Monday, April 19, 2010

ನನಗೆ ಸನ್ಮಾನ ಅಂತೆ !

ಮನೆಯವರೆಲ್ಲ ಬೇಸಿಗೆ ರಜಕ್ಕೆ ಊರಿಗೆ ಹೋಗಿದ್ದರು. ನಾನು ಒಬ್ಬನೇ ಮನೆಯಲ್ಲಿ. ಅರ್ಜಂಟ್ ಕೆಲಸದ ಮೇಲೆ ಹುಬ್ಬಳ್ಳಿಗೆ ಹೋಗಬೇಕಾಗಿ ಬಂತು. ಬೇಸಿಗೆ ರಜ ಬೇರೆ. ಟ್ರೈನಿನ ಟಿಕೆಟ್ ಸಿಗಲಿಲ್ಲ. ಬೇರೆ ದಾರಿ ಇಲ್ಲ. ಟೂರಿಸ್ಟ್ ಬಸ್ಸಿಗೆ ಟಿಕೆಟ್ ಬುಕ್ ಮಾಡಿಸಿ ಹೊರಟೆ. ಮಬ್ಬಾದ ಬೆಳಕಿನ ಬಸ್ಸಿನಲ್ಲಿ ಕುಳಿತಿದ್ದೆ. ಒಳ್ಳೇ ಸುಖಾಸನ. ಸ್ವಲ್ಪ ಹೊತ್ತಿಗೆ ಹೊರಡುತ್ತದೆ. ಬೊಂಬಾಟ್ ನಿದ್ದೆ ಮಾಡಬಹುದು ಎಂಬೋ ಎಣಿಕೆ. ಹಾಗೇ ಕಣ್ಣು ಮುಚ್ಚಿದೆ.

ಮೊಬೈಲು ಕಿರುಗುಟ್ಟಿತು.

ಮೊದಲ ವಿಘ್ನ ಎಂದುಕೊಳ್ಳುತ್ತ ಕರೆ ಸ್ವೀಕರಿಸಿದೆ. ಆ ಕಡೆ ವ್ಯಕ್ತಿಯ ದನಿ ಪರಿಚಯವಂತೂ ಇರಲಿಲ್ಲ. ತಮ್ಮ ಪರಿಚಯ ಹೇಳಿಕೊಂಡು, ಇಷ್ಟು ತಡವಾಗಿ ಕರೆ ಮಾಡಿದ್ದಕ್ಕೆ ಕ್ಶಮೆ ಕೇಳಿ, ನನಗೆ ಅಭಿನಂದನೆ ತಿಳಿಸಿದರು. ಯಾಕೆ, ಏನು, ಎತ್ತ ಎಂಬುದರ ಅರಿವೇ ಆಗಲಿಲ್ಲ. ಕುತೂಹಲದಿಂದ ವಿಷಯ ಏನು ಎಂದು ಕೇಳಿದೆ. ಅರ್ಧ ಘಂಟೆ ಹೇಳುತ್ತಾ ಹೋದರು. ಸಾರಾಂಶ ಇಷ್ಟೇ. ಯಾವುದೋ ಸ್ವಯಂ ಸೇವಕ ಸಂಘದವರು ನನ್ನನ್ನು "ವರ್ಷದ ಸಮಾಜ ಸೇವಕ" ಎಂದು ಗುರುತಿಸಿ ಸನ್ಮಾನ ಮಾಡಲು ನನ್ನ ಒಪ್ಪಿಗೆ ಕೇಳಿದರು. ಸಿಕ್ಕಾಪಟ್ಟೆ ಆಶ್ಚರ್ಯ ಮತ್ತು ಸಂತೋಷವಾದರೂ ತೋರ್ಪಡಿಸದೆ ಆ ದಿನ ಸ್ವಲ್ಪ ಬಿಜಿ ಇದ್ದೀನಿ ಆದರೂ ಖಂಡಿತ ಬರುತ್ತೀನಿ ಎಂದು ಲೈಟಾಗಿ ಹಿರಿಯತನ ತೋರಿ, ಮೊಬೈಲ್ ಆರಿಸಿದೆ.

ಇದು ನನ್ನ ಜೀವನದಲ್ಲಿ ’ಬಯಸದೇ ಬಂದ ಭಾಗ್ಯ’ವಾಗಿತ್ತು. ಅಲ್ಲಾ, ಬೆಳಿಗ್ಗೆ ತಾನೇ ಚಾರ್ಜ್ ಮಾಡಿದ್ದೆ. ಮಧ್ಯೆ ಮಧ್ಯೆ ಏನೊ ಕಿರುಗುಟ್ಟುತ್ತಿತ್ತು. ಚಾರ್ಜ್ ಇಲ್ಲವೋ ಅಥವಾ ಯಾರಾದರೂ ಅದೇ ಸಮಯದಲ್ಲಿ ನನಗೆ ಫೋನ್ ಮಾಡುತ್ತಿದ್ದರೋ ಗೊತ್ತಿಲ್ಲ. ಮೇಲಾಗಿ, ಇಂತಹ ಉತ್ತಮ ಫೋನ್ ಕಾಲ್ ಬಿಟ್ಟು ಬೇರೆ ಕರೆಯನ್ನು ಸ್ವೀಕರಿಸಲು ನಾನೇನು ದಡ್ಡನೇ?

ಮೊಬೈಲ್ ಮತ್ತೆ ಕಿರುಗುಟ್ಟಿತು. ನಮ್ಮ ಪಕ್ಕದ ಮನೆ ಸಿದ್ದರಾಮ. ಈ ಮನುಷ್ಯನಿಗೆ ಹೊತ್ತು ಗೊತ್ತು ಏನಿಲ್ಲ. ನೆನ್ನೆ ರಾತ್ರಿ ಇದೇ ಸಮಯಕ್ಕೆ ಫೋನ್ ಮಾಡಿ, ಹೇಗೂ ನಿಮ್ಮ ಮನೆಯವರೂ ಯಾರೂ ಇಲ್ಲ, ವಾಕಿಂಗ್ ಬರ್ತೀರೇನೂ ಅಂತ ಕೇಳಿದ್ರು. ಇವತ್ತೂ ಅದೇ ಅಂತ ಕಾಣುತ್ತೆ. ಕರೆ ಸ್ವೀಕರಿಸಲಿಲ್ಲ. ಸುಮ್ಮನಾದೆ.

ಮತ್ತೆ ಐದು ನಿಮಿಷಕ್ಕೆ ಅವರದೇ ಕರೆ. ಮೊದಲು ಅವರಿಗೆ ವಿಷಯ ತಿಳಿಸಿ, ಫೋನ್ ಆಫ್ ಮಾಡಿ, ಸನ್ಮಾನ ಸಮಾರಂಭಕ್ಕೆ ಯಾವ ಬಟ್ಟೆ ಹಾಕಿಕೊಳ್ಲಬೇಕು ಎಂಬೆಲ್ಲ ವಿಷಯ ಮನದಲ್ಲೇ ಪಟ್ಟಿ ಮಾಡಬೇಕು ಅಂತ ನಿರ್ಧರಿಸಿ, ಕರೆ ಸ್ವೀಕರಿಸಿದೆ.

ಕೂಡಲೆ ’ರ್ರೀ, ಪ್ರಾಣೇಶ್. ಎಲ್ರೀ ಇದ್ದೀರಾ? ನಿಮ್ಮ ಮನೆ ಫೋನ್ ಬೇರೆ ಕೆಟ್ಟ ಹಾಗೆ ಇದೆ. ಮೊಬೈಲ್ ಬಿಜಿ ಇದೆ. ನನಗೂ ಆಗ್ಲಿಂದ ಗುಂಡಿ ಒತ್ತಿ ಒತ್ತಿ ಸಾಕಾಯ್ತು’ ಎಂದು ರೋಸಿದ ದನಿಯಲ್ಲಿ ಪ್ರಶ್ನೆಗಳ ಸುರಿ ಮಳೆಯನ್ನೇ ಸುರಿಸಿದರು. ನಾನು ಸಂಕ್ಷಿಪ್ತವಾಗಿ ಊರಿಗೆ ಹೋಗುತ್ತಿರುವ ವಿಷಯ ತಿಳಿಸಿದೆ.

ವಿಷಯ ತಿಳಿದು ಆತಂಕದಿಂದ ನುಡಿದರು "ಅಲ್ರೀ, ಮತ್ತೆ ನಿಮ್ಮ ಮನೆಯಿಂದ ಏನೇನೋ ಸದ್ದು ಬರುತ್ತಿತ್ತು. ಏನೂ ಅಂತ ವಿಚಾರಿಸೋದಕ್ಕೇ ನಾನು ಕಾಲ್ ಮಾಡಿದ್ದು. ಈ ನಡುವೆ ಕಳ್ಳರು, ಮೊದಲು ಮನೆ ಫೋನ್ ಲೈನ್ ಕತ್ತರಿಸಿ, ಮೊಬೈಲಿಗೆ ಕಾಲ್ ಮಾಡಿ ಲೈನ್ ಬಿಜಿ ಇಡ್ತಾರಂತೆ. ಮೊದಲೇ ನೀವು ಸಮಾಜ ಸೇವಕರು. ನಿಮ್ಮ ನಂಬರ್ ಊರಿನವರಿಗೆಲ್ಲ ಗೊತ್ತಿರುತ್ತೆ. ಅಂದ ಹಾಗೇ, ನಾನು ನಿಮಗೆ ಫೋನ್ ಮಾಡಿದಾಗ ನಿಮ್ಮ ಲೈನ್ ಕೂಡ ಬಿಜಿ ಇತ್ತು. ಯಾರಾದ್ರೂ ಫೋನ್ ಮಾಡಿದ್ರೇನೂ?"

ಮೊಬೈಲ್ ಯಾವಾಗ ಕೈ ಜಾರಿ ಬಿತ್ತೋ ... ಗೊತ್ತೇ ಆಗಲಿಲ್ಲ ...

ಎರಡು ರಾತ್ರಿ ತಾನೇ. ಅವರಿಗೇನು ಹೇಳಿ ಮನೆ ಕೀಲಿ ಕೊಡೋದು ಅಂತ ಹಾಗೇ ಬಂದೆ. ಅದೇ ತಪ್ಪಾಯ್ತು !

{ಇದು ಸತ್ಯ ಕಥೆ ಅಲ್ಲ .... ಸತ್ಯ ಆಗದೆ ಇರಲಿ ಎಂಬುದೇ ಆಶಯ}


No comments:

Post a Comment