Tuesday, March 31, 2015

ಮುಖದ ಮೇಲೆ ಮುಖವಾಡ

ಬೆಳ್ಳಂಬೆಳಿಗ್ಗೆ ಅಲಾರಂ ಹೊಡೆದುಕೊಳ್ಳುತ್ತಿತ್ತು ... ಯಾವುದೋ ಕಲ್ಪನಾಲೋಕದಲ್ಲಿ ವಿಹರಿಸುತ್ತಿದ್ದ ನನಗೆ ಆ ಅಲಾರಂ ತಂಗಾಳಿಯಲ್ಲಿ ತೇಲಿಬಂದ ವೇದಮಂತ್ರದಂತೆ, ನವಿರಾದ ಕಾಲ್ಗೆಜ್ಜೆಯ ನಾದದಂತೆ, ಹಗಲಿನ ಹಕ್ಕಿಪಿಕ್ಕಿಗಳ ಹಾಡಿನಂತೆ, ಕೊಳಲ ನಾದದಂತೆ ಕೇಳಿಸಲಿಲ್ಲಾರೀ ... ಶಿವಮಣಿಯ ಡ್ರಮ್ಸ್’ನಂತೆ ತಲೆಯನ್ನು ಕುಟ್ಟಿ ಎಬ್ಬಿಸಿತ್ತು ... ಸೈಲೆನ್ಸರ್ ತೆಗೆದ ಬೈಕಿನಂತಹ ಸದ್ದು ನರನಾಡಿಯಲ್ಲಿ ನುಗ್ಗಿತ್ತು ... ಜೆಟ್ ವಿಮಾನವೊಂದು ಸುಯ್ಯ್ ಎಂದು ಎಡಗಿವಿಯಿಂದ ಹಾದು ಬಲಗಿವಿಯಿಂದ ಹೊರಬಂದಂತಾಯ್ತು ... ಅದಕ್ಕೇ ಎದ್ದೆ.

ಮಡದಿ ಒಂದೆರಡು ದಿನ ಅಂತ ಅಮ್ಮನ ಮನೆಗೆ ಹೋಗಿದ್ದಳು. ಹಾಗಾಗಿ ನಾನು, ನಾನು ಮತ್ತು ನಾನು ಅಷ್ಟೇ ನಮ್ಮ ಮನೆಯಲ್ಲಿ ! ಇನ್ನೊಂದೈದು ನಿಮಿಷ ಅಂತ ಮಲಗಿ ಒಂದು ಘಂಟೆಯ ನಂತರ ಎದ್ದ ಮೇಲಂತೂ ನಾನು ಮತ್ತು ಗಡಿಬಿಡಿ ಇಬ್ಬರೇ ... ಪ್ರತಿ ಹಲ್ಲನ್ನೂ ಅರ್ಧ ಮಾತ್ರ ಉಜ್ಜಿ ಧಡ ಧಡ ಬಟ್ಟೆ ಹಾಕಿಕೊಂಡು ಮಧ್ಯಾನ್ನ ಅಲ್ಲೇ ಏನಾದ್ರೂ ಕೊಂಡು ತಿಂದರಾಯ್ತು ಅಂತ ಹೊರಟೇ ಬಿಟ್ಟೆ.

ಗಾಡಿ ನಿಲ್ಲಿಸಿ ಒಳಗೆ ಹೋಗುತ್ತಿದ್ದಂತೆ ಗೇಟಿನ ಬಳಿ ಇದ್ದ ಗಾರ್ಡ್ ನಾಲ್ಕು ಬಾರಿ ನನ್ನನ್ನೇ ನೋಡಿದ. ಹದಿನೈದು ವರ್ಷದಲ್ಲಿ ಇಂಥಾ ಅನುಭವ ಆಗಿದ್ದು ಕೆಲಸಕ್ಕೆ ಸೇರಿದ ಮೊದಲೆರಡು ದಿನಗಳಲ್ಲಿ ಮಾತ್ರ. ಅವನು ಯಾವ ಮೂಡ್’ನಲ್ಲಿದ್ದಾನೋ ಅಂತ ನಾನೇ ಅವನನ್ನು ಹೆಸರು ಹಿಡಿದು ಕೂಗಿ ಮಾತನಾಡಿಸಿ ಮುಂದೆ ಹೋದೆ. ಬೆಳಿಗ್ಗೆಯೇ ಮೀಟಿಂಗ್ ಇದ್ದುದರಿಂದ ಮೀಟಿಂಗ್ ರೂಮಿನಲ್ಲಿ ಕೂತೇ ಕೆಲಸ ಶುರು ಮಾಡಿದ್ದೆ. ಒಬ್ಬೊಬ್ಬರಾಗಿ ಒಳಗೆ ಬಂದವರು ಎಲ್ಲಿ ಬೇಕೋ ಅಲ್ಲಿ ಆಸೀನರಾದರು. ನನ್ನ ಮುಖ ನೋಡಿ ಸುಮ್ಮನಾಗುತ್ತಿದರೇ ವಿನಹ ಕಿರುನಗೆಯೂ ಇಲ್ಲ. ಹೋಗ್ಲಿ ಬಿಡಿ, ಇವರೆಲ್ಲ ನನಗೇನು ಹೊಸಬರೇ?

ನಾನು ಕಳಿಸಬೇಕೆಂದಿದ್ದ ಈ-ಮೈಲ್ ಕೊನೇ ಹಂತದಲ್ಲಿ ಇದ್ದುದರಿಂದ ಅದನ್ನು ಮುಗಿಸಿ ನಂತರ ಮಾತು ಶುರು ಮಾಡೋಣ ಅಂತಿದ್ದೆ. ಇನ್ನೇನು ನಾನು ಎಲ್ಲರೂ ಮೀಟಿಂಗ್’ಗೆ ಬಂದದ್ದಕ್ಕೆ ಧನ್ಯವಾದ ಅರ್ಪಿಸಬೇಕು ಅನ್ನುವಷ್ಟರಲ್ಲಿ, ಇನ್ಯಾರೋ ಮಾತು ಶುರು ಮಾಡಿದರು ... "ಮಿ.ರಾವ್ ಇನ್ನೂ ಬಂದಿಲ್ಲ. ಮೀಟಿಂಗ್ ಕ್ಯಾನ್ಸಲ್ ಮಾಡಿರಬೇಕು. ಆದರೆ ನನಗೆ ಯಾವ ಈ-ಮೈಲ್ ಬರಲಿಲ್ಲ !!" ಅನ್ನುತ್ತಿದ್ದ.

ನಾನು ಒಮ್ಮೆ ಜೋರಾಗಿ ನಕ್ಕು ’ನೈಸ್ ಜೋಕ್’ ಎಂದು ಮೆಚ್ಚುಗೆ ಸೂಚಿಸಿ ಮಾತು ಶುರು ಮಾಡಿದೆ. ಇಡೀ ಮೀಟಿಂಗ್’ನಲ್ಲಿ ಜನ ನನ್ನ ಮಾತನ್ನು ಕೇಳುವುದರ ಜೊತೆ ಏನೋ ಗ್ಯಾರಂಟಿ ಮಾಡಿಕೊಳ್ಳುವವರ ಹಾಗೆ ದಿಟ್ಟಿಸಿ ನೋಡುತ್ತಿದ್ದರು.

ನಮ್ಮ ಕಛೇರಿ ದೊಡ್ಡದು. ಹಲವಾರು ಮಹಡಿಗಳ ಕಟ್ಟಡ. ಸ್ನೇಹಿತರು ಬೇರೆ ಬೇರೆ ಪ್ರಾಜಕ್ಟ್ ಎಂದು ಅಲ್ಲಿ ಇಲ್ಲಿ ಚದುರಿ ಹೋಗಿದ್ದಾರೆ. ಮಧ್ಯಾನ್ನ ಊಟಕ್ಕೆ ಕೆಫಿಟೇರಿಯಾದಲ್ಲಿ ಸಿಗುವುದು ವಾಡಿಕೆ. ಊಟದ ಸಮಯದಲ್ಲಿ ನನ್ನದೇ ಫ್ಲೋರಿನಲ್ಲಿರುವನೊಬ್ಬ ನನ್ನತ್ತ ನೋಡಿ ಹಾಗೇ ಹೊರಟು ಹೋದ. ಹೆಂಡ್ತಿ ಮೇಲಿನ ಸಿಟ್ಟನ್ನು ಮಕ್ಕಳ ಮೇಲೆ ತೋರೋ ಹಾಗೆ, ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದಂತೆ ಇವನಿಗೆ ಯಾರ ಮೇಲೆ ಸಿಟ್ಟೋ ನನ್ನನ್ನು ಕರೆಯದೆ ಹಾಗೇ ಹೋದ. ಊರಿಗೆ ಬಂದೋಳು ನೀರಿಗೆ ಬಾರದೇ ಹೋದಾಳೆ, ಊಟ ತಂದೋನು (ತಾರದವನೂ) ಕೆಫಿಟೇರಿಯಾದಲ್ಲಿ ಸಿಗದೇ ಹೋದಾನಾ? ಅಂದುಕೊಂಡು ಎರಡು ನಿಮಿಷದಲ್ಲಿ ನಾನೂ ಹೊರಟು ಅಲ್ಲಿಗೆ ಹೋದೆ.

ಒಂದು ನಿಮಿಷ ನನ್ನನ್ನು ಎಲ್ಲರೂ ನೋಡಿ ನಂತರ ಮಾತನಾಡಿಸಿದರು. ನನ್ನ ಫ್ಲೋರಿನವನು ’ನಿನ್ ಜಾಗದಲ್ಲಿ ಯಾರೋ ಬೇರೆಯವರು ಕೂತಿದ್ದ ಹಾಗಿತ್ತು ಅಂತ ಹೊರಟು ಬಂದೆ. ನೀನೇನಾ?" ಅಂದ. ಇದೊಳ್ಳೇ ಕಥೆಯಾಯ್ತಲ್ಲ ? ಯಾರಿಗೂ ನಾನು ನನ್ನಂತೆ ಕಾಣುತ್ತಿಲ್ಲ ! ಏನಾಯ್ತು ?

ಸಂಜೆ ಮನೆಗೆ ಹೊರಟಾಗ ಎರಡನೇ ಶಿಫ್ಟ್’ನ ಗಾರ್ಡ್ ನಿಂತಿದ್ದ, ಮಾಮೂಲಿನಂತೆ. ಎಂದಿನಂತೆ ಅವನ ಕೈಗೆ ಕೀ ಹಾಕಿ ಸುಮ್ಮನೆ ನಿಂತೆ. ಆತನೋ ಬಾಯಿಬಿಟ್ಟು ಕೇಳಿಯೇಬಿಟ್ಟ "ಸರ್, ಯುವರ್ ಬಾಡ್ಜ್ ಪ್ಲೀಸ್" ಅಂತ. ದಿನವೂ ನನಗೆ ಸಲಾಮ್ ಹೊಡೆದು. ಕೀಲಿ ತೆಗೆದುಕೊಂಡು ಗಾಡಿ ತಂದಿಡೋ ಇವನಿಗೂ ನಾನ್ಯಾರು ಅಂತ ತಿಳೀಲಿಲ್ವೇ? ಬಾಡ್ಜ್ ತೋರಿಸು ಅಂದ ಮೇಲೆ ನಿಯಮದಂತೆ ನನ್ನ ಕರ್ತವ್ಯ ಮಾಡಿದೆ. "ಸಾರಿ ಸರ್, ಗೊತ್ತಗ್ಲಿಲ್ಲ" ಅಂತಂದು ಕೀಲಿ ತೊಗೊಂಡು ಹೋದ.

ಮನೆ ಹತ್ತಿರ ಕಾರ್ ಪಾರ್ಕ್ ಮಾಡಿ ಗೇಟ್ ತೆಗೆಯಬೇಕು ಅನ್ನೊಷ್ಟರಲ್ಲಿ ಮಹಡಿ ಮೇಲೆ ಹೆಂಡ್ತಿ ದರ್ಶನ ! ನಾಳೆ ಬರೋದು ಇಂದೇ ಬಂದುಬಿಟ್ಟಳೇ ವಾವ್ ಎಂದುಕೊಂಡೂ ಮುಂದಡಿ ಇಡೋಷ್ಟರಲ್ಲಿ ನನ್ನ ಬಾಡಿಗೆ ಮನೆಯಾತ ತಂದೆ "ಯಾರು ಬೇಕಿತ್ತು?" ಅಂತ ಕನ್ನಡಕ ಒರೆಸಿಕೊಳ್ಳುತ್ತ ಕೇಳಿದರು. ಪಾಪ ಅರುಳು ಮರಳು ಅಂತ ನಕ್ಕು ಮಹಡಿ ಹತ್ತು ಹೋದೆ. ಮೂರು ವರ್ಷದಿಂದ ನೋಡಿರುವ ಇವರಿಗೂ ನಾನ್ಯಾರು ಎಂದು ಗೊತ್ತಾಗಲಿಲ್ವೇ?

ತಲೆಗೂದಲು ಸವರಿಕೊಂಡು, ಬಟ್ಟೆ ಸರಿಪಡಿಸಿಕೊಂಡು, ಮುಖದ ಮೇಲೆ ಎಂದಿನ ನಗೆ ತರಿಸಿಕೊಂಡು "ಹಾಯ್ ಸುಮಾ" ಎನ್ನುತ್ತ ಮನೆ ಬಾಗಿಲ ಬಳಿ ಸಾಗಿದೆ. ಎಲ್ಲರಂತೆ ಇವಳಿಗೂ ಮುಖ ಗುರುತು ಸಿಗದೇ ಹೋದರೂ ಕಂಠವಾದರೂ ಗುರುತು ಸಿಗಲಿ ಅಂತ. ಯಾರೋ ಆಗುಂತಕ ಅಂತ ಇವಳು ಚೀರಿ ಜನ ಸೇರಿ ನನ್ನನ್ನು ಬಡಿದು ಹಾಕಿದರೆ? ಅದನ್ನ ನೆನೆಸಿಕೊಂಡರೇ "ಅಯ್ಯಯ್ಯಪ್ಪ !" ... ಕೊನೇ ಮಾತು ನಾನು ಅಂದಿದ್ದಲ್ಲ ... "ಸುಮಾ !!"

"ಯಾಕ್ರೀ ಹಿಂಗಿದ್ದೀರಿ? ಆಫೀಸಿನಲ್ಲಿ ಮಾಡೋ ಕೆಲ್ಸ ಅಷ್ಟರಲ್ಲೇ ಇದೆ ... ಯಾಕೆ ಹಿಂಗಿದ್ದೀರಿ? ನೀವು ಮಾತಾಡದೇ ಹಾಗೇ ಬಂದು ನಿಂತಿದ್ರೆ ಹೋಗಿದ್ರೆ ಕಳ್ಳ ಅಂದುಕೊಂಡು ಬಿಡ್ತಿದ್ದೆ" ಅನ್ನೋದೇ? ... ಬುದ್ದಿ ಉಪಯೋಗಕ್ಕೆ ಬಂತು ... "ಬೆಳಿಗ್ಗೆಯಿಂದ ಇದೇ ಆಯ್ತು ... ಏನಾಗಿದ್ದೀನಿ ?"

ಹಾಗೇ ಒಂದೆರಡು ನಿಮಿಷ ನನ್ನನ್ನು ನೋಡಿ ನುಡಿದಳು ಸುಮ "ಸ್ನಾನಾ ಮಾಡಿ ಹಾಗೇ ಹೋದ ಹಾಗಿದೆ ... ತಲೆ ಸ್ನಾನ ಮಾಡಿದಾಗ ಶ್ಯಾಂಪೂ-ಕಂಡೀಶನರ್ ಹಾಕದೆ ಸುಮ್ಮನೆ ನೀರು ಹಾಕಿರೋದ್ರಿಂದ ಜಟೆ ಕಟ್ಟಿದ ಹಾಗಿದೆ ಕೂದಲು ... ಮುಖಕ್ಕೆ ಬರೀ ಸೋಪು ಹಚ್ಚಿದ್ರಿಂದ ಒಣಗಿ ಹೋಗಿದೆ ಚರ್ಮ ...ಮುಖಕ್ಕೆ ಕ್ರೀಮಿಲ್ಲ, ಪೌಡರಿಲ್ಲ .. ಕೈಗೆ moisturizer ಹಾಕಿಲ್ಲ, ಕುತ್ತಿಗೆಗೆ ಬಾಡಿ ಕ್ರೀಮ್ ಹಚ್ಚಿಲ್ಲ. ಕೊಂಕಳಿಗೆ Deodorant ಸುಳಿದೇ ಇಲ್ಲ. ಹಲ್ಲುಗಳು ಭಾಗಶಹ ಬೆಳ್ಳಗಿದ್ದು ಹೆಚ್ಚುವರಿ ಹಳದಿ ಇದೆ, ಸೋ  ದಯವಿಟ್ಟು ತುಟಿಗಳನ್ನ ಲಾಕ್ ಮಾಡಿಕೊಳ್ಳಿ. ನಾನಿಲ್ಲ ಅಂತ ಬಟ್ಟೆಗೆ ಇಸ್ತ್ರಿ ಇಲ್ಲ. ಸದ್ಯಕ್ಕೆ ನನಗೆ ಇಷ್ಟೇ ತೋಚಿದ್ದು" ...

ಇಷ್ಟು ಸಾಲದೇ ? ಬೆಳಿಗ್ಗೆ ಬೆಳಿಗ್ಗೆ ಮೀಟಿಂಗ್ ಅಂತ ಲೇಟಾಗಿ ಎದ್ದ ನಾನು ಎದ್ದುಬಿದ್ದು ಹಲ್ಲುತಿಕ್ಕಿ, ಸ್ನಾನ ಮಾಡಿ ಓಡಿದ್ದೇ ದೊಡ್ಡದು. ಇನ್ನು ಇಷ್ಟೆಲ್ಲಾ ವೈಭೋಗಕ್ಕೆ ಟೈಮು ಎಲ್ಲಿತ್ತು ?

ಓ! ಹಾಗಿದ್ರೆ ವಿಷಯ ಇದು ...

ಹಲವು ಮ್ಯಾಗಜೀನ್’ಗಳಲ್ಲಿ "ತೆರೆಯ ಮೇಲಿನ ನಿಮ್ಮ ಗ್ಲ್ಯಾಮರಸ್ ಹೀರೋಯಿನ್ ನಿಜ ಜೀವನದಲ್ಲಿ ’ರಸ್’ ಇಲ್ಲದೆ ಹೀಗಿರುತ್ತಾರೆ" ಎಂದು ಎರಡು ಚಿತ್ರಗಳು ಹಾಕಿರುವ ನೆನಪು ಬಂತು. ತೆರೆಯ ಮೇಲೆ ಹೃದಯ ಕದ್ದ ಚೋರಿ ನಿಜ ಜೀವನದಲ್ಲಿ ಮುಸುರೆ ತೊಳೆಯುವ ಹಾಗೆ ಇರುತ್ತಾಳೆ ಅಂತ ತೋರಿಸುವುದು ಉದ್ದೇಶವೋ ಅಥವಾ ತೆರೆಯ ಮೇಲೆ ನೋಡಿದ್ದೆಲ್ಲ ನಿಜವಲ್ಲ ಎಂದು ಅರಿವು ಮೂಡಿಸುವುದು ಉದ್ದೇಶವೋ ಗೊತ್ತಿಲ್ಲ ...

ನನಗೂ ಈಗ ಸೆಲೆಬ್ರಿಟಿ ಆದೆ ಹಾಗೆ ಅನ್ನಿಸಿದೆ. ಅಲ್ಲದೇ ಇಷ್ಟು ದಿನ ನನ್ನನ್ನು ಜನ ಗುರುತಿಸುತ್ತ ಇದ್ದದ್ದು ನನ್ನನ್ನಲ್ಲ ಬದಲಿಗೆ ನಾ ಹೊತ್ತ ಮುಸುಕಿಗೆ ಅಂತಾಯ್ತು ! ಪ್ರತಿ ದಿನವೂ ಹೊರಗೆ ಹೋಗುವ ಮುನ್ನ ನಮ್ಮ ಮುಖದ ಮೇಲೆ ಮುಖವಾಡ ಹೊತ್ತೇ ಸಾಗುವ ನಾವು ನೈಜವಾಗಿ ಹೋದರೆ ಜನರಿಗೆ ಗುರುತು ಹತ್ತುವುದಿಲ್ಲ ಅನ್ನೋದು ಸತ್ಯವೇ ...

ನಾವು, ಅಂಗಡಿಯಲ್ಲಿ ’ಥಳಥಳ’ ಹೊಳೆವ ಆಪಲ್’ಗಳ ಹಾಗೆ. ಗಿಡದಲ್ಲಿರುವ ತಾಜ ಸೇಬಿನ ಹಣ್ಣಿನ ಮೇಲೆ ಪ್ರಕೃತಿದತ್ತವಾದ ಮೇಣವಿರುತ್ತದೆ. ಹಣ್ಣನ್ನು ಕಿತ್ತು ಉಜ್ಜಿದಾಗ ಫಳ ಫಳ ಹೊಳೆಯುತ್ತದೆ. ನೀರಿನಲ್ಲಿ ತೊಳೆದರೆ ಕಳಾಹೀನವಾಗುತ್ತದೆ. ಹಣ್ಣಿಗೆ ಮತ್ತೊಮ್ಮೆ ಮೇಣವನ್ನು ಲೇಪಿಸಿದಾಗಲೋ ಅಥವಾ ಶೆಲ್ಲಾಕ್’ಅನ್ನು ಸ್ಪ್ರೇ ಮಾಡಿದಾಗಲೋ ಅವು ಹೊಳಪನ್ನು ಪಡೆಯುತ್ತದೆ. ನಿಮಗೆ ತಿಳಿದಂತೆ ಇವು ನೈಸರ್ಗಿಕವಲ್ಲ ಬದಲಿಗೆ ರಾಸಾಯನಿಕ. ಥಳಗುಟ್ಟದೆ ಹೋದರೆ ಬೆಲೆ ಎಲ್ಲಿ. ಸೇಬಿನ ಹಣ್ಣಿಗೂ ನಮ್ಮ ಮುಖಕ್ಕೂ ಹೆಚ್ಚು ವ್ಯತ್ಯಾಸವಿಲ್ಲ ಅಲ್ಲವೇ?

ಮೇಣವನ್ನು ತೊಳೆದ ಸೇಬು ಹಾಗೇ ಇರಿಸಿದಲ್ಲಿ ಬೇಗ ಹಾಳಾಗುತ್ತದೆ. ತೊಳೆದ ಮುಖಕ್ಕೆ ರಾಸಾಯನಿಕ ಲೇಪನ ಬಳಿದುಕೊಳ್ಳದೇ ಹೋದರೆ ಮುಖವೂ ಕಳೆಗುಂದುತ್ತದೆ. ಮೇಣ ಅಥವಾ ಸ್ಪ್ರೇ ಬೇಕೋ ಬೇಡವೋ? ನಿಮ್ಮ ಮುಖಕ್ಕೆ ಅಲಂಕಾರ ಬೇಕೋ ಬೇಡವೋ?

ಕೊನೇ ಟಚ್: ಸಿನಿಮಾದಲ್ಲಿನ ಗ್ಲ್ಯಾಮರಸ್ ಹೀರೋಯಿನ್ ನಿಜಕ್ಕೂ ಕಾಣೋದು ಹೀಗೆ ಅಂತಾರಲ್ಲ, ಹಿಂದಿನ ದಿನ ರಾತ್ರಿಯ ನಾಟಕದಲ್ಲಿ ಭೀಮನ ಪಾತ್ರ ನಿರ್ವಹಿಸಿದ್ದೆ ಅಂತ ಹೋದೆಡೆಯಲ್ಲೆಲ್ಲ ಗದೆ ಹೊತ್ತುಕೊಂಡೇ ತಿರುಗೋಕ್ಕಾಗುತ್ತಾ? ಕೊಂಚ ಯೋಚಿಸುವ ವಿಷಯವೇ, ಅಲ್ಲವೇ?

No comments:

Post a Comment