Saturday, November 28, 2009

ಹೀಗೊಂದು ಸಿನಿಮಾ ದೃಶ್ಯ!

ಹಲವಾರು ಭಾಷೆಯ ಹಲವಾರು ಚಿತ್ರಗಳನ್ನು ನೋಡಿದ ಮೇಲೆ ನನಗೂ ಒಂದು ಸಿನಿಮಾ ಕಥೆ ಬರೆಯಬೇಕೆಂದು ಅನ್ನಿಸಿತು .... ಕಥೆ ಬರೆಯೋದು ಏನು, ಇಡೀ ಸಿನಿಮಾಕ್ಕೆ ಡೈಲಾಗನ್ನೇ ಬರೆದರೆ ಹೇಗೆ ಅಂತ ಆಮೇಲೆ ಅನ್ನಿಸಿತು ... ನಾನೀಗ ಬರೆದಿರುವುದು ಒಂದು ದೃಶ್ಯದ ಡೈಲಾಗ್ ಮಾತ್ರ ... ಈ ಕಥೆ ಓದಿದ ನನ್ನಾಕೆ ’ಇದೇನಾದರೂ ಚಿತ್ರ ಮಾಡಿದರೆ, ಅದು ರಿಲೀಸ್ ಆದರೆ, ವರ್ಷದ ಅತ್ಯುತ್ತಮ ಡಬ್ಬಾ ಚಿತ್ರವಾಗುವುದರಲ್ಲಿ ಸಂಶಯವೇ ಇಲ್ಲ’ ಅಂದುಬಿಡೋದೇ?

ಈಗ ನಿಮ್ಮ ಅಭಿಪ್ರಾಯ ಕೇಳೋಣಾ ಅಂತ. ಓದಿ, ಸ್ವಲ್ಪ ಹೇಳ್ರಲ್ಲಾ ....

-----


ಗೋಧೂಳಿ ಹಾರುವ ಹೊತ್ತು. ಕೆಂಪಾದ ಸೂರ್ಯ ಅಸ್ತಂಗತನಾಗುತ್ತಿದ್ದಾನೆ. ಹಕ್ಕಿಗಳು ಚಿಲಿಪಿಲಿ ಗುಟ್ಟುತ್ತಾ ಗೂಡಿನತ್ತ ಸಾಗಿವೆ. ತಂಪಾದ ಗಾಳಿ ಬೀಸುತ್ತಿದೆ. ಹಿನ್ನೆಲೆಯಲ್ಲಿ ಲಘುವಾಗಿ ’ಡಬ ಡಬ’ ಸದ್ದಿನ ಸಂಗೀತ. ಹೂದೋಟದ ಮನೆಯ ಎಲ್ಲ ಕಿಟಿಕಿಗಳೂ ಕರ್ಟನ್ನಿನಿಂದ ಮುಚ್ಚಿವೆ. ಮನೆ ಒಳಗೆ ಟ್ಯೂಬ್ ಲೈಟ್ ಉರಿಯುತ್ತಿದೆ, ಫ್ಯಾನ್ ಗಾಳಿ ಬೀಸುತ್ತಿದೆ. ನಾಯಕನು ಆರಾಮ ಕುರ್ಚಿಯಲ್ಲಿ ಆಸೀನನಾಗಿ ದೆವ್ವ, ಪಿಶಾಚಿಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದಾನೆ.

ನಾಯಕನ ತಾಯಿ ಸೆರಗಿನಲ್ಲಿ ಕಣ್ಣೀರು ಒರೆಸಿಕೊಳ್ಳುತ್ತಾ ಬರುತ್ತಾಳೆ "ಅಲ್ವೋ, ನಿನ್ನನ್ನು ಆರು ತಿಂಗಳು ಹೊತ್ತೂ, ಹೆತ್ತೂ, ಸಾಕೀ, ಸಲುಹಿ ದೊಡ್ಡವನನ್ನಾಗಿ ಮಾಡಿದ್ದಕ್ಕೆ ಇದೇ ಏನೋ ನೀ ಕೊಟ್ಟ ಉಡುಗೊರೆ?"

(ಮುಂಬರುವ ಡೈಲಾಗುಗಳನ್ನು ಮನಮಿಡಿಯುವಂತೆ ಬರೆದಿರುವುದರಿಂದ ಅದೇ ಭಾವದಿಂದ ಓದಬೇಕಾಗಿ ವಿನಂತಿ :-))

ಓದಿದ್ದೇನೂ ಅರ್ಥವಾಗದೇ ಇದ್ದರೂ ಮುಖಕ್ಕೆ ಪುಸ್ತಕ ಅಡ್ಡವಿಟ್ಟುಕೊಂಡಿದ್ದ ನಾಯಕನು, ತಲೆ ಎತ್ತಿ ದೈನ್ಯತೆಯೇ ಮೂರ್ತಿವೆತ್ತ ವದನದಿಂದ ತಾಯಿಯತ್ತ ನೋಡಿ, ಎದ್ದು ನಿಂತು ಆಕೆಯ ಬಳಿ ನೆಡೆದು ’ನೀನು ಕಣ್ಣೀರು ಹಾಕಬೇಡಮ್ಮ. ಏನೆಂದೆ ಹೇಳಮ್ಮಾ’ ಎನ್ನುತ್ತಾನೆ.

ತಾಯಿ ನುಡಿಯುತ್ತಾಳೆ "ನಿನಗೆ ಸಂಜೆ ಐದು ಘಂಟೆಯಾದ ಮೇಲೆ ಸರಿಯಾಗಿ ಕಿವಿ ಕೇಳಿಸುವುದಿಲ್ಲ ಎಂದು ನನಗೆ ಗೊತ್ತು ಮಗೂ" ಎಂದು ಮೇಲೆ ಹೇಳಿದ ಡಿಲಾಗನ್ನೇ ಮತ್ತೆ ಹೇಳುತ್ತಾಳೆ !

ನಾಯಕ ನುಡಿಯುತ್ತಾನೆ ’ಅಳಬೇಡಮ್ಮ. ನೀನು ಕಣ್ಣೀರು ಹಾಕಿದರೆ ನನಗೆ ತಡೆಯೋಲ್ಲ. ಅಲ್ಲಾ, ನನಗೆ ತಾನೇ ಯಾರಿದ್ದಾರೆ ಹೇಳು? ಎದುರು ಮನೆ ಮೀನ, ಆಚೆ ಮನೆ ಯಮುನ, ಪಕ್ಕದ ಮನೆ ಪಂಕಜ, ಚಿಕ್ಕಪ್ಪ, ದೊಡ್ಡಪ್ಪಂದಿರು, ಹಲವಾರು ಕಸಿನ್’ಗಳು, ಅಜ್ಜಿ, ತಾತ ಇವರೆಲ್ಲರನ್ನೂ ಬಿಟ್ಟರೆ, ನೀನೊಬ್ಬಳೇ ತಾನಮ್ಮಾ ಇರೋದು. ನೀನೇ ಅತ್ತರೆ ಹೇಗೆ? ನಿನ್ನ ಕಣ್ಣೀರನ್ನು ನೋಡಲು ನನಗೆ ಆಗಲ್ಲಮ್ಮಾ ’.

ತಾಯಿ ನುಡಿಯುತ್ತಾಳೆ "ಗೊತ್ತು ಮಗೂ, ನಿನಗೆ ಸಂಜೆ ಆದರೆ ಕಣ್ಣು ಕಾಣಿಸುವುದಿಲ್ಲ ಅಂತ"

ನಾಯಕ ಮರು ನುಡಿಯುತ್ತಾನೆ "ನಿನಗೆ ಹೆಚ್ಚು ಕಷ್ಟ ಆಗಬಾರದು ಅಂತ ತಾನೇ ನಾನು ಅಂದು pre-mature ಕಂದನಾಗಿ ಹುಟ್ಟಿದ್ದು ? ನನ್ನ ಕಾಲೇಜಿನ ಖರ್ಚು ನಿನಗೆ ಭಾರವಾಗದೆ ಇರಲಿ ಅಂತ ತಾನೇ ನಾನು ಹತ್ತನೇ ತರಗತೀನೂ ಪಾಸ್ ಮಾಡಲಿಲ್ಲ? ನಾನೇನು ಮಾಡಬಾರದ್ದು ಮಾಡಿದೆ ಅಂತ ನೀನು ಕಣ್ಣೀರು ಹಾಕುತ್ತಿದ್ದೀಯ? ಹೌದು, ನಾನೀಗ ಮದುವೆಯಾಗಲು ಹೊರಟಿದ್ದೇನೆ. ಏನು ಮಾಡಲಿ ಹೇಳು? ಸ್ವಲ್ಪ ವಯಸ್ಸು ಜಾಸ್ತಿ .... ನನಗೆ. ಇದುವರೆಗೂ ನಾನು ನೂರು ಹೆಣ್ಣುಗಳನ್ನು ನೋಡಿದ್ದೀನಿ. ೯೯ ಮಂದಿ ನನ್ನನ್ನು ತಳ್ಳಿ ಹಾಕಿದ್ದಾರೆ. ನನ್ನ ಕಷ್ಟ ಯಾರ ಮುಂದೆ ಹೇಳಿಕೊಳ್ಳಲಿ ಎಂದು ಅರಿಯದೆ ’ಕ್ರೈಮ್ ಡೈರಿ’ಯಲ್ಲಿ ಹಾಕಿಸಿದೆ. ಅದನ್ನು ನೋಡಿದ ಇವಳು ನನ್ನನ್ನು ಒಪ್ಪಿದ್ದಾಳೆ. ಇಷ್ಟಕ್ಕೂ ಇವಳನ್ನು ಯಾರು ಅಂದುಕೊಂಡಿದ್ದೀಯ? ನಾನು ನೋಡಿದ ಮೊದಲ ಹುಡುಗಿಯ ತಂಗಿಯ ಮಗಳು ಕಣಮ್ಮಾ ! ನಾನು ಎಷ್ಟೇ ದೊಡ್ಡವನಾದರೂ ನಿನ್ನ ಕಂದ ಅಲ್ಲವೇನಮ್ಮಾ? ನಾನು ತಂದಿರೋ ಐದು ಸಾವಿರ ರೂಪಾಯಿನ ರೇಷ್ಮೆ ಸೀರೆ ನಿನಗೆ ಸರಿ ಬರದೆ ಇದ್ದರೆ, ನನ್ನ ಕೆನ್ನೆಗೆ ಎರಡೇಟು ಹಾಕು, ಆದರೆ ಕಣ್ಣೀರು ಹಾಕಬೇಡ" ಎನ್ನುತ್ತಾ ಅಲ್ಲೇ ಕಿಟಕಿಗೆ ನೇತುಹಾಕಿದ್ದ ಕರ್ಟನ್’ನಿಂದ ಕಣ್ಣು ಮೂಗು ಒರೆಸಿಕೊಳ್ಳುತ್ತಾನೆ.

"ಇರಲಿ ಬಿಡಮ್ಮ .. ಎಲ್ಲಿ ಸ್ವಲ್ಪ ನಗು ... ಆ.. ಆ. ನಗು" ಎನ್ನುತ್ತ ತಾನೂ ನಗಲು ಹೋಗಿ ಕೆಮ್ಮಲು ಶುರು ಮಾಡುತ್ತಾನೆ. ತಾಯಿ "ಅಯ್ಯೊ, ನನ್ನ ಮುಟ್ಟಾಳ ಕಂದ, ನಿಧಾನ, ನಿಧಾನ, " ಎನ್ನುತ್ತ ಅಲ್ಲೇ ಲೋಟದಲ್ಲಿದ್ದ ನೀರನ್ನು ಕುಡಿಸುತ್ತಾಳೆ.

------

ಅಬ್ಬ, ಎಂಥಾ ಸನ್ನಿವೇಶ ಅಲ್ಲವೇ? ಕರುಳು ಕಿತ್ತು ಬರುವ ದೃಶ್ಯ ಅಲ್ಲವೇ? ಇದೇ ಗತಿಯಲ್ಲೇ ಇಡೀ ಸಿನಿಮಾ ಕಥೆ ಬರೆಯಬೇಕೆಂದಿದ್ದೇನೆ. ಈಗಲೇ ಹೇಳಿಬಿಡಿ ನೀವೇನಂತೀರಾ ಅಂತ? ಸಿನಿಮಾ ಬಿಡುಗಡೆ ಆಗಿಬಿಟ್ರೆ, ’ಡಬ್ಬಾ ಆಫೀಸಿನಲ್ಲಿ’ ಅರ್ಥಾತ್ ’ಬಾಕ್ಸ್ ಆಫೀಸಿನಲ್ಲಿ’ ಎದ್ವಾ ತದ್ವಾ ಸೂಪರ್ ಹಿಟ್ ಆಗಿಬಿಟ್ರೆ, ನಾನು ಬಹಳಾ ಬ್ಯುಸಿ ಆಗಿಬಿಡ್ತೀನಿ :-)




No comments:

Post a Comment