Friday, February 5, 2010

ಅಮಾವಾಸ್ಯೆಯ ಒಂದು ರಾತ್ರಿ !

ಜಮೀನ್ದಾರ ಸಿದ್ದರಾಮೇಗೌಡರು ಊರಿನ ದೊಡ್ಡ ಮನುಷ್ಯರು. ಯಾರೂ ಅವರ ಮಾತಿಗೆ ದನಿ ಎತ್ತುತ್ತಿರಲಿಲ್ಲ. ಮಾತಿನಲ್ಲಿ ಎಷ್ಟು ತೂಕವೋ ದೇಹದಲ್ಲೂ ಅಷ್ಟೇ ತೂಕ. ತಮ್ಮ ಚೇರಿನಲ್ಲಿ ಕುಳಿತು ಆಜ್ಞ್ನೆ ಹೊರಡಿಸಿದರೆಂದರೆ ಆ ಕೆಲಸ ನೆಡೆಯಿತು ಅಂತಲೇ ಅರ್ಥ. ಹೆಂಡತಿ ಶಾಂತಮ್ಮ ಹೆಸರಿಗೆ ತಕ್ಕ ಹಾಗೇ ಶಾಂತ ಸ್ವಭಾವದವರು. ಗಂಡನಿಗೆ ಎಂದೂ ಎದುರು ಆಡಿದವರಲ್ಲ. ಅದರ ಪ್ರಮೇಯವೇ ಇರಲಿಲ್ಲ ಬಿಡಿ

ಏನಿದ್ದರೇನು ಮಕ್ಕಳಿಲ್ಲ ಎಂಬ ಕೊರಗು ಅವರಿಗೆ ಇದ್ದೇ ಇತ್ತು. ಮನೆಯ ಕೆಲಸದಾಳು ಊರಿನಲ್ಲಿ ಯಾವಾಗಲೋ ಒಮ್ಮೆ ಈ ಮಾತು ಬಂದಾಗ "ಸದ್ಯ ಒಳ್ಳೇದಾಯ್ತು" ಎಂದಷ್ಟೇ ನುಡಿದು ಸುಮ್ಮನಾಗಿದ್ದ. ಇದಾದ ಎರಡು ದಿನದಲ್ಲೇ ಅವನ ಬಾಯಿ ನಿಂತು, ಏನೇನೋ ಆಗಿ ಕಣ್ಮರೆಯಾಗಿ ಹೋದ. ಈ ವಿಷಯ ಅರಿತು ಜಮೀನ್ದಾರರು ಮಮ್ಮಲ ಮರುಗಿದರು. ಅವನ ಸಂಸಾರಕ್ಕೆ ಒಂದಷ್ಟು ದುಡ್ಡು ಕೊಟ್ಟು "ಸುಮ್ಮನೆ ಜನರ ಬಾಯಿಗೆ ಬೀಳುವುದು ಏಕೆ? ನೀವುಗಳು ಬೇರೆಲ್ಲಾದರೂ ಬದುಕಿಕೊಳ್ಳಿ" ಎಂದು ಬೇರೆ ಊರಿಗೇ ಕಳಿಸಿಕೊಟ್ಟು, ಜೀವನದ ವ್ಯವಸ್ಥೆ ಮಾಡಿಕೊಟ್ಟಿದ್ದರು. ಒಳ್ಳೆಯ ಜನರ ಬಗ್ಗೆ ಅಡ್ಡ ಮಾತನಾಡಿದ ಅವನಿಗೆ ಸರಿಯಾದ ಶಾಸ್ತಿಯಾಯಿತು ಎಂದರಿತು ಜನ ಆ ವಿಷಯದ ಬಗ್ಗೆ ಮಾತನಾಡುವ ಗೋಜಿಗೇ ಹೋಗುತ್ತಿರಲಿಲ್ಲ. ಪಟ್ಟಣದಲ್ಲಿ ಅಲ್ಪ ಸ್ವಲ್ಪ ಓದಿಕೊಂಡು ಬಂದಿದ್ದ ಸೋಮನಿಗೆ ಆ ಕೆಲಸ ಸಿಕ್ಕಿತ್ತು. ಸ್ವಲ್ಪ ಓದು ಬರಹ ಬಲ್ಲವನಾದ್ದರಿಂದ ಹೊರಗಿನ ಕೆಲಸಗಳಿಗೂ ಉಪಯೋಗಕ್ಕೆ ಬರುತ್ತಿದ್ದ.

ಹೀಗೆ ಒಂದು ಅಮಾವಾಸ್ಯೆ ರಾತ್ರಿ ಪರ ಊರಿನಲ್ಲೇನೋ ಕೆಲಸ ಮುಗಿಸಿಕೊಂಡು ತನ್ನೂರಿಗೆ ವಾಪಸ್ಸು ಬರುತ್ತಿದ್ದ ಸೋಮ. ಬಹಳ ತಡವಾಗಿತ್ತು. ಗ್ರಹಚಾರಕ್ಕೆ, ಮಾರ್ಗ ಮಧ್ಯದಲ್ಲಿ ಗಾಡಿ ಸುಮ್ಮನೆ ಹಾಗೇ ಕೆಟ್ಟು ನಿಂತಿತು. ಮೊನ್ನೆ ತಾನೇ ರಿಪೇರಿಯಾಗಿ ಬಂದಿದೆ. ಟ್ಯಾಂಕಿನಲ್ಲಿ ಎಣ್ಣೆ ಇದ್ದರೂ ಇದ್ಯಾಕೆ ಕೆಡ್ತು ಎಂದು ಯೋಚಿಸತೊಡಗಿದ ಸೋಮ. ಓಬೀರಾಯನ ಕಾಲದ ಈ ಗಾಡಿ ಬಿಟ್ಟು ಬೇರೆ ಗಾಡಿ ಕೊಳ್ಳಬೇಕು ಅನ್ನೋ ಯೋಚನೆ ಬಹಳ ದಿನದಿಂದ ಇದ್ದಿದ್ದು, ಈಗ ಬಲವಾಯ್ತು.

ಪಟ್ಟಣದ ಹಾದಿಯ ರೋಡಿನಲ್ಲಿ ಹೀಗಾಗಿದ್ದಿದ್ದರೆ ಬರುವ ಯಾವುದಾದರೂ ಗಾಡಿಯವರನ್ನು ಬೇಡಿ ಹೇಗೋ ಮನೆ ಸೇರಿಕೊಳ್ಳಬಹುದಿತ್ತು. ಇದೋ ಎರಡು ಊರಿನ ಮಧ್ಯೆಯ ಕಚ್ಚಾ ರಸ್ತೆ. ಗಾಡಿ ನೂಕಿಕೊಂಡೇ ಸ್ವಲ್ಪ ದೂರ ಹೋದ ಸೋಮ. ಆ ಕಡೆ ಸ್ವಲ್ಪ ದೂರದಲ್ಲೊಂದು ಕಾರು !! ಬೆಳಿಗ್ಗೆ ನರಿ ಮುಖ ನೋಡಿರಬೇಕು ನಾನು ಎಂದುಕೊಳ್ಳುತ್ತ ಸ್ವಲ್ಪ ಹತ್ತಿರ ಹೋದರೆ ಅದು ಜಮೀನ್ದಾರರ ಕಾರು ಎಂದು ಅರಿವಾಯ್ತು.

ಅದೂ ಸರಿಯೇ ಅನ್ನಿ. ಇಂತಹ ಕಾರು ಅವರ ಬಳಿ ಅಲ್ಲದೇ ಇನ್ಯಾರ ಬಳಿ ಇರುತ್ತೆ ಈ ಊರಿನಲ್ಲಿ? ಈ ಕೆಟ್ಟಿರೋ ಗಾಡಿ ಇಲ್ಲೇ ಹಾಕಿ ಅವರೊಂದಿಗೇ ಮನೆಗೆ ಹೋದರಾಯ್ತು ಎಂದು ಅಂದುಕೊಳ್ಳುತ್ತಿರುವಾಗಲೇ ಥಟ್ಟನೆ ಮನಕೆ ಬಂದ ಆಲೋಚನೆ ಅವನನ್ನು ಅಲ್ಲೇ ನಿಲ್ಲುವಂತೆ ಮಾಡಿತು.

ದಿನವೂ ಒಂಬತ್ತಕ್ಕೆಲ್ಲ ಮಲಗೋ ಧಣಿ, ನಮ್ ಜಾಮೀನ್ದಾರರಿಗೆ ಎರಡು ಊರಿನ ಮಧ್ಯೆಯ ಈ ರಸ್ತೆಯಲ್ಲಿ ಅದೂ ಈ ಸರಿರಾತ್ರಿಯಲ್ಲೇನು ಕೆಲಸ ???
ತನ್ನ ಗಾಡಿಯನ್ನು ಅಲ್ಲೇ ಪೊದೆಯಲ್ಲಿ ತೂರಿಸಿ ಮೆಲ್ಲಗೆ ಕಾರಿನ ಬಳಿ ನೆಡೆದ ಸೋಮ. ಆಕಡೆ ಈ ಕಡೆ ನೋಡಿ ಯಾರೂ ಇಲ್ಲವೆಂದು ಖಾತ್ರಿಪಡಿಸಿಕೊಂಡು ಕಾರಿನ ಕಿಟಕಿಯಲ್ಲಿ ಬಗ್ಗಿ ನೋಡಿದ. ಮೊದಲೇ ಕತ್ತಲು, ಏನು ಕಂಡೀತು? ತಾನು ’ಇರಲಿ’ ಎಂದು ತಂದಿದ್ದ ಸಣ್ಣ ಟಾರ್ಚಿನ ಬೆಳಕಿನಲ್ಲಿ ನೋಡಿದಾಗ ಕಂಡ ದೃಶ್ಯ ಅವನನ್ನು ಬೆಚ್ಚಿ ಬೀಳಿಸಿತು. ಸೀಟಿನ ಮೇಲೆ ಸಿಗರೇಟಿನ ಪ್ಯಾಕೆಟ್ !!

ಯಜಮಾನರು ಸಿಗರೇಟ್ ಸೇದೋದನ್ನ ನಾನೆಂದೂ ಕಂಡಿಲ್ಲ ! ಇದೇನು ಹೊಸ ಅವತಾರ? ಅಥವಾ ಅವರ ಕಾರನ್ನು ಆ ಕೆಂಪು ಕಣ್ಣಿನ ಡ್ರೈವರ್ ಏನಾದ್ರೂ ತಂದಿದ್ದಾನಾ? ಕಾರಿನಲ್ಲಿ ಯಾರೂ ಇದ್ದಂತೆ ಕಾಣಲಿಲ್ಲ. ಕಾರಿನ ಇನ್ನೊಂದು ಬದಿ ಬಂದು ನೋಡಿದಾಗ ಸಣ್ಣ ಕಾಲುದಾರಿ ಗೋಚರಿಸಿತು. ಕಾರನ್ನು ಇಲ್ಲಿ ನಿಲ್ಲಿಸಿ ಈ ಕಡೆ ನೆಡೆದುಕೊಂಡು ಹೋಗಿರಬಹುದು ಎಂದು ಅನ್ನಿಸಿ, ಅದೇ ದಾರಿಯಲ್ಲಿ ತಾನೂ ನೆಡೆದ ಸೋಮ.

ಶಬ್ದ ಬರದಂತೆ ಹೆಜ್ಜೆ ಹಾಕುತ್ತ ಸ್ವಲ್ಪ ದೂರ ನೆಡೆದಂತೆ ಯಾರೋ ಇಬ್ಬರು ಮಾತನಾಡುತ್ತ ನಿಂತಿದ್ದಂತೆ ಕಂಡಿತು. ಗಕ್ಕನೆ ಹಾಗೇ ಮರಕ್ಕೆ ಒರಗಿ ನಿಂತ. ಮರದ ಮೇಲೆ ಸದ್ದಾಯ್ತು. ಕಾಲ ಕೆಳಗಿನ ಎಲೆ ಕೂಡ ಸದ್ದಾಯಿತು. ಆ ಇಬ್ಬರೂ ತಿರುಗಿ ನೋಡಿದರು. ಸ್ವಲ್ಪ ಹೊತ್ತು ಹಾಗೇ ನೋಡುತ್ತಿದ್ದವರು ಏನೂ ಇಲ್ಲ ಎನ್ನಿಸಿತೋ ಏನೋ ಇಬ್ಬರೂ ಹೊರಟರು. ಸ್ವಲ್ಪ ದೂರ ಹೋಗುತ್ತಲೇ ಸೋಮನೂ ಅವರನ್ನು ಹಿಂಬಾಲಿಸಿದ.

ಮುಂದೆ ಹೋಗುತ್ತಿದ್ದ ಇಬ್ಬರು, ಒಂದು ಪಾಳು ಬಿದ್ದ ಮನೆಯ ಮುಂದೆ ನಿಂತರು. ’ಭೂತ ಬಂಗಲೆ’ ಅದೂ ಇದೂ ಅಂತೆಲ್ಲ ಈ ಮನೆಯ ಬಗ್ಗೆ ಜನರು ಆಡಿಕೊಳ್ಳುತ್ತಿದರೂ ಸೋಮ ಅದನ್ನು ನಂಬಿರಲಿಲ್ಲ. ಮೊದಲೇ ಭೂತ-ಪ್ರೇತಗಳ ಬಗ್ಗೆ ಅವನಿಗೆ ನಂಬಿಕೆ ಇಲ್ಲ. ತನ್ನ ನಂಬಿಕೆ ಈಗ ನಿಜ ಅನ್ನಿಸಿತು ಸೋಮನಿಗೆ. ಭೂತದ ಹೆಸರಿನಲ್ಲಿ ಮನುಷ್ಯರು ಮಾಡುತ್ತಿರುವ ಮೋಸ ಇರಬೇಕು. ವಿಷಯ ತಿಳಿದುಕೊಂಡು ಜಮೀನ್ದಾರರಿಗೆ ನಾಳೇನೇ ಒಪ್ಪಿಸಬೇಕು.

ಆ ಇಬ್ಬರು, ಭೂತ ಬಂಗಲೆಯ ಬಾಗಿಲು ತೆರೆದುಕೊಂಡು ಹೋದರು. ಹಿಂದೆಯೇ ಬಾಗಿಲೂ ಮುಚ್ಚಿಕೊಂಡಿತು. ಸೋಮ ಸ್ವಲ್ಪ ಹೊತ್ತು ತಡೆದು ತಾನೂ ಆ ಮನೆಯ ಕಡೆ ನೆಡೆದ. ಬಾಗಿಲ ಬಳಿ ಬಂದು ನಿಂತ.

ಮೆಲ್ಲಗೆ ಬಾಗಿಲು ನೂಕಿದ ! ಚಿಲುಕ ಹಾಕಿರಲಿಲ್ಲ !! ಕಿರ್ ಎಂದು ಬಾಗಿಲು ತೆರೆದುಕೊಂಡಿತು. ಥತ್! ಕೆಲಸ ಕೆಟ್ಟಿತು ... ಶಬ್ದ ಆಗಬಾರದು ಅಂದುಕೊಂಡ್ರೆ ಎಂದು ಮನದಲ್ಲಿ ಬೈದುಕೊಳ್ಳುತ್ತಲೇ, ಅಡಿ ಇರಿಸಿದ ...

ಒಳಗೋ ಗಮಟು ವಾಸನೆ.

ಹಾಗೇ ಒಳ ನೆಡೆದ. ಎರಡು ಹೆಜ್ಜೆ ಇಡುತ್ತಿದ್ದಂತೆಯೇ ಬಾಗಿಲು ಮುಚ್ಚಿಕೊಂಡಿತು.

ಮೊದಲ ಬಾರಿಗೆ ಭೀತನಾದ ಸೋಮ. ಟಾರ್ಚ್ ತೆಗೆಯಲು ಜೇಬಿಗೆ ಕೈ ಹಾಕಿದ. ಖಾಲೀ !!!!! ಈಗ ತಾನೇ ಕಾರಿನ ಬಳಿ ಉಪಯೋಗಿಸಿದ್ದೆನಲ್ಲ? ಎಲ್ಲಿ ಹೋಯ್ತು ??

ಎಲ್ಲೆಲ್ಲೂ ಕತ್ತಲು. ಒಳಗೆ ಹೋಗಲೋ? ಹೊರಗೆ ಓಡಿಬಿಡಲೋ? ಮನಸ್ಸು ಹೊಯ್ದಾಟದಲ್ಲಿರುವಾಗಲೇ ದನಿಯೊಂದು ಮೂಡಿಬಂತು "ನಿನ್ನ ಟಾರ್ಚ್ ಸಿಗಲಿಲ್ವಾ ಸೋಮಾ?". ಅರ್ರೇ ! ಜಮೀನ್ದಾರರ ದನಿ !! "ಆಗ್ಲಿಂದಾನೂ ಇವನೇ ಧಣಿ ನಮ್ ಹಿಂದೆ ಬರ್ತಿದ್ದೋನು" ಅನ್ನೋ ಮತ್ತೊಂದು ದನಿ. ಓ! ಇದು ಆ ಕೆಂಪು ಕಣ್ಣಿನ ಡ್ರೈವರ್ ದನಿ.

ಹೃದಯವೇ ಬಾಯಿಗೆ ಬಂದ ಹಾಗೆ ಆಯ್ತು ಸೋಮನಿಗೆ. ಹರ ಕೊಲ್ಲಲ್ ಪರ ಕಾಯ್ವನೇ? ಏನೋ ಹೇಳಲು ಬಾಯಿ ತೆರೆದ. ಆಗ ...

---

"ಓ! ಏನ್ರಮ್ಮಾ? ಎಲ್ಲರದೂ ಊಟ ಆಯ್ತಾ? ಹೋಗ್ರೋ ಮಾಕ್ಳಾ ... ಈಗ ಎಲ್ರೂ ಮನೆಗೆ ಹೋಗಿ ಮಲಗಿಕೊಳ್ಳಿ ... ಕಥೆ ನಾಳೆ ಹೇಳ್ತೀನಿ"
ಮೂಲೆ ಮನೆ ರಿಟೈರ್ಡ್ ಶಾಲಾ ಮೇಷ್ಟ್ರು ಇಷ್ಟು ಹೊತ್ತೂ ಹೇಳ್ತಿದ್ದ ಕಥೆಯನ್ನ ಬಾಯಿ ಬಿಟ್ಟುಕೊಂಡು ಕೇಳ್ತಿದ್ರು ಮಕ್ಕಳು. ಅವರಿಗೇ ಅರಿವಿಲ್ಲದಂತೆ ಅವರ ಅಮ್ಮಂದಿರು ಇಡುತ್ತಿದ್ದ ಅನ್ನದ ತುತ್ತುಗಳನ್ನು ಒಂದರ ಮೇಲೊಂದರಂತೆ ಸ್ವಹಾ ಮಾಡುತ್ತಿದ್ದರು.

ಏನೂ ರಗಳೆ ಇಲ್ಲದೆ ಮಕ್ಕಳ ಊಟ ಆಯ್ತು ಅನ್ನೋ ಸಮಾಧಾನ ಅಮ್ಮಂದಿರಿಗೆ. ಸಂಜೆ ಹೊತ್ತು ಸ್ವಲ್ಪ ಟೈಮ್ ಪಾಸ್ ಮೇಷ್ಟ್ರಿಗೆ. ಆದರೆ ಮೇಷ್ಟರ ಪತ್ನಿ ಮಾತ್ರ "ಮಕ್ಕಳಿಗೆ ರಾಮಾಯಣವೋ ಮಹಾಭಾರತವೋ ಹೇಳೋದು ಬಿಟ್ಟು ಇಂಥಾ ಕಥೆಗಳನ್ನೇ ಹೇಳೋದೂ? ಅದೂ ಯಾವಾಗಲೂ ಇದೇ ಅರ್ಧ ಕಥೆ? ಮಕ್ಕಳು ಹೆದರಿಕೊಂಡು ಬಟ್ಟೆ ಒದ್ದೆ ಮಾಡಿಕೊಳ್ಳೋಲ್ವೇ ?" ಅಂತ ಮೂದಲಿಸಿದರು. "ಹಂಗಾದ್ರೂ ಹಾಸಿಗೆಯ ಬಟ್ಟೆ ಒಗೀತಾರೆ ಬಿಡು ಈ ಅಮ್ಮಣ್ಣೀರು. ಕಥೆ ಪೂರ್ತಿ ಹೇಳೋಕೆ ಮುಂದೆ ಎನಾಗುತ್ತೆ ಅಂತ ನನಗೇನು ಗೊತ್ತು? " ಅಂತ ಬೊಚ್ಚು ಬಾಯಿ ಬಿಟ್ಕೊಂಡು ನಗುತ್ತ ಒಳ ನೆಡೆದರು ಮೇಷ್ಟ್ರು.

No comments:

Post a Comment