Sunday, January 18, 2015

ಗುರು-ಶಿಷ್ಯರ ಸಂಬಂಧಗಳು

ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ:
ಗುರು ಸಾಕ್ಷಾತ್ ಪರ ಬ್ರಹ್ಮ ತಸ್ಮೈ ಶ್ರೀ ಗುರವೇ ನಮ:

ಗುರುವನ್ನು ಸ್ತುತಿಸುವ ಆದಿಶಂಕರರಿಂದ ರಚಿತವಾದ ಈ ಶ್ಲೋಕ ಯಾರಿಗೆ ಗೊತ್ತಿಲ್ಲ ? ಗುರುಗಳನ್ನು ತ್ರಿಮೂರ್ತಿಗಳಿಗೆ ಹೋಲಿಸುತ್ತ ವಂದಿಸುವ ಈ ಶ್ಲೋಕ ಬಹಳ ಅರ್ಥಪೂರ್ಣ. ಸಂಧ್ಯಾವಂದನೆಯ ಮೊದಲ ಮಂತ್ರವೇ ’ಶ್ರೀ ಗುರುಭ್ಯೋ ನಮ: ಹರಿ: ಓಂ’ ಎಂದು. ಗುರುವಿನ ಸ್ಥಾನ ಅಂತಹುದು. ’ಗುರುವಿನ ಗುಲಾಮನನಾಗುವ ತನಕ ದೊರೆಯದಣ್ಣ ಮುಕುತಿ’ ಎಂದು ಪುರಂದರದಾಸರೇ ಹೇಳಿಲ್ಲವೆ?

ಭಾರತೀಯ ಸಂಸ್ಕೃತಿಯಲ್ಲಿ ಗುರುವಿಲ್ಲದ ಯಾರೇ ಆಗಲಿ ಅವನು ಕೀಳು, ಅನಾಥ ಅಥವಾ ದುರ್ದೈವಿ ಎನ್ನುವಂತೆ ಕಾಣುತ್ತಿದ್ದ ಕಾಲವೊಂದಿತ್ತು. ತಕ್ಕ ಗುರುವನ್ನು  ಅರಸುತ್ತ ಹೋಗಿ ತಮ್ಮ ಗುರಿ ಸಾಧಿಸಿರುವವರ ಕಥೆಯನ್ನು ’ಹಂಸಗೀತೆ’ ’ಸಂಧ್ಯಾ ರಾಗ’ ಚಿತ್ರಗಳಲ್ಲಿ ನಾವು ಕಾಣಬಹುದು. ’ಹಂಸಗೀತೆ’ ಚಿತ್ರದ ಮತ್ತೊಂದು ಸನ್ನಿವೇಶ ಎಂದರೆ, ಗುರಿವಿಗೇ ಸವಾಲೊಡ್ಡಿ ಗೆದ್ದು ಗುರುವಿನ ಸಾವಿಗೂ ಕಾರಣನಾದವನನ್ನು ಎಲ್ಲರೂ ತುಚ್ಚೀಕರಿಸಿ ನೋಡುತ್ತಾರೆ. ಗುರುವಿಗೆ ಇದ್ದ ಮಹತ್ವ ಆ ಮಟ್ಟಗಿನದು.

’ಗುರು’ ಎಂಬ ಪದ ಎಷ್ಟು ಪ್ರಾಚೀನ ಹಾಗು ಅರ್ಥಪೂರ್ಣ ಎಂದರೆ ಪಾಶ್ಚಾತ್ಯ ದೇಶದವರೂ ತಮ್ಮ ನಿಘಂಟಿನಲ್ಲಿ ಅದನ್ನು ಸೇರಿಸಿಕೊಂಡಿದ್ದಾರೆ. MS-WORD ನಲ್ಲಿ ಅದಕ್ಕೆ ಕೊಡುವ ಪರ್ಯಾಯಪದ ’ಮಹರ್ಷಿ’ ಇತ್ಯಾದಿ.

ಗುರುಗಳೆಂದರೆ ಅವರು ಹಿಂದಿನ ಕಾಲದವರಂತೆ ಪಂಚೆಯುಟ್ಟು, ಗಡ್ಡ ಬಿಟ್ಟು ಮರದ ಕೆಳಗೆ ಕೂತು ವೇದ ಪಾಠ ಮಾಡುವವರೇ ಆಗಬೇಕಿಲ್ಲ ಅಥವಾ ಕೈಯಲ್ಲಿ ಬೆತ್ತ ಹಿಡಿದಿರಬೇಕೂ ಅಂತಲೂ ಅಲ್ಲ. ಕೌಶಿಕನಿಗೆ ದಾರಿ ತೋರಿದ ಒಬ್ಬ ನಿಷ್ಟಾವಂತ ಗೃಹಿಣಿಯಾಗಿರಬಹುದು ಅಥವಾ ಅವನಿಗೆ ಬದುಕಿನ ಅರ್ಥ ತಿಳಿಸಿಕೊಟ್ಟ ಕಟುಕ ಧರ್ಮವ್ಯಾಧನೇ ಆಗಿರಬಹುದು. ಹಾಗಾದರೆ ಈ ’ಗುರು’ ಯಾರು ?

’ಗುರು’ ಎಂಬ ಪದದಲ್ಲಿ ’ಗು’ ಎಂದರೆ ನೆರಳು ’ರು’ ಎಂದರೆ ಚದುರಿಸುವುದು  ಎಂದರ್ಥ. ಯಾರು ಅಜ್ಞ್ನಾನ ಅಂಧಕಾರವನ್ನು ಹೋಗಲಾಡಿಸುವ ಶಕ್ತಿಯನ್ನು ಹೊಂದಿರುತ್ತಾರೋ ಅವರೇ ನಿಜವಾದ ಗುರು. ಗುರುವು ಶಿಕ್ಷಣ ಕೊಡುತ್ತಾರೆ. ಗುರುವು ಮಾರ್ಗದರ್ಶನ ಮಾಡುತ್ತಾರೆ. ಗುರುವು ಜೀವನೋಪಾಯದ ದಾರಿ ತೋರುತ್ತಾರೆ. ಶಿಷ್ಯರಿಗೆ  ಕಲಿಸಿಕೊಡುವ ಅವರು ಸಾಮಾನ್ಯವಾಗಿ ಶಿಷ್ಯರಿಗಿಂತ ಒಂದು ಕೈ ಮೇಲಿರುತ್ತಾರೆ. ಅದಕ್ಕೆ ಹೊರತಾಗಿ ಉಳಿದವರನ್ನು ’ಗುರುವನ್ನು ಮೀರಿಸಿದ ಶಿಷ್ಯ’ ಎನ್ನುತ್ತಾರೆ.

ಹೀಗೊಂದು ಕಥೆಯಿದೆ. ಒಬ್ಬ ಮಲ್ಲರ ಗುರುವಿನ ಬಳಿ ಹಲವಾರು ಶಿಷ್ಯರಿರುತ್ತಾರೆ. ಅದರಲ್ಲಿ ಒಬ್ಬ ಬಹಳ ಪ್ರಾವೀಣ್ಯತೆ ಸಂಪಾದಿಸಿ ದುರಹಂಕಾರದಿಂದ ಗುರುವಿಗೆ ಸವಾಲು ಹಾಕುತ್ತಾನೆ. ಇಬ್ಬರಿಗೂ ಮಲ್ಲಯುದ್ಧ ಆರಂಭವಾಗಿ ಗುರುವು ಶಿಷ್ಯನನ್ನು ಒಂದೇ ಪಟ್ಟಿನಲ್ಲಿ ಕೆಳಕ್ಕೆ ಬೀಳಿಸುತ್ತಾರೆ. ಶಿಷ್ಯನಿಗೆ ಆಶ್ಚರ್ಯವಾಗುತ್ತದೆ. ಈ ಪಟ್ಟು ತನಗೆ ಕಲಿಸಲಿಲ್ಲವಲ್ಲ ಗುರುಗಳೂ ಎಂದು. ಅದಕ್ಕೆ ಗುರುಗಳು ಹೇಳುತ್ತಾರೆ ’ವಿದ್ಯೆಗಿಂತ ವಿನಯ ದೊಡ್ಡದು. ನಿನಗೆ ಎಲ್ಲಾ ಗೊತ್ತು ಎಂಬ ಅಹಂಭಾವ ಇರುವುದನ್ನು ಕಂಡೇ ನಾನು ಕೆಲವು ಪಟ್ಟುಗಳನ್ನು ಹೇಳಿಕೊಟ್ಟಿಲ್ಲ.  ನೀನು ನನಗೇ ಸವಾಲು ಹಾಕುವ ದಿನಗಳು ಬರುತ್ತದೆ ಎಂದು ನನಗೆ ಗೊತ್ತಿತ್ತು’ ಎನ್ನುತ್ತಾರೆ. ಗುರುಗಳಿಗೆ ದೂರದೃಷ್ಟಿ ಇರುತ್ತದೆ ಎನ್ನುವುದನ್ನು ನಾವು ಈ ಕಥೆಯಿಂದ ಅರಿಯಬಹುದು.

ಮತ್ತೊಂದು ಕಥೆಯಲ್ಲಿ ಗುರುಕುಲದಲ್ಲಿದ್ದ ಒಬ್ಬ ಹುಡುಗ ಕಳ್ಳತನ ಮಾಡುವ ಕೆಟ್ಟ ಹವ್ಯಾಸವನ್ನು ಹೊಂದಿರುತ್ತಾನೆ. ಗುರುಗಳು ಹಲವು ಬಾರಿ ಹೇಳಿ ನೋಡಿದರೂ ಅವನು ಕೇಳಲಿಲ್ಲ. ಹಾಗಾಗಿ ಪ್ರತಿ ಬಾರಿ ಅವನು ಕಳ್ಳತನ ಮಾಡಿದಾಗಲೂ ಒಂದು ಮೊಳೆಯನ್ನು ಗೋಡೆಗೆ ಹೊಡೆಯುತ್ತಿದ್ದರು. ಹಲವಾರು ಮೊಳೆಗಳು ಗೋಡೆ ಸೇರಿದವು. ಕಾಲಾನಂತರ ಹುಡುಗ ತನ್ನ ತುಡುಗ ಬುದ್ದಿಯನ್ನು ತಿದ್ದಿಕೊಂಡ. ಅಂದಿನಿಂದ ಅವನು ಪ್ರತಿ ಒಂದು ಒಳ್ಳೆ ಕೆಲಸ ಮಾಡಿದಾಗಲೂ ಗುರುಗಳು ಒಂದು ಮೊಳೆಯನ್ನು ಗೋಡೆಯಿಂದ ತೆಗೆಯುತ್ತಿದ್ದರು. ಹೀಗೆ ಒಂದು ದಿನ ಗೋಡೆಯಿಂದ ಮೊಳೆಗಳೆಲ್ಲಾ ಹೊರ ಬಂದವು. ಆದರೂ ಗೋಡೆಯಲ್ಲಿನ ತೂತುಗಳು ಮಾತ್ರ ಹಾಗೆ ಇದ್ದವು. ಅದೇಕೆಂದು ಹುಡುಗನು ಕೇಳಿದಾಗ ಗುರುಗಳು ಹೇಳುತ್ತಾರೆ ’ನಿನ್ನಲ್ಲಿ ಕೆಟ್ಟ ಬುದ್ದಿ ಹೋಗಿದೆ ಅದಕ್ಕೇ ಗೊಡೆಯಲ್ಲಿ ಮೊಳೆಗಳಿಲ್ಲ. ಆದರೆ ನೀನು ಕಳ್ಳ ಎಂಬ ನಿನ್ನ ಮೇಲಿರುವ ಆ ಕಪ್ಪು ಚುಕ್ಕಿಯೇ ಈ ಗೋಡೆಯ ಗುರುತುಗಳು. ಅದು ಅಷ್ಟು ಸುಲಭವಾಗಿ ಹೋಗುವುದಿಲ್ಲ’. ಕ್ಲಿಷ್ಟವಾದ ವಿಷಯವನ್ನು ಸರಳವಾಗಿ ಹೇಗೆ ಹೇಳಬಹುದು ಎಂಬುದಕ್ಕೆ ಇದೊಂದು ನಿದರ್ಶನ.

ಮಾರ್ಮಿಕವಾಗಿ ಮಾತನಾಡುವುದು ಒಂದು ಕಲೆ. ಗುರುಗಳು ಈ ರೀತಿ ಸೂಚ್ಯವಾಗಿ ಹೇಳುವಾಗ ಶಿಷ್ಯನಾದವನು ಅಷ್ಟೇ ಚತುರ್ಮತಿಯಾಗಿದ್ದರೆ ಮಾತ್ರ ಅರ್ಥವಾಗುತ್ತದೆ. ಹಿಮಾಲಯಕ್ಕೆ ತೆರಳಿದ್ದ ಗುರುಗಳೊಬ್ಬರು ಹಿಂದಿರುಗಿದಾಗ ತನ್ನ ಪ್ರಿಯ ಶಿಷ್ಯನಾದ ರಾಜನ ಸುತ್ತಲಿರುವವರೂ ನಯವಂಚಕರು ಎಂದು ಅರಿವಾಗುತ್ತದೆ. ಶಿಷ್ಯನು ಅತೀ ಒಳ್ಳೆಯವನಾದ ಪ್ರಯುಕ್ತ ಹೀಗಾಗಿದೆ ಎಂದು ಅರಿತರೂ ಎದುರಿಗೆ ಹೇಳಲಾಗುವುದಿಲ್ಲ. ಬದಿಗೆ ಕರೆದೋ ಅಥವಾ ಗೌಪ್ಯವಾಗಿಯೋ ಕೂಡ ಹೇಳಲಾಗುವುದಿಲ್ಲ. ಯಾರನ್ನು ನಂಬುವುದು ಯಾರನ್ನು ಬಿಡುವುದು ಎಂಬುದೇ ಒಂದು ಕ್ಲಿಷ್ಟ ಸಮಸ್ಯೆಯಾಯಿತು. ಹಾಗಾಗಿ ಎಲ್ಲರ ಸಮಕ್ಷಮದಲ್ಲಿ ರಾಜನಿಗೆ ಹೇಳುತ್ತಾರೆ "ಎಲೈ ರಾಜನ್! ನಿನ್ನ ರಾಜ್ಯವೊಂದು ಶ್ರೀಗಂಧದ ಮರದಂತೆ. ನಿನ್ನ ಒಳ್ಳೆಯತನವೆಂಬ ಸುಗಂಧವು ಎಲ್ಲೆಡೆ ಆವರಿಸಿದ್ದು ತಕ್ಕ ಅಧಿಕಾರಿಗಳು ನಿನ್ನನ್ನು ರಕ್ಷಿಸುತ್ತಿದ್ದಾರೆ" ಎಂದರು. ಗುರುಗಳ ಬೋಳೆತನಕ್ಕೆ ಒಳಗೊಳಗೇ ನಕ್ಕರು ಅಧಿಕಾರಿಗಳು. ಆದರೆ ರಾಜನಿಗೆ "ಶ್ರೀಗಂಧದ ಮರವನ್ನು ಆವರಿಸುವುದು ಸರ್ಪಗಳು" ಎಂದು ಅರಿವಾಗಿ ಕಾಲಕ್ರಮೇಣ ತಕ್ಕ ಕ್ರಮ ತೆಗೆದುಕೊಂಡು ದಕ್ಷ ನಾಯಕರನ್ನು ನೇಮಿಸಿದನಂತೆ. ಇದು ಕಥೆಯೇ ಆಗಿದ್ದರೂ ಗುರು-ಶಿಷ್ಯರು ಒಬ್ಬರನ್ನೊಬ್ಬರು ಎಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲರು ಎಂಬುದನ್ನು ಸಾಬೀತು ಮಾಡುತ್ತದೆ. ಇಂಥದ್ದೇ ಮಾರ್ಮಿಕ ಅರ್ಥವುಳ್ಳ ಸಂಭಾಷಣೆಯನ್ನು ’ಅರಗಿನ ಮನೆಯ ಸಂದರ್ಭದಲ್ಲಿ’ ವಿದುರ-ಧರ್ಮರಾಯನ ನಡುವೆ ಕೂಡ ಕಾಣಬಹುದು.

ಗುರುಗಳು ಎಲ್ಲ ಕಾಲಕ್ಕೂ, ಎಲ್ಲ ದೇಶದಲ್ಲೂ, ಎಲ್ಲ ಪಂಥದಲ್ಲೂ ಇರುತ್ತಾರೆ. ತಾವು ಕಲಿತ ಅನುಭವ ಪಾಠವನ್ನು ಇನ್ನೊಬ್ಬರಿಗೆ ತಿಳಿಸಿಕೊಡುವವನೂ ಗುರುವೇ ಆಗುತ್ತಾನೆ. ತಮ್ಮ ಜ್ಞ್ನಾನವನ್ನು ಇನ್ನೊಬ್ಬರಿಗೆ ತಿಳಿಸಿ ಕೊಡುವುದರಿಂದ ಜ್ಞ್ನಾನ ಜ್ಯೋತಿ ಬೆಳಗುತ್ತದೆ. ಹೀಗೆ ತಿಳಿಸಿಕೊಡದೇ ಹೋದ ಅಥವಾ ಕಲಿಯದೇ ಹೋದ ವಿಷಯಗಳೇ ಮುಂದೆ ನಶಿಸಿ ಹೋಗುತ್ತದೆ. ಈಗಿನ ನವಯುಗದಲ್ಲಿ ಹಲವಾರು ಕುಲುಕಸುಬುಗಳು ಇದೇ ದಾರಿಯನ್ನು ಹಿಡಿದಿವೆ ಎಂದರೆ ಅದು ಅತಿಶಯೋಕ್ತಿಯಲ್ಲ.

ಎಲ್ಲ ಉತ್ತಮ ಕೆಲಸಗಳನ್ನು ನೆನೆಯಲು ಒಂದು ಶುಭದಿನವಿರುವ ಹಾಗೆ ಗುರುಗಳ ನೆನೆವುದಕ್ಕೂ ಒಂದು ಶುಭದಿನವಿದೆ. ಅದೇ ’ಗುರು ಪೂರ್ಣಿಮಾ’. ತನ್ನ ಜ್ಞ್ನಾನದ ಪರಿಪೂರ್ಣತೆಯಲ್ಲಿ ಗುರುಗಳಿಗೆ ಅಭಿವಂದಿಸುವ ಶುಭ ದಿನವೇ ಗುರು ಪೂರ್ಣಿಮ. ಹಿಂದಿನ ವರ್ಷದಲ್ಲಿ ತಾನು ಕಲಿತಿದ್ದೆಷ್ಟು ಎಂದು ಅರಿತು ತನ್ನ ಮುಂದಿನ ವರ್ಷದಲ್ಲಿ ತಾನೇನು ಕಲಿಯಬೇಕೆನ್ನುವ ದಾರಿಯನ್ನು ನಿರ್ಧಾರ ಮಾಡಿ ಅದರ ಮೇಲೆ ಸಂಪೂರ್ಣ ಗಮನವಿಡುವವುದು ಈ ಶುಭದಿನದ ಮೂಲ ಉದ್ದೇಶ. ಒಂದು ರೀತಿ ವಾರ್ಷಿಕ ಪರೀಕ್ಷೆಯ ತರಹ.

ಡಾ|| ಎಸ್.ರಾಧಾಕೃಷ್ನನ್ ಅವರು ಸರ್ವಶ್ರೇಷ್ಠ ಶಿಕ್ಷಕರು ಎಂದು ಹೆಸರು ಪಡೆದಿದ್ದರು. ಅವರ ಜನ್ಮ ದಿನವಾದ ಸೆಪ್ಟಂಬರ್ ಒಂಬತ್ತರಂದು ’ಶಿಕ್ಷಕರ ದಿನ’ ಎಂದು ಆಚರಿಸುತ್ತೇವೆ.

’ಉಪನಿಷದ್’ ಎಂಬ ಪದದಲ್ಲಿ ’ಉಪ’ ಎಂದರೆ ಹತ್ತಿರ, ’ನಿ’ ಎಂದರೆ ಕೆಳಗೆ, ’ಷದ್’ ಎಂದರೆ ಕುಳಿತುಕೊಳ್ಳುವುದು. ’ಉಪನಿಷದ್’ ಎಂದರೆ ಗುರುವಿನ ಬಳಿ ಹತ್ತಿರದಲ್ಲಿ ಕುಳಿತು ಮಾರ್ಗದರ್ಶನ ಪಡೆಯುವುದು ಎಂದು. ಕುರುಕ್ಷೇತ್ರ ಯುದ್ದದಲ್ಲಿ  ಕೃಷ್ಣ-ಅರ್ಜುನರ ನಡುವೆ ನೆಡೆದದ್ದು ಇದೇ ಅಲ್ಲವೇ?

ಪಾಠ ಕಲಿಸಿದ ಗುರುವಿಗೆ ಕೃತಜ್ಞ್ನತಾ ಪೂರ್ವಕವಾಗಿ ಕೊಡುವ ಯಾವುದೇ ಆದರೂ ಅದನ್ನು ’ಗುರುದಕ್ಷಿಣೆ’ ಎನ್ನುತ್ತರೆ. ಅದನ್ನು ಗುರುವು ಆಜ್ಞ್ನಾಪೂರ್ವಕವಾಗಿ ಶಿಷ್ಯನಲ್ಲಿ ಕೇಳಿದ್ದಾಗಬಹುದು ಅಥವ ಶಿಷ್ಯನ ಬಲವಂತಕ್ಕೆ ಗುರುವು  ಕೇಳುವುದೂ ಆಗಬಹುದು. ಆಜ್ಞ್ನಾಪೂರ್ವಕವಾಗಿ ಶಿಷ್ಯನ ಹೆಬ್ಬರಳನ್ನೇ ಕೇಳಿದವರು ಗುರು ದ್ರೋಣಚಾರ್ಯರು. ಅದರ ಹಿಂದಿನ ಉದ್ದೇಶ ಬೇರೆ. ಅದು ಇಲ್ಲಿ ಮುಖ್ಯವಲ್ಲ. ಗುರುದಕ್ಷಿಣೆಯ ಅತೀ ಕಠೋರ ರೂಪಕ್ಕೆ ಒಂದು ಉದಾಹರಣೆ ಅಷ್ಟೆ!

ಗುರು ಸಾಂದೀಪನಿಯ ಶಿಷ್ಯರು ಶ್ರೀ ಕೃಷ್ಣ, ಬಲರಾಮ ಹಾಗೂ ಸುಧಾಮ. ಸಕಲ ವಿದ್ಯೆಗಳನ್ನು ಪಾರಂಗತ ಮಾಡಿಕೊಂಡು ಗುರುದಕ್ಷಿಣೆ ಬಗ್ಗೆ ಕೇಳಿದಾಗ, ಅಪಹೃತ ಮಗನ ಚಿಂತೆಯಲ್ಲಿನ ನಿರ್ಲಿಪ್ತತೆಯಿಂದಾಗಿ ಗುರುಗಳು ತಮಗೇನೂ ಬೇಡವೆಂದು ಹೇಳುತ್ತಾರೆ. ಇನ್ನೂ ಬಲವಂತ ಮಾಡಿದಾಗ ಋಷಿಪತ್ನಿಯೊಡನೆ ಕೇಳುವಂತೆ ಹೇಳುತ್ತಾರೆ. ಋಷಿಪತ್ನಿಯು ದು:ಖದಿಂದ ’ಕಳೆದುಹೋದ ನಮ್ಮ ಮಗನನ್ನು ವಾಪಸ್ಸು ಕರೆದುಕೊಂಡು ಬಾ’ ಎಂದು ಕೇಳುತ್ತಾಳೆ. ಸಾಮಾನ್ಯರಿಗೆ ಇದು ಕಷ್ಟವಾದ ಕೆಲಸ ಆದರೆ ಪರಮಾತ್ಮನಿಗೆ ಅಲ್ಲ. ’ಪಾಂಚಜನ್ಯ’ ಎಂಬ ರಕ್ಕಸನು ಋಷಿಕುಮಾರನನ್ನು ಕದ್ದೊಯ್ದಿದ್ದನು. ಕೃಷ್ಣನು ಅವನೊಡನೆ ಯುದ್ಧ ಮಾಡಿ, ಅವನನ್ನು ಸೋಲಿಸಿ, ಋಷಿಕುಮಾರನನ್ನು ಕರೆದುತಂದು ಗುರು ದಕ್ಷಿಣೆಯಾಗಿ ಕೊಡುತ್ತಾನೆ. ಇದು ಗುರುದಕ್ಷಿಣೆ ವಿಚಾರವಾಗಿ ಇನ್ನೊಂದು ಕಥೆ.

ಗುರುದಕ್ಷಿಣೆಯ ಕಠೋರ ರೂಪಕ್ಕೆ ಇನ್ನೊಂದು ಉದಾಹರಣೆ ಉತ್ತಂಕ. ಗುರು ವೇದರ ಪಟ್ಟ ಶಿಷ್ಯ ಉತ್ತಾಲಕ (ಅಥವ ಉತ್ತಂಕ). ಗುರುದಕ್ಷಿಣೆ ಕೊಡುವೆನೆಂದಾಗ ಗುರುಗಳು ಅವನನ್ನು ಗುರು ಪತ್ನಿಯ ಬಳಿ ಕಳಿಸುತ್ತಾರೆ. ಗುರು ಪತ್ನಿಯು ಉತ್ತಂಕನಿಗೆ ಹೇಳುತ್ತಾಳೆ ’ನನಗೆ ಮಹಾರಾಜ ಪೌಶ್ಯನ ಪತ್ನಿಯ ಕಿವಿಯ ಓಲೆಗಳು ಬೇಕು. ಇನ್ನು ನಾಲ್ಕು ದಿನಗಳಲ್ಲಿ ತರದಿದ್ದಲ್ಲಿ ನಿಷ್ಪ್ರಯೋಜಕನಾಗೆಂದು ಶಪಿಸಿ ಬಿಡುತ್ತೇನೆ’ ಎಂದಳು. ಎಂತಹ ಅಗ್ನಿಪರೀಕ್ಷೆ ! ಆತನು ಪೌಶ್ಯನಲ್ಲಿ ಹೋಗಿ ಆತನ ಪತ್ನಿಯನ್ನು ಬೇಡಿ ಓಲೆಗಳನ್ನು ತೆಗೆದುಕೊಳ್ಳುತ್ತಾನೆ. ವಾಪಸ್ಸು ಬರುವಾಗ ಬಾಯಾರಿಕೆಯಾಗಿ ಓಲೆಗಳನ್ನು ಕೆಳಗೆ ಇಟ್ಟಾಗ ಅದನ್ನು ತಕ್ಷಕನು ಕದ್ದೊಯ್ಯುತ್ತಾನೆ. ಅವನನ್ನು ಹಿಂಬಾಲಿಸಿಕೊಂಡು ಹೋಗಿ ಇಂದ್ರನ ಸಹಾಯದಿಂದ ವಾಪಸ್ಸು ಪಡೆದುಕೊಂಡು ಅವನದೇ ಕುದುರೆಯ ಸಹಾಯದಿಂದ ಋಷಿಪತ್ನಿಯ ಬಳಿ ಹೋಗಿ ಅವಳಿಗೆ ಅದನ್ನು ಒಪ್ಪಿಸುತ್ತಾನೆ.

ನಳ-ಋತುಪರ್ಣರ ವಿಷಯದಲ್ಲಿ ಇಬ್ಬರೂ ಗುರುಗಳೇ ! ಆದರೆ ಒಬ್ಬ ಹೇಳಿಕೊಡುವಾಗ ಮತ್ತೊಬ್ಬ ಶಿಷ್ಯನಾಗುತ್ತಾನೆ ... ನಳ ’ಅಶ್ವ ಹೃದಯ’ ವಿದ್ಯೆಯನ್ನು ಋತುಪರ್ಣನಿಗೆ ಹೇಳಿಕೊಟ್ಟರೆ, ಅವನು ನಳನಿಗೆ ಪಗಡೆಯಾಟದಲ್ಲಿ ಗೆಲ್ಲುವ ಮರ್ಮ ಹೇಳಿಕೊಟ್ಟ. ಈ ವಿದ್ಯೆಯಿಂದ ನಳ ತನ್ನ ರಾಜ್ಯವನ್ನು ಮತ್ತೆ ಗೆದ್ದುಕೊಳ್ಳಲು ಸಹಾಯವಾಯಿತು.

ಯಾವ ವಿದ್ಯೆಯಿಂದ ಯಾವಾಗ ಉಪಯೋಗವಾಗುವುದೆಂದು ಯಾರಿಗೆ ಗೊತ್ತು ? ಯಾವುದೇ ವಿದ್ಯೆ ಅಷ್ಟು ಸುಲಭವಾಗಿ ದಕ್ಕುವುದಿಲ್ಲ. ಅಜಿತಸೇನಾಚಾರ್ಯರು ಮತ್ತು ರನ್ನರ ನಡುವಿನ ಈ ನುಡಿ ಸಂವಾದ ಯಾರು ತಾನೇ ಅರಿಯರು? ಗುರುಗಳ ಹೇಳಿಕೆ ಹೀಗಿದೆ:

ಕೊಂಡು ತಂದು ಹೊತ್ತು ಮಾರಿ
ಲಾಭಗಳಿಸಿ ಹೊಟ್ಟೆಹೊರೆಯಲು
ವಿದ್ಯೆಯೇನು ಬಳೆಯ ಮಲಾರವೇ?

ಈ ಕಾಲಕ್ಕೆ ಮನಸ್ಸಿಗೆ ಬರುವ ಗುರು-ಶಿಷ್ಯರ ಜೋಡಿ ಎಂದರೆ ರಾಮಕೃಷ್ಣ ಪರಮಹಂಸ - ವಿವೇಕಾನಂದ. ಇಂದಿಗೂ ಇವರುಗಳು ಹಾಕಿಕೊಟ್ಟ ಹಾದಿ ನಮಗೆ ಮಾರ್ಗದರ್ಶನವಾಗಿದೆ. ಒಬ್ಬ ಟೀಚರ್ ಶಾಲೆಯಲ್ಲಿ ಮಕ್ಕಳಿಗೆ ಹೇಳಿದರಂತೆ ’ನನಗೆ ವಿವೇಕಾನಂದರಂತಹ ಒಬ್ಬ ವಿದ್ಯಾರ್ಥಿ ಸಿಗಲಿಲ್ಲವಲ್ಲ’ ಎಂದು. ಒಬ್ಬ ಹುಡುಗ ಅದಕ್ಕೆ ಹೇಳಿದ ’ನಮಗೂ ಅಷ್ಟೆ ಸಾರ್. ರಾಮಕೃಷ್ಣರಂತಹ ಒಬ್ಬ ಗುರುಗಳು ಸಿಗಲಿಲ್ಲವಲ್ಲ’ ಎಂದು.

ಹಲವಾರು ಬಾರಿ ಗುರು-ಶಿಷ್ಯರ  ನಡುವೆ ಎಂಥಾ ಸಂಬಂಧ ಉಂಟಾಗಿರುತ್ತದೆ ಎಂದರೆ ಸಾವಿನಲ್ಲೂ ಅದು ಮುಂದುವರೆಯುತ್ತದೆ. ಇದಕ್ಕೊಂದು ಜ್ವಲಂತ ಉದಾಹರಣೆಯೆಂದರೆ ನನ್ನ ತಂದೆ ಹಾಗೂ ಅವರ ಗುರು ಶ್ರೀನಿವಾಸ ಮೂರ್ತಿಗಳ ನಡುವಿನ ಬಾಂಧವ್ಯ. ಇಹಲೋಕದ ವ್ಯಾಪಾರ ಮುಗಿಸಲು ಇಂಥಾ ವಯಸ್ಸು ಎಂಬುದಿಲ್ಲ ಎಂಬುದು ಎಲ್ಲರಿಗೂ ತಿಳಿದಿದ್ದೇ. ಅವರ ಶಿಷ್ಯರಾದ ನನ್ನ ತಂದೆಯವರು ತಮ್ಮ ಪ್ರಯಾಣ ಮುಗಿಸಿದರು. ತಮ್ಮ ದೇಹದ ಒಂದು ಅಂಗವೇ ಕಳೆದುಕೊಂಡಂತಾದ ಅವರ ಗುರುಗಳಿಗೆ ಅದೊಂದು ದೊಡ್ಡ ಆಘಾತವೆನ್ನಬಹುದು. ನಮ್ಮ ತಂದೆಯ ಕಾಲಾನಂತರ ಬಹುಶ: ಆರೇ ತಿಂಗಳಲ್ಲಿ ಅವರೂ ಹರಿಪಾದ ಸೇರಿದರು.

ಗುರು-ಶಿಷ್ಯ ಜೋಡಿಯ ಕಥೆಗಳು ಇನ್ನೂ ಬೇಕಾದಷ್ಟು ಇದೆ. ವಿಶ್ವಾಮಿತ್ರ-ಹರಿಶ್ಚಂದ್ರ, ಚಾಣಕ್ಯ-ಚಂದ್ರಗುಪ್ತ, ಗುರು ಗೋವಿಂದ-ಷರೀಫ ಹೀಗೆ. ಎಲ್ಲ ಕಥೆಯಲ್ಲೂ ನಾವು ಕಾಣುವ ಸಾಮಾನ್ಯ ಅಂಶ ಏನೆಂದರೆ  ಶಿಷ್ಯನು ಗುರುವಿನ ಮೇಲಿಟ್ಟಿದ್ದ ಅಪರಿಮಿತ ಭಕ್ತಿ, ಶಿಷ್ಯನ ಶಿಸ್ತು ಹಾಗೂ ಕಠಿಣವಾದ ಆಜ್ಞ್ನಾಪಾಲನೆ. ತೊಡೆಯ ಮೇಲೆ ತಲೆ ಇಟ್ಟು ಮಲಗಿದ್ದ ಗುರುಗಳಿಗೆ ತೊಂದರೆಯಾಗದಿರಲಿ ಎಂದು ದುಂಬಿಯ ಕಡಿತವನ್ನು ಸಹಿಸಿಯೂ ಶಾಪಕ್ಕೊಳಗಾದ ಕರ್ಣನ ಕಥೆ ಯಾರಿಗೆ ಗೊತ್ತಿಲ್ಲ?

ಈ ದಿನಗಳಲ್ಲಿ ’ಗುರು-ಶಿಷ್ಯ’ ಅರ್ಥದ ಸೊಬಗೇ ಕಳೆದುಹೋಗಿದೆ. ಹಾಗಂತ ಅಂದಿನ ಕಾಲದ್ದೇ ಶ್ರೇಷ್ಟ ಎಂದೇನೂ ಅಲ್ಲ. ಬಲರಾಮನಂತಹ ಗುರುವಿಗೆ ದುರ್ಯೋಧನ ಶಿಷ್ಯನಾಗಿದ್ದ. ಇಂದಿನ ವಿಚಾರವಾಗಿ ನಾ ಹೇಳಹೊರಟಿದ್ದು ಇಂದು ಇದೊಂದು ಲೇವಡಿಯ ಭಾಷಾ ಪ್ರಯೋಗವಾಗಿದೆ. ’ಏನ್ ಗುರೂ, ಕ್ಲಾಸ್ ಬಂಕ್ ಮಾಡಿ ಫಿಲಂಗೆ ಹೋಗಣ್ವಾ?’ ಅನ್ನೋದು ಕೆಲವು ವರ್ಷಗಳ ಹಿಂದಿನ ಮಾತಾದರೆ, ಈಗ ’ಶಿಷ್ಯಾ! ಇವೆಲ್ಲ ನನ್ ಹತ್ರ ಬೇಡ. ನಾನು ಒಂದ್ಸಾರಿ ಲಾಂಗ್ ಎತ್ತಿದರೆ ನಿನ್ನ ಪಟಾಲಂ ಶಾರ್ಟ್ ಆಗತ್ತೆ, ಹುಷಾರ್!!!’.

ಒಳ್ಳೆಯದೂ ಕೆಟ್ಟದ್ದೂ ಎಲ್ಲ ಕಾಲಕ್ಕೂ ಇರುವುದೇ ನಿಜ. ಆದರೂ ಹೀಗೊಂದು ಕವಿತೆ ಇದೆ:

ಆಗಿನ ಕಾಲ:
--------
ಹಿಂದೆ ಗುರುವಿದ್ದ
ಮುಂದೆ ಗುರಿಯಿತ್ತು
ಸಾಗುತ್ತಿತ್ತು ರಣಧೀರರ ಗುಂಪು

ಈಗಿನ ಕಾಲ:
--------
ಹಿಂದೆ ಗುರುವಿಲ್ಲ
ಮುಂದೆ ಗುರಿಯಿಲ್ಲ
ಸಾಗುತ್ತಿದೆ ರಣಹೇಡಿಗಳ ಗುಂಪು

೧೧ನೇ ಜುಲೈ ಹುಣ್ಣಿಮೆಯಂದು ಎಲ್ಲೆಲ್ಲೂ ಗುರು ಪೌರ್ಣಿಮಾ ಆಚರಿಸಲಾಗುತ್ತಿದೆ. ಈ ಸುಸಂಧರ್ಭದಲ್ಲಿ ಜಗತ್ತಿನ ಎಲ್ಲ ಗುರುಗಳಿಗೂ ನನ್ನ ಅನಂತ ವಂದನೆಗಳು ...

No comments:

Post a Comment