Tuesday, November 24, 2009

ನಾ ಮಾಡಿದ ತಪ್ಪೇನು?


ಪೋಲೀಸ್ ಅಧಿಕಾರಿ ಪ್ರತಾಪ ವರ್ಮ ಕೇಡಿಗರಿಗೆ ಸಿಂಹಸ್ವಪ್ನ ... ಇವರು ಹುಟ್ಟುತ್ತಲೇ ಖಾಕಿ ಬಟ್ಟೆ ಧರಿಸಿ ಹುಟ್ಟಿದ್ದರೇನೋ ಅನ್ನಿಸುವಂತಿತ್ತು ಅವರ ಕರ್ತವ್ಯ ನಿಷ್ಟೆ. ಮಾದಕ ವಸ್ತುಗಳನ್ನು ತನ್ನ ಆಟೊದಲ್ಲಿ ಸಾಗಿಸುತ್ತಿದ್ದಾಗ ಪ್ರತಾಪರ ಕೈಯಲ್ಲಿ ಮಾಲಿನ ಸಮೇತ ಸಿಕ್ಕಿಬಿದ್ದವನು ಆಟೋ ಡ್ರೈವರ್ ರಾಜ.

ಊರಾಚೆಗಿರುವ ಒಂದು ಸ್ಥಳಕ್ಕೆ ಯಾವುದೋ ಡಬ್ಬ ಡೆಲಿವರಿ ಮಾಡಬೇಕಿತ್ತು. ಕೊಟ್ಟವರು ಇದು ತೀರಾ ಅರ್ಜಂಟ್. ರೋಗಿಗಳು ಕಾಯ್ತಾ ಇದ್ದಾರೆ ಎಂದು ಮಾತ್ರ ಹೇಳಿದ್ದರು. ಒಂದಕ್ಕೆ ನಾಲ್ಕರಷ್ಟು ದುಡ್ಡು ಸಿಕ್ಕಿದ್ದರಿಂದ ಹಿಂದೂ ಮುಂದೂ ನೋಡದೆ ಸಂತೋಷದಿಂದಲೇ ಒಪ್ಪಿಕೊಂಡಿದ್ದ ರಾಜ. ಡಬ್ಬದಲ್ಲಿ ಏನಿದೆ ಎಂಬುದರ ಅರಿವೂ ಅವನಿಗಿರಲಿಲ್ಲ. ಅವನ ದುರಾದೃಷ್ಟವೋ ಏನೋ ಪ್ರತಾಪ ವರ್ಮ ಹಾಗೂ ತಂಡ ಕೈಗೆ ಸಿಕ್ಕಿದ್ದ. ಹತ್ತು ವರ್ಷ ಜೈಲು.

---

ಮಾರ್ಗ ಮಧ್ಯೆ ಟ್ರೈನ್ ಕೆಟ್ಟು ಏನೆಲ್ಲ ಫಜೀತಿಯಾಗಿ, ರಾತ್ರಿ ಒಂಬತ್ತಕ್ಕೆ ಊರು ತಲುಪಬೇಕಾದ ಟ್ರೈನು ಮುಂಜಾನೆ ಎರಡು ಘಂಟೆಗೆ ತಲುಪಿತು. ರೋಸಿಹೋದ ಮನದಿ ಬೈದುಕೊಳ್ಳುತ್ತಲೇ ಪ್ಲಾಟ್ ಫಾರ್ಮ್ ಬಿಟ್ಟು ಸೀದ ಆಟೋ ಸ್ಟಾಂಡಿಗೆ ನೆಡೆದ ಸುನೀಲ.

ಮೊದಲೇ ತೀರಾ ತಡವಾದ್ದರಿಂದ, ಒಂದೊಂದು ಆಟೋಗೂ ಬಹಳ ಡಿಮ್ಯಾಂಡು. ಅವರು ಹೇಳಿದ್ದೇ ರೇಟು. ಸ್ವಲ್ಪ ಅತ್ತ ಇತ್ತ ಕಣ್ಣು ಹಾಯಿಸಿದ ಸುನೀಲ. ಸ್ವಲ್ಪ ದೂರದಲ್ಲಿ ನಿಂತಿದ್ದ ಒಂಟಿ ಆಟೋ ಕಣ್ಣಿಗೆ ಬಿತ್ತು. ಬೇರೆಯವರು ನೋಡುವ ಮುನ್ನ ತಾನು ಮೆಲ್ಲಗೆ ಅತ್ತ ನೆಡೆದ. ತೂಕಡಿಸುತ್ತಿದ್ದ ಡ್ರೈವರ್’ನನ್ನು ನೋಡಿ ಮರುಕವೆನಿಸಿದರೂ, ವಿಧಿಯಿಲ್ಲದೆ ಎಬ್ಬಿಸಿದ. ನಿದ್ದೆ ಕಣ್ಣಿನಲ್ಲೇ ’ಎಲ್ಲಿಗೆ’ ಎಂದ. ಸುನೀಲ ಹೇಳಿದ. ’ಡಬಲ್ ಆಗುತ್ತೆ’ ಎಂದ ಡ್ರೈವರ್. ಸುನೀಲನಿಗೆ ಆಶ್ಚರ್ಯ ’ಏನಿದು ಒಂದೇ ಸಾರಿಗೆ ಒಪ್ಪಿಕೊಂಡು ಬಿಟ್ಟನಲ್ಲ’ ಅಂತ. ಇವನು ಕೇಳದಿದ್ದರೂ ಡ್ರೈವರ್ ಮರುನುಡಿದ ’ನಿಮ್ಮನ್ನೂ ಡ್ರಾಪ್ ಮಾಡಿ ನಾನೂ ಮನೆಗೆ ಹೋಗಿ ಮಲಗ್ತೀನಿ’ ಅಂತ.

ಸುನೀಲನಿಗೆ ಅನ್ನಿಸಿತು "ಅಂದರೇ, ಇವನ ಮನೆಯೂ ಅದೇ ಏರಿಯಾ ಇರಬೇಕು" ಅಂತ. ಅವನು ಎಲ್ಲಿಗೆ ಹೋದರೆ ತನಗೇನು, ನಾನು ಹುಷಾರಾಗಿದ್ದರೆ ಸಾಕು ಎಂದುಕೊಂಡ.

ತಾನು ಈ ಊರಿನವನಲ್ಲದವನಾದರೂ ತೀರ ಅಪರಿಚಿತನೇನಲ್ಲ. ಒಂದೆರಡು ಬಾರಿ ಬಂದಿದ್ದೇನೆ ಮಲ್ಲಿಕ್ ಮನೆಗೆ. ಕಳೆದ ಬಾರಿ ಬಂದಿದ್ದು ಐದು ವರ್ಷಗಳ ಹಿಂದೆ. ಈಗ ಸಾಕಷ್ಟು ಅಭಿವೃದ್ದಿಯೂ ಆಗಿದೆ. ಜೊತೆಗೆ ಅಪರಾತ್ರಿ ವೇಳೆ. ಬೇಗ ಬೀದಿಗಳು ಗುರುತು ಸಿಗೋಲ್ಲ. ಸುಮ್ಮನೆ ರೌಂಡ್ ಹೊಡೆಸಿ ದುಡ್ಡು ಕಿತ್ತುಕೊಂಡಾನು ಎಂದು ಹೊರಗೆ ಒಂದು ಕಣ್ಣು ಇಟ್ಟಿದ್ದೆ.

ಸುನೀಲನೂ ಮಲ್ಲಿಕ್ ಬಹಳ ಹಳೆಯ ಸ್ನೇಹಿತರು. ಈ ಊರಿನಲ್ಲಿ ಕಾನ್ಫರೆನ್ಸ್ ಇರುವುದು ತಿಳಿದ ಅವನು ನೇರ ತನ್ನ ಮನೆಗೆ ಬಂದು ಉಳಿದುಕೊಳ್ಳಬೇಕೆಂದು ಹಠ ಹಿಡಿದಿದ್ದ. ಒಂಬತ್ತಕ್ಕೆ ಕಾರ್ ತರುತ್ತೀನಿ ಸ್ಟೇಶನ್’ಗೆ ಅಂತ ಹೇಳಿದ್ದ. ಆಗ ತನ್ನ ಮೊಬೈಲಿಗೆ ಸಿಗ್ನಲ್ ಸಿಗಲಿಲ್ಲ. ಈಗ ಅವನಿಗೆ ಕರೆ ಮಾಡಿ ವಿಷಯ ತಿಳಿಸೋಣವೆಂದರೆ ಅಂಕಲ್’ಗೆ ತೊಂದರೆಯಾಗುತ್ತೆ. ಅದೂ ಅಲ್ಲದೆ, ಮುಖ್ಯವಾಗಿ ಮಬೈಲ್’ನಲ್ಲಿ ಹಾಳಾದ್ದು ಚಾರ್ಜ್ ಇಲ್ಲ.

ಆಗ ಮಲಗಿದ್ದೋನು ಮತ್ತೆ ಮಲಗಿಬಿಟ್ಟಾನು ಎಂದು ಅನ್ನಿಸಿ ಡ್ರೈವರ್’ನನ್ನು ಮಾತಿಗೆಳೆದ ಸುನೀಲ. ಪಾಪ, ಎಷ್ಟೆ ಆಗಲಿ ಅವನೂ ಮನುಷ್ಯನೇ ತಾನೇ. ಡ್ರೈವರ್ ಕೂಡ ಅದಕ್ಕೇ ಕಾಯುತ್ತಿರುವವನಂತೆ ಮಾತಿಗಿಳಿದ. ಮಾತು ರಾಜಕೀಯಕ್ಕಿಳಿಯಿತು. ಅಪರಿಚಿತರೊಡನೆ ಮಾತಡುವಾಗ ರಾಜಕೀಯ ಹಾಗೂ ಮತ, ಇವೆರಡರನ್ನೂ ಮಾತನಾಡಬಾರದಂತೆ. ಆದರೆ ಆ ಮಾತನ್ನು ಬೇರೆಡೆ ತಿರುಗಿಸಲು ಅವಕಾಶವನ್ನೇ ಕೊಡದೆ ಸಿಕ್ಕಾಪಟ್ಟೆ ಮಾತನ್ನಾಡುತ್ತ, ಕೆಲವೊಮ್ಮೆ ಅವಾಚ್ಯ ಪದಗಳನ್ನೂ ಬಳಸುತ್ತ ರಾಜಕಾರಣಿಗಳನ್ನು ಬೈದಾಡುತ್ತ ಸಾಗಿದ್ದ.

ತಾನೇಕಾದರೂ ಮಾತನಾಡಲು ಶುರು ಮಾಡಿದೆನೋ ಎಂದು ಬೈದುಕೊಳ್ಳುತ್ತ, ರಕ್ಷಣೆಗಿರಲಿ ಎಂದು ಸಮಯ ಸಿಕ್ಕ ಕೂಡಲೆ ಅಂಕಲ್ ಹೆಸರು ಹೇಳಿದೆ. ಅದಾದ ಎರಡು ನಿಮಿಷ ಡ್ರೈವರ್ ಮಾತನಾಡಲೇ ಇಲ್ಲ. ಅಂಕಲ್ ಪ್ರತಾಪ ವರ್ಮರ ಹೆಸರೇ ಹಾಗೆ ! ಚಿಕ್ಕಂದಿನಿಂದಲೂ ಅವರ ಗಿರಿಜಾ ಮೀಸೆ ಕಂಡರೇ ನನಗೆ ಭಯ. ಮಲ್ಲಿಕ್ ತನ್ನನ್ನು ಅವನ ಮನೆಗೆ ಕರೆದರೆ, ಮೊದಲು ಅವರಪ್ಪ ಮನೆಯಲ್ಲಿ ಇದ್ದಾರ ಎಂದು ತಿಳಿದುಕೊಂಡು ಮುಂದಿನ ಪ್ಲಾನು. ಮದುವೆ ವಯಸ್ಸು ಬಂದರೂ ಅವರ ಮೀಸೆಗೆ ಹೆದರುವುದು ಎಂದರೆ ನಗು ಬರುತ್ತೆ. ಏನು ಮಾಡೋದು ಆ ಖಾಖೀ ಬಟ್ಟೆ ಪ್ರಭಾವವೇ ಹಾಗೆ.

ಸುನೀಲ ಚಿಕ್ಕಂದಿನಿಂದಲೂ ಅಂಕಲ್ ರೂಪದಿ ಕಂಡಿದ್ದ ಪ್ರತಾಪವರ್ಮ, ಮಲ್ಲಿಕ್ ತನ್ನ ತಂದೆಯಾಗಿ ಕಂಡಿದ್ದ ಪ್ರತಾಪವರ್ಮ, ಇವೆರಡಕ್ಕಿಂತಲೂ ಈಗ ಸುನೀಲನನ್ನು ಹೊತ್ತು ಹೊರಟಿದ್ದ ಆಟೋ ಡ್ರೈವರ್ ರಾಜ, ಹತ್ತು ವರ್ಷಗಳ ಕಾಲ ಕಂಡಿದ್ದ ಪ್ರತಾಪವರ್ಮ ಬಹಳ ಭಿನ್ನ !!!

ರಾಜ ಹೊರಬಂದು ಒಂದು ವರ್ಷವೇ ಆಗಿದ್ದರೂ ಅವನೆದೆಯಲ್ಲಿ ವರ್ಮಾರ ಬಗ್ಗೆ ದ್ವೇಷ ಮಾತ್ರ ಹಾಗೇ ಉಳಿಸಿಕೊಂಡಿದ್ದ. ಸಮಯ ಸಿಕ್ಕಲ್ಲಿ ಪೋಲೀಸ್ ಅಧಿಕಾರಿ ವರ್ಮ ಮೇಲೆ ಸೇಡು ತೀರಿಸಿಕೊಳ್ಳಬೇಕೆಂದು ಹೊಂಚುಹಾಕುತ್ತಿದ್ದ. ’ಆ ಸಮಯ ಈಗ ಸಿಕ್ಕಿದೆ’ ಎಂದು ಕೇವಲ ಎರಡು ನಿಮಿಷಗಳಲ್ಲಿ ತನ್ನ ಮುಂದಿನ ಕಾರ್ಯದ ಬಗ್ಗೆ ಪ್ಲಾನ್ ಮಾಡಿದ್ದ.

ತಾನು ಬಲವಂತ ಮಾಡಿ ಕರೆಸಿಕೊಂಡ ಸ್ನೇಹಿತನ ಜೀವನ ಹೀಗೆ ಕೊನೆಗೊಂಡಿದ್ದನ್ನು ಅರಗಿಸಿಕೊಳ್ಳಲಾರದೆ ದಿಗ್ಮೂಢನಾಗಿ ಕುಳಿತಿದ್ದ ಮಲ್ಲಿಕ್ ವರ್ಮ. ಪರ ಊರಿನಿಂದ ಈ ಊರಿಗೆ ಬಂದವನನ್ನು ಏನೂ ದೋಚದೆ ಸುಮ್ಮನೆ ಹೀಗೆ ವಿನಾ ಕಾರಣ ... ಛೇ!! ಇದರ ಹಿಂದಿನ ಉದ್ದೇಶವಾದರೂ ಏನು ಎಂದು ಅರ್ಥವಾಗಲಿಲ್ಲ ಅವನಿಗೆ.

ಜೈಲಿನ ಕಂಬಿಗಳ ಹಿಂದೆ ರಾಜ, ಅವನನ್ನೇ ದಿಟ್ಟಿಸಿ ನೋಡುತ್ತಿದ್ದ ಪ್ರತಾಪವರ್ಮ, ಇವರ ನಡುವೆ ದೃಷ್ಟಿ ಯುದ್ದವೇ ನೆಡೆದಿತ್ತು. ರಾಜನಿಗೆ ತನ್ನ ವಿಜಯದ ಬಗೆಗಿನ ಸಂತಸವಾದರೆ ಪ್ರತಾಪರಿಗೆ ತನ್ನ ಮಗನನ್ನೇ ಕಳೆದುಕೊಂಡಂತಹ ನೋವು.

ಸುನೀಲನ ಆತ್ಮ ಮಾತ್ರ ಇವರನ್ನೆಲ್ಲ ನೋಡುತ್ತ ಚೀರುತ್ತಿತ್ತು "ಅಂಕಲ್, ಈ ಡ್ರೈವರ್ ಏನೇನೋ ಮಾತನಾಡುತ್ತಿದ್ದ ರೀತಿ ನೋಡಿ safety’ಗೋಸ್ಕರ ನಾನು ನಿಮ್ಮ ಮಗನೆಂದು ಹೇಳಿಕೊಂಡೆ. ನಾನು ಮಾಡಿದ್ದು ತಪ್ಪಾ?"

ದಿನ ನಿತ್ಯದಿ ನೆಡೆವ ಆಗು-ಹೋಗುಗಳ ಹಿಂದೆ ಹುದುಗಿರುವ ಸತ್ಯದ ಅರಿವು ಎಲ್ಲರಿಗೂ ಆಗುವಂತಿದ್ದರೆ, ಯಾವ ಅಚಾತುರ್ಯಗಳೂ ನೆಡೆಯದೆ ಅಮಾಯಕರು ಉಳಿದುಕೊಳ್ಳುತ್ತಿದ್ದರೇನೋ ?

No comments:

Post a Comment