Sunday, August 8, 2010

ಕೊಕ್

ಒಮ್ಮೆಲೇ ಕಗ್ಗತ್ತಲ ರಾತ್ರಿಯಲ್ಲಿ ಕಣ್ಣು ಕೋರೈಸುವ ಬೆಳಕು ಮೂಡಿದ್ದನ್ನು ಕಂಡು, ಎಲ್ಲರೂ ಒಮ್ಮೆಲೆ ಭೀತರಾದರು!

ಆ ಪ್ರಕಾಶಕ್ಕೋ ಏನೋ ಗೊತಿಲ್ಲ, ಇನ್-ಫ್ರಾ-ರೆಡ್ ಕ್ಯಾಮೆರಾದ ಲೆನ್ಸ್ ಭಸ್ಮವಾಗಿತ್ತು ! ರೆಕಾರ್ಡಿಂಗ್ ಇಲ್ಲದಿದ್ದರೆ ತನ್ನ ಮಾತನ್ನು ಯಾರು ನಂಬುತ್ತಾರೆ? ತ್ರಿಕರ್ಣ ಮೂಕನಾಗಿದ್ದ !!

ಮೊದಲೇ ಭೀತನಾಗಿದ್ದ ರಾಮಚಂದ್ರ ... ಹೃದಯ ಇನ್ನೂ ನಿಂತಿರಲಿಲ್ಲ ಎಂಬುದು ಬಿಟ್ಟರೆ, ಜೀವಚ್ಚವವಾಗಿದ್ದ ! ಬೆಳಕು ಬಂದೆಡೆ ನೋಡಿದವನೇ, ಆ ಪ್ರಕಾಶದ ತೀವ್ರತೆ ತಡೆಯಲಾರದೆ ಕಣ್ಣುಗಳನ್ನು ಭದ್ರವಾಗಿ ಮುಚ್ಚಿದ್ದ !!

ಒಕ್ಕಣ್ಣ ಸರ್ಪಭೂಷಣ, ತಾನು ಇನ್ನೊಂದು ಕಣ್ಣು ಈಗ ತೆರೆದರೂ ತನ್ನಾಟ ಏನೂ ನೆಡೆಯದು ಎಂದು ಬಾಲ ಮುದುರಿದ್ದ !

ಇನ್ನುಳಿದವರು ಯಾರು ? ಭರಮಾಚಾರಿ ಮತ್ತು ......

ಭೀತನಾಗಿದ್ದರೂ ಮೆದುಳು ಕೆಲಸ ಮಾಡುತ್ತಿದ್ದುದು ಭರಮಾಚಾರಿ ಒಬ್ಬನಿಗೇ !

ದೀಪ ಆರಿದ್ದು ... ಗುರುಗಳು ಬೇಡವೆಂಬಂತೆ ಹಸ್ತ ತೋರಿದ್ದು ... ತಾನು ಮಂಡಲದಿಂದ ಎದ್ದು ಹೊರ ಬಂದಿದ್ದು ... ಗುರುಗಳನ್ನೇ ಮೀರಿಸಲು ಹೊರಟಿದ್ದು ... ಒಂದೇ ಎರಡೇ .. ಎಲ್ಲವೂ ಭೀಕರ ತಪುಗಳು .. ಒಬ್ಬ ವಾಮಾಚಾರಿಯ ಸಾಧನೆಯ ಹಾದಿಯಲ್ಲಿ ಯಾವುದು ನೆಡೆಯುವುದಿಲ್ಲವೋ ಅಥವಾ ನೆಡೆಯಬಾರದೋ ಅವೆಲ್ಲವೂ ಇಂದು ನೆಡೆದಿದೆ ...

ಭರಮಾಚಾರಿಯ ಮನದಲ್ಲಿ ಬಂದ ಕೊನೆಯ ಆಲೋಚನೆ "ಇಷ್ಟೆಲ್ಲ ತಪ್ಪುಗಳನ್ನು ಎಸಗಿದ ತನಗೆ, ಸರಿಯಾದ ಶಾಸ್ತಿ ಮಾಡಲು, ಗುರುಗಳೇ ಎದ್ದು ಬರುತ್ತಾರೆ ಎಂಬ ಕಿಂಚಿತ್ ಅರಿವು ನನಗೆ ಇರಬೇಕಿತ್ತು!"

********

ಕಾರು ಮನೆಯ ಮುಂದೆ ನಿಂತಿತು. ಡ್ರೈವರ್ ಬಾಗಿಲು ತೆರೆದು ನಿಂತ. ಗಾಡಿ ನಿಂತರೂ ಶರಣಬಸಪ್ಪ ಕೂತಲ್ಲಿಂದ ಮಿಸುಕಾಡಲಿಲ್ಲ ! ಡ್ರೈವರ್ ಮೆಲ್ಲಗೆ ’ಸಾರ್’ ಎಂದ. ಯಾವ ಪ್ರತಿಕ್ರಿಯೆಯೂ ಇಲ್ಲ ! ಮತ್ತೊಮ್ಮೆ ಸ್ವಲ್ಪ ಜೋರಾಗಿ ಕೂಗಿದ !! ಇನ್ನೂ ಯಾವ ಪ್ರತಿಕ್ರಿಯೆಯೂ ಇಲ್ಲ !! ಮುಚ್ಚಿದ್ದ ಕಣ್ಣುಗಳು ಹಾಗೇ ಮುಚ್ಚಿತ್ತು!!!

ಡ್ರೈವರ್’ಗೆ ಏನೋ ಅನುಮಾನವಾಯಿತು ! ಅವರನ್ನು ಮುಟ್ಟಲೋ ಬೇಡವೋ ಎಂಬ ಅನುಮಾನದಿಂದ, ಹಾಗೇ ಸುಮ್ಮನೆ ಭುಜ ತಟ್ಟಿ ’ಸಾರ್’ ಎಂದ.

ದೇಹ ಥಣ್ಣಗೆ ಇತ್ತು ! ಶರಣಬಸಪ್ಪ ಪಕ್ಕಕ್ಕೆ ವಾಲಿದ !!

ಹಚ್ಚಿದ ದೀಪಕ್ಕೆ ಮಳೆ ನೀರು ಬೀಳದಿರಲಿ ಎಂದು, ಹಣತೆಯ ಮೇಲೆ, ಬಿಲ್ಲಿನಾಕಾರದಲ್ಲಿ ತನ್ನನ್ನು ಬಾಗಿಸಿ ನಿಲ್ಲಿಸಿದ್ದು, ಸ್ವಲ್ಪವೂ ಅಲುಗಾಡಬಾರದು ಎಂದು ಭರಮಾಚಾರಿ ತಾಕೀತು ಮಾಡುತ್ತಿರುವಂತೆ .. ಕಾರು ನಿಂತಾಗ ದೇಹ ಅಲುಗಾಡಿದಾಗ .. ಭರಮಾಚಾರಿಯೇ ’ಸಾರ್’ ಎಂದು ಕೂಗಿ, ಕೈಗೆ ಸಿಕ್ಕ ಆಯುಧದಿಂದ ಭುಜಕ್ಕೆ ಹೊಡೆದಂತೆ ಅನ್ನಿಸಿ, ಕೆಟ್ಟದಾಗಿ ಕಿರುಚಿ ಕಣ್ಣು ಬಿಟ್ಟ, ಶರಣಬಸಪ್ಪ !!!

ಮಳೆಯಲ್ಲಿ ನೆಂದ ಬಟ್ಟೆಯನ್ನೇ ಇನ್ನೂ ಹಾಕಿಕೊಂಡಿದ್ದರಿಂದ ಮೈ ಥಣ್ಣಗೆ ತಾನೇ ಇರುತ್ತೆ? ಆ ಯೋಚನೆ ಮಾಡದೆ, ತನ್ನೆಜಮಾನ ಸತ್ತಿರುವನೆಂದು ಅಂದುಕೊಳ್ಳುತ್ತಿರುವಾಗಾಲೇ ಈ ಕೆಟ್ಟ ದನಿಯ ಕಿರುಚುವಿಕೆಯಿಂದ, ಹೆಣದಲ್ಲಿ ದೆವ್ವ ಸೇರಿದೆ ಎಂದು ಅಂದುಕೊಂಡು ಎದ್ದು ಬಿದ್ದು ಓಡಿ ಹೋದ !!

ನಿಂತವನೇನೋ ಜೀವರಕ್ಷಣೆಗೆ ಓಡಿದ. ಆದರೆ ಆಪತ್ತು ಬಂದಿದ್ದು ಕುಳಿತವನಿಗೆ ! ಇವನು ಕಿರುಚಿದ ಸದ್ದು ಎಷ್ಟು ಜೋರಿತ್ತೆಂದರೆ, ಮನೆಯೊಳಗೆ ಇವನಿಗಾಗಿ ಕಾದು ಕುಳಿತಿದ್ದ ಅರುಣ್ ಕುಮಾರನಿಗೂ ಕೇಳಿಸಿ, ಅವನು ತಕ್ಷಣ ಹೊರಗೆ ಓಡಿ ಬಂದ !!!

’ಕೆಟ್ಟ ಕನಸು’ ಎಂದರಿತು ಸೀಟಿನಿಂದ ಎದ್ದು ಹೊರಬಂದ ಶರಣಬಸಪ್ಪನಿಗೆ, ಭರಮಾಚಾರಿಗಿಂತಲೂ ಕ್ರೂರನಾಗಿ ಕಂಡಿದ್ದು ಖಾಕಿ ಬಟ್ಟೆಯವ. ’ಇವನೇನು ಮಾಡುತ್ತಿದ್ದಾನೆ ಇಲ್ಲಿ’ ಎಂಬ ಆಲೋಚನೆ ಮನದಲ್ಲಿ ಮೂಡಿ ಇನ್ಸ್ಪೆಕ್ಟರ್’ನನ್ನೇ ದಿಟ್ಟಿಸಿ ನೋಡುತ್ತ ನಿಂತ ಶರಣ ಬಸಪ್ಪ..... ನಗರದಲ್ಲಿ ಶುಭ್ರ ವಾತಾವರಣವಿದ್ದರೂ, ಮಳೆಯಲ್ಲಿ ತೊಯ್ದಂತೆ ಬಟ್ಟೆ ಧರಿಸಿ ನಿಂತಿದ್ದ ಲೀಡರ್’ನನ್ನು ತೀವ್ರ ಅನುಮಾನದಿಂದ ನೋಡುತ್ತ ನಿಂತಿದ್ದ ಅರುಣ್ ಕುಮಾರ್ !!

ಶರಣ ಬಸಪ್ಪ ಪಕ್ಕಾ ರಾಜಕಾರಣಿ ಶೈಲಿಯಲ್ಲಿ "ನಮಸ್ಕಾರ" ಎಂದು ಕೈ ಜೋಡಿಸಿದ. ತಾನು ಈಗ ರಾಜೀನಾಮೆ ಕೊಟ್ಟರೆ, ಪವರ್ ಇಲ್ಲದ ತನ್ನನ್ನು ಏನೆಲ್ಲ ಅನುಮಾನದ ಮೇಲೆ ಹಿಗ್ಗಾಮುಗ್ಗ ಎಳೆದಾಡುತ್ತಾರೆ ಎಂದು ಅನ್ನಿಸಿ, ರಾಜೀನಾಮೆಯ ಯೋಚನೆಯನ್ನು ಬದಿಗಿರಿಸಿ "ಒಳಗೆ ಬನ್ನಿ" ಎಂದು ಅರುಣ್ ಕುಮಾರನನ್ನು ಆಹ್ವಾನಿಸಿ, ಮುಂದೇನು ಎಂದು ಯೋಚಿಸುತ್ತ, ಒಳ ನೆಡೆದ.

ಅರುಣ್ ಕುಮಾರನ ತಲೆಯಲ್ಲಿ ನೂರಾರು ಪ್ರಶ್ನೆಗಳು ಓಡಾಡುತ್ತಿದ್ದವು "ಇಷ್ಟು ಹೊತ್ತೂ ಈತ ಎಲ್ಲಿದ್ದರು? ಬಟ್ಟೆಯೆಲ್ಲ ಒದ್ದೆಯಾಗಿದೆ. ಮಳೆ ಎಲ್ಲಿ ಆಗಿರಬಹುದು? ಬಟ್ಟೆಗೆ ಮಣ್ಣು ಮೆತ್ತಿದಂತಿದೆಯಲ್ಲ ಏಕೆ? ಡ್ರೈವರ್ ಎಲ್ಲೂ ಕಾಣಿಸುತ್ತಿಲ್ಲ. ಅವನು ಎಲ್ಲಿ ಹೋದ? ಎಲ್ಲಕ್ಕಿಂತ ಮುಖ್ಯವಾಗಿ ಇಷ್ಟು ಕೆಟ್ಟದಾಗಿ ಕಿರುಚಿದ್ದು ಯಾಕೆ?"

ಯಾವುದೂ ಅರ್ಥವಾಗದೆ, ಶರಣಬಸಪ್ಪನವರ ಹಿಂದೆಯೇ ಒಳಗೆ ನೆಡೆದ ಅರುಣ್ ಕುಮಾರ್.

*********

ತ್ರಿಕರ್ಣನ ಮನದಲ್ಲಿ ಆಲೋಚನೆಗಳು ಮೂಡಲು ತೊಡಗಿತ್ತು ....

ಎಂಟು ಅಡಿ ಆಕೃತಿಯನ್ನು ತಾನು ಜೀವಮಾನದಲ್ಲೇ ಕಂಡಿಲ್ಲ ! ಇದೇನು ಮಾನವನೇ, ಪ್ರಾಣಿಯೇ ಅಥವಾ ನೆಡೆದಾಡುವ ಭೂತವೇ ? ಮಹಾ ಅಘೋರಿಯೇ? ಮೈ-ಕೈಗೆ ಮೆತ್ತಿಕೊಂಡಿರುವುದು ಬೂದಿಯೇ ಅಥವಾ ಮಣ್ಣೇ? ತಲೆಯ ಮೇಲಿರುವುದು ಸುರುಳಿಯುಕ್ತ ಜಡೆಯೋ ಅಥವಾ ಜೀವಂತ ಸರ್ಪಗಳೋ? ಆ ಆಕೃತಿ ಇಡುತ್ತಿರುವ ಒಂದೊಂದು ಹೆಜ್ಜೆಯೂ ಒನಕೆಯಿಂದ ಎದೆಯ ಮೇಲೆ ಕುಟ್ಟಿದಂತೆ ಭಾಸವಾಗುತ್ತಿದೆಯೆಲ್ಲ ? ನನ್ನಂತಹ ಮಾನವರು ಇದರ ಕೈಗೆ ಸಿಕ್ಕರೆ ಬದುಕುವ ಆಸೆಯೇ ಬಿಡಬೇಕಾಗುತ್ತದೆ. ಅಬ್ಬಾ .. ಅದರ ಬಲವೇ? ಹಾದಿಗೆ ಅಡ್ಡ ಬಂದ ಆ ಮರವನ್ನು ಒಂದೇ ಏಟಿಗೆ ಬುಡ ಸಮೇತ ಕಿಟ್ಟು ಹಾಕಿತಲ್ಲ?

ಅಲ್ಲಾ.... ಅದ್ಯಾಕೆ ಹಾಗೇ ನಿಂತಿದ್ದು ? ಅರ್ರೇ ! ಒಂದೆಡೆ ಆ ಆಕೃತಿ .... ಈ ಕಡೆ ಭರಮಾಚಾರಿ .... ಮಧ್ಯದಲ್ಲಿ ಅದು ಯಾರು? .....

ಅದು ಬೇರೆ ಯಾರೂ ಅಲ್ಲ .... ಇಷ್ಟು ಹೊತ್ತು ಮರದ ಹಿಂದೆ ನಿಂತು ಭರಮಾಚಾರಿಯನ್ನು ನೋಡುತ್ತಿದ್ದ ರಾಮಚಂದ್ರ ! ಕಲ್ಲು ಹೊಡೆದು ದೀಪವನ್ನು ಆರಿಸಿದ ರಾಮಚಂದ್ರ !! ಭರಮಾಚಾರಿಯ ಕೈಗೆ ಸಾವಂತ್ರಿಯ ಹೆಣ ಸಿಗದಂತೆ ಯತ್ನ ಮಾಡಿದ್ದ ರಾಮಚಂದ್ರ !!! ಯಾವ ಪವಾಡ ಅರಿಯದ, ಮಹಾ ಶಕ್ತಿವಂತನೂ ಅಲ್ಲದ, ನಿಷ್ಕಲ್ಮಶ ಮನದ ಪ್ರೇಮಿ ರಾಮಚಂದ್ರ !!!! ತನ್ನ ಪ್ರೇಮ ದಿಕ್ಕರಿಸಿದರೂ, ಅವಳ ದೇಹ ಸಂಸ್ಕಾರ ಮಾಡುವೆನೆಂಬ ಏಕೈಕ ಧ್ಯೇಯ ಹೊತ್ತ ಪ್ರೇಮಿ !!!!!

ಈಗ ಗುರುಗಳೇ ಎದ್ದು ಬಂದಿರುವುದು ಏಕೆ?

ತಮ್ಮ ಮಾತನ್ನು ಮೀರಿ, ತಮ್ಮ ಸಾಧನೆಗಳನ್ನೇ ಮೀರಿಸಲು ಹೊರಟ ಶಿಷ್ಯನ ದಮನಕ್ಕೋ ? ಅಥವಾ ಗುರುಗಳನ್ನೇ ಮೀರಿಸಲು ಹೊರಟ ಶಿಷ್ಯನ ಸಾಧನೆಯನ್ನು ತಡೆಯುವವರ ನಿರ್ಮೂಲನಕ್ಕೋ ? ಅಥವಾ ....?

.... ಕೊಕ್

No comments:

Post a Comment