Friday, February 5, 2010

ಇಂದೂ ಕಾಡಿದೆ ಅಮ್ಮನ ನೆನಪು !

ಇಂದೂ ಕಾಡಿದೆ ಅಮ್ಮನ ನೆನಪು

ಇಂದು ನನ್ನ ಹುಟ್ಟುಹಬ್ಬ. ಕೇಕ್ ಕತ್ತರಿಸುವ ವಯಸ್ಸಲ್ಲ ... ನನಗಾಗಿ ಜನರು ಸಿಹಿ ಹಂಚುವಷ್ಟು ದೊಡ್ಡ ಮನುಷ್ಯನೂ ನಾನಲ್ಲ. ಹೊಟ್ಟೆಪಾಡಿಗಾಗಿ ಹೊರದೇಶದಲ್ಲಿ ನೆಲೆಸಿರುವ ಭಾರತೀಯ ನಾನು. ಶವರ್’ನಿಂದ ಧುಮ್ಮಿಕ್ಕುತ್ತ ನೀರು ತಲೆಯ ಮೇಲೆ ಬೀಳುತ್ತಿದ್ದಂತೆ, ಮನಸ್ಸು ನೆನಪುಗಳ ಸಾಗರಕ್ಕೆ ಧುಮುಕಿತು.

**

ಅಂದೂ, ನನ್ನ ಹುಟ್ಟುಹಬ್ಬದ ದಿನ.

ಭಾರತದಲ್ಲೀಗ ಸಂಜೆಯ ಸಮಯ. ಬೆಳಗಿನ ಕಾಫೀ ಹೀರುತ್ತ ಕರೆ ಮಾಡಿದೆ. ಅಮ್ಮನ ದನಿ ಮೂಡಿ ಬಂತು. ನನ್ನ ಕರೆಗೇ ಕಾದಿದ್ದರೆಂದು ತಿಳಿದಿತ್ತು. ಲವಲವಿಕೆಯ ದನಿ ಕೇಳಿ ಸಂತಸವಾಯ್ತು. ಫೋನಿನಲ್ಲೇ ಆಶೀರ್ವಾದ ಪಡೆದೆ. ಉಭಯ ಕುಶಲೋಪರಿಯ ಮಾತುಕಥೆಗಳಾದ ಮೇಲೆ ’ಸದ್ಯಕ್ಕೆ ಬರಲು ಆಗುವುದಿಲ್ಲ ಅಲ್ಲವೇ?’ ಎಂದು ಕೇಳಿದರು.

ಕಳೆದ ವರ್ಷ ಹೋಗಿ ಬಂದಿದ್ದೆ. ಇಲ್ಲಿ ನನ್ನ ಕೆಲಸ ಕಾರ್ಯದ ಬಗ್ಗೆ ಚೆನ್ನಾಗಿ ಅರಿವಿದ್ದ ಅಮ್ಮ, ಸಾಮಾನ್ಯವಾಗಿ ಕೇಳದ ಈ ಪ್ರಶ್ನೆ ಧಿಡೀರನೆ ಇಂದೇಕೆ ಕೇಳಿದರು ಎಂದು ಅರ್ಥವಾಗಲಿಲ್ಲ. ಇಂತಹ ಪ್ರಶ್ನೆಯನ್ನು ನನ್ನಂತೆ ಹೊರದೇಶದಲ್ಲಿ ನೆಲೆಸಿರುವವರೆಲ್ಲರೂ ಒಂದಲ್ಲಾ ಒಂದು ರೀತಿ ಕೇಳಿಯೇ ಇರುತ್ತಾರೆ. ಥಟ್ಟನೆ ಬೇರೇನೂ ಹೇಳಲಾಗದೆ ಇದ್ದುದರಿಂದ "ಪ್ರಯತ್ನ ಪಡುತ್ತೇನೆ" ಎಂದು ಮಾತ್ರ ಹೇಳಲು ಸಾಧ್ಯವಾಯಿತು. "ನೋಡಬೇಕು ಅನ್ನಿಸಿತು ಅದಕ್ಕೇ ಕೇಳಿದೆ. ತೊಂದರೆ ಮಾಡಿಕೊಳ್ಳಬೇಡ" ಅಂದರು.

ಹತ್ತು-ಹದಿನೈದು ನಿಮಿಷಗಳು ನೆಡೆದ ಆ ಕರೆ ... ನನ್ನ ಹುಟ್ಟುಹಬ್ಬದ ದಿನದಂದು ಮಾಡಿದ ಆ ಕರೆ.... ಅಮ್ಮನೊಡನೆ ನೆಡೆಸಿದ ಕೊನೆಯ ಸಂವಾದದ ಕರೆ ಎಂದು ನನಗೆ ಅರಿವಾಗುವುದರ ಹೊತ್ತಿಗೆ ಕಾಲ ಮಿಂಚಿತ್ತು.

"ಪ್ರಯತ್ನ ಮಾಡುತ್ತೇನೆ" ಎಂದು ನಾನು ನುಡಿದ ಮಾತುಗಳು ಆ ಸಮಯಕ್ಕೆ ಸಮಾಧಾನಕ್ಕಾಗಿ ನುಡಿದದ್ದೇ ಆದರೂ ಅಮ್ಮ ನನ್ನನ್ನು ಕರೆಸಿಕೊಂಡಿದ್ದರು. ಆದರೆ ಈ ಬಾರಿ ಸ್ವಾಗತಿಸಲು ಆ ಹೆತ್ತೊಡಲು ಇರಲಿಲ್ಲ.

ಸಾಯುವ ಕಾಲಕ್ಕೆ ಎಲ್ಲರೂ ದಶರಥರೇ?

---

ಕೆಲ ಸಮಯದಿಂದ ಅಮ್ಮನ ಆರೋಗ್ಯದಲ್ಲಿ ಏರಿಳಿತ ಇತ್ತು. ಮೂರು ದಿನಗಳಿಗೊಮ್ಮೆ ಕರೆ ಮಾಡಿ ಆರೊಗ್ಯ ವಿಚಾರಿಸುವುದು ಹೆಚ್ಚು ಕಮ್ಮಿ ಈ ನಡುವಿನ ಪರಿಪಾಠ. ಔಷದಿ-ಪಥ್ಯ ಚೆನ್ನಾಗಿ ನೆಡೆಯುತ್ತಿದೆ, ಆರೋಗ್ಯ ಸುಧಾರಿಸುತ್ತಿದೆ ಎಂದು ತಿಳಿದಾಗ ಏನೋ ನೆಮ್ಮದಿ.

ಆದರೆ, ಆರೋಗ್ಯದ ವಿಚಾರದಲ್ಲಿ ಸಂಪೂರ್ಣ ಮಾಹಿತಿ ಸಿಗದೆ ’ಎಲ್ಲ ಚೆನ್ನಾಗಿದ್ದೀವಿ’ ಎಂದೇ ಕೇಳಲ್ಪಡುವ ಈ ಪರಿ, ಹೊರದೇಶದಲ್ಲಿರುವ ಭಾರತೀಯರಿಗೆಲ್ಲ ಕಟ್ಟಿಟ್ಟಬುತ್ತಿ. ನಾನೇನೂ ಅದಕ್ಕೆ ಹೊರತಲ್ಲ.

ಮುಂದಿನ ಕೆಲದಿನಗಳಲ್ಲಿ ಮತ್ತೊಮ್ಮೆ ಕರೆ ಮಾಡಿದೆ. ಅನಾರೋಗ್ಯ ಹೆಚ್ಚಿ ಅಮ್ಮನನ್ನು ಆಸ್ಪತ್ರೆಗೆ ಸೇರಿಸಿದ್ದರು. ಈ ಹಿಂದೆ ಒಂದೆರಡು ಬಾರಿ ಹೀಗೇ ಆಗಿದ್ದರಿಂದ ಆತಂಕ ಪಡುವುದೇನೂ ಇಲ್ಲ ಎಂಬ ವಿಷಯ ತಿಳಿದು ಸದ್ಯಕ್ಕೆ ಸಮಾಧಾನ ಅನ್ನಿಸಿದರೂ, ಮನ ನುಡಿದದ್ದು ಹೃದಯ ಒಪ್ಪಲಿಲ್ಲ. ಹೋಗಿ ನೋಡಿಕೊಂಡು ಬರಬೇಕೆಂದು ಅನ್ನಿಸುತ್ತಿತ್ತು.

ಭಾನುವಾರ ಬೆಳಿಗ್ಗೆ, ಇನ್ನೂ ಹಾಸಿಗೆಯಲ್ಲಿರುವಂತೇ, ಊರಿಂದ ಕರೆ ಬಂತು. "ಸಾಧ್ಯವಾದಷ್ಟು ಬೇಗ ಹೊರಟು ಬರಲು ಸಾಧ್ಯವೇ?" ಎಂಬ ಸಂದೇಶ ಹೊತ್ತ ಆ ಕರೆ, ನಿದ್ದೆ ಹೆಂಚು ಹಾರಿ ಹೋಗುವಂತೆ ಮಾಡಿತ್ತು.

ಹಿಂದಿನ ದಿನವಿಡೀ ಕೋಮಾದಲ್ಲೇ ಇದ್ದರೆಂದು ತಿಳಿಯಿತು. ಕಾಫೀ ಪ್ರಿಯಳಾದ ಅಮ್ಮನಿಗೆ ಅಂದು ಕಾಫಿ ಬೇಕಿರಲಿಲ್ಲವಂತೆ ! ಯಾರೊಂದಿಗೂ ಮಾತು ಬೇಕಿರಲಿಲ್ಲವಂತೆ !!

ಇಹಲೋಕದ ಬಂಧನ ಕಳಚಿಕೊಂಡು ಪರಲೋಕದ ಹಾದಿ ತುಳಿಯುವಾಗ ವ್ಯಾಮೋಹ ಕಡಿಮೆಯಾಗುತ್ತದಂತೆ.

ಅಮ್ಮನ ಪ್ರಾಣ ಹೋಗುವ ಮುನ್ನ ನಾನಲ್ಲಿಗೆ ಹೋಗುವ ಸಾಧ್ಯತೆ ಎಷ್ಟು? ಇನ್ನೊಮ್ಮೆ ಮಾತನಾಡಲು ಅವಕಾಶ ದೊರಕೀತೇ?

ಮೊಬೈಲ್’ಗೆ ಕರೆ ಮಾಡಿ ಕೇಳಿದೆ. ಹೋಗುತ್ತಿರುವ ಜೀವ ತಡೆಯುವವರು ಯಾರೂ ಇಲ್ಲದಿದ್ದುದರಿಂದ, ಮೊಬೈಲನ್ನು ಸ್ಪೆಷಲ್ ವಾರ್ಡಿಗೆ ಒಯ್ಯಲು ತಡೆಯುವ ಅವಶ್ಯಕತೆ ಇಲ್ಲವೆಂದು ಡಾಕ್ಟರ್ ತಿಳಿಸಿದ್ದರು.

ನನ್ನ ಕರೆಯನ್ನು ಅಲ್ಲಿನವರು ಅಮ್ಮನ ಕಿವಿಗೆ ಹಿಡಿದರು ! ನಾನಿಲ್ಲಿಂದ ’ಅಮ್ಮಾ’ ಎಂದು ಕೂಗುತ್ತಾಲೇ ಇದ್ದೆ !!

ಕಾಲನ ಕರೆಗೆ ಓಗೊಡುತ್ತಿದ್ದ ಆ ಜೀವಕ್ಕೆ, ನನ್ನ ಕರೆ ತಿಳಿಯಲೇ ಇಲ್ಲ. ನನ್ನ ಕೂಗು ಕೇವಲ ಅರಣ್ಯರೋದನವಾಗಿತ್ತು !

ಫೋನಿನಿಂದ ಬಂದ ಕೀರಲು ದನಿ ಕೇಳಿ ನೋಡಿದರೆ Signal Faded. ಎಂತಹ ಕಾಕತಾಳೀಯ ?

ಆಗಲೇ ಮಧ್ಯಾನ್ನ ಘಂಟೆ ಹನ್ನೆರಡಾಗಿತ್ತು. ಮರುದಿನ ಹೊರಡುವುದಕ್ಕೇ ಟಿಕೆಟ್ ಬುಕ್ ಮಾಡಿಸಿದೆ. ಚೆಕ್-ಇನ್ ಮಾಡುವ ಗೋಜು ಬೇಡವೆಂದು ಒಂದು ಚಿಕ್ಕ ಸೂಟ್ ಕೇಸನ್ನು ಸಿದ್ದಪಡಿಸಿಕೊಂಡೆ. ಮರುದಿನ ಆಫೀಸಿಗೆ ಹೋಗಿ ವಿಷಯ ತಿಳಿಸಿ, ರಜೆ ಹಾಕಿ ಮಧ್ಯಾನ್ನ ಹೊರಟೆ. ಸಂಜೆ ಆರಕ್ಕೆ ವಿಮಾನ ಬಾನಿಗೆ ಚಿಮ್ಮಿತು.

ಬೆಂಗಳೂರಿನಲ್ಲಿಳಿದು ಬಂಧು ಜನ ತಂದಿದ್ದ ಕಾರಿನಲ್ಲಿ ಮನೆ ತಲುಪಿದೆ. ಎಲ್ಲೆಡೆ ನೀರವತೆ ಹರಡಿತ್ತು. ನನ್ನ ಮನ ಕೂಗಿ ಕೂಗಿ ಹೇಳುತ್ತಿದ್ದರೂ ಕೊನೆ ಆಸೆಯಿಂದ ಕೇಳಿದೆ ’ಈಗಲೇ ಆಸ್ಪತ್ರೆಗೆ ಹೋಗಿ ನೋಡಿಕೊಂಡು ಬರೋಣವೇ’ ಎಂದು

"ಈಗ ಹೋದರೂ ಪ್ರಯೋಜನವಿಲ್ಲ. ಬಾಡಿ ಎಂಟು ಘಂಟೆಗೆ ಕೊಡ್ತಾರೆ" ಎಂಬ ವಿಷಯ ತಿಳಿಯಿತು!

ಅಮ್ಮ ನಮ್ಮೆಲ್ಲರನ್ನೂ ಬಿಟ್ಟು ದೂರವಾಗಿ ಹಲವಾರು ಘಂಟೆಗಳೇ ಕಳೆದುಹೋಗಿದ್ದವು!!

ಮನಸ್ಸಿಗೆ ಬಹಳ ಹಿಂಸೆಯಾಯಿತು. ಉಸಿರಾಡುವ ತನಕ ಇರುವ ಐಡೆಂಟಿಟಿ ಉಸಿರು ನಿಂತ ತಕ್ಷಣ ಬರೀ ’ದೇಹ’, ’ಬಾಡಿ’ ಅಂತ ಕರೆಸಿಕೊಳ್ಳುತ್ತಲ್ಲ ಎಂದು.

’ನೋಡಬೇಕು’ ಅಂತ ಬಯಸಿದೆಯೆಲ್ಲಮ್ಮ .. ನಾನಂತೂ ಬಂದೆ. ಆದರೆ ನಮ್ಮನ್ನು ಬಿಟ್ಟು ನೀ ಹೋದೆ ಎಲ್ಲಿಗೆ?

**

ಶಿರದಿಂದ ಹರಿವ ನೀರು, ನನ್ನ ಕಣ್ಣೀರನ್ನೂ ತನ್ನೊಡನೆ ಸೇರಿಸಿಕೊಂಡು ಬಚ್ಚಲಿನತ್ತ ಧಾವಿಸಿತು.

ಜೀವವಿದ್ದಿದ್ದರೆ, ’ಇದೆಷ್ಟನೇ ಬಾರಿಯೋ ನನ್ನೊಡಲಲ್ಲಿ ನಿನ್ನ ಕಣ್ಣೀರು ಸೇರುತ್ತಿರುವುದು’ ಎಂಬ ವಿಷಾದ ನಗೆಯೊಂದನು ಬೀರುತ್ತಿತ್ತೇನೋ ಈ ಬಚ್ಚಲು?

No comments:

Post a Comment