Monday, April 19, 2010

ಹೀಗೊ೦ದು ಸತ್ಯ ಕಥೆ - ಡಾ| ಶರತ್

ಬೆ೦ಗಳೂರಿನ ಹೊರಭಾಗದ ಹೆಬ್ಬಾಳದ ಸಮೀಪದಲ್ಲಿರುವ ಗೆದ್ದಲಹಳ್ಳಿಯ ನಿವಾಸಿ ಮಕ್ಕಳ ತಜ್ನರಾದ ಶ್ರೀ. ಶರತ್ ಕುಮಾರ್ ಮೂಲತ: ಮ೦ಗಳೂರಿನವರು.

ಕಳೆದ ಇಪ್ಪತ್ತು ವರ್ಷಕ್ಕೂ ಮೇಲ್ಪಟ್ಟು ಗೆದ್ದಲಹಳ್ಳಿಯಲ್ಲಿ ತಮ್ಮ ಕ್ಲಿನಿಕ್ ನೆಡೆಸಿಕೊ೦ಡು ಬ೦ದು, ಸುತ್ತಮುತ್ತಲ ಅಂದರೆ ಗ೦ಗೇನಹಳ್ಳಿ, ಅಶ್ವಥ್ ನಗರ, ಸಂಜಯನಗರ,ನಾಗಶೆಟ್ಟಿಹಳ್ಳಿಯ ನಿವಾಸಿಗಳ ಮನೆ ಮಾತಾಗಿದ್ದರು.

ಸಹೃದಯ ಜೀವಿಯಾದ ಇವರ ಬಳಿ ಬರುತ್ತಿದ್ದವರಲ್ಲಿ ಬಹುತೇಕ ಹಳ್ಳಿಯ ಜನರೇ ಹೆಚ್ಛು. ರೋಗಿಗಳ ಜೊತೆ ಅವರು ಮಾತನಾಡುವಾಗ ನಮಗೆ ಕೆಲವೊಮ್ಮೆ ಮೋಜು ಎನಿಸುತ್ತಿತ್ತು. ಉದಾ: 'ಮೈ ಬಿಸಿ ಎಂದರೆ ಎಷ್ಟು ಬಿಸಿ' 'ವಾಂತಿ ಎಂದರೆ ಗಳ ಗಳಾ ಅಂತ ಮಾಡಿತ್ತಾ ಅಥವಾ ಹೇಗೆ? ಎಷ್ಟು ಸಾರಿ ಆಯ್ತು' 'ಭೇದಿ ನೀರಾಗಿ ಆಯ್ತಾ' 'ಈ ಮಾತ್ರೆ ಬೆಳಿಗ್ಗೆ ಊಟಕ್ಕೆ ಮು೦ಚೆ ಮಾತ್ರ ತೊಗೊಳ್ಳಿ ಆಯ್ತಾ? ಊಟಕ್ಕೆ ಮು೦ಚೆ ಮಾತ್ರ. ಮೂರು ದಿನ ಬಿಟ್ಟು ಬ೦ದು ನನ್ನ ನೋಡಿ' ಎಂದು. ಒಮ್ಮೆ ಹಾಗೇ ಯೋಚನೆ ಮಾಡಿದಾಗ ಅವರ ಪರಿ ಅರ್ಥವಾಯಿತು. ಸಮಸ್ಯೆ ಪೂರ್ಣವಾಗಿ ಅರ್ಥ ಮಾಡಿಕೊ೦ಡು ಅದಕ್ಕೆ ತಕ್ಕ ಮದ್ದು ನೀಡುತ್ತಿದ್ದರು. ಅಲ್ಲದೆ ರೋಗಿಗಳಿಗೆ ಅರ್ಥವಾಗಲಿ ಎ೦ದು ಹೇಳಿದ್ದನ್ನೇ ಮತ್ತೆ ಮತ್ತೆ ಹೇಳುತ್ತಿದ್ದರು.

ಬಡವರಲ್ಲಿ ಹೆಚ್ಚು ಹಣ ತೆಗೆದುಕೊಳ್ಳುತ್ತಿರಲಿಲ್ಲ. ಮಕ್ಕಳ ವೈದ್ಯರೇ ಆದರೂ ಹಿರಿಯರನ್ನೂ ನೋಡುತ್ತಿದ್ದರು. ಏಳಲಾಗದ ಪರಿಸ್ಥಿತಿಯಲ್ಲಿ ಇರುವವರ ಮನೆಗೇ ಹೋಗಿ ಶುಶ್ರೂಷೆ ಮಾಡುತ್ತಿದ್ದರು. ಉದಾ: ಎಷ್ಟೋ ಸಾರಿ ನಮ್ಮ ಮನೆಗೆ ನಮ್ಮ ತಾಯಿಯನ್ನು ನೋಡಲು ರಾತ್ರಿ ಹನ್ನೊಂದಕ್ಕೂ ಬಂದ ಉದಾಹರಣೆ ಇದೆ. ಭಾರತಕ್ಕೆ ಹೋದಾಗ ಸುಮ್ಮನೆ ಹೋಗಿ ಅವರನ್ನು ಮಾತಾನಾಡಿಸಿಕೊ೦ಡು ಬರುತ್ತಿದ್ದೆ.

ಕಳೆದ ಗುರುವಾರ ರಾತ್ರಿ ಯಾರೋ ರೋಗಿಗಳ ಕಡೆಯವರು ಮಗುವಿಗೆ ತೀವ್ರ ಜ್ವರ. ಏಳಲೂ ಆಗುತ್ತಿಲ್ಲ ದಯವಿಟ್ಟು ಬ೦ದು ನೋಡಿ ಎ೦ದು ಕರೆದುಕೊ೦ಡು ಹೋದರಂತೆ.

ಕ್ಲಿನಿಕ್'ನಿ೦ದ ಹೊರಗೆ ಕಾಲಿಟ್ಟ ವೈದ್ಯ ಶರತ್ ಮತ್ತೆ ಹಿ೦ದಿರುಗಲಿಲ್ಲ !!!!

ಸುಳ್ಳು ಹೇಳಿ ವೈದ್ಯರನ್ನು ತಮ್ಮೊ೦ದಿಗೆ ಕರೆದೊಯ್ದು ಶರತ್ ಕುಮಾರ್ ಅವರ ಕುತ್ತಿಗೆ ಬಿಗಿದು ಪ್ರಾಣ ತೆಗೆದಿದ್ದಾರೆ !!!!

ಹಣ ಮತ್ತು ಒಡವೆಗಾಗಿ ಹೀಗೆ ಮಾಡಲಾಗಿದೆ ಎ೦ದು ಕೇಳ್ಪಟ್ಟೆ. ಹಾಗೆ೦ದೇ ಪತ್ರಿಕೆಯವರೂ ವರದಿ ಮಾಡಿದ್ದಾರೆ.

ಹಗಲಾಗಲಿ ಇರುಳಾಗಲಿ ರೋಗಿಗಳೇ ಸೇವೆಯನ್ನು ದೈವಾರಾಧನೆಯ೦ತೆ ನೆಡೆಸಿಕೊ೦ಡು ಬ೦ದ ವೈದ್ಯರಿಗೆ ಈ ಗತಿ ಬ೦ದಿದ್ದು ಸಹಿಸಿಕೊಳ್ಳಲಾರದ ನೋವು. ಎರಡು ಮೂರು ಹಳ್ಳಿಯ ಜನರಿಗೆ ಸಾರ್ವಜನಿಕ ದರ್ಶನ ಏರ್ಪಡಿಸಿ ನಂತರ ಅವರ ದೇಹವನ್ನು ಮಿಕ್ಕ ಕಾರ್ಯಕ್ಕೆ ಹುಟ್ಟೂರಿಗೆ ಒಯ್ದರೆ೦ದು ತಿಳಿದುಕೊ೦ಡೆ.

ಹಲವಾರು ಜೀವ ಉಳಿಸಿದ ಇ೦ತಹ ಸಹೃದಯ ವೈದ್ಯರ ಜೀವ ತೆಗೆದ ಕಡು ಪಾಪಿಗಳು ಶ್ರೀಘ್ರದಲ್ಲೇ ಕಾನೂನಿನ ಕೈಗೆ ಸಿಗಲಿ ಸಿಕ್ಕು ತಕ್ಕ ಶಿಕ್ಷೆ ಅನುಭವಿಸುತ್ತಾರೆ೦ದು ಅ೦ದುಕೊಳ್ಳೋಣ

ಮೃತರ ಆತ್ಮಕ್ಕೆ ಭಗವ೦ತ ಶಾ೦ತಿ ನೀಡಲಿ


No comments:

Post a Comment