Monday, September 28, 2009

ದಸರಾ, ಎಷ್ಟೊಂದು ಸುಂದರಾ

"ಮೈಸೂರು ದಸರಾ, ಎಷ್ಟೊಂದು ಸುಂದರಾ, ಚೆಲ್ಲಿದೆ ನಗೆಯಾ ಪನ್ನೀರಾ, ಎಲ್ಲೆಲ್ಲೂ ನಗೆಯಾ ಪನ್ನೀರಾ...".

ಕರ್ನಾಟಕ ರಾಜ್ಯದ ನಾಡಹಬ್ಬ ಈ ದಸರ. ಆಶ್ವಯುಜ ಮಾಸದ ಶುಕ್ಲಪಕ್ಷದ ಪಾಡ್ಯದಿಂದ ದಶಮಿಯವರೆಗೆ ಹತ್ತು ದಿನಗಳ ಕಾಲ ಮೈಸೂರು ಅರಮನೆಯೇ ಅಲ್ಲದೆ ಇಡೀ ನಗರ ಜಗಜಗಿಸುವ ದೀಪಗಳಿಂದ ಅಲಂಕೃತವಾಗಿ ನವವಧುವನ್ನೂ ನಾಚಿಸುವಂತೆ ಶೋಭಿಸುತ್ತಿರುತ್ತದೆ. ರಾಜ್ಯದ ಶಾಲೆಗಳಿಗೆ ದಸರಾ ರಜೆ. ನಲಿವ ಮಕ್ಕಳು, ಜರತಾರಿ ಸೀರೆ ಉಟ್ಟ ನೀರೆಯರಿಂದ ನಗರವು ಒಂದು ಮದುವೆಯ ಮನೆಯಂತೆ ಕಾಣುತ್ತದೆಂದರೆ ಅದು ಅತಿಶಯೋಕ್ತಿಯೇನಲ್ಲ. ನೃತ್ಯೋತ್ಸವ, ಸಂಗೀತೋತ್ಸವ, ನಾಟಕೋತ್ಸವ, ಕವಿ ಗೋಷ್ಟಿ, ಯುವ ಮೇಳ, ಕ್ರೀಡೆ, ಕುಸ್ತಿ ಪಂದ್ಯ, ಆಹಾರ ಮೇಳ, ಹೂವಿನ ಪ್ರದರ್ಶನ ಮುಂತಾದವುಗಳು ಬಹಳ ಆಕರ್ಷಣೀಯವಾಗಿದ್ದು ಇತರ ರಾಜ್ಯಗಳಿಂದಲೂ ಜನರನ್ನು ತನ್ನೆಡೆ ಸೆಳೆಯಳು ಯಶಸ್ವಿಯಾಗಿದೆ. ಇವುಗಳಲ್ಲಿ ಪ್ರಮುಖವಾದದ್ದು ದೊಡ್ಡಕೆರೆ ಮೈದಾನದಲ್ಲಿ, ಒಂದು ತಿಂಗಳ ಕಾಲ ನೆಡೆಯುವ 'exhibition'. ಕೈಗಾರಿಕೆ ಹಾಗೂ ವಾಣಿಜ್ಯದ ದೃಷ್ಟಿಯಿಂದಲೂ ಇದಕ್ಕೆ ಬಹಳ ಮಹತ್ವ.

ಯಾವುದೇ ಹಬ್ಬ-ಹರಿದಿನವಾದರೂ ಅದಕ್ಕೊಂದು ಹಿನ್ನೆಲೆ ಇರಲೇಬೇಕಲ್ಲವೆ? ’ದುಷ್ಟ ಶಿಕ್ಷಣ ಶಿಷ್ಟ ರಕ್ಷಣ’ವು ದಸರ ಅಥವ ನವರಾತ್ರಿ ಹಬ್ಬದ ಸಂಕೇತ. ಒಂಬತ್ತು ದಿನಗಳ ಕಾಲ ಮಹಿಷಾಸುರನೊಡನೆ ಯುದ್ದ ಮಾಡಿ ಹತ್ತನೆಯ ದಿನ ಅವನನ್ನು ಸಂಹಾರ ಮಾಡಿ ಜನರು ನೆಮ್ಮದಿಯ ಉಸಿರುಬಿಡುವಂತೆ ಮಾಡಿದ ತಾಯಿ ದುರ್ಗೆಯನ್ನು ಪೂಜಿಸುವ ಶುಭ ಸಂಧರ್ಭವೇ ಈ ನವರಾತ್ರಿ. ಮಹಿಷನ ಊರು ಇಂದಿನ ’ಮೈಸೂರು’ ಆದ್ದರಿಂದ ದೇಶದ ಬೇರೆ ಯಾವ ಭಾಗಕ್ಕಿಂತಲೂ ಮೈಸೂರಿಗೆ ದಸರ ವೈಭವ ಹೆಚ್ಚು.

ರಂಭಾಸುರನು ಒಂದು ಎಮ್ಮೆಯಲ್ಲಿ ಅನುರಕ್ತನಾಗಿ ಅದರೊಡನೆ ಕೂಡಿದ ಫಲವೇ ಮಹಿಷಾಸುರ. ಸೃಷ್ಟಿಕರ್ತ ಬ್ರಹ್ಮನನ್ನು ಕುರಿತು ತಪಸ್ಸು ಮಾಡಿ ಒಂದು ಹೆಣ್ಣಿನ ಹೊರತು ಬೇರಾರಿಂದಲೂ ತನಗೆ ಸಾವು ಬಾರದಿರಲಿ ಎಂದು ವರವನ್ನು ಪಡೆದ. ತನ್ನಂತಹ ಪರಾಕ್ರಮಿಯನ್ನು ಇನ್ನು ಯಾರೂ ಏನೂ ಮಾಡಲಾರರು ಎಂಬ ಅಹಂಕಾರದಿಂದ ಭೂಲೋಕ-ಸ್ವರ್ಗಲೋಕಗಳನ್ನು ತನ್ನ ಕೈವಶ ಮಾಡಿಕೊಂಡು, ಇಂದ್ರ, ಅಗ್ನಿ, ವಾಯು ಮೊದಲಾಗಿ ಎಲ್ಲ ದೇವತೆಗಳನ್ನು ತನ್ನ ಸೇವಕರನ್ನಾಗಿ ಮಾಡಿಕೊಂಡು ಅಟ್ಟಹಾಸದಿಂದ ತನಗೆ ಇಷ್ಟ ಬಂದಂತೆ ರಾಜ್ಯವಾಳುತ್ತಿದ್ದ. ಇವನ ಉಪಟಳ ತಡೆಯಲಾರದೆ ಕೊನೆಗೆ ದೇವತೆಗಳು ಪಾರ್ವತಿಯಲ್ಲಿ ಹೋಗಿ ಮೊರೆಯಿಟ್ಟು ಕಾಪಾಡುವಂತೆ ಕೇಳಿಕೊಂಡರು. ಪಾರ್ವತಿಯು ದುರ್ಗೆಯಾಗಲು ಸಕಲದೇವತೆಗಳೂ ತಮ್ಮ ತಮ್ಮ ಶಕ್ತಿಯನ್ನು ಆಕೆಗೆ ಧಾರೆಯೆರೆದರು. ಮಹಾಶಕ್ತಿವಂತಳಾದ ತಾಯಿ ಮಹಿಷನ ಮೇಲೆ ಯುದ್ದ ಸಾರಿದಳು. ಊರ ಬಾಗಿಲ ಹೊರಗೆ ಬಂದು ನಿಂತ ದುರ್ಗೆಯನ್ನು ದೂತರು ಮಹಿಷನಿಗೆ ವರ್ಣಿಸಲು, ಅವನಾದರೋ ದುರ್ಗೆಯ ಸೌಂದರ್ಯವನ್ನು ಕೇಳಿಯೇ ಮನಸೋತು ಅವಳನ್ನು ವಿವಾಹವಾಗಲು ಸಂದೇಶ ಕಳಿಸಿದನು. ಅವನ ಮಾತಿಗೆ ನಕ್ಕು, ಅವನೊಂದಿಗೆ ಸತತ ಒಂಬತ್ತು ದಿನಗಳ ಕಾಲ ಯುದ್ದ ಮಾಡಿ ಹತ್ತನೆಯ ದಿನ ಅವನನ್ನು ಸಂಹಾರ ಮಾಡಿ ’ಮಹಿಷಾಸುರ ಮರ್ಧಿನಿ’ ಎನ್ನಿಸಿಕೊಂಡಳು. ಲೋಕಕ್ಕೆ ಮಹಿಷನಿಂದ ಮುಕ್ತಿ ನೀಡಿದ ಈ ಶುಭ ದಿನವೇ ’ವಿಜಯದಶಮಿ’.

ಈ ಹತ್ತು ದಿನಗಳ ಹಬ್ಬವು ಕೇವಲ ಕರ್ನಾಟಕವೇ ಅಲ್ಲದೆ ಇಡೀ ಭಾರತದ ಹಬ್ಬವಾಗಿದೆ. ಉತ್ತರ ಭಾರತೀಯರು ’ದಾಂಡಿಯಾ, ಗರ್ಬಾ’ ಇತ್ಯಾದಿ ನೃತ್ಯಗಳಿಂದ ರಾತ್ರಿಯೆಲ್ಲ ಕುಣಿದು ಕುಪ್ಪಳಿಸಿದರೆ, ದಕ್ಷಿಣ ಭಾರತೀಯರು ಮನೆ ಮನೆಗೆ ಅರಿಶಿಣ-ಕುಂಕುಮಗಳಿಗೆ ಹೋಗುತ್ತ ಸಂತಸ ಹಂಚಿಕೊಳ್ಳುತ್ತಾರೆ. ನವರಾತ್ರಿ ಹಬ್ಬದ ಮತ್ತೊಂದು ವಿಶೇಷತೆ ಅಂದರೆ ’ಗೊಂಬೆ ಕೂಡಿಸುವ ಪದ್ದತಿ’.

ಮರದಿಂದ ತಯಾರಿಸಿದ ಬೊಂಬೆಗಳನ್ನು ಅಲಂಕೃತವಾಗಿ ಜೋಡಿಸುವುದು ಈ ಪದ್ದತಿ. ಮುಖ್ಯವಾಗಿ ವಧು-ವರರ ಜೋಡಿ ಬೊಂಬೆಗಳನ್ನು ಕಳಶದ ಜೊತೆ ಪೂಜಿಸುವುದು. ವಧು-ವರರ ಬೊಂಬೆಗಳಿಗೆ ಚಿನ್ನಾರಿ ಕಾಗದದಿಂದ ಸೀರೆ-ಪಂಚೆ ಮಾಡಿ ಅಲಂಕರಿಸುತ್ತಾರೆ. ಮದುವೆಯಾಗದ ಹೆಣ್ಣುಮಕ್ಕಳಿಗೆ ಮದುವೆಯ ಯೋಗ ಬರುವುದೆಂಬ ನಂಬಿಕೆಯೂ ಇದೆ. ಸಾಮಾನ್ಯವಾಗಿ ಬೊಂಬೆಗಳಲ್ಲಿ ಕಾಣಬರುವುದು ’ದಶಾವತಾರ’ದ ಬೊಂಬೆಗಳು. ದೈವದ ಬಗ್ಗೆ ತಮಗಿರುವ ಕಲ್ಪನೆಯನ್ನು ಮುಂದಿನ ಪೀಳಿಗೆಗೂ ತಲುಪಿಸುವ ಸಾಧನವಾಗಿ ಈ ಪದ್ದತಿ ಇನ್ನೂ ಮುಂದುವರೆದಿದೆ.

ನವರಾತ್ರಿಗೆ ಒಂದು ವಾರವಿರುವಾಗಲೇ ಮೇಜುಗಳನ್ನು ಜೋಡಿಸಿ ಅದರ ಮುಂದೆ ಮಣ್ಣು ಹಾಕಿ, ರಾಗಿ ಹಾಕಿ, ಪೈರೊಡೆಯುವಂತೆ ಮಾಡಿ ಸಣ್ಣ ಉದ್ಯಾನವನ ಮಾಡುವುದು, ವಿದ್ಯುತ್ ದೀಪಗಳ ಅಲಂಕಾರ ಸಿದ್ದ ಮಾಡುವುದು, ಗೊಂಬೆಗಳಿಗೆ ಹೊಸ ಬಟ್ಟೆಗಳನ್ನು ತೊಡಿಸಿ ಸಿದ್ದ ಮಾಡುವುದು ಎಲ್ಲವೂ ನೆಡೆದಿರುತ್ತದೆ. ಹಬ್ಬದ ಮೊದಲ ದಿನ ಸ್ನಾನಾದಿಗಳಾದ ಮೇಲೆ ಬೊಂಬೆಗಳನ್ನು ಜೋಡಿಸಿ, ಪೂಜಿಸುವುದು ನೆಡೆಯುತ್ತದೆ. ಸಂಜೆಯಾಗುತ್ತಿದ್ದಂತೆ ’ಆಂಟಿ, ನಿಮ್ಮನೇಲಿ ಗೊಂಬೆ ಕೂಡಿಸಿದ್ದೀರಾ?’ ಎಂದು ಕೇಳಿಕೊಂಡು ಬರುವ ಮಕ್ಕಳು ಹಲವಾರು. ಒಂದೆಡೆ ಮನವು ಏನು ಬೊಂಬೆಗಳನ್ನು ಜೋಡಿಸಿದ್ದಾರೆ ಎಂದು ನೋಡುತ್ತಿದ್ದರೆ ಮುಕ್ಕಾಲು ಭಾಗ ಆಂಟಿ ಇಂದು ಏನು ’ಚರ್ಪು’ ಕೊಡ್ತಾರೆ ಎಂದು ಕಾತರದಿಂದ ಎದುರು ನೋಡುತ್ತಿರುತ್ತದೆ. ಆಂಟಿಗಳು ಇನ್ನೂ ಹುಷಾರು. ಮಕ್ಕಳನ್ನು ಕೂಡಿಸಿ ಅವರಿಂದ ಹಾಡಿಸಿ ನಂತರ ಚರ್ಪು ಕೊಡುತ್ತಾರೆ. ಮಕ್ಕಳಲ್ಲಿನ ಲಲಿತಕಲೆಗಳನ್ನು ಪ್ರೋತ್ಸಾಹಿಸುವ ಈ ಪದ್ದತಿ ನಿಜಕ್ಕೂ ಶ್ಲಾಘನೀಯ.

ನವರಾತ್ರಿಯ ಪೂಜೆಗಳಲ್ಲಿ "ಸರಸ್ವತಿ ಪೂಜೆ"ಯೂ ಒಂದು. ಗ್ರಂಥ ಪೂಜೆಯ ನಂತರದ ದಿನ ಶಾಲಾ ಪುಸ್ತಕಗಳನ್ನು ದೇವರ ಮುಂದೆ ಇಟ್ಟು ಸರಸ್ವತಿಯ ಪೂಜೆ ಮಾಡಿ ವಿದ್ಯಾ-ಬುದ್ಧಿ ಕೊಡುವಂತೆ ಪ್ರಾರ್ಥಿಸಿ ಕೊಳ್ಳುವುದು. ಈ ಹಬ್ಬ ಮಕ್ಕಳಿಗೆ ಏಕೆ ಹೆಚ್ಚು ಪ್ರಿಯವೆಂದರೆ ಅಂದು ಪಠ್ಯಪುಸ್ತಕಗಳನ್ನು ಓದುವುದಿಲ್ಲ!! ಪೂಜಿಸಲ್ಪಟ್ಟ ಪುಸ್ತಕಗಳನ್ನು ವಿಜಯದಶಮಿಯವರೆಗೂ ಕದಲಿಸದಿರುವುದರಿಂದ, ಮುಖ್ಯವಾದ ಪುಸ್ತಕಗಳನ್ನೇ ಪೂಜೆಗಿಟ್ಟು ಮೂರು ದಿನಗಳ ಕಾಲ ಓದುವುದನ್ನು ತಪ್ಪಿಸಿಕೊಳ್ಳುತ್ತಿದ್ದುದು ಈಗಲೂ ನೆನಪಿದೆ !!

ನವರಾತ್ರಿಯ ನವಮಿಯಂದು ನೆಡೆವ ರಂಗು ರಂಗಾದ ಹಬ್ಬ ’ಆಯುಧ ಪೂಜೆ’. ವಾಹನಗಳನ್ನು ತೊಳೆದು ಪೂಜೆ ಮಾಡಿ, ಬಣ್ಣ ಬಣ್ಣವಾಗಿ ಅಲಂಕಾರ ಮಾಡಿ ಓಡಾಡಿಸುವುದು ಒಂದು ಮಜ. ಡ್ರೈವರ್ ಗಳು ಬಸ್ಸುಗಳಿಗೆ ಅಲಂಕಾರ ಮಾಡುತ್ತಾರೆ. ಹಳ್ಳಿಯ ಕಡೆ ಓಡಾಡುವ ಬಸ್ಸುಗಳಿಗಂತೂ ಇನ್ನೂ ವೈಭವ ಹೆಚ್ಚು. ಅದನ್ನು ತೊಳೆಯುವ, ಅಲಂಕಾರ ಮಾಡುವ ಹೊಣೆ ಊರಿನವರೇ ವಹಿಸಿಕೊಂಡಿರುತ್ತಾರೆ. ಯಾವ ಊರಿನವರ ಬಸ್ಸು ಎಷ್ಟು ಅಲಂಕೃತವಾಗಿದೆ ಎನ್ನುವ ಪೈಪೋಟಿಯೂ ಇರುತ್ತದೆ. ಕೆಲಸಕ್ಕೆ ಕರೆದೊಯ್ಯುವ ಫ಼್ಯಾಕ್ಟರಿ ಬಸ್ಸುಗಳನ್ನು ಆ ಬಸ್ಸಿನ ಪ್ರಯಾಣಿಕರು ಅಲಂಕಾರ ಮಾಡಿ, ಪೂಜಾರಿಗಳಿಂದ ಪೂಜೆ ಮಾಡಿಸಿ, ಫ಼್ಯಾಕ್ಟರಿಗೆ ಹೊರಟು, ಮೆಶೀನುಗಳಿಗೆ ಪೂಜೆ ಮಾಡಿ, ಸಿಹಿ ತೆಗೆದುಕೊಂಡು ಮಧ್ಯಾನ್ನದ ವೇಳೆಗೆ ವಾಪಸ್ಸು ಬರುತ್ತಾರೆ. ವರ್ಷದ ಪ್ರತಿ ದಿನವೂ ಕೆಲಸ ಮಾಡಿಯೂ ಮೇನೇಜರ್ ಕೈಯಲ್ಲಿ ಪೂಜೆ ಮಾಡಿಸಿಕೊಳ್ಳೋ ಕೆಲಸಗಾರ ಈ ದಿನದಂದು ಮೇನೇಜರ್ ಮುಂದೆಯೇ ಕೆಲಸ ಮಾಡದೆ ಓಡಾಡುವ ಸೌಭಾಗ್ಯ ಹೊಂದುತ್ತಾನೆ! ಯಾರಿಗುಂಟು, ಯಾರಿಗಿಲ್ಲ !!

ದಸರಾ ಹಬ್ಬದ ಕೊನೆಯ ದಿನವಾದ ’ವಿಜಯದಶಮಿ’ ಹಲವಾರು ವಿಷಯಗಳಿಂದಾಗಿ ಪ್ರಮುಖವಾಗಿದೆ. ಎಷ್ಟು ಪ್ರಮುಖವೆಂದರೆ, ಆ ದಿನ ಯಾವುದೇ ಕೆಲಸ ಆರಂಭ ಮಾಡಿದರೂ ಯಶಸ್ಸು ಖಚಿತ ಎನ್ನುವ ನಂಬಿಕೆ. ಅಂದು ಮಾಡುವ ಯಾವ ಕೆಲಸಕ್ಕೂ ದಿನ ಶುದ್ಧಿ ನೋಡುವ ಅಗತ್ಯ ಇಲ್ಲ. ದುರ್ಗೆಯು ಮಹಿಷನನ್ನು ಕೊಂದು ’ಮಹಿಷಾಸುರ ಮರ್ಧಿನಿ’ ಯಾಗಿದ್ದು ಒಂದು. ಈ ದಿನದಂದೇ ಪುರುಷೋತ್ತಮನಾದ ಶ್ರೀರಾಮನು ಲಂಕಾಧೀಶ ರಾವಣನನ್ನು ಕೊಂದದ್ದು. ಮತ್ತೊಂದು ವಿಶೇಷ ಮಹಾಭಾರತದಲ್ಲಿ ಹೇಳಿದೆ.

ವನವಾಸ ಮುಗಿಸಿದ ಪಾಂಡವರು, ಅಜ್ಞ್ನಾತವಾಸ ಹೊರಡುವ ಮುನ್ನ ತಮ್ಮ ಶಸ್ತ್ರಾಸ್ತ್ರಗಳನ್ನು ಗಂಟುಕಟ್ಟಿ ಶ್ಮಶಾನದಲ್ಲಿದ್ದ ಒಂದು ಶಮಿ ವೃಕ್ಷ ಮೇಲೆ ಇಟ್ಟು, ವಿರಾಟ ಮಹಾರಾಜನ ಆಶ್ರಯ ಪಡೆದರು. ಮಹಾರಾಣಿ ಸುಧೇಷ್ಣೆಯ ತಮ್ಮನಾದ ಕೀಚಕನು ದ್ರೌಪದಿಯನ್ನು ಕೆಣಕಲು ಅವನನ್ನು ವಧಿಸಿದ ಬಲಭೀಮ. ಸುದ್ದಿಯು ಕಾಳ್ಗಿಚ್ಚಿನಂತೆ ಹರಡಿ ಹಸ್ತಿನಾಪುರಕ್ಕೂ ತಲುಪಿತು. ಕೀಚಕನನ್ನು ಕೊಲ್ಲಲು ಸಾಧ್ಯವಿದ್ದ ಕೆಲವೇ ಜನರಲ್ಲಿ ಭೀಮನೂ ಒಬ್ಬ. ಹಾಗಾಗಿ ಪಾಂಡವರು ವಿರಾಟನ ರಾಜ್ಯದಲ್ಲಿ ಇರಬಹುದು ಎಂಬ ಸಂಶಯ ಬಲವಾಗಿ, ಕೌರವರು ಅಲ್ಲಿಗೆ ಹೋಗಿ ವಿರಾಟನ ಗೋವುಗಳನ್ನು ಕದ್ದೊಯ್ದರು. ಯುದ್ದ ಮಾಡುತ್ತೇನೆಂದು ಹೋದ ಉತ್ತರಕುಮಾರನೂ ಭೀತಿಯಿಂದ ರಣರಂಗದಿಂದ ಓಡಿಹೋಗುವ ಆ ಸಂಧರ್ಭದಲ್ಲಿ ಅರ್ಜುನನು ಶಮಿ ವೃಕ್ಷದಿಂದ ಶಸ್ತ್ರಗಳನ್ನು ತೆಗೆದುಕೊಂಡು ಕೌರವರ ಮೇಲೆ ಯುದ್ದ ಮಾಡಿ ಜಯಗಳಿಸುತ್ತಾನೆ. ಅಂದು ವಿಜಯದಶಮಿ!

ಶಮಿ ಎಲೆಗಳನ್ನು ವಿನಿಮಯ ಮಾಡಿಕೊಂಡು ಕಾರ್ಯ ಯಶಸ್ವಿಯಾಗಲಿ ಎಂದು ಕೆಳಗಿನ ಶ್ಲೋಕ ಹೇಳಿಕೊಳ್ಳುವುದರ ಮೂಲಕ ಹಾರೈಸಿಕೊಳ್ಳುವ ಆಚರಣೆ ಈಗಲೂ ಇದೆ.


ಶಮೀ ಶಮಯತೆ ಪಾಪಮ್ ಶಮೀ ಶತ್ರುವಿನಾಶಿನೀ |
ಅರ್ಜುನಸ್ಯ ಧನುರ್ಧಾರಿ ರಾಮಸ್ಯ ಪ್ರಿಯದರ್ಶಿನೀ ||
ಕರಿಶ್ಯಮಾಣಯಾತ್ರಾಯಾ ಯಯಾಕಾಲಮ್ ಸುಖಮ್ ಮಯಾ |
ತತ್ರ ನಿರ್ವಿಘ್ನ ಕ್ರಿತ್ರೀತ್ವಮ್ ಭವ ಶ್ರೀರಾಮಪೂಜಿತಾ ||


ವಿಜಯದಶಮಿಯ ದಿನಕ್ಕೆ ಶಮಿಯ ಶ್ರೇಷ್ಟತೆಯೂ ಸೇರಿ, ಅಂದಿನ ದಿನ ತಾಯಿ ಚಾಮುಂಡೇಶ್ವರಿಯನ್ನು ಹೊತ್ತ ಆನೆಯ ಅಂಬಾರಿಯು ಅರಮನೆಯಿಂದ ಬನ್ನಿ (ಶಮಿ) ಮಂಟಪಕ್ಕೆ ಹೊರಟು, ಅಲ್ಲಿ ಪೂಜೆಯಾದ ನಂತರ ವಾಪಸ್ಸಾಗುತ್ತದೆ. ಈ ಮೆರವಣಿಗೆಯನ್ನು ನೋಡಲು, ಜನಸ್ಥೋಮ ಬೆಳಗ್ಗಿನಿಂದಲೇ ಜಮಾಯಿಸಿರುತ್ತಾರೆ. ರಾಜ್ಯದ ಎಲ್ಲ ಜಿಲ್ಲೆಗಳ ಪ್ರತಿನಿಧಿಗಳು ತಮ್ಮ ಜಿಲ್ಲೆಯ ವೈಶಿಷ್ಟ್ಯವನ್ನು ಫಲಕಗಳು, ಸ್ಥಿರ ಚಿತ್ರಗಳು, ವೇಷ-ಭೂಷಣಗಳ ಮೂಲಕ ಸಕಲರಿಗೂ ಪರಿಚಯ ಮಾಡಿಕೊಡುತ್ತಾರೆ. ಮೈಸೂರಿನ ರಾಜಮನೆತನದವರಿಂದಲೇ ಈ ಹಬ್ಬವು ಇಷ್ಟು ಪ್ರಚಲಿತವಾಗಿರುವುದರಿಂದ ಅಂದಿನ ವಿಶೇಷ ಪೂಜೆಯೂ ಅವರಿಂದಲೇ ನೆಡೆಯುತ್ತದೆ. ಹಿಂದಿನ ಕಾಲದ ರಾಜರ ಉಡುಗೆ ತೊಡುಗೆ ಹೇಗಿತ್ತು ಎಂಬುದನ್ನು ಇಂದಿನ ಪೀಳಿಗೆಯವರು ಪ್ರತ್ಯಕ್ಷ ನೋಡಲು ಒಂದು ಸುವರ್ಣಾವಕಾಶ.

ತಾಯಿ ದುರ್ಗೆಯು ಎಲ್ಲರಿಗೂ ಸನ್ಮಂಗಳವನ್ನು ಉಂಟುಮಾಡಲಿ ಎಂದು ಪ್ರಾರ್ಥಿಸುತ್ತೇನೆ.

No comments:

Post a Comment