Wednesday, December 2, 2009

ವೃತ್ತಿ ಜೀವನದಲ್ಲಿ ಒಂದು ದಿನ ...

ಬೆಳಿಗ್ಗೆ ಅಲಾರಂ ಹೊಡೆದುಕೊಳ್ಳಲಾರಂಭಿಸಿತು. ಅದರ ತಲೆ ಮೇಲೆ ಕುಟ್ಟಿ ಸ್ವಲ್ಪ ಹೊತ್ತು ಹಾಗೇ ಮಿಸುಕಾಡಿ, ಏಳಲು ಮನಸ್ಸಿಲ್ಲದಿದ್ದರೂ ಕೊನೆಗೂ ಎದ್ದ ಪ್ರತಾಪ ಸಿಂಹ. ಕೆಲಸ ಮುಗಿಸಿ ಮಲಗಿದಾಗ ಘಂಟೆ ಎರಡಾಗಿತ್ತು. ಅವನ ಕೆಲಸವೇ ಹಾಗೆ. ಹಗಲಿಗಿಂತ ರಾತ್ರಿ ನೆಡೆವ ಹಲವಾರು ಸುಪ್ತ ಕಾರ್ಯಾಚರಣೆಗಳಿಂದಾಗಿ ಯಾವ ವೇಳೆಯಲ್ಲೂ ಸಂದೇಶಗಳು ಬರಬಹುದು. blackberry ಹೊತ್ತು ತರುವ ಸಂದೇಶ ಸಂಕ್ಷಿಪ್ತವಾದರೂ ಸರಿ ರಾತ್ರಿಯಲ್ಲೂ ಅದನ್ನು ಅರ್ಥೈಸಿಕೊಂಡು ಮುಂದಿನ ಹೆಜ್ಜೆಯ ಬಗ್ಗೆ ತಕ್ಷಣವೇ ಕಾರ್ಯತತ್ಪರನಾಗಬೇಕಾದ ಸಂದರ್ಭ ಸರ್ವೇಸಾಮಾನ್ಯ.

ಸುಪ್ತ ಮನಸ್ಸು ಎಂದಿಗೋ blackberry ಜೊತೆ ಮಿಲನವಾಗಿ ಹೋಗಿದೆ.

ಸ್ನಾನಾದಿ ನಿತ್ಯಕರ್ಮಗಳನ್ನು ಮುಗಿಸಿ ಸಿದ್ದನಾಗಿ, ಹೊರಡುವ ಮುನ್ನ ವೃತ್ತಿ ಜೀವನಕ್ಕೆ ಸಂಚಕಾರ ತರುವಂಥಾದ್ದೇನೂ ಮರೆತಿಲ್ಲವೆಂದು ಖಾತ್ರಿಪಡಿಸಿಕೊಂಡು ಮನೆಯಿಂದ ಹೊರಬಿದ್ದ. ಕಾರನ್ನು ಸ್ಟಾರ್ಟ್ ಮಾಡಿ ಹೊರಟು, ಇನ್ನೂ ಎರಡು ನಿಮಿಷವೂ ಆಗಿರಲಿಲ್ಲ, blackberry ಸೂಚನೆ ಕೊಟ್ಟಿತು.

ಹಾಗೇ ಗಾಡಿಯನ್ನು ಪಕ್ಕಕ್ಕೆ ತೆಗೆದುಕೊಂಡು, ಸಂದೇಶ ನೋಡಿದ. ಕಂಟ್ರೋಲ್ ರೂಮ್’ನಿಂದ ಬಂದ ಸಂದೇಶ. ಹಿತವಾಗಿರಲಿಲ್ಲ. ತಾನು ಇಲ್ಲಿಂದ, ಘಂಟೆಗೆ ಅರವತ್ತು ಮೈಲಿಯ ವೇಗದಲ್ಲಿ ಹೊರಟರೂ ತಲುಪಲು ಅರ್ಧ ಘಂಟೆ ಬೇಕು. ತಾನು ತಲುಪುವ ತನಕ ಈಗ ಉಂಟಾಗಿರುವ ಪರಿಸ್ಥಿತಿಯನ್ನು ಹದ್ದುಬಸ್ತಿನಲ್ಲಿಡಲು ಯಾರಾದರೂ backup ಬೇಕು ಎಂದುಕೊಂಡ.

ಮನಸ್ಸಿನಲ್ಲಿ ಮೂಡಿ ಬಂದವನು ಆಪದ್ಭಾಂಧವ ಮೈಕ್ !

ಅವನ ನಂಬರ್ ಮನದಲ್ಲಿ ಅಚ್ಚೊತ್ತಿದಂತೆ ಇರುವುದರಿಂದ, ಗಾಡಿಯನ್ನು ಓಡಿಸುತ್ತಲೇ, ಕರೆ ಮಾಡಿದ. ಒಂದು ... ಎರಡು ... ಮೂರು ರಿಂಗಾಯಿತು. ಮೈಕ್’ನ ಸುಳಿವೇ ಇಲ್ಲ. ಮತ್ತೆರಡು ರಿಂಗಾದಂತೆ ಲೈನ್ ಕಟ್ ಮಾಡಿ, ಪ್ರತಾಪ ನಿಟ್ಟುಸಿರು ಬಿಟ್ಟ. ಯಾಕೋ ಎಡವಟ್ಟಾಯಿತು. ಸಮಯ ಏಳೂವರೆ. ಜಾನ್’ಗೆ ಕರೆ ಮಾಡಲು ಯೋಚಿಸಿದವನು ಸುಮ್ಮನಾದ. ಅವನು ಇಂದು ರಜೆ ಹಾಕಿದ್ದ.

ಸಂದೇಶ ಯಾರಿಂದ ಬಂದಿದ್ದು ಎಂದು ಮತ್ತೊಮ್ಮೆ ನೋಡಿದ. ’ಹೂಲಿಯೋ’ ಕಳಿಸಿದ್ದ ಸಂದೇಶವದು. ಅವನಿಗೆ ಕರೆ ಮಾಡುವುದೂ ಒಂದೇ ಸುಮ್ಮನಿರುವುದೂ ಒಂದೇ. ಅವನದು ಕೆಲಸಕ್ಕಿಂತ ಚರ್ಚೆ ಜಾಸ್ತಿ.ಆಗಲೇ ಅರ್ಧ ದಾರಿ ಬಂದಾಗಿತ್ತು. ಗಾಡಿಯಂತೂ ಮುಂದೆ ಸಾಗುತ್ತಿತ್ತು. ನನಗೆ ಅವಸರವಿರಬಹುದು ಆದರೆ ರಸ್ತೆಯಲ್ಲಿನ ಇತರೆ ಕಾರು ಚಾಲಕರಿಗೆ ಅರ್ಜಂಟ್ ಇರಬೇಕಿಲ್ಲವಲ್ಲಾ ? ಮನದಲ್ಲೇ, ನಿಧಾನವಾಗಿ ಚಲಿಸುತ್ತಿದ್ದ ಕಾರುಗಳನ್ನು ಬೈದುಕೊಳ್ಳುತ್ತಲ್ಲೇ, ಮುಂದೆ ಹೋಗುತ್ತಿದ್ದ. ಇದ್ದದ್ದು ಎರಡೇ ಲೇನ್. ಎಡಗಡೆ ಲೇನಿನಲ್ಲಿ ಸಾಲಾಗಿ ಮೆರವಣಿಗೆಯಂತೆ ಕಾರುಗಳು ಸಾಗುತ್ತಿದ್ದರೆ, ಅವನೆದುರಿನ ಕಾರು ಸಾವಧಾನವಾಗಿ ಸಾಗುತ್ತಿತ್ತು. ಸಮಯ ಸಿಕ್ಕ ಕೂಡಲೆ ಲೇನ್ ಬದಲಾಯಿಸಿ, ನಿಧಾನವಾಗಿ ಸಾಗುತ್ತಿದ್ದ ಕಾರಿನ ಚಾಲಕನ ಕಡೆ ತೀವ್ರ ದೃಷ್ಟಿ ಬೀರಲು ಹೋದವನು, ಹಾಗೇ ಸುಮ್ಮನಾದ.

ಸುಮಾರು ಎಪ್ಪತ್ತು ವರ್ಷದ ಮುದುಕ ! ’ಎಷ್ಟೊ ಬಾರಿ ಅಂದುಕೊಳ್ಳುತ್ತೇನೆ, ಈ ನಿಧಾನವಾಗಿ ಚಲಿಸುವ ಕಾರಿನ ಚಾಲಕರ ಮೇಲೆ ಸಿಟ್ಟಾಗಬಾರದು ಎಂದು. ಮರೆತೇಹೋಗುತ್ತೆ. ಈಗಲೂ ಆಗಿದ್ದು ಹಾಗೆ’ ಎಂದು ಅವನು ಯೋಚಿಸುವಷ್ಟರಲ್ಲಿ, ಫೋನ್ ರಿಂಗಾಯಿತು. ಆಲೋಚನೆಗಳಿಗೆ ಕಡಿವಾಣ ಬಿತ್ತು.

ಯಾರು ಕರೆ ಮಾಡಿದ್ದು ಎಂದು ನೋಡಿದ. ಮೈಕ್ ! ತಕ್ಷಣ ಕರೆಯನ್ನು ಸ್ವೀಕರಿಸಿ ’ಹಲೋ ಮೈಕ್’ ಎಂದ. ಧೂಮಪಾನಕ್ಕೆ ಹೋಗುವ ಮುನ್ನ ತನ್ನ ಮೊಬೈಲನ್ನು ಮರೆತು ಹೋಗಿದ್ದರಿಂದ ಇವನು ಮಾಡಿದ ಕರೆ ಸ್ವೀಕರಿಸಲಾಗಲಿಲ್ಲವಂತೆ. ಸೂಕ್ಷ್ಮವಾಗಿ ಪರಿಸ್ಥಿತಿಯನ್ನು ಅವನಿಗೆ ವಿವರಿಸಿದ ಪ್ರತಾಪ.

ಸದ್ಯಕ್ಕೆ ನೆಮ್ಮದಿ. ಮತ್ತೊಮ್ಮೆ ಕರೆ ಬಂತು. ಯಾರೆಂದು ನೋಡಿದ. ’ಹೂಲಿಯೋ’ !! ಇಷ್ಟವಿಲ್ಲದಿದ್ದರೂ ಕರೆ ಸ್ವೀಕರಿಸಿ ’ಹಲೋ’ ಎಂದ. ಎರಡು ನಿಮಿಷಗಳ ಕಾಲ ಹೇಳಿದ್ದನ್ನೇ ಹೇಳಿದ ಮೇಲೆ ಒಲ್ಲದ ಮನಸ್ಸಿನಿಂದ ಫೋನ್ ಇಟ್ಟ ಹೂಲಿಯೋ. ಕೆದಕಲು ಹೆಚ್ಚು ವಿಷಯ ಇರಲಿಲ್ಲ ಎಂಬುದಕ್ಕೆ ಅವನಿಗೆ ಬೇಸರ. ಮೊದಲ ವರದಿ ಆಯ್ತು. ಇನ್ನೆಷ್ಟು ಬಾರಿ ಇವನ ಕರೆ ಸ್ವೀಕರಿಸಬೇಕೋ ಇಂದು ಗೊತ್ತಿಲ್ಲ !

ಯಾಕೋ ಎಲ್ಲರ ಕಾರೂ ನಿಧಾನವಾಗಲು ತೊಡಗಿತು. ಸ್ವಲ್ಪ ದೂರಕ್ಕೆ ಕಣ್ಣು ಹಾಯಿಸಿ ನೋಡಿ ’ಥತ್’ ಎಂದುಕೊಂಡ. ತಾನಿದ್ದ ಲೇನ್’ನಲ್ಲಿ ಏನೋ ಅಪಘಾತವಾಗಿತ್ತು. ಎಲ್ಲರೂ ಇನ್ನೊಂದು ಲೇನ್’ಗೆ ನುಸುಳುತ್ತಿದ್ದರು. ಎರಡು-ಮೂರು ಪೋಲೀಸ್ ಕಾರ್’ಗಳೂ ಇದ್ದುದರಿಂದ ಬಹಳ ಎಚ್ಚರಿಕೆಯಿಂದ ನುಸುಳುತ್ತ, ಏನಾಯ್ತು ಎಂದು ನೋಡುವ ಸಂಭ್ರಮ ಬೇರೆ. ಇವನೂ ಸಮಯ ಬಂದಾಗ ಹಾಗೇ ನುಸುಲಿದ. ಏನು ಅದೃಷ್ಟ !! ಅವನ ಮುಂದೆ ಮತ್ತದೇ ಮದುಕನೋರ್ವ ನೆಡೆಸುತ್ತಿದ್ದ ನಿಧಾನಸ್ತ ಕಾರು !!

ಅಂತೂ ಇಂತೂ ಸನ್ನಿವೇಶದ ಸ್ಥಳಕ್ಕೆ ತಲುಪುವಷ್ಟರಲ್ಲಿ ಗಂಟೆ ಎಂಟೂ ಕಾಲಾಗಿತ್ತು. ಮೈಕ್ ಹಾಗೂ ನಮ್ಮ ಮೇಲಧಿಕಾರಿ ಇಬ್ಬರೂ ಅಲ್ಲೇ ಇದ್ದರು. ಜೀವವಿಲ್ಲದೆ ಗೋಡಿಗೊರಗಿ ಕುಳ್ಳರಿಸಿದ ’ಕ್ಲಾರಾ’ಳನ್ನು ನೋಡುತ್ತಿದ್ದರು !! ರೂಮಿನಲ್ಲಿ ಸ್ವಲ್ಪ ಧೂಳು ಇದ್ದುದರಿಂದ ಕ್ಲಾರಾಳನ್ನು ಎಳೆದಾಡಿದ ಗುರುತು ಎದ್ದು ಕಾಣುತಿತ್ತು !!!

ಎಲ್ಲರ ಮುಖಗಳೂ ಗಂಭೀರವಾಗಿದ್ದವು. ತನಗೆ ಎಷ್ಟು ಘಂಟೆಗೆ ಕರೆ ಬಂದಿದ್ದು, ತಾನೇನು ಮಾಡಿದೆ ಎಂಬ ವರದಿ ಸೂಕ್ಷ್ಮವಾಗಿ ತಿಳಿಸಿದ ಪ್ರತಾಪ.

ಮುಂದಿನ ಅರ್ಧ ಘಂಟೆ ತಪಾಸಣೆಯಲ್ಲಿ ಬ್ಯುಸಿ. ಹಾಗಾಗಿರಬಹುದು, ಹೀಗಾಗಿರಬಹುದು ಎಂಬ ಸಮಾಲೋಚನೆಗಳು. ಗೋಡೆಗೆ ನೇತು ಹಾಕಲಾಗಿದ್ದ ಬಿಳೀ ಬೋರ್ಡ್ ತುಂಬಾ ಸನ್ನಿವೇಶಗಳ ಊಹಾಪೋಹಗಳೇ ತುಂಬಿತ್ತು. ತಪಾಸಣೆಗಿಂತ ನಮ್ಮ ಮೇಲಧಿಕಾರಿಗೆ ವಿವರಣೆ ಕೊಡುವುದೇ ದೊಡ್ಡ ಕೆಲಸವಾಗಿತ್ತು. ಇದರ ಮಧ್ಯೆ ಹೂಲಿಯೋ’ನಿಂದ ಕರೆ ಬೇರೆ. ಮತ್ಯಾವುದೋ ಕಾಲ್ ಬಂತು ಎಂದು ಹೇಳಿ ನಮ್ಮ ಬಾಸ್ ಆಕಡೆ ಹೋದ ಮೇಲೆ, ಪ್ರತಾಪ ಹಾಗೂ ಮೈಕ್ ಚಕನೆ ಚಕನೆ ಕೆಲಸ ಮುಗಿಸಿ ವರದಿ ಸಮೇತ ಹೊರಟರು.

Server Support Technicians ಆದ ಪ್ರತಾಪ ಹಾಗೂ ಮೈಕ್ ಇವರುಗಳ ವರದಿ ಹೀಗಿತ್ತು "ಸರ್ವರ್ ಕಂಟ್ರೋಲ್ ರೂಮಿನಿಂದ ಹೂಲಿಯೋ’ಗೆ ಯೂನಿಕ್ಸ್ ಸರ್ವರ್ ’ಕ್ಲಾರ’ ಇಂದ 'Messaging Application Shutdown' ಆಗಲಿದೆ ಎಂಬ ಪೇಜ್ Application Monitoring System ನಿಂದ ಬಂತು. ಅದನ್ನು ಯಥಾವತ್ತಾಗಿ ಪ್ರತಾಪನಿಗೆ ಕಳಿಸಿದ್ದ. ಮೈಕ್’ಗೆ ಹೆಚ್ಚಾಗಿ ಯೂನಿಕ್ಸ್ ಜ್ಞ್ನಾನ ಇಲ್ಲದಿದ್ದುದರಿಂದ ಪ್ರತಾಪ ಬರುವವರೆಗೂ ಕಾಯಬೇಕಿತ್ತು. ಯಾವುದೋ ಒಂದು corrupted email message, ಸರ್ವರ್ ಮೂಲಕ ಹಾದು ಹೋಗುವಾಗ, ಮುಂದೆ ಆಗಬಹುದಾದ ಅನಾಹುತವನ್ನು ತಪ್ಪಿಸಲು, Messaging Application ತಂತಾನೇ shutdown ಆಗಿತ್ತು. ಮೆಸೇಜ್ ಅನ್ನು ಸರಿ ಪಡಿಸಿ Application Reset ಮಾಡಿದರೆ ಎಲ್ಲ ಸರಿಯಾಗುತ್ತದೆ. ETA 30 mins "

ಪ್ರತಾಪನ ಮೇಲಧಿಕಾರಿ ಅಂದರೆ ಪ್ರಾಜಕ್ಟ್ ಮೇನೇಜರ್ ಮುಖದಲ್ಲಿ ಸ್ವಲ್ಪ ಮಂದಹಾಸ ಮೂಡಿ ಬಂತು.

ಪ್ರಾತಾಪ್ ಆಫೀಸಿಗೆ ಸೇರುವ ತನಕ, ತನ್ನ ಮೇನೇಜರ್’ಗೆ ತಾನು ಚೆಕ್ ಏನೋ ಮಾಡುತ್ತಿದ್ದೇನೆಂದು ತೋರಿಸಿಕೊಳ್ಳಲು ಸರ್ವರ್’ಅನ್ನು ಬೇಕಿಲ್ಲದಿದ್ದರೂ ಆಕಡೆ ಈ ಕಡೆ ಓಡಾಡಿಸಿ ವೈರಿಂಗ್ ನೋಡುತ್ತಿದ್ದ ಮೈಕ್. ಇನ್ನೊಮ್ಮೆ ಓಡುತ್ತಿದ ಸರ್ವರ್’ಅನ್ನು ಮುಟ್ಟಬೇಡ ಎಂದು ಪ್ರತಾಪ್ ಮೈಕ್’ಗೆ ಸೂಕ್ಷ್ಮವಾಗಿ ಹೇಳಿದ್ದು ಬೇರೆ ವಿಚಾರ.

No comments:

Post a Comment