿಣಿಗೆ ಹಸಿರು ದನಿ ?" ಅಂದಳು .. ನಾನೆಂದೆ "ಅಲ್ವೇ, ನಾನು ಹೇಳ್ತಿರೋದು, ಉದಯಿಸುತ್ತಿರುವ ಸೂರ್ಯನ ಹಾಗೆ ಹೊಸದಾಗಿ ದನಿ ಮೂಡಿಸಿಕೊಳ್ಳುತ್ತಿರುವ ಗಿಣಿಯ ದನಿ ಅಂತ. ಹಸಿರು ಎಂದರೆ ಹೊಸತು ಅನ್ನೋ ಅರ್ಥದಲ್ಲೂ ಹೇಳಬಹುದು ಕಣೆ"

ವಿಶಾಲೂ "ರ್ರೀ, ಅದೆಲ್ಲ ಬೇಡ. ಸಿಂಪಲ್ಲಾಗಿ ಬರೀರಿ. ತಲೆ ತುಂಬ ಕೂದಲು ಇರೋವ್ರು ನಿಮ್ಮ ಕಥೆ ಓದಿ ಮುಗಿಸೋ ಮುನ್ನ ತಲೆ ಬೋಳಾಗೋ ಹಾಗೆ ಮಾಡಬೇಡಿ"

ಹೊಸ ಅಲೆಯ ಕಥೆ ಬರೆದರೆ ಹೇಗೆ ಅನ್ನಿಸಿತು. ಶುರು ಮಾಡಿದೆ ...

"ರುದ್ರತಾಂಡವ ನಟರಾಜನಂತೆ ಸುರುಳಿ ಸುರುಳಿ ಕೂದಲುಳ್ಳವನಾದ ರುದ್ರಪ್ಪನು ಕೆಂಗಣ್ಣು ಉಳ್ಳವನಾಗಿ, ಮುಖದಲ್ಲಿ ಕ್ರೋಧದ ಬೆಂಕಿಯನ್ನೇ ಹೊತ್ತು, ತ್ರಿಶೂಲವನ್ನು ಕೈಯಲ್ಲಿ ಪಿಡಿದವನಂತೆ ಫೋರ್ಕನ್ನು ಹಿಡಿದು ಝಳಪಿಸುತ್ತ, ಮತ್ತೇರಿದ ಮದಗಜದಂತೆ ದಾಪುಗಾಲು ಹಾಕುತ್ತ, ಕೈಯಲ್ಲಿ ತಟ್ಟೆಯನ್ನು ಪಿಡಿದವನೇ, ಫೋರ್ಕನ್ನು ಬನ್ನಿಗೆ ಚುಚ್ಚಿ ಎತ್ತಿ ಹಿಡಿದು, ಒಮ್ಮೆ ಹಿಂದಿರುಗಿ ನೋಡಿ, ಕಚಕ್ಕೆಂದು ತಿಂದಿರಲೂ, ಸಾಲಿನಲ್ಲಿ ನಿಂತಿದ್ದವರು ತಮ್ಮ ತಟ್ಟೆಗಳನ್ನು ತಮಗೇ ಅರಿವಿಲ್ಲದಂತೆ ನೆಲಕ್ಕೆ ಹಾಕಿದರು"

ವಿಶಾಲೂ’ಗೆ ಇನ್ನು ತಡೆಯಲಾಗಲಿಲ್ಲ. ಹೊಟ್ಟೆ ಗಟ್ಟಿಯಾಗಿ ಹಿಡಿದುಕೊಂಡು ನಗಲಾರಂಭಿಸಿದಳು. "ಅಲ್ರೀ ಜೈಲಿನಲ್ಲಿ ಊಟಕ್ಕೆ ಕ್ಯೂ ನಿಂತ ಖೈದಿ ಬಗ್ಗೆ ಬರೀತಿರೋ ಹಾಗಿದೆ. ಸಕತ್ ಕಾಮಿಡಿಯಾಗಿದೆ. ಮುಂದುವರೆಸಿ. ಓದುವವರು ಕೋಮಲ್’ನನ್ನು ಮನಸ್ಸಿಗೆ ತಂದುಕೊಂಡು ಓದಿದರಂತೂ ಒಳ್ಳೇ ಮಜ ಕೊಡುತ್ತೆ"

ಇದೊಳ್ಳೇ ಕೇಸ್ ಆಯ್ತಲ್ಲ .... ಅತೀ ಸೀರಿಯಸ್ಸಾಗಿ ಬರೆದರೂ ಇವಳು ನಗುತ್ತಾ ಇದ್ದಾಳಲ್ಲಾ?

ತಲೆಯೆಲ್ಲ ಬಿಸಿ ಆಗಿತ್ತು. ಬಿಸಿ ಬಿಸಿ ಕಾಫಿ ಕುಡಿದು ಹೊಸಾ ಆಲೋಚನೆ ಮಾಡೋಣ ಎಂದುಕೊಂಡೆ. ವಿಶಾಲೂ ಕಣ್ಣೀರು ಒರೆಸಿಕೊಂಡೆ ಕಾಫಿ ಮಾಡಲು ಹೋದಳು.

ಹಾಗೇ ಕಿಟಕಿಯ ಕಡೆ ನೋಡುತ್ತ ಕುಳಿತೆ. ವಕ್ರಮೂತಿ ಸುಂದರೇಶ ಬರುತ್ತಿದ್ದ. ಸದ್ಯ ’ಬ್ರೇಕ್’ ಸಿಕ್ತು ಅಂತ ಎದ್ದು ಹೋದೆ ಸ್ವಾಗತಿಸಲು.

"ಬಾಪ್ಪಾ ಸುಂದ್ರೂ. ಹೇಗಿದ್ದೀಯಾ?" ಎಂದೆ. ಅವನಿಗೆ ಏನು ಮಾಡಬೇಕೂ ಅಂತ ತೊಚದೆ ನಿಂತಿದ್ದ. ಅವನ ಜೀವನದಲ್ಲಿ ನಾನು ಈ ರೀತಿ ಸ್ವಾಗತಿಸುತ್ತಿರುವುದು ಇದೇ ಮೊದಲು. ಸುಧಾರಿಸಿಕೊಂಡೇ ಏನು ಗ್ರಹಚಾರಾನೋ ಏನೋ ಎಂದುಕೊಂಡು ಒಳಗೆ ಬಂದ.

ವಿಶಲೂ ಅವನಿಗೂ ಕಾಫಿ ಬಸಿದು ಕೊಡುತ್ತ ನಾನು ಕಥೆಗಾರನಾಗಿರುವ ಕಥೆಯನ್ನು ತಿಳಿಸಿದಳು. ಅಷ್ಟೇ ಸಾಲದು ಎಂಬಂತೆ ನನ್ನ ಕಥೆಗಳನ್ನು ಅವನಿಗೆ ಓದಲು ಕೊಟ್ಟಳು.

ಇನ್ನೇನು, ಅವನೂ ನಗಲು ಶುರು ಮಾಡುತ್ತಾನೆ ಎಂದುಕೊಂಡೆ. ಹಾಗಾಗಿದ್ದರೆ ಹಾಸ್ಯ ಬರಹ ಶುರು ಮಾಡಬಹುದಿತ್ತು. ಆದರೆ ಸುಂದರೇಶನ ಕಣ್ಣಲ್ಲಿ ಒಂದೇ ಸಮನೆ ನೀರು.

ನನಗೆ ಗಾಭರಿಯಾಯ್ತು. ನನ್ನ ಕಥೆ ಓದಿದ ಈ ಎರಡನೇ ಪ್ರಾಣಿಗೂ ಏನೇನೋ ಆಗುತ್ತಿದೆ. "ಯಾಕೋ ನಿನಗೇನಾಯ್ತೋ?"

ನಡುಗುವ ದನಿಯಲ್ಲೇ ಹೇಳಿದ "ಏನು ಕಥೆಗಳೋ ಇವು?" ... ನನಗೀಗ ತಲೆ ಕೆಡುವುದೊಂದೇ ಬಾಕಿ ... ಹೀಗೆ ಹೇಳಿದರೆ ಏನೂ ಅಂತ ಅರ್ಥ ಮಾಡಿಕೊಳ್ತೀರಾ?

ಸುಂದರೇಶ ನುಡಿದ "ಮೊದಲ ಕಥೆಯಲ್ಲಿ ನವ ದಂಪತಿಗಳ ಜೀವನದಲ್ಲಿ ಹೊಸ ಹರ್ಷ ಮೂಡಿತು ಅಂತ ಎಷ್ಟು ಚೆನ್ನಾಗಿ ಹೇಳಿದ್ದೀಯ ಕಣೋ". ಸಕತ್ ! ಹಾಗೆ ಹೇಳಿದ್ದೀನಿ ಅಂತ ನನಗೇ ಗೊತ್ತಿರಲಿಲ್ಲ !!!

"ಇನ್ನು ಎರಡನೇ ಕಥೆ. ಬೆಳಿಗ್ಗೆಯೇ ಸೂರ್ಯ ಮುಳುಗುವ ಪ್ರಳಯ ಕಾಲದಂತಹ ಪರಿಸ್ಥಿತಿ ಬಂದರೂ ಹಾಡುವ ಗಿಣಿ ತನ್ನ ಕರ್ತವ್ಯ ಮರೆಯುವುದಿಲ್ಲ ಅನ್ನೋ ಸಾರಾಂಶ ಅದ್ಬುತ ಕಣೋ".

ಕಥೆ ಕೆಟ್ಟದಾಗಿದ್ದರೂ ವಿಮರ್ಶಕ ಚೆನ್ನಾಗಿದ್ದರೆ ಆ ಕಥೆ ಗೆಲ್ಲುತ್ತೆ ಅನ್ನೋದು ಈಗ ಅರ್ಥವಾಯ್ತು !!

"ಇನ್ನು ನಿನ್ನ ಮೂರನೆ ಕಥೆ. ತ್ರಿಶೂಲಕ್ಕೂ ಫೋರ್ಕ್’ಗೂ ಇರುವ ಸಾಮ್ಯತೆಯ ಸೊಗಸು. ಅಲ್ಲದೇ, ಆ ಪಾತ್ರಕ್ಕೆ ನೀ ಕೊಟ್ಟಿರುವ ರುದ್ರ ರೂಪ. ಅಲ್ಲಾ, ಬನ್ನನ್ನು ಚುಚ್ಚುವುದರಲ್ಲೇ ತೋರುವ ಆ ಅಕ್ರೋಶ ಇನ್ನು ವೈರಿಯ ಬೆನ್ನು ಕಂಡರೆ ಏನಾಗಬಹುದು? ಬೊಂಬಾಟ್ ಕಣೋ."

ನಾನು ಕುರ್ಚಿಯೇ ಮೇಲೇ ಕುಳಿತಿರಲಿಲ್ಲ !! ಎಲ್ಲೋ ಮೋಡಗಳ ಮಧ್ಯೆ ಇದ್ದೆ !!! Cloud 9 ಅಂತಾರಲ್ಲ ಹಾಗೆ ...

ಭಾನುವಾರ ಆಯ್ತು ... ಸೋಮವಾರ ಕೆಲಸಕ್ಕೆ ಹೋಗುವ ಹೊತ್ತಿಗೆ ಸುಂದರೇಶ ಆಗಲೇ ವಕ್ಕರಿಸಿ ಒಂದಿಬ್ಬರಿಗೆ ನನ್ನ ಕಥಾಶಕ್ತಿಯನ್ನು ಯಥಾಶಕ್ತಿ ವಿವರಿಸಿದ್ದ.

ಕೊನೆಗೆ ಅದು ಅಪ್ಪಿ-ತಪ್ಪಿ ಬಾಸ್ ಕೈಲಿ ಬಿತ್ತು. ಅವರು ಅದನ್ನು ಓದಿ ’ಈ ರೀತಿ ಕೆಟ್ಟ ಕೆಟ್ಟ ಕಥೆ ಬರೆಯೋದು ಬಿಟ್ಟು, ಮನೆಗೆ ಒಂದಿಷ್ಟು ಫೈಲ್ಸ್ ತೆಗೆದುಕೊಂಡೂ ಹೋಗಿ ಮುಗಿಸಿ’ ಅನ್ನೋದೆ

ಜೊತೆಗೆ "ಏನು ಸಡನ್ನಾಗಿ ಈ ಅವತಾರಾ?" ಎಂದರು. ನಾನು 'Ophiuchus' ಬಗ್ಗೆ ಹೇಳಿದೆ. ಹೊಸ ಸೇರ್ಪಡೆ ಬಾಸ್ ವಿಷಯದಲ್ಲಿ ಏನೂ ಪ್ರಭಾವ ಬೀರಿದಂತೆ ಇಲ್ಲ ...

ಅವರು ಅದಕ್ಕೆ ಹೇಳಿದರು "ಮೊದಲನೆಯದಾಗಿ ಈ ಹೊಸ ರಾಶಿ effect ಮುಂದೆ ಹುಟ್ಟುವವರಿಗೆ ನಿಮಗಲ್ಲ. ನಿಮ್ಮನ್ನು ಬದಲಿಸಲು ರಾಶಿಗೇನು ಬ್ರಹ್ಮನಿಗೂ ಆಗೋಲ್ಲ. ಎರಡನೆಯದಾಗಿ, ಈ ಹೊಸ ರಾಶಿ ಬರೀ 'Solar calendar' ಅಂದರೆ ಸೌರಮಾನ ಪದ್ದತಿ ಅನುಸರಿಸುವವರಿಗೆ ಮಾತ್ರ ಒಪ್ಪುತ್ತೆ. ನಾವು 'Lunar calendar' ಅಂದ್ರೇ ಚಾಂದ್ರಮಾನ ಅನುಸರಿಸುವವರು .. ಅರ್ಥವಾಯಿತೇ?"

ಏನರ್ಥವಾಯಿತೋ ಏನಿಲ್ಲವೋ ’ಯಸ್ ಬಾಸ್’ ಅಂದೆ ...

ನನಗೆ ಅರ್ಥವಾಗಿದ್ದು ಇಷ್ಟೇ ... ನಮ್ಮ ಅಫೀಸಿನಲ್ಲಿ ನನ್ನೊಂದಿಗೆ ಸುಂದರೇಶ ಮತ್ತೈದಾರು ಜನರಿಗೆ ಹೊಸ ರಾಶಿ ಎಫೆಕ್ಟ್ ಇಲ್ಲ. ಆದರೆ ನನ್ನ ಜೂನಿಯರ್’ಗಳಾದ ರೇಣು ಕುಟ್ಟಿ, ವಾಸನ್, ಮಹದೇವನ್ ಇವರುಗಳು ಇದ್ದಕ್ಕಿದ್ದಂತೆ ಬುದ್ದಿವಂತರಾಗಿ ನನಗೆ ಸೀನಿಯರ್’ಗಳಾದರೆ ಏನು ಗತಿ? ಯಾಕಂದರೆ ತಮಿಳರು ಮತ್ತು ಮಲಯಾಳಿ ಭಾಷಿಗರು ಸೌರಮಾನ ಪದ್ದತಿಯಂತೆ ಅನುಸರಿಸೋದು !!!

ಇಷ್ಟೂ ದಿನವೂ ಇದ್ದ ಈ ರಾಶಿ ಈಗ ಧುತ್ತನೆ ಎಲ್ಲಿಂದ ಬಂತು? ರಾಶಿಯಲ್ಲಿ ಗ್ರಹಕ್ಕೇನು ಗೊತ್ತು ಇವನು ನೆನ್ನೆ ಹುಟ್ಟಿದವನು ಅವಳು ಇಂದು ಹುಟ್ಟಿದವಳು ಎಂದೆಲ್ಲ? ಒಂದು ಗ್ರಹ ಒಬ್ಬೊಬ್ಬರಿಗೆ ಒಂದೊಂದು ರೀತಿ ಪರಿಣಾಮ ತೋರಲಿಕ್ಕೆ ಎನಾದ್ರೂ cut off line ಅಂತೇನಾದರೂ ಇದೆಯೇ?

ತಲೆ ಕೆಟ್ಟೂ ಕೆರ ಹಿಡಿದು ಹೋಯ್ತು ! ಅದೆಲ್ಲ ಬಿಡಿ, ಈಗ ನನ್ನ ಕಥ್ಯ ವಿಷಯಕ್ಕೆ ಬನ್ನಿ.

ನಾನು ಚಿಂತೆಯಲ್ಲಿ ಬರೆದಿದ್ದು ಸುಂದರೇಶನಿಗೆ ಚಿಂತನೆಯಲ್ಲಿ ಬರೆದಂತೆ ಕಂಡಿತು !! ನಾನು ಗಂಭೀರವಾಗಿ ಬರೆದೆ ಅಂದುಕೊಂಡರೇ ವಿಶಾಲೂ’ಗೆ ಹಾಸ್ಯವಾಗಿತ್ತು !!! ನಾನು ಕಥೆ ಅಂತ ಬರೆದರೆ ಬಾಸ್ ಕಣ್ಣಲ್ಲಿ ಅದು ಟೈಮ್ ವೇಸ್ಟು !!!!

ಒಟ್ಟಿನಲ್ಲಿ ನನಗೆ ಕಥೆ ಬರೆಯೋಕ್ಕೆ ಬರೋಲ್ಲ ಅನ್ನೋದು ಸ್ಪಷ್ಟವಾಯಿತು ...

ಇದನ್ನು ನೀವೂ ಒಪ್ಪುತ್ತೀರಾ?

----------

( ವಿ.ಸೂ: ಹೊಸದಾಗಿ ಸೇರ್ಪಡೆಯಾದ ರಾಶಿಯ ಮಾಹಿತಿ ಹೀಗಿದೆ. ಇದರ ಪ್ರಭಾವ ಎಷ್ಟರ ಮಟ್ಟಿಗೆ, ಯಾರ ಮೇಲೆ ಹೇಗೆ ಎಂಬೆಲ್ಲ ಮಾಹಿತಿಗಳು ಇನ್ನೂ ವಿಚಾರಣೆಯಲ್ಲಿದೆಯಂತೆ. ಸಂಪದಿಗರಲ್ಲಿ ಯಾರಿಗಾದರೂ ಹೆಚ್ಚಿಗೆ ಮಾಹಿತಿ ಗೊತ್ತಿದ್ದಲ್ಲಿ ಹಂಚಿಕೊಳ್ಳಿ )

Capricorn : January 20- to February 16

Aquarius : February 16 to March 11

Pisces : March 11 to April 18

Aries : April 18 to May 13

Taurus : May 13 to June 21

Gemini : June 21 to July 20

Cancer : July 20 to August 10

Leo : August 10 to September 16

Virgo : September 16 to October 30

Libra : October 30 to November 23

Scorpio : November 23 to November 29

Ophiuchus : November 29 to December 17

Sagittarius : December 17 to January 20


ದೂರದರ್ಶನದ ಆ ದಿನಗಳು ...

ಸಂಜೆ ನಾಲ್ಕು ಘಂಟೆ ಐವತ್ತೈದು ನಿಮಿಷ. ಮನೆಯ ಕಪ್ಪು ಬಿಳುಪು ಟಿ.ವಿ ಆನ್ ಆಯಿತು. ಅಂದು ನಮಗೆ ಕಲರ್ ಟಿ.ವಿ ಅಂದ್ರೆ ಆಗ್ತಿರಲಿಲ್ಲ ... ಯಾಕೆ ಅಂದ್ರ? ನಮ್ಮ ಮನೆಯಲ್ಲಿ ಇರಲಿಲ್ಲವಲ್ಲ ಅದಕ್ಕೆ !

ಹೋಗ್ಲಿ ಬಿಡಿ, ಗಿಜಿ ಗಿಜಿ ಗಿಜಿ ಸದ್ದಿನೊಂದಿಗೆ ಗಿಜಿ ಗಿಜಿ ದರ್ಶನ. ಪ್ರತಿ ಹದಿನೈದು ಸೆಕೆಂಡ್’ಗೆ ಘಂಟೆ ನೋಡೋದು.
"ಒಂದೆರಡು ನಿಮಿಷ ಬೇಗ ಶುರು ಮಾಡಿದರೆ ಇವರ ಗಂಟೇನು ಹೋಗುತ್ತೆ?" "ಸ್ಕ್ರೀನ್ ಮೇಲೆ ಬರೋ ಮುಂಚೆ ಮುಖಕ್ಕೆ ಪೌಡರ್ ಬಳಿದುಕೊಳ್ಳಬೇಡವೇ?" "ನೋಡು ಆಗಲೇ ಐದಾಯ್ತು. ಇನ್ನೂ ಬರಲಿಲ್ಲ ಜನ" "ಮನೆ ಗಡಿಯಾರ ಸ್ವಲ್ಪ ಮುಂದಿದೆ" "ಶುರು ಮಾಡೋದು ಈ ಲಕ್ಷಣ. ಜೊತೆಗೆ ಪ್ರತೀ ಸಾರಿ ಜಾಹೀರಾತು ಆದ ಮೆಲೆ ಒಂದು ನಿಮಿಷ ಆಗಿರೋದನ್ನೇ ತೋರಿಸೋದು. ಕೊನೆಗೆ ಸಮಯ ಸಾಕಾಗಲಿಲ್ಲ ಅಂತ ಕಟ್ ಮಾಡೋದು"
ಅಕ್ಕಿ-ಕಾಳುಗಳ ದರ್ಶನ ಮಾಯವಾಗಿ, ಪಟಾ-ಪಟಿ ಮೂಡಿತು. ಜೊತೆಗೆ ಕುಯ್ಯ್ ಅಂತ ಶಬ್ದ.
"ಅಬ್ಬ, ಅಂತೂ ಶುರುವಾಯ್ತು ನೋಡು"
ನಂತರ ದೂರದರ್ಶನದ ಚಿನ್ಹೆಯು ದೂರದಲ್ಲಿ ಕಾಣಿಸ ತೊಡಗಿ, ಅದರೊಂದಿಗೆ ಇಂಪಾದ ಸಂಗೀತವೂ ಶುರುವಾಯ್ತು. ನಮ್ಮಜ್ಜಿ ಟಿ.ವಿ. ಬದಿಯಲ್ಲಿ ಚೇರ್ ಹಾಕಿಕೊಂಡು ಕೂತಿದ್ದರು. ಪರದೆಯ ಮೇಲೆ ’ಅಪರ್ಣ’ ಅವರ ಮುಖ ಮೂಡಿದ ಕೂಡಲೇ ಇವರೂ ಮುಂದೆ ಬಗ್ಗಿದರು "ಸ್ವಲ್ಪ ಹಿಂದೆ ಬನ್ನಿ ಅಜ್ಜೀ ... ಬರೀ ನಿಮ್ಮ ತಲೆ ಕಾಣ್ತಿದೆ". ಸೋಫಾ ಅಲಂಕರಿಸಿದ್ದವರಲ್ಲಿ ಒಂದಿಬ್ಬರು ತಾವಾಗೇ ಕೆಳಗಿಳಿದರು.
"ಟಿ.ವಿ ಮೇಲೆ ಸರಿಯಾಗಿ ಲೈಟ್ ಬೀಳ್ತಿದೆ. ಆ ಓಣಿ ಲೈಟ್ ಆರಿಸ್ರೋ". ಒಂದು ನಿಮಿಷ ಕಳೆಯಿತು. "ಯಾರಿಗೂ ಏಳೋಕ್ಕೆ ಕೈಲಾಗೋಲ್ಲ. ನಾನೇ ಏಳ್ತೀನಿ. ಈ ಗೋಡೆ ಕಡೆ ನನ್ನ ಜಾಗ. ಯಾರೂ ಕೂತ್ಕೋಕೂಡ್ದು". ಸಿಡುಗುಟ್ಟಿಕೊಂಡೇ ಎದ್ದು ದೀಪವಾರಿಸಿ ಮತ್ತೆ ಕುಳಿತುಕೊಂಡರವರು.
ಇದು ಅಂದಿನ ದಿನಗಳ ಒಂದು ಸಣ್ಣ ನೋಟವಷ್ಟೇ.... ಇಂದು, ಆರದ ನಂದಾದೀಪದಂತೆ ಇಪ್ಪತ್ತು ನಾಲ್ಕು ಘಂಟೆ, ನೂರಾರು ಚಾನಲ್’ಗಳಲ್ಲಿ, ಒಂದಲ್ಲಾ ಒಂದು ಕಾರ್ಯಕ್ರಮಗಳು ಮೂಡಿ ಬರುತ್ತಲೇ ಇರುವಾಗ ಇಂತಹ ದೃಶ್ಯಗಳು ಮತ್ತೆ ಬರಲಾರವು ಅಲ್ಲವೇ?
ದಿನ ನಿತ್ಯದಲ್ಲಿ, ಸಂಜೆ ಐದಕ್ಕೆ ಕಾರ್ಯಕ್ರಮಗಳು ಶುರುವಾದರೆ ರಾತ್ರಿ ಎಂಟೂವರೆಗೆ (ಅಥವಾ ಎಂಟೂ-ನಲವತ್ತು?) ರಾಷ್ಟ್ರೀಯ ಕಾರ್ಯಕ್ರಮಕ್ಕೆ ಬಿಟ್ಟು ಕೊಡಲೇಬೇಕು. ಮಧ್ಯೆ ಏಳೂವರೆಗೆ ’ಕನ್ನಡದಲ್ಲಿ ವಾರ್ತೆ ”ಕೃಷ್ಣಾ ಗಲಗಲಿ ಅಥವಾ ಈಶ್ವರ್ ದೈತೋಟ’ ಅವರಿಂದ’.
ಎಷ್ಟೋ ಬಾರಿ, ಕಡೆಯಲ್ಲಿ ಕನ್ನಡದವರು ಇನ್ನೂ ಏನೋ ಹೇಳುತ್ತಿರುವಾಗಲೇ ರಾಷ್ಟ್ರೀಯ ಚಾನಲ್’ನವರು ಮುಖಕ್ಕೆ ಅಪ್ಪಳಿಸಿದಂತೆ ರಪ್ಪನೆ ಮುಖ ತೋರುತ್ತಿದ್ದರು. ನಮ್ಮ ಮನೆಯ ಸಕಲ ಕನ್ನಡ ಪ್ರೇಮಿಗಳೂ ಯಥಾಶಕ್ತಿ ಬೈದು ಕೊಂಡು, ಅದರಲ್ಲಿ ಒಬ್ಬರು ತಮ್ಮ ಕೋಪವನ್ನು ಆನ್/ಆಫ್ ನಾಬ್ ಮೇಲೆ ತೋರುತ್ತಿದ್ದರು.
ತಕ್ಷಣವೇ ಹಿಂದಿನಿಂದ ಹಿರಿಯರು "ಮೆತ್ತಗೆ ... ಸ್ವಿಚ್ ಕೈಗೇ ಬಂದೀತು" "ವಾಲ್ಯೂಮ್ ಕಡಿಮೆ ಮಾಡದೆ ಆರಿಸಬೇಡಿ ಎಂದು ಎಷ್ಟು ಹೇಳಿದರೂ ಯಾರಿಗೂ ಅರ್ಥವೇ ಆಗೋಲ್ಲ" "ಮೊನ್ನೆ ಸುಬ್ಬಣ್ಣನ ಮನೆಯಲ್ಲಿ ಹೀಗೇ ಆಗಿ ಟಿ.ವಿ ಆನ್ ಮಾಡಿದ ಕೂಡಲೇ ಹೈ-ವೋಲ್ಟೇಜ್’ನಿಂದಾಗಿ ಜೋರಾಗಿ ಶಬ್ದ ಬಂದು, ಟಿ.ವಿ ಕೆಟ್ಟೇ ಹೋಯ್ತಂತೆ" "ಅದೇನೋ ಹೊಸದಾಗಿ ಸ್ಟೆಬಿಲೈಜರ್ ಅಂತ ಬಂದಿದೆಯಂತೆ? ಅದನ್ನು ತರಬೇಕು"
ಇಂದಿನವರಿಗೆ ನಗು ಬರಬಹುದು. ಅಂದಿನ ಹಲವು ಟಿ.ವಿ.ಗಳಿಗೆ ಬಾಗಿಲು/ಬೀಗ ಇತ್ತು. ಶಾಲೆಗಳಲ್ಲಿ ನನ್ನ ಕೆಲವು ಸ್ನೇಹಿತರು ಅದೇನು ನಾಟಕ ಆಡುತ್ತಿದ್ದರು ಎಂದರೇ ’ನಮ್ಮಪ್ಪ ಟಿ.ವಿ. ನೋಡಿದರೆ ಹಾಳಾಗ್ತೀರ ಅಂತ ಹೇಳಿ ಬೀಗ ಹಾಕಿ, ಕೀ ಆಫೀಸ್’ಗೆ ತೊಗೊಂಡು ಹೋಗ್ತಾರೆ ಗೊತ್ತಾ’ ಅಂತ ಒಬ್ಬ ಅಂದರೆ, ಮತ್ತೊಬ್ಬ ’ನಮಗೆ ಪರೀಕ್ಷೆ ಇದ್ದರೂ ಸರಿ, ಕ್ವಿಜ್ ಕಾರ್ಯಕ್ರಮ ನೋಡಲೇಬೇಕು. ಇಲ್ದೆ ಇದ್ರೆ ನಮ್ಮಪ್ಪ ಬೈತಾರೆ ಗೊತ್ತಾ’ ಅಂತ ಇನ್ನೊಬ್ಬ.
ಬರೀ ಇತರೇ ಪುರಾಣ ಅಯ್ತು ಅಂದಿರಾ? ಈ ದೃಶ್ಯಗಳು ಅಂದಿನ ಮಧ್ಯಮವರ್ಗದವರ ಮನೆಯಲ್ಲಿ ಸಾಮಾನ್ಯ ದೃಶ್ಯ. ಹೋಗ್ಲಿ ಬಿಡಿ, ಅಂದಿನ ಕೆಲವು ಕಾರ್ಯಕ್ರಮಗಳತ್ತ ಒಂದು ಕಿರುನೋಟ ಬೀರೋಣ ....
ಸೋಮವಾರ ಸಂಜೆ ಏಳು ಘಂಟೆಗೆ ’ಶ್ರೀ. ಬಾಲಮುರುಳಿಕೃಷ್ಣ’ ಅವರು ನೆಡೆಸಿ ಕೊಡುತ್ತಿದ್ದ ಒಂದು ಕಾರ್ಯಕ್ರಮ ’ನಾದಲಹರಿ’ (?). ಪ್ರತಿ ವಾರ ಒಂದೊಂದು ರಾಗದ ಬಗ್ಗೆ ಮಾಹಿತಿ ನೀಡುತ್ತ, ಆ ರಾಗವನ್ನು ಸಿನಿಮಾದಲ್ಲಿ ಹೇಗೆ ಅಳವಡಿಸಿಕೊಳ್ಳಲಾಗಿದೆ ಎಂದು ಒಂದೆರಡು ಹಾಡುಗಳ ಉದಾಹರಣೆ ಕೊಡುತ್ತಿದ್ದರು. ರಾಗದ ಬಗ್ಗೆ ಹೇಳುವಾಗ ಇರದ ಆಸಕ್ತಿ ಸಿನಿಮಾ ಹಾಡುಗಳು ಮೂಡಿದ ತಕ್ಷಣ ಧಿಡೀರನೆ ಬರುತ್ತಿತ್ತು !
ವಾರದ ಐದು ದಿನಗಳು ಏಳು ಘಂಟೆಯಿಂದ ಏಳೂವರೆಯವರೆಗೂ ಮೂಡಿ ಬರುತ್ತಿದ್ದ ಕೆಲವು ಧಾರಾವಾಹಿಗಳೆಂದರೆ ಬದುಕು ಜಟಕಾ ಬಂಡಿ, ಬಿಸಿಲುಕುದುರೆ, ತಿರುಗುಬಾಣ, ಬೃಂಗದ ಬೆನ್ನೇರಿ ಬಂತು, ರೈತ-ಯೋಧ, ಮಾಸ್ಟರ್ ಮಂಜುನಾಥ್’ರ ಮೆಕ್ಯಾನಿಕ್ ಮುದ್ದ, ಚಂದ್ರು ಅವರ ಕಂಡಕ್ಟರ್ ಕರಿಯಪ್ಪ ಇತ್ಯಾದಿ.
ಹಲವು ಧಾರಾವಾಹಿಗಳು ಎಂಟು ಘಂಟೆಯಿಂದ ಎಂಟೂವರೆಯವರೆಯ ತನಕ ಬರುತ್ತಿದ್ದವು. ನಾಗಾಭರಣರ ಕುತೂಹಲಕಾರಿ ಧಾರಾವಾಹಿಯಾದ ’ಗುಡ್ಡದಭೂತ’, ಅಜಿತನ ಸಾಹಸಗಳು, ರಮೇಶ್ ಭಟ್ ಅವರ ’ಕ್ರೇಜಿ ಕರ್ನಲ್’ ಹೀಗೆ.
ಬುಧವಾರದ ರಾಷ್ಟ್ರೀಯ ಕಾರ್ಯಕ್ರಮ ಮಾತ್ರ ಎಂಟಕ್ಕೇ ಶುರು. ಅದು ’ಚಿತ್ರಹಾರ್’ ಕಾರ್ಯಕ್ರಮ. ಸೊಗಸಾದ ಹಿಂದಿ ಹಾಡುಗಳನ್ನು ಈ ಮುನ್ನ ಕೇಳಿದ್ದರೂ ಆ ಹಾಡುಗಳನ್ನು ನೋಡುವ ಭಾಗ್ಯ ಸಿಕ್ಕಿದ್ದು ಇಲ್ಲಿ.
ದಿನ ನಿತ್ಯ ಒಂಬತ್ತು ಘಂಟೆಯವರೆಗೂ ನಮ್ಮ ಮನೆಯಲ್ಲಿ ನೆಡೆಯುತ್ತಿದ್ದ ಟ್ಯೂಷನ್ನಿಂದಾಗಿ ಗಿಜಿ ಗಿಜಿ ಎನ್ನುತ್ತಿದ್ದರೂ, ಗುರುವಾರದಂದು ಮಾತ್ರ ಬೆಂಗಳೂರು ಬಂದ್ ರೀತಿ ಬಿಕೋ ಎನ್ನುತ್ತಿದ್ದವು. ಟೀಚರ್’ಗೆ ಬಿಡುವಿದ್ದರೂ ಮಕ್ಕಳು ಬ್ಯುಸಿ !!!
ಆರೂವರೆಗೆ ಟಿ.ವಿಯನ್ನು He-Man, the master of the universe ಎಂಬ ಅನಿಮೇಶನ್ ಧಾರಾವಾಹಿ ದಾಳಿ ಮಾಡಿದರೆ, ಎಂಟಕ್ಕೆ ಅತ್ಯಂತ ಜನಪ್ರಿಯ ’ಚಿತ್ರಮಂಜರಿ’ ಅಡಿಯಿಡುತ್ತಿತ್ತು. ಎಲ್ಲಿದ್ದರೂ ಅಷ್ಟು ಹೊತ್ತಿಗೆ ಮನೆ ಸೇರುವ ತವಕ. ಸೊಗಸಾದ ಹಾಡುಗಳನ್ನು ನೋಡಿ ಆನಂದಪಡುತ್ತಿದ್ದು, ಎಂಟೂವರೆಗೆ ’ಇನ್ನರ್ಧ ಘಂಟೆ ಹಾಕಿದ್ದರೆ ಇವರಪ್ಪನ ಮನೆ ಗಂಟೇನು ಹೋಗುತ್ತಿತ್ತು’ ಎಂದು ಬೈದುಕೊಳ್ಳದೇ ಇರುತ್ತಿರಲಿಲ್ಲ. ಸಾಧಾರಣ ಯಶಸ್ಸು ಕಂಡಿದ್ದ ಚಿತ್ರವೊಂದರ ಹಾಡು, ಚಿತ್ರಮಂಜರಿಯಲ್ಲಿ ಪ್ರಥಮ ಬಾರಿಗೆ ಮೂಡಿ ಬಂತು. ಮರು ದಿನದಿಂದ ಆ ಸಿನಿಮಾ ನೋಡಲು ನೂಕು ನುಗ್ಗಲು. ’ಹೌಸ್ ಫುಲ್’ ಬೋರ್ಡ್ ಅಂತೂ ಸಾಮಾನ್ಯ ದೃಶ್ಯ. ಚಿತ್ರ ಇಪ್ಪತ್ತೈದು ವಾರ ಓಡಿ, ಕನ್ನಡ ಚಿತ್ರರಂಗದಲ್ಲಿ ಹೊಸ ಶಕೆ ಆರಂಭವಾಯಿತು. ಸಿನಿಮಾ ಹೆಸರು ಗೊತ್ತಲ್ಲ?
ರಾಷ್ಟ್ರೀಯ ವಾರ್ತೆಗೆ ’ನೀತಿ ರವೀಂದ್ರನ್’ ಅಥವಾ ’ಗೀತಾಂಜಲಿ ಅಯ್ಯರ್’ ಬಂದಾಗ ಸ್ವಲ್ಪ ಹೊತ್ತು ನೋಡಿ ಆಮೇಲೆ ಸ್ವಲ್ಪ ಹೊತ್ತು ಟಿ.ವಿ ಬಂದ್.
ದಿನ ನಿತ್ಯ ಹಿಂದಿ ವಾರ್ತೆಯ ನಂತರ ಮೂಡಿ ಬರುತ್ತಿದ್ದ ಹಲವು ಸೊಗಸಾದ ಹಿಂದೀ ಧಾರಾವಾಹಿಗಳೆಂದರೆ ’ನುಕ್ಕಡ್’, ’ಯಾತ್ರಾ’, ’ಬುನಿಯಾದ್’, ’ಸರ್ಕಸ್’, ’ಫೌಜಿ’, ’ಏ ಜೋ ಹೇ ಜಿಂದಗಿ’ ಇತ್ಯಾದಿಗಳು
ಇದೆಲ್ಲಕ್ಕೂ ಕಳಶಪ್ರಾಯದಂತೆ, ಕನ್ನಡಿಗನೊಬ್ಬ ರಾಷ್ಟ್ರಮಟ್ಟ ಏರಿ ಅಲ್ಲಿ ತನ್ನ ಛಾಪನ್ನು ಮೂಡಿಸಿದ ’ಮಾಲ್ಗುಡಿ ಡೇಸ್’. ಆರ್.ಕೆ.ನಾರಾಯಣ್ ಅವರ ಹಲವು ಪುಸ್ತಕಗಳಿಂದ ಆಯ್ದ ಕಥೆಗಳ ಸರಣಿ ಇದು. ಶೀರ್ಷಿಕೆ ಗೀತೆ ಶುರುವಾದರೇ ಮೈ ಪುಳಕ. ಆರ್.ಕೆ.ಲಕ್ಷ್ಮಣ್ ಅವರ ವ್ಯಂಗ್ಯಚಿತ್ರವನ್ನೊಳಗೊಂಡ ಶೀರ್ಷಿಕೆ ಕಾರ್ಡ್ ತುಂಬಾ ಭಿನ್ನವಾಗಿತ್ತು. ಕೊನೆಯ ಕಾರ್ಡ್’ನಲ್ಲಿ ’ಶಂಕರ್ ನಾಗ್’ ಹೆಸರು ಕಂಡ ಕೂಡಲೇ ಏನೋ ಆನಂದ. ಹದಿಮೂರು ಎಪಿಸೋಡ್’ಗಳು ಮುಗಿದಾಗ, ಯಾಕೆ ಮುಂದುವರೆಸಬಾರದು ಎಂಬ ಪ್ರಶ್ನೆಗೆ ಯಾರಿಗೂ ಉತ್ತರ ಸಿಗಲಿಲ್ಲ.
ಇನ್ನು ಶನಿವಾರ. ಕನ್ನಡ ಚಲಚಿತ್ರದ ದಿನ. ಐದು ಘಂಟೆಗೆ ಮನೆಯ ಎಲ್ಲ ಕೆಲಸ ಮುಗಿದಿರಬೇಕು. ಇಲ್ಲವೆಂದರೆ ಅದು ಪಕ್ಕಕ್ಕೆ. ಆಮೇಲೆ ನೋಡಿಕೊಂಡರಾಯಿತು ಅಂತ. ನಂತರ ಬರುವ ದೃಶ್ಯವೇ, ಈ ಲೇಖನದ ಮೊದಲಿಗೆ ಹೇಳಿದ್ದು !!
ಆರಂಭದಲ್ಲಿ ಕೆಲವರ ಮನೆಯಲ್ಲಿ ಮಾತ್ರ ಟಿ.ವಿ.ಗಳಿದ್ದವು. ಇದ್ದುದರಲ್ಲಿ ಹೆಚ್ಚು ಮಂದಿಯ ಮನೆಯಲ್ಲಿ ಕಪ್ಪು-ಬಿಳುಪು ಟಿ.ವಿ. ಶನಿವಾರ ಸಂಜೆ ಚಲನಚಿತ್ರಕ್ಕೆ ಟಿ.ವಿ. ಇರದವರು ಇರುವವರ ಮನೆಯಲ್ಲಿ ಸೇರುತ್ತಿದ್ದೆವು. ಒಮ್ಮೆ ಹೀಗೇ ಆಯ್ತು. ಹೀಗೇ ಯಾರದೋ ಮನೆಯಲ್ಲಿ ಸೇರಿದ್ದೆವು. ಸೊಗಸಾದ ರಾಜಕುಮಾರ್ ಚಿತ್ರ ಬರುತ್ತಿತ್ತು. ಜೋರಾಗಿ ಟಿ.ವಿ ಹಾಕಿ ಎಲ್ಲರೂ ತಲ್ಲೀನರಾಗಿದ್ದೆವು. ಬಾಗಿಲು ಯಾರೋ ತಟ್ಟುತ್ತಿದ್ದರು. ಅವರು ಏಳಲಿ ಇವರು ಏಳಲಿ ಎಂದುಕೊಂಡು ಜನ ಸುಮ್ಮನೆ ಇದ್ದರು. ಇದ್ದಕ್ಕಿದ್ದಂತೆ ಮನೆ ಯಜಮಾನಿ ಸಮಯ ನೋಡಿ ಧಡಾರನೆ ಎದ್ದು ಹೋಗಿ, ಹತ್ತು ನಿಮಿಷ ಮನೆಯ ಬಾಗಿಲು ಬಡಿದ ಯಜಮಾನರಿಗೆ ಬಾಗಿಲು ತೆರೆದರು !
ಹಲವು ಕುಟುಂಬಗಳು ಒಂದೆಡೆ ಸೇರಿ ಅವರ ಮನೆಯನ್ನು ಮಿನಿ ಸಿನಿಮಾ ಮಂದಿರ ಮಾಡುತ್ತಿದ್ದೆವು. ಕೆಲವರು ಸಿನಿಮಾ ನೋಡುವಾಗ ಎಷ್ಟರ ಮಟ್ಟಿಗೆ ಮುಳುಗಿ ಹೋಗಿರುತ್ತಾರೆ ಎಂದು ನಾನು ನೋಡಿದ್ದು ಆ ದಿನಗಳಲ್ಲಿ.
ನಮ್ಮ ಮನೆಯ ಹಿಂದಿನ ಬೀದಿಯಲ್ಲಿ ’ಕಸ್ತೂರಿ’ ಆಂಟಿಯ ಮನೆ. ಯಾವ ಹೆಂಗಸರೂ ಅವರ ಪಕ್ಕದಲ್ಲಿ ಕುಳಿತು ಸಿನಿಮಾ ನೋಡಲು ಅಂಜುತ್ತಿದ್ದರು. ಖಳನಾಯಕನು ನಾಯಕಿಯನ್ನು ಅಟ್ಟಿಸಿಕೊಂಡು ಹೋಗುತ್ತಿದ್ದ ದೃಶ್ಯ ಬಂದಾಗ, ಇವರ, ಪಕ್ಕದಲ್ಲಿದ್ದವರ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡು ಬಿಡುತ್ತಿದ್ದರು. ಹಾಗೆ ಅಟ್ಟಿಸಿಕೊಂಡು ಹೋಗುವಾಗ ನಾಯಕಿ ಬೆಡ್ ರೂಮಿನ ಕಡೆ ಹೋದರಂತೂ ಇವರು ಕಣ್ಣೀರು ಹಾಕುತ್ತ ’ಬೇಡ ಕಣೆ, ಬೇಡ ಕಣೆ ಹೋಗಬೇಡಾ’ ಎನ್ನುತ್ತಿದ್ದರು. ಆ ಸಮಯಕ್ಕೆ ದೇವರಂತೆ ನಾಯಕ ಬಂದರಂತೂ ಇವರ ಆನಂದಕ್ಕೆ ಪಾರೇ ಇಲ್ಲ. ಅವನು ಖಳನಾಯಕನಿಗೆ ಒಂದೊಂದು ಬಾರಿ ಹೊಡೆದಾಗಲೂ ಇವರು ಪಕ್ಕದವರ ತೊಡೆಯ ಮೇಲೆ ಫಟೀರೆಂದು ಹೊಡೆಯುತ್ತ ’ಹೊಡಿ ಕಣೋ ನೀನು. ಇನ್ನೂ ಹೊಡಿ’ ಎಂದು.
ಭಾನುವಾರ ಬೆಳಿಗ್ಗೆ ಸುಪ್ರಭಾತವಾಗುತ್ತಿದ್ದುದು "ರಂಗೋಲಿ"ಯಿಂದ. ಶಶಿಕಪೂರ್, ಶಮ್ಮಿಕಪೂರ್ ಇತ್ಯಾದಿ ನಟರ ಕುಣಿತಕ್ಕೆ ಮಾರುಹೋಗಿದ್ದು ಅಂದೇ !
ಅದು ಮುಗಿದ ಕೂಡಲೇ, ಧಡ ಧಡ ಎದ್ದು ನಿತ್ಯಕರ್ಮಗಳನ್ನು ಮುಗಿಸಿ ಎಂಟೂವರೆಗೆ ಮತ್ತೆ ಟಿ.ವಿ ಮುಂದೆ ಪ್ರತ್ಯಕ್ಷ.
ಈಗ ’ಮುನ್ನೋಟ’ - ವಾರದ ಕಾರ್ಯಕ್ರಮಗಳತ್ತ ಒಂದು ಕಿರುನೋಟ ಎಂದು ಅವರು ಹೇಳುತ್ತಿದ್ದರೇ, ಗುರುವಾರ ಯಾವ ಹಾಡು, ಶನಿವಾರ ಯಾವ ಸಿನಿಮಾ ಎಂದೇ ತವಕ. ಗುರುವಾರ ಎಂಟು ಘಂಟೆಗೆ ಚಿತ್ರಮಂಜರಿ ಎಂದು ಹೇಳಿ ಶುಕ್ರವಾರಕ್ಕೆ ಹೋದರೆ ಅರ್ಧ ಉತ್ಸಾಹ ಕಡಿಮೆಯಾಗುತ್ತಿತ್ತು. ಶನಿವಾರದ ಸಿನಿಮ ಹೆಸರು ಹೇಳದೆ ಇದ್ದರಂತೂ ಮುಂದಿನ ಶನಿವಾರ ಪೇಪರ್ ಬರುವ ತನಕ ಕಾಯಬೇಕಲ್ಲ ಎಂಬ ವ್ಯಥೆ.
ಮುನ್ನೋಟದ ನಂತರ ’ಸುತ್ತ-ಮುತ್ತ’ ನಂತರ ಏ.ಎಸ್.ಮೂರ್ತಿಗಳ ’ಬೊಂಬೇ ಆಟ’, ’ನಗೆಲೇಸು’ ಹೀಗೆ ಕೆಲವು ಕಾರ್ಯಕ್ರಮಗಳು ಮುಗಿದರೆ, ಅಲ್ಲಿಗೆ ಕನ್ನಡ ಕಾರ್ಯಕ್ರಮಗಳು ಮುಗಿದಂತೆ. ರಾತ್ರಿ ಏಳೂವರೆಯ ನಿತ್ಯ ವಾರ್ತೆಯ ತನಕ ಮತ್ತೇನಿಲ್ಲ.
ರಾಷ್ಟ್ರೀಯ ಚಾನಲ್’ನ ಮತ್ತೊಂದು ವಿಶೇಷ ಕಾರ್ಯಕ್ರಮವೆಂದರೆ ಭಾನುವಾರ ಮಧ್ಯಾನ್ನ ಒಂದೂವರೆಗೆ ಮೂಡಿ ಬರುತ್ತಿದ್ದ ’ಪ್ರಶಸ್ತಿ ವಿಜೇತ ಪ್ರಾದೇಶಿಕ ಚಲನಚಿತ್ರ’ ಪ್ರಸಾರ. ಹಲವಾರು ಭಾಷೆಯ ಸಿನಿಮಾ ನೋಡಿ ಕನ್ನಡೇತರ ಭಾಷೆಗೂ ಮನ ತೆರೆದುಕೊಂಡದ್ದು ಇಲ್ಲಿ.
ಆಗಲೇ ಹೇಳಿದಂತೆ, ಭಾನುವಾರ ಹೆಚ್ಚು ಕಮ್ಮಿ ರಾಷ್ಟ್ರೀಯ ಕಾರ್ಯಕ್ರಮಗಳದ್ದೇ ಆರ್ಭಟ. ’ಏಕ್-ದೋ-ತೀನ್-ಚಾರ್’, ’ಭಾರತ್ ಏಕ್ ಖೋಜ್’ ’ಕಹಾ ಗಯೇ ವೋ ಲೋಗ್’, ’ದಾದಾ ದಾದಿ ಕಿ ಕಹಾನಿ’, ’ವಿಕ್ರಮ್ ಔರ್ ಬೇತಾಳ್’ ಇತ್ಯಾದಿ
ಹಿಂದೀ ಬಾರದವರೂ ಭಾನುವಾರದಂದು ಟಿ.ವಿ ಮುಂದೆ ಕುಳಿತುಕೊಳ್ಳುವಂತೆ ಮಾಡಿದ್ದು ರಮಾನಂದ್ ಸಾಗರ್ ಅವರ ’ರಾಮಾಯಣ’ ನಂತರ ಬಂದ ’ಬಿ.ಆರ್ ಚೋಪ್ರ’ ಅವರ ’ಮಹಾಭಾರತ್’
ಈ ಎರಡು ಧಾರಾವಾಹಿಗಳು ಮೂಡಿ ಬರುತ್ತಿದ್ದ ಸಮಯದಲ್ಲಿ, ಬೀದಿಗಳಲ್ಲಿ ಜನರೇ ಇಲ್ಲದೆ ಬಿಕೋ ಎನ್ನುತ್ತಿದ್ದವು. ಆ ಸಮಯದಲ್ಲಿ ವಿದ್ಯುತ್ ನಿಲುಗಡೆಯಾದರಂತೂ, ಮಂಡಲಿಯ ಕಛೆರಿಗಳಿಗೆ ಬೆಂಕಿ ಹಚ್ಚಿದ ಘಟನೆಗಳು ಇದೆ. ರಾಮ, ಕೃಷ್ಣ ತೆರೆಯ ಮೇಲೆ ಮೂಡಿ ಬಂದಾಗ ಮಂಗಳಾರತಿ ಮಾಡಿದ್ದೇನು? ನಮಸ್ಕಾರ ಮಾಡಿದ್ದೇನು? ಹಿಂದಿ ಭಾಷೆ ಎಲ್ಲರಿಗೂ ಅರ್ಥವಾಗುವುದಿಲ್ಲ ಎಂದು, ಕನ್ನಡ ಪತ್ರಿಕೆಯವರು ಹಿಂದಿನ ದಿನದ ವಿಶೇಷ ಸಂಚಿಕೆಯಲ್ಲಿ ಮರುದಿನ ಮೂಡಿ ಬರುವ ಎಪಿಸೋಡ್’ನ ಡೈಲಾಗುಗಳನ್ನು ಮುದ್ರಿಸುತ್ತಿದ್ದರು. ಇದೆಲ್ಲಕ್ಕಿಂತ ಆ ಧಾರಾವಾಹಿ ಮುಗಿದ ಮರು ಭಾನುವಾರ ಆ ಸಮಯದಲ್ಲಿ ಶೂನ್ಯ ಆವರಿಸಿದ ಭಾವ...
ಭಾನುವಾರ ಸಂಜೆ ಆರು ಘಂಟೆಗೆ ಹಿಂದಿ ಚಲಚಿತ್ರ. ಹಲವಾರು ಸೊಗಸಾದ ಹಿಂದಿ ಚಿತ್ರಗಳನ್ನು ನೋಡಿ ಆನಂದಿಸಿದ್ದೇನೆ. ಭಾನುವಾರದ ಮತ್ತೆರಡು ಕಾರ್ಯಕ್ರಮಗಳೆಂದರೆ ’ಸಿದ್ದಾರ್ಥ ಬಸು’ ಅವರ Quiz Time. IIT ಬುದ್ದಿವಂತರನ್ನು ನೋಡುತ್ತ ನಾವು ಅವರಂತೆ ಆಗುತ್ತೇವಾ ಎಂಬ ಚಿಂತೆ ಆವರಿಸಿದ್ದು ಸುಳ್ಳಲ್ಲ. ಅಂದು, ಒಂದು ವಿಷಯವಂತೂ ಮನದಲ್ಲಿ ದಟ್ಟವಾಗಿ ಕುಳಿತಿತು ’ಕನ್ನಡಕ ಹಾಕಿದವರು ಬುದ್ದಿವಂತರು’ ಅಂತ !!!
ಇರಲಿ, ಮತ್ತೊಂದು ಕಾರ್ಯಕ್ರಮವೆಂದರೆ, ನಮ್ಮ ದೇಶದ ಸಂಸ್ಕೃತಿಯತ್ತ ಬೆಳಕು ತೋರುವ ರೇಣುಕಾ ಸಹಾನಿ ನೆಡೆಸಿಕೊಡುತ್ತಿದ್ದ ’ಸುರಭಿ’.
ಅಂದಿನ ಟಿ.ವಿ ಕಾರ್ಯಕ್ರಮಗಳ ಮಧ್ಯೆ fillers ಎಂಬಂತೆ ಮೂಡಿ ಬರುತ್ತಿದ್ದುದು ಗೀತ ಚಿತ್ರಗಳು. ’ಎಕ್ ತಿತಲೀ ಅನೇಕ್ ತಿತಲಿಯಾ’, ’ಕಪ್ಪು ಕಾಗೆ - ಬಿಳೀ ಗುಬ್ಬಿ’ ಇತ್ಯಾದಿಗಳನ್ನು ಎಷ್ಟು ಸಾರಿ ನೋಡಿದರೂ ಬೇಸರವಾಗುತ್ತಿರಲಿಲ್ಲ. ಇದಲ್ಲದೇ ಭಾವಗೀತೆಗಳನ್ನು ಒಳಗೊಂಡ ಗೀತ ಚಿತ್ರಗಳು.
ಎಷ್ಟೊಂದು ನೆನಪುಗಳು ...
ಇಂದಿಗಿಂತ ಅಂದೇ ಚೆನ್ನ ಅನ್ನೋ ಮಾತು ಹೇಳುತ್ತಿಲ್ಲ ... ಹಲವು ವಿಷಯಗಳ ಬಗ್ಗೆ ನೆನಪೂ ಮಾಸಿರಬಹುದು. ಅದನ್ನು ನಿಮ್ಮನಿಸಿಕೆಗಳಲ್ಲಿ ತಿದ್ದಿ.
ನಾನಿನ್ನು ಬರಲೇ?

ಬುದ್ದ ಆಗೋದು ಅಷ್ಟು ಸಲೀಸಲ್ಲ !

ನಮ್ಮ ಮನೆಯಿಂದ ಜಯನಗರ ತಲುಪುವ ಮಾರ್ಗದಲ್ಲಿ ಹಲವು ಅಪಘಾತಗಳು, ಅದರಿಂದಾದ ಕೈ-ಕಾಲು ಮುರಿತ ಮತ್ತು ಜಗಳ, ಬಸ್ಸಿನಲ್ಲಿ ಸೀಟಿಗಾಗಿ ಜಗಳ ಮತ್ತು ಹೊಡೆದಾಟ, ಹರಿಶ್ಚಂದ್ರ ಘಾಟ್ ಅಥವಾ ವಿಲ್ಸನ್ ಗಾರ್ಡನ್ ಕಡೆ ಹೊರಟ ಹೆಣಗಳು, ಕೆ.ಸಿ.ಜನರಲ್, ವಿಕ್ಟೋರಿಯಾ, ಇತ್ಯಾದಿ ಆಸ್ಪತ್ರೆಗಳು ಹೀಗೆ ಎಲ್ಲದರ ದರ್ಶನ ಅನುಭವಗಳು ಆಗಿದ್ದರೂ ....


ನಾನು ಬುದ್ದ ಆಗಲಿಲ್ಲ ಕಣ್ರೀ !!


ಒಮ್ಮೆ ಹೀಗೆ ನನ್ನಾಕೆ ಊರಿನಲ್ಲಿ ಇಲ್ಲದ ಸಮಯದಲ್ಲಿ ಮೂರನೆ ದಿನವೂ ಅದೇ ಹಳೇ ಉಪ್ಪಿಟ್ಟನು ತಿಂದ ಮೇಲಂತೂ ವೈರಾಗ್ಯ was just round the corner ಕಣ್ರೀ !!


ಎಲ್ಲೆಲ್ಲೂ ಕಾಯಿಲೆಗಳು ... ಸಾವು, ನೋವು ... ಹಳೇ ಉಪ್ಪಿಟ್ಟು ತಿನ್ನಲೇ ಬೇಕಾದ ಕಷ್ಟಗಳು ...


ಇದೇನು ಜೀವನ ಅಂತೀನಿ... ಮನದಲ್ಲಿ ಎದ್ವಾತದ್ವ ಬ್ಯಾಸರ ಮೂಡಿತು. ಇದಕ್ಕೆಲ್ಲ ಒಂದೇ ಪರಿಹಾರವೆಂದರೆ ಸತ್ಯದರ್ಶನಕ್ಕಾಗಿ ಹೊರಡುವುದು.


ಈ ವಿಷಯ ಎಲ್ಲರಿಗೂ ಗೊತ್ತೇ ಇದೆ ...

ಹೆಂಡತಿ-ಮಗ ಮಲಗಿದ್ದಾಗ, ಶುದ್ದೋದನ

ಜೀವನದ ಸತ್ಯ ತಿಳಿಯಲು ಎದ್ದೋದನ


ನಾನು ಹಾಗೇ ಎದ್ದು ಹೊರಟೆ ... ಹೇಳದೇ ಹಾಗೇ ಹೋದೆ ... ಹೇಳೋಣ ಅಂದರೆ ಯಾರಿದ್ದರು ಮನೆಯಲ್ಲಿ? ಅದಕ್ಕೆ ಹೇಳದೇ ಹೋದೆ.


ಸತ್ಯದರ್ಶನದ ಮೊದಲ ಹೆಜ್ಜೆ ತಪಸ್ಸು !!


ಅದಕ್ಕಾಗಿ, ಮೊದಲು ಒಂದು ಜಾಗ ನೋಡಬೇಕು. ಮಳೆ, ಗಾಳಿ, ಚಳಿ ಎಲ್ಲದರಿಂದ ರಕ್ಷಣೆ ಇರಬೇಕಲ್ಲ ! ಇದಕ್ಕೆ ಪ್ರಶಸ್ತವಾದ ಜಾಗವೆಂದರೆ ಮಲೆ ಮಹದೇಶ್ವರ ಬೆಟ್ಟದ ಕಾಡು !! ನಾನು ಅಲ್ಲಿಗೆ ಯಾವತ್ತೂ ಹೋಗಿಲ್ಲ. ಅಷ್ಟು ದಿನ ವೀರಪ್ಪನ್ ಅಲ್ಲಿ ಅಡಗಿದ್ದ ಎಂದರೆ ಆ ಜಾಗದಲ್ಲಿ ರಕ್ಷಣೆ ಇದೆ ಅಂತ ಅರ್ಥ ಅಲ್ಲವೇ?


ಅಲ್ಲಿಗೆ ಹೋದೆ ... BSF’ನವರು ಒಳಗೆ ಬಿಡಳೇ ಇಲ್ಲ. ಏನು ಬೇಕಿತ್ತು, ನಿಮಗೆ ಇಲ್ಲೇನು ಕೆಲಸ, ವೀರಪ್ಪನ್ ಕಡೆಯವರೇನಾದ್ರೂ ಇನ್ನೂ ಉಳಿದುಕೊಂಡಿದ್ದಾರಾ .... ಪ್ರಶ್ನೆಗಳ ಸುರಿಮಳೆ !


ನಾನು ತಪಸ್ಸು ಮಾಡಲು ಹೋಗುತ್ತಿದ್ದೇನೆ ಅಂದರೆ ನಂಬುತ್ತಲೇ ಇಲ್ಲ. ಅಲ್ರೀ, ಜೀನ್ಸ್ ಪ್ಯಾಂಟು, ಓವರ್ ಕೋಟು ಎಲ್ಲ ಹಾಕಿಕೊಂಡು ತಪಸ್ಸು ಮಾಡಬಾರದು ಅಂತೇನಾದರೂ ಹೇಳಿದ್ದಾರಾ? ಅಥವಾ ತಪಸ್ಸು ಮಾಡಲು ಡ್ರಸ್ ಕೋಡ್ ಏನಾದರೂ ಇದೆಯಾ?


ಅವರಂತೂ ಬಿಡಲಿಲ್ಲ. ಕೊನೆಗೆ ಹಂಗೂ ಹಿಂಗೂ ಮಾಡಿ ಅವರು ಅಲ್ಲಿ ಇಲ್ಲಿ ನೋಡುವಾಗ ಒಳಗೆ ನುಸುಳಿಯೇಬಿಟ್ಟೆ !!


ಏಲ್ಲಿ ನೋಡಿದರೂ ಮರಗಳು. ಹಸಿರೋ ಹಸಿರು.... ನೆಲವೇ ಕಾಣದಷ್ಟು ಎಲೆಗಳು .... ನಿಂತ ಮರ, ಒರಗಿದ ಮರ, ನೆಟ್ಟಗಿನ ಮರ, ಸೊಟ್ಟಗಿನ ಮರ, ಉದ್ದನೆಯ ಮರ, ಬಿಳಲು ಬಿಟ್ಟ ಮರ, ಎಲೆಭರಿತ ಮರ, ಎಲೆರಹಿತ ಬೋಳು ಮರ, ಹೊರ ಕವಚ ಕಳೆದುಕೊಂಡ ನುಣುಪಾದ ಮರ, ಹಸಿರು ಪಾಚಿಯುಕ್ತ ದಪ್ಪ ಚರ್ಮದ ಮರ, ತನ್ನಷ್ಟಕ್ಕೆ ತಾನಿರುವ ಮರ, ಬಳ್ಳಿಗೆ ಆಶ್ರಯ ಕೊಟ್ಟ ಮರ ಹೀಗೇ .... ಒಂದೇ ಎರಡೇ ?


ಜಾಗ ಹುಡುಕಲು ಶುರು ಮಾಡಿದೆ. ಎನು ಕಾಡೋ ಎನೋ? ಕೂತ್ಕೊಲ್ಲೋಕ್ಕೆ ಜಾಗ ಇಲ್ಲ. ಕೆಸರು, ಕಸ, ಕಡ್ಡಿ, ಹಳ್ಳ ದಿನ್ನೆ ಹೀಗೆ ... ಕೊನೆಗೂ ಒಂದು ದೊಡ್ಡ ಮರದ ಕೆಳಗೆ ಜಾಗ ಸಿಕ್ತು. ಒಳ್ಳೆ ಕಟ್ಟೆ. ಆ ಜಾಗ ಬಳಿದುಕೊಂಡು ಕುಳಿತೆ.


’ಓಂ’ ಎಂದು ಮೂಗು ಹಿಡಿದು ಕೂತೆ. ಸ್ವಲ್ಪ ಹೊತ್ತಿಗೆ ಮೊಣಕೈ ನೋಯಲು ಶುರುವಾಯ್ತು. ಹೋಗಲಿ ಎಂದು ಎರಡೂ ಅಂಗೈಯನ್ನು ಬೆಸೆದುಕೊಂಡು ಕೂತು, ’ಓಂ’ ಎಂದು ದನಿ ಎತ್ತಿ ಹೇಳಹತ್ತಿದೆ. ಐದು ನಿಮಿಷವಾದ ಮೇಲೆ ಗಂಟಲು ಉರಿಯಲು ಶುರುವಾಯ್ತು. ಮನದಲ್ಲೇ ಹೇಳಿಕೊಂಡರೆ ಹೇಗೆ ಎಂದುಕೊಂಡು, ಹಾಗೇ ಮಾಡಿದೆ. ಮತ್ತೈದು ನಿಮಿಷಕ್ಕೆ ತೂಕಡಿಕೆ ಶುರುವಾಯ್ತು. ತಪಸ್ವಿಗಳು ಈ ರೀತಿ ಬಾರದಿರಲೆಂದು ತಮ್ಮ ಜುಟ್ಟನ್ನು ಥೆಳ್ಳಗಿನ ದಾರದಿಂದ ಮೊರದ ಕೊಂಬೆಗೆ ಕಟ್ಟಿಕೊಳ್ಳುತ್ತಿದ್ದರಂತೆ. ತೂಕಡಿಕೆಯಿಂದ ತಲೆ ವಾಲಿದಾಗ, ಜುಟ್ಟು ಎಳೆದು ಎಚ್ಚರಿಕೆಯಾಗಲಿ ಎಂದು.


ನಾನೂ ಹಾಗೇ ಮಾಡೋಣ ಎಂದುಕೊಂಡೆ. ದಾರ ಇರಲಿಲ್ಲ. ಮರದ ತೊಗಟೆಯನ್ನು ತೆಳುವಾಗಿ ಕಿತ್ತಿ ಉದ್ದನೆಯ ಹೋರಿಯಂತೆ ಮಾಡಿಕೊಂಡು, ಒಂದು ಕೊನೆಯನ್ನು ಕೊಂಬೆಗೆ ಬಿಗಿದು ಮತ್ತೊಂದು ಬದಿಯನ್ನು ನನ್ನ ಜುಟ್ಟಿಗೆ ಕಟ್ಟಿಕೊಳ್ಳೋಣ ಎಂದು ನನ್ನ ತಲೇ ಮೇಲೆ ಕೈ ಇಟ್ಟಾಗಲೇ ನೆನಪಾಗಿದ್ದು ... ನನಗೆ ನೆತ್ತಿ ಮೇಲೆ ಕೂದಲಿಲ್ಲ ಅಂತ ... ಥತ್! ಸುಮ್ಮನೆ ಟೈಮ್ ವೇಸ್ಟ್ ಆಯ್ತು !!


ಬೇರೆ ವಿಧಿಯಿಲ್ಲ ಎಂದು ಒಮ್ಮೆ ಮನದಲ್ಲಿ, ಮತ್ತೊಮ್ಮೆ ಜೋರಾಗಿ ಹೇಳಿಕೊಳ್ಳುತ್ತ ಕುಳಿತೆ. ಸ್ವಲ್ಪ ಹೊತ್ತಿಗೆ ಇರುವೆ ಕಡಿಯಲು ಶುರುವಾಯ್ತು. ಛೆ ! ಇರುವೆ ಕಿಲ್ಲರ್ ಸ್ಪ್ರೇ ತರಬೇಕಿತ್ತು ! ಮರತೇ ಹೋಯ್ತು !!


ಕತ್ತಲಾಗಲು ಶುರುವಾಯ್ತು. ಲೈಟ್ ಹಾಕೋಣವೆಂದರೇ ... ಬಿಡಿ ... ನಾಡಲ್ಲೆ ಕರಂಟಿಲ್ಲ, ಇನ್ನು ಕಾಡಲ್ಲಿ ಎಲ್ಲಿಂದ ಬರುತ್ತೆ?


ನನ್ನ ಬ್ಯಾಗ್ ತಡಕಾಡಿದೆ. ಟಾರ್ಚ್ ಬದಲು ಬೆಡ್ ಲೈಟ್ ಸಿಕ್ತು. ಥತ್! ಆದರೂ, ಏನೋ ಒಂದು ಆಸೆ, ಅಲ್ಲಿ ಇಲ್ಲಿ ಹುಡುಕಿದೆ. ಮರದ ಮೇಲೆ ಮೂರು ಪಿನ್ ಔಟ್-ಲೆಟ್ ಕಾಣಿಸಿತು !!!! ಚುಚ್ಚಿದೆ. ಲೈಟ್ ಬಂತು !! ಜಾಸ್ತಿ ತಲೆ ಕೆಡಿಸಿಕೊಳ್ಳಲು ಹೋಗಲಿಲ್ಲ.


ಆಗ, ಏನೋ ವಾಸನೆ ...


ಕಾಡಿನ ಪುಷ್ಪದ ವಾಸನೆ .... ಅದನ್ನು ಅರಸಿ ಹೋದರೆ, ಒಬ್ಬ ಭುವನ ಸುಂದರಿ, ವಯ್ಯಾರದಿಂದ, ಹೂವಿನ ರಾಶಿಯ ಮಧ್ಯೆ ಕಂಗೊಳಿಸುತ್ತ ನಿಂತಿದ್ದಳು ... ಅಂತೆಲ್ಲಾ ಕಲ್ಪಿಸಿಕೊಂಡರೆ ನಾನು ಜವಾಬ್ದಾರನಲ್ಲ !!!


ನಾನು ಹೇಳಿದ್ದು, ಏನೋ ವಾಸನೆ ಎಂದರೆ ಕೆಟ್ಟ ವಾಸನೆ ಅಂತ ಅರ್ಥ !! ಹೇಗಿದ್ರೂ ಬೇರೆ ಕೆಲ್ಸ ಇಲ್ಲ ಅಂತ ವಾಸನೆ ಅರಸಿ ಹೋದೆ. ಅಲ್ಲಿ ಕಂಡ ದೃಶ್ಯ ಕಂಡು ಮಾತು ಹೊರಡದೆ ಮೂಕನಾದೆ !!!


ಬಡ ತೆರಿಗೆದಾರನ ಖರ್ಚಿನಲ್ಲಿ ಒಂದು ಬೋರ್ಡ್ ಲಗತ್ತಿಸಿದ್ದರು ’ಶ್ರೀ. ವೀರಪ್ಪನ್ ಅವರು ಇಲ್ಲಿ ಬಹಿರ್ದೆಶೆ ಮಾಡುತ್ತಿದ್ದರು’ ಎಂದು. ಆಹಾ ... ಇಂದಿಗೂ ವಾಸನೆ ಬರುತ್ತಿದೆ ಎಂದರೆ, ಏನಯ್ಯಾ ತಿನ್ನುತ್ತಿದ್ದೆ ನೀನು? ಎಂಥಾ ಪವಿತ್ರ ಸ್ಥಳಕ್ಕೆ ಬಂದಿದ್ದೀನಿ ಎಂದುಕೊಂಡು ಕೈಕಾಲು ನಡುಗಲು ಶುರುವಾಗಿತ್ತು ....


ಎದ್ದೂ ಬಿದ್ದೂ ಅಲ್ಲಿಂದ ಓಡುತ್ತ ಹೊರಟೆ. ಯಾರಿಗೆ ಗೊತ್ತು, ಯಾವ ಬಹಿರ್ದೆಶೆಯಲ್ಲಿ ಯಾರ ಅಂತರಾತ್ಮ ಅಡಗಿರುತ್ತೋ?


ಹಾಗೂ ಹೀಗೂ ನನ್ನ ಕಟ್ಟೆಗೆ ಹಿಂದುರುಗಿದೆ ... ಓಡಿ ಬರುವಾಗ ಕಟ್ಟೆಯ ಬಳಿಯೇ ಒಂದು ಚೂಪಾದ ಕಲ್ಲೊಂದು ಕಾಲಿಗೆ ಚುಚ್ಚಿತು ... ಸ್ವಲ್ಪ ಹೊತ್ತು ಕುಳಿತು ದಣಿವಾರಿಸಿಕೊಂಡೆ .... ನಂತರ, ಕಟ್ಟೆಯ ಸುತ್ತಲೂ ಅಲ್ಲಲ್ಲೇ ಎದ್ದಿದ್ದ ಚೂಪಾದ ಕಲ್ಲುಗಳನ್ನು ಹೊರತೆಗೆದು, ನೆಲ ಸಮತಟ್ಟು ಮಾಡಿಕೊಳ್ಳೋಣ ಎಂದುಕೊಂಡು, ಅಲ್ಲೇ ಇದ್ದ ದಪ್ಪ ಕಟ್ಟಿಗೆಯಿಂದ ಕೆಲಸ ಶುರು ಮಾಡಿದೆ ಮುಳ್ಳನ್ನು ತೆಗೆಯಬೇಕಾದರೆ ಅದರ ಸುತ್ತಲೂ ಕೊರೆಯಬೇಕಂತೆ. ಹಾಗೆ ಮಾಡುವಾಗ ಏನೋ ಸಿಕ್ಕಂತಾಯಿತು !


ವೀರಪ್ಪನ್ ಕಡೆಯವರು ಹೂತಿಟ್ಟ ಕೊಳ್ಳೆ ಹೊಡೆದ ನಿಧಿ ಇರಬಹುದೇ?


ಹಾಗಿದ್ರೆ ಸತ್ಯ ದರ್ಶನ ಇನ್ನು ಸ್ವಲ್ಪ ಹೊತ್ತಿನಲ್ಲೇ ಆಗುತ್ತದೆ ಅಂತಾಯ್ತು !!!


ಇನ್ನೂ ಹುಮ್ಮಸ್ಸಿನಿಂದ ಅಗೆಯಲು ಶುರು ಮಾಡಿದೆ. ಹಿಡಿದೆಳೆಯಲು ಆಗುವಷ್ಟು ಅಗೆದು ಎರಡೂ ಕೈಗಳಿಂದ ಮೇಲಕ್ಕೆತ್ತಿದೆ.


ಸತ್ಯ ದರ್ಶನವಾಗಿತ್ತು ಕಣ್ರೀ !!! .... ದರ್ಶನ ಕೊಟ್ಟಿದ್ದು, ಒಂದು ಪೂರ್ಣ ಸೈಜಿನ ಅಸ್ತಿಪಂಜರ !!!!


ಎದ್ನೋ ಬಿದ್ನೋ ಅಂತ ಎದ್ದು ಬಿದ್ದು ಕಾಡಿನಿಂದ ಹೊರಗೆ ಓಡಿದೆ. ನಿಧಿಯೂ ಬೇಡ, ಸತ್ಯದರ್ಶನವೂ ಬೇಡ, ಏನೂ ಬೇಡ. ಸದ್ಯ ಜೀವ ಉಳಿದರೆ ಸಾಕು. ನನ್ನಂತೆಯೇ ತಪಸ್ಸಿಗೆ ಬಂದಿದ್ದವನ ಅಸ್ತಿಪಂಜರ ಇರಬೇಕು.


ಓಡುತ್ತಿದ್ದಂತೆ ಎಲ್ಲ ಮರಗಳೂ ನನ್ನನ್ನು ಅಟ್ಟಿಸಿಕೊಂಡು ಬರುತ್ತಿದ್ದಂತೆ ಅನ್ನಿಸಿತು. ನನ್ನ ಬ್ಯಾಗು, ಬೆಡ್ ಲೈಟು ಇತ್ಯಾದಿ ಇತ್ಯಾದಿ ಎಲ್ಲ ಅಲ್ಲೇ ಬಿಟ್ಟು ಬಂದಿದ್ದೆ. ವಾಪಸ್ಸು ಹೋಗಲೇ ?


ಹೋಗ್ಲಿ ಬಿಡಿ, ಬೇಡ. ಬೇಕಿದ್ರೆ ಆ ಅಸ್ತಿಪಂಜವರೇ ಬಳಸಿಕೊಳ್ಳಲಿ ಎಂದುಕೊಂಡು ಇನ್ನೂ ಜೋರಾಗಿ ಓಡಲು ಶುರು ಮಾಡಿದೆ ಸ್ವಲ್ಪ ದೂರದಲ್ಲಿ ಆ ಪಡೆಯವರ ಗೂಡುಗಳು ಕಾಣಿಸಲು ತೊಡಗಿತು. ಅಬ್ಬ, ಸದ್ಯ ಕಾಡಿನಿಂದ ಹೊರಗೆ ಬರುತ್ತಿದ್ದೀನಿ ಹಾಗಿದ್ರೆ. ಇನ್ನೊಂದು ಐವತ್ತು ಅಡಿ ದೂರವಿದೆ ಅನ್ನೋವಾಗ ...


ನನ್ನ ಓವರ್ ಕೋಟನ್ನು ಯಾರೋ ಹಿಡಿದು ಎಳೆದರು !!


ಅಸ್ತಿಪಂಜರವೋ, ಹೆಣ್ಣು ದೆವ್ವವೋ, ಗಂಡು ಭೂತವೋ ಯಾರೋ ... ಅಯ್ಯೋ, ಬಿಟ್ಟುಬಿಡ್ರೋ ... ಐ ಪ್ರಾಮಿಸ್ ... ಸತ್ತ ಮೇಲೆ ನಿಮ್ಮ ಪಾರ್ಟಿ ಸೇರ್ಕೋತೀನಿ ... ಅಯ್ಯೋ ....


"ಬಿಡ್ರಪ್ಪಾ, ಬಿಡ್ರಮ್ಮಾ" ಎಂದು ಅಲವತ್ತುಕೊಳ್ಳತೊಡಗಿದೆ ....


’ರ್ರೀ, ಥೂ ... ಒಳ್ಳೇ ಭಿಕ್ಷದವರ ಹಾಗೆ ಕೂಗುತ್ತೀರಲ್ರೀ. ಎಲ್ಲಿಗೆ ಹೋಗಬೇಕೂ ಅಂತ ಕೇಳೋಕ್ಕೆ ನಾನು ಎಬ್ಬಿಸಿದ್ದು’ ಅಂತ ಯಾರೋ ಕೂಗಿದ್ರು ಕಣ್ಣು ಬಿಟ್ಟು ನೋಡಿದ್ರೆ...


ಬಸ್ ಕಂಡಕ್ಟರ್ !!!


ಅಲ್ಲಿದ್ದವರೆಲ್ಲ ನನ್ನ ಕಡೆ ಅನುಕಂಪದಿಂದ ನೋಡುತ್ತಿದ್ದರು. ಕೆಲವರು ನಾನು ಯಾರಿಂದಲೋ ಓವರ್ ಕೋಟ್ ಹಾರಿಸಿಕೊಂಡು ಬಂದಿರುವ ಭಿಕ್ಷುಕ ಎಂದೇ ಅಂದುಕೊಂಡಿದ್ದ ಹಾಗಿತ್ತು.


ದಿನವೂ ಜಯನಗರಕ್ಕೆ ಹೊರಟಂತೆ ಇಂದೂ ಹೊರಟಿದ್ದೆ. ಮೊದಲ ಸ್ಟಾಪು ನಮ್ಮದೇ ಆದ್ದರಿಂದ ಯಾವಾಗಲೋ ಬಂದು ನಿಂತಿದ್ದ ಬಸ್ ಹತ್ತಿ ಕುಳಿತಿದ್ದೆ. ನಿದ್ದೆ ಬಂತು ಅಂತ ಕಾಣುತ್ತೆ. ವಿಚಿತ್ರ ಕನಸೂ ಬಿದ್ದಿತ್ತು.


ಏನೂ ಮಾತಾಡದೆ ಬಸ್ಸಿನಿಂದ ಕೆಳಗೆ ಇಳಿದೆ. ಇನ್ನೊಂದು ಬಸ್ಸಿನಲ್ಲಿ ಹೋದರಾಯಿತು ಅಂತ.....

ಚು(ಕು)ಟುಕು ಕಥೆಗಳು 01

ಸಮ್ಮಿಲನ:

ಅದೊಂದು ದೊಡ್ಡ ಸಮಾರಂಭ. ಹಲವಾರು ಕ್ಷೇತ್ರದ ಡಾಕ್ಟರ್’ಗಳ ಮಹಾ ಸಮ್ಮಿಲನ. ಆಹ್ವಾನಿತರಿಗೆ ಮಾತ್ರ ಪ್ರವೇಶ. ಹಾಲ್ ದೊಡ್ಡದಿದ್ದರೂ ಜನ ಹೆಚ್ಚು ಇದ್ದುದರಿಂದ ಉಸುರುಗಟ್ಟಿದಂತಾಗಿ ಬಂದವರಲ್ಲೊಬ್ಬರು ನಿತ್ರಾಣಗೊಂಡು ಒರಗಿದರು. ಅದನ್ನು ಗಮನಿಸಿದ ಡಾಕ್ಟರುಗಳಿಗೆ ಕೈಕಾಲು ಆಡಲಿಲ್ಲ! ಆಸ್ಪತ್ರೆಗೆ ಕರೆ ಮಾಡಿ ಆಂಬ್ಯುಲನ್ಸ್ ತರಿಸಿದರು. ಬಿದ್ದವರನ್ನು ಹೊತ್ತ ಆಂಬ್ಯುಲನ್ಸ್ ಕೆಂಪು ದೀಪ ಮಿಣುಕಿಸಿಕೊಂಡು ಬೊಬ್ಬೆ ಹೊಡೆದರೂ ಟ್ರಾಫಿಕ್ ಕೃಪೆದೋರಲಿಲ್ಲ. ಆಸ್ಪತ್ರೆ ತಲುಪುವ ಮೊದಲೇ ಪ್ರಾಣಪಕ್ಷಿ ಹಾರಿಹೋಗಿತ್ತು !! ಸಭೆಯಲ್ಲಿ ಅಷ್ಟು ಜನ ಡಾಕ್ಟರುಗಳು ಇದ್ದೂ ಏನೂ ಮಾಡಲಾಗಲಿಲ್ಲವೇ ಎಂದಿರಾ? ಅವರುಗಳು, ತಮ್ಮ ವೈಯುಕ್ತಿಕ ಸಾಧನೆ ಅಥವಾ ರಾಜಕೀಯ ವಶೀಲಿಯಿಂದ ಆದ ’ಡಾಕ್ಟರೇಟ್’ ಡಾಕ್ಟರುಗಳು ಅಷ್ಟೇ ಹೊರತು ಜೀವ ಉಳಿಸುವ ಧನ್ವಂತರಿಗಳಲ್ಲ !!!

ಸ್ಮರಣೆ:

ಸಾಯುವ ಕಾಲದಲ್ಲಿ ಭಗವನ್ನಾಮ ಸ್ಮರಣೆ ಮಾಡಿದರೆ ಮೋಕ್ಷ ಪ್ರಾಪ್ತಿ ಎಂದು ಕೇಳಿದ್ದೇವೆ. ಸತ್ತವರನ್ನು ಕೇಳೋಣವೆಂದರೆ ಅವರು ಕೈಗೆ ಸಿಕ್ಕೋಲ್ಲ. ಅಕಸ್ಮಾತ್ ಸಿಕ್ಕು ನಮಗೆ ಹೇಳಿದರೆ ಎದೆ ನಿಂತು ನಾವೇ ಢಾಮಾರ್ ಎಂದಿರುತ್ತೇವೆ !! ಹೋಗ್ಲಿ ಬಿಡಿ, ಮೋಕ್ಷ ಸಿಗಲೆಂದು, ಹಿಂದಿನ ಕಾಲದವರು ಮಕ್ಕಳಿಗೆ ದೇವರ ಹೆಸರನ್ನಿಡುತ್ತಿದ್ದರು ಎಂದು ಹಲವರ ಅಂಬೋಣ. ಅದೇ ಹಿರಿಯರು, ಈಗಿನ ಕಾಲದವರು ಇಡುವ ಹೆಸರಿನ ಬಗ್ಗೆ ಕುಹಕವಾಡುತ್ತಾರೆ. "ಏನು ಹೆಸರು ಇಡ್ತಾರೋ ನಾಲಿಗೇನೇ ತಿರುಗೋಲ್ಲ. ಹೋಗೋ ಕಾಲಕ್ಕೆ ಆ ಹೆಸರು ಹೇಳಲು ಹೊರಟರೆ ನಾಲಿಗೆ ಸಿಕ್ಕಿಹಾಕಿಕೊಂಡು ನಾಳೆ ಹೋಗೋ ಜೀವ ಇಂದೇ ಹೋಗುತ್ತದೆ" ಅಂತ. ಈ ಮಾತನ್ನು ಇಂದಿನವರು ಏನೆಂದು ಸಮರ್ಥಿಸಿಕೊಳ್ಳುತ್ತಾರೆ ಗೊತ್ತೇ? "ದಿನಕ್ಕೊಂದು ರೀತಿ ಖಾಯಿಲೆ ಹುಟ್ಟಿಕೊಳ್ಳುವ ಈಚಿಗಿನ ದಿನಗಳಲ್ಲಿ ಆರೋಗ್ಯವಂತರಾಗಿ ಪ್ರಾಣ ಕಳೆದುಕೊಳ್ಳುವವರು ಅಪರೂಪ. ವಯಸ್ಸಾಗುತ್ತಿದ್ದಂತೆಯೇ ರೋಗರುಜಿನಗಳು ಕ್ಯೂ ನಿಂತು ಅಪ್ಪಿಕೊಳ್ಳುತ್ತೆ. ಆ ಸ್ಥಿತಿಯಲ್ಲಿ ಮಾತಾಡೋ ಶಕ್ತಿ ಇರೋಲ್ಲ. ಆ ಸ್ಥಿತಿಯಲ್ಲಿ ಮಕ್ಕಳು ನಮ್ಮನ್ನು ನೋಡಿಕೊಳ್ಳುತ್ತಾರೆ ಎಂಬೋ ಅದೃಷ್ಟವೂ ಇರುತ್ತೋ ಇಲ್ಲವೋ ಗೊತ್ತಿಲ್ಲ. ಇನ್ನು ಅವರ ಹೆಸರು ಹಿಡಿದು ಕೂಗೋದು ಎಲ್ಲಿಂದ ಬಂತು? ಇದೆಲ್ಲಕ್ಕೂ ಪರಿಹಾರವೆಂದರೆ ಮಾತ್ರೆ, ಔಷದಿಗಳಿಗೆ ದೇವರ ಹೆಸರು ಇಡುವುದು" .... ಏನಂತೀರಾ?

ಸಮರ್ಥನೆ:

ಗಂಡ-ಹೆಂಡತಿ ಇಬ್ಬರೂ ಟೆಕ್ಕಿಗಳು. ಇಬ್ಬರಿಗೂ ಒಳ್ಳೆಯ ಕಂಪನಿಗಳಲ್ಲಿ ಕೆಲಸ. ಕೈತುಂಬಾ ಸಂಬಳ, ಮೈತುಂಬಾ ಸಾಲ. ಹೊಸದಾಗಿ ಒಂದು ಅಪಾರ್ಟ್ಮೆಂಟ್ ಖರೀದಿ ಮಾಡಿದರು. ತಮ್ಮ ಅಪ್ಪ-ಅಮ್ಮಂದಿರ ಗಲಾಟೆಗೆ ಗೃಹಪ್ರವೇಶ ಮಾಡಿಸಿದರು. ಭಟ್ಟರಿಗೆ "ನೀವೇನು ಮಾಡುತ್ತೀರೋ ಮಾಡಿಕೊಳ್ಳಿ, ನಮ್ಮಿಂದ ಪೂಜೆ ಮಾಡಿಸಬೇಕು ಹಂಗೆ ಹಿಂಗೆ ಅಂತ ಕರೀಬೇಡಿ. ಆ ದಿನ ನಮ್ಮ ಮನೆಗೆ ದೊಡ್ಡ ಮನುಷ್ಯರೆಲ್ಲ ಬರ್ತಾರೆ..." ಇತ್ಯಾದಿ ಇತ್ಯಾದಿ ಕಂಡೀಷನ್’ಗಳನ್ನು ಹಾಕಿದರು. ಎರಡೂ ಕಡೆ ಹಿರಿಯರು ಏನೂ ಮಾತನಾಡಲಾಗದೆ ಸುಮ್ಮನಿದ್ದರು. ಎಲ್ಲ ಕೆಲಸ ಮುಗಿದು ಭಟ್ಟರು ಹೊರಟರು. ಟೆಕ್ಕಿ ಗಂಡ ಕೇಳಿದ "ಒಂದು ಪೂಜೆ ಮಾಡೋದು ಬಿಟ್ಟು ಅದೇನು ವಿದ್ಯೆಗೊಂದು, ಶಕ್ತಿಗೊಂದು, ಶಾಂತಿಗೊಂದು ಅಂತೆಲ್ಲ ನೂರಾರು ದೇವರುಗಳಿಗೆ ಪೂಜೆ ಮಾಡ್ತೀರಾ. ಸುಮ್ಮನೆ ನಮ್ಮಂತಹವರಿಂದ ದುಡ್ಡು ಕಿತ್ತುಕೊಳ್ಳಲು ಅಲ್ಲವೇ?" ಅಂತ. ಟೆಕ್ಕಿ ಹೆಂಡತಿ ಕಿಸಕ್ಕೆಂದು ನಕ್ಕಳು. ಭಟ್ಟರು ಖಾರವಾಗೇ ನುಡಿದರು "ನೀವುಗಳು, ಕಂಪ್ಯೂಟರ್’ನಲ್ಲಿ ಮಾಡೋ ಒಂದು ಕೆಲಸಕ್ಕೆ ನೂರಾರು ಸಾಫ್ಟ್-ವೇರ್ ಬಳಸುತ್ತೀರಲ್ಲ ಹಾಗೇ ಇದೂ ಕೂಡ" ಅಂತ ನುಡಿದು ತಮ್ಮ ಕಾರಿನಲ್ಲಿ ಕುಳಿತು ಹೊರಟರು.

ಸಮರ್ಪಣೆ:

ಒಂದಾನೊಂದು ನಗರದಲ್ಲಿ ಅತ್ಯಂತ ದೊಡ್ಡದಾದ ದೇವಾಲಯ ಒಂದಿತ್ತು. ಅದ್ಬುತವಾದ ವಿನ್ಯಾಸದಿಂದ ಕೂಡಿದ ಆ ದೇವಾಲಯವನ್ನು ನೋಡುವುದೇ ಒಂದು ಹಬ್ಬ ಎನ್ನಬಹುದಾದ ಸೊಬಗು. ಒಂದು ಕರಾಳ ದಿನದಂದು ಇದ್ದಕ್ಕಿದ್ದಂತೆ ದೇವಾಲಯವು ನಿಧಾನವಾಗಿ ಭೂಮಿಯ ಒಳಗೆ ಇಳಿಯುತ್ತ ಮುಳುಗೇ ಹೋಯಿತು. ಭೂಮಿಯ ಒಳಗೆ ಸರಿಯುತ್ತಿರುವುದನ್ನು ಕಂಡು ಜನತೆಗೆ ಎನೂ ಮಾಡಲು ತೋಚಲಿಲ್ಲ. ಕಡೀ ಘಳಿಗೆಯಲ್ಲಿ ಅಶರೀರವಾಣಿಯೊಂದು ಮೂಡಿತು. "ರಾಜಕೀಯ ವಲಯದಲ್ಲಿ ಅನ್ಯಾಯ, ಅಕ್ರಮಗಳು ಹೆಚ್ಚಿವೆ. ಇದರ ಪರಿಣಾಮವಾಗಿ ದೇವಾಲಯ ಮುಳುಗಿದೆ. ರಾಜಕೀಯ ಹಿರಿಯರು ತಮ್ಮ ತಮ್ಮ ದುಷ್ಕಾರ್ಯಗಳನ್ನು ಜನತೆಯ ಮುಂದೆ ಒಪ್ಪಿಕೊಂಡಲ್ಲಿ, ದೇವಾಲಯ ಮೇಲೆದ್ದು ಬರುತ್ತದೆ" ಎಂದು. ಜನರ ಒತ್ತಾಯಕ್ಕೆ ಮಣಿದು, ಉನ್ನತ ಮಟ್ಟದ ಅಧಿಕಾರಿಗಳಿಂದ ಹಿಡಿದು ಕಾರಕೂನನವರೆಗೂ ದೇವನ ಕೆಲಸ ಮಾಡುವ ಪ್ರತಿ ಒಬ್ಬರೂ ನುಡಿಯುತ್ತಾ ಹೋದರು. ದೇವಾಲಯವು ಸಂಪೂರ್ಣ ಮೇಲೆದ್ದು ನಿಂತು. ಎಲ್ಲರೂ ಹರ್ಷೋದ್ಗಾರದಿಂದ ತಮ್ಮ ನಾಯಕರಿಗೆ ಜೈಕಾರ ಹಾಕುತ್ತ ಮುಖ್ಯದ್ವಾರವನ್ನು ತೆರೆದು ಒಳಗೆ ಹೋದರು. ದೇವಾಲಯ ಮೇಲೆದ್ದಿತ್ತು, ಆದರೆ ದೇವನು ಮಾತ್ರ ಒಳಗೆ ಇರಲಿಲ್ಲ. ದೇವನಿಲ್ಲದ ಆ ಗುಡಿಯಲ್ಲಿ ಇಂದಿಗೂ ದಾನವರು ವಾಸಿಸುತ್ತಿದ್ದಾರೆ. ಆ ದೇವಾಲಯಕ್ಕೆ ’ವಿಧಾನ ಸೌಧ’ ಎಂದೂ ಹೆಸರಿದೆ !!!


ನಾನ್ಯಾಕೆ ಸಿನಿಮಾ ಸೇರೋಲ್ಲ?

ನಾನು ಅಂದರೆ ನಾನಲ್ಲ .... ನನ್ನ ಹೆಸರನ್ನು ಮೊದಲೇ ಹೇಳಿಬಿಡುತ್ತೇನೆ ... ಅರುಣ ... ಅಪ್ಪ ಅಮ್ಮನ ಏಕ ಮಾತ್ರ ಸಂತಾನ


ಸೊಗಸಾದ ಹೆಸರು ...


ನನ್ನೀ ಕಥೆ ಬಹಳ ಸೂಕ್ಷ್ಮವಾಗಿದೆ ... ಒಂದು ವಿಲಕ್ಷಣ ಅನುಭವ ... ಮೃದು ಹೃದಯಿಗಳು, ಹೆಂಗೆಳೆಯರು ಓದುವಾಗ ಗಟ್ಟಿ ಮನಸ್ಸು ಮಾಡಿಕೊಳ್ಳಿ .. ಪ್ಲೀಸ್ ... ಕಡೆಗೆ ಏನೂ ಅನ್ನಿಸದಿದ್ದರೆ, ಪರವಾಗಿಲ್ಲ ಬಿಡಿ. ನನಗೇನೂ ಬೇಸರವಿಲ್ಲ.


ಹೆಸರಿಗೆ ತಕ್ಕಂತೆ ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಹಾಸಿಗೆಗೆ ಬೀಳೋ ತನಕ ನಿರಂತರ ಲವಲವಿಕೆ .. ಅದೆಲ್ಲಿರುತ್ತೋ ಚೈತನ್ಯ ಗೊತ್ತಿಲ್ಲ... ನನ್ನ ಕಂಡರೆ ಹಲವರಿಗೆ ಹೊಟ್ಟೆಕಿಚ್ಚು ಈ ಕಾರಣಕ್ಕಾಗಿಯೇ ...


ಓದಿನಲ್ಲಿ ಸದಾ ಮುಂದು, ಆಟ ಸ್ವಲ್ಪ ಹಿಂದೆ. ಬಿಸಿಲಲ್ಲಿ ಆಡಿದರೆ ಕಪ್ಪಾಗುತ್ತೀಯ, ಆಮೇಲೆ ಯಾರೂ ಮದುವೆ ಆಗೋಲ್ಲ ಅಂದರೆ ಅಜ್ಜಿ ಹೆದರಿಸಿದ್ದರು. ಆದರೆ ಚಿತ್ರಕಲೆ, ಸಂಗೀತ, ನಾಟಕ ಅಂತ ಎಲ್ಲದರಲ್ಲೂ ಆಸಕ್ತಿ. ನನ್ನ ಲಲಿತ ಕಲೆಗಳಿಗೆ ಮನೆಯಲ್ಲಿ ಒಳ್ಳೆಯ ಪ್ರೋತ್ಸಾಹ ಇತ್ತು. ನಿಭಾಯಿಸೋ ಶಕ್ತಿ ಇದ್ದಲ್ಲಿ ಯಾಕೆ ಬೇಡ ಅಂತ ... ನಮಗೇನು ಹಣ ಬಲವೇ, ಜಾತಿ ಬಲವೇ ಅಥವಾ ರಾಜ(ಕಾರಣಿ) ಬಲವೇ? ಒಂದೂ ಇಲ್ಲ. ಎಷ್ಟು ಸಾಧ್ಯವೋ ಅಷ್ಟು ಕಲಿತಲ್ಲಿ ಯಾವಾಗಲಾದರೂ ಉಪಯೋಗಕ್ಕೆ ಬರುತ್ತೆ. ಅಲ್ಲವೇ?


ಎಲ್ಲ ಸರಿ, ಒಂದೇ ಒಂದು ವಿಷಯದಲ್ಲಿ ಮಾತ್ರ ಮನೆಯವರ ಅನುಮತಿ ದೊರಕಿರಲಿಲ್ಲ .... ಅದು ’ನಟನೆ’ !!!


ಶಾಲಾ-ಕಾಲೇಜುಗಳಲ್ಲಿ ರಂಗದ ಮೇಲಿದ್ದರೂ ಸಿನಿಮಾ ಬಿಡಿ, ಕಿರು-ತೆರೆಯ ಮೇಲೆ ಕಾಣಿಸಿಕೊಳ್ಳಲು ಇಚ್ಚೆ ತೋರಿದರೂ ಅದಕ್ಕೆ ನಕಾರ ಸಿದ್ದವಾಗಿರುತ್ತಿತ್ತು !!
ನಾನು ಅಡ್ಡ ಹಾದಿ ಹಿಡಿಯುವುದಿಲ್ಲ ಎಂಬ ನಂಬಿಕೆ ಇದ್ದರೂ ಹೃದಯದ ಮೂಲೆಯಲ್ಲಿ ಅಳುಕು ಇದ್ದೇ ಇತ್ತು, ಅಪ್ಪ-ಅಮ್ಮನಿಗೆ.


ಯಾವಾಗ ಈ ವಿಷಯ ಬಗ್ಗೆ ಪ್ರಸ್ತಾವನೆ ಮಾಡಿದರೂ, ಅವರುಗಳು ಹೇಳೋದು ’ವಿದ್ಯೆಯಿದೆ, ವಿನಯ ಇದೆ. ನಿಷ್ಟೆ ಇದೆ. ಸಂಸ್ಕಾರವಿದೆ. ಯಾವ ಕೆಲಸವನ್ನೂ ಸಾಧಿಸುವ ಆತ್ಮ ವಿಶ್ವಾಸ ಇದೆ. ನಾಲ್ಕು ಜನರಿಗೆ ಮಾದರಿಯಾಗಿ ದಾರಿದೀಪವಾಗುವ ಹಾಗೆ ಬದುಕಿದರೆ ಚೆನ್ನ" ಎಂದು ಶುರು ಮಾಡಿ ನಂತರ ಮಾತನ್ನು ಮದುವೆ, ಮೊಮ್ಮಕ್ಕಳಿಗೆ ತಿರುಸಿ ಪುಟ್ಟ ಭಾಷಣವೇ ಬಿಗಿದಿರುತ್ತಾರೆ.


ನನಗೆ ನಟನೆಯಲ್ಲಿ ಆಸಕ್ತಿ ಇದೆ ಆದರೆ ಸುಮ್ಮನೆ ಅವರ ಇಚ್ಚೆಗೆ ವಿರುದ್ದವಾಗಿ ನಟಿಸಲೇ ಬೇಕು ಎಂಬ ಕೆಟ್ಟ ಆಸೆ ಇಲ್ಲ !


ಈ ನಡುವೆ, ನನ್ನ ಮದುವೆಗೆ ತಯಾರಿ ನೆಡೆಯುತ್ತಿದೆ ಎಂದೂ, ಕೆಲವು ಕಡೆಯಿಂದ ಪ್ರಸ್ತಾವನೆ ಬರುತ್ತಿರುವ ವಿಷಯವೂ ನನಗೆ ಗೊತ್ತು. ಇಷ್ಟಕ್ಕೂ ನಾನೇನೂ ಮದುವೆ ವಿರೋಧಿಯೂ ಅಲ್ಲ, ಹಾಗಾಗಿ ಆ ವಿಷಯದ ಬಗ್ಗೆ ತಕರಾರಿಲ್ಲ.


ಹೋಗ್ಲಿ, ಅದರ ವಿಷಯ ಬಿಡಿ. ಈಗ ನಟನೆ ವಿಷಯಕ್ಕೆ ಬರೋಣ.


ಸಿನಿಮದಲ್ಲಿ ನಟಿಸಿದ ಮಾತ್ರಕ್ಕೆ ಜೀವನ ಹಾಳಾಗುತ್ತದೆ ಎಂದೇಕೆ ಇವರ ಅಳುಕು ಅಂತೀರಾ?


ಸಿನಿಮಾ ರಂಗಕ್ಕೂ ಅಪ್ಪನಿಗೂ ಒಂದು ರೀತಿ ನಂಟು ಇದ್ದೇ ಇದೆ. ಹಲವಾರು ಜನರೂ ಗೊತ್ತು. ಅಲ್ಲಿನ ಮಾಯಾ ಜಗತ್ತೂ ಗೊತ್ತು. ತೆರೆಯ ಮೇಲೆ ನೋಡುವ ಮಂದಿಗೂ ನಿಜ ಜೀವನದಲ್ಲಿ ನಾವು ಕಾಣುವ ಅದೇ ಮಂದಿಗೂ ಅಜಗಜಾಂತರ ವ್ಯತ್ಯಾಸ ಇರುತ್ತದೆ. ರಂಗು ರಂಗಾದ ಕಥೆಗಳು ಅವರ ಸುತ್ತಮುತ್ತ ಇರುವುದೂ, ಹಲವಾರು ಬಾರಿ ಕೊಳಕು ಕಥೆ ಎಂದು ಸಮಯ ಸಿಕ್ಕಾಗಲೆಲ್ಲ ಹೇಳುತ್ತಿದ್ದರು. ಬರೀ ಥಳುಕು-ಬಳುಕು ನೋಡಿ ಸಿನಿಮಾ ಸೇರುತ್ತೇವೆ ಎಂದು ಬಂದು ಹಾಳಾದವರ ಪಟ್ಟಿ ಸಾಕಷ್ಟು ಉದ್ದ ಇದೆ ಎಂದು ಆಗಾಗ ಹೇಳುತ್ತಿದ್ದರು.


ಇರಲಿ, ಚಿತ್ರರಂಗದ ಜನ ಅಪ್ಪನಿಗೆ ಪರಿಚಯ ಇದ್ದುದರಿಂದ ನನಗೆ ಅವಕಾಶ ಸಿಗುವ ಬಗ್ಗೆ ಅನುಮಾನವಿಲ್ಲ. ಆದರೆ ಸಿನಿಮಾ ರಂಗವನ್ನು ಹತ್ತಿರದಿಂದ ನೋಡಿರುವ ಅಪ್ಪನಿಗೆ, ನಾನು ಅಲ್ಲಿ ಹೋಗುವುದು ಇಷ್ಟವಿರಲಿಲ್ಲ.


ಹೀಗೇ ಒಂದು ಸಂಜೆ ಮನೆಗೆ ಹೊರಟಿದ್ದೆ. ನೋಡಿದರೇ, ನಿಲ್ಲಿಸಿದ್ದ ಕಾರು ಪಂಚರ್ ಆಗಿತ್ತು. ಮನೆಗೆ ಬೇಗ ಹೋಗೋದಿತ್ತು ಅಂತ ಕಾರನ್ನು ಅಲ್ಲೇ ಬಿಟ್ಟು, ಆಟೋಗಾಗಿ ಹುಡುಕುತ್ತಿದ್ದೆ. ಅದೇ ದಾರಿಯಲ್ಲಿ ಬಂದ ಒಂದು ಕಾರು ನನ್ನನ್ನು ನೋಡಿ ನಿಲ್ಲಿಸಿತು.


ರಾಧಿಕ ....


ನನ್ನ ಚಿಕ್ಕಪನ ಮಗಳು ...


ನನ್ನ ಕಾರಿನ ಕಥೆ ಹೇಳಿದೆ.... ಮನೆಗೆ ಡ್ರಾಪ್ ಕೊಡ್ತೀನಿ ಎಂದಾಗ ನಾನು ಅವಳ ಕಾರಿನಲ್ಲಿ ಕುಳಿತೆ. ಅವಳ ಮುಖದಲ್ಲಿ ಏನೋ ಸಂತೋಷ ಎದ್ದು ಕಾಣುತ್ತಿತ್ತು. ಇಬ್ಬರೂ ಒಂದೇ ವಯಸ್ಸಿನವರು. ಒಟ್ಟಿಗೆ ಆಡಿ ಬೆಳೆದವರು. ’ಏನು ಅಮ್ಮಾವ್ರು ಬಹಳ ಖುಷಿಯಲ್ಲಿರೋ ಹಾಗಿದೆ’ ಅಂದೆ.


ರಾಧಿಕ ಕಾರಣ ಹೇಳಿದಳು !


ಮನೆ ಬಂತು. ಬೇರೆ ಕೆಲಸವಿದ್ದುದರಿಂದ ಅವಳು ಹೊರಟಳು. ನನಗೂ ಅವಳನ್ನು ಒಳಗೆ ಕರೆಯುವ ಮೂಡ್ ಇರಲಿಲ್ಲ. ತಲೆ ಬಿಸಿಯಾದಂತೆ ಅನ್ನಿಸಿ ಸ್ಟ್ರಾಂಗ್ ಕಾಫಿ ಹೀರಿದೆ. ಸ್ವಲ್ಪ ಹಾಯ್ ಅಂತ ಅನ್ನಿಸಿದರೂ ಏನೋ ಕಳೆದುಕೊಂಡ ಭಾವನೆ. ಶಾಸ್ತ್ರಕ್ಕೆ ಊಟವೂ ಆಯ್ತು.


ಮ್ಲಾನವದನ ಕಂಡು ಅಮ್ಮ ಏನಾಯ್ತು ಅಂದರು "ರಾಧಿಕ ಸಿಕ್ಕಿದ್ದಳು" ಅಂದೆ. ಅಮ್ಮ ಸುಮ್ಮನಿದ್ದರು. ಬಹುಶ: ಅವರಿಗೂ ವಿಷಯ ಗೊತ್ತು ಅಂತ ಅನ್ನಿಸಿತು. ನನಗೇನು? ಅಪ್ಪ ಸೋಫಾದ ಮೇಲೆ ಕುಳಿತಿದ್ದರಿಂದ, ಅವರಿಗೂ ಕೇಳಿಸಲಿ ಎಂದು "ರಾಧಿಕಾಗೆ ಸಿನಿಮಾದಲ್ಲಿ ನಟಿಸೋ ಚಾನ್ಸ್ ಸಿಕ್ಕಿದೆಯಂತೆ" ಅಂದೆ.


ಜೋರಾಗಿ ಅಳಬೇಕು ಅನ್ನಿಸಿದರೂ, ಸ್ವಾಭಿಮಾನ ಅಡ್ಡ ಬಂತು.


ಮೊದಲಿಂದಲೂ ಮನೆಯವರಿಗೆಲ್ಲ ಸಿನಿಮಾದಿಂದ ದೂರ ಇರಿ ಎಂದೇ ಹೇಳುತ್ತಿದ್ದುದೂ, ಇಂದು ಇವರ ಮಾತು ಮೀರಿ ರಾಧಿಕ ನಟಿಸಲು ಒಪ್ಪಿದ್ದಾಳೆ ಅಂದಾಗ ಅಪ್ಪನಿಗೂ ರೇಗಿತ್ತು ಅನ್ನಿಸುತ್ತದೆ. ಅವರೂ ತಮ್ಮದೇ ಜೋರು ದನಿಯಲ್ಲಿ ಹೇಳಿದರು ’ಅನುಭವ ಆದ ಹೊರತು ಕೆಲವರಿಗೆ ಬುದ್ದಿ ಬರೋಲ್ಲ ಅನ್ನಿಸುತ್ತೆ. ಅದೂ ನೆಡೆದೇ ಹೋಗಲಿ. ನನ್ನ ಹೆಸರು ಬಳಸುವ ಅವಶ್ಯಕತೆ ಇಲ್ಲ’ ಅಂದುಬಿಟ್ಟರು.


ಸಿಟ್ಟು ಬಂದಾಗ ಅಪ್ಪನ ಮಾತುಗಳು, ಸಿನಿಮಾದಲ್ಲಿ ಇರುವಂತೇ ಕೇಳಿಸುತ್ತದೆ.


ನಾನು ಯಾಕಾದರೂ ಈ ವಿಷಯ ತೆಗೆದೆನೋ ಅನ್ನಿಸಿತು. ಅನುಭವ ಕೆಟ್ಟದಾದರೆ ಆರಂಭದಲ್ಲೇ ನಿಲ್ಲಿಸಿಬಿಡುತ್ತೇನೆ ಎಂದು ನಿರ್ಧಾರ ಮಾಡಿ, ರಾಧಿಕಳಿಗೆ ಕರೆ ಮಾಡಿ ವಿಷಯ ಹೇಳಿದೆ.


ಮುಂದಿನ ಕೆಲವು ದಿನಗಳಲ್ಲಿ ಹಲವಾರು ವಿಷಯಗಳ ಅಪ್ಡೇಟ್ ಕೊಟ್ಟಳು. ತಾನು ನಟಿಸಲಿರುವ ಸಿನಿಮಾದ ಪ್ರಡ್ಯೂಸರ್’ಗೆ ವಿಷಯ ಹೇಳ್ತೀನಿ. ಸದ್ಯದಲ್ಲೇ ಇನ್ನೊಂದು ಪ್ರಾಜಕ್ಟ್ ಶುರು ಮಾಡುತ್ತಿದ್ದಾರೆ. ಅದರಲ್ಲಿ ಅವಕಾಶ ಕೊಡಬಹುದು ಅಂತ.


ಒಂದು ಶುಭ ಘಳಿಗೆಯಲ್ಲಿ ಪ್ರಡ್ಯೂಸರ್ ಕಡೆಯಿಂದ ಕರೆ ಬಂತು. ನಾನು ಭೂಮಿಗಿಂತ ಕೇವಲ ಒಂದು ಇಂಚು ಮೇಲೆ ನೆಡೆಯುತ್ತಿದ್ದೆ ಅನ್ನಿ ! ಏನೇನೋ ಕನಸುಗಳು. ಎಲ್ಲೆಲ್ಲೂ ನನ್ನ ಸಿನಿಮಾ ಪೋಸ್ಟರ್’ಗಳೇ ಕಾಣಿಸುತ್ತಿತ್ತು. ಹಾರಾಡಿಕೊಂಡೇ ಅವರನ್ನು ಭೇಟಿ ಮಾಡಲು ಹೋದೆ.


ಒಂದು ಸಣ್ಣ ಕಛೇರಿ. ದೊಡ್ಡ ಚೇರಿನ ಹಿಂದೆ ಕುಳಿತಿದ್ದ ವ್ಯಕ್ತಿ ಸ್ವಲ್ಪ ದಿಫೆರೆಂಟಾಗಿ ಕಾಣಿಸಿದ. ಸಿನಿಮಾ ಜನವೇ ಹೀಗೇನೋ? ಅವನನ್ನು ನೋಡಿದ ಕೂಡಲೇ ಕಾಲಿಗೆ ಬಿದ್ದು ಗೌರವ ಕೊಡುವ ಹಾಗೇನೂ ಇರಲಿಲ್ಲ. ನಾನು ಪರಿಚಯ ಹೇಳಿಕೊಂಡೆ, ಆದರೆ ಅಪ್ಪನ ಹೆಸರು ಹೇಳಲಿಲ್ಲ. ಆತ ಸುಮ್ಮನೆ ತಲೆ ಆಡಿಸುತ್ತ ನನ್ನನ್ನೇ ನೋಡುತ್ತಿದ್ದ.


ಮುತ್ತಿನಂತಹ ಬೆವರ ಹನಿಗಳು ಮೂಡಿತ್ತು ಎನಗೆ. ಮೇಜಿನಿಂದ ಸ್ವಲ್ಪ ದೂರ ನಿಲ್ಲುವಂತೆ ಸನ್ನೆ ಮಾಡಿ ತೋರಿಸಿದ. ನಾನು ದೂರ ನಿಂತೆ.


ಅಡಿಯಿಂದ ಮುಡಿಯವರೆಗೆ ನುಂಗೋ ಹಾಗೆ ನೋಡುತ್ತಿದ್ದ. ಮೊದಲು ಎಡಕ್ಕೆ ತಿರುಗುವಂತೆ ಸನ್ನೆ ಮಾಡಿದ, ನಂತರ ಬಲಕ್ಕೆ ತಿರುಗುವಂತೆ ಸನ್ನೆ ಮಾಡಿದ. ಒಳಗಿನಿಂದ ಅವನ ಸಹಾಯಕಿ ಬಂದಳು. ಒಂದೆರಡು ಸನ್ನಿವೇಶಗಳನ್ನು ನನಗೆ ಹೇಳಿ ಅದಕ್ಕೆ ನಟಿಸುವಂತೆ ಹೇಳಿದಳು. ನಾನು ನಟಿಸಿ ತೋರಿಸಿದೆ. ಸಹಾಯಕಿಗೆ ಖುಷಿಯಾಯಿತು.


ನಿರ್ಮಾಪಕ ಎಂಬೋ ಪ್ರಾಣಿಗೂ ಇಷ್ಟವಾದಂತೆ ಅನ್ನಿಸಿದರೂ ಅವನ ನೋಟ ಮಾತ್ರ ಯಾಕೋ ಮೈಯೆಲ್ಲ ಮುಳ್ಳು ಬರುವಂತೆ ಮಾಡುತ್ತಿತ್ತು. ಅದೇನು ಹೇಳಿದನೋ ಆ ಹುಡುಗಿಗೆ, ಕಿಸಕ್ಕನೆ ನಕ್ಕು ಒಳಗೆ ಹೋದಳು. ನನಗೆ ಸಿಟ್ಟು ಬರುತ್ತಿತ್ತು. ಆ ಪ್ರಾಣಿ ಚೇರಿನಿಂದ ಎದ್ದ.


ಹೂವಿನ ಚಿತ್ತಾರದ ಶರಟು, ಅದರ ಮೇಲೆ ಅರ್ಧ ತೋಳಿನ ನೇರಳೇ ಬಣ್ಣದ ಕೋಟ್, ಟೈಟ್ ಜೀನ್ಸ್ ಶಾರ್ಟ್ಸ್. ಹತ್ತು ಬೆರಳುಗಳಲ್ಲಿ ಕನಿಷ್ಟ ಆರು ಉಂಗುರಗಳು. ಮೂಗಿನ ಹೊಳ್ಳೆಗಳನ್ನು ಅಪ್ಪಿ ಹಿಡಿದಂತಹ ಕನ್ನಡಕ, ಅದರ ಎರಡೂ ಕಡ್ಡಿಗಳನ್ನು ಹಿಡಿದಿಡುವ ಒಂದು ಬಂಗಾರದ ಸರ ಕುತ್ತಿಗೆಯ ಹಿಂದಿನಿಂದ ಸಾಗಿತ್ತು. ಇಷ್ಟೆಲ್ಲದ ಹಿಂದಿನ ಅಂದರೆ ಆತನ ಕೊಡುಗೆ ಅಲ್ಲದ ಒಂದೇ ಅಂಶವೆಂದರೆ ಅವನ ಬಣ್ಣ.


ಹಾಲಿನಲ್ಲಿ ಅದ್ದಿ ತೆಗೆದಂತಿದ್ದ. ಸುರದ್ರೂಪಿ ಆದರೆ ತಿಕ್ಕಲ ಅನ್ನಿಸಿತು. ಚೇರಿನಿಂದ ಎದ್ದು ಬಂದು ನನ್ನ ಸುತ್ತಲೂ ಒಂದು ಪ್ರದಕ್ಷಿಣೆ ಹಾಕಿದ. ’ನನ್ನನ್ನು ಮುಟ್ಟಬೇಡ ನೀನು’ ಎಂದು ಅಂದುಕೊಳ್ಳುತ್ತಿದ್ದೆ.


ಅಂತೂ ಇಂತೂ ನನ್ನನ್ನು ನೋಡಿ ಮುಗಿಸಿ, ನಾಳೆ ಸೆಟ್’ಗೆ ಬಾ ಎಂದು ಒಂದು ರೀತಿ ಕೆಟ್ಟದಾಗಿಯೇ ಹೇಳಿದಂತಿತ್ತು. ಅದು ಅವನ ಮೊದಲ ಮಾತು. ನನಗೆ ಇನ್ನು ಕೇಳಬಾರದು ಎನ್ನಿಸಿದ ಸ್ವರ ಮಾಧುರ್ಯ. ಸರಿ ಎಂದು ಹೇಳಿ ಅಲ್ಲಿಂದ ನೇರವಾಗಿ ಮನೆಗೆ ಬಂದೆ.


ಅಲ್ಲಿಗೆ ನನ್ನ ಸಿನಿಮಾ ಆಸೆ ಸತ್ತಿತ್ತು !


ಎಲ್ಲಿಯೋ ಹೊರಗೆ ಹೋಗಿದ್ದ ಅಪ್ಪ-ಅಮ್ಮ ಬಂದರು. ನನ್ನ ಮುಖದ ಚರ್ಯೆ ನೋಡಿಯೇ ಏನಾಗಿದೆ ಎಂದು ಊಹಿಸಿದರೂ ಅಮ್ಮ ’ಏನಾಯ್ತು’ ಎಂದು ಕೇಳಿದರು.
ನನ್ನ ಮಾತು ಪೂರ್ತಿ ಆಲಿಸಿ, ಅಲ್ಲಿರಲು ಹಿಂಸೆಯಾಗಿ ಒಳಗೆ ನೆಡೆದರು.


ಅಪ್ಪನ ಕಡೆ ನೋಡಿದೆ.


ಅಪ್ಪ ... ಬಿದ್ದುಬಿದ್ದು ನಗುಲು ಶುರು ಮಾಡಿದರು !!!!


"ಬೇಕಿತ್ತೇನೋ ನಿನಗೆ. ನಿನ್ನ ರೂಪಿಗೆ ಸಾಲು ಸಾಲು ಹುಡುಗಿಯರು ಬೀಳ್ತಾರೆ ಅದರಿಂದ ಹಾಳಾಗ್ತೀಯ ಅಂತ ನಾನು ಹೆದರಿದ್ದೆ. ಈಗ ನೋಡಿದರೆ ಈ ಗಂಡು ಪ್ರಡ್ಯೂಸರ್ ಬಿದ್ನಾ ನಿನಗೆ? ಅಲ್ವೋ ಮಂಕೆ, ಹೆಣ್ಣಾಗಿ ರಾಧಿಕ ಗೆದ್ದುಗೊಂಡು ಬಂದಿದ್ದಾಳೆ ಗಂಡಾಗಿ ನಿನಗೇನಾಗಿತ್ತೋ?"


ಅರುಣಕುಮಾರನಾದ ನಾನು ಮೆಲ್ಲನೆ ನುಡಿದೆ "ಹೌದಪ್ಪ, ರಾಧಿಕ ಹೆಣ್ಣಾಗಿದ್ದಕ್ಕೆ ಗೆದ್ದುಗೊಂಡು ಬಂದಿದ್ದು"


ನನ್ನೀ ನಂಬುಗೆಯ ನೀ ಉಳಿಸು ...

ನೀ

ಗುಡ್ಡದಲಿರುವೆಯೋ

ಗುಡ್ಡೆಯಲ್ಲಿರುವೆಯೋ

ಅಡ್ಡಾಕಾರದಲಿರುವೆಯೋ

ನಾನರಿಯೆ


ನೀ

ಮೂರ್ತಿ ಸ್ವರೂಪಿಯೋ

ಜ್ಯೋತಿ ಸ್ವರೂಪಿಯೋ

ನಾದ ಸ್ವರೂಪಿಯೋ

ನಾ ತಿಳಿಯೆ


ನಿನ್ನಾಣತಿಯ ಸಂದೇಶದ

ಮುತ್ತಿನ ನುಡಿಗಳು

ಯಾವ ಪುಸ್ತಕದಲ್ಲಿ ನುಸುಳಿವೆಯೋ

ನಾನರಿಯೆ


ಮನದಿ ಮೂಡಿದ ನಿನ್ನ ಮೂರುತಿಗೆ

ಹೆಸರೇನಿಡಲಿ ಎಂದರಿಯದವನಿಗೆ

ಮನದಿ ಮೂಡಿದ ನಿನ್ನ ಮೂರುತಿಗೆ

ಹೇಗೆ ವಂದಿಸಲೀ ಎಂದರಿಯದವನಿಗೆ

ದಾರಿ ತೋರಿದವನು ನೀನು


ಹೇ ತ್ರಿಜಾತಿ ಸ್ವರೂಪ

ನಿನ್ನ ಆದೇಶದಂತೆ

ಮೊದಲಿಗೆ ಹೃದಯ ಮುಟ್ಟಿ

ನಂತರ ಮಂಡಿಯೂರಿ ಕುಳಿತು

ಕೊನೆಗೆ ಸಾಷ್ಟಾಂಗ ಬಿದ್ದೆನಯ್ಯ


ಹೇ ತಂದೆಯೇ

ನನ್ನೀ ಪ್ರಾರ್ಥನೆಯ ನೀ ಆಲಿಸೋ

ಅನ್ಯಾಯ ಅಕ್ರಮವ ನೀನಳಿಸೋ

ಜನರ ಮಾರಣ ಹೋಮ ನೀ ನಿಲ್ಲಿಸೋ

ದ್ವೇಷ ಜ್ವಾಲೆಯ ನೀ ನಂದಿಸೋ

ರೋಗ ರುಜಿನಗಳನು ನೀ ತಗ್ಗಿಸೋ


ಬರಲಿರುವ ನೂತನ ವರ್ಷವು

ಹತ್ತರಲ್ಲಿ ಹನ್ನೊಂದಾಗದಂತೆ

ನನ್ನೀ ನಂಬುಗೆಯ ನೀ ಉಳಿಸೋ

ನನ್ನೀ ನಂಬುಗೆಯ ನೀ ಉಳಿಸು


ಮಾತು, ಮಾತು, ಮಾತು ...

ಆರ್ಕಿಮಿಡಿಸ್’ಗೆ ಸ್ನಾನದ ತೊಟ್ಟಿಯಲ್ಲಿದ್ದಾಗ ಮಹಾ ಆಲೋಚನೆ ಬಂತಂತೆ. ನಾನೂ ದಿನಾ ಸ್ನಾನ ಮಾಡ್ತೀನಿ... ಮೈ’ಯಿಂದ ಕೊಳೆ ಹೊರಗೆ ಬಂತೇ ವಿನಹ ತಲೆಯಿಂದ ಹೊಸ ಆಲೋಚನೆ ಹೊರಗೆ ಬರಲಿಲ್ಲ ಕಣ್ರಿ....


ಮೈ ಇದೆ ಕೊಳೆ ಬಂತು, ತಲೆ ಇದ್ದಿದ್ದ್ರೆ .... ಅಂತೀರಾ ... ಹೋಗ್ಲಿ ಬಿಡಿ


ನಮ್ಮಲ್ಲೊಬ್ಬರು ಹೇಳ್ತಿದ್ರು, ಅವರಿಗೆ ಯಾವಾಗಲೂ ಹೊಸ ಆಲೋಚನೆಗಳು ಪಾಯಿಖಾನೆಯಲ್ಲೇ ಬರುತ್ತಿತ್ತಂತೆ... ಅಲ್ಲಾ, ಈ ಕಂಪ್ಯೂಟರ್ ಯುಗದಲ್ಲಿ ಪಾಯಿಖಾನೆ, ಸಂಡಾಸ್ ಎಂದೆಲ್ಲ ಅಂದಲ್ಲಿ ಯಾರಿಗೆ ಅರ್ಥವಾದೀತು? ಲಕ್ಷಣವಾಗಿ ಕನ್ನಡದಲ್ಲಿ ’ಟಾಯ್ಲೆಟ್’ ಅನ್ನೋಣ ... ಏನಂತೀರ ??


ಹೋಗ್ಲಿ ಬಿಡಿ ... ನಾನೆಲ್ಲಿದ್ದೆ? ಟಾಯ್ಲೆಟ್’ನಲ್ಲಿ ... ಛೇ, ಛೆ ಅಲ್ಲ ಅದರ ಬಗ್ಗೆ ಹೇಳುತ್ತಿದ್ದೆ. ಟಾಯ್ಲೆಟ್’ನಲ್ಲಿ ಹೊಸಾ ಅಲೋಚನೆ ಬಂತು ಅನ್ನೋದನ್ನ ನಾನು ಸ್ವಲ್ಪ ಪಾಲಿಶ್ ಮಾಡಿ ಹೇಳಿದರೆ, ಏಕಾಂತದಲ್ಲಿದ್ದಾಗ ಹೊಸ ಅಲೋಚನೆಗಳು ಬರುತ್ತವೆ. ಕೆಲವರಿಗೆ ಜನರ ಮಧ್ಯೆ ಇದ್ದಾಗಲೂ ಹೊಸ ವಿಚಾರಗಳು ತಲೆಗೆ ಬರುತ್ತವೆ. ಅಂತಹವರು ಒಂದು ರೀತಿ ಸ್ಪೆಷಲ್ ಕೇಸು ಬಿಡಿ. ಈಗ ಈ ವಿಷಯ ಯಾಕೆ ಬಂತು ಅಂತೀರ?


ನನ್ನ ಹತ್ತಿರದ ಸ್ನೇಹಿತರೊಬ್ಬರು ಲಲಿತ ಪ್ರಬಂಧ ಬರೆದು ಕೊಡಿ ಎಂದರು .... ಹತ್ತಿರದ ಸ್ನೇಹಿತರು ಅಂದರೆ ನನ್ನ ಕಛೇರಿಯಲ್ಲಿ ಎದುರಿಗೋ ಪಕ್ಕಕ್ಕೋ ಕುಳಿತುಕೊಳ್ಳುವವರಲ್ಲ. ಅಂದ ಹಾಗೆ ಕಛೇರಿಯಲ್ಲಿರುವವರು ಸ್ನೇಹಿತರೂ ಅಲ್ಲ .... ಕೊಲೀಗ್ಸ್ ಅಂತ ನಾನು ಹೇಳಿದ್ದು ... ಎಂದಾಗ ನಾನು ನನ್ನ ಅತ್ಯಂತ ಪ್ರಿಯವಾದ ಅಜ್ಞ್ನಾನವನ್ನು ಪ್ರದರ್ಶಿಸಿದೆ. ಆಗ ಅವರು ಹೇಳಿದ್ದು ’ಲಲಿತಳ ಮೇಲೆ ಪ್ರಬಂಧ’ ಬರೆದರೆ ಅದು ಲಲಿತ ಪ್ರಬಂಧ ಅಂತ.


ನಾನು ಅದನ್ನೇ ಸೀರಿಯಸ್ಸಾಗಿ ತೆಗೆದುಕೊಂಡು ಆಲೋಚನೆ ಮಾಡಿದೆ ’ಲಲಿತಳ ಮೇಲೆ’ ಪ್ರಬಂಧ ಬರೆಯೋಣ ಅಂತ. ಆಗಲೇ ಮತ್ತೊಂದು ಯೋಚನೆಯೂ ಬಂತು. ಹಾಗಂತ ಲಲಿತಳನ್ನು ಕೇಳಲು ಹೋದರೆ, ನನ್ನ ಮುಖಕ್ಕೆ ಮಂಗಳಾರತಿ ಮಾಡಿ ’ನಾಚಿಕೆ ಆಗೋಲ್ವೇ. ನಿಮಗೆ ಏನನ್ನಿಸುತ್ತೋ ಅದನ್ನು ಪೇಪರ್ ಮೇಲೆ ಬರೀರಿ ಅಥವಾ ಕೀಬೋರ್ಡ್ ತೊಗೊಂಡ್ ಕುಟ್ಟಿ’ ಅಂತ ಅಂದುಬಿಟ್ರೆ??


ಅಯ್ಯಯ್ಯೋ .... ಮರ್ಯಾದೆ ಪ್ರಶ್ನೆ! ಸದ್ಯಕ್ಕೆ ಅಲ್ಪ ಸ್ವಲ್ಪ ಉಳಿದುಕೊಂಡಿದೆ. ನಾನು ನೂರು ವರ್ಷ ಬದುಕಿದರೆ, ಉಳಿದಿರುವ ಮರ್ಯಾದೆಯನ್ನು ಇನ್ನೂ ಹಲವಾರು ವರ್ಷಗಳ ಕಾಲ ಕಾಪಾಡಿಕೊಳ್ಳಬೇಕು !! ಅದೇನು ಗಾಡೀಲ್ಲಿರೋ ಪೆಟ್ರೋಲೇ?... ದುಡ್ಡು ಕೊಟ್ಟು ತುಂಬಿಕೊಳ್ಳಲಿಕ್ಕೆ?


ಆಗ ಬೆಪ್ಪುತಕ್ಕಡಿ ಬೋಳೇಶಂಕರನಾದ ನನ್ನ ಮನಸ್ಸಿಗೆ ಹೊಳೆದದ್ದು ಅವರು ’ಜೋಕ್’ ಹೇಳಿದ್ದು ಅಂತ. ವಿಷಯ ಅರ್ಥವಾದ ಮೇಲೆ, ಒಂದು ದಿನ ಬಿಟ್ಟು ಇಡೀ ದಿನ ಸಿಕ್ಕಾಪಟ್ಟೆ ನಕ್ಕಿದ್ದೆ ಬಿಡಿ!!


ಅವತ್ತೇ ಯಾಕೆ ನಗಲಿಲ್ಲ ಅಂದಿರಾ? ನಾನು ರಾತ್ರಿ ಹತ್ತು ಘಂಟೆ ದಾಟಿದ ಮೇಲೆ ನಗೋಲ್ಲ. ನಮ್ಮಮ್ಮ ಬೈತಾರೆ. ನಿನ್ನ ಒಡಕಲು ದನಿಯಲ್ಲಿ ನಕ್ಕು ಮಲಗಿರೋ ಮಕ್ಕಳನ್ನ ಎಬ್ಬಿಸಿಬಿಡಬೇಡಾ ಅಂತ !!


ಲಲಿತ ಪ್ರಬಂಧ ಬರೆವ ಕೆಲಸ ಪಕ್ಕಕ್ಕೆ ಇಟ್ಟು ಲಘು ಹರಟೆ ಬರೆಯೋಣ ಅನ್ನಿಸಿತು.


ಸರಿ, ಹೀಗೆ ಅಂತರ್ಜಾಲದಲ್ಲಿ ಹಳೆಯ ಕನ್ನಡ ಹಾಡುಗಳನ್ನು ಕೇಳುತ್ತಿದ್ದೆ. ಮುನಿಯನ ಮಾದರಿ ಚಿತ್ರದ ’ಮಾತೂ ಒಂದು ಮಾತು, ಮಾತು ಸಿಹಿ ಮಾತು’ ಗೀತೆ ಅಲೆ ಅಲೆಯಾಗಿ ಮೂಡಿ ಬರುತ್ತಿತ್ತು. ಏನೋ ಐಡಿಯಾ ಬಂತು .. ’ಯುರೇಕಾ’ ಎಂದು ಕೂಗಿದೆ.


ನನ್ನ ಮಡದಿ ’ಬಂದೇ, ಒಂದು ನಿಮಿಷ. ತಂದು ಕೊಡ್ತೀನಿ’ ಎಂದು ಹೇಳಿ ಎರಡೇ ನಿಮಿಷದಲ್ಲಿ ’ಯುರೇಕ’ ಹೆಸರು ಹೊತ್ತ ಎಲೆಕ್ಟ್ರಿಕ್ ಕಸಪೊರಕೆ ತಂದಿಟ್ಟು ನಸುನಗುತ್ತಾ ಹೊರಗೆ ನೆಡೆದಳು !!!


ನಾನೇನೋ ಹೇಳಿದರೆ ಇನ್ನೇನೋ ಅರ್ಥ ಮಾಡಿಕೊಂಡಳಲ್ಲಾ ಅಂತ ಮನಸ್ಸು ಸಿಕ್ಕಾಪಟ್ಟೆ ರೇಗಿ, ಧಡ ಧಡ ಆ ’ಯುರೇಕ’ವನ್ನು ಕೈಗೆ ತೆಗೆದುಕೊಂಡು, ಮನೆಯಲ್ಲ ಗುಡಿಸಿ ನಂತರ ಬರೆಯಲು ನಿಂತೆ !


ಇದೇನ್ರೀ ’ನಿಂತೆ’ ಅಂದ್ರ? ನನಗೆ ಜಾಸ್ತಿ ಹೊತ್ತು ಒಂದೆಡೆ ಕೂತರೆ ಆಗೊಲ್ಲ .... ಕಂಪ್ಯೂಟರ್ ಸ್ಲೀಪ್ ಮೋಡ್’ಗೆ ಹೋದಂತೆ ನಾನು ಕೂತಲ್ಲೇ ನಿದ್ದೆ ಮಾಡಿಬಿಡುತ್ತೇನೆ !! ಈಗ ವಿಷಯಕ್ಕೆ ಬರೋಣ ...


ಏನು, ಯಾವ ವಿಷಯ ಬರೆಯಲು ಹೊರಟೆ ಅಂದಿರಾ? ಏನೂ ಇಲ್ಲ. ವಿಷಯ ಹಾಗೇ ಸುಮ್ಮನೆ ಹರಟೆ ಅಷ್ಟೇ!


ನಾನ್ಯಾಕೆ ಈ ನಡುವೆ ಯಾವುದೇ ಸ್ವಾಮಿಗಳ ಪ್ರವಚನ ಕೇಳಲು ಹೋಗೋಲ್ಲ ಅಂತ ಗೊತ್ತ ನಿಮಗೆ? ಕೇಳಿ ಹೇಳ್ತೀನಿ.


ಹೀಗೇ ಒಮ್ಮೆ ಎರಡು ಘಂಟೆಗಳ ಕಾಲ ಪ್ರವಚನ ಕೇಳಿದ ಮೇಲೆ ನನ್ನ ಮನದ ಮೂಲೆಯಲ್ಲಿ ಎದ್ದ ಸಂದೇಹ "ನಾನು ಯಾರು? ನಾನು ಇಲ್ಲಿಗೇಕೆ ಬಂದೆ?" ಹೀಗೆ, ಬರೀ ಆಧ್ಯಾತ್ಮಿಕ ಚಿಂತನೆಗಳು. ವಾಹ್! ಎಂತಹ ಅಲೋಚನೆ ! ಅಲ್ಲೇ ಇದ್ದ ಹಲವರೊಂದಿಗೆ ಈ ವಿಷಯ ಹಂಚಿಕೊಂಡೆ. ಒಬ್ಬರು ಮತ್ತೊಬ್ಬರನ್ನು ಕೇಳಿದರು ’ಎಷ್ಟು ದಿನದಿಂದ ಹೀಗೆ’ ಅಂತ. ನನ್ನೀ ದಿವ್ಯ ಜ್ಞ್ನಾನದ ಬಗ್ಗೆ ಎದ್ವಾ ತದ್ವಾ ಕುತೂಹಲ ಇರಬೇಕು ಅಂತ ನಾನು ಅಂದುಕೊಳ್ಳುವಷ್ಟರಲ್ಲೇ ಆ ಮತ್ತೊಬ್ಬರು ನುಡಿದರು ’ಚೆನ್ನಾಗೇ ಇದ್ದರು. ಪಾಪ Alzheimer ಇರಬೇಕು ಅಂತ’. ಎರಡು ಘಂಟೆಗಳ ಕಾಲದ ಮಾತುಗಳನ್ನು ಎರಡೇ ಘಳಿಗೆಯ ಈ ಮಾತುಗಳು ನುಂಗಿ ನೀರು ಕುಡಿದಿತ್ತು ಕಣ್ರೀ !!
ಎಲ್ಲ ಮಾತಿಗೂ ಅರ್ಥವಿರುತ್ತದೆ. ಅರ್ಥವಿಲ್ಲದಿದ್ದರೂ ಅನರ್ಥವಂತೂ ಇದ್ದೇ ಇರುತ್ತೆ ಬಿಡಿ. ಅನೇಕ ಅರ್ಥ ಕೊಡುವ ಮಾತಿಗೆ ಚಿಕ್ಕದಾಗಿ ’ಅನರ್ಥ’ ಎಂದೂ ಹೇಳಬಹುದು. ಬೇಕಿದ್ರೆ ಜಗ್ಗೇಶ್, ಕಾಶೀನಾಥ್ ಇವರನ್ನು ಕೇಳಿ ...


ಹೀಗೇ ಯಾರದೋ ಮನೆಗೆ ಪೂಜೆಗೆ ಹೋಗಿದ್ದೆ. ಮನೆಯ ಯಜಮಾನ ನನ್ನ ಸ್ನೇಹಿತ. ಮತ್ತೊಂದು ಊರಿನಿಂದ ಪೂಜೆಗೆ ಬಂದಿದ್ದ ತಮ್ಮ ಬಂಧುವನ್ನು ನನಗೆ ಪರಿಚಯಿಸಿ ’ತುಂಬಾ ಚೆನ್ನಾಗಿ ಡಬಲ್ ಮೀನಿಂಗ್ ಮಾತಾಡ್ತಾರೆ’ ಅಂದ ಜೋರಾಗಿ ನುಡಿದ. ಆ ಮಾತು ಕೇಳಿ ಎಲ್ಲರಿಗೂ ಶಾಕ್ ! ಆ ಬಂಧುಗಳ ವಿಷಯ ಬಿಡಿ, ಪಾಪ ಇನ್ನೂ ಮೂರ್ಛೆ ಹೋಗಿರಲಿಲ್ಲ. ನಾನು ಕೇಳಿದೆ ’ಲೋ! ಏನೋ ಹಾಗಂದ್ರೆ?’ ಅಂತ. ಅವನು ಹೇಳಿದ ’ಇವರು ಲಾಂಗ್ವೇಜ್ ಟೀಚರ್ ಕಣೋ. ಒಂದೇ ಶಬ್ದವನ್ನ ಎರಡು ರೀತಿಯಲ್ಲಿ ಅರ್ಥ ಬರೋ ಹಾಗೆ ಬಳಸುತ್ತಾರೆ. ಅದಕ್ಕೇ ಡಬಲ್ ಮೀನಿಂಗ್ ಅಂದಿದ್ದು. ಮೊನ್ನೆ, ಒಂದು ಕವನ ಬರೆದಿದ್ದರು ... "ಅತ್ತೆ, ನೀನೇಕೆ ಅತ್ತೆ" ... ಅಂತ .. ಅರ್ಥ ಆಯ್ತಲ್ಲ’ ಅಂತ ಹೇಳಿ ಇಷ್ಟಗಲ ಬಾಯಿ ತೆರೆದು ನಿಂತ. ಮೊದಲು ಆ ಬಂಧು ನಂತರ ಮಿಕ್ಕವರು ’ಉಸ್’ ಅಂತ ಉಸಿರು ಬಿಟ್ಟರು.


ರಾಮರಾಯರದು ಪೌರೋಹಿತ್ಯ. ಅವರಿವರ ಮನೆಯಲ್ಲಿ ಪೂಜೆ ಪುನಸ್ಕಾರ, ಗೃಹಪ್ರವೇಶ, ಸತ್ಯನಾರಾಯಣ ಪೂಜೆ ಹೀಗೆ. ಯಾರಿಗೋ ಮೈಯಲ್ಲಿ ಆರೋಗ್ಯ ಸರಿ ಇಲ್ಲದೆ ಹೋಗಿ ಇವರನ್ನು ಕರೆಸಿ ’ಮೃತ್ಯುಂಜಯ ಜಪ’ ಮಾಡಿಸಿದರು. ಕೆಲವು ದಿನಗಳು ಬೇರೆಲ್ಲಿಗೋ ಹೋಗುವುದಿತ್ತು. ಹೋಗಿ ಬಂದ ಕೂಡಲೆ ಪಕ್ಕದ ಮನೆಯವರು ಹೇಳಿದರು "ನೀವು ಮೃತ್ಯುಂಜಯ ಜಪ ಮಾಡಿದ್ರಲ್ಲ ಅವರು ಹೋಗಿಬಿಟ್ರು". ಪಾಪ ರಾಮರಾಯರಿಗೆ ಯೋಚನೆ ಶುರುವಾಯ್ತು. ತಾವು ಜಪ ಮಾಡಿದ್ದಕ್ಕೆ ತೀರಿಕೊಂಡರೇ ಅಥವಾ ಅನಾರೋಗ್ಯ ಹೆಚ್ಚಿ ತೀರಿಕೊಂಡರೇ ಅಂತ. ಯಾವ ವಿಷಯ ತಿಳಿಸುವುದಕ್ಕೂ ಒಂದು ರೀತಿ ರಂಗು ಇರುತ್ತೆ ಅಂತ ಹೇಳಿದೆ.


ಹೀಗೇ ಯಾರದೋ ಮನೆಯಲ್ಲಿ ಒಬ್ಬ ಹಿರಿಯರು ತೀರಿಕೊಂಡರು. ಸಾಂಗೋಪಾಂಗವಾಗಿ ವೈಕುಂಠ ಸಮಾರಾಧನೆಯೂ ಆಯಿತು. ಅಲ್ಲಿ ಸೇರಿದ್ದವರಾರೋ ಅಲವತ್ತುಕೊಳ್ಳುತ್ತಿದ್ದರು ’ಪಾಪ, ಹಿರಿಯ ಜೀವ. ಒಬ್ಬರಿಗೆ ಕಷ್ಟ ಕೊಟ್ಟವರಲ್ಲ. ಹಾಗಾಗಿ ಒಂದೂ ಕೊಂಕಿಲ್ಲದೆ ಎಷ್ಟು ಚೆನ್ನಾಗಿ ನೆಡೀತು ನೋಡಿ ಇವತ್ತಿನ ವೈಕುಂಠ. ಇವತ್ತು ಅವರಿರಬೇಕಿತ್ತು. ಎಷ್ಟು ಸಂತೋಷಪಡುತ್ತಿದ್ದರು’!!!


ನನ್ನ ಪ್ರಾಜಕ್ಟ್’ಗೆ ಹೊಸದಾಗಿ ಒಬ್ಬ ಹುಡುಗಿ ಸೇರಿದಳು. ಇನ್ನೂ ಆಗೇ ತಾನೇ ಕಾಲೇಜು ಮುಗಿಸಿ ಕೆಲಸಕ್ಕೆ ಕಾಲಿಟ್ಟಿದ್ದರಿಂದ ಎಲ್ಲವೂ ಹೊಸದಾಗಿ, ಸೊಗಸಾಗಿ ಕಾಣುತ್ತಿತ್ತು ಅವಳಿಗೆ. ಸೋಜಿಗ ಅಂದರೆ ನಮ್ಮ ಕಾಂಟೀನ್ ಕೂಡ ಅದರಲ್ಲಿ ಒಂದು!!! ಒಂದು ದಿನ ನಾವೆಲ್ಲ ಸಾಲಿನಲ್ಲಿ ನಿಂತಿರುವಾಗ ಬಹಳ ಹುರುಪಿನಲ್ಲಿ ಹೇಳಿದಳು ’ಎಷ್ಟು ಚೆನ್ನಾಗಿ ಇರುತ್ತೆ ಊಟ ಅಲ್ವಾ? ನೆನ್ನೆ ಈ ಊಟ ಮಾಡಿದಾಗ ನಮ್ಮಮ್ಮನ ಅಡಿಗೆ ನೆನಪಾಯ್ತು’ ಅಂತ. ಅಲ್ಲೇ ಇದ್ದ ನನ್ನ ಸ್ನೇಹಿತ ಕೇಳಿಯೇಬಿಟ್ಟ "ನಿಮ್ಮಮ್ಮ ಇಷ್ಟು ಕೆಟ್ಟದಾಗಿ ಅಡುಗೆ ಮಾಡ್ತಾರಾ?" ಅಂತ.


ಮಾತಿನ ಚಟಾಕಿ ಅಂದರೆ ಪಟಾಕಿಯಂತೆ ಥಟ್ಟನೆ ಸಿಡಿಯಬೇಕು. ಕೇಳಿದ ಅಥವ ಓದಿದ ಕೂಡಲೆ ಮುಖ ಮೇಲೆ ಕಿರು ನಗು ಮೂಡಬೇಕು. ಹೇಗೆ ಅಂದರೆ, ಹೀಗೇ ಗಂಡ-ಹೆಂಡತಿ ನಡುವೆ ಏನೋ ಜಗಳವಾಯ್ತಂತೆ. ಹೆಂಡತಿ ಜೋರಾಗಿ ಸಿಡಿದಳು ’ಪ್ರತಿ ಗಂಡಸಿನ ಯಶಸ್ಸಿನ ಹಿಂದೆ ಒಬ್ಬ ಹೆಣ್ಣು ಇರ್ತಾಳೆ’ ಅಂತ. ಗಂಡ ನುಡಿದ ’ಹೌದು ಕಣೆ, ವಿಕ್ರಮಾದಿತ್ಯನ ಬೆನ್ನ ಹಿಂದೆ ಬೇತಾಳ ಇದ್ದ ಹಾಗೆ’ ಅಂತ.


ಮಾತಿನ ಬಗ್ಗೆ ಬರೀತಾ ಹೋದರೆ ಅದಕ್ಕೆ ಕೊನೆಯೇ ಇಲ್ಲ. ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು. ಈ ಗಾದೆ ನೋಡಿ ಇಂದಿಗೂ ನಿಜ. ಗ್ಯಾಸ್ ಸ್ಟೊವ್ ಮೇಲೆ ಹಾಲು ಕಾಯಲು ಇಟ್ಟು ಪಕ್ಕದ ಮನೆ ರಂಗಮ್ಮನ ಜೊತೆ ಮಾತಾಡುತ್ತಾ ಇದ್ದಾಗ, ಹಾಲು ಉಕ್ಕಿ ಹರಿದು, ಬರ್ನರ್’ನ ತೂತುಗಳೆಲ್ಲ ಕೆನೆಗಟ್ಟಿ ನಿಂತಾಗ ಒಲೆ ಕೆಟ್ಟಿತಲ್ವೇ?


ಇನ್ನು ಮಾತು ಬೆಳ್ಳಿ ಮೌನ ಬಂಗಾರ. ಹುಡುಗಿಯನ್ನು ನೋಡಲು ಹುಡುಗನ ಕಡೆಯವರು ಬಂದರಂತೆ. ಎಲ್ಲ ಮಾತೂ ದಳ್ಳಾಳಿಯೇ ಆಡುತ್ತಿದ್ದರೂ ಗಂಡಿನ ಅಪ್ಪ-ಅಮ್ಮ ಸುಮ್ಮನೆ ಕುಳಿತಿದ್ದರಂತೆ. ಅವರು ಹೋದ ಮೇಲೆ ಹುಡುಗಿಯ ಅಪ್ಪ ಹೇಳಿದರಂತೆ ’ಎಷ್ಟು ಒಳ್ಳೇ ಜನ ಅಲ್ವೇ? ಏನೊಂದೂ ತಗಾದೆ ಎತ್ತಲಿಲ್ಲ’ ಅಂತ. ಪತ್ನಿ ನುಡಿದಳಂತೆ ’ನಿಮಗೆ ಏನೂ ಅರ್ಥವಾಗಲ್ಲ ಅನ್ನೋದು ಅದಕ್ಕೇ. ಮಾತು ಬೆಳ್ಳಿ ಮೌನ ಬಂಗಾರ. ಏನು ಡಿಮ್ಯಾಂಡ್ ಬರುತ್ತೋ ಕಾದು ನೋಡೋಣ ತಡೀರೀ’!!!


ಮದುವೆ ವಿಷಯ ತೆಗೆದುಕೊಂಡರೆ. ಹಿಂದಿನ ದಿನಗಳಲ್ಲಿ ಮನೆ ಮನೆಗೂ ಹೋಗಿ ಕನಿಷ್ಟ ಅರ್ಧ ಘಂಟೆ ಕೂತು, ಕಾಫಿ ಕುಡಿದು, ಮನೆಯಲ್ಲಿ ಹಿರಿಯರು, ಚೋಟೂ-ಮೋಟೂ ಗಳಿಗೂ ಅಕ್ಷತೆ ನೀಡಿ ಕರೆಯೋಲೆ ಕೊಟ್ಟು ಬರುತ್ತಿದ್ದರು. ಮಾತು, ಮಾತು ಮಾತು. ಮದುವೆ ದಿನದ ಹೊತ್ತಿಗೆ ಗಂಟಲು ಕಟ್ಟಿ ಹಾಳಾಗಿರುತ್ತಿತ್ತು.
ಈಗ? ಅದೇನೋ ಗೊತ್ತಿಲ್ಲ. Face-Face ಕರೆಯದೆ Facebook’ನಲ್ಲೇ ಹಾಕಿಬಿಡ್ತಾರೇನೋ?


ಇಂದಿಗೂ ಮೌನ ಬಂಗಾರ ಅನ್ನೋ ಮಾತು ಸತ್ಯ ನೋಡಿ. Smart Phone, Text Messaging ಅಂತೆಲ್ಲ ಆಗಿ ಕಿರಿಯರು ಮಾತು ನಿಲ್ಲಿಸಿದ್ದಾರೆ. WikiLeak ಬಂದು ’ಅತೀ’ ದೊಡ್ಡವರು ಮಾತು ನಿಲ್ಲಿಸಿದ್ದಾರೆ. ಸದ್ಯಕ್ಕೆ ಮಾತನಾಡುತ್ತಿರುವವರು ನನ್ನಂತಹವರು ಮಾತ್ರ !!!!


ಹೀಗೇ ನಗ್ತಾ ನಗ್ತಾ ಮಾತಾಡಿಕೊಂಡು, ಜೀವನದಲ್ಲಿ ಅತಿ ಟೆನ್ಶನ್ ಮಾಡಿಕೊಳ್ಳದೆ, ಬಂದದ್ದೆಲ್ಲ ಬರಲಿ ಗೋವಿಂದನ ದಯೆ ಒಂದಿರಲಿ ಎಂದೆನ್ನುತ್ತ ಈ ವರ್ಷವನ್ನು ಇತಿಹಾಸಕ್ಕೆ ಕಳಿಸೋಣವೇ?

ಹಸಿರಿನ ಉಸಿರು ಇಂಗಿದಾಗ !

{ನಮ್ಮ ಹಂಸಾನಂದಿಯವರ ’ಬದಲಾಗುವ ಬಣ್ಣಗಳು’ ಲೇಖನ ಓದುತ್ತಿದ್ದಂತೆಯೇ ನನ್ನ ಮನದಲ್ಲಿ ಮೂಡಿಬಂದ ಕಲ್ಪನೆ ಹೀಗಿದೆ}


ಸಾವನ್ನು ನೋಡಲು ಏನು ಅಂದವೋ?


ನಾನೊಬ್ಬ ಸ್ಯಾಡಿಸ್ಟ್ ಅಂದುಕೊಂಡಿರಾ? ಏನು ಮಾಡೋದು ಹೇಳಿ. ಈ ಬರಹದ ವಿಶೇಷವೇ ಅದು. ಪ್ರತಿ ವರ್ಷ ಉಂಟಾಗುವ ಈ ಸಾವನ್ನು ನೋಡಲು ನೂರಾರು ಮೈಲಿಗಳ ದೂರ ಸಾಗಿ ಬರುವವರಲ್ಲಿ ನಾನೂ ಒಬ್ಬ !!


ಸಾವಿಗೀಡಾಗುತ್ತಿರುವವರ ಮುಂದೆ ನಿಂತು ತೆಗೆದುಕೊಂಡ ಚಿತ್ರಗಳೆಷ್ಟೋ? ವದನಪುಸ್ತಕ ಅಥವಾ ಆರ್ಕುಟ್’ನಲ್ಲಿ ಹಾಕಿ ಎಷ್ಟೋ ಮನಸ್ಸುಗಳನ್ನು ಆಹ್ಲಾದಗೊಳಿಸಿದ ಹೆಮ್ಮೆ, ಆನಂದ ನನಗೆ !


ಖಂಡಿತ ನನಗೆ ತಲೆ ಕೆಟ್ಟಿದೆ ಅಂದುಕೊಂಡಿರಿ, ನಿಜ.


ನಮ್ಮಂತೆಯೇ ಗಿಡ-ಮರಗಳಿಗೂ ಜೀವವಿದೆ ಎಂದು ನಿಮಗೂ ಅರಿವು ಇರುವುದರಿಂದ, ಮೇಲೆ ಹೇಳಿದ ವಿಷಯಗಳೆಲ್ಲ ನಿತ್ಯ-ಸತ್ಯ.


Spring’ನಲ್ಲಿ ಚಿಗುರೊಡೆವ ಮರ-ಗಿಡಗಳು, ಬೇಸಿಗೆ ವೇಳೆಗೆ ಮೈತುಂಬಿ ನಿಲ್ಲುತ್ತವೆ. ಯಾಕೆಂದು ಗೊತ್ತೆ? ಬಿಸಿಲಿನಲ್ಲಿ ಬವಳಿ ತನ್ನಡಿ ಬಂದು ನಿಲ್ಲುವ ಜೀವಿಗಳಿಗೆ ನೆರಳು ನೀಡುವ ಉದ್ದೇಶದಿಂದ !!


ಪರೋಪಕಾರಾರ್ಥಮಿದಂ ಶರೀರಂ ...


ಬೇಸಿಗೆ ಮುಗಿದು, Fall season ಸುಳಿಯುತ್ತಿದ್ದಂತೆ, ಗಿಡ-ಮರಗಳಲ್ಲಿ ಬೆಳವಣಿಗೆ ಕುಂಠಿತವಾಗಿ, ನಿದ್ರಾವಸ್ತೆಗೆ ತಲುಪುತ್ತವೆ. ಆಗ, ಸುಂದರ ಹಸಿರು ಎಲೆಗಳು ತಮ್ಮ ಯೌವ್ವನ ಕಳೆದುಕೊಳ್ಳಲು ಆರಂಭಿಸುತ್ತವೆ. ಮೊದಲು ಬಣ್ಣ ಕಳೆದುಕೊಳ್ಳುತ್ತದೆ. ಹಸಿರು ಕಳೆದು ಹಳದಿ, ಕೇಸರಿ, ಕೆಂಪು (ಮರದ ಜಾತಿಯ ಮೇಲೆ ಅವಲಂಬಿತ) ಎಂದೆಲ್ಲ ಬಣ್ಣಕ್ಕೆ ತಿರುಗುತ್ತವೆ. ಈ ಸೌಂದರ್ಯ ರಾಶಿ ನೋಡಲೆಂದೇ ಬೆಟ್ಟ-ಗುಡ್ಡಗಳ ಕಡೆ ಹೋಗುವುದು ಪ್ರತಿ ವರ್ಷದ ಪರಿಪಾಠ. ಇದನ್ನೇ ನನ್ನು ಹೇಳಿದ್ದು ’ಸಾವ ನೋಡಲು ಏನು ಅಂದವೋ’ ಎಂದು. ದೂರದಿಂದ ವಿಧವಿಧ ಬಣ್ಣಗಳನ್ನು ನೋಡುತ್ತಿದ್ದರೆ ನನಗೆ ಯಾವಾಗಲೂ fruit bread ನೆನಪಿಗೆ ಬರುತ್ತದೆ.


ಇರಲಿ, ಈ ವೈಭವ ನಂತರದ ಅವಸ್ಥೆಯಲ್ಲಿ ಎಲೆಗಳು, ಕಂದಾಗಿ ತಿರುಗಿ, ದೇಹ ಬಾಗಿ, ಸುಕ್ಕುಗಟ್ಟಿ, ಸಂಪೂರ್ಣ ಸತ್ವ ಹೀನವಾಗಿ ಬೀಸುವ ಗಾಳಿಗೆ ಉದುರಿ ಮಣ್ಣಿಗೆ ಸೇರುತ್ತದೆ.


ಬೀಸೋ ಗಾಳಿಗೆ ಉದರದಿರುವವರು ಯಾರು?


ತನ್ನವರನ್ನೆಲ್ಲ ಕಳೆದುಕೊಂಡ ಮರಗಿಡಗಳು ಶೂನ್ಯವಾಗಿ ಬೋಳು ಬೋಳಾಗಿ ದಿಗಂಬರವಾಗಿ ನಿಲ್ಲುತ್ತದೆ. ಈ ಸ್ಥಿತಿಯಲ್ಲಿನ ಮರಗಿಡಗಳನ್ನು ನೋಡಲಾರದೆ ಬಾನು ಸುರಿಸುವ ಕಣ್ಣೀರೇ, ಹೆಪ್ಪುಗಟ್ಟಿ ಮಂಜಾಗಿ ಸುರಿಯುತ್ತದೆ. ನಿನ್ನವರು ಹಿಂದಿರುಗುವವರೆಗೂ ನಾನು ನಿನ್ನೊಂದಿಗೆ ಇದ್ದೇನೆ ಎಂದು ಬೋಳು ಗಿಡಮರಗಳನ್ನು ಅಲಂಕರಿಸುತ್ತದೆ ಈ ಮಂಜು. (ಇದು ನನ್ನ ಕಲ್ಪನೆ ಮಾತ್ರ).


ಬೀಸುವ ಗಾಳಿಯನ್ನು, ಸುಡುವ ಬಿಸಿಲನ್ನು, ಸುರಿವ ಮಳೆಯನ್ನು ಹೇಗೆ ತಡೆದುಕೊಳ್ಳುತ್ತದೆಯೋ ಅದೇ ಸಮಾಧಾನ ಚಿತ್ತದಲ್ಲಿ ಥಣ್ಣನೆಯ ಮಂಜನ್ನೂ ಸಹಿಸಿಕೊಳ್ಳುತ್ತದೆ ಈ ಸಹನಾಶೀಲ ಮರಗಿಡಗಳು.


ಎಲೆಗಳು ಮರೆಯಾಗಿದ್ದಕ್ಕೆ ಮಂಜು ಸುರಿಯಿತು ಎಂಬುದು ಒಂದು ಬಗೆಯಾದರೆ, ಇನ್ನೊಂದು ಬಗೆಯನ್ನು ಹೀಗೆ ಹೇಳಬಹುದು. ಮಂಜು ಸುರಿವ ಕಾಲಕ್ಕೇ ಎಲೆಗಳು ಉದುರಿದ್ದು ಏಕೆ?


ರಾಶಿ ಎಲೆ ಹೊತ್ತ ಈ ದೇಹದ ಮೇಲೆ ಶ್ವೇತ ವರ್ಣದ ಮಂಜುಗಡ್ಡೆ ಸೇರಿದಾಗ, ಮರದ ಸೊಂಟವೇ ಲೊಟಕ್ಕೆಂದು ಮುರಿದುಬಿದ್ದರೆ, ಮರಗಿಡಗಳೂ ನಾಶ, ಅದನ್ನು ನಂಬಿಕೊಂಡ ಮನುಕುಲವೂ ನಾಶ, ಅಲ್ಲವೇ?


ಮನುಕುಲವನ್ನು ಸಂರಕ್ಷಿಸಲು ತನ್ನವರನ್ನೇ ಕಳೆದುಕೊಳ್ಳಲು ಇಚ್ಚಿಸಿರುವುದು ಮರಗಿಡಗಳು ಮಾಡಿರುವ ತ್ಯಾಗ ಎನ್ನಲೇ?


ಬೆಳಗಿನ ಸೂರ್ಯ ರಶ್ಮಿಗೆ ಕರಗುವ ಮಂಜಿನಂತೆ, ಛಳಿ ಕಳೆದಾಗ ಮೂಡುವ ಬಿಸಿಲೆಗೆ ಮಂಜು ಕರಗಲು, ಮರಗಿಡಗಳು ನಿದ್ರಾವಸ್ಥೆಯಿಂದ ಎದ್ದು, ಹಸಿರು ಮೂಡಿಸಿಕೊಂಡು ಯೌವ್ವನಾವಸ್ಥೆಗೆ ಹೋಗುವದನ್ನು ನೋಡುವುದೇ ಅಂದ.


ಎಲೆಗಳು ಬರುವುದು ಅಂದ ... ಇದ್ದಾಗ ಆನಂದ ... ಹೋಗುವಾಗ ಚೆಂದ ...


ನಮ್ಮದು ?


ಮದುವೆಗೆ ಒಂದು ಹುಡುಗಿ ಹುಡುಕಿ ಕೊಡಿ !

ಡಿಸೆಂಬರ್ ಆರು ... ನನ್ನ ವೈದ್ಯ ಮಿತ್ರರಾದ ಮೀನಾ ಸುಬ್ಬರಾವ್ ಅವರ ಸಲಹೆಯ ಮೇರೆಗೆ ಸಂಪದಕ್ಕೆ ಕಾಲಿಟ್ಟು ಎರಡು ವರ್ಷವಾಯಿತು ... ಎರಡು ವರ್ಷವಾಯಿತೇ!! ಅನ್ನಲೇ? ಅಥವಾ ಎರಡೇ ವರ್ಷವಾಯಿತೇ? ಅನ್ನಲೇ?



ಏನೂ ಗೊತ್ತಾಗುತ್ತಿಲ್ಲ. ಏಕೆಂದರೆ ವೈಯುಕ್ತಿಕವಾಗಿ ಏನೂ ಸಾಧಿಸಿಲ್ಲ. ಆದರೆ ಸಿಕ್ಕಾಪಟ್ಟೆ ಸ್ನೇಹಿತರನ್ನು ಒದಗಿಸಿಕೊಟ್ಟಿದೆ ’ಸಂಪದ’ ಎಂಬುದು ಸತ್ಯ. ಸ್ನೇಹ ಸಂಪತ್ತನ್ನು ಒದಗಿಸಿಕೊಟ್ಟ ಈ ವೇದಿಕೆಗೂ ಸಂಪದಕ್ಕೆ ಪರಿಚಯಿಸಿದ ವೈದ್ಯ ಮಿತ್ರರಾದ ಮೀನಾ ಸುಬ್ಬರಾವ್ ಅವರಿಗೂ ಅನಂತ ಧನ್ಯವಾದಗಳು



ಈ ಸಂದರ್ಭಕ್ಕೇ ಅಂತ ಅಲ್ಲದಿದ್ದರೂ, ತಿಳಿ ಹಾಸ್ಯದ ಒಂದು ಕವನ ಬರೆಯೋಣ ಅನ್ನಿಸಿ ಬರೆದಿದ್ದೇನೆ. ನಿಮ್ಮ ಅಭಿಪ್ರಾಯ ತಿಳಿಸಿ.



ಕವನ: ಮದುವೆಗೆ ಒಂದು ಹುಡುಗಿ ಹುಡುಕಿ ಕೊಡಿ



ತಮ್ಮ ಮನೀ ಕಡೆ ಹೆಣ್ಣೊಂದಿಹುದೊಂದು


ಹೊತ್ತು ತಂದರಾರೋ ಒಂದು ವಾರ್ತೆಯ



ಕೇಳಿದೆನೆಂದು ನಾನು, ಹ್ಯಾಗಿದ್ದಾಳೆ ಹುಡುಗಿ?



ದಟ್ಟನೆಯಾ ಕರಿಗೂದಲು ಹೆಬ್ಬಾವಿನಂತೆ


ಹುಬ್ಬುಗಳೋ ಕರಿಯ ಕಂಬಳಿ ಹುಳುಗಳಂತೆ



ಕಂಗಳೆರಡು ತಾವರೆ ಹೂವಿನ ಎಸಳುಗಳಂತೆ


ನಾಸಿಕವು ಸಂಪಿಗೆಯಾದರೆ ತುಟಿಗಳು ತೊಂಡೆಯಂತೆ



ಕೆನ್ನೆಗಳು ಕೆಂಪು ಮಾವಿನಂತೆ, ಕಿವಿಗಳು ಗುಲಾಬಿಯ ಎಸೆಳು


ಪಡವಲಕಾಯಂತಹ ಕೈಗಳಿಗೆ ಹುರುಳಿಕಾಯಂತಹ ಬೆರಳುಗಳು



ಇನ್ನು ತಡೆಯಲಾರದೆ ಅವರನ್ನು ತಡೆದು ಕೇಳಿದೆ


ಸ್ವಾಮಿ ’ಮದುವೆಯಾಗಲಿರುವುದು ಹೆಣ್ಣನ್ನೋ? ಕಾಡನ್ನೋ?