Tuesday, March 31, 2015

ಮುಖದ ಮೇಲೆ ಮುಖವಾಡ

ಬೆಳ್ಳಂಬೆಳಿಗ್ಗೆ ಅಲಾರಂ ಹೊಡೆದುಕೊಳ್ಳುತ್ತಿತ್ತು ... ಯಾವುದೋ ಕಲ್ಪನಾಲೋಕದಲ್ಲಿ ವಿಹರಿಸುತ್ತಿದ್ದ ನನಗೆ ಆ ಅಲಾರಂ ತಂಗಾಳಿಯಲ್ಲಿ ತೇಲಿಬಂದ ವೇದಮಂತ್ರದಂತೆ, ನವಿರಾದ ಕಾಲ್ಗೆಜ್ಜೆಯ ನಾದದಂತೆ, ಹಗಲಿನ ಹಕ್ಕಿಪಿಕ್ಕಿಗಳ ಹಾಡಿನಂತೆ, ಕೊಳಲ ನಾದದಂತೆ ಕೇಳಿಸಲಿಲ್ಲಾರೀ ... ಶಿವಮಣಿಯ ಡ್ರಮ್ಸ್’ನಂತೆ ತಲೆಯನ್ನು ಕುಟ್ಟಿ ಎಬ್ಬಿಸಿತ್ತು ... ಸೈಲೆನ್ಸರ್ ತೆಗೆದ ಬೈಕಿನಂತಹ ಸದ್ದು ನರನಾಡಿಯಲ್ಲಿ ನುಗ್ಗಿತ್ತು ... ಜೆಟ್ ವಿಮಾನವೊಂದು ಸುಯ್ಯ್ ಎಂದು ಎಡಗಿವಿಯಿಂದ ಹಾದು ಬಲಗಿವಿಯಿಂದ ಹೊರಬಂದಂತಾಯ್ತು ... ಅದಕ್ಕೇ ಎದ್ದೆ.

ಮಡದಿ ಒಂದೆರಡು ದಿನ ಅಂತ ಅಮ್ಮನ ಮನೆಗೆ ಹೋಗಿದ್ದಳು. ಹಾಗಾಗಿ ನಾನು, ನಾನು ಮತ್ತು ನಾನು ಅಷ್ಟೇ ನಮ್ಮ ಮನೆಯಲ್ಲಿ ! ಇನ್ನೊಂದೈದು ನಿಮಿಷ ಅಂತ ಮಲಗಿ ಒಂದು ಘಂಟೆಯ ನಂತರ ಎದ್ದ ಮೇಲಂತೂ ನಾನು ಮತ್ತು ಗಡಿಬಿಡಿ ಇಬ್ಬರೇ ... ಪ್ರತಿ ಹಲ್ಲನ್ನೂ ಅರ್ಧ ಮಾತ್ರ ಉಜ್ಜಿ ಧಡ ಧಡ ಬಟ್ಟೆ ಹಾಕಿಕೊಂಡು ಮಧ್ಯಾನ್ನ ಅಲ್ಲೇ ಏನಾದ್ರೂ ಕೊಂಡು ತಿಂದರಾಯ್ತು ಅಂತ ಹೊರಟೇ ಬಿಟ್ಟೆ.

ಗಾಡಿ ನಿಲ್ಲಿಸಿ ಒಳಗೆ ಹೋಗುತ್ತಿದ್ದಂತೆ ಗೇಟಿನ ಬಳಿ ಇದ್ದ ಗಾರ್ಡ್ ನಾಲ್ಕು ಬಾರಿ ನನ್ನನ್ನೇ ನೋಡಿದ. ಹದಿನೈದು ವರ್ಷದಲ್ಲಿ ಇಂಥಾ ಅನುಭವ ಆಗಿದ್ದು ಕೆಲಸಕ್ಕೆ ಸೇರಿದ ಮೊದಲೆರಡು ದಿನಗಳಲ್ಲಿ ಮಾತ್ರ. ಅವನು ಯಾವ ಮೂಡ್’ನಲ್ಲಿದ್ದಾನೋ ಅಂತ ನಾನೇ ಅವನನ್ನು ಹೆಸರು ಹಿಡಿದು ಕೂಗಿ ಮಾತನಾಡಿಸಿ ಮುಂದೆ ಹೋದೆ. ಬೆಳಿಗ್ಗೆಯೇ ಮೀಟಿಂಗ್ ಇದ್ದುದರಿಂದ ಮೀಟಿಂಗ್ ರೂಮಿನಲ್ಲಿ ಕೂತೇ ಕೆಲಸ ಶುರು ಮಾಡಿದ್ದೆ. ಒಬ್ಬೊಬ್ಬರಾಗಿ ಒಳಗೆ ಬಂದವರು ಎಲ್ಲಿ ಬೇಕೋ ಅಲ್ಲಿ ಆಸೀನರಾದರು. ನನ್ನ ಮುಖ ನೋಡಿ ಸುಮ್ಮನಾಗುತ್ತಿದರೇ ವಿನಹ ಕಿರುನಗೆಯೂ ಇಲ್ಲ. ಹೋಗ್ಲಿ ಬಿಡಿ, ಇವರೆಲ್ಲ ನನಗೇನು ಹೊಸಬರೇ?

ನಾನು ಕಳಿಸಬೇಕೆಂದಿದ್ದ ಈ-ಮೈಲ್ ಕೊನೇ ಹಂತದಲ್ಲಿ ಇದ್ದುದರಿಂದ ಅದನ್ನು ಮುಗಿಸಿ ನಂತರ ಮಾತು ಶುರು ಮಾಡೋಣ ಅಂತಿದ್ದೆ. ಇನ್ನೇನು ನಾನು ಎಲ್ಲರೂ ಮೀಟಿಂಗ್’ಗೆ ಬಂದದ್ದಕ್ಕೆ ಧನ್ಯವಾದ ಅರ್ಪಿಸಬೇಕು ಅನ್ನುವಷ್ಟರಲ್ಲಿ, ಇನ್ಯಾರೋ ಮಾತು ಶುರು ಮಾಡಿದರು ... "ಮಿ.ರಾವ್ ಇನ್ನೂ ಬಂದಿಲ್ಲ. ಮೀಟಿಂಗ್ ಕ್ಯಾನ್ಸಲ್ ಮಾಡಿರಬೇಕು. ಆದರೆ ನನಗೆ ಯಾವ ಈ-ಮೈಲ್ ಬರಲಿಲ್ಲ !!" ಅನ್ನುತ್ತಿದ್ದ.

ನಾನು ಒಮ್ಮೆ ಜೋರಾಗಿ ನಕ್ಕು ’ನೈಸ್ ಜೋಕ್’ ಎಂದು ಮೆಚ್ಚುಗೆ ಸೂಚಿಸಿ ಮಾತು ಶುರು ಮಾಡಿದೆ. ಇಡೀ ಮೀಟಿಂಗ್’ನಲ್ಲಿ ಜನ ನನ್ನ ಮಾತನ್ನು ಕೇಳುವುದರ ಜೊತೆ ಏನೋ ಗ್ಯಾರಂಟಿ ಮಾಡಿಕೊಳ್ಳುವವರ ಹಾಗೆ ದಿಟ್ಟಿಸಿ ನೋಡುತ್ತಿದ್ದರು.

ನಮ್ಮ ಕಛೇರಿ ದೊಡ್ಡದು. ಹಲವಾರು ಮಹಡಿಗಳ ಕಟ್ಟಡ. ಸ್ನೇಹಿತರು ಬೇರೆ ಬೇರೆ ಪ್ರಾಜಕ್ಟ್ ಎಂದು ಅಲ್ಲಿ ಇಲ್ಲಿ ಚದುರಿ ಹೋಗಿದ್ದಾರೆ. ಮಧ್ಯಾನ್ನ ಊಟಕ್ಕೆ ಕೆಫಿಟೇರಿಯಾದಲ್ಲಿ ಸಿಗುವುದು ವಾಡಿಕೆ. ಊಟದ ಸಮಯದಲ್ಲಿ ನನ್ನದೇ ಫ್ಲೋರಿನಲ್ಲಿರುವನೊಬ್ಬ ನನ್ನತ್ತ ನೋಡಿ ಹಾಗೇ ಹೊರಟು ಹೋದ. ಹೆಂಡ್ತಿ ಮೇಲಿನ ಸಿಟ್ಟನ್ನು ಮಕ್ಕಳ ಮೇಲೆ ತೋರೋ ಹಾಗೆ, ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದಂತೆ ಇವನಿಗೆ ಯಾರ ಮೇಲೆ ಸಿಟ್ಟೋ ನನ್ನನ್ನು ಕರೆಯದೆ ಹಾಗೇ ಹೋದ. ಊರಿಗೆ ಬಂದೋಳು ನೀರಿಗೆ ಬಾರದೇ ಹೋದಾಳೆ, ಊಟ ತಂದೋನು (ತಾರದವನೂ) ಕೆಫಿಟೇರಿಯಾದಲ್ಲಿ ಸಿಗದೇ ಹೋದಾನಾ? ಅಂದುಕೊಂಡು ಎರಡು ನಿಮಿಷದಲ್ಲಿ ನಾನೂ ಹೊರಟು ಅಲ್ಲಿಗೆ ಹೋದೆ.

ಒಂದು ನಿಮಿಷ ನನ್ನನ್ನು ಎಲ್ಲರೂ ನೋಡಿ ನಂತರ ಮಾತನಾಡಿಸಿದರು. ನನ್ನ ಫ್ಲೋರಿನವನು ’ನಿನ್ ಜಾಗದಲ್ಲಿ ಯಾರೋ ಬೇರೆಯವರು ಕೂತಿದ್ದ ಹಾಗಿತ್ತು ಅಂತ ಹೊರಟು ಬಂದೆ. ನೀನೇನಾ?" ಅಂದ. ಇದೊಳ್ಳೇ ಕಥೆಯಾಯ್ತಲ್ಲ ? ಯಾರಿಗೂ ನಾನು ನನ್ನಂತೆ ಕಾಣುತ್ತಿಲ್ಲ ! ಏನಾಯ್ತು ?

ಸಂಜೆ ಮನೆಗೆ ಹೊರಟಾಗ ಎರಡನೇ ಶಿಫ್ಟ್’ನ ಗಾರ್ಡ್ ನಿಂತಿದ್ದ, ಮಾಮೂಲಿನಂತೆ. ಎಂದಿನಂತೆ ಅವನ ಕೈಗೆ ಕೀ ಹಾಕಿ ಸುಮ್ಮನೆ ನಿಂತೆ. ಆತನೋ ಬಾಯಿಬಿಟ್ಟು ಕೇಳಿಯೇಬಿಟ್ಟ "ಸರ್, ಯುವರ್ ಬಾಡ್ಜ್ ಪ್ಲೀಸ್" ಅಂತ. ದಿನವೂ ನನಗೆ ಸಲಾಮ್ ಹೊಡೆದು. ಕೀಲಿ ತೆಗೆದುಕೊಂಡು ಗಾಡಿ ತಂದಿಡೋ ಇವನಿಗೂ ನಾನ್ಯಾರು ಅಂತ ತಿಳೀಲಿಲ್ವೇ? ಬಾಡ್ಜ್ ತೋರಿಸು ಅಂದ ಮೇಲೆ ನಿಯಮದಂತೆ ನನ್ನ ಕರ್ತವ್ಯ ಮಾಡಿದೆ. "ಸಾರಿ ಸರ್, ಗೊತ್ತಗ್ಲಿಲ್ಲ" ಅಂತಂದು ಕೀಲಿ ತೊಗೊಂಡು ಹೋದ.

ಮನೆ ಹತ್ತಿರ ಕಾರ್ ಪಾರ್ಕ್ ಮಾಡಿ ಗೇಟ್ ತೆಗೆಯಬೇಕು ಅನ್ನೊಷ್ಟರಲ್ಲಿ ಮಹಡಿ ಮೇಲೆ ಹೆಂಡ್ತಿ ದರ್ಶನ ! ನಾಳೆ ಬರೋದು ಇಂದೇ ಬಂದುಬಿಟ್ಟಳೇ ವಾವ್ ಎಂದುಕೊಂಡೂ ಮುಂದಡಿ ಇಡೋಷ್ಟರಲ್ಲಿ ನನ್ನ ಬಾಡಿಗೆ ಮನೆಯಾತ ತಂದೆ "ಯಾರು ಬೇಕಿತ್ತು?" ಅಂತ ಕನ್ನಡಕ ಒರೆಸಿಕೊಳ್ಳುತ್ತ ಕೇಳಿದರು. ಪಾಪ ಅರುಳು ಮರಳು ಅಂತ ನಕ್ಕು ಮಹಡಿ ಹತ್ತು ಹೋದೆ. ಮೂರು ವರ್ಷದಿಂದ ನೋಡಿರುವ ಇವರಿಗೂ ನಾನ್ಯಾರು ಎಂದು ಗೊತ್ತಾಗಲಿಲ್ವೇ?

ತಲೆಗೂದಲು ಸವರಿಕೊಂಡು, ಬಟ್ಟೆ ಸರಿಪಡಿಸಿಕೊಂಡು, ಮುಖದ ಮೇಲೆ ಎಂದಿನ ನಗೆ ತರಿಸಿಕೊಂಡು "ಹಾಯ್ ಸುಮಾ" ಎನ್ನುತ್ತ ಮನೆ ಬಾಗಿಲ ಬಳಿ ಸಾಗಿದೆ. ಎಲ್ಲರಂತೆ ಇವಳಿಗೂ ಮುಖ ಗುರುತು ಸಿಗದೇ ಹೋದರೂ ಕಂಠವಾದರೂ ಗುರುತು ಸಿಗಲಿ ಅಂತ. ಯಾರೋ ಆಗುಂತಕ ಅಂತ ಇವಳು ಚೀರಿ ಜನ ಸೇರಿ ನನ್ನನ್ನು ಬಡಿದು ಹಾಕಿದರೆ? ಅದನ್ನ ನೆನೆಸಿಕೊಂಡರೇ "ಅಯ್ಯಯ್ಯಪ್ಪ !" ... ಕೊನೇ ಮಾತು ನಾನು ಅಂದಿದ್ದಲ್ಲ ... "ಸುಮಾ !!"

"ಯಾಕ್ರೀ ಹಿಂಗಿದ್ದೀರಿ? ಆಫೀಸಿನಲ್ಲಿ ಮಾಡೋ ಕೆಲ್ಸ ಅಷ್ಟರಲ್ಲೇ ಇದೆ ... ಯಾಕೆ ಹಿಂಗಿದ್ದೀರಿ? ನೀವು ಮಾತಾಡದೇ ಹಾಗೇ ಬಂದು ನಿಂತಿದ್ರೆ ಹೋಗಿದ್ರೆ ಕಳ್ಳ ಅಂದುಕೊಂಡು ಬಿಡ್ತಿದ್ದೆ" ಅನ್ನೋದೇ? ... ಬುದ್ದಿ ಉಪಯೋಗಕ್ಕೆ ಬಂತು ... "ಬೆಳಿಗ್ಗೆಯಿಂದ ಇದೇ ಆಯ್ತು ... ಏನಾಗಿದ್ದೀನಿ ?"

ಹಾಗೇ ಒಂದೆರಡು ನಿಮಿಷ ನನ್ನನ್ನು ನೋಡಿ ನುಡಿದಳು ಸುಮ "ಸ್ನಾನಾ ಮಾಡಿ ಹಾಗೇ ಹೋದ ಹಾಗಿದೆ ... ತಲೆ ಸ್ನಾನ ಮಾಡಿದಾಗ ಶ್ಯಾಂಪೂ-ಕಂಡೀಶನರ್ ಹಾಕದೆ ಸುಮ್ಮನೆ ನೀರು ಹಾಕಿರೋದ್ರಿಂದ ಜಟೆ ಕಟ್ಟಿದ ಹಾಗಿದೆ ಕೂದಲು ... ಮುಖಕ್ಕೆ ಬರೀ ಸೋಪು ಹಚ್ಚಿದ್ರಿಂದ ಒಣಗಿ ಹೋಗಿದೆ ಚರ್ಮ ...ಮುಖಕ್ಕೆ ಕ್ರೀಮಿಲ್ಲ, ಪೌಡರಿಲ್ಲ .. ಕೈಗೆ moisturizer ಹಾಕಿಲ್ಲ, ಕುತ್ತಿಗೆಗೆ ಬಾಡಿ ಕ್ರೀಮ್ ಹಚ್ಚಿಲ್ಲ. ಕೊಂಕಳಿಗೆ Deodorant ಸುಳಿದೇ ಇಲ್ಲ. ಹಲ್ಲುಗಳು ಭಾಗಶಹ ಬೆಳ್ಳಗಿದ್ದು ಹೆಚ್ಚುವರಿ ಹಳದಿ ಇದೆ, ಸೋ  ದಯವಿಟ್ಟು ತುಟಿಗಳನ್ನ ಲಾಕ್ ಮಾಡಿಕೊಳ್ಳಿ. ನಾನಿಲ್ಲ ಅಂತ ಬಟ್ಟೆಗೆ ಇಸ್ತ್ರಿ ಇಲ್ಲ. ಸದ್ಯಕ್ಕೆ ನನಗೆ ಇಷ್ಟೇ ತೋಚಿದ್ದು" ...

ಇಷ್ಟು ಸಾಲದೇ ? ಬೆಳಿಗ್ಗೆ ಬೆಳಿಗ್ಗೆ ಮೀಟಿಂಗ್ ಅಂತ ಲೇಟಾಗಿ ಎದ್ದ ನಾನು ಎದ್ದುಬಿದ್ದು ಹಲ್ಲುತಿಕ್ಕಿ, ಸ್ನಾನ ಮಾಡಿ ಓಡಿದ್ದೇ ದೊಡ್ಡದು. ಇನ್ನು ಇಷ್ಟೆಲ್ಲಾ ವೈಭೋಗಕ್ಕೆ ಟೈಮು ಎಲ್ಲಿತ್ತು ?

ಓ! ಹಾಗಿದ್ರೆ ವಿಷಯ ಇದು ...

ಹಲವು ಮ್ಯಾಗಜೀನ್’ಗಳಲ್ಲಿ "ತೆರೆಯ ಮೇಲಿನ ನಿಮ್ಮ ಗ್ಲ್ಯಾಮರಸ್ ಹೀರೋಯಿನ್ ನಿಜ ಜೀವನದಲ್ಲಿ ’ರಸ್’ ಇಲ್ಲದೆ ಹೀಗಿರುತ್ತಾರೆ" ಎಂದು ಎರಡು ಚಿತ್ರಗಳು ಹಾಕಿರುವ ನೆನಪು ಬಂತು. ತೆರೆಯ ಮೇಲೆ ಹೃದಯ ಕದ್ದ ಚೋರಿ ನಿಜ ಜೀವನದಲ್ಲಿ ಮುಸುರೆ ತೊಳೆಯುವ ಹಾಗೆ ಇರುತ್ತಾಳೆ ಅಂತ ತೋರಿಸುವುದು ಉದ್ದೇಶವೋ ಅಥವಾ ತೆರೆಯ ಮೇಲೆ ನೋಡಿದ್ದೆಲ್ಲ ನಿಜವಲ್ಲ ಎಂದು ಅರಿವು ಮೂಡಿಸುವುದು ಉದ್ದೇಶವೋ ಗೊತ್ತಿಲ್ಲ ...

ನನಗೂ ಈಗ ಸೆಲೆಬ್ರಿಟಿ ಆದೆ ಹಾಗೆ ಅನ್ನಿಸಿದೆ. ಅಲ್ಲದೇ ಇಷ್ಟು ದಿನ ನನ್ನನ್ನು ಜನ ಗುರುತಿಸುತ್ತ ಇದ್ದದ್ದು ನನ್ನನ್ನಲ್ಲ ಬದಲಿಗೆ ನಾ ಹೊತ್ತ ಮುಸುಕಿಗೆ ಅಂತಾಯ್ತು ! ಪ್ರತಿ ದಿನವೂ ಹೊರಗೆ ಹೋಗುವ ಮುನ್ನ ನಮ್ಮ ಮುಖದ ಮೇಲೆ ಮುಖವಾಡ ಹೊತ್ತೇ ಸಾಗುವ ನಾವು ನೈಜವಾಗಿ ಹೋದರೆ ಜನರಿಗೆ ಗುರುತು ಹತ್ತುವುದಿಲ್ಲ ಅನ್ನೋದು ಸತ್ಯವೇ ...

ನಾವು, ಅಂಗಡಿಯಲ್ಲಿ ’ಥಳಥಳ’ ಹೊಳೆವ ಆಪಲ್’ಗಳ ಹಾಗೆ. ಗಿಡದಲ್ಲಿರುವ ತಾಜ ಸೇಬಿನ ಹಣ್ಣಿನ ಮೇಲೆ ಪ್ರಕೃತಿದತ್ತವಾದ ಮೇಣವಿರುತ್ತದೆ. ಹಣ್ಣನ್ನು ಕಿತ್ತು ಉಜ್ಜಿದಾಗ ಫಳ ಫಳ ಹೊಳೆಯುತ್ತದೆ. ನೀರಿನಲ್ಲಿ ತೊಳೆದರೆ ಕಳಾಹೀನವಾಗುತ್ತದೆ. ಹಣ್ಣಿಗೆ ಮತ್ತೊಮ್ಮೆ ಮೇಣವನ್ನು ಲೇಪಿಸಿದಾಗಲೋ ಅಥವಾ ಶೆಲ್ಲಾಕ್’ಅನ್ನು ಸ್ಪ್ರೇ ಮಾಡಿದಾಗಲೋ ಅವು ಹೊಳಪನ್ನು ಪಡೆಯುತ್ತದೆ. ನಿಮಗೆ ತಿಳಿದಂತೆ ಇವು ನೈಸರ್ಗಿಕವಲ್ಲ ಬದಲಿಗೆ ರಾಸಾಯನಿಕ. ಥಳಗುಟ್ಟದೆ ಹೋದರೆ ಬೆಲೆ ಎಲ್ಲಿ. ಸೇಬಿನ ಹಣ್ಣಿಗೂ ನಮ್ಮ ಮುಖಕ್ಕೂ ಹೆಚ್ಚು ವ್ಯತ್ಯಾಸವಿಲ್ಲ ಅಲ್ಲವೇ?

ಮೇಣವನ್ನು ತೊಳೆದ ಸೇಬು ಹಾಗೇ ಇರಿಸಿದಲ್ಲಿ ಬೇಗ ಹಾಳಾಗುತ್ತದೆ. ತೊಳೆದ ಮುಖಕ್ಕೆ ರಾಸಾಯನಿಕ ಲೇಪನ ಬಳಿದುಕೊಳ್ಳದೇ ಹೋದರೆ ಮುಖವೂ ಕಳೆಗುಂದುತ್ತದೆ. ಮೇಣ ಅಥವಾ ಸ್ಪ್ರೇ ಬೇಕೋ ಬೇಡವೋ? ನಿಮ್ಮ ಮುಖಕ್ಕೆ ಅಲಂಕಾರ ಬೇಕೋ ಬೇಡವೋ?

ಕೊನೇ ಟಚ್: ಸಿನಿಮಾದಲ್ಲಿನ ಗ್ಲ್ಯಾಮರಸ್ ಹೀರೋಯಿನ್ ನಿಜಕ್ಕೂ ಕಾಣೋದು ಹೀಗೆ ಅಂತಾರಲ್ಲ, ಹಿಂದಿನ ದಿನ ರಾತ್ರಿಯ ನಾಟಕದಲ್ಲಿ ಭೀಮನ ಪಾತ್ರ ನಿರ್ವಹಿಸಿದ್ದೆ ಅಂತ ಹೋದೆಡೆಯಲ್ಲೆಲ್ಲ ಗದೆ ಹೊತ್ತುಕೊಂಡೇ ತಿರುಗೋಕ್ಕಾಗುತ್ತಾ? ಕೊಂಚ ಯೋಚಿಸುವ ವಿಷಯವೇ, ಅಲ್ಲವೇ?

ಇಂದಿಗಿಂತ ಅಂದೇನೇ ಚೆಂದವೂ !

ಇಂದಿಗಿಂತ ಅಂದೇನೇ ಚೆಂದವೂ

ಕಾಲ ಎಷ್ಟು ಮುಂದುವರೆದರೂ ಕೆಲವೊಂದಕ್ಕೆ ಬದಲಾವಣೆಗಳ ಹಂಗಿಲ್ಲ ... ಅಂದಿನ ಸದ್ದು ಹೇಗಿತ್ತೋ ಇಂದೇ ಅದೇ ಸದ್ದಿನೊಂದಿಗೆ ಆರ್ಭಟಿಸುತ್ತದೆ ಗುಡುಗು ... ಹರಿವ ನದಿಯ ನೀರಿನ ಸದ್ದು ಇಂದಿಗೂ ಜುಳುಜುಳು, ರಾಕ್ ಮ್ಯೂಸಿಕ್ನಲ್ಲಿ ಓಡುವುದಿಲ್ಲ ಹರಿವ ನೀರು ! ಸೂರ್ಯ ಮುಳುಗುವ ಮುನ್ನ ಆಕಾಶದ ರಂಗು ಅಂದೂ ಇಂದೂ ಬಹುಶ: ಮುಂದೂ ಅದೇ ಥಳುಕಿನ ರಂಗು ರಂಗು ....

ಇಂತಹ ಒಂದು ಸುಂದರ ಸಂಜೆಯ ನದೀ ತಟದಲ್ಲಿ ಜುಳುಜುಳು ಹರಿವ ನೀರಿನ ಕಲರವ ಆಲಿಸುತ್ತಿದ್ದ ಜೋಡಿಯೊಂದರ ಹೀಗೊಂದು ಸಂಭಾಷಣೆ ಹೀಗಿತ್ತು ...

"ನ್ಯಾಚುರಲ್ ಬ್ಯೂಟಿಯೇ ಬ್ಯೂಟಿ ... ಸಿಟಿಯಲ್ಲಿದ್ದು ಇದ್ದು ಹೊರಗಿನ ಪ್ರಪಂಚ ಹೀಗಿದೆ ಅಂತ್ಲೇ ಗೊತ್ತಿರೋದಿಲ್ಲ ಎಷ್ಟೊ ಸಾರಿ ... ವಾಟ್ ಡು ಯೂ ಸೇ?"

"ಎಲ್ಲ ಕಡೆ ಲೈಟುಗಳ ಹಾವಳಿಯಿಂದ ಆಕಾಶದಲ್ಲಿ ನಕ್ಷತ್ರಗಳಿವೆ ಅಂತ್ಲೂ ಮರೆತು ಹೋಗಿದೆ"

"ರೋಡಿನ ಮೇಲೆ ನೆಡೆದಾಡುತ್ತ ತಲೆ ಎತ್ತಿ ನೋಡಿದ್ರೆ ಹೈ-ರೈಸ್ ಬಿಲ್ಡಿಂಗ್’ಗಳೇ ಕಾಣುತ್ತೆ ... ಆಕಾಶವೇ ಕಾಣೋಲ್ಲ ... ಮಧ್ಯಾನ್ನ ದಾಟಿದ ಮೇಲೆ ಸೂರ್ಯಾನೂ ಕಾಣೋಲ್ಲ !"

"ಒಮ್ಮೊಮ್ಮೆ ಅನ್ನಿಸುತ್ತೆ, ಸಾಧ್ಯವಿದ್ರೆ ಒಂದೈವತ್ತೋ ನೂರೋ ವರ್ಷ ಹಿಂದಕ್ಕೆ ಓಡಿಹೋಗಬೇಕು ಅಂತ"

"ನಿಜ ನಿಜ ... ಈಗ ನೋಡು, ಕಾರಲ್ಲಿ ಕೂತರೆ ಸಾಕು ಎಲ್ಲಿಗೆ ಬೇಕೆಂದರೆ ಅದೇ ಕರ್ಕೊಂಡ್ ಹೋಗುತ್ತೆ. Internet ಅನ್ನೋದು ಕಣ್ ತುದಿಯಲ್ಲೇ ಇದೆ. ಕಾರು ಜಮ್ಮಂತ ಹೋಗ್ತಿದ್ರೆ, ನಾವು ವಿಡಿಯೋ ನೋಡ್ಕೊಂಡ್ ಕೂತಿರೋದು."

"ಯಾರಾದ್ರೂ ನಮಗೆ ಏನಾದ್ರೂ ಹೇಳಬೇಕೂ ಅಂದ್ರೆ ವಿಡಿಯೋ ಕಾನ್ಫೆರೆನ್ಸಿಂಗ್ ಅಂತ ಪ್ರತ್ಯಕ್ಷ. Instructions Downloadಆದ ಮೇಲೆ recording ಲಭ್ಯ. Grocery ಕೂಡ ಆನ್ಲೈನ್ ಆರ್ಡರ್, Drive-thru pickup. ವ್ಯವಹಾರ ಮಾತೇ ಇಲ್ದೇ ಮುಗಿದಿರುತ್ತೆ. ಈ ನಡುವೆ ಅಪರೂಪಕ್ಕೆ ಮಾತು ಅನ್ನೋ ಹಾಗೆ ಆಗಿದೆ ಜೀವನ"

"ಯೂ ಆರ್ ರೈಟ್! ರೊಬೋಟ್’ಗಳ ಹಾಗೆ ಆಗಿಬಿಟ್ಟಿದ್ದೀವಿ. ಕಾಫಿ ಬೇಕಂದ್ರೆ ಟೇಬಲ್ಗೇ ಬರುತ್ತೆ. ಎಲ್ಲ ಜನ ಬರೀ ವಿಸಿಬಲ್ ಮೆಸೇಜ್ನಲ್ಲೇ ಇರ್ತಾರೆ. ಮುಖ ನೋಡಿ ಮಾತಾಡೊ ಅಭ್ಯಾಸವೇ ತಪ್ಪಿ ಹೋಗಿವೆ ಜನಕ್ಕೆ. ಯಾರಿಗೆ ಏನು ಬೇಕಿದ್ರೂ ಎಲ್ಲ ವಿಡಿಯೋ ಡೌನ್ಲೋಡ್. ಎಲ್ಲ ಕಡೆ humongous ಡೇಟ ಬಂದು ಜಗತ್ತೇ ಬದಲಾಗಿದೆ"

"ರೀಸೆಂಟ್ ಆಗಿ Human Now and Then ಅಂತ ಎರಡು Generations ಹಿಂದಿನ ಜೀವನದ ಬಗ್ಗೆ ವಿಡಿಯೋ ನೋಡಿದ್ಯಾ?. ಏನು ಚೆನ್ನಾಗಿದೆ ಅಂದಿನ ಜೀವನ ಅಂದ್ರೆ, ಹೇಳೋಕ್ಕೇ ಆಗಲ್ಲ.  it’s beyond wonderful !

"ಓ! ನನ್ Glass ಗೂ ರೆಲೀಸ್ ಮಾಡಿಸಿಕೊಂಡೆ. ನಾನೂ ನೋಡಿದೆ.  It’s simply amazing and unbelievable"

"Funny ಅಂದ್ರೆ, ಆ ಜನ ಮೂವಿ ಹಾಲ್ ಮುಂದೆ ಲೈನ್ ನಿಂತುಕೊಂಡ್ ಟಿಕೆಟ್ ತೊಗೊಳ್ತಾರೆ.  They pay currency!!! ಟಿಕೆಟ್ ತೊಗೊಂಡು ೧-೨ ಘಂಟೆ ಹೊರಗೆ ವೈಟ್ ಮಾಡಿ, ಮೂರು ಘಂಟೆ ಮೂವಿ ನೋಡಿ ಆಮೇಲೆ ಮಾಲ್’ನಲ್ಲಿ ಶಾಪಿಂಗ್ ಮಾಡ್ಕೊಂಡು, ಹೊರಗೆ ಊಟ ಮಾಡಿಕೊಂಡು ಮನೆಗೆ ಬರ್ತಾರೆ.  They spend 7-8 hours on that. My GOD  ನಾನು ಆ ಕಾಲದಲ್ಲಿ ಇರಬೇಕಿತ್ತು ಅನ್ನಿಸ್ತಿದೆ."

"But, u know what was hilarious? same movie was available on Internet but still they could afford 7-8 hours !!   ಇನ್ನೊಂದ್ Sequenceನಲ್ಲಿ ಒಬ್ಬ ೨-೩ ಘಂಟೆ ಟಿಕೆಟ್ ಅಂತೆಲ್ಲ ಟೈಮ್ ವೇಸ್ಟ್ ಮಾಡಿ ಥಿಯೇಟರ್ ಒಳಗೆ ಹೋಗಿ then he sleeps !!! Good that he wasted some silly $10 on that. "

"ಸಕತ್ ಮಜಾ! ಇನ್ನೊಂದ್ ವಿಷಯ ... hilarious ... ಜನ ಕೈಯಲ್ಲಿ ಫೋನ್ ಇಟ್ಕೊಂಡು ಇಂಟರ್ನೆಟ್ ನೋಡ್ತಾರೆ, ಮೆಸೇಜ್ ಕಳಿಸ್ತಾರೆ, ಆಮೇಲೆ ಯಾವುದೋ ಸೋಷಿಯಲ್ ಮೀಡಿಯಾದಲ್ಲಿ  they fight ! for everything they have to type. What a waste of time and energy. good that today we don’t talk to each other much ..."

"ಮತ್ತೆ ಇನ್ನೊಂದ್ ಸೀನ್ನಲ್ಲಿ, there are some 4-5 kids playing video games. My god, they really had an awesome time together then. Amazing ! Kids socialized a lot those days ! Our life is so so monotonous. "

"ಎಷ್ಟು ಫ್ರೀ ಆಗಿ ಓಡಾಡ್ತಿದ್ರು ಅವತ್ತು. ವಾವ್! ಅದೇ ಇವತ್ತು? ಯಾವಾಗ್ಲೂ ಹೆಡ್ ಮಸ್ಕ್ ಹಾಕ್ಕೋಬೇಕು. ಆಗಿನವರು ಜಾಸ್ತಿ ತಲೆ ಕೆಡಿಸಿಕೊಳ್ತಾ ಇರಲಿಲ್ಲ. ಇವತ್ತು  health awareness lobby has reached the peak ಅನ್ನಿಸುತ್ತೆ. ಮುಖ ಎಕ್ಸ್ಪೋಸ್ ಮಾಡಿದ್ರೆ ಈ ಖಾಯಿಲೆ ಬರುತ್ತೆ, ಕೈ ಎಕ್ಸ್ಪೋಸ್ ಮಾಡಿದ್ರೆ ಆ ಖಾಯಿಲೆ ಬರುತ್ತೆ ಅಂತೆಲ್ಲ ಹೇಳಿ ಹೇಳಿ we are packed in a box. We look like robots of those days."

"hang on ... I got a message on my glass. Ultraviolet radiation surge warning ಬಂತು. ನಾವು ಇಲ್ಲೇ ಹೊರಗಡೆ ಇದ್ರೆ, ನಮ್ಮ ಲೈಸೆನ್ಸ್ ಕಿತ್ಕೊಂಡ್ ಬೀದಿಗೆ ಬರದೇ ಇರೋ ಹಾಗೆ ಮಾಡ್ತಾರೆ. ಹೋಗೋಣ."

"this is the third time in this week. Come on let’s pack up "

"life of human 2013 video ಮತ್ತೆ ನೋಡ್ಕೊಂಡ್ ಹೋಗ್ತೀನಿ ದಾರೀಲಿ."

"I will wait for 2014 version ... I wish I was born back then"

-----------------------
ಬದಲಾವಣೆಯ ಬಿರುಗಾಳಿ ಏನಿದ್ದರೂ ಮನುಷ್ಯನ ಜೀವನ ಶೈಲಿಗೆ ಮಾತ್ರ ಎನಿಸುತ್ತದೆ. ಬದಲಾವಣೆಯ ಬಲಿಪಶು ಮನುಜನದ್ದು ಸದಾ ಅದೇ ಹಾಡು "ಇಂದಿಗಿಂತ ಅಂದೇ ಚೆನ್ನಿತ್ತು" ಅಂತ.

ಈ ಇಬ್ಬರ ಸಂಭಾಷಣೆಯಲ್ಲಿ ಕನ್ನಡವೂ ಸೇರಿದೆ ಎನ್ನುವಂತೆ ಬರೆದಿದ್ದು ನನ್ನ ಆಶಾವಾದಿತನ ಅನ್ನಿಸುತ್ತದೆ !!!

ಹತ್ತನೆಯ ತರಗತಿಯ ಪಬ್ಲಿಕ್ ಪರೀಕ್ಷೆ !

ರಾಜ್ಯದಲ್ಲಿ ಇಂದಿನಿಂದ ಹತ್ತನೆಯ ತರಗತಿಯ ಪಬ್ಲಿಕ್ ಪರೀಕ್ಷೆಗಳು ಆರಂಭ !!!

ಕ್ರಿಕೆಟ್ ವೀರರು ವರ್ಲ್ಡ್ ಕಪ್'ಗಾಗಿ ಹೋರಾಡುತ್ತಿರುವಾಗ ಅಗಾಗ್ಯೆ ತಾವೂ ಕದ್ದು ಮುಚ್ಚಿ ಟಿವಿ ನೋಡಿಕೊಂಡು, ಸ್ಕೋರ್'ಗಳನ್ನು ತಿಳಿದುಕೊಂಡು, ಓದಿನಲ್ಲೂ ಹಿಂದೆ ಬೀಳದೆ, ಈಗ ಪರೀಕ್ಷೆ ಎಂದ ರಣರಂಗಕ್ಕೆ ಹೊರಟು ನಿಂತಿಹ ಎಲ್ಲ ಪುಟ್ಟ ವೀರರಿಗೆ ಶುಭವಾಗಲಿ ...

ಜೀವನದಲ್ಲಿ ಏನನ್ನು ಮರೆತರೂ ನಾ ಬರೆದ ಎಸ್.ಎಸ್.ಎಲ್.ಸಿ ಪರೀಕ್ಷೆ ಮರೆಯಲಾರೆ ... ಅಂದು ಆಂಗ್ಲ ಪರೀಕ್ಷೆಗೆ ಇಪ್ಪತ್ತು ನಿಮಿಷ ತಡವಾಗಿ ಹೋಗಿದ್ದೆ ... ಹೆಬ್ಬಾಳದಿಂದ ಚಾಮರಾಜಪೇಟೆಗೆ ಹೋಗಲು ಎರಡು ಬಸ್ ಹಿಡಿಯಬೇಕಿತ್ತು. ಮೊದಲ ಟ್ರಿಪ್ ಏನೋ ಅಂದುಕೊಂಡ ಸಮಯಕ್ಕೆ ತಲುಪಿದ್ದೆ. ಕೈಕೊಟ್ಟಿದ್ದೇ ಮೆಜಸ್ಟಿಕ್'ನಿಂದ ಚಾಮರಾಜಪೇಟೆಗೆ ಹೋಗಲು ಕಾದಿದ್ದ ಬಸ್. ಹಿಂದಿನ ದಿನ ಸಮಯಕ್ಕೆ ಬಂದಿದ್ದ ಬಸ್ ಇಂದು ಬರಲಿಲ್ಲ ... ಕೈ ಕೊಟ್ಟಿತ್ತು !!

ಹತ್ತೂವರೆ ಘಂಟೆಗೆ ಪರೀಕ್ಷೆ ಆರಂಭ. ಹತ್ತು ಘಂಟೆ ಹತ್ತು ನಿಮಿಷಕ್ಕೆ ನಾನಿದ್ದ ಬಸ್ ಹೊರಟಿತ್ತು. ಹೆಚ್ಚೂ ಕಮ್ಮಿ ಎರಡು ಬಸ್ ಜನ ಒಂದರಲ್ಲಿ. ಕಂಡಕ್ಟರ್'ಗೆ ಟಿಕೆಟ್ ನೀಡಲೇ ಹೆಚ್ಚು ಸಮಯ ಹಿಡಿದಿತ್ತು. ಚಿಲ್ಲರೆ ತಾರದ ಜನರನ್ನು, ಬಸ್ ಪಾಸ್ ಮಾಡಿಸದ ಜನರನ್ನು ಬೈದುಕೊಂಡಿದ್ದೇ ಬಂತು. ಮೂವತ್ತೈದು ನಿಮಿಷಗಳ ಪಯಣ ಮೂವತ್ತೈದು ಯುಗಗಳಂತೆ ಕಂಡಿತ್ತು. ಬಸ್ ಸ್ಟ್ಯಾಂಡ್'ನಲ್ಲಿ ನಿಂತಿದ್ದೇ ತಡ ಧಡಾರೆಂದು ಇಳಿದು ಎದ್ದು ಬಿದ್ದು ಶಾಲೆಯ ಗೇಟಿನ ಬಳಿ ಬಂದು ಆ ಇಪ್ಪತ್ತು ಮೆಟ್ಟಿಲಿಳಿದಾಗ ಕಂಡಿದ್ದು ಹೆಡ್ ಮಾಸ್ತರ್ !!!

ತಡವಾಗಿದ್ದಕ್ಕೆ ಕ್ಷಮೆಯಾಚಿಸಿ ಕಾರಣ ಹೇಳಲು ತೊಡಗಿದ್ದೆ. "ಮೊದಲು ಪರೀಕ್ಷೆ ಬರಿ. ಮಾತು ಆಮೇಲೆ" ಎಂದು ಪರೀಕ್ಷೆ ಹಾಲ್'ಗೆ ಕಳಿಸಿದ್ದರು. ಅಷ್ಟು ಸ್ಟ್ರಿಕ್ಟ್ ಇದ್ದ ಹೆಡ್ ಮಾಸ್ತರ್ ಈ ರೀತಿ ಸಮಾಧಾನಪಡಿಸಿ ಮಾತನಾಡಿದ್ದೇ ಸೋಜಿಗ!

ರೂಮಿನೊಳಗೆ ಹೋಗಿದ್ದೇ ತಡ ಮೊದಲು ನನ್ನ ಕೈಗೆ ಸಿಕ್ಕಿದ್ದು ಪೇಪರ್ ಅಲ್ಲ ... ಉರ್ದು ಪಾಠ ಮಾಡುವ ಮೌಲ್ವಿಯವರು ಕೊಟ್ಟ ದೊಡ್ಡ ಲೋಟದಲ್ಲಿನ ನೀರು ... ಐದು ನಿಮಿಷ ಸುಧಾರಿಸಿಕೊಂಡ ಕೊಂಡ ಮೇಲೆ ಬರೆಯಲು ಆರಂಭ ....

ಎಂಥ ಅನುಭವ ... ಅಂದಿನಿಂದ ಮುಂದಿನ ಮಿಕ್ಕೆಲ್ಲ ಪರೀಕ್ಷೆಗೆ ಕನಿಷ್ಟ ಒಂದು ಘಂಟೆ ಮುಂಚೆ ತಲುಪಿರುತ್ತಿದ್ದೆ :-)

ಶುಭವಾಗಲಿ ನನ್ನೆಲ್ಲ ಗೆಳೆಯರ ಮಕ್ಕಳೇ !


Tuesday, March 3, 2015

ಗುರುವಾರ ಸಂಜೆ ನಾ ಓಡಾಡ್ತಿದ್ದೆ ಮಲ್ಲೇಶ್ವರದಲ್ಲೀ ...


ಎಂಟನೇ ಕ್ರಾಸ್ ರಾಯರ ಮಠದ ಗೇಟಿನ ಬಳಿ ಸ್ಕೂಟರ್ ನಿಲ್ಲಿಸಿಕೊಂಡಿದ್ದ ಹಿರಿಯರೊಬ್ಬರು ಗೇಟಿನತ್ತಲೇ ನೋಡುತ್ತಿದ್ದರು. ಹಿಂದಿನಿಂದ ಒಬ್ಬಾಕೆ (ಅವರ ಮನೆಯವರು ಅಂತ ನಂತರ ತಿಳೀತು) ಬಂದಾಗ ...

"ಎಲ್ಲಿ ಹೊರಟು ಹೋಗಿದ್ಯಮ್ಮಾ? ಆಗ್ಲಿಂದ ನಾನು ಕಾಯ್ತಿದ್ದೀನಿ?"

"ಮಠಕ್ಕೆ ಹೋಗಿದ್ದೆ ನಮಸ್ಕಾರ ಹಾಕಿಕೊಂಡು ಬರೋಕ್ಕೆ ಅಂದ ಮೇಲೆ ಮಠಕ್ಕೆ ಹೋಗಿದ್ದೆ ಅಂತ ತಾನೇ?"

"ಮಠ ಬಾಗಿಲು ಹಾಕಿ ಹತ್ತು ನಿಮಿಷ ಆಯ್ತು"

"ನಾನು ಆ ಗೇಟ್’ನ ಹತ್ತಿರ ಕಾಯ್ತಿದ್ದೆ. ಅಲ್ಲಿಗೇ ಬರೋದ್ ತಾನೇ ಸ್ಕೂಟರ್ ತೊಗೊಂಡು?"

"ಈ ಗೇಟ್’ನಿಂದ ಹೋದ ಮೇಲೆ ಇಲ್ಲಿಂದ ತಾನೇ ಬರಬೇಕು?"

"ಮಠದಿಂದ ಹೊರಗೆ ಬಂದ ಮೇಲೆ ಆ ಗೇಟ್ ತಾನೇ ಹತ್ತಿರಾ ಇರೋದು?"

"ನೀನು ಹೋದ ಕಡೆ ಎಲ್ಲ ಸ್ಕೂಟರ್ ಓಡಿಸಿಕೊಂಡೋ / ನೂಕಿಕೊಂಡೋ ಬರೋಕ್ಕೆ ಆಗಲ್ಲ ನನಗೆ. ಒಂದು ಬೀದಿ ಒನ್-ವೇ ಇದ್ರೆ ಇನ್ನೊಂದರಲ್ಲಿ ದನ ಅಡ್ಡ ನಿಂತಿರುತ್ತೆ. ನೀನೇ ತಿಳ್ಕೋಬೇಕು ... ಅದು ಹೋಗ್ಲಿ, ಅಲ್ಲಿ ನಿಂತಿದ್ದೀನಿ ಅಂತ ಒಂದು ಫೋನ್ ಮಾಡಬಾರದಾ?"

"ಮಠಕ್ಕೆ ಬರೋವಾಗ್ಲೂ ಕೈಲಿ ಚಿಟಿಕೆ ಥರಾ ಅದನ್ಯಾಕೆ ತರಲಿ? ಗಲಾಟೆಯೇ ಇಲ್ದಿರೋ ಮನೆಯಲ್ಲೇ ಅಡುಗೇ ಮನೆಯಿಂದ ಕರೆದಿದ್ದು ಹಾಲ್’ನಲ್ಲಿ ಕೂತಿದ್ದಾಗ ನಿಮಗೆ ಕೇಳಿಸೋಲ್ಲ. ಇನ್ನು ಈ ಬೀದೀಲಿ ಫೋನ್ ಮಾಡಿದಾಗ ಕೇಳಿಸುತ್ಯೇ?"

"ಒಂದು ಹೇಳಿದ್ರೆ ನಾಲ್ಕು ಹೇಳ್ತೀ"

"ಸರಿ, ಸರಿ ನಡೀರಿ .... ನಿಧಾನ ....

{ರಾಯರು ನಿಧಾನಕ್ಕೆ ಓಡಿಸಿಕೊಂಡು ಹೋಗುತ್ತ ಏನೋ ಗೊಣಗುತ್ತ ಸಾಗುತ್ತಾರೆ}

"ನನ್ ಬೈದುಕೊಂಡು ಓಡಿಸಬೇಡಿ .. ಗಾಡಿ ಓಡಿಸಿಕೊಂಡು ನಿಮ್ಮಷ್ಟಕ್ಕೆ ನೀವೇ ಮಾತಾಡಿಕೊಂಡು ಹೋಗಬೇಡಿ ಅಂತ ಎಷ್ಟು ಸಾರಿ ಹೇಳಿದ್ದೀನಿ"

"ಅಯ್ಯೋ! ಇಲ್ವೇ ಮಾರಾಯ್ತೀ ..."

"ತಲೆ ಅಲ್ಲಾಡಿಸಿಕೊಂಡು ಗಾಡಿ ಓಡಿಸ್ತಿದ್ರೆ ನನಗೆ ಗೊತ್ತಾಗೋಲ್ವೇ? ಅಯ್ಯೋ, ಮುಂದೆ ನೋಡಿಕೊಂಡು ಓಡಿಸಿ ... ಆ ವಯಸ್ಸಾದೋರಿಗೆ ಗುದ್ದು ಬಿಡ್ತಿದ್ರೀ ಈಗ. ನಿಮಗೋ ಕಣ್ ಕಾಣೋಲ್ಲ ನೆಟ್ಟಗೆ"

"ಕಣ್ಣು ನಿನಗೆ ಕಾಣಲ್ಲ ಅನ್ನು. ಕನ್ನಡಕ ಹಾಕ್ಕೊಂಡ್ ಬಾ ಅಂದ್ರೆ ಏನೋ ಬಿಗುಮಾನ. ಆ ವಯಸ್ಸಾದೋರು ಬೇರೇ ಯಾರೂ ಅಲ್ಲ. ನಿನ್ ತಂಗಿ ಸರೋಜ. ಗಾಡಿ ನಿಲ್ಲಿಸ್ಲಾ?"

"ತೊಗೊಂಡ್ ಬಂದಿರೋದು ನಿಂತರೆ ಮುಂದಕ್ ಹೋಗದೇ ಇರೋ ಸ್ಕೂಟರ್ರು. ಇಲ್ಲಿ ನಿಲ್ಲಿಸಿ ಅವಳನ್ನು ಹತ್ತಿಸಿಕೊಂಡು ಏನು ಮುಂದೆ ನಿಲ್ಲಿಸ್ಕೊಳ್ತೀರಾ? ಸುಮ್ನೆ ನಡೀರಿ. ಎಲ್ ಹೋಗ್ತಾಳೆ? ಪ್ರವಚನಕ್ಕೆ ಹೋಗಿ ಬರ್ತೀನಿ ಅಂತ ಬಂದ್ಳು. ಪ್ರವಚನ ಮಾಡಿದವರೂ ಮನೆಗೆ ಹೋಗಿ ಊಟ ಮಾಡಿ ಮಲಗಿರ್ತಾರೆ. ಇವ್ಳು ಈಗ ಬರ್ತಿದ್ದಾಳೆ"

"ಏನು ಕೆಲಸವೋ ಏನೋ ಬಿಡು" ...

ಧುಡುಮ್!

"ಏನು? ಇದ್ದೀಯೋ? ಬಿದ್ಯೋ?"

"ಅಯ್ಯೋ !!"

"ನಿಜಕ್ಕೂ ಬಿದ್ ಹೋದ್ಯಾ? ಹಿಂದುಗಡೆ ಕೂತ್ಕೊಂಡಾಗ ಗಟ್ಟಿಯಾಗಿ ಗಾಡಿ ಹಿಡ್ಕೋ ಅಂತ ಹೇಳಿದ್ರೆ ಕೇಳೋಲ್ಲ. ಕೈಬಾಯಿ ತಿರುಗಿಸಿಕೊಂಡು ಮಾತಾಡ್ತಿದ್ರೆ ಮೈಮೇಲೆ ಅರಿವೆ ಇರೋಲ್ಲ! ಜೊತೆಗೆ ನನಗೇ ಹೇಳೋದು ... " {ಧಡ ಧಡ ಗಾಡಿ ಸ್ಟ್ಯಾಂಡ್ ಹಾಕಿ ಧಾವಿಸಿ ಬಂದರು}

"ನನಗೆ ಅರಿವು ಇರಿಲಿ ... ಧಡಬಡ ಮಾಡ್ಕೊಂಡ್ ಬರ್ತಿದ್ದೀರಾ ... ನಿಮ್ ಅರಿವೆ ಬಿಚ್ಚಿ ಹೋಗ್ತಿದೆ. ಮೊದಲು ಅದನ್ನ ಕಟ್ಟಿಕೊಳ್ಳಿ ... ಪಂಚೆ ತುದಿ ಕಾಲಿಗೆ ಸಿಕ್ಕು ಬಿದ್ರೆ ನಿಮಗೇನಾದ್ರೂ ಆದೀತು ... "

"ನನಗೆ ಉಪದೇಶ ಆಮೇಲೆ ಆಗಲಿ .. ಸ್ವಲ್ಪ ಸುಮ್ಮನೆ ಇದ್ದು ಸುಧಾರಿಸಿಕೋ ... ಆಯಾಸ ಮಾಡ್ಕೋಬೇಡಾ"

"ಅಯ್ಯೋ, ಮೈಕೈ ಎಲ್ಲ ನೋಯ್ತಿದೆ ... ಏನೂ ಮುರಿದಿಲ್ಲ ಅನ್ನಿಸುತ್ತೆ ಸದ್ಯ ..."

"ನಮಸ್ಕಾರ ಹಾಕೊಂಡ್ ಬಂದಿದ್ದಿ ... ಅದಕ್ಕೇ ಏನೂ ಆಗಿಲ್ಲ. ಉಪ್ಪಿನ ಮೂಟೆ ಹಾಗೆ ಕುಸಿದಿದ್ದೀಯಾ ಅಷ್ಟೇ. ನಿಧಾನಕ್ಕೆ ನನ್ನ ಕುತ್ತಿಗೆ ಸುತ್ತ ಕೈ ಹಾಕಿ ಎದ್ದು ನಿಂತ್ಕೋ ... ಹುಷಾರು"

"ಹಾ! ಹುಷಾರು ... ನನ್ ಭಾರಕ್ಕೆ ನೀವು ಕುಸಿದೀರಾ "

"ಆಹಾ .. ಏನು ವೈಭೋಗ ನೋಡು ... ಈ ವಯಸ್ಸಲ್ಲಿ ಬೀದಿ ಮಧ್ಯೆ ನಮ್ ರೋಮಾನ್ಸು ..."

"ನಿಮ್ ತಲೆ ... ನಿಲ್ಲೋಕ್ಕೇ ಆಗ್ತಿಲ್ಲ ಅಂದ್ರೆ ರೋಮಾನ್ಸ್ ಅಂತೆ ... ಕೈ ಕೈ ಹಿಡ್ಕೊಂಡ್ ಮರ ಸುತ್ತೋಕ್ಕೆ ಮರ ಎಲ್ಲಿದೆ? ಪಾರ್ಥೇನಿಯಮ್ ಗಿಡದ ಸುತ್ತಲೇ ಒಂದು ಸುತ್ತು ಹಾಕಬೇಕು ಅಷ್ಟೇ!"

"ನಿಧಾನಕ್ಕೆ ಮನೆಗೆ ನಡಿ. ತುಳಸೀಕಟ್ಟೆಗೆ ಸುತ್ತು ಹಾಕೋಣ ಪುಣ್ಯವಾದ್ರೂ ಬರುತ್ತೆ. ಅದು ಸರೀ, ಈ ಸ್ಕೂಟರ್ ಹೇಗೆ ತೊಗೊಂಡ್ ಹೋಗೋದು?"

"ನಿಮ್ ಸ್ಕೂಟರ್’ಗೆ ನಿಮ್ ಅರ್ಧದಷ್ಟು ವಯಸ್ಸಾಗಿದೆ. ಇಲ್ಲೇ ಇಟ್ರೂ ಯಾರೂ ಮುಟ್ಟೋಲ್ಲ ! ಇಲ್ಲೇ ಸ್ವಲ್ಪ ಆ ಕಡೆ ಇಟ್ಟು ಲಾಕ್ ಮಾಡಿ. ರಾಮನಾಥ ಹನ್ನೆರಡು ಘಂಟೆ ರಾತ್ರಿಗೆ ಬಂದು ತೊಗೊಂಡ್ ಬರ್ತಾನೆ"

"ಯಾರೂ ನೋಡ್ದೇ ಇರೋ ಟೈಮಿಗೆ ಬಂದು ತೊಗೊಂಡ್ ಬರೋಷ್ಟು ಕೆಟ್ಟದಾಗಿದ್ಯೇ ಗಾಡಿ?"

"ಮೊದಲು ನಡೀರಿ ... ಸರೋಜ ನೋಡಿದ್ರೆ ಸುಮ್ನೆ ಬೀದಿಗೆಲ್ಲ ಸಾರ್ತಾಳೆ ..."

"ಸರಿ ... ನಡಿ ... ನಡೆ ಮುಂದೆ ನಡೆ ಮುಂದೆ ಕುಂಟ್ಕೊಂಡ್ ನಡೆ ಮುಂದೆ ..."

{ಮಠದ ಬಳಿ ಸ್ಕೂಟರ್ ಹಿಡ್ಕೊಂಡ್ ನಿಂತಿದ್ದ ಹಿರಿಯರನ್ನು ನೋಡಿದ್ದು, ಎಷ್ಟು ಹೊತ್ತಿಂದ ಕಾಯ್ತಿದ್ದೆ ಎಲ್ಲಿ ಹೋಗಿದ್ದೀ ಅನ್ನೋದಷ್ಟು ಬಿಟ್ರೆ ಮಿಕ್ಕಿದ್ದೆಲ್ಲ ನನ್ನ ಒಗ್ಗರಣೆ ...}