Sunday, August 8, 2010

ಅರಮನೆಯ ಒಂದು ಕೋಣೆಯ ಕಥೆ

ಅರಮನೆಯ ಒಂದು ಕೋಣೆಯ ಕಥೆ

ರಾಜ್ಯದಲ್ಲೆಲ್ಲ ಹಬ್ಬದ ವಾತಾವರಣ. ಬೀದಿ ಬೀದಿಗಳಲ್ಲಿ ದೀಪಾಲಂಕಾರ. ಸ್ವಚ್ಚತೆಯ ಕೆಲಸ ಭರದಿಂದ ಸಾಗಿತ್ತು. ಬರಲಿರುವ ಶುಕ್ರವಾರ ಸಂಜೆಯಿಂದ ಆರಂಭವಾಗಿ ಭಾನುವಾರ ರಾತ್ರಿಯವರೆಗೂ ನೆಡೆಯಲಿರುವ ಈ ಸಂಭ್ರಮಕ್ಕೆ ಹದಿನೈದು ದಿನಗಳಿಂದ ಸಿದ್ದತೆ ನೆಡೆದಿದೆ. ಎಲ್ಲ ಜನತೆ ಸಕ್ರಿಯವಾಗಿ ಭಾಗವಹಿಸಲೇಬೇಕೆಂಬ ಆಗ್ರಹ ಬೇರೆ.

ಇಂತಹ ದಿನಕ್ಕೆಂದೇ ಕಾದಿದ್ದರೆಂಬಂತೆ ತಾತ್ಕಾಲಿಕ ವ್ಯಾಪಾರ ಮಳಿಗೆಗಳು ಮೊದಲೇ ನಿಗದಿ ಪಡಿಸಿದ ಸ್ಥಳಗಳಲ್ಲಿ ಎದ್ದವು. ಜಾಗಕ್ಕೆ, ಒಂದಕ್ಕೆ ನಾಲ್ಕರಂತೆ ಬೆಲೆ. ಜನ ನಿಬಿಡತೆ ಹೆಚ್ಚೆಲ್ಲಿರುವುದೋ ಅಂತಹ ಸ್ಥಳಗಳಲ್ಲಿ ಮಳಿಗೆ ಎಬ್ಬಿಸಲು ಸಂಬಂಧಪಟ್ಟ ಅಧಿಕಾರಿಗಳೊಡನೆ ಹೇಗೆ ವ್ಯವಹರಿಸಬೇಕು ಎಂಬುದು ನಗ್ನ ಸತ್ಯ.

ಗುರುವಾರ ರಾತ್ರಿ ಅರಮನೆಯ ಮೂಲೆಯ ಕೋಣೆಯಲ್ಲಿ ಮಹಾರಾಜರು ದೀರ್ಘವಾಗಿ ಅಲೋಚಿಸುತ್ತ ಕುಳಿತಿದ್ದಾರೆ. ಮಹಾರಾಜರು ಈ ಕೋಣೆಯಲ್ಲಿ ಇದ್ದಾರೆಂದರೆ ಯಾರೂ ಆ ದಿಕ್ಕಿನಲ್ಲಿ ತಲೆಯಿಟ್ಟೂ ಮಲಗುವುದಿಲ್ಲ. ಇದು ಅರಮನೆಯಲ್ಲಿ ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಮಹಾರಾಜರ ಹುಟ್ಟಿದ ದಿನದ ಅಂಗವಾಗಿ ಮೂರು ರಾತ್ರಿಗಳ ಆಚರಣೆಗೆ ಇಷ್ಟೆಲ್ಲ ಸಿದ್ದತೆಗಳು ಭರದಿಂದ ನೆಡೆಯುತ್ತಿರುವಾಗ, ಈ ಕೋಣೆಯಲ್ಲಿ ಇಂದೇನು ಅಂತಹ ಗಂಭೀರ ವಿಚಾರ? ಮಾರನೆಯ ದಿನಕ್ಕೆ ಎಲ್ಲರೂ ಅಣಿಯಾಗುತ್ತಿರುವಾಗ, ಈ ಕಡೆ ಯಾರೂ ಹೆಚ್ಚು ಗಮನವೂ ಹರಿಸಿಲ್ಲ.

ಹಿಂದೆ, ಇದೇ ಕೋಣೆಯಲ್ಲಿ ಏನೇನೋ ನೆಡೆದಿತ್ತು ... ಇಂದು ಏನೇನೋ ನೆಡೆಯಲಿದೆ .... ಇದೇ ಅರಮನೆಯ ಒಂದು ಕೋಣೆಯ ಕಥೆ .....

ಮಂತ್ರಿಗಳು ಕೋಣೆಯನ್ನು ಹೊಕ್ಕು ಯಥಾಪ್ರಕಾರ ಬಾಗಿಲು ಬಡಿದುಕೊಂಡರು. ಈ ಕೋಣೆಯೊಂದು ನಿಶ್ಶಬ್ದದ ಗೂಡು. ಹೆಚ್ಚು ವೈಭವವಿಲ್ಲ. ಈ ಕೋಣೆಯಲ್ಲಿ ರಾಜನಿಗೆ ಪರಾಕು, ಶಿರಬಾಗಿ ವಂದನೆ ಎಂಬೆಲ್ಲ ನಿಯಮಗಳು ಇರುವುದಿಲ್ಲ. ನೇರವಾಗಿ ವ್ಯವಹಾರದ ಮಾತುಗಳು ಅಷ್ಟೇ !

"ಪ್ರಭು, ಖರ್ಚು ಈಗಾಗಲೇ ವಿಪರೀತ ಆಗಿದೆ. ಬೊಕ್ಕಸ ಬರಿದಾಗುತ್ತಿದೆ. ಹಣದ ವ್ಯವಸ್ತೆಯಾಗಬೇಕು. ಪಕ್ಕದ ರಾಜ್ಯದವರಿಗೆ ಇದರ ಸುಳಿವು ತಿಳಿದಿದ್ದು ಯಾವ ಕ್ಷಣದಲ್ಲಾದರೂ ಆಕ್ರಮಣ ಮಾಡಬಹುದು."

ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು ಎಂಬಂತಿದೆ ಈ ಪರಿಸ್ಥಿತಿಯಲ್ಲೂ ಏರ್ಪಡಿಸಿರುವ ಮೂರು ದಿನಗಳ ವೈಭವ.

ಅದಕ್ಕೆ ಮಹಾಪ್ರಭುಗಳು "ಹೌದು ಮಂತ್ರಿಗಳೇ. ಖರ್ಚಿನ ಅರಿವು ನಮಗೂ ಇದೆ. ಪ್ರತಿ ವರ್ಷದಂತೆ ಈ ವರ್ಷವೂ ಅದೇ ಅದ್ದೂರಿತನದಿ ಕಾರ್ಯಕ್ರಮಗಳು ನೆಡೆಯಬೇಕು ಎಂಬುದು ನಮ್ಮಾಸೆ. ಅದಕ್ಕಾಗಿ ಎಷ್ಟು ಖರ್ಚಾದರೂ ಪರವಾಗಿಲ್ಲ. ನಾನದಕ್ಕೆ ವ್ಯವಸ್ತೆ ಮಾಡುತ್ತೇನೆ. ಏಕೆಂದರೆ ಮುಂದಿನ ವರ್ಷ ಈ ಸಂಭ್ರಮಕ್ಕೆ ಆಸ್ಪದ ಇರುವುದೋ ಇಲ್ಲವೋ ನಾ ಕಾಣೆ" ಎಂದರು.

ರಾಜ್ಯದಲ್ಲೆದ್ದಿರುವ ಅರಾಜಕತೆ, ವಂಚನೆ, ಜಾತಿ-ಮತಗಳ ನಡುವೆ ದಳ್ಳುರಿ, ಹೆಚ್ಚುತ್ತಿರುವ ಅನಿಶ್ಚತೆ ಇವುಗಳು ಇಂದಿನ ಈ ಪರಿಸ್ಥಿತಿಗೆ ’ಕಾರಣ’ವಲ್ಲ ಬದಲಿಗೆ ಮೂಲ ಕಾರಣದ ಫಲ. ಹಾಗಿದ್ದರೆ ’ಕಾರಣ’ ಯಾವುದು?

ಮಹಾಪ್ರಭುಗಳು ಮತ್ತೆ ನುಡಿದರು "ಸಮಾರಂಭದ ತಯಾರಿ ಹೇಗೆ ನೆಡೆದಿದೆ? ಈಚೆಗಿನ ಆದಾಯ ಪರಿಸ್ಥಿತಿ ಹೇಗಿದೆ?" ಮಂತ್ರಿಗಳು "ಒಂದಕ್ಕೆ ನಾಲ್ಕರಂತೆ ಜಾಗ ಕೊಟ್ಟಿದ್ದರಿಂದ ಸ್ವಲ್ಪ ದುಡ್ಡು ಸೇರಿದೆ. ದೊಡ್ಡ ವ್ಯಾಪಾರಸ್ತರು ಪೈಪೋಟಿಗೆ ಬಿದ್ದಿರುವುದರಿಂದ ಸಣ್ಣವರು ಕೊಚ್ಚಿ ಹೋಗಿದ್ದಾರೆ. ಬೀದಿ ದೀಪದ ಅಲಂಕಾರದವರಿಗೆ ಈ ಸಂದರ್ಭದಲ್ಲಿ ಸನ್ಮಾನ ಪತ್ರ ನೀಡುತ್ತೇವೆಂದು ವಾಗ್ದಾನ ಮಾಡಿರುವುದರಿಂದ ಅವರು ಅಲಂಕಾರದ ಕಾರ್ಯಕ್ಕೆ ನಮ್ಮಿಂದ ಏನನ್ನೂ ಅಪೇಕ್ಷೆ ಪಡುತ್ತಿಲ್ಲ. ಕಳೆದ ಎರಡು ತಿಂಗಳಲ್ಲಿ ಹೆಚ್ಚಿದ ತೆರೆಗೆಯಿಂದಾಗಿ ಸ್ವಲ್ಪ ಹಣ ಸೇರಿದೆ. ಈಶಾನ್ಯ ದಿಕ್ಕಿನಲ್ಲಿರುವ ಪ್ರಾಂತ್ಯವನ್ನು ಪಕ್ಕದ ರಾಜ್ಯದವರಿಗೆ ವ್ಯವಸಾಯ ಮಾಡಲಿಕ್ಕೆ ಬಿಟ್ಟಿರುವುದರಿಂದ ಮುಂದಿನ ಎರಡು ವಾರದಲ್ಲಿ ಹಣ ಸೇರಲಿದೆ ... ಮತ್ತು ..."

ಪ್ರಭುಗಳು ಮಂತ್ರಿಗಳನ್ನು ಅಲ್ಲೇ ತಡೆದು "ಸಂತೋಷ. ತೆರಿಗೆ ಏರಿಕೆ ವಿಷಯದಲ್ಲಿ ಜನರ ಅಭಿಪ್ರಾಯ ಹೇಗಿದೆ? ಅವರು ಚೆನ್ನಾಗಿರಬೇಕೆಂಬುದೇ ನಮ್ಮಾಸೆ."

ನಿಟ್ಟುಸಿರು ಬಿಟ್ಟು ಮಂತ್ರಿಗಳು ಹೇಳಿದರು "ಪರಿಸ್ಥಿತಿ ಬಹಳ ಗಂಭೀರವಾಗಿದೆ. ಏರುತ್ತಿರುವ ತೆರಿಗೆ ಮತ್ತು ಬೆಲೆಗಳು, ಬೆಳೆ ಹಾನಿ, ಹೊರ ರಾಜ್ಯಗಳ ವ್ಯಾಪಾರಸ್ತರು, ಕುಶಲಕರ್ಮಿಗಳಿಂದ ಉಂಟಾಗಿರುವ ಪೈಪೋಟಿ, ಯುದ್ದ ಭೀತಿಗಳ ನಡುವೆಯೂ ನೆಡೆಯುತ್ತಿರುವ ಈ ಮೋಜಿನ ವಿರುದ್ದ, ಜನರು ದಂಗೆ ಏಳುವ ಸಾಧ್ಯತೆ ಹೆಚ್ಚಾಗಿದೆ. ವೀರನಾಯಕನು, ಬಿಸಿರಕ್ತದ ತರುಣರ ಒಂದು ದೊಡ್ಡ ಪಡೆಯನ್ನೇ ಸಿದ್ದ ಮಾಡುತ್ತಿರುವಂತಿದೆ. ಶನಿವಾರ ರಾತ್ರಿ ಕುಸ್ತಿ ಪಂದ್ಯದ ಸಮಯದಲ್ಲಿ ಏನೋ ನೆಡೆಯಲಿದೆ ಎಂಬ ವರದಿ ಬಲ್ಲ ಮೂಲಗಳಿಂದ ತಿಳಿದುಬಂದಿದೆ"

ಮಂತ್ರಿಗಳು ’ಮೋಜು’ ಎಂಬ ಪದ ಬಳಸಿ ಹಂಗಿಸಿದ್ದು ಪ್ರಭುಗಳಿಗೆ ರುಚಿಸಲಿಲ್ಲ. ಆದರೂ ತೋರ್ಪಡಿಸಲಿಲ್ಲ.

ಮಹಾಪ್ರಭುಗಳು ಇಂತೆಂದರು "ಕುಸ್ತಿ ಪಂದ್ಯದ ಕ್ರೀಡಾಪಟುಗಳು ಹೆಚ್ಚಾಗಿ ಅವನ ಕಡೆಯವರೇ ಇರುವಂತೆ ನೋಡಿಕೊಳ್ಳಿ. ಒಬ್ಬನನ್ನು ಬಿಟ್ಟು ನಮ್ಮವರೆಲ್ಲರೂ ಪ್ರಾರಂಭಿಕ ಹಂತದಲ್ಲೇ ಸೋಲಲಿ. ಹಾಗಾಗಿ ಕೊನೆಯ ಸ್ಪರ್ಧೆ ನೋಡಲು ಬರುವವರಲ್ಲಿ ವೀರನಾಯಕನ ಕಡೆಯವರೇ ಹೆಚ್ಚು ಮಂದಿ ಇರುತ್ತಾರೆ. ವೀರನಾಯಕನು ಅಲ್ಲಿರುವ ಸಮಯ ನೋಡಿ, ನಾ ಅಲ್ಲಿಗೆ ಬರುತ್ತಿರುವುದಾಗಿ ತಿಳಿಸಿ. ನಂತರ ಸೂಕ್ತ ರೀತಿಯಲ್ಲಿ ಜಾತಿ ಮತದ ದಳ್ಳುರಿಯನ್ನು ಎಬ್ಬಿಸಿ. ಯಾವ ರೀತಿ ಪೊಳ್ಳು ಸುದ್ದಿ ಹಬ್ಬಿಸಬೇಕೆಂದು ನಾ ಹೇಳಲಾರೆ. ಗಲಭೆ ಎದ್ದಾಗ, ಯಾರೂ ತಪ್ಪಿಸಿಕೊಂಡು ಹೋಗದಂತೆ ಅಖಾಡದ ಮುಂಬಾಗಿಲನ್ನು ಅಡ್ಡಗಟ್ಟಿ. ಮುಖ್ಯವಾಗಿ ವೀರನಾಯಕನು ತಪ್ಪಿಸಿಕೊಂಡು ಹೋಗದಂತೆ ಅಡ್ಡಗಟ್ಟಿಸಿ, ಆ ಗಲಭೆಯಲ್ಲಿ ಅವನನ್ನು ಇಲ್ಲವಾಗಿಸಿ. ಆ ಪ್ರಯತ್ನದಲ್ಲಿ ನಮ್ಮವರಿಗೆ ತೊಂದರೆಯಾದರೂ ಚಿಂತೆಯಿಲ್ಲ. ಅಲ್ಲಿರುವ ಅವನೂ ಅವನ ಪಡೆಯವರೂ ಸಂಪೂರ್ಣ ನಾಶವಾಗಲಿ. ನಾವು ಬರುವ ವೇಳೆಗೆ ಆ ಕೆಲಸ ನೆಡೆಯುವುದರಿಂದ ಅವನ ಕಡೆಯವರಿಂದಲೇ ಆ ಕೆಲಸ ನೆಡೆಸಲ್ಪಟ್ಟಿತೆಂದು ಎಲ್ಲೆಡೆ ಸುದ್ದಿ ಹಬ್ಬಿಸಿ".

ಕ್ರೂರತನದ ಪ್ರತೀಕವಾದ ಮಹಾರಾಜನನ್ನು ಮೂಕರಾಗಿ ನೋಡುತ್ತ, ಮನದಲ್ಲಿ ಏಳುತ್ತಿದ್ದ ಆಕ್ರೋಶವನ್ನು ತಡೆದುಕೊಳ್ಳುತ್ತ ಮಂತ್ರಿಗಳು "ಅದೇನೋ ಸರಿ, ಆದರೆ ಹೆಂಗಸರು, ಮಕ್ಕಳು ಎಲ್ಲ ಇರುವವರಲ್ಲ, ಪ್ರಭು?" ಎಂದು ಅನುಕಂಪ ತೋರಿದರು.

ಪ್ರಭುಗಳು ಅದಕ್ಕೆ ಖಾರವಾಗಿಯೇ ನುಡಿದರು "ನಮಗೂ ಇರುವರಲ್ಲ? ಅದಕ್ಕೇನು ಮಾಡಲಾಗುತ್ತದೆ? ನಮಗೆ ಕೇಡುಂಟು ಮಾಡಿ, ಅವನು ರಾಜ್ಯ ಕಸಿದುಕೊಂಡರೆ ಮಹಾರಾಣಿ ಬೀದಿಗೆ ಬರುವುದಿಲ್ಲವೇ? ಅಥವಾ ತಲೆ ತಪ್ಪಿಸಿಕೊಂಡು ಹೋಗುವುದಾದರೂ ಎಲ್ಲಿಗೆ? ಇದು ಅಳಿವು-ಉಳಿವಿನ ಪ್ರಶ್ನೆ. ನಿಮಗದು ಅರ್ಥವಾಗದು. ಹೇಳಿದಷ್ಟು ಮಾಡಿ"

ಮಹಾರಾಜರು ಮುಂದುವರೆಸಿದರು "ಹಾಗೆಯೇ, ಭಾನುವಾರ ಬೆಳಿಗ್ಗೆ ಸಂತಾಪ ಸೂಚಕವಾಗಿ ಜನತೆಯನ್ನುದ್ದೇಶಿಸಿ ನಾವು ಮಾತನಾಡುವಾಗ ಭಲ್ಲೂಕನನ್ನು ಹಿಡಿದು ವಿಚಾರಣೆ ನೆಡೆಸುವುದಾಗಿ ಮತ್ತೊಮ್ಮೆ ವಾಗ್ದಾನ ಮಾಡುತ್ತೇನೆ. ಅದಕ್ಕಾಗಿ ಈ ಬಾರಿ ನಿಮ್ಮನ್ನೇ ನೇಮಿಸಿರುವುದಾಗಿ ಹೇಳುತ್ತೇನೆ".

ಮಂತ್ರಿಗಳು "ಖಂಡಿತ ಪ್ರಭು. ಅವನ ಉಪಟಳ ಬಹಳ ಹೆಚ್ಚಾಗಿದೆ. ಹಲವಾರು ಮುಗ್ದ ಜೀವಿಗಳ ಪ್ರಾಣ ಕಿತ್ತಿದ್ದಾನೆ. ನಮ್ಮ ರಾಜ್ಯ ಉಪ್ಪುಂಡು ನಮಗೇ ಮುಳ್ಳಾಗಿದ್ದಾನೆ. ನನ್ನ ಪ್ರಾಣ ಮುಡುಪಾಗಿಟ್ಟು ಅವನನ್ನು ನಿಮ್ಮಡಿಗೆ ಒಪ್ಪಿಸುತ್ತೇನೆ".

ಪ್ರಭುಗಳು ಗಟ್ಟಿಯಾಗಿ ನಗುತ್ತ "ಅವನೆಲ್ಲಿರುವನೆಂಬ ಗೊಡವೆ ನಿಮಗೆ ಬೇಡ. ನಮಗೆ ಗೊತ್ತು. ನಮ್ಮ ಹೇಳಿಕೆಯ ನಂತರ ಸಮಾಜದ ಹಲವಾರು ಧುರೀಣರು ನಿಮ್ಮನ್ನು ಖುದ್ದಾಗಿ ಭೇಟಿ ಮಾಡಿ, ಭಲ್ಲೂಕ’ನನ್ನು ಹಿಡಿಯದಿರುವಂತೆ ವಿನಂತಿಸಿ ನಮ್ಮ ಬೊಕ್ಕಸ ತುಂಬುತ್ತಾರೆ. ಅದರ ವರದಿ ನಮಗೆ ತಿಳಿಸಿ, ಸಾಕು. ಕೆಲವೊಮ್ಮೆ ನಿಮ್ಮ ನಿಷ್ಟೆ ಮೆಚ್ಚುಗೆಯಾದರೆ, ಮತ್ತೊಮ್ಮೆ ನಿಮ್ಮ ಬೋಳೆ ಸ್ವಭಾವ ನಗು ಬರಿಸುತ್ತದೆ" ಎಂದರು.

ಮಂತ್ರಿಗಳ ಎದೆಯಲ್ಲಿ ಉರಿಯುತ್ತಿದ್ದ ದಳ್ಳುರಿ ಮತ್ತೊಂದು ಮಜಲನ್ನು ಏರಿತು. ಅದರ ನಡುವೆ ತನ್ನನ್ನು ಬೋಳೆ ಸ್ವಭಾವದವನೆಂದ ಅರಸನ ಮಾತಿಗೆ ಮನದಲ್ಲೇ ನಕ್ಕರು.

ಮಂತ್ರಿಗಳು ದೀರ್ಘವಾಗಿ ಉಸಿರೆಳೆದುಕೊಂಡು ಹೊರಬಿಡುವಾಗಲೇ ಮಹಾರಾಜರು ನುಡಿದರು "ಈಚೆಗೆ ವಿಕ್ರಮಸೇನರಿಂದ ಹೆಚ್ಚು ವಿಷಯಗಳು ತಿಳಿದು ಬರುತ್ತಿಲ್ಲ. ಕೆಲಸಗಳು ಹೇಗೆ ನೆಡೆದಿವೆ?".

ಮಂತ್ರಿಗಳು "ವಿಕ್ರಮಸೇನರ ಬಗ್ಗೆ ಜನಕ್ಕೆ ತೀವ್ರ ಆಕ್ರೋಶವಿದೆ ಮಹಾಪ್ರಭು. ಅವರು ಪಕ್ಕದ ರಾಜ್ಯದವರ ಜೊತೆ ಸೇರಿಕೊಂಡು ನಮ್ಮ ಗಂಧದ ಮರಗಳನ್ನು ಹೊರದೇಶಕ್ಕೆ ಮಾರಿಕೊಳ್ಳುತ್ತಿದ್ದಾರೆಂದು ವರದಿಯಾಗಿದೆ. ನೀವೊಮ್ಮೆ ಅಪ್ಪಣೆ ಕೊಟ್ಟರೆ ಅವರನ್ನು ಸೂಕ್ತ ರೀತಿಯಲ್ಲಿ ವಿಚಾರಣೆ ಮಾಡಿಸಬಹುದು. ಇದೇ ವಿಷಯ ಹಲವು ಬಾರಿ ನಿಮ್ಮ ಗಮನಕ್ಕೆ ತಂದಿದ್ದೇನೆ" ಎಂದು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದರು.

ಪ್ರಭುಗಳು ಉಡಾಫೆಯಿಂದ ನುಡಿದರು "ವಿಕ್ರಮಸೇನರಿಗೆ ಆ ಕೆಲಸವನ್ನು ವಹಿಸಿದವರು ನಾವೇ. ನಮ್ಮ ಬೊಕ್ಕಸ ತುಂಬಲು ಈ ಏರ್ಪಾಡು ಮಾಡಿದ್ದೇನೆ. ಸಮಯ ಬಂದಾಗ ನಾನೇ ಹೇಳೋಣವೆಂದಿದ್ದೆ."

ಇಂತಹ ಸದಾವಕಾಶಕ್ಕಾಗಿ ಕಾದಿದ್ದ ಮಂತ್ರಿಗಳು ಅಷ್ಟೇ ಶಾಂತರಾಗಿ ನುಡಿದರು "ನನಗೆ ಇದರ ಬಗ್ಗೆ ತಿಳಿದಿತ್ತು. ಮೊದಲು ನೀವೇ ದಾಳ ನೆಡೆಸಲಿ ಎಂದು ಸುಮ್ಮನಿದ್ದೆ. ವಿಕ್ರಮಸೇನನ ಬಗ್ಗೆ ಇತ್ತೀಚೆಗೆ ನಿಮಗೆ ವರದಿಗಳು ಬಂದಿಲ್ಲ. ಏಕೆಂದರೆ ಪಾಪ ವಿಕ್ರಮಸೇನನ ತಲೇ ಮೇಲೆ ಸಣ್ಣ ಬೇವಿನ ಮರವೊಂದು ಬಿದ್ದು ಅಲ್ಲೇ ಅಸುನೀಗಿದರು. ನಂಬಿಕೆಯೇ ಬರುವುದಿಲ್ಲ, ಆದರೂ ನಿಜ" ಎಂದು ತುಟಿ ಅಂಚಿನಲ್ಲೇ ನಕ್ಕರು.

ರಾಜರಿಗೆ ಇದು ಕುಹಕವೋ, ಕಪಟತನವೋ ಇಲ್ಲ ತಮ್ಮ ಬಾಣ ತಮ್ಮತ್ತಲೇ ತಿರುಗುತ್ತಿದೆಯೋ ಅರ್ಥವಾಗಲಿಲ್ಲ.

ಇದ್ದಕ್ಕಿದ್ದಂತೆ ವಿಷಯವೇ ಬದಲಾದ್ದರಿಂದ ಚಕಿತಗೊಂಡ ಪ್ರಭುಗಳು ರಾಣಿಯ ಕಡೆ ಒಮ್ಮೆ ಕ್ರೂರ ದೃಷ್ಟಿ ಬೀರಿದರು. ಈ ವಿಷಯ ಹೊರಬರಲು ಏಕ ಮಾತ್ರ ಮಾರ್ಗವೆಂದರೆ ಅದು ಮಹಾರಾಣಿ ಮಾತ್ರ. ರಾಣಿ ಚಂಡಿಕಾದೇವಿ ಸುಮ್ಮನೆ ಹೂನಗೆ ಚೆಲ್ಲಿದರಷ್ಟೇ !

ಆ ನಗೆಯಲ್ಲಿ ಸಾವಿರ ಅರ್ಥಗಳಿದ್ದವು. ವಯಸ್ಸಿನಲ್ಲಿ ಹಿರಿಯರಾದ ತಮಗೆ ಕಿರಿ ವಯಸ್ಸಿನ ರಾಣಿ ಇರುವಾಗ, ಈ ಕಿರಿ ವಯಸ್ಸಿನ ಮಂತ್ರಿಗಳನ್ನು ದೂರ ಇಡಬೇಕಿತ್ತು ಎಂದು ತಿಳಿಯಲಿಲ್ಲವೇ? ಎಂಬುದೂ ಒಂದು!!

ಕಾಲ ಮಿಂಚಿದ ಹಾಗಿದೆ !!

ಮಂತ್ರಿಗಳು ಮತ್ತೆ ನುಡಿದರು "ನಿಮ್ಮ ಸುಖಕ್ಕಾಗಿ, ನಿಮ್ಮ ವೈಭೋಗಕ್ಕಾಗಿ, ನಮ್ಮ ನಾಡಿನ ಮರ, ಭೂಮಿಯನ್ನೇ ಮಾರಿಕೊಳ್ಳುತ್ತ, ಜನರ ಹಿತಾಸಕ್ತಿಯನ್ನು ಬದಿಗೊತ್ತಿ, ಬಡವರ ಕಣ್ಣಿಗೆ ಮಣ್ಣೆರಚುತ್ತ ಮೆರೆವ ನಿಮ್ಮ ಅಟ್ಟಹಾಸವನ್ನು ಎಲ್ಲಿಯವರೆಗೆ ಜನರು ತಡೆಯುತ್ತಾರೆ? .... ಪ್ರಭೂ".

ಕೊನೆಯಲ್ಲಿ ’ಪ್ರಭೂ’ ಎಂದದ್ದು ವ್ಯಂಗ್ಯವಾಗಿ ಎಂದರಿತು, ರೋಷಾಗ್ನಿಯಿಂದ ಮಂತ್ರಿಗಳತ್ತ ನೋಡುತ್ತಿದ್ದರು.

ಮಂತ್ರಿಗಳು ಅದಕ್ಕೇನೂ ಹೆದರದೆ "ಸತ್ಯ ಹೇಳಿ ಪ್ರಭು, ಭಲ್ಲೂಕ ಎಂಬೊಬ್ಬ ಜೀವಿ ನಿಜಕ್ಕೂ ಇದ್ದಾನೆಯೇ? ಅವನು ನಿಮ್ಮ ಸೃಷ್ಟಿ ಮಾತ್ರವೇ ತಾನೇ? ನಿಮಗಾಗದವರನ್ನು ಕಡೆಗಾಣಿಸಲು ನೀವು ಬಳಸುತ್ತಿರುವ ಒಂದು ನಾಮಧೇಯ ಮಾತ್ರ ಈ ಭಲ್ಲೂಕ, ಅಲ್ಲವೇನು?" ಎಂದು ರೋಷದಿ ನುಡಿದರು.

ರಾಜ ಮೂಕನಾಗಿದ್ದ. ಒಳ್ಳೆಯತನದ ಬೋಳೇ ಸ್ವಭಾವದವನು ಎಂದು ಎಣಿಸಿದವನು, ಬೇರೆಯೇ ರೂಪ ತಾಳಿದ್ದಾನೆ. ತನ್ನವನು ಎಂದುಕೊಂಡವನೇ ತನ್ನ ಎದುರು ನಿಂತಿದ್ದಾನೆ. ಇನ್ನು ಇವನನ್ನು ಉಳಿಸಬಾರದು !

ಇಬ್ಬರ ಮನದಲ್ಲೂ ಒಂದೇ ಆಲೋಚನೆ ಬಂದಂತಿದೆ !!

ಈರ್ವರೂ ಕತ್ತಿ ಹಿರಿದು, ಒಬ್ಬರನ್ನೊಬ್ಬರು ದಿಟ್ಟಿಸಿ ನೋಡುತ್ತ ನಿಂತರು.

ರಾಜ ಗೆದ್ದರೆ, ಅವನ ಅಟ್ಟಹಾಸಕ್ಕೆ ಮತ್ತೊಬ್ಬರು ಉಸಿರೆತ್ತುವುದಿಲ್ಲ. ಮಂತ್ರಿ ಗೆದ್ದಲ್ಲಿ ರಾಜ್ಯಕ್ಕೆ ಒಬ್ಬ ಉತ್ತಮ ದೊರೆ ದೊರೆತಾನು. ಒಬ್ಬನದು ರಾಜಕೀಯದ ಅನುಭವ ಮತ್ತೊಬ್ಬನದು ಬಿಸಿರಕ್ತ. ಒಬ್ಬ ಮುದಿಯ, ಕಪಟಿ. ಮತ್ತೊಬ್ಬನದು ಕಿರಿ ವಯಸ್ಸು, ಅನುಭವವಿಲ್ಲದ ವೀರ.

ಗೆಲುವು ಯಾರದು?

ತನಗಿಂತ ಶಕ್ತಿವಂತನಾದ ಮಂತ್ರಿಯೊಡನೆ ಹೋರಾಡಿ ಗೆಲ್ಲುವ ವಿಶ್ವಾಸ ಪ್ರಭುಗಳಿಗಿರಲಿಲ್ಲ. ಇಂತಹ ಒಂದು ದಿನ ಬರಬಹುದು ಎಂದು ಮೊದಲೇ ಎಣಿಸಿದ್ದ ರಾಜ, ಮಂತ್ರಿಯ ಬೆನ್ನ ಹಿಂದಿನ ಕಂಬದ ಕಡೆ ನೋಡಿ ಸುಮ್ಮನೆ ತಲೆದೂಗಿ, ಅಪ್ಪಣೆ ಹೊರಡಿಸಿದರು.

ಆ ಒಂದು ಕ್ಷಣ ಬೇರೆಡೆ ಹರಿದ ರಾಜನ ಗಮನವನ್ನು ಉಪಯೋಗಿಸಿಕೊಂಡು, ತನ್ನ ಖಡ್ಗವನ್ನು ನೇರವಾಗಿ ಅವನ ಎದೆಗೆ ಬಲವಾಗಿ ಚುಚ್ಚಿದ್ದ, ಮಂತ್ರಿ.

ರಾಜ ಕೆಳಗೆ ಉರುಳುತ್ತಿದ್ದಂತೆ, ಆತ ತನ್ನ ಹಿಂದೆ ನೋಡಿದ್ದು ಯಾರನ್ನು ಎಂದು ಯೋಚಿಸಿ ತಿರುಗುವಷ್ಟರಲ್ಲಿ, ಮಂತ್ರಿಯ ಬೆನ್ನ ಹುರಿಯಲ್ಲಿ ಬಲವಾಗಿ ಇಳಿದ ಖಡ್ಗ, ಅವನ ಪ್ರಾಣವನ್ನು ಒಂದೇ ಏಟಿಗೆ ತೆಗೆದಿತ್ತು.

ರಾಜನು ತನ್ನ ರಕ್ಷಣೆಗೆಂದು ನಿಯೋಜಿಸಿದ್ದ ವ್ಯಕ್ತಿ, ಮಂತ್ರಿಯ ಪ್ರಾಣ ತೆಗೆದಿರಲಿಲ್ಲ! ಬದಲಿಗೆ, ರಾಣಿಯು ನಿಯೋಜಿಸಿದ್ದ ವ್ಯಕ್ತಿ ಮಂತ್ರಿಯ ಬಲಿ ತೆಗೆದುಕೊಂಡಿದ್ದ. ರಾಜನೇನಾದರೂ ಉಳಿದಿದ್ದಲ್ಲಿ ಅವನ ಪ್ರಾಣವನ್ನೂ ತೆಗೆವುದೇ ಈ ಯೋಜನೆಯಾಗಿತ್ತು !!

ತನ್ನ ಮುಸುಕು ತೆಗೆದು, ರಾಣಿಗೆ ಶಿರಬಾಗಿ ವಂದಿಸಿದ, ಮಂತ್ರಿಯ ಆಪ್ತನಾದ ವೀರನಾಯಕ.

ರಾಣಿಯ ಮನದಲ್ಲಿ ಮೂಡಿ ಬಂದ ಯೋಚನೆ ಹೀಗಿತ್ತು. ರಾಜನ ಅಳಿವಿನಿಂದ ರಾಜ್ಯವು ಮಂತ್ರಿಯದಾಗಿ ಹೋಗುತ್ತಿತ್ತು. ಮಂತ್ರಿ ಖಂಡಿತ ಒಳ್ಳೆಯವನೇ. ರಾಜ್ಯದ ಹಿತಕ್ಕಾಗಿ, ಜನರಿಗಾಗಿ ತನ್ನ ಪ್ರಾಣವನ್ನೇ ಮೀಸಲಿಟ್ಟಿದ್ದ. ತಾನು ಪಟ್ಟದರಾಣಿಯಾಗುವುದು ಖಚಿತವೇ ಆಗಿತ್ತು. ರಾಜಕೀಯದಲ್ಲಿ, ಆಡಳಿತದಲ್ಲಿ ತೀರಾ ಒಳ್ಳೆಯತನ ಬೇಡ ಅಲ್ಲವೇ? ಪ್ರಾಣವನ್ನು ಮೀಸಲಿಟ್ಟವನ ಪ್ರಾಣ ತೆಗೆಯುವುದು ತಪ್ಪೇನಿಲ್ಲ ತಾನೇ? ವಿರೋಚಿತ ಮರಣ ಎಂದು ಮರಣೋತ್ತರ ಪುರಸ್ಕಾರ ಮಾಡಿದರಾಯ್ತು.

ವೀರನಾಯಕನ ಚಾಣಕ್ಯತನದ ಮುಂದೆ ಮಂತ್ರಿಯ ಬುದ್ದಿವಂತಿಕೆ ಸೊನ್ನೆ. ತಾನು ಮಂತ್ರಿಯೊಡನೆ ಕೈಗೂಡಿಸಿದರೆ, ಮುಂದೆ ವೀರನಾಯಕ ನಮ್ಮನ್ನು ಬಿಡುತ್ತಾನೆ ಎಂದು ನಂಬುವುದಾದರೂ ಹೇಗೆ? ಒಂದೇಟಿಗೆ ಎರಡು ಹಕ್ಕಿ ಉರುಳಿದ್ದರಿಂದ ಜನ ಬಲವೂ ಸಿಕ್ಕಿತು, ರಾಜ್ಯವೂ ದಕ್ಕಿತು.

ಒಳ್ಳೆಯತನವು ಕೆಟ್ಟತನಗಳನ್ನು ನಿರ್ಮೂಲ ಮಾಡುತ್ತಿದ್ದಂತೆಯೇ, ಕಪಟತನ ಒಳ್ಳೇಯತನವನ್ನು ಇಲ್ಲವಾಗಿಸಿತು.

ಇದೇ ರಾಜಕೀಯ !

No comments:

Post a Comment