Thursday, February 5, 2015

ಚಾಲ್ತಿಯ ಪಂಚಾಯತಿ

ತಾವು ಚಲಾವಣೆಯ ನಾಣ್ಯವಾಗಿ ಸದಾ ಸುದ್ದಿಯಲ್ಲಿರಬೇಕು ಎಂಬುವುದು ಬೇರೆ ಯಾವ ಕ್ಷೇತ್ರಗಳಿಗೆ ಅನ್ಯಯಿಸುವುದೋ ಇಲ್ಲವೋ, ಮನರಂಜನೆಯ ಉದ್ಯಮಕ್ಕಂತೂ  ಇದು ಅಕ್ಷರಶ: ಅನ್ವಯಿಸುತ್ತದೆ. ಈ ಲೇಖನದ ಉದ್ದೇಶ ಚಾಲ್ತಿ ಅಥವಾ ಚಲಾವಣೆ ಕುರಿತಾಗಿ ನನ್ನದೆರಡು ಅನಿಸಿಕೆ.

ಮನರಂಜನೆಯ ಉದ್ಯಮದಲ್ಲಿ ಚಲಾವಣೆಯಲ್ಲಿರಿಸಿಕೊಳ್ಳಲು ನೆಡೆಸುವ ಕಸರತ್ತುಗಳೇ ಒಂದು ವಿಸ್ಮಯ. ಪ್ರಚಾರ ಮಾಧ್ಯಮಗಳ ಪ್ರಭಾವ ಅಷ್ಟಾಗಿ ಇಲ್ಲದಿದ್ದ ದಿನಗಳಲ್ಲಿ ಈ ರೀತಿಯ ಥಳುಕುಗಳು ಆ ಕಲ್ಲಕ್ಕೆ ತಕ್ಕಂತೆ ಇದ್ದರೂ ಸಾಮಾನ್ಯ ಜನಜೀವನದ ಕದ ತಟ್ಟುತ್ತಿರಲಿಲ್ಲ. ಸಮುದ್ರದಲ್ಲಿ ಹುಟ್ಟೋ ಮೀನೊಂದು ಜನ್ಮ ತಾಳಿ ಇನ್ನಾವುದೋ ದೊಡ್ಡ ಮೀನಿಗೆ ಬಲಿಯಾಗಿದ್ದು ಹೇಗೆ ಹೊರ ಜಗತ್ತಿಗೆ ತಿಳಿಯುವುದೇ ಇಲ್ಲವೋ ಹಾಗೆ.

ಸಿನಿಮಾ ಪತ್ರಿಕೆಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದು ಹಲವಾದರೆ ಸುದ್ದಿಗೇ ಸಿಕ್ಕದೇ ಹೋದದ್ದು ಸಾವಿರಾರು. ಎಷ್ಟೊ ಬಾರಿ ಈ ಚಲಾವಣೆಯ ಆಟ ವಿಪರೀತಕ್ಕೆ ಹೋಗಿ, ಜಗತ್ತಿನ ನಿಗೂಢ ಸಾವುಗಳು ಉಂಟಾಗಿ ಅವರೊಂದಿಗೇ ಸಮಾಧಿ ಸೇರಿದೆ. ಇಂದಿಗೂ ನಿಗೂಢವಾಗೇ ಉಳಿದಿವೆ. ಇಂದಿನವರು ಅಂದಿನ ಇಂಥಾ ಘಟನೆಗಳನ್ನು ಹೊರ ತೆಗೆದು ನವಿರಾದ ಲೇಪನ ಹಚ್ಚಿ ಚಿತ್ರ ಮಾಡಿ ಅಳಿದ ಕಲಾವಿದರ ನಿಗೂಢ ರಹಸ್ಯವನ್ನು ಬಯಲಿಗೆಳೆಯುವ ಪ್ರಯತ್ನ ಮಾಡಿದ್ದಾರೆ.

ಇಂದು ಪ್ರಚಾರ ಮಾಧ್ಯಮ ಬಲವಾಗಿದೆ. ಟಿವಿ, ಅಂತರ್ಜಾಲ ಮಾಧ್ಯಮಗಳು ಅವಶ್ಯಕತೆಗಿಂತ ಹೆಚ್ಚೇ ವಿಷಯ ಬಯಲು ಮಾಡುತ್ತಿವೆ. ಸಾಮಾಜಿಕ ತಾಣದಲ್ಲಂತೂ ಒಂದು ಸಣ್ಣ ಸುದ್ದಿಯೂ ವಿರಾಟ ರೂಪ ತಾಳಬಲ್ಲುದಾಗಿಸುವ ಶಕ್ತಿ ಹೊಂದಿದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಯಾರಾದರೂ ತಮ್ಮನ್ನು ಚಲಾವಣೆಯಲ್ಲಿ ಇರಿಸಿಕೊಳ್ಳಲು ವೇದಿಕೆಗಳು ಸಾಕಷ್ಟಿವೆ. ಗಾಡಿ ಚಾಲ್ತಿಯಲ್ಲಿ ಇಲ್ಲದಿದ್ದರೆ ನಿಂತೇ ಹೋಗುತ್ತೆ !

ತಮ್ಮ ಚಿತ್ರ ಜನ ನೋಡಲಿಲ್ಲ ಎಂಬುದೇ ದೊಡ್ಡ ವಿಷಯವಾಗಿ ಸಿನಿಮಾಕ್ಕಿಂತಲೂ ಆತನ ಆಕ್ರೋಶದ ವಿಡಿಯೋ ಕ್ಲಿಪ್ಪಿಂಗ್ ಹೆಚ್ಚು ಹೆಸರು ಮಾಡಿದೆ ಎಂದರೆ ನೀವೇ ಅರ್ಥೈಸಿಕೊಳ್ಳಬಹುದು. ಚಲಾವಣೆಯಲ್ಲಿ ಇರಿಸಿಕೊಳ್ಳಲು ಇದೂ ಒಂದು ತಂತ್ರ.

ಬೆಳ್ಳಿತೆರೆಯ ಒಂದು ಸಣ್ಣ ಅಂಗ ಎಂದೇ ಜನ್ಮ ತಾಳಿದ ವಾಮನ ರೂಪಿ ಕಿರುತೆರೆ ಇಂದು ದೈತ್ಯಾಕಾರವಾಗಿ ತ್ರಿವಿಕ್ರಮವಾಗಿದೆ. ಕಿರುತೆರೆ ಎಂದು ಮೂಗೆಳೆಯುತ್ತಿದ್ದ ಸಿನಿಮಾ ಮಂದಿ, ಇಂದು ಆ ಕಿರುತೆರೆ ಮನೆಮನೆಗಳಲ್ಲಿ ಪಡೆದಿರುವ ಸ್ಥಾನ ಗುರುತಿಸಿ, ಎರಡು-ಮೂರು ಘಂಟೆ ಮಾತ್ರ ಮುಖ ತೋರಿಸಿ ಹೋಗುವುದಕ್ಕಿಂತ ವಾರಕ್ಕೆ ಐದೋ-ಆರೋ ದಿನಗಳ ಕಾಲ ತಾವು ಜನರ ಮುಂದೆ ಬಂದು ಚಲಾವಣೆಯಲ್ಲಿ ಇರಲು ಬಯಸುತ್ತಿದ್ದಾರೆ. ಸಿನಿಮಾಕ್ಕಿಂತ ಹೆಚ್ಚು ಒಲವು ಟಿವಿ ಕಡೆ ತೋರಿದ್ದಾರೆ.

ಮೊದಲ ಹಂತದಲ್ಲಿ ಧಾರಾವಹಿಗಳಿಗೆ ಲಗ್ಗೆ ಹಾಕಿದ ಮೇಲೆ ಈ ನಡುವೆ ರಿಯಾಲಿಟಿ ಶೋಗಳಲ್ಲೇ ಮಿಂಚುತ್ತಿದ್ದಾರೆ. ಈ ಸನ್ನಿವೇಶ ಒಂದು ರೀತಿ ವಿನ್-ವಿನ್ ಮಾದರಿ. ತಾರೆಯರು ರಿಯಾಲಿಟಿ ಶೋ’ಗೆ ಬರುತ್ತಾರೆ ಎಂದರೆ ಕಾರ್ಯಕ್ರಮದ ಟಿ.ಆರ್.ಪಿ ಏರುತ್ತದೆ. ಜನರ ಮುಂದೆ ತಮ್ಮ ಮುಖ ತೋರಿಸಿ ತಮ್ಮ ಬೇಳೇಕಾಳು ಬೇಯಿಸಿಕೊಳ್ಳಲು ಇವರಿಗೆ ಸಹಾಯಕವಾಗುತ್ತದೆ.

ರಮೇಶ್, ಎಸ್.ಪಿ, ಹಂಸಲೇಖ, ಹೀಗೆ ಕೆಲವರು ತಮ್ಮ ಛಾಪನ್ನು ತೋರಿಸಿ ಅವರ ಕಾರ್ಯಕ್ರಮಗಳಿಗೆ ಸೂಕ್ತ ಆಯ್ಕೆ ಎನ್ನಿಸಿ ನ್ಯಾಯ ಒದಗಿಸಿದ್ದಾರೆ. ಇಂಥವರು ಬೆರಳೆಣಿಕೆಯಷ್ಟು ಮಾತ್ರ. ಇನ್ನು ಹಲವರದ್ದು ’ಇವರು ನಿಜಕ್ಕೂ ಬೇಕೇ?’ ಅನ್ನಿಸುತ್ತದೆ.

ನೃತ್ಯ ಬಾರದವರು ಟಿವಿ’ಯ ರಿಯಾಲಿಟಿ ಶೋಗಳಲ್ಲಿ ಮುಖ್ಯ ತೀರ್ಪುಗಾರರಾಗಿ ಕಾಣಿಸಿಕೊಂಡು, ತಮಗೇ ಬಾರದ ವಿದ್ಯೆಯ ಬಗ್ಗೆ ಇನ್ನೊಬ್ಬರ ಮೌಲ್ಯಮಾಪನ ಮಾಡುತ್ತಾರೆ. ಅವರು ವೇದಿಕೆ ಮೇಲಿದ್ದಾರೆ ಅನ್ನೋದನ್ನ ಬಿಟ್ಟರೆ ಬೇರೆ ಪ್ರಯೋಜನ ಅಷ್ಟೇನೂ ಅನ್ನಿಸುವುದಿಲ್ಲ. ಇನ್ನು ಅವರ ಹಾವಭಾವ ಮತ್ತು ದಿರಿಸಿನ ಬಗ್ಗೆ ನಂತರ ಮಾತನಾಡೋಣ.

ಗ್ಲ್ಯಾಮರ್ ಜಗತ್ತು ಯಾರನ್ನು ತಾನೇ ಸೆಳೆದಿಲ್ಲ. ಒಂದಲ್ಲಾ ಒಂದು ಹಂತದಲ್ಲಿ ತಾವು ತಮ್ಮ ನೆಚ್ಚಿನ ಹೀರೋ ಅಥವಾ ಹೀರೋಯಿನ್’ನಂತೆ ಆಡುವುದು ಬಹಳ ಸಾಮಾನ್ಯ.

ಇಂದಿನ ಪ್ರಭಾವಶಾಲಿ ಪ್ರಚಾರ ಮಾಧ್ಯಮದಲ್ಲಂತೂ, ನಟ/ನಟಿಯರು ನಿಂತರೂ ಸುದ್ದಿ, ಕುಂತರೂ ಸುದ್ದಿ, ಕುಸಿದರಂತೂ ಸುದ್ದಿಯೋ ಸುದ್ದಿ. ಇವರು ಹೆಂಡಿರನ್ನು ದಿವೋರ್ಸ್ ಮಾಡಿದರಂತೆ, ಅವರು ಅವಳೊಡನೆ ಪಾರ್ಟಿಯಲ್ಲಿ ಕಾಣಿಸಿಕೊಂಡರಂತೆ, ಯಾವನೋ ಒಬ್ಬ ಈಕೆಗೆ ಕೆನ್ನೆ ಹೊಡೆದನಂತೆ, ಆಕೆ ಮೂಗು ಮೊಂಡು ಮಾಡಿಕೊಂಡಳಂತೆ, ಇಂಥಾ ನಟಿಗೆ ಮಗು ಬೇಡವಂತೆ ನಾಯಿ ಬೇಕಂತೆ ಹೀಗೆ ....

ತಾರೆಯರ ಕುಟುಂಬದಿಂದ ಉದಯಿಸುವ ನವತಾರೆಗೆ ಇಂದು ಸಾಮಾಜಿಕ ತಾಣ ಒಂದು ಅದ್ಬುತ ಮಣೆ ಹಾಕುತ್ತದೆ. ಅವರೋ ನೆಲದ ಮೇಲೆ ಕಾಲಿಡದೆ ಒಂದು ಹೆಜ್ಜೆ ಮೇಲಿಟ್ಟುಕೊಂಡೇ ಎಂಟ್ರಿ ಕೊಡುತ್ತಾರೆ. ಚಿತ್ರಕ್ಕೆ ಬಳಸಲಾಗುವ ಜಾಹೀರಾತುಗಳ ಬಲದಿಂದ ರಾತ್ರೋ ರಾತ್ರಿ ಸೂಪರ್ ಸ್ಟಾರ್’ಗಳಾಗಿರುತ್ತಾರೆ. ಚಿತ್ರದ ಬಿಡುಗಡೆಯ ನಂತರದ್ದು ಇನ್ನೊಂದು ಕಥೆ ಬಿಡಿ. ಒಂದು ಸಿನಿಮಾ ಇಪ್ಪತ್ತೈದು ದಿನಗಳು ನುಗ್ಗಿತೋ ಆತ/ಆಕೆಯ ಸ್ಟಾರ್ ವಾಲ್ಯೂ ಗಗನಕ್ಕೇರಿರುತ್ತದೆ. ಇದು ಹಿಂದಿ ಚಿತ್ರರಂಗಕ್ಕೆ ಜಾಸ್ತಿ ಹೊಂದೋ ಮಾತು. ಚಿತ್ರ ನೂರು ಕೋಟಿಯ ಕ್ಲಬ್ ಸೇರಿತು ಅಂತ ಎಲ್ಲೆಲ್ಲೂ ಪ್ರಚಾರ. ಆಗ ನಟಿ/ನಟಿಯರದೇ ಒಂದು ಬಳಗ, ಟ್ವಿಟ್ಟರ್’ನ ಹಿಂಬಾಲಕರು, ಫೇಸ್ಬುಕ್’ನಲ್ಲಿ ಮೆಚ್ಚುವರು ಹೀಗೆ. ಅವರನ್ನು ಎಲ್ಲಿಗೋ ತೆಗೆದುಕೊಂಡು ಹೋಗಿ ಕೂಡಿಸಿಬಿಡುತ್ತದೆ.

ಹೀಗೆ ಶ್ರೀಸಾಮಾನ್ಯರಾದವರು ಸರ್ವಮಾನ್ಯರಾಗಿ ಅವರು ಮಾಡಿದ್ದೇ ಸರಿ ಎನ್ನುವ ಹಾಗೆ ಜನ ಅವರನ್ನು ನೋಡುತ್ತಾರೆ. ಸಭೆ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮೋಡಗಳ ಮಧ್ಯದಿಂದ ಇಳಿದು ಬಂದವರಂತೆ ಆಡುತ್ತ ಜನರನ್ನು ರಂಜಿಸುತ್ತಾರೆ. ಹಲವಾರು ಬಾರಿ ತೆರೆಯ ಹೊರಗಿನಲ್ಲೂ ತೋರುವ ಈ ನಟನೆ ನಿಜಕ್ಕೂ ಅತಿರೇಕ ಅನ್ನಿಸುತ್ತದೆ. ಇವರುಗಳು ತಾವೇ ತಾವಾಗಿ ಹಾಗೆ ವಯ್ಯಾರ ಮಾಡುತ್ತಾರೋ ಅಥವಾ ಅವರು ಹಾಗೆ ನೆಡೆದುಕೊಳ್ಳಬೇಕೆಂಬುದು ಪಾರ್ಟಿಯ / ಕಾರ್ಯಕ್ರಮದ ಬೇಡಿಕೆಯೋ ಗೊತ್ತಿಲ್ಲ.

ಅವರ ತಪ್ಪೇ ಇಲ್ಲದೆ ಎಂಥದೋ ಸ್ಥಿತಿಗೆ ತಲುಪುತ್ತಾರೆ. ಹೀಗೆ ಎಲ್ಲೋ ಹೋಗಿ ಕೂತವರು ’ಅರ್ಧ ರಾತ್ರಿಯಲ್ಲಿ ಐಶ್ವರ್ಯ’ ಬಂದವರಂತೆ ಆಗುತ್ತಾರೆ. ತಾವು ಇರಬೇಕಾದೇ ಉನ್ನತ ಸ್ಥಾನದಲ್ಲಿ ಎಂದು ಅಹಂ ಬೆಳೆಸಿಕೊಂಡು ಶ್ರೀಘ್ರದಲ್ಲೇ ನೆಲಕ್ಕೆ ಬಿಡಿ ಪಾತಾಳಕ್ಕೇ ಕುಸಿಯುತ್ತಾರೆ. ಆ ನಂತರ ಇನ್ಯಾವುದೋ ವಹಿವಾಟಿನಲ್ಲಿ ಸಿಲುಕುತ್ತಾರೆ. ಅದು ಅವರ ದೌರ್ಭಾಗ್ಯ. ಇನ್ನು ಕೆಲವರು ತಾವು ಎಂದೆಂದೂ ಉನ್ನತ ಸ್ಥಾನದಲ್ಲೇ ಇರಬೇಕು ಎಂಬುದನ್ನು ಅರಿತುಕೊಂಡು ಅದನ್ನು ಸರ್ವಸನ್ನದರಾಗುತ್ತಾರೆ. ಆಗ ಶುರುವಾಗುವುದೇ ಈ ಚಾಲ್ತಿ ಅಥವಾ ಚಲಾವಣೆಯ ಆಟ. ಚಾಲ್ತಿಯಲ್ಲಿರಲು ಏನೂ ಮಾಡಲಿಕ್ಕೆ ತಯಾರಾಗುತ್ತಾರೆ.

ನಿರ್ಮಾಪಕರ ಹಿತದೃಷ್ಟಿಯಿಂದ, ಅಥವಾ ತಮಗೆ ಮುಂದಿನ ದೊಡ್ಡ ಬ್ಯಾನರ್’ನಲ್ಲಿ ಅವಕಾಶ ದೊರಕಿಸಿಕೊಳ್ಳಲೋಸ್ಕರ ಅವರ ಸಿನಿಮಾ ರಿಲೀಸ್ ಆಗುವ ಸಮಯಕ್ಕೆ ಯಾವುದೋ ವಿವಾದಕ್ಕೆ ಸಿಲುಕಿಸಿಕೊಳ್ಳುತ್ತಾರೆ. ಋಣಾತ್ಮಕ ಪಬ್ಲಿಸಿಟಿಯಿಂದ ಪ್ರೇಕ್ಷಕರ ಮುಂದೆ ಬರುತ್ತಾರೆ. ಸಾಮಾಜಿಕ ತಾಣ, ಟಿವಿ ಮಾಧ್ಯಮ (ಬ್ರೇಕಿಂಗ್ ನ್ಯೂಸ್), ಸುದ್ದಿ ಪತ್ರಿಕೆಗಳು, ನಿಯತಕಾಲಿಕೆಗಳು ಹೀಗೆ ಎಲ್ಲೆಲ್ಲೂ ಇದೇ ಚರ್ಚೆ. ಅನುಕಂಪ ಗಿಟ್ಟಿಸಿಕೊಂಡು ತಮ್ಮ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುತ್ತಾರೆ. ಚಿತ್ರ ರಿಲೀಸ್ ಆಗಿ ’ಹಿಟ್ಟೋ ತರಿಯೋ’ ಆದ ಮೇಲೆ ಹುಟ್ಟಿಕೊಂಡ ವಿವಾದ ಥಣ್ಣಗಾಗುತ್ತೆ. ಅಲ್ಲಿಯವರೆಗೆ ದನಿ ಎತ್ತಿದ ಸಂಘಟನೆಗಳು ಘಟನೆಯೇ ನೆಡೆದಿಲ್ಲವಂತೆ ಸುಮ್ಮನಾಗುತ್ತಾರೆ.

ಚಲಾವಣೆಯ ವಿಚಾರದಲ್ಲಿ ಮತ್ತೊಂದು ವಿಚಾರ ಅಡಕವಾಗಿದೆ. ಅದೇ ಅನುಕರಣಿಕೆ. ಇದೇನೂ ಇಂದು ನೆನ್ನೆಯದಲ್ಲ ಆದರೆ ಇಂದು ನೆಡೆಯುತ್ತಿರುವುದು ನೋಡಿದರೆ ನೆನ್ನೆಯವರೆಲ್ಲ ವೇಸ್ಟ್ ಎನಿಸುತ್ತದೆ ! ಪಾಶ್ಚಾತ್ಯರು ಇಲ್ಲಿನ ನಟೀಮಣಿ ಸೀರೆ ಉಟ್ಟಳು ಎಂದು ತಾವೂ ಸೀರೆ ಉಟ್ಟಿದ್ದು ನಾನಂತೂ ಕಂಡಿಲ್ಲ ಕೇಳಿಲ್ಲ. ಆದರೆ ನಮ್ಮಲ್ಲಿ ಹಾಗಲ್ಲ. ಅವರು ಹಾಗೆ ಉಡುಗೆ ತೊಟ್ಟಿದ್ದರು ನಾವೂ ತೊಡುತ್ತೇವೆ ಎಂಬ ಧೋರಣೆ. ಈಚೆಗೆ ಹೆಚ್ಚಿರುವ ನಟೀಮಣಿಯರ ಎದೆಗಾರಿಕೆ ಪಾಶ್ಚಾತ್ಯರನ್ನೂ ಮೀರಿಸುವ ಹಾಗಿದೆ. ಅಂದ ಹಾಗೆ ಇನ್ನೊಂದು ವಿಷಯ. ಇಂದು ನಟೀಮಣಿಯರಿಗೆ ಮರೆವಿನ ರೋಗ ಹೆಚ್ಚಿದೆ. ಮೊದಲೇ ಕನಿಷ್ಟ ವಸ್ತ್ರಧಾರಿಣಿಯರು, ಅದರ ಜೊತೆ ಮುಖ್ಯವಾದ ವಸ್ತ್ರಗಳನ್ನು ಮನೆಯಲ್ಲೇ ಮರೆತು ಬರುತ್ತಾರೆ. ಇದೂ ಚಲಾವಣೆಯ ಒಂದು ನಾಟಕ. ಇರಲಿ ಆದರೆ ಇವರಿಂದ ಯುವಜನತೆ ಏನು ಕಲಿಯುತ್ತಿದ್ದಾರೆ ಎಂಬುದು ಯೋಚಿಸಿದರೂ ಭಯವಾಗುತ್ತೆ.

ಕೇವಲ ’ಮನರಂಜನೆ ಮಾಧ್ಯಮ’ಕ್ಕೆ ಮಾತ್ರ ಸೀಮಿತವಾಗಿರುವ ಒಂದು ವಿಚಾರ ಇದೆ. ಅದೇ 'wardrobe malfunction'. ಸಾವಿರಾರು / ಲಕ್ಷಾಂತರ ಜನರ ಮುಂದೆ ಸ್ಟೇಜಿನ ಮೇಲೆ ಬರುವ ಆಕೆಗೆ ಮಾತ್ರ ಏನೇನೋ ಆಗುತ್ತೆ. ಇದನ್ನೇ ಚಲಾವಣೆಯ ನಾಟಕ ಅನ್ನೋದು. ತಾವು ನೆಡೆಸಿಕೊಟ್ಟ  ಅಥವಾ ಭಾಗವಹಿಸಿದ ಕಾರ್ಯಕ್ರಮದ ಬಗ್ಗೆ ಮರುದಿನ ಜಗತ್ತು ಮಾತನಾಡಬೇಕು ಅಂದರೆ ಸ್ಟೇಜ್ ಮೇಲೆ ಅವರಿಗೆ ಅರಿವಿಲ್ಲದಂತೆ ಅರಿವೆ’ಗೆ ಏನೋ ಆಗಬೇಕು. ಆಗ ಕಾರ್ಯಕ್ರಮ ಯಶಸ್ವಿ ಅಂತರ್ಥ. ಪ್ರತಿ ರೆಡ್ ಕಾರ್ಪೆಟ್ ಕಾರ್ಯಕ್ರಮದಲ್ಲಿ ಜೆನ್ನಿಫರ್ ಲೋಪೇಜಳ ವಸ್ತ್ರ ನೋಡಿದರೆ ಸಿರಿವಂತರ ವಸ್ತ್ರ ಬಡತನದ ಬಗ್ಗೆ ಖೇದವಾಗುತ್ತೆ.

ಚಲಾವಣೆಯ ವಿಚಾರವಾಗಿ ಅಮೇರಿಕದ ವಿಷಯವೇ ಹೇಳಿದರೆ ಜೆನ್ನಿಫರ್ ಲೋಪೇಜ್, ಲೇಡಿ ಗಾಗಾ, ಮೈಲಿ ಸೈರಸ್, ಬಿಯಾನ್ಸೆ, ಮರಾಯ ಕರಿ, ಬ್ರಿಟನಿ ಸ್ಪಿಯರ್ಸ್, ಸೆಲೇನಾ, ಜಸ್ಟಿನ್ ಬೀಬರ್.... ಒಬ್ಬರೇ? ಇಬ್ಬರೇ? ಉಫ್! ಪಟ್ಟಿ ಬೆಳೆಯುತ್ತಾ ಹೋಗುತ್ತೆ. ಮೈಲಿ ಸೈರಸ್’ಳ ಶೋಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗಲಾಗಲಿ, ಕಳಿಸಲಾಗಲಿ ಹೆತ್ತವರು ಹೆದರುತ್ತಾರೆ. ಬಹುಶ: ಅಂತಹ ಗಾಳಿ ಭಾರತಕ್ಕೆ ಬೀಸಿಲ್ಲ ಎಂದೇ ನನ್ನ ನಂಬುಗೆ.

ನಟ/ನಟಿಯರು ತೆರೆಯ ಮೇಲೆ, ಪಾರ್ಟಿಗಳಲ್ಲಿ, ಅವಾರ್ಡ್ ಕಾರ್ಯಕ್ರಮಗಳಲ್ಲಿ ಚಲಾವಣೆಯಲ್ಲಿ ಇರಲಿಕ್ಕಾಗಿಯೇ ತೋರುವ ಹಾವಭಾವವನ್ನು ನಿಜವೆಂದು ಭ್ರಮಿಸಿ ಅನುಕರಿಸುವ ಯುವ ಪೀಳಿಗೆ ಎತ್ತ ಹೊರಟಿದೆ? ಇಂಥವರನ್ನು ವೈಭವೀಕರಿಸಿ ಮಾಧ್ಯಮ ಸಮಾಜವನ್ನು ಎಲ್ಲಿಗೆ ಎಳೆದೊಯ್ಯುತ್ತಿದೆ? ಅಥವಾ ಜಗವೇ ಹೀಗೆ, ನಾನೇ ಸರಿ ಇಲ್ಲವೇ?

- ಬರೆದವರು: ಶ್ರೀನಾಥ್ ಭಲ್ಲೆ


--------------

ಚಾಲ್ತಿಯ ಹೆಸರಲ್ಲಿ ನಟ ನಟಿಯರು ನೆಡೆಸುವ ಕಸರತ್ತುಗಳನ್ನು ನೋಡಿ, ರೋಸಿ ಅದರ ಬಗ್ಗೆ ಬರೆಯುವ ಮನಸ್ಸಾಗಿ ಬರೆದ ಲೇಖನ ನಿಮ್ಮ ಮುಂದಿದೆ.

No comments:

Post a Comment