Sunday, March 28, 2010

ಯಾರಿಗೆ ಬೇಕು ಈ ಲೆಕ್ಕ ?

ಒಂದು ದಿನ ಹೀಗೆ ದಿಢೀರನೆ ಒಂದು ಯೋಚನೆ ಬಂತು. ಏನು ಅಂತೀರಾ?

ಜಗತ್ತಿನಲ್ಲಿ ಖ್ಯಾತನಾಮರ ಪ್ರತಿಮೆಗಳು ಎಷ್ಟಿವೆ ?

ತಿಳಿದವರನ್ನು ಕೇಳೋಣವೆಂದುಕೊಂಡು ಗೂಗಲಿಸಿದೆ. ನನ್ನ ಹಾಗೇ ಯಾರಿಗೋ ಕುತೂಹಲ ಹೆಚ್ಚಾಗಿ ಈ ಪ್ರಶ್ನೆ ಕೇಳಿದ್ದಕ್ಕೆ ಒಬ್ಬರು ಏನೆಂದು ಉತ್ತರಿಸಿದ್ದಾರೆ ಗೊತ್ತೆ "ಕಳೆದ ಒಂದು ಘಂಟೆಯಲ್ಲಿ ಎಷ್ಟಿದ್ದವೋ ಅದಕ್ಕಿಂತ ಹೆಚ್ಚು" ಎಂದು. ಹೆಚ್ಚು ಕಮ್ಮಿ ಬೀರಬಲ್’ನ ಕಾಗೆಗಳ ಸಂಖ್ಯೆಯ ಕಥೆಯನ್ನು ನೆನಪಿಗೆ ತರಿಸುವಂತಹ ಉತ್ತರ. ಇರಲಿ, ಒಟ್ಟಾರೆ ನನಗೆ ಅರ್ಥವಾಗಿದ್ದು, ಪ್ರತಿ ಒಂದು ಘಂಟೆಯಲ್ಲಿ ಕನಿಷ್ಟ ಒಂದು ಪ್ರತಿಮೆಯಾದರೂ ಏಳುತ್ತದೆ ಎಂದು. ನಿಜವೋ ಸುಳ್ಳೋ ಗೊತ್ತಿಲ್ಲ.

ಗೂಗಲ್ ದೇವನಿಗೆ ತಿಳಿದಿಲ್ಲದ ಉತ್ತರವನ್ನು ಇನ್ಯಾರಿಂದಲಾದರೂ ಪಡೆಯೋಣ ಎಂದುಕೊಂಡೆ. ಯಾರ್ಯಾರನ್ನೋ ಕೇಳಿದೆ. ಯಾರಿಗೂ ಗೊತ್ತಿಲ್ಲ. ಒಬ್ಬರು "ಅಲ್ರೀ, ತೆಂಡೂಲ್ಕರ್ ಇದುವರೆಗೂ ಎಷ್ಟು ರನ್’ಗಳು ಮಾಡಿದ್ದಾನೆ ಕೇಳಿ. ಅಂಕಿ-ಅಂಶದ ಸಮೇತ ಹೇಳಬಲ್ಲೆ. ಅದು ಬಿಟ್ಟು ..." ಮತ್ತೊಬ್ಬ ಹಿರಿಯರು "ಅಶ್ವಥ್ ಎಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ ಅಂತ ಕೇಳಿ, ಬೇಕಿದ್ರೆ ಹೇಳ್ತೀನಿ... ಆದ್ರೆ...". ಹೋಗ್ಲಿ ಬಿಡಿ... ಎರಡೂ ದೊಡ್ಡ ಸಂಖ್ಯೇನೇ ! ಸದ್ಯಕ್ಕೆ ಆ ಎರಡೂ ವಿಷಯ ಬೇಕಿಲ್ಲ.

ಅದೃಷ್ಟವಶಾತ್ ಒಬ್ಬರಿಗೆ ತಿಳಿದಿತ್ತು ... ವಾವ್ .. ಅಂದಿರಾ? ... ತಡ್ಕೊಳ್ಳಿ ... ಅವರಿಗೆ ತಿಳಿದಿದ್ದು ಉತ್ತರವಲ್ಲ! ಇಂಥವರನ್ನು ಕೇಳಿ, ಅವರಿಗೆ ಗೊತ್ತಿರಬಹುದು ಅಂತ. ಜೊತೆಗೆ, ನಿಮಗೆ ತಿಳಿದ ಮೇಲೆ ನನಗೂ ಹೇಳಿ ಅಂದರು.

ಅವರನ್ನು ಅರಸಿ ಹೋದೆ. ಇವರ ಹೇಳಿದ ಬೀದಿ ಅಂತೂ ಸಿಕ್ಕಿತು. ಮೂಲೆಯಲ್ಲಿ ಅಂಬೇಡ್ಕರ್ ಅವರ ಪ್ರತಿಮೆ ಕೂಡ ಇತ್ತು. ಯಾರನ್ನೋ ವಿಳಾಸ ಕೇಳಿದೆ. ನೇರವಾಗಿ ಹೋಗಿ. ಅಲ್ಲೊಂದು ಹಳೇ ಅಂಬಾಸಡರ್ ಕಾರ್ ನಿಂತಿರುತ್ತೆ. ಅಲ್ಲೇ ಅವರ ಮನೆ. ಅನುಮಾನ ಬಂತು ಕೇಳಿಯೇಬಿಟ್ಟೆ "ಇವತ್ತು ಆ ಕಾರ್ ಅಲ್ಲಿ ಇಲ್ದೇ ಇದ್ರೆ?". ಕೆಕ್ಕರಿಸಿ ನೋಡಿ ಹೇಳಿದರು "ನಾಲ್ಕೂ ಚಕ್ರಗಳಲ್ಲಿ ಗಾಳಿ ಇಲ್ಲದೆ, ತುಕ್ಕು ಹಿಡಿದ ಆ ಕಾರ್ ಹತ್ತು ವರ್ಷದಿಂದ್ಲೂ ಅಲ್ಲೇ ನಿಂತಿದೆ. ಈಗಲೂ ಅಲ್ಲೇ ಇರುತ್ತೆ ಅನ್ನೋ ಗ್ಯಾರಂಟಿ ಕೊಡಲೇನು?". ತೆಪ್ಪಗೆ ಜಾಗ ಖಾಲಿ ಮಾಡಿದೆ.

ಮನೆಯ ಮುಂದೆ ಬೋರ್ಡ್ ಲಗತ್ತಿಸಿದ್ದರು "ಮೂರ್ತಿ" ಅಂತ. "ಮೂರ್ತಿಗಳ ಬಗ್ಗೆ ಮೂರ್ತಿಯವರಲ್ಲಿ ಕೇಳಲು ಮೂರ್ತಿಗಳು ಅವರ ಮನೆಗೆ ಭೇಟಿ ಇತ್ತಿದ್ದರು" ಎಂಬ ಪದಸಾಲು ಎಷ್ಟು ಚೆನ್ನಾಗಿದೆ ಅಲ್ಲವೇ?

ಅವರನ್ನು ಭೇಟಿಯಾಗಿ ಇದೇ ಪ್ರಶ್ನೆ ಕೇಳಿದೆ. "ಜಗತ್ತಿನಲ್ಲಿನ ಖ್ಯಾತನಾಮರ ಪ್ರತಿಮೆಗಳು ಒಟ್ಟು ಎಷ್ಟಿವೆ? ನಿಮಗೆ ಗೊತ್ತೆ?" ಅಂತ.

ತಿಳಿದುಕೊಂಡು ಏನ್ ಮಾಡ್ತೀಯೋ ಮಂಕೇ? ಅನ್ನೋ ರೀತಿಯಲ್ಲಿ ನೋಡಿ "ನೋಡ್ತೀನಿ" ಅಂತ.

ಯಾವುದೋ ಪುಸ್ತಕ ತೆಗೆದು ಕೈಯಲ್ಲಿ ಪೆನ್ ಹಿಡಿದು ಕೇಳಿದರು "ನಿಮಗೆ ಒಟ್ಟು ಎಷ್ಟಿವೆ ಅನ್ನೋದರ ಜೊತೆಗೆ ಒಬ್ಬೊಬ್ಬ ಖ್ಯಾತ ನಾಮರ ಎಷ್ಟೆಷ್ಟು ಪ್ರತಿಮೆಗಳು ಇವೆ ಎಂದು ಬೇಕೆ?" ಎಂದು.

ಓ! ಹೌದಲ್ಲ? ಇದರ ಬಗ್ಗೆ ಯೋಚಿಸಲೇ ಇಲ್ಲ. ಗಾಂಧೀಜಿ, ಅಂಬೇಡ್ಕರ್ ಇವರ ಪ್ರತಿಮೆಗಳು ಸಿಕ್ಕಾಪಟ್ಟೆ ಇವೆ. ಹಾಗಾಗಿ ಹೇಳಿದೆ "ಗೊತ್ತಿದ್ದಲ್ಲಿ ಒಬ್ಬೊಬ್ಬರದೂ ಎಷ್ಟು ಪ್ರತಿಮೆಗಳು ಇವೆ ಎಂದೇ ತಿಳಿಸಿ" ಅಂದೆ.

ಮತ್ತೊಂದು ಪ್ರಶ್ನೆ ಬಂತು ಅವರಿಂದ "ಪ್ರತಿಮೆಗಳಲ್ಲಿ life sizeನವುಗಳು bust size ನವುಗಳೂ ಬೇರೆ ಬೇರೆ ಲೆಕ್ಕ ಬೇಕೇ?" ಎಂದು

ಓಹೋ ! ಇದು ಇನ್ನೂ ಉತ್ತಮ !! ಉದಾಹರಣೆಗೆ ಮೈಸೂರು ಮಹಾರಾಜರ ಪ್ರತಿಮೆ ಎರಡೂ ರೀತಿಯಲ್ಲಿ ಇರುತ್ತದೆ. ಇರಲಿ ಎರಡೂ ಹೇಳಿ ಎಂದೆ.

ಅವರಿಂದ ಇನ್ನೊಂದು ಪ್ರಶ್ನೆ ಬಂತು "ಖ್ಯಾತನಾಮರು ಅಂದರೆ ನಿಮಗೆ ರಾಜಕಾರಣಿಗಳು, ನಟ/ನಟಿಯರು, ಯತಿಗಳು, ಆಟಗಾರರು, ಸಾಹಿತಿಗಳು ಹೀಗೆ ಎಲ್ಲರದೂ ಬೇಕೆ?"

ಕುಳಿತಿದ್ದ ಸೀಟಿನಲ್ಲಿ ಇನ್ನೂ ಸ್ವಲ್ಪ ಮುಂದೆ ಬಂದೆ. ’ಎಷ್ಟು ಹೆಚ್ಚು ಮಾಹಿತಿ ಇದ್ರೆ ಅಷ್ಟು ಉತ್ತಮ’ ಎಂದೆ

"ಪ್ರತಿಮೆಗಳನ್ನು ಕಂಚು, ಕಲ್ಲು, ಅಮೃತಶಿಲೆ’ಗಳನ್ನು ಬಳಸಿ ಮಾಡಿರುತ್ತಾರೆ. ಎಲ್ಲ ಮಾಹಿತಿ ಬೇರೆ ಬೇರೆ ಬೇಕೇ?" ಎಂದು ಕೇಳಿದರು.

ಇದ್ಯಾಕೋ ಅತೀ ಅಯ್ತು ಅನ್ನಿಸಿದರೂ ’ಇದ್ರೆ ಸಂತೋಷ, ಕೊಡಿ’ ಎಂದೆ. ಉತ್ಸಾಹ ಕಡಿಮೆಯಾಗಲು ತೊಡಗಿತು.

ಮತ್ತೊಂದು ಪ್ರಶ್ನೆ ತೂರಿ ಬಂತು "ನಿಮಗೆ ಕುಳಿತಿರೋ ಪ್ರತಿಮೆ, ನಿಂತಿರೋ ಪ್ರತಿಮೆ, ವೀರರು ಕುದುರೆ ಮೇಲೆ ಕುಳಿತಿರೋ ಪ್ರತಿಮೆ ಹೀಗೆ ಎಲ್ಲವೂ ಬೇಕೇ?"

ಇವರು ಕೇಳ್ತಿರೋ ಪ್ರಶ್ನೆಗಳ ಸರಣಿ ನನ್ನಲ್ಲಿ ಯಾಕೋ ಅನುಮಾನ ತರಿಸುತ್ತಿದೆ. ಸುಮ್ಮನೆ ಮಾಹಿತಿ ಕೊಡಿ ಎಂದು ಕೇಳಿದರೆ, ಇಷ್ಟೆಲ್ಲ ಯಾರಾದರೂ ಮಾಹಿತಿ ನೀಡಿಯಾರೇ? ಒಂದೋ ಇವರಲ್ಲಿ ಮಾಹಿತಿ ಇಲ್ಲ. ಅಥವಾ ಅಷ್ಟು ಮಾಹಿತಿ ಕೊಡಲು ಇಷ್ಟು ದುಡ್ಡು ಕೊಡಿ ಎಂದು ಕೇಳಬಹುದು.
ಇರಲಿ ನಿಂತಿರುವ, ಕುಳಿತಿರುವ ಪ್ರತಿಮೆಗಳು ಸರಿ ಆದರೆ ಈ ಕುದುರೆ ವಿಷಯ ಆಸಕ್ತಿ ಮೂಡಿಸಿತು "ಕುದುರೆ ಮೇಲೆ ಕುಳಿತ ವೀರರ ಪ್ರತಿಮೆ ಬಗ್ಗೆ ಹೇಳಿದಿರಲ್ಲ. ಅದರ ಬಗ್ಗೆ ಸ್ವಲ್ಪ ವಿವರ ಕೊಡ್ತೀರಾ?"

ಅವರು ಅದಕ್ಕೆ "ಒಂದು ಕಾಲೆತ್ತಿರೋ ಕುದುರೆ ಮೇಲಿನ ವೀರ / ವೀರ ವನಿತೆ , ಯುದ್ದದಲ್ಲಿ ಗಾಯಾಳುವಾಗಿ ಸತ್ತರೆಂದು ಅರ್ಥ. ಪ್ರತಿಮೆಯ ಕುದುರೆಯ ನಾಲ್ಕೂ ಕಾಲುಗಳು ಊರಿದ್ದರೆ ಅವರದು ಸ್ವಾಭಾವಿಕ ಸಾವು ಎಂದರ್ಥ" ಅಂದರು. ಸೂಕ್ಷ್ಮ ವಿಷಯಗಳು. ಧನ್ಯವಾದ ತಿಳಿಸಿದೆ.

ಅದರ ಹಿಂದೆಯೇ ಮತ್ತೊಂದು ಪ್ರಶ್ನೆ ಗುಂಡಿನಂತೆ ತೂರಿ ಬಂತು "ನಿಮಗೆ ಬದುಕಿರುವವರ ಪ್ರತಿಮೆಗಳ ಸಂಖ್ಯೆ ಬೇಕೇ? ಅಥವಾ ಹೋದವರದು ಮಾತ್ರ ಸಾಕೇ?".

ಅದಕ್ಕೆ ನಾನು "ಬೇಗ ಹೇಳಿದರೆ ಇದ್ದವರ ಪ್ರತಿಮೆಗಳ ಲಿಸ್ಟ್’ನಲ್ಲಿ ನಿಮ್ಮದೂ ಇರುತ್ತೆ ಇಲ್ದೆ ಇದ್ರೆ ಎರಡನೇ ಲಿಸ್ಟ್’ನಲ್ಲಿ ಖಂಡಿತ ಇರುತ್ತೆ" ಅಂತ ಹೇಳುವಾ ಎಂದು ನಾಲಿಗೆ ತುದಿವರೆಗೂ ಬಂತು... ಬದಲಿಗೆ ಇತಿಶ್ರೀ ಹಾಡಲೆಂದು "ನಿಮ್ಮಲ್ಲಿ ನಿಜಕ್ಕೂ ಇಷ್ಟೆಲ್ಲ ಮಾಹಿತಿ ಇದೆಯೇ?" ಎಂದು ಕೇಳಿಯೇ ಬಿಟ್ಟೆ.

ಅವರು ಅಷ್ಟೇ ಶಾಂತವಾಗಿ "ನಿಜ ಹೇಳಬೇಕೂ ಅಂದರೆ ಯಾವ ಮಾಹಿತೀನೂ ಇಲ್ಲ. ನಾನು ಪ್ರತಿಮೆಗಳನ್ನು ಡೆಲಿವರಿ ಮಾಡುವವನು. ಲೆಕ್ಕ ಇಡೋವ್ನಲ್ಲ. ಬೇರೆಲ್ಲಾದರೂ ವಿಚಾರಿಸಿ ತಿಳಿಸಬೇಕೂ ಅಂದಲ್ಲಿ ನಿಮಗೆ ಏನೇನು ಮಾಹಿತಿ ಬೇಕೂ ಅಂತ ಪ್ರಶ್ನೆಗಳನ್ನು ಬರೆದುಕೊಳ್ತಾ ಇದ್ದೀನಿ" ಅನ್ನೋದೇ?

ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಸ್ಸು ಬರುವಾಗ ಬೆರಳ ತೋರುತ್ತ ನಿಂತಿದ್ದ ಅಂಬೇಡ್ಕರ್ ಅವರ ಪ್ರತಿಮೆ ಮತ್ತೆ ನೋಡಿದೆ. ಮೊದಲು ನಾನು ಆ ಪ್ರತಿಮೆ ನೋಡಿದಾಗ ಏನು ಹೇಳಿದರು? ಈಗೇನು ಹೇಳುತ್ತಿದ್ದಾರೆ? ಗೊತ್ತಗ್ತಿಲ್ಲ !

ಪ್ರತಿಮೆಗಳಿಗೂ ಮಾತು ಬರುವಂತಿದ್ದಿದ್ದರೆ ?


No comments:

Post a Comment