Monday, April 19, 2010

ನಾಟಕ: ಪಂಚವಟಿ LLC

ಪಾತ್ರ ಪರಿಚಯ:

ನವ್ಯ - ಸ್ಟೈಲಿಗೆ ಹೆಚ್ಚು ಕೊಡುವ ಪಾತ್ರ. ಯಾರೇನು ಅವರ ಬಗ್ಗೆ ಮಾತನಾಡಿಕೊಂಡರೂ ತಲೆ ಕೆಡಿಸಿಕೊಳ್ಳದ ವ್ಯಕ್ತಿತ್ವ.

ಭವ್ಯ - ತನ್ನಾಸೆಗಳು ಈಡೇರಿಸಿಕೊಳ್ಳಲಾಗದ ಪಾತ್ರ

ದಿವ್ಯ - ಅತ್ತೆ ಮನೆಯವರು (ಗಂಡನನ್ನೂ ಸೇರಿಸಿ) ಅಂದರೆ ಅಷ್ಟಕ್ಕಷ್ಟೇ ಎನ್ನುವ ಪಾತ್ರ

ಶ್ರಾವ್ಯ - ಎಲ್ಲವನ್ನೂ ನೇರವಾಗಿ ಅರ್ಥ ಮಾಡಿಕೊಳ್ಳುವ ಶುದ್ದ ಮನಸ್ಸಿನ ಪಾತ್ರ

ಕಾವ್ಯ - ಯಾರಲ್ಲೂ ಭಿನ್ನಾಭಿಪ್ರಾಯ ಬರದಂತೆ ಸಾಂತ್ವನಗೊಳಿಸುವ ಪಾತ್ರ

{LLC ಅಂತ ಅಂದ ಕೂಡಲೆ ನೀವು, ನಾನು ಯಾವುದೋ ಕಂಪನಿ ಅಂತ ತಲೆ ಕೆರೆದುಕೊಳ್ಳಬೇಡಿ. LLC ಅಂದರೆ Lovely Ladies Club ಅಂತ ಅರ್ಥ. ಇದೊಂದು ಲೇಡೀಸ್ ಕ್ಲಬ್. ಇಲ್ಲಿ ಐವರು ಹೆಂಗಸರು ಸೇರಿ ವಟ ವಟ ಅಂತ ಮಾತಾಡ್ತಾರೆ ಅಂತ ಹೇಳಿ ’ಪಂಚವಟಿ’ ಅಂತ ಹೆಸರು}

{ನಾಲ್ಕು ಮಂದಿ ಹೆಂಗಸರು (ಭವ್ಯ, ದಿವ್ಯ, ಕಾವ್ಯ, ಶ್ರಾವ್ಯ) ಅದೂ ಇದೂ ಮಾತಾಡಿಕೊಂಡು ಒಳಗೆ ಬರುತ್ತಾರೆ.....}

{"ತುಂಬಾ ಚೆನ್ನಾಗಿತ್ತು", "ಒಳ್ಳೇ ಕಾನ್ಸೆಪ್ಟು"}

ಭವ್ಯ : ಅಲ್ರೀ, ನವ್ಯ ಎಲ್ರೀ?

ಕಾವ್ಯ: ಅವರು ಯಾವಾಗ್ಲೂ ಲೇಟ್ ತಾನೇ... ಬರ್ತಾರೆ ಬಿಡಿ

ದಿವ್ಯ: ಇನ್ನೂ ಮೇಕಪ್ ಮಾಡಿಕೊಳ್ತಿರ್ತಾರೆ ಅಲ್ವೇ?

ಕಾವ್ಯ: ಕನ್ನಡಿಗೆ ಬೇಜಾರಾದ್ರೆ ಎದ್ದು ಬರ್ತಾರೆ

ಶ್ರಾವ್ಯ: ಅಲ್ಲಾ ಕಾವ್ಯ, ಕನ್ನಡಿಗೆ ಬೇಜಾರಾಯ್ತು ಅಂತ ಇವರಿಗೆ ಹ್ಯಾಗೆ ಗೊತ್ತಾಗುತ್ತೆ?

ಕಾವ್ಯ: ಇವರಿಗೋ, ಎಲ್ಲ ಬಿಡಿಸಿ ಹೇಳಬೇಕು

ಭವ್ಯ: (ಬೆರಳಲ್ಲಿ ದಿವ್ಯ’ಳ ಸೀರೆ ಅಂಚನ್ನು ಹಿಡಿದು ಮೆಚ್ಚುಗೆಯಿಂದ) ರೀ ದಿವ್ಯ, ನಿಮ್ಮ ಸೀರೆ ತುಂಬಾ ಚೆನ್ನಾಗಿದೆ ಕಣ್ರೀ.

ದಿವ್ಯ: (ಹೆಮ್ಮೆಯಿಂದ) ಥ್ಯಾಂಕ್ಸ್ ಭವ್ಯ. ಇದು Brasso silks ಅಂತ ಕಣ್ರೀ .. ಬೇಡ ಬೇಡ ಅಂದ್ರೂ ನಮ್ ಯಜಮಾನರು ತೊಗೋ ಅಂತ ಗಲಾಟೆ ... ಪಾಪ, ಅವರಿಗ್ಯಾಕೆ ಬೇಜಾರು ಅಂತ, ಅವರು ಒಂದು ತೊಗೋ ಅಂದರೆ ನಾನು ನಾಲ್ಕ್ ತೊಗೊಂಡೆ ಕಣ್ರೀ!!

ಭವ್ಯ: (ಮೆಚ್ಚುಗೆಯಿಂದ) ಅಬ್ಬ, ಸೆಲೆಕ್ಷನ್ ಅಂದರೆ ನಿಮ್ದು ರ್ರೀ!

ದಿವ್ಯ: (ಹೆಮ್ಮೆಯಿಂದ) ನಮ್ಮ ಮನೆ ಕಡೆ ಯಾರು ಏನೇ ಸೆಲೆಕ್ಟ್ ಮಾಡಿದರೂ ನನ್ನನ್ನೇ ಕರೆಯೋದು ಕಣ್ರೀ! (ಬೇಸರದಿಂದ) ಆದ್ರೆ, ಆ ನಮ್ಮಪ್ಪ ಮಾತ್ರ ತಮಗೆ ಅಳಿಯನ್ನ ಹುಡುಕಿದಾಗ (ಶ್ರಾವ್ಯಳ ಕಡೆ ತಿರುಗಿ) ಅದೇ ನಮ್ಮೆಜಮಾನರನ್ನ ಹುಡುಕಿದಾಗ ಆ ಕೆಲಸ ಮಾಡ್ಲಿಲ್ಲ ನೋಡಿ

ಕಾವ್ಯ: ಹೋಗ್ಲಿ ಬಿಡ್ರಿ ... ಹಳೇ ಕಥೆ ಈಗ್ಯಾಕೆ? ಪಾಲಿಗೆ ಬಂದದ್ದು ಪಂಚಾಮೃತ. ಅದು ಬಿಡಿ. ಸೀರೆ ಎಲ್ಲಿ ತೊಗೊಂಡ್ರಿ, ಅದು ಹೇಳಿ ?

ಶ್ರಾವ್ಯ: (ಮೆಲ್ಲಗೆ ತಲೆ ಕೆರೆದುಕೊಂಡು) ಸೀರೇ ಅಂಗಡಿಯಲ್ಲೇ ತೊಗೊಂಡಿರ್ತಾರೆ. ಇನ್ನೇನು ದಿನಸಿ ಅಂಗಡೀಲಿ ತೊಗೊಳ್ತಾರೆಯೇ? .... ಅಲ್ವೇನ್ರೀ ದಿವ್ಯ?

{ಮಿಕ್ಕವರು ಮುಸಿ ಮುಸಿ ನಗುತ್ತ ಮೆಲ್ಲಗೆ ತಲೆ ಚೆಚ್ಚಿ ಕೊಳ್ಳುತ್ತಾರೆ}

ದಿವ್ಯ: (ನಗುತ್ತ) ಹೌದ್ರೀ ... ಪರದೇಸೀ ಸಿಲ್ಕ್ ಸ್ಯಾರೀಸ್’ನಲ್ಲಿ ತೊಗೊಂಡೆ ... ಅಲ್ರೀ, ಭವ್ಯ ನೀವೇನೋ ಸರ ತೊಗೋಬೇಕೂ ಅಂತಿದ್ರಲ್ಲ ... ಏನಾಯ್ತು ವಿಷಯ?

ಭವ್ಯ: (ಸಿಟ್ಟಿನಿಂದ) ಮೊನ್ನೆ ನಾನು ಆ ’ಬೋಡ್ ತಲೆ ಜುವೆಲರ್ಸ್’ಗೆ ಹೋಗಿದ್ದೆ ಕಣ್ರೀ. ಅವಲಕ್ಕಿ ಸರ ಇದ್ರೆ ತೋರಿಸಿ ಅಂದೆ ... ಅವನು ಚಿನ್ನದ ರೇಟು ತುಂಬಾ ಜಾಸ್ತಿ ... ಹೊಸ ವೆರೈಟಿ ಬಂದಿದೆ ... ’ಅಕ್ಕಿ ಸರ’ ಅಂತ .. ತೋರಿಸ್ಲಾ ಅಂದ ...

ಶ್ರಾವ್ಯ: ರ್ರೀ, ನನಗೊಂದು ಡೌಟು ... ಅಕ್ಕಿ ಸರ ಅಂದ್ರಲ್ಲ ... ಅದೂ .... ಸಣ್ಣಕ್ಕೀನೋ ? ಸೋನಾ ಮಸೂರೀನೋ?

ಕಾವ್ಯ: ರ್ರೀ, ನೀವು ಸ್ವಲ್ಪ ಸುಮ್ಮನೆ ಇರ್ತೀರ ...

ದಿವ್ಯ: ಪಾಪ ಸುಮ್ನೆ ಇರ್ರೀ ... ಹೌದು ಭವ್ಯ ... ರೇಟ್ ಏರಿ ಹೋಗಿದೆ ... ಹೋದವಾರ ಸುಂದ್ರಮ್ಮನ್ನ ಮಗಳ ಮದುವೆಗೆ ಹೋಗಿದ್ದಾಗ, ಆ ಮಿಟುಕ್ಲಾಡಿ ಮೀನಾಕ್ಷಿ, ಮೈತುಂಬಾ ಒಡವೆ ಹಾಕ್ಕೊಂಡು ಕೆಲ್ಸ ಇಲ್ದೆ ಇದ್ರೂ ಸುಮ್ಸುಮ್ನೆ ... ಹೂ ... ಆ ಕಡೆ ಈ ಕಡೆ ’ಟಿಂಗ್ ಟಿಂಗ್’ ಅಂತ ಓಡಾಡ್ತಿದ್ಲು ...

ಶ್ರಾವ್ಯ: ಹೋಗ್ಲಿ ಬಿಡಿ ... ನೀವ್ಯಾಕೆ ಹೊಟ್ಟೆ ಉರಿಪಟ್ಟುಕೊಂಡು ಅಲ್ಸರ್ ಬರಿಸಿಕೊಳ್ತೀರಾ ... ಈ ಕಾಲದಲ್ಲೂ ಆ ಪಾಟಿ ಒಡವೆ ಹಾಕಿಕೊಂಡಿಲೂ ಅಂದ್ರೆ, ಅದು ಗಿಲೀಟ್ ಇರಬೇಕು !

{ಅಷ್ಟರಲ್ಲಿ ನವ್ಯ ಒಳಗೆ ಬರುತ್ತಾರೆ}

ನವ್ಯ: (ಕೈಯಲ್ಲೇ ಗಾಳಿ ಬೀಸಿಕೊಳ್ಳುತ್ತ) ಅಬ್ಬಬ್ಬ ಎಷ್ಟು ಬಿಸಿಲು ರೀ ! ಕಾರ್ ಅಲ್ಲಿ ನಿಲ್ಲಿಸಿ ಇಲ್ಲಿ ಬರೋಷ್ಟರಲ್ಲಿ ಬೆವತು ಹೋದೆ its so hot, yaar

ಶ್ರಾವ್ಯ: (ಮೂದಲಿಸುತ್ತ) ಬಿಸಿಲಲ್ಲಿ ಬಂದರೆ ಹಾಟ್ ಅಲ್ದೇ ಕೋಲ್ಡ್ ಆಗುತ್ತ ?

ಕಾವ್ಯ: (ಸಮಾಧಾನಪಡಿಸುತ್ತ) ನೀವು ಸ್ವಲ್ಪ ಸುಮ್ಮನೆ ಇರ್ತೀರಾ?

ಶ್ರಾವ್ಯ: ತಮ್ಮ ಹತ್ತಿರಾನೇ ಕಾರ್ ಇರೋದು ಅಂತ ತೋರಿಸ್ಕೋತಾರೆ .... ಬರೀ ಸಾಲದ್ ಕಾರು (ಮೂತಿ ತಿರಿಗಿಸುತ್ತ)

ನವ್ಯ: (ಯಾವುದಕ್ಕೂ ಕೇರ್ ಮಾಡದೆ) ವಿಷಯಾ ಗೊತ್ತಾಯ್ತೇನ್ರೀ? u know what happened ?

ಮಿಕ್ಕ ನಾಲ್ವರೂ (ಜೋರಾಗಿ): ಏನ್ರೀ ಅದೂ ?

ನವ್ಯ: ಅಬ್ಬಬ್ಬಬ್ಬಬ್ಬ ಮೆಲ್ಲಗೆ ! ನನ್ನ ear drum ಒಡೆದು ಹೋಯ್ತು. ಮೊದಲು ಒಂದು ಲೋಟ ನೀರು ಕೊಡಿ ... ಗಂಟಲು ಬಾಯಿ ಒಣಗ್ತಿದೆ ... will let u know later

{ಶ್ರಾವ್ಯ ನೀರು ಕೊಡ್ತಾರೆ. ನವ್ಯ ಕುಡಿದು ಅವರಿಗೇ ಕೊಟ್ಟು "ಸ್ವಲ್ಪ ಅಲ್ಲಿ ಇಟ್ಬಿಡಿ" ಅಂದು, ಟೂ ಹಾಟ್ ಎಂದುಕೊಳ್ಳುತ್ತಾ, ಸುಮ್ಮನೆ ಗಾಳಿ ಬೀಸಿಕೊಂಡು ನಿಲ್ತಾರೆ}

ಭವ್ಯ: (ಅಸಹನೆಯಿಂದ) ವಿಷಯ ಹೇಳ್ರೀ ..

ನವ್ಯ: (ಅರಾಮವಾಗಿ) ಸೆಖೆ ಆಗ್ತಿದೆ... just wait

ದಿವ್ಯ: (ಸಿಡಿಗುಟ್ಟುತ್ತ) ರ್ರೀ, ಏನು ಬೇಕಾದರೂ ತಡದೇನೂ ... ನನಗೆ ಈ curiosity ತಡ್ಕೊಳ್ಳೋಕ್ಕಾಗಲ್ಲ ನೋಡಿ... ಬೇಗ ಹೇಳ್ರೀ

ನವ್ಯ: (ಮೂತಿ ಉದ್ದ ಮಾಡುತ್ತ, ಕೈ ತಿರುವುತ್ತ) ನಮ್ಮ ಹಿಂದಿನ ಬೀದಿ ರಂಗಮ್ಮನ ಮಗಳು ಓಡಿ ಹೋದ್ಲಂತೆ ... she ran away, u know (ಕೈಯಲ್ಲಿ ಓಡಿ ಹೋದಂತೆ ತೋರಿಸುತ್ತಾರೆ)

ಭವ್ಯ,ದಿವ್ಯ,ಕಾವ್ಯ: ಹೌದೇನ್ರೀ ?

ಶ್ರಾವ್ಯ: ಹಾಳಾದ್ದು, ಈ Auto Strike ಮತ್ತೆ ಶುರುವಾಯ್ತೇನ್ರೀ ? ಓಡಿ ಹೋಗೋ ಬದಲು ಆಟೋದಲ್ಲಾದರೂ ಹೋಗಬಹುದಿತ್ತು ಪಾಪ ...

ಕಾವ್ಯ: (ರಾಗವಾಗಿ ಪ್ರಶ್ನೆ ಮಾಡುತ್ತ) ನೀವ್ಯಾಕ್ರೀ ಹೀಗೆ? ನಿಮಗೆ ಎಲ್ಲ ವಿಷಯಾನೂ ಹತ್ತಿ ಬಿಡಿಸೋ ತರಹ ಬಿಡಿಸೀ ಬಿಡಿಸೀ ಹೇಳ್ಬೇಕಾ?

ದಿವ್ಯ: (ಏನೋ ನೆನಪಿಸಿಕೊಳ್ಳುವಂತೆ) ಅದಾ ವಿಷಯ ... ಬೆಳಿಗ್ಗೆ ಆ ಶೆಟ್ಟಿ ಅಂಗಡಿಗೆ ಹೋದಾಗ ರಂಗಮ್ಮಾನೂ ಬಂದಿದ್ರು ... ಯಾವಾಗ ಸಿಕ್ರೂ ಒಂದು ಘಂಟೆ ಮಾತಾಡೊ ಅವರು, ನನ್ನನ್ನು ನೋಡಿ ಹಾಗೇ ಕಣ್ಣು ತಪ್ಪಿಸಿ ಓಡಿ ಹೋಗಿದ್ದು ನೋಡಿ ನನಗೆ ಆಗಲೇ ಡೌಟ್ ಬಂತು ....

ಶ್ರಾವ್ಯ: (ತಲೇ ಮೇಲೆ ಕೈ ಹೊತ್ತು) ಅಯ್ಯೋ ಶಿವನೇ ! ರಂಗಮ್ಮಾನೂ ಓಡಿ ಹೋದ್ರಾ?

ಕಾವ್ಯ: (ಕೈ ಜೋಡಿಸುತ್ತ) ನೀವು ಸ್ವಲ್ಪ ಸುಮ್ಮನೆ ಇರ್ತೀರಾ?

ಶ್ರಾವ್ಯ: (ಏನೋ ಅನುಮಾನದಿಂದ) ರ್ರೀ, ನನಗೊಂದು ಡೌಟು ..., ರಂಗಮ್ಮನ ಮಗಳು ಯಾವ ಡ್ರಸ್ ಹಾಕಿಕೊಂಡಿದ್ಲಂತೇ?

ನವ್ಯ: ಓಡಿ ಹೋಗಿದ್ದು ವಿಷಯ ಅಷ್ಟೇ ... ಡ್ರಸ್ ಯಾವುದಾದ್ರೆ ಏನ್ರೀ? why is that important?

ಶ್ರಾವ್ಯ: ಅಲ್ಲಾ, ಸೀರೆ ಉಟ್ಕೊಂಡು ಹೋಗಿದ್ರೆ ಕಾಲಿಗೆ ಸಿಕ್ಕಿಕೊಂಡು ಬಿದ್ದು-ಗಿದ್ದು ಮಾಡಿದ್ರೆ ಪಾಪ? ... ಜೀನ್ಸೋ, ಚೂಡಿದಾರ್ರೋ ಆದ್ರೆ ಸುಲಭ ಅಂತ ಹೇಳ್ದೆ ಅಷ್ಟೇ !

ಕಾವ್ಯ: (ಶಾಂತಗೊಳಿಸುವಂತೆ) ಅವಳು ವಾಪಸ್ಸು ಬಂದ ಮೇಲೆ ನೀವೇ ಅವಳನ್ನು ಕೇಳಿ ನಮಗೂ ಹೇಳಿ ... ಆಯ್ತಾ? ಅಲ್ಲೀವರೆಗೂ ಸ್ವಲ್ಪ ಸುಮ್ಮನಿರಿ.

ಭವ್ಯ: ಅದಿರ್ಲೀ ಕಣ್ರೀ, ನವ್ಯ ...ತುಂಬಾ ದಿನದಿಂದ ಕೇಳ್ಬೇಕೂ ಅಂತಿದ್ದೆ ... ನೀವ್ಯಾಕೆ ಎಲ್ಲ ಕನ್ನಡದಲ್ಲಿ ಹೇಳಿ ಕೊನೇ ಲೈನ್ ಮಾತ್ರ ಇಂಗ್ಲೀಷ್’ನಲ್ಲಿ ಹೇಳ್ತೀರ?

ನವ್ಯ: (ಸ್ಟೈಲಾಗಿ) ಅದೇನೋ ಗೊತ್ತಿಲ್ಲ ರ್ರೀ ! ನಮ್ಮನೇಲಿ ನಮ್ಮಪ್ಪ ಬರೀ ಕನ್ನಡ. ನಮ್ಮಮ್ಮ ಓನ್ಲಿ ಇಂಗ್ಲೀಷ್. ನನ್ನ ದೊಡ್ಡಕ್ಕ ಮಾತಿನ ಮುಂಚೆ ಇಂಗ್ಲೀಷು, ಎರಡನೇಯವಳು ಮಧ್ಯದಲ್ಲಿ, ನಾನು ಕಡೆಯಲ್ಲಿ ... just like that

ಶ್ರಾವ್ಯ: ಒಳ್ಳೇ ಕಂಗ್ಲೀಷ್ ಫ್ಯಾಮಿಲಿ ಕಣ್ರೀ ನಿಮ್ದು ! ರ್ರೀ, ನನಗೊಂದು ಡೌಟು ... ನಿಮಗೆ ಒಬ್ಬಳು ತಂಗಿ ಇದ್ದಿದ್ದರೆ?

ಕಾವ್ಯ: ನೀವು ಸ್ವಲ್ಪ ಸುಮ್ಮನೆ ಇರ್ತೀರಾ? .. ಇವರೊಬ್ಬರು ... (ನವ್ಯಳಿಗೆ ಕೇಳಿಸದ ಹಾಗೆ ರಾಗವಾಗಿ) ಇನ್ನು ಇವರೋ, ಬೆಳಿಗ್ಗೆ ಏನೂ ತಿಂದಿಲ್ವೇನೋ, ಇಲ್ಲಿ ಬಂದು ನಮ್ಮ ತಲೆ ತಿನ್ತಾ ಇದ್ದಾರೆ !

ದಿವ್ಯ: ಅದು ಬಿಡಿ .. ಏನಾಯ್ತು ಅಂತೀರಾ? .. ನನಗೆ ಇವತ್ತು ಬೆಳಿಗ್ಗೆ ಬೆಳಿಗ್ಗೆ ಮೂಡ್ ಔಟ್ ಆಗಿ ಹೋಯ್ತು ಕಣ್ರೀ !!

ಶ್ರಾವ್ಯ: (ಅನುಮಾನದಿಂದ) ರ್ರೀ, ನನಗೊಂದು ಡೌಟು ... ಬೆಳಿಗ್ಗೆ ಅಂದರೆ ಎಷ್ಟು ಘಂಟೆಗೆ? ಎದ್ದ ಮೇಲೋ? ಏಳೋಕ್ಕೂ ಮುಂಚೇನಾ?

ದಿವ್ಯ: (ಸೀರೆ ಸೊಂಟಕ್ಕೆ ಸಿಕ್ಕಿಸಿಕೊಂಡು) ರ್ರೀ! ಸ್ವಲ್ಪ ಯೋಚನೆ ಮಾಡ್ರೀ !! (ಮುಷ್ಟಿಯಿಂದ ಪ್ರಶ್ನೆ ಕೇಳುವಂತೆ ಸನ್ನೆ ಮಾಡುತ್ತ) ಏಳೋಕ್ಕೆ ಮುಂಚೆ ಹೇಗ್ರೀ ಮೂಡ್ ಔಟ್ ಆಗುತ್ತೇ?

ಶ್ರಾವ್ಯ: (ಕತ್ತು ಕೊಂಕಿಸುತ್ತ) ಕೆಟ್ಟ ಕನಸು ಬಿದ್ರೆ ಆಗೋಲ್ವಾ?

ಕಾವ್ಯ: ನೀವು ಸ್ವಲ್ಪ ಸುಮ್ಮನೆ ಇರ್ತೀರಾ? ಈಗ ಅವರಿಗ್ಯಾಕೆ ಮೂಡ್ ಔಟ್ ಆಯ್ತು ಕೇಳೋಣ .. ನೀವು ಹೇಳಿ ದಿವ್ಯ ...

ದಿವ್ಯ: (ದೂಷಿಸುವಂತೆ) ಎಲ್ಲ ಆಗಿದ್ದು ಆ ನನ್ನ ಬಾಬ್-ಕಟ್ ಅತ್ತೆಯಿಂದ !

ಕಾವ್ಯ: (ಪ್ರಶ್ನಾರ್ಥಕವಾಗಿ) ಅಲ್ರೀ, ಅವರು ಲಂಡನ್’ನಲ್ಲಿ ಇದ್ದಾರೆ ಅಂತ ಹೇಳಿದ್ರೀ?

ದಿವ್ಯ: ಅದೇ ನೋಡಿ ಅವರ capacity . ಅಲ್ಲಿದ್ದುಗೊಂಡೇ ಇಲ್ಲಿ ನನ್ನ ಮೂಡ್ ಔಟ್ ಮಾಡಿದರು.

ಭವ್ಯ: (ಅಸಹನೆಯಿಂದ) ಆಯೋ .. ಅತ್ಲಾಗೆ ಏನಾಯ್ತು ಹೇಳ್ರೀ ...

ದಿವ್ಯ: ನೆನ್ನೆ ಅವರ ಮಗನಿಗೆ ಈ-ಮೈಲ್ ಬರೆದಿದ್ದರು ...

ಶ್ರಾವ್ಯ: ರ್ರೀ, ನನಗೊಂದು ಡೌಟು ... ಅವರ ಮಗ ಅಂದರೆ ಯಾರು ?

ದಿವ್ಯ: ಅಯ್ಯೋ! ನಮ್ಮೆಜಮಾನ್ರು ಕಣ್ರೀ ... ಇವರೊಳ್ಳೇ, ಥತ್ ! ಕೇಳಿ, ಇಷ್ಟುದ್ದ ಈ-ಮೈಲ್ ಆದ ಮೇಲೆ ಕೊನೆಯಲ್ಲಿ bold letters ನಲ್ಲಿ "ದಿವ್ಯ, ನಿಂದು ಓದಿದ್ದು ಮುಗ್ದಿದ್ದರೆ ನನ್ನ ಮಗನಿಗೂ ಓದೋದಕ್ಕೆ ಹೇಳು" ಅಂತ ...

ಶ್ರಾವ್ಯ: (ಅನುಮಾನದಿಂದ) ರ್ರೀ, ನನಗೊಂದು ಡೌಟು ... ನಿಮ್ಮ ಯಜಮಾನರ ಈ-ಮೈಲ್ ಹಾಗಿದ್ರೆ ನೀವೇ ಮೊದಲು ಓದೋದಾ?

ಕಾವ್ಯ: (ಆಶ್ಚರ್ಯದಿಂದ) ವಾಹ್! ವಾಹ್ !! ಎಷ್ಟು ಬೇಗ ಅರ್ಥ ಮಾಡಿಕೊಂಡ್ರಿ ಈ ಸಾರಿ

ಶ್ರಾವ್ಯ: ಹಾಗೇನಿಲ್ಲ, ನಮ್ ಯಜಮಾನರ ಈ-ಮೈಲ್ ನಾನೇ ಮಾಡೋದು ಚೆಕ್ ಮಾಡೋದು. ಆಮೇಲೆ ಅದನ್ನ Unread ಮಾಡಿಬಿಡ್ತೀನಿ. ಬೇರೆಯವರ ಈ-ಮೈಲ್ ಚೆಕ್ ಮಾಡೊದು ತಪ್ಪಲ್ವೇ?

ನವ್ಯ: ನೀವೆಲ್ಲ, ತುಂಬಾ ಟೈಮ್ ವೇಸ್ಟ್ ಮಾಡ್ತೀರಪ್ಪ.. ಈಗ ನಾವು ಉಗಾದಿ ಹಬ್ಬದ ಬಗ್ಗೆ ಮಾತನಾಡೋಣವಾ? lets discuss from where we left

ಭವ್ಯ: ಮೊದಲು ನಾನು ಹೇಳ್ತೀನಿ ... ಸರ’ದ ಕಥೆ ಹಾಗಾಯ್ತು ಅಂತ ಉಗಾದೀಗೆ ಸೀರೆ ತೊಗೊಳ್ಳೋಣಾ ಅಂತ ಅಂಗಡಿಗೆ ಹೋದೆ .. ಆ ಸೀರೇ ಅಂಗಡಿ ಸಿದ್ದರಾಮ ಇದ್ದಾನಲ್ಲ ಅವನಿಗೇನು ಕೊಬ್ಬು ಅಂತೀನಿ ... ಅಬ್ಬಬ್ಬ !

ದಿವ್ಯ,ಕಾವ್ಯ,ಶ್ರಾವ್ಯ: ಈಗೇನಾಯ್ತು ?

ಭವ್ಯ: ’ಜೊತೆ ಜೊತೆಯಲಿ’ ಸೀರೇ ತೋರಿಸಪ್ಪಾ ಅಂದರೆ ... ತುಂಬಾ ಹಳೆದಾಯ್ತು ಮೇಡಂ ಅಂದ ... ಹೋಗ್ಲೀ ’ಮಳೆಯಲಿ ಜೊತೆಯಲಿ’ ಸೀರೆ ಇದೆಯಾ ಅಂದೆ ... ನಮ್ಮಂಗಡೀಲಿ ಒದ್ದೆ ಬಟ್ಟೆ ಇಡಲ್ಲ ಅಂತಾನೆ ... ನಾನು ಕೇಳಿದೆ ನಿನ್ನ ಅಂಗಡೀಲಿ ಒಣಗಿರೋದು, ಲೇಟೆಸ್ಟ್ ಯಾವುದಿದೆ ಅಂತ ...

ಕಾವ್ಯ: ಏನಂದ ಸಿದ್ದರಾಮ?

ಭವ್ಯ: ಕೆಟ್ಟದಾಗಿರೋ ಪಟಾ-ಪಟಿ ಸೀರೆ ತೋರಿಸಿದ ... ನಾನು ಕೇಳಿದೆ ’ಇದ್ಯಾವುದಪ್ಪ ಹೊಸಾ ಸ್ಟೈಲೂ ಅಂತ ... ಅದಕ್ಕೆ ಅವನು ಇದು "ಕಾಡಿನಲ್ಲಿ ಕೋಮಲಾಂಗಿ" ಸೀರೆ ಮೇಡಮ್ ... ಹೊಸದು ಅಂದ ... ಸಿಟ್ಟು ಬಂತು .. ನೀನೇ ಉಟ್ಕೋ ಕತ್ತೆ ಥರ ಕಾಣ್ತೀಯಾ ಅಂತ ಎದ್ದು ಬಂದೆ

ಶ್ರಾವ್ಯ: (ಉತ್ಸಾಹದಿಂದ) ನನ್ನ ವಿಷಯ ಏನಾಯ್ತು ಗೊತ್ತಾ?

ದಿವ್ಯ: (ತಡೆಯುತ್ತ) ರ್ರೀ ತಡೀರಿ .. ಅಲ್ರೀ, ನವ್ಯ ಹೇಳಿದ್ದು ನಮ್ಮ ’ಪಂಚವಟಿ’ ಕ್ಲಬ್ ಉಗಾದಿ ಬಗ್ಗೆ ಅಲ್ವಾ?

ನವ್ಯ: (ಸಮಾಧಾನಪಟ್ಟುಕೊಳ್ಳುವಂತೆ) ಸಧ್ಯ ಒಬ್ಬರಾದರೂ ಅರ್ಥ ಮಾಡಿಕೊಂಡ್ರಲ್ಲ? ದಿವ್ಯ, u r absolutely right, yah

ಭವ್ಯ: (ಗಂಭೀರವಾಗಿ) ರ್ರೀ ಕಾವ್ಯ, ನೀವು ಹಬ್ಬಕ್ಕೆ ಹೋಳಿಗೆ ಮಾಡಿಸೋಣ ಅಂತ ಹೇಳಿ, ಯಾರನ್ನೋ ವಿಚಾರಿಸುತ್ತೀನಿ ಅಂದ್ರಲ್ಲಾ... ಏನಾಯ್ತು ವಿಷಯ?

ಕಾವ್ಯ: ಹೌದ್ರೀ, ಭಾನುವಾರ, ನಾನು ಭಟ್ಟರ ಹತ್ತಿರ ಮಾತನಾಡಿದೆ ... ಅವರು ಹೋಳಿಗೆ ಮಾಡಿಕೊಡೋಣ ಆದರೆ ಯಾವ ಟಾಪಿಂಗ್ ಬೇಕೂ ಅಂದ್ರು ...

ಶ್ರಾವ್ಯ: (ಗಲಿಬಿಲಿಯಿಂದ) ಟಾಪಿಂಗಾ? ಅಲ್ರೀ, ನೀವು ಹೋಳಿಗೆ ಮಾಡೊಕ್ಕೆ ಕೇಳಿದ್ರೋ ಇಲ್ಲ ಪಿಜ್ಜಾ ಮಾಡೋಕ್ಕೆ ಕೇಳಿದ್ರೋ?

ಕಾವ್ಯ: ಹೌದ್ರೀ, ಅವರು ಹಂಗೆ ಕೇಳಿದ್ದಕ್ಕೆ ನನಗೂ ತಲೆ ಕಿತ್ಕೊಳ್ಳೋ ಹಾಗೆ ಆಯ್ತು

ಶ್ರಾವ್ಯ: ರ್ರೀ, ನನಗೊಂದು ಡೌಟು ... ತಲೇನೇ ಕಿತ್ಕೊಂಡ್ರೋ ಇಲ್ಲಾ ತಲೆ ಕೂದಲು ಕಿತ್ಕೊಂಡ್ರಾ ?

ಭವ್ಯ: ರ್ರೀ .... ನೀವು ಸ್ವಲ್ಪ ಸುಮ್ಮನೆ ಇರ್ತೀರಾ ... ನೀವು ಹೇಳಿ ಕಾವ್ಯ ...

ಕಾವ್ಯ: (ಮರೆತು ಹೋದವರಂತೆ) ನಾನು ಎಲ್ಲಿದೆ ? (ಶ್ರಾವ್ಯ ’ಇಲ್ಲೇ’ ಎನ್ನುವಂತೆ ಕೈ ತೋರಿಸುತ್ತಾರೆ ಆದರೆ ಮಾತನಾಡೊಲ್ಲ) ... ಹಾ! ನಾನು ಭಟ್ಟರನ್ನು ಕೇಳ್ದೆ ... ಹೋಳಿಗೆ ಮೇಲೆ ಟಾಪಿಂಗ್ ಅಂದ್ರೆ ಏನು ಅಂತ ... ಅದಕ್ಕೆ ಅವರು ’ಅಲ್ಲಮ್ಮ, ನಿಮಗೆ ಹೂರ್ಣದ ಹೋಳಿಗೆ ಬೇಕೋ ಇಲ್ಲ ಕಾಯಿ ಹೋಳಿಗೆ ಬೇಕೋ’ ಅಂದರು ಶ್ರಾವ್ಯ, ಕಾಯಿ ಅಂದರೆ ಇಡೀ ಕಾಯಿ ಅಲ್ಲ, ಕಾಯಿ ತುರಿ ಅಂತ...(ಶ್ರಾವ್ಯ ಸರಿ ಅನ್ನುವಂತೆ ತಲೆ ಆಡಿಸುತ್ತಾಎ).. ಆಮೇಲೆ ನಾನು ಹೇಳ್ದೆ ’ಭಟ್ರೇ, ಅದು ಟಾಪಿಂಗ್ ಅಲ್ಲ ಫಿಲ್ಲಿಂಗೂ ಅಂತ’... ಅಲ್ದೇ, ಅವರು ಕೆಲವು ಸ್ಪೆಷಾಲಿಟಿ ಹೋಳಿಗೇನೂ ಮಾಡ್ತಾರಂತೆ ಕಣ್ರೀ !!!

ದಿವ್ಯ: ಸ್ಪೆಶಾಲಿಟಿ ಹೋಳಿಗೆ ಅಂದರೇನ್ರೀ?

ಕಾವ್ಯ: ಸ್ವೀಟ್ ಸೇರದೆ ಇರೋವ್ರಿಗೆ Jalapeno ಹೋಳಿಗೆ ಮಾಡ್ತಾರಂತೆ

ಭವ್ಯ: ಸ್ಪೆಷಲ್ ಭಟ್ಟರು ಕಣ್ರೀ ಅವರು

ಕಾವ್ಯ: ಇನ್ನೊಂದು ವಿಷಯಾ ಇದೆ ಕಣ್ರೀ ... ನಿಮಗೆ ಲೋಕಲ್ ಬೇಕೋ ಇಂಪೋರ್ಟೆಡ್ ಬೇಕೋ ಅಂದರು

ಶ್ರಾವ್ಯ: ರ್ರೀ, ನನಗೊಂದು ಡೌಟು ... ಇಂಪೋರ್ಟೆಡ್ ಅಂದರೆ ಎಲ್ಲಿಂದ ತರಿಸ್ತಾರಂತೆ?

ಕಾವ್ಯ: ಎಲ್ಲಿಂದ್ಲೂ ಇಲ್ಲ .... ಲೋಕಲ್, ಇಂಪೋರ್ಟೆಡ್ ಎರಡೂ ಇವರ ಮನೇ ಅಡಿಗೇ ಮನೇಲೇ ಮಾಡೋದು ... ಇಂಪೋರ್ಟೆಡ್ ಆದರೆ ಹೋಳಿಗೆ ಮೇಲೇ Made in China ಅಂತ ಸೀಲ್ ಹಾಕ್ತಾರಂತೆ ...

ನವ್ಯ: ಅದೆಲ್ಲ ಬಿಡಿ, ಕೊನೆಗೆ ಏನಾಯ್ತು? ಆರ್ಡರ್ ಯಾವುದಕ್ಕೆ ಕೊಟ್ರೀ? did you place the order?

ಕಾವ್ಯ: ನಾನೇ ನಿರ್ಧಾರ ತೊಗೊಂಡು Local, single Topping ಹೂರ್ಣದ ಹೋಳಿಗೆ ಮಾಡಿ ಅಂತ ಹೇಳಿದೆ ... ಇವತ್ತು ಸ್ಯಾಂಪಲ್ ಕೊಟ್ಟಿದ್ದಾರೆ ... ಬನ್ನಿ ಕೊಡ್ತೀನಿ ...

ಶ್ರಾವ್ಯ: ಸರಿ ಬನ್ರೀ ಹಾಗಿದ್ರೆ ... ನನಗೆ ಹಸಿವೆ ಆಗ್ತಿದೆ .... ಆಮೇಲೆ ಬಟ್ಟೆ ಅಂಗಡಿಗೆ ಬೇರೆ ಹೋಗಬೇಕು

ದಿವ್ಯ: ನೆಡೀರಿ ಹಾಗಿದ್ರೆ, ನಮಗೂ ಕೆಲಸ ಇದೆ ... ಅಲ್ಲಾ, ಸರಿಯಾಗಿ ವಿಷಯ ತಿಳಿಸಿಬಿಟ್ಟೇ ಹೋಗೋಣ ಅಲ್ವಾ?

(ಪ್ರೇಕ್ಷಕರನ್ನು ಉದ್ದೇಶಿಸಿ)

ಭವ್ಯ: ಹೌದೂ... ನೋಡೀ, ಕಳೆದ ದೀಪಾವಳಿ ಇಂದ ನಾವು ಮೀಟಿಂಗ್ ಮಾಡ್ತಾ ಇದ್ದೀವಿ ... ಐದು ಮೀಟಿಂಗ್ ಆದ್ರೂ ಹೋಳಿಗೆ ಬಿಟ್ಟು ಮುಂದೆ ಹೋಗಿಲ್ಲ ಮಾತು ....

ಕಾವ್ಯ: ಮೀಟಿಂಗ್ ಎಲ್ಲ ಬರೀ ಈಟಿಂಗ್’ನಲ್ಲೇ ಮುಗಿಯುತ್ತೆ ಅಂತ ಅಂದುಕೊಳ್ಳಬೇಡಿ ...

ನವ್ಯ: ಈಗ ಸೀರೆ ಅಂಗಡಿಗೆ ಹೋಗೋದು, ಶಾಪಿಂಗ್ ಮಾಡೋದು ಮತ್ತೆ ಈ ಹೋಳಿಗೆ ಯಾರಿಗೆ ಅಂತ ಅಂದುಕೊಂಡ್ರಿ? Any idea?

ದಿವ್ಯ: ಈ ಸಾರಿ ಉಗಾದಿ ಹಬ್ಬಕ್ಕೆ ನಮ್ಮ ಕ್ಲಬ್’ನ ಐದೂ ಹೆಂಗಸರು ಸೇರಿ ಬಟ್ಟೆ, ಗಿಫ್ಟು ಮತ್ತೆ ಸ್ವೀಟ್’ಗಳನ್ನ ಅನಾಥಾಶ್ರಮಕ್ಕೆ ದಾನ ಕೊಡ್ತಿದ್ದೀವಿ ...

ಶ್ರಾವ್ಯ: ನಾವೂ ಹೋಗಿ ಹೋಳಿಗೆ ರುಚಿ ನೋಡ್ತೀವಿ ... ಅದರ ಬಗ್ಗೆ ನನಗೇನೂ ಡೌಟಿಲ್ಲ... ನೀವೂ ನಿಮ್ಮ ಊಟ ಎಂಜಾಯ್ ಮಾಡಿ bye

{ಈ ನಾಟಕವನ್ನು ಬರೆದು ನಿರ್ದೇಶನ ಮಾಡಿದವರು - ಶ್ರೀನಾಥ್ ಭಲ್ಲೆ.

ಕಳೆದ ಶನಿವಾರ ಅಂದರೆ ಏಪ್ರಿಲ್ ೧೭, ೨೦೧೦’ರಂದು ಅಮೇರಿಕದ ವರ್ಜೀನಿಯಾ ರಾಜ್ಯದ ರಿಚ್ಮಂಡ್ ನಗರದಲ್ಲಿ ನೆಡೆದ ಉಗಾದಿ ಹಬ್ಬದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಈ ನಾಟಕ ಆಡಲಾಯಿತು.}


No comments:

Post a Comment