Friday, February 5, 2010

ಜೀವನದಲ್ಲಿ ದುಡ್ಡೇ ಎಲ್ಲ ಅಲ್ಲ!

ಕೆಲವರಿಗೆ ಎಷ್ಟು ಬಡ್ಕೊಂಡ್ರೂ ಅರ್ಥವೇ ಆಗೋಲ್ಲ !!

ಶುದ್ದ ಭಾನುವಾರ ಬೆಳಿಗ್ಗೆ ಕಾಫೀ ಹೀರುತ್ತ ಕಿಟಿಕಿಯಿಂದ ಹೊರಗೆ ಕಣ್ಣು ಹಾಯಿಸಿದಾಕ್ಷಣ ಕಣ್ಣಿಗೆ ಬಿದ್ದದ್ದು ಸುಬ್ಬಣ್ಣನ ಬರುವಿಕೆ ! ಕನಿಷ್ಟ ಇನ್ನೊಂದು ಘಂಟೆ ಅವನಿಗೆ ಉಪದೇಶ ಮಾಡಬೇಕು.

"ಸುಬ್ಬೂ, ಜೀವನದಲ್ಲಿ ದುಡ್ಡೇ ಎಲ್ಲ ಅಲ್ಲ !" ಅನ್ನೋ ಮಾತನ್ನ ನಾನು ಈ ಸುಬ್ಬಣ್ಣನಿಗೆ ಎಷ್ಟು ಸಾರಿ ಹೇಳಿದ್ದೀನೋ ಗೊತ್ತಿಲ್ಲ. ಹಲವಾರು ಉದಾಹರಣೆ ಕೊಟ್ಟು ಹೇಳಿದ್ದೀನಿ ಕೂಡ. ನಿಮ್ಮೊಂದಿಗೂ ಹಂಚಿಕೊಳ್ಳುತ್ತೇನೆ ನೋಡಿ ...

ಎಷ್ಟು ದುಡ್ಡಿದ್ದರೇನು ಹೋದ ಮಾನ ತಿರುಗಿ ಬರುವುದೇ ಟೈಗರ್ ವುಡ್ಸ್’ಗೆ ? ಇವತ್ತು ಜನರಿಗೆ ಮುಖ ತೋರಿಸಲಾಗದೆ ಎಲ್ಲಿ ಅಡಗಿ ಕುಳಿತಿದ್ದಾನೋ ಏನೋ? ಇವನ ಹಿಂದೆ ಬಿದ್ದಿದ್ದ ಜಾಹೀರಾತು ಕಂಪನಿಯವರೆಲ್ಲ ಇಂದು ಅವನ ಕೈ ಬಿಟ್ಟು ದೂರ ಹೋಗಿದ್ದಾರೆ.

ಯಾವುದೋ ಸ್ಕೀಮಿನಲ್ಲಿ ಐವತ್ತು ಬಿಲಿಯನ್ ಡಾಲರ್ ನುಂಗಿ ಹಾಕಿದ ಮ್ಯಾಡಾಫ್ ಇಂದು ಜೈಲಿನಲ್ಲಿ ಬಿದ್ದಿದ್ದಾನೆ. ಛಾಪ ಕಾಗದ ಹಗರಣದ ತೆಲಗಿ, ಶೇರು ಪೇಟೆ ಹಗರಣದ ಹರ್ಷದ್ ಮೆಹತ, ಹಣ ದುಪ್ಪಟ್ಟು ಮಾಡುವ ವಿನಿವಿಂಕ್ ಶಾಸ್ತ್ರಿ, ಹೀಗೆ ಉದಾಹರಣೆ ಕೊಡ್ತಾ ಹೋದರೆ ಲೇಖನ ಪೂರ್ತಿ ಸಹಸ್ರ ನಾಮಾವಳಿ ಆಗುತ್ತದೆಯೇ ವಿನಹ ಬೇರೇನೂ ಉಪಯೋಗವಿಲ್ಲ. ’ದುಡ್ಡೇ ಎಲ್ಲ’ ಎಂಬಂತೆ ಇನ್ನೊಬ್ಬರಿಗೆ ನಾಮಾ ಹಾಕಿ ಅವರಿಗೂ ಬೋಳಿಸಿ, ತಾವೂ ಅನುಭವಿಸದೆ ಜೈಲಿನಲ್ಲಿ ಬಿದ್ದು ಕೊನೆಗೆ ಯಾರಿಗೂ ಬೇಡದಂತೆ ನೆಗೆದುಬಿದ್ದು ಹೋಗಿರುವ ಹಲವಾರು ಮಂದಿ ಇದ್ದಾರೆ.

ಸುಬ್ಬನಿಗೆ ಹೇಳಿದ್ದೆ ’ನೋಡು ಸುಬ್ಬು, ಎಷ್ಟೇ ದುಡ್ಡಿದ್ದರೂ ಹೋದ ಮನುಷ್ಯನ ಜೀವ ತಿರುಗಿ ಬರುತ್ತಾ? ನೀನು ದುಡ್ಡಿನ ಪಾರ್ಟಿ ಇರಬಹುದು ಆದರೆ ಹೋದ ನಿಮ್ಮ ಅಪ್ಪ-ಅಮ್ಮನ ಜೀವ ಕೊಡೋಕ್ಕೆ ಸಾಧ್ಯಾನಾ? ಅಮ್ಮನ ಪ್ರೀತಿ, ವಾತ್ಸಲ್ಯ, ಅಪ್ಪನ ಜವಾಬ್ದಾರಿ, ಮಗುವಿನ ಮುಗ್ದತೆ, ಹಕ್ಕಿಗಳ ಚಿಲಿಪಿಲಿ ಇವನ್ನೆಲ್ಲ ಅನುಭವಿಸಲು ಸಾಧ್ಯವಷ್ಟೇ ಆದರೆ ಕೊಂಡುಕೊಳ್ಳಲು ಸಾಧ್ಯವಿಲ್ಲಪ್ಪಾ...’

ಭಾವನೆಗಳನ್ನು ಕೊಳ್ಳಲು ಸಾಧ್ಯವಿಲ್ಲ ನಿಜ ಆದರೆ ಭಾವನೆಗಳನ್ನು ಉಂಟು ಮಾಡಬಹುದು ಅನ್ನೋದನ್ನ ತಿಳಿದುಕೋ. ಅರ್ಥವಾಗಲಿಲ್ವಾ?

ವರಮಹಾಶಯನೊಬ್ಬ ಮದುವೆಯ ಹಿಂದಿನ ದಿನ ತನಗೆ ಹತ್ತು ಲಕ್ಷ ವರದಕ್ಷಿಣೆ ಕೊಟ್ಟರೇನೇ ತಾಳಿ ಕಟ್ಟೋದು ಅಂದಾಗ ಅಥವಾ ಮಾತುಕತೆ ಸಮಯದಲ್ಲಿ ಸಿಂಪಲ್ ಆಗಿ ಮದುವೆ ಮಾಡಿಕೊಡಿ ಸಾಕು, ವರದಕ್ಷಿಣೆ ಬೇಡ ಅಂದಾಗ ಭಾವನಾ ಸ್ಪಂದನವನ್ನೇ ಸೃಷ್ಟಿ ಮಾಡಬಹುದು. ಇರಲಿ ವಿಷಯಾಂತರ ಬೇಡ. ದುಡ್ಡು ಕೊಟ್ಟಂತೆಲ್ಲಾ ಭಾವನೆಗಳು ಉಂಟಾಗುತ್ತದೆ ಅಂತ ಸಿನಿಮಾ ನಟ-ನಟಿಯರ ಅಂಬೋಣ. ಅದು ಬೇರೆ ವಿಷಯ.

ಸುಬ್ಬು ಮೇಲೆ ಹೇಳಿದ್ದಕ್ಕೆಲ್ಲ ಹೂಗುಟ್ಟಿದ್ದ ಅಂದ ಮಾತ್ರಕ್ಕೆ ಅರ್ಥವಾಗಿದೆ ಅಂತ ಅಲ್ಲ. ಇನ್ನೊಂದು ವಿಷಯ ಹೇಳಿದೆ.

ಸುಬ್ಬೂ, ಈ SMS ಕಥೆ ನಿನಗೆ ಗೊತ್ತಿರಬಹುದು. ಪ್ರತಿದಿನ ಹೊತ್ತಾಗಿ ಮನೆಗೆ ಬರುತ್ತಿದ್ದ ತಂದೆಗೆ ಸಣ್ಣ ವಯಸ್ಸಿನ ಮಗ ಕೇಳುತ್ತಾನೆ "ಅಪ್ಪ, ನಿಮಗೆ ಒಂದು ಘಂಟೆಗೆ ಎಷ್ಟು ದುಡ್ಡು ಕೊಡ್ತಾರೆ" ಅಂತ. ಅಧಿಕಪ್ರಸಂಗತನದ ಪ್ರಶ್ನೆಗೆ ಸಿಡಿಮಿಡಿಗೊಂಡ ತಂದೆ "ಅವೆಲ್ಲ ನಿನಗೇಕೆ" ಎಂದು ಕೇಳಿ ನಂತರ ತನ್ನ ಒಂದು ಘಂಟೆಯ ಕಮಾಯಿಯನ್ನು ತಿಳಿಸುತ್ತಾನೆ. ಹುಡುಗನು ತನ್ನಲ್ಲಿದ್ದ ದುಡ್ಡನ್ನು ಎಣಿಸಿದಾಗ ಅವನಲ್ಲಿ ಅಷ್ಟು ದುಡ್ಡು ಇಲ್ಲ ಎಂದು ತಿಳಿದು, ಉಳಿದ ದುಡ್ಡನ್ನು ತಂದೆಯಲ್ಲಿ ಸಾಲ ಕೇಳುತ್ತಾನೆ. ಮಗನು ಏತಕ್ಕಾಗಿ ದುಡ್ಡು ಕೇಳುತ್ತಿದ್ದಾನೆಂದು ಅರ್ಥವಾಗದೆ ತಂದೆ ಅವನನ್ನು ಬೈದು ಕಳಿಸುತ್ತಾನೆ. ಸ್ವಲ್ಪ ಹೊತ್ತಾದ ಮೇಲೆ ಮರುಕಗೊಂಡು, ಎಂದೂ ಹೀಗೆ ದುಡ್ಡು ಕೇಳದ ಮಗನ ಬಳಿ ಹೋಗಿ ಅವನು ಕೇಳಿದಷ್ಟು ದುಡ್ಡನ್ನು ಕೊಟ್ಟು "ನಿನಗೇಕೆ ಬೇಕಿತ್ತು" ಎಂದು ಕೇಳುತ್ತಾನೆ. ಸಂತಸಗೊಂಡ ಹುಡುಗ ಅಷ್ಟೂ ದುಡ್ಡನ್ನು ಸೇರಿಸಿ ಅಪ್ಪನಿಗೇ ಕೊಟ್ಟು, ’ನಾಳೆ ನನ್ನೊಂದಿಗೆ ಒಂದು ಘಂಟೆ ಕಳೆಯುವಿರಾ’ ಎಂದು ಕೇಳುತ್ತಾನೆ". ದುಡ್ಡೇ ಎಲ್ಲ ಎಂದು ತಿಳಿದಿದ್ದ ಅಪ್ಪನಿಗೆ ಮಗ ಪಾಠ ಕಲಿಸಿದ್ದ.

ಈ ಕಥೆ ಕೇಳಿ ಸುಬ್ಬಣ್ಣ ಮರುಕಗೊಂಡ .... ಆದರೆ ತಿದ್ದಿಕೊಳ್ಳಲಿಲ್ಲ !

ಇದಿಷ್ಟೂ ಹಳೆ ಸುದ್ದಿ. ಸುಬ್ಬೂಗೆ ಇನ್ನೂ ಜ್ಞ್ನಾನೋದಯವಾಗಿಲ್ಲ. ಬೆಳಿಗ್ಗೆಯೇ ವಕ್ಕರಿಸಲಿದ್ದಾನೆ! ನನ್ನ ರವಿವಾರ ಹಂತಕ !!

ಬಂದು ಕುಳಿತ ಅವನಿಗೆ ಒಂದು ಲೋಟ ಕಾಫೀ ಕೊಟ್ಟ ಮೇಲೆ ಮತ್ತೆ ನನ್ನ ಟೇಪನ್ನು ರೀವೈಂಡ್ ಮಾಡಿದೆ. ಏನೂ ಉಪಯೋಗವಾಗಲಿಲ್ಲ.

ಇನ್ನೂ ಕೆಲವು ನೀತಿ ಪಾಠಗಳನ್ನು ಹೇಳಿದೆ "ನೋಡು ಸುಬ್ಬೂ, ದುಡ್ಡೇ ಎಲ್ಲ ಅಲ್ಲ. ಸ್ನೇಹಿತರು, ಅಣ್ಣ-ತಮ್ಮಂದಿರು, ಬಂಧುಗಳ ಮಧ್ಯೆ ಬರುವ ಹಣದ ವ್ಯವಹಾರ ದ್ವೇಷಕ್ಕೂ ತಿರುಗುತ್ತದೆ. " ಎನ್ನುತ್ತ ಫುಲ್ ಶರಟಿನ ತೋಳು ಮಡಿಸಿದೆ. ಬಿಸಿ ಕಾಫೀ ಕುಡಿದಿದ್ದರಿಂದ ಸ್ವಲ್ಪ ಸೆಖೆಯಾದಂತಾಗಿ ನಾನು ತೋಳು ಮಡಿಸಿದ್ದು !

ಸುಬ್ಬು ಸ್ವಲ್ಪ ಅಧೀರನಾದಂತೆ ನನಗೆ ತೋರಿತು.

ಸುಬ್ಬು ಹಿಂಜರಿಯುತ್ತಲೇ ಕೇಳಿದ "ಅಲ್ಲ ಕಣೋ, ಅವತ್ತು ಸಿಕ್ಕಾಪಟ್ಟೆ ಅರ್ಜಂಟ್ ಇದೆ .. ಹತ್ತು ಸಾವಿರ ಕೊಟ್ಟಿರು ಅಂತ ನೀನು ಕೇಳಿದ ತಕ್ಷಣ ನಾನು ಕೊಡಲಿಲ್ವಾ? ನನ್ನ ದುಡ್ಡನ್ನ ತಾನೇ ನಾನು ವಾಪಸ್ಸು ಕೇಳ್ತಿರೋದೂ?" ಅಂದ !!

ನನಗೆ ಬೇರೆ ದಾರಿ ಇರಲಿಲ್ಲ ... ಮತ್ತೊಮ್ಮೆ ಹೇಳಿದೆ "ಸುಬ್ಬೂ, ನಿನ್ನ ಸಂಕಟ ನನಗೆ ಅರ್ಥವಾಗುತ್ತೆ. ಜೀವನದಲ್ಲಿ ದುಡ್ಡೇ ಎಲ್ಲ ಅಲ್ಲ ಕಣೋ !"

No comments:

Post a Comment