Saturday, December 19, 2009

ಮೀಟಿಂಗ್ Crashers

ಸಲಾಹಿ ದಂಪತಿಗಳು ಇತ್ತೀಚೆಗೆ ಭಾರತದ ಪ್ರಧಾನಿ ಹಾಗೂ ಅಮೇರಿಕದ ರಾಷ್ಟ್ರಪತಿ’ಯವರ ಸಭೆಗೆ ಹೋಗಿ (ನುಗ್ಗಿ) ಬಂದರು. ನನಗೆ ತಿಳಿದ ಮಟ್ಟಿಗೆ ಅವರು ಮಾಡಿದ್ದು ಇಷ್ಟೇ ! ಹೋದರು, ಫೋಟೋ ತೆಗೆಸಿಕೊಂಡರು, ಹೊರ ಬಂದರು, ವದನಪುಸ್ತಕ’ದಲ್ಲಿ ಫೋಟೋಗಳನ್ನು ಹಾಕಿದರು .... ಮುಂದೆ ನೆಡೆದದ್ದು ಚರಿತ್ರೆ ....

ಎಲ್ಲ ಸಂದರ್ಶನಗಳಲ್ಲೂ ಇವರು, ತಾವು ಮೀಟಿಂಗ್ Crashers ಅಲ್ಲ ಅಂತ ಹೇಳ್ತಾ ಬಂದಿದ್ದಾರೆ ... ಮೀಟಿಂಗ್’ಗೆ ಹೋಗಿ, ಇದ್ದು, ಬಂದ ಮಾತ್ರಕ್ಕೆ ಅದು ಕ್ರಾಶ್ ಅಲ್ಲ ... ಅವರ ಇರುವಿಕೇ ಒಂದು ಕ್ರಾಶ್ ... ರವಿಚಂದ್ರನ್ ಸಿನಿಮಾಗಳಲ್ಲಿ ತೋರಿಸುವಂತೆ ಧ್ವಂಸ ಮಾಡಿದರೇ ಕ್ರಾಶ್ ಅಲ್ಲ ...

Crashers ಅಂತ ಯಾಕೆ ಕರೆದೆ ಅಂದರೆ, ಇವರುಗಳು ಒಂದು ತರಹ ಹಿಂಸಾತ್ಮಕ ವ್ಯಕ್ತಿಗಳು ... ಚೂರಿ ತೆಗೆದುಕೊಂಡು ಚುಚ್ಚಿದರೆ ಮಾತ್ರ ಹಿಂಸೆ ಅಂತೇನಲ್ಲ ...

ಬಿಟ್ಬಿಡು ಗುರೂ.. ಕೊರೀ ಬೇಡಾ... ರಕ್ತ ಬರ್ತಿದೇ ಅಂದಿರಾ ... ಬಿಡಲ್ಲ... ಮುಖ್ಯ ವಿಚಾರಕ್ಕೆ ಬರ್ತೀನಿ ... ಇಂದಿನ ವಿಚಾರ ಮೀಟಿಂಗ್’ನಲ್ಲಿರೋ ಇಂತಹ ಕ್ರಾಶರ್ಸ್ ಬಗ್ಗೆ ...

ಕೆಲವೆಲ್ಲ ನನಗೆ ಸರಿ ಹೋಗೋಲ್ಲ !! ಏನು ಸರಿ ಹೋಗೋಲ್ಲ ಅಂದ್ರಾ? ಕೇಳಿ ..

ನಾನೊಮ್ಮೆ ಯಾವುದೋ ಹೋಟೆಲ್ಲಿನಲ್ಲಿ ನೆಡೆದ ಮೀಟಿಂಗ್’ಗೆ ಹೋಗಿದ್ದೆ. ನನ್ನಂತಹ ಕೇಳುಗರು, ಅಲ್ಲಲ್ಲೇ ಹಾಕಿದ್ದ ಗುಂಡಗಿನ ಟೇಬಲ್’ನ ಚೇರುಗಳನ್ನು ಅಲಂಕರಿಸಿದ್ದೆವು. ಬೆಳಗಿನಿಂದ ಊಟದ ಸಮಯ ಬರುವವರೆಗೂ ಭಯಂಕರ ಕಸಿವಿಸಿ. ಯಾಕೆ ಅಂದರೆ, ಟೇಬಲ್ ಮೇಲೆ ಹಾಕಿದ್ದ ಬಿಳೀ ವಸ್ತ್ರದ ಒಂದು ಭಾಗ ಇಸ್ತ್ರಿ ಆಗಿರಲಿಲ್ಲ. ಮುದುರು ಮುದುರಾಗಿತ್ತು. ಆ ವಸ್ತ್ರವು ಎಲ್ಲ ಕಡೆ ನೀಟಾಗಿ ಇದ್ದರೂ ಒಂದೆಡೆ ಮಾತ್ರ ಹೀಗಿತ್ತು. ಅದೂ ನಾನು ಕುಳಿತ ಕಡೆ ಮಾತ್ರ. ಥತ್! ಬಟ್ಟೆ ತೆಗೆದುಕೊಂಡು ಹೋಗಿ ಇಸ್ತ್ರಿ ಮಾಡಿಬಿಡೋಣ ಎನ್ನುವಷ್ಟು ಕಸಿವಿಸಿ.

ಊಟದ ಸಮಯಕ್ಕೆ, ಬೇರೆಡೆ ಖಾಲಿ ಇದ್ದ ಮತ್ತೊಂದು ಚೇರನ್ನು ಹುಡುಕಿ ಕುಳಿತುಕೊಂಡೆ. ವಸ್ತ್ರ ಲಕ್ಷಣವಾಗಿತ್ತು, ಆದರೆ ಅಲ್ಲೇ ಮೂಲೆಯಲ್ಲಿ ಇನ್ನೂ ಶುಚಿ ಮಾಡದ ಊಟದ ಟೇಬಲ್ ಇರಬೇಕೆ? ಹೋಗ್ಲಿ ಅಂತ ಅಂದುಕೊಂಡರೆ, ಸಂಜೆವರೆಗೂ ಮತ್ತೆ ಕಸಿವಿಸಿ. ಈಗೇನಾಯ್ತು ದೊಡ್ಡರೋಗ ಅಂದಿರಾ. ’ಮಜ್ಜಿಗೆ ಹುಳಿ’ಗೆ ಯಾರೋ ಫಲಕ ನೇತು ಹಾಕಿದ್ದು "ಮಜ್ಜಿಗೆ ಹುಳ" ಎಂದು. ಆ ಫಲಕ ನೋಡೀ ನೋಡೀ ಮನಸ್ಸಿಗೆ ಹಿಂಸೆ ಮಾಡಿಕೊಳ್ಳುತ್ತಿದ್ದೆ !!

ಇದಿಷ್ಟು ಪೀಠಿಕೆ ... ಆಫೀಸಿನ ಮೀಟಿಂಗ್’ಗಳಲ್ಲಿ ನನಗಾಗೋ ಹಿಂಸೆಗಳನ್ನು ಕೇಳಿ:

೧. ಎಲ್ಲರೂ ಧ್ಯಾನಾಸಕ್ತರಾಗಿ ಕುಳಿತರಲು, ನನ್ನ ಪಕ್ಕದಲ್ಲಿ ಕುಳಿತಿರುವವನು ಆಗಾಗ ತನ್ನ ಪೆನ್ನನ್ನು ಆನ್-ಆಫ್ ಮಾಡುತ್ತಿದ್ದ. ಕಿಟಿ-ಕಿಟಿ ಕಿಟಿ-ಕಿಟಿ ಕಿಟಿ-ಕಿಟಿ ...

೨. ಕೆಲವರು ಉಗುರು ಕಚ್ಚುವುದು, ಪೆನ್ ಕಚ್ಚುವುದು ಇತ್ಯಾದಿಗಳನ್ನು ಮೀಟಿಂಗ್ ನೆಡೆಯುವಾಗಲೇ ಮಾಡುವುದು .. ಬಹುಶ: ನಾನಿದ್ದಾಗ ಮಾತ್ರ ಅಂತ ಅನ್ನಿಸುತ್ತೆ !!

೩. ನಾ ಕಂಡ ಮತ್ತೊಬ್ಬರದು ಮಹಾ ವಿಶೇಷ ... ಪ್ರತಿ ಐದು ನಿಮಿಷಕ್ಕೆ ಕಿವಿಯಲ್ಲಿ ಬೆರಳ ತೂರಿಸಿ ಕೂದಲು ಕಿತ್ತುವುದು. ಅಲ್ಲಾ, ಐದು ನಿಮಿಷಕ್ಕೇ ಕೂದಲು ಮತ್ತೆ ಬೆಳೆಯುತ್ತದೆಯೇ?

೪. ಇಲ್ಲಿನ ಮೀಟಿಂಗ್’ಗಳು ನೆಡೆಯುವಾಗಲೇ ಪಾನೀಯ ಅಥವಾ ಆಹಾರ ಸೇವನೆ ಮಾಡಬಹುದು. ನನ್ನ ಟೀಮಿನ ಒಬ್ಬಾತ, ಎಲ್ಲೆಡೆ ನಿಶಬ್ದವಾಗಿರಲು ಚಿಪ್ಸ್ ತಿನ್ನುತ್ತಾನೆ .... ಕರಂ ಕರಂ ಕರಂ .... ಚಿತ್ರ ಹಿಂಸೆ .... ಮೈ ಪರಚಿಕೊಳ್ಳುವಂತೆ ಆಗುತ್ತೆ, ನನಗೆ...

೫. ಬಹಳ ವರ್ಷಗಳ ಮುನ್ನ ಒಬ್ಬಾತನ ವಿಶೇಷ ಗುಣ ಕಂಡು ದಂಗುಬಡಿದು ಹೋಗಿದ್ದೆ. ಮೀಟಿಂಗ್ ಸಮಯದಲ್ಲಿ ಹೋಟೆಲ್ಲಿನಿಂದ ಕಾಫೀ ತರಿಸಿದ್ದೆವು. ಈತ, ಲೋಟದಲ್ಲಿನ ಕಾಫೀ ಹೀರುವಾಗ ಒಂದೆರಡು ಹನಿ ಲೋಟದ ಹೊರಗೆ ಸೋರಿತು. ಎಲ್ಲಿ ಕೆಳಗೆ ಬೀಳುತ್ತೋ ಎಂದು ಥಟ್ಟನೆ ಪಿಂಗಾಣಿ ಲೋಟದ ಹೊರಭಾಗ ನೆಕ್ಕೋದೇ?

೬. ಮತ್ತೊಬ್ಬನ ವಿಚಾರ ಕೇಳಿ. ಮೀಟಿಂಗ್ ಶುರುವಾದ ಮೇಲೆ ಈತ ಒಳಗೆ ಬರುತ್ತಾನೆ. ರೂಮಿನ ಎಲ್ಲೆಡೆ ಜನ ಕುಳಿತರಲು, ಮಧ್ಯದಲ್ಲೊಂದೆಡೆ ಕುರ್ಚಿ ಎಳೆದುಕೊಂಡು ಕೂರುತ್ತಾನೆ. ನೀವು ಬ್ಯುಸಿ ಇದ್ದರೂ ಅವನ ’ಗುಡ್ ಮಾರ್ನಿಂಗ್’ ನೀವು ಕೇಳಲೇಬೇಕು. ತಿರುಗಾಲಿ ಕುರ್ಚಿಯಲ್ಲಿ ಕುಳಿತು ಆಗಾಗ ಎಲ್ಲರ ಮುಖಗಳನ್ನೂ ಒಮ್ಮೆ ನೋಡುವುದು, ಸ್ವಲ್ಪ ಹೊತ್ತು ಸುಮ್ಮನೆ ಕೂಡುವುದು, ಮತ್ತೊಮ್ಮೆ ಎಲ್ಲರ ಮುಖ ನೋಡುವುದು ಹೀಗೆ ....

೭. ಮತ್ತೊಬ್ಬನ ಕಥೆ ಕೇಳಿ. ಮೀಟಿಂಗ್’ಗೆ ಬರುವ ಮುನ್ನ ಪೆಪ್ಸಿ’ಯ ಪ್ಲಾಸ್ಟಿಕ್ ಬಾಟ್ಲಿ ಹಿಡಿದು ಬರುತ್ತಾನೆ. ಕುರ್ಚಿಯಲ್ಲಿ ಕುಳಿತು, ಮುಚ್ಚುಳ ತೆರೆದು, ಒಂದು ಸಿಪ್ ಹೀರಿ, ಮುಚ್ಚುಳ ಮುಚ್ಚಿ, ಬಾಟ್ಲಿ ಪಕ್ಕಕ್ಕೆ ಇರಿಸಿ, ಕೈ ಒರೆಸಿಕೊಂಡು, ಬಾಯಿ ಒರೆಸಿಕೊಂಡು, ಬಾಯಿಗೆ ಕೈ ಅಡ್ಡ ಹಿಡಿದು ಮೆಲ್ಲಗೆ ತೇಗಿ, ಮತ್ತೆ ಬಾಟ್ಲಿ ತೆಗೆದುಕೊಂಡು, ಮುಚ್ಚುಳ ತೆರೆದು, ಒಂದು ಸಿಪ್ ಹೀರಿ, ಮುಚ್ಚುಳ ಮುಚ್ಚಿ, ಬಾಟ್ಲಿ ಪಕ್ಕಕ್ಕೆ ಇರಿಸಿ, ಕೈ ಒರೆಸಿಕೊಂಡು, ಬಾಯಿ ಒರೆಸಿಕೊಂಡು, ಬಾಯಿಗೆ ಕೈ ಅಡ್ಡ ಹಿಡಿದು ಮೆಲ್ಲಗೆ ತೇಗಿ,ಮತ್ತೆ ಬಾಟ್ಲಿ ತೆಗೆದುಕೊಂಡು, ...... ನನ್ನನ್ನು ಹಿಡ್ಕೊಂಡ್ ಹೊಡೆಯೋಣ ಅನ್ನಿಸುತ್ತಾ ಇದೆಯಾ ? ಅಲ್ರೀ, ಎರಡು ಸಾರಿ ಓದಿದ್ದಕ್ಕೇ ನಿಮಗೆ ಹೀಗೆ ಅನ್ನಿಸಿರಬೇಕಾದರೆ, ಪ್ರತಿ ದಿನ, ಇಡೀ ಒಂದು ಲೀಟರ್ ಕುಡಿಯುವವರೆಗೂ ನನ್ನ ಗಮನವನ್ನು ಕಿತ್ತು ಸೆಳೆವಾಗ ನನಗೆ ಹೇಗೆ ಅನ್ನಿಸಿರಬೇಡ?

೮. ಈಗ ಹೇಳೋ ವಿಷಯ ನಿಮಗೆ ಬ್ಯಾಸರ ತರಿಸಿದರೆ ನನ್ನ ಪರಿಸ್ಥಿತಿಯನ್ನೂ ಒಮ್ಮೆ ಊಹಿಸಿ ಆಮೇಲೆ ಅಸಹ್ಯ ಪಟ್ಟುಕೊಳ್ಳಿ, ಆಯ್ತಾ? ನನ್ನೆದುರಿಗೆ ಕುಳಿತ ಈ ಮಹಾಶಯ, ತನ್ನ ಪೆನ್ಸಿಲ್’ನ ಹಿಂಭಾಗವನ್ನು ಕಿವಿಯಲ್ಲಿ ತೂರಿಸಿ ಓಡಾಡಿಸುತ್ತ ಆನಂದಪಡುತ್ತಿದ್ದ. ನನಗೆ ಏನೋ ನೋಟ್ ಮಾಡಿಕೊಳ್ಳುವುದಿತ್ತು. ಪೆನ್ನಿನಲ್ಲಿ ಬರೆದುಕೊಳ್ಳಹತ್ತಿದೆ. ಯಾಕೋ ಏನೋ ಬರೆಯಲೇ ಇಲ್ಲ. ಒಮ್ಮೆ ಒದರಿ ನಂತರ ಬರೆಯಲು ಪ್ರಯತ್ನ ಮಾಡಿದೆ. ನನ್ನ ಪೆನ್ ಬರೆಯಲು ಮುಷ್ಕರ ಹೂಡಿತ್ತು. ನನ್ನ ಅವಸ್ತೆ ನೋಡಿ, ಎದುರಿಗೆ ಕುಳಿತಿದ್ದ ಆ ಮಹಾಶಯ ತನ್ನ ಪೆನ್ಸಿಲ್ ಅನ್ನು ನನಗೆ ಕೊಡೋದೇ? ತೆಗೆದುಕೊಳ್ಳಲೋ ಬೇಡವೋ, ನೀವೇ ಹೇಳಿ.

ಈವರೆಗೂ ನನಗೆ ಸರಿ ಬೀಳದ ವಿಷಯಗಳ ೧% ಮಾತ್ರ ಕೇಳಿದ್ದಕ್ಕೆ ಬಹಳ ಸಂತೋಷ. ನಿಮ್ಮ ಮೀಟಿಂಗ್ ಅನುಭವಗಳನ್ನು ಹಂಚಿಕೊಳ್ಳಿ. ನೀವೂ ನನ್ನಂತೇನಾ ಎಂದು ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ ... ಯಾಕೆ ಅಂದಿರಾ? ... ನನ್ನ ಬಗ್ಗೆ ಒಂದು ದೂರು ಇದೆ ... "ಜಗತ್ತಿನಲ್ಲಿ ಇರುವವರೆಲ್ಲ ಒಂದು ಟೈಪು ಆದರೆ ನೀವೇ ಒಂದು ಟೈಪು" ಅಂತ ......


No comments:

Post a Comment