Sunday, March 28, 2010

ಹೀಗೊಂದು ತಲೆಮಾರಿನ ಕಥೆ !

ಅಂದು: ಸದಾಶಿವರಾಯರು ಮನೆಯವರ ವಿರೋಧ ಲೆಕ್ಕಿಸದೆ ಪರಜಾತಿ ಯುವತಿಯನ್ನು ’ಪ್ರೇಮಿಸಿ’ ಮದುವೆಯಾಗಿ ದಿಟ್ಟ ಹೆಜ್ಜೆಯನ್ನಿಡುತ್ತ ಎಲ್ಲರ ಹುಬ್ಬೇರುವಂತೆ ಮಾಡಿದ್ದರು !


ನಂತರ: ಸದಾಶಿವರಾಯರ ಮಗ ಹೊರದೇಶದಲ್ಲಿದ್ದುಕೊಂಡು ಭಾರತದಲ್ಲಿ ’ಅಪ್ಪ-ಅಮ್ಮ ನೋಡಿದ’ ಹುಡುಗಿಯನ್ನು ಮದುವೆಯಾಗಿ ಸಹೋದ್ಯೋಗಿಗಳ ಹುಬ್ಬೇರುವಂತೆ ಮಾಡಿದ್ದರು !!

ಈಗ: ಸದಾಶಿವರಾಯರ ಮೊಮ್ಮಗ "ಹುಡುಗಿ"ಯನ್ನು ಮದುವೆಯಾಗಿ ಹಲವಾರು ಮಂದಿಯ ಹುಬ್ಬೇರುವಂತೆ ಮಾಡಿದ್ದಾನೆ !!!

ಮುಂದೆ: ಸದಾಶಿವರಾಯರ ಮರಿಮಗ "ಮದುವೆಯಾಗಿ" ಮಾತೆ ಖುಷ್ಬೂದೇವಿ’ಯವರ ಅನುಯಾಯಿಗಳ ಕೆಂಗಣ್ಣಿಗೆ ಗುರಿಯಾಗಲಿದ್ದಾನೆ !!!!

ಜೀವನದ ಆಟ

ನೆನ್ನೆ ಟೆನ್ನಿಸ್ ಆಡುತ್ತಿದ್ದಾಗ ಬ೦ದ ಯೋಚನೆ.

ಮೊದಲ ಸುತ್ತಿನ ಆಟ ಮುಗಿಸಿ ಎರಡನೇ ಸುತ್ತಿಗೆ ಇನ್ನೊ೦ದು ಬದಿಯ ಕೋರ್ಟಿಗೆ ಬಂದಾಗ, ಏನೋ ಬೇರೆಯೇ ಅನುಭವ. ಹೊಸ ಜಗತ್ತಿಗೆ ಬಂದ ಹಾಗೆ. ನನ್ನದಾಗಿರದಿದ್ದ ಊರಿಗೆ ಬಂದ ಹಾಗೆ. ಇನ್ನೊ೦ದು ಬದಿಗೆ ಬ೦ದು ಹೊ೦ದಿಕೊಳುವ ಮುನ್ನ ಎರಡಾಟ ಸೋತಿದ್ದೆ . ಹಾಗೆ ಹೊ೦ದಿಕೊ೦ಡು ಆಟ ಮು೦ದುವೆರಿಸಿ ಗೆದ್ದದ್ದು ಬೇರೆ ವಿಷಯ.


ಏನ ಹೇಳಲಿಕ್ಕೆ ಹೊರಟೆ ಅಂದಿರಾ ?

ತನ್ನದಾಗಿರದಿದ್ದ ಊರಿಗೆ ಬ೦ದು (ಅ೦ದರೆ ವೈವಾಹಿಕ ಜೀವನ) ಎರಡಾಟ ಸೋತ ಮಾತ್ರಕ್ಕೆ (ಇಬ್ಬರಲ್ಲಿ ಯಾಕೋ ಮನಸ್ತಾಪ ) ಹೊ೦ದಿಕೊ೦ಡು ಆಟ ಮು೦ದುವರೆಸದೆ (ಗ೦ಡು / ಹೆಣ್ಣು ಯಾರಾದರೂ ಸರಿ ) ಸೋಡಾ ಚೀಟಿ ಕೊಡೊ ಮ೦ದಿಗೆ ನೀವೇನು ಹೇಳುವಿರಿ ?


ತೀರ ವೈಯುಕ್ತಿಕವಾಗಿ ತಲೆ ಕೆಡಿಸಿಕೊಳ್ಳದೆ ಆರೋಗ್ಯಕರವಾಗಿ ಯೋಚಿಸೋಣ ...

ಯಾರಿಗೆ ಬೇಕು ಈ ಲೆಕ್ಕ ?

ಒಂದು ದಿನ ಹೀಗೆ ದಿಢೀರನೆ ಒಂದು ಯೋಚನೆ ಬಂತು. ಏನು ಅಂತೀರಾ?

ಜಗತ್ತಿನಲ್ಲಿ ಖ್ಯಾತನಾಮರ ಪ್ರತಿಮೆಗಳು ಎಷ್ಟಿವೆ ?

ತಿಳಿದವರನ್ನು ಕೇಳೋಣವೆಂದುಕೊಂಡು ಗೂಗಲಿಸಿದೆ. ನನ್ನ ಹಾಗೇ ಯಾರಿಗೋ ಕುತೂಹಲ ಹೆಚ್ಚಾಗಿ ಈ ಪ್ರಶ್ನೆ ಕೇಳಿದ್ದಕ್ಕೆ ಒಬ್ಬರು ಏನೆಂದು ಉತ್ತರಿಸಿದ್ದಾರೆ ಗೊತ್ತೆ "ಕಳೆದ ಒಂದು ಘಂಟೆಯಲ್ಲಿ ಎಷ್ಟಿದ್ದವೋ ಅದಕ್ಕಿಂತ ಹೆಚ್ಚು" ಎಂದು. ಹೆಚ್ಚು ಕಮ್ಮಿ ಬೀರಬಲ್’ನ ಕಾಗೆಗಳ ಸಂಖ್ಯೆಯ ಕಥೆಯನ್ನು ನೆನಪಿಗೆ ತರಿಸುವಂತಹ ಉತ್ತರ. ಇರಲಿ, ಒಟ್ಟಾರೆ ನನಗೆ ಅರ್ಥವಾಗಿದ್ದು, ಪ್ರತಿ ಒಂದು ಘಂಟೆಯಲ್ಲಿ ಕನಿಷ್ಟ ಒಂದು ಪ್ರತಿಮೆಯಾದರೂ ಏಳುತ್ತದೆ ಎಂದು. ನಿಜವೋ ಸುಳ್ಳೋ ಗೊತ್ತಿಲ್ಲ.

ಗೂಗಲ್ ದೇವನಿಗೆ ತಿಳಿದಿಲ್ಲದ ಉತ್ತರವನ್ನು ಇನ್ಯಾರಿಂದಲಾದರೂ ಪಡೆಯೋಣ ಎಂದುಕೊಂಡೆ. ಯಾರ್ಯಾರನ್ನೋ ಕೇಳಿದೆ. ಯಾರಿಗೂ ಗೊತ್ತಿಲ್ಲ. ಒಬ್ಬರು "ಅಲ್ರೀ, ತೆಂಡೂಲ್ಕರ್ ಇದುವರೆಗೂ ಎಷ್ಟು ರನ್’ಗಳು ಮಾಡಿದ್ದಾನೆ ಕೇಳಿ. ಅಂಕಿ-ಅಂಶದ ಸಮೇತ ಹೇಳಬಲ್ಲೆ. ಅದು ಬಿಟ್ಟು ..." ಮತ್ತೊಬ್ಬ ಹಿರಿಯರು "ಅಶ್ವಥ್ ಎಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ ಅಂತ ಕೇಳಿ, ಬೇಕಿದ್ರೆ ಹೇಳ್ತೀನಿ... ಆದ್ರೆ...". ಹೋಗ್ಲಿ ಬಿಡಿ... ಎರಡೂ ದೊಡ್ಡ ಸಂಖ್ಯೇನೇ ! ಸದ್ಯಕ್ಕೆ ಆ ಎರಡೂ ವಿಷಯ ಬೇಕಿಲ್ಲ.

ಅದೃಷ್ಟವಶಾತ್ ಒಬ್ಬರಿಗೆ ತಿಳಿದಿತ್ತು ... ವಾವ್ .. ಅಂದಿರಾ? ... ತಡ್ಕೊಳ್ಳಿ ... ಅವರಿಗೆ ತಿಳಿದಿದ್ದು ಉತ್ತರವಲ್ಲ! ಇಂಥವರನ್ನು ಕೇಳಿ, ಅವರಿಗೆ ಗೊತ್ತಿರಬಹುದು ಅಂತ. ಜೊತೆಗೆ, ನಿಮಗೆ ತಿಳಿದ ಮೇಲೆ ನನಗೂ ಹೇಳಿ ಅಂದರು.

ಅವರನ್ನು ಅರಸಿ ಹೋದೆ. ಇವರ ಹೇಳಿದ ಬೀದಿ ಅಂತೂ ಸಿಕ್ಕಿತು. ಮೂಲೆಯಲ್ಲಿ ಅಂಬೇಡ್ಕರ್ ಅವರ ಪ್ರತಿಮೆ ಕೂಡ ಇತ್ತು. ಯಾರನ್ನೋ ವಿಳಾಸ ಕೇಳಿದೆ. ನೇರವಾಗಿ ಹೋಗಿ. ಅಲ್ಲೊಂದು ಹಳೇ ಅಂಬಾಸಡರ್ ಕಾರ್ ನಿಂತಿರುತ್ತೆ. ಅಲ್ಲೇ ಅವರ ಮನೆ. ಅನುಮಾನ ಬಂತು ಕೇಳಿಯೇಬಿಟ್ಟೆ "ಇವತ್ತು ಆ ಕಾರ್ ಅಲ್ಲಿ ಇಲ್ದೇ ಇದ್ರೆ?". ಕೆಕ್ಕರಿಸಿ ನೋಡಿ ಹೇಳಿದರು "ನಾಲ್ಕೂ ಚಕ್ರಗಳಲ್ಲಿ ಗಾಳಿ ಇಲ್ಲದೆ, ತುಕ್ಕು ಹಿಡಿದ ಆ ಕಾರ್ ಹತ್ತು ವರ್ಷದಿಂದ್ಲೂ ಅಲ್ಲೇ ನಿಂತಿದೆ. ಈಗಲೂ ಅಲ್ಲೇ ಇರುತ್ತೆ ಅನ್ನೋ ಗ್ಯಾರಂಟಿ ಕೊಡಲೇನು?". ತೆಪ್ಪಗೆ ಜಾಗ ಖಾಲಿ ಮಾಡಿದೆ.

ಮನೆಯ ಮುಂದೆ ಬೋರ್ಡ್ ಲಗತ್ತಿಸಿದ್ದರು "ಮೂರ್ತಿ" ಅಂತ. "ಮೂರ್ತಿಗಳ ಬಗ್ಗೆ ಮೂರ್ತಿಯವರಲ್ಲಿ ಕೇಳಲು ಮೂರ್ತಿಗಳು ಅವರ ಮನೆಗೆ ಭೇಟಿ ಇತ್ತಿದ್ದರು" ಎಂಬ ಪದಸಾಲು ಎಷ್ಟು ಚೆನ್ನಾಗಿದೆ ಅಲ್ಲವೇ?

ಅವರನ್ನು ಭೇಟಿಯಾಗಿ ಇದೇ ಪ್ರಶ್ನೆ ಕೇಳಿದೆ. "ಜಗತ್ತಿನಲ್ಲಿನ ಖ್ಯಾತನಾಮರ ಪ್ರತಿಮೆಗಳು ಒಟ್ಟು ಎಷ್ಟಿವೆ? ನಿಮಗೆ ಗೊತ್ತೆ?" ಅಂತ.

ತಿಳಿದುಕೊಂಡು ಏನ್ ಮಾಡ್ತೀಯೋ ಮಂಕೇ? ಅನ್ನೋ ರೀತಿಯಲ್ಲಿ ನೋಡಿ "ನೋಡ್ತೀನಿ" ಅಂತ.

ಯಾವುದೋ ಪುಸ್ತಕ ತೆಗೆದು ಕೈಯಲ್ಲಿ ಪೆನ್ ಹಿಡಿದು ಕೇಳಿದರು "ನಿಮಗೆ ಒಟ್ಟು ಎಷ್ಟಿವೆ ಅನ್ನೋದರ ಜೊತೆಗೆ ಒಬ್ಬೊಬ್ಬ ಖ್ಯಾತ ನಾಮರ ಎಷ್ಟೆಷ್ಟು ಪ್ರತಿಮೆಗಳು ಇವೆ ಎಂದು ಬೇಕೆ?" ಎಂದು.

ಓ! ಹೌದಲ್ಲ? ಇದರ ಬಗ್ಗೆ ಯೋಚಿಸಲೇ ಇಲ್ಲ. ಗಾಂಧೀಜಿ, ಅಂಬೇಡ್ಕರ್ ಇವರ ಪ್ರತಿಮೆಗಳು ಸಿಕ್ಕಾಪಟ್ಟೆ ಇವೆ. ಹಾಗಾಗಿ ಹೇಳಿದೆ "ಗೊತ್ತಿದ್ದಲ್ಲಿ ಒಬ್ಬೊಬ್ಬರದೂ ಎಷ್ಟು ಪ್ರತಿಮೆಗಳು ಇವೆ ಎಂದೇ ತಿಳಿಸಿ" ಅಂದೆ.

ಮತ್ತೊಂದು ಪ್ರಶ್ನೆ ಬಂತು ಅವರಿಂದ "ಪ್ರತಿಮೆಗಳಲ್ಲಿ life sizeನವುಗಳು bust size ನವುಗಳೂ ಬೇರೆ ಬೇರೆ ಲೆಕ್ಕ ಬೇಕೇ?" ಎಂದು

ಓಹೋ ! ಇದು ಇನ್ನೂ ಉತ್ತಮ !! ಉದಾಹರಣೆಗೆ ಮೈಸೂರು ಮಹಾರಾಜರ ಪ್ರತಿಮೆ ಎರಡೂ ರೀತಿಯಲ್ಲಿ ಇರುತ್ತದೆ. ಇರಲಿ ಎರಡೂ ಹೇಳಿ ಎಂದೆ.

ಅವರಿಂದ ಇನ್ನೊಂದು ಪ್ರಶ್ನೆ ಬಂತು "ಖ್ಯಾತನಾಮರು ಅಂದರೆ ನಿಮಗೆ ರಾಜಕಾರಣಿಗಳು, ನಟ/ನಟಿಯರು, ಯತಿಗಳು, ಆಟಗಾರರು, ಸಾಹಿತಿಗಳು ಹೀಗೆ ಎಲ್ಲರದೂ ಬೇಕೆ?"

ಕುಳಿತಿದ್ದ ಸೀಟಿನಲ್ಲಿ ಇನ್ನೂ ಸ್ವಲ್ಪ ಮುಂದೆ ಬಂದೆ. ’ಎಷ್ಟು ಹೆಚ್ಚು ಮಾಹಿತಿ ಇದ್ರೆ ಅಷ್ಟು ಉತ್ತಮ’ ಎಂದೆ

"ಪ್ರತಿಮೆಗಳನ್ನು ಕಂಚು, ಕಲ್ಲು, ಅಮೃತಶಿಲೆ’ಗಳನ್ನು ಬಳಸಿ ಮಾಡಿರುತ್ತಾರೆ. ಎಲ್ಲ ಮಾಹಿತಿ ಬೇರೆ ಬೇರೆ ಬೇಕೇ?" ಎಂದು ಕೇಳಿದರು.

ಇದ್ಯಾಕೋ ಅತೀ ಅಯ್ತು ಅನ್ನಿಸಿದರೂ ’ಇದ್ರೆ ಸಂತೋಷ, ಕೊಡಿ’ ಎಂದೆ. ಉತ್ಸಾಹ ಕಡಿಮೆಯಾಗಲು ತೊಡಗಿತು.

ಮತ್ತೊಂದು ಪ್ರಶ್ನೆ ತೂರಿ ಬಂತು "ನಿಮಗೆ ಕುಳಿತಿರೋ ಪ್ರತಿಮೆ, ನಿಂತಿರೋ ಪ್ರತಿಮೆ, ವೀರರು ಕುದುರೆ ಮೇಲೆ ಕುಳಿತಿರೋ ಪ್ರತಿಮೆ ಹೀಗೆ ಎಲ್ಲವೂ ಬೇಕೇ?"

ಇವರು ಕೇಳ್ತಿರೋ ಪ್ರಶ್ನೆಗಳ ಸರಣಿ ನನ್ನಲ್ಲಿ ಯಾಕೋ ಅನುಮಾನ ತರಿಸುತ್ತಿದೆ. ಸುಮ್ಮನೆ ಮಾಹಿತಿ ಕೊಡಿ ಎಂದು ಕೇಳಿದರೆ, ಇಷ್ಟೆಲ್ಲ ಯಾರಾದರೂ ಮಾಹಿತಿ ನೀಡಿಯಾರೇ? ಒಂದೋ ಇವರಲ್ಲಿ ಮಾಹಿತಿ ಇಲ್ಲ. ಅಥವಾ ಅಷ್ಟು ಮಾಹಿತಿ ಕೊಡಲು ಇಷ್ಟು ದುಡ್ಡು ಕೊಡಿ ಎಂದು ಕೇಳಬಹುದು.
ಇರಲಿ ನಿಂತಿರುವ, ಕುಳಿತಿರುವ ಪ್ರತಿಮೆಗಳು ಸರಿ ಆದರೆ ಈ ಕುದುರೆ ವಿಷಯ ಆಸಕ್ತಿ ಮೂಡಿಸಿತು "ಕುದುರೆ ಮೇಲೆ ಕುಳಿತ ವೀರರ ಪ್ರತಿಮೆ ಬಗ್ಗೆ ಹೇಳಿದಿರಲ್ಲ. ಅದರ ಬಗ್ಗೆ ಸ್ವಲ್ಪ ವಿವರ ಕೊಡ್ತೀರಾ?"

ಅವರು ಅದಕ್ಕೆ "ಒಂದು ಕಾಲೆತ್ತಿರೋ ಕುದುರೆ ಮೇಲಿನ ವೀರ / ವೀರ ವನಿತೆ , ಯುದ್ದದಲ್ಲಿ ಗಾಯಾಳುವಾಗಿ ಸತ್ತರೆಂದು ಅರ್ಥ. ಪ್ರತಿಮೆಯ ಕುದುರೆಯ ನಾಲ್ಕೂ ಕಾಲುಗಳು ಊರಿದ್ದರೆ ಅವರದು ಸ್ವಾಭಾವಿಕ ಸಾವು ಎಂದರ್ಥ" ಅಂದರು. ಸೂಕ್ಷ್ಮ ವಿಷಯಗಳು. ಧನ್ಯವಾದ ತಿಳಿಸಿದೆ.

ಅದರ ಹಿಂದೆಯೇ ಮತ್ತೊಂದು ಪ್ರಶ್ನೆ ಗುಂಡಿನಂತೆ ತೂರಿ ಬಂತು "ನಿಮಗೆ ಬದುಕಿರುವವರ ಪ್ರತಿಮೆಗಳ ಸಂಖ್ಯೆ ಬೇಕೇ? ಅಥವಾ ಹೋದವರದು ಮಾತ್ರ ಸಾಕೇ?".

ಅದಕ್ಕೆ ನಾನು "ಬೇಗ ಹೇಳಿದರೆ ಇದ್ದವರ ಪ್ರತಿಮೆಗಳ ಲಿಸ್ಟ್’ನಲ್ಲಿ ನಿಮ್ಮದೂ ಇರುತ್ತೆ ಇಲ್ದೆ ಇದ್ರೆ ಎರಡನೇ ಲಿಸ್ಟ್’ನಲ್ಲಿ ಖಂಡಿತ ಇರುತ್ತೆ" ಅಂತ ಹೇಳುವಾ ಎಂದು ನಾಲಿಗೆ ತುದಿವರೆಗೂ ಬಂತು... ಬದಲಿಗೆ ಇತಿಶ್ರೀ ಹಾಡಲೆಂದು "ನಿಮ್ಮಲ್ಲಿ ನಿಜಕ್ಕೂ ಇಷ್ಟೆಲ್ಲ ಮಾಹಿತಿ ಇದೆಯೇ?" ಎಂದು ಕೇಳಿಯೇ ಬಿಟ್ಟೆ.

ಅವರು ಅಷ್ಟೇ ಶಾಂತವಾಗಿ "ನಿಜ ಹೇಳಬೇಕೂ ಅಂದರೆ ಯಾವ ಮಾಹಿತೀನೂ ಇಲ್ಲ. ನಾನು ಪ್ರತಿಮೆಗಳನ್ನು ಡೆಲಿವರಿ ಮಾಡುವವನು. ಲೆಕ್ಕ ಇಡೋವ್ನಲ್ಲ. ಬೇರೆಲ್ಲಾದರೂ ವಿಚಾರಿಸಿ ತಿಳಿಸಬೇಕೂ ಅಂದಲ್ಲಿ ನಿಮಗೆ ಏನೇನು ಮಾಹಿತಿ ಬೇಕೂ ಅಂತ ಪ್ರಶ್ನೆಗಳನ್ನು ಬರೆದುಕೊಳ್ತಾ ಇದ್ದೀನಿ" ಅನ್ನೋದೇ?

ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಸ್ಸು ಬರುವಾಗ ಬೆರಳ ತೋರುತ್ತ ನಿಂತಿದ್ದ ಅಂಬೇಡ್ಕರ್ ಅವರ ಪ್ರತಿಮೆ ಮತ್ತೆ ನೋಡಿದೆ. ಮೊದಲು ನಾನು ಆ ಪ್ರತಿಮೆ ನೋಡಿದಾಗ ಏನು ಹೇಳಿದರು? ಈಗೇನು ಹೇಳುತ್ತಿದ್ದಾರೆ? ಗೊತ್ತಗ್ತಿಲ್ಲ !

ಪ್ರತಿಮೆಗಳಿಗೂ ಮಾತು ಬರುವಂತಿದ್ದಿದ್ದರೆ ?


ಜೀವನದ ನಾನಾ ಪಾತ್ರೆ

ನವ ಮಾಸ ಬೆಚ್ಚಗೆ ಬೆಳೆಯಲು

ಹೆತ್ತೊಡಲೊಂದು ತೊಗಲಿನ ಪಾತ್ರೆ

ಒಡಲನು ಬಿಟ್ಟು ಭೂಮಿಗೆ ಜಾರೆ

ಇಳಿದುದು ಜಗವೆಂಬ ನಿಟ್ಟುಸುರಿನ ಪಾತ್ರೆ

ಜನರೊಟ್ಟಿಗಿದ್ದು ಬದುಕನು ಕಲಿವ

ಮನೆಯೊಂದು ನಲಿವಿನ ಪಾತ್ರೆ

ಮಮತೆಯ ಮೆರೆವ ತಾಯ ಹೃದಯ

ಮಧು ತುಂಬಿದ ಹೂವಿನ ಪಾತ್ರೆ

ರೋಗ ರುಜಿನ ಹೊತ್ತಿಹ ದೇಹವದು

ತೂತಾದ ಕಂಚಿನ ಪಾತ್ರೆ

ಓದಿದ್ದರೂ ನಡತೆಯಿಲ್ಲದ ಮಾನವ

ಅಜ್ಞ್ನಾನದ ಮಸಿ ಹಿಡಿದ ಪಾತ್ರೆ

ಅರಿಷಡ್ವರ್ಗಗಳ ಹೊತ್ತಿಹ ಮಸ್ತಕವು

ಕೊಳಕು ದೇಹದ ಕಲುಷಿತ ಪಾತ್ರೆ

ಚಟ್ಟ ಸಿಂಹಾಸನದಿ ಸುಟ್ಟ ಬೂದಿಯನು

ತುಂಬಿಕೊಳ್ವ ಮಡಿಕೆಯೊಂದು ಮಣ್ಣಿನ ಪಾತ್ರೆ

ತೊಗಲಿನ ಪಾತ್ರೆಯಿಂ ಮಣ್ಣಿನ ಪಾತ್ರೆವರೆಗೂ

ನೆಡವ ಜೀವನವು ಹೋರಾಟದ ಅಕ್ಷಯಪಾತ್ರೆ

ಹೀಗೊಂದು ಸಂಗೀತ ಸಂಜೆ !

ಹಿಂದೊಮ್ಮೆ ಮನೆ ಸಾಮಾನುಗಳು ನೆಡೆಸಿದ್ದ ಸಂಗೀತ ಸಂಜೆ ಬಗ್ಗೆ ಕೇಳಿದ್ದಿರಿ ... ತಪ್ಪಿ ಹೋಗಿದ್ದಲ್ಲಿ ಅದರ ಕೊಂಡಿ ಇಲ್ಲಿದೆ ....
http://sampada.net/a...


ಇರಲಿ, ಈಗ ಮನುಜನ ರೋಗಗಳು / ಸಂಕಷ್ಟಗಳು ಹಾಡೋ ಹಾಡುಗಳನ್ನು ಕೇಳಿ ... ಕೆಲವನ್ನು ಮಾತ್ರ ಹೆಸರಿಸಿ ಹಾಡಿನ ಒಂದು ಸಾಲನ್ನು ಮಾತ್ರ ಹಾಕಿದ್ದೇನೆ ...

ಸಂದರ್ಭ ಹೀಗಿದೆ:

ಮನುಜನ ಖಾಯಿಲೆಗಳು / ಸಂಕಷ್ಟಗಳು ಒಮ್ಮೆ ಯಮಧರ್ಮನಲ್ಲಿ ಮೊರೆಯಿಟ್ಟವು. "ಪ್ರಭೂ, ನಮಗೆ ಮನುಜನನ್ನು ಕಾಡಿಸಿ ಪೀಡಿಸಿ ಬೇಸರವಾಗಿದೆ. ನಮಗೊಂದು ದಿನ ರಜೆ ನೀಡು" ಎಂದು. ಯಮಧರ್ಮ ಈ ಪ್ರಶ್ನೆಗೆ ಹೌಹಾರಿ ಬಿದ್ದು "ಎಲ್ಲಾದರೂ ಉಂಟೆ? ... ಸಾಧ್ಯವೇ ಇಲ್ಲ ... ನೀವುಗಳು ದೈವಸೃಷ್ಟಿ. ಮನುಜನು ಮಾಡಿರುವ ಪಾಪಗಳಿಗೆ ಶಿಕ್ಷೆಯ ರೂಪವೇ ನೀವುಗಳು. ಮನುಜ ಎಷ್ಟೇ ಪ್ರಗತಿ ಸಾಧಿಸಿದರೂ ದೈವತ್ವವನ್ನು ಮೀರದೆ ಇರುವುದರ ಮೂಲ ಕಾರಣ ನೀವು. ನಿಮಗೇ ರಜೆ ನೀಡುವುದು ದುಸ್ಸಾಧ್ಯ. ಆದರೆ ಕೆಲವು ಘಂಟೆಗಳು ಮಾತ್ರ ಮನರಂಜನಾ ಕಾರ್ಯಕ್ರಮ ನೆಡೆಸಲು ಅನುಮತಿ ನೀಡುತ್ತೇನೆ" ಎಂದ.
ಅದೇ ಈ "ಖಾಯಿಲೆಗಳ ಸಂಗೀತ ಸಂಜೆ" ... ಯಾವ ರೋಗ / ಸಂಕಷ್ಟಗಳು ಯಾವ ಹಾಡನ್ನು ಹೇಳಿತು ಕೇಳೋಣವೇ?

-----

Alzheimer: ನಿನ್ನ ನೀನು ಮರೆತರೇನು ಸುಖವಿದೆ, ತನ್ನ ತನವ ತೊರದರೇನು ಸೊಗಸಿದೇ? (ದೇವರ ಕಣ್ಣು)

H1N1 (ಹಂದಿ ಜ್ವರ) : ದೂರ ದೂರ ಅಲ್ಲೆ ನಿಲ್ಲಿ ನನ್ನ ದೇವರೇ (ಪ್ರೊಫೆಸರ್ ಹುಚ್ಚೂರಾಯ)

ಗಂಟಳು ಕಟ್ಟಿದಾಗ: ಮಾತೊಂದ ಹೇಳುವೆ ಹತ್ತಿರ ಹತ್ತಿರ ಬಾ (ಕಿಟ್ಟು ಪುಟ್ಟು)

Diabetes (ಸಕ್ಕರೆ ಖಾಯಿಲೆ): ಹಸಿವೇ ದೂರಾ ನೀನಿರು .... ಹಸಿವೆ ದೂರ ನೀನಿರೂ (ಪ್ರೀತಿಸಿ ನೋಡು)

Jaundice (ಕಾಮಾಲೆ): ಬಣ್ಣಾ ನನ್ನ ಒಲವಿನ ಬಣ್ಣ ... ನನ್ನ ಬದುಕಿನ ಬಣ್ಣ (ಬಂಧನ)

ನೆಗಡಿ: ಹರಿಯೋ ನದಿಯು ಒಂದೇ ಕಡೆ ನಿಲ್ಲೋಕ್ಕಾಗಲ್ಲಾ... ಹುಟ್ಟಿದ ಮನುಷ್ಯ ಒಂದೇ ಊರಲಿ ಬಾಳೋಕ್ಕಾಗಲ್ಲ (ಜಿಮ್ಮಿ ಗಲ್ಲು)

Piles (ಪೈಲ್ಸ್): ಕುಂತ್ರೆ ನಿಂತ್ರೆ ಅವನ್ದೇ ಧ್ಯಾನ ಜೀವಕ್ಕಿಲ್ಲ ಸಮಾಧಾನ ಅವನಿಗೆ ಎಂಥಾ ಬಿಗುಮಾನ (ತ್ರಿಶೂಲ)

ಉಳುಕು: ಬಳ್ಳಿಯೊಂದು ಬಳುಕುತಿದೇ, ಆಹಾ ಆಹಾ ನಲಿಯುತಿದೆ (ಮಿ.ರಾಜಕುಮಾರ್)

ಛಳಿ-ಜ್ವರ: ಛಳಿ ಛಳಿ ತಾಳೆನು ಈ ಛಳಿಯಾ, ಗೆಳೆಯನೆ ಬಾರೆಯಾ ನೀ ಸನಿಹಾ (ಚಕ್ರವ್ಯೂಹ)

ದದ್ದೆ: ಕೆಂಪಾದವೋ ಎಲ್ಲ ಕೆಂಪಾದವೋ ... ನೆತ್ತಾರಾ ಕುಡಿದಾಂಗೆ ಕೆಂಪಾದವೋ (ಎಲ್ಲೆಂದಲೋ ಬಂದವರು)

Smallpox (ಅಮ್ಮ): ಯಾರಿಟ್ಟರೀ ಚುಕ್ಕಿ ... ಯಾಕಿಟ್ಟರೀ ಚುಕ್ಕೀ (ಪ್ರೀತ್ಸೆ)

ಏಡ್ಸ್: ಉಪ್ಪ ತಿಂದಾ ಮ್ಯಾಲೆ, ನೀರ ಕುಡಿಯಲೇಬೇಕು, ತಪ್ಪಾ ಮಾಡಿದ ಮ್ಯಾಲೇ, ಶಿಕ್ಷೆ ಅನುಭವಿಸಲೇ ಬೇಕು (ಕಾಲೇಜು ರಂಗ)

ಮಲಬದ್ದತೆ: ಬಾ ಬಾರೋ ಬಾರೋ ರಣಧೀರ ... ನೀ ಬಂದರೆ ದಿಗ್ವಿಜಯದ ಹಾರ (ರಣಧೀರ)

Morning Sickness ವಾಂತಿ: ಬಂದೆಯ ಬಾಳಿನ ಬೆಳಕಾಗಿ, ಬಂದೆಯ ಪ್ರೇಮದ ಸಿರಿಯಾಗಿ, ನನಗಾಗಿ ನನ್ನ ಜೊತೆಯಾಗಿ (ಅವಳ ಹೆಜ್ಜೆ)

ಮೈಕೈ ನೋವು: ಯವ್ವೋ! ಯಾಕೋ ಮೈಗೆ ಉಸಾರಿಲ್ಲ ಡಿಶುಂ !! (ರಸಿಕ)

ಮುಜುಗರ: ಹೇಳಲಾರೆನು ತಾಳಲಾರೆನು ಎನ್ನ ಮನಸಿನ ಭಾವನೆ (ಬೆಂಕಿ ಬಿರುಗಾಳಿ)

Night Blindness (ಇರುಳುಗಣ್ಣು) : ರವಿ ನೀನು ಆಗಸದಿಂದಾ ಮರೆಯಾಗಿ ಹೋಗದೆ ನಿಲ್ಲೂ, ಬಾಳಲ್ಲಿ ಕತ್ತಲೆ ತುಂಬಿ ನೀ ಹೋಗದೆ (ಹೊಸ ಬೆಳಕು)

ತಲೆನೋವು: ಈ ಬಂಧನಾ ಜನುಮ ಜನುಮದಾ ಅನುಬಂಧನಾ (ಬಂಧನ)

ತಲೆಸುತ್ತು: ಆಕಾಶ ಕೆಳಗೇಕೆ ಬಂತು .. ಊಹೂ ... ಈ ಭೂಮಿ ಮೇಲೇಕೆ ಹೋಯ್ತು ... ಇದು ತಾರೆಯೋ, ಇದು ಮೋಡವೋ (ಸಮಯದ ಗೊಂಬೆ)

ಚೆನ್ನೈ ಕಣ್ಣು : ಕಣ್ಣೂ ಕಣ್ಣೂ ಕಲೆತಾಗ, ಬದುಕು ಉಯ್ಯಾಲೆಯಾಗಿದೆ ತೂಗಿ, ಹೃದಯಾ ಬಿಡಲಾರೆ ಎಂದಿದೇ ಕೂಗಿ (ಕಾಮನಬಿಲ್ಲು)

ಬಿ.ಪಿ: ಹೃದಯ ಸಮುದ್ರ ಕಲಕಿ, ಉಕ್ಕಿದ ದ್ವೇಷದ ಬೆಂಕಿ, ರೋಷಾಗ್ನಿ ಜ್ವಾಲೆ ಉರಿದುರಿದೂ (ಅಶ್ವಮೇಧ)

ಶ್ವಾಸಕೋಶ ತೊಂದರೆ: ಉಸಿರೇ, ಉಸಿರೇ, ಈ ಉಸಿರು ನಿಂತ ಮೇಲೆ .... (ಹುಚ್ಚ)

ಮುಂದೆ ... ನಿಮ್ಮಿಂದ....