Saturday, December 12, 2009

ಎಲ್ಲಿ ಹೋದರು ನನ್ನವರು ?

ನಮ್ಮದು ದೊಡ್ಡ ಕುಟುಂಬ. ಒಟ್ಟು ಸಂಸಾರ. ಹುಟ್ಟಿನಿಂದಲೂ ಒಟ್ಟಿಗೆ ಇದ್ದೇವೆ. ಆಟ, ಊಟ, ಏಳೋದೂ, ಬೀಳೋದೂ ಎಲ್ಲ ನಮ್ಮ ನಮ್ಮಲ್ಲೇ. ಬಹಳಷ್ಟು ಸಾರಿ ನಮ್ಮನ್ನು ಕಂಡು, ಅ ಸುಖ ಇಲ್ಲದವರು, ಕರುಬಿದ್ದೇ ಹೆಚ್ಚು.

ಕಾಲಕಾಲಕೆ ಹಿಗ್ಗುತ್ತಾ ಕುಗ್ಗುತ್ತಾ ನಮ್ಮ ಜೀವನವೂ ಸಾಗಿತ್ತು. ಪೋಷಕರ ಪಾಲನೆ ಪೋಷಣೆ ಚೆನ್ನಾಗಿಯೇ ಇದ್ದುದರಿಂದ ದಷ್ಟ ಪುಷ್ಟವಾಗೇ ಇದ್ದೆವು.

ಒಂದೇ ಸಮನೆ ಯಾರಿಗೂ ಸುಖ ಎಂಬುದು ಇರುವುದಿಲ್ಲ. ನಮ್ಮೊಳಗೂ ಕೆಲವರು ಸೇರಿ ನಮ್ಮನ್ನು ಪೀಡಿಸಿದ್ದು ಉಂಟು. ಆದರೆ ನಮ್ಮ ಮನೆ ಹಿರಿಯರು ಕಟ್ಟುನಿಟ್ಟಾಗಿ ಇದ್ದುದರಿಂದ ಹೊರಗಿನವರ ಆಟವೇನೂ ಸಾಗುತ್ತಿರಲಿಲ್ಲ ಬಿಡಿ.

ಯಾವುದೇ ಒಂದು ಸಂಸಾರ ಒಟ್ಟಾಗಿ ನಿಲ್ಲಬೇಕಾದಲ್ಲಿ ಯಜಮಾನನು ದಂಡನಾಯಕನಂತೆ ಜವಾಬ್ದಾರಿ ಹೊರಬೇಕು. ’ದಂಡ’ಕ್ಕೆ ನಾಯಕನಾಗಬಾರದು !

ಒಟ್ಟಿಗೆ ಹುಟ್ಟಿ ಬೆಳೆದ ಮಾತ್ರಕ್ಕೆ ಎಲ್ಲರ ಗುಣವೂ ಒಂದೇ ಆಗಿರುತ್ತೇನು? ಒಬ್ಬೊಬ್ಬರದು ಒಂದೊಂದು ಗುಣ. ನಮ್ಮಲ್ಲಿ ಆ ತಾರತಮ್ಯ ಬರಬಾರದು, ಕೊನೆವರೆಗೂ ಒಟ್ಟಾಗಿ ನಿಲ್ಲಬೇಕು ಎಂದು ನಾವು ಎಣಿಸಿದ್ದರೂ ಅವನ ಎಣಿಕೆಯೇ ಬೇರೆ ಅಲ್ಲವೇ?


ಗುಣ ವ್ಯತ್ಯಾಸವಾದಂತೆ ತಮ್ಮ ಬಣ್ಣ ತೋರಿದರು. ಏನು ಮಾಡಲು ಸಾಧ್ಯ ? ರೆಕ್ಕೆ ಬಲಿತ ಮೇಲೆ ಹಕ್ಕಿ ದೂರಾಗುವುದು ಪ್ರಕೃತಿ ಧರ್ಮ ತಾನೇ? ನಮ್ಮಲ್ಲಿ ದೂರಾದವರಿಗೆ ಬೇರೆಯೇ ಕಾರಣವಿತ್ತು. ದೂರಾದವರನ್ನು ಇಲ್ಲ ಎಂದು ತೋರಿಸಿಕೊಂಡು ಇನ್ನೊಬ್ಬರ ಮುಂದೆ ನಗೆಪಾಟಲಾಗುವುದು ಹೇಗೆ ಎಂದು ಮರೆಮಾಚಲು ಪ್ರಯತ್ನ ನೆಡೆಸುತ್ತಿದ್ದೆವು. ಹಾಗಾಗಿ ಉಳಿದ ನಾವುಗಳು ಸಾಧ್ಯವಾದಷ್ಟು ಒಟ್ಟಾಗಿ ನಿಂತೆವು. ಒಂದು ಮನೆಯ ಮರ್ಯಾದೆ ಪ್ರಶ್ನೆ ಇದು. ಈ ಮುನ್ನ, ಕಂಡವರೆಲ್ಲರ ಮುಂದೆ ನಾವೆಲ್ಲ ಒಂದು, ನಮ್ಮನ್ನು ಯಾರೂ ಬೇರೆ ಮಾಡಲು ಸಾಧ್ಯವಿಲ್ಲ ಎಂದೆಲ್ಲ ಕೊಚ್ಚಿಕೊಂಡಿದ್ದರ ಫಲವಿದು.


ಕಾಯಿಲೆ ಮನುಷ್ಯನಿಗಲ್ಲದೇ ಮರಕ್ಕೆ ಬರುತ್ತದೆಯೇ? ಅದೇನೋ ಗೊತ್ತಿಲ್ಲ, ಗಾದೆ ಮಾತು ಬಂದಾಗ ಮರಕ್ಕೂ ಖಾಯಿಲೆ ಬರುತ್ತದೆ ಎಂಬ ವಿಚಾರ ಅಂದಿನವರಿಗೆ ಗೊತ್ತಿರಲಿಲ್ಲವೋ ಏನೋ? ಇರಲಿ ಬಿಡಿ. ವಿಚಾರದಲ್ಲಿ ವಿಷಯಾಂತರ ಬೇಡ ! ನಾನೀಗ ಹೇಳಹೊರಟಿದ್ದು ನಮ್ಮ ಕುಟುಂಬದಲ್ಲಿನ ಖಾಯಿಲೆ ಬಗ್ಗೆ.


ಅದೇನಾಯ್ತೋ ಏನೋ ಗೊತ್ತಿಲ್ಲ .. ಮೂವತ್ತು ವರ್ಷಕ್ಕೇ ನಮ್ಮ ಮನೆಯಲ್ಲಿ ಲತ್ತೆ ಬಡಿದು ಜನ ಕಡಿಮೆ ಆಗಲು ತೊಡಗಿದರು .. ಹುಟ್ಟಿದ ಮೇಲೆ ಸಾವು ಅನಿವಾರ್ಯ, ನಿಜ. ಆದರೆ ಇಷ್ಟು ಚಿಕ್ಕ ವಯಸ್ಸಿಗೇ? ನನ್ನ ಬುದ್ದಿಗೆ ನನಗೇ ನಗು ಬಂತು. ಅಲ್ಲಾ, ಸಾವಿಗೂ ವಯಸ್ಸು ಅಂಬೋದು ಇದೆಯೇ? ಹೋಗ್ಲಿ ಬಿಡಿ, ಬುದ್ದಿ ಇದ್ದೋರು ಅದರ ಬಗ್ಗೆ ಯೋಚನೆ ಮಾಡಲಿ, ನನಗೇನು? ಇರಲಿ ಸಾವು ನೋವಿಗೆ ಸ್ಪಂದಿಸಲೇ ಬೇಕಲ್ಲವೇ? ಒಬ್ಬೊಬ್ಬರೇ ತರಗೆಲೆಗಳಂತೆ ಉರುಳಿದರು.


ದಟ್ಟವಾಗಿದ್ದ ನಮ್ಮ ಸಂಸಾರಕ್ಕೆ ಯಾವ ಕಾಕ ದೃಷ್ಟಿ ಬಿತ್ತೋ ಏನೋ, ಈಗ ಬಹಳ ಶಿಥಿಲವಾಗಿದೆ. ಗಿಜಿ ಗಿಜಿ ಎಂದಿದ್ದ ಮನೆಯಿಂದು ಭಣಗುಟ್ಟುತ್ತಿದೆ. ಓಡಾಡಲೂ ಸ್ಥಳವಿಲ್ಲದ ನೆಲದಲ್ಲಿಂದು ಆಟೋ ಓಡಿಸುವಷ್ಟು ಜಾಗ ಇದೆ ಲೇವಡಿ ಮಾಡಿದರು ಕಂಡವರು.


ಉಳಿದುಕೊಂಡ ನಾವು ಕೆಲವರು ದೊಡ್ಡ ಮನೆಯಲ್ಲಿ ಎಲ್ಲೆಲ್ಲೂ ಹಂಚಿಹೋಗಿರುವುದರಿಂದ ಇದ್ದರೂ ತಿಳಿಯುತ್ತಿಲ್ಲ. ಎಷ್ಟೊ ಸಾರಿ ಒಂದೇ ಸಾಂಸಾರದವರಾದರೂ ಸಂಪರ್ಕವಿಲ್ಲದಿದ್ದರೆ ಅದು ಹಾಗೇ ಬಿಟ್ಟು ಹೋಗುತ್ತದೆ.


ಇವೆಲ್ಲ ನೆಡೆದು ಹಲವಾರು ದಿನಗಳೇ ಆದರೂ, ಕನ್ನಡಿಯಲ್ಲಿ ನನ್ನನ್ನೇ ನೋಡಿಕೊಳ್ಳುತ್ತಿರುವ ನಾನು, ಸದ್ಯಕ್ಕೆ ನೆತ್ತಿಯ ಮೇಲೆ ನಿಂತಿರುವ ಏಕ ಮಾತ್ರ "ಕೂದಲು" ನಾನು, ಯೋಚಿಸುತ್ತಿರುವುದು ಇಷ್ಟೇ .. ಬಕ್ಕ ತಲೆಯ ನನ್ನೆಜಮಾನನೇ, ಎಂದುದುರುವೆನೋ ನಿನ್ನ ನುಣುಪಾದ ತಲೆಯಿಂದ ನಾನು ?

No comments:

Post a Comment