Thursday, October 1, 2009

ಇಳಿದು ಬಾ ತಾಯೀ ಇಳಿದು ಬಾ

ತಮ್ಮ ಪೂರ್ವಜರ ಬಗ್ಗೆ ತಿಳಿದುಕೊಳ್ಳಬೇಕಾದದ್ದು ಕಿರಿಯರ ಕರ್ತವ್ಯ. ಆದರೆ ಅಕ್ಕ-ಪಕ್ಕದ ಮನೆಯಲ್ಲೇ ಯಾರಿದ್ದಾರೆ ಯಾರಿಲ್ಲ ಎಂದು ತಿಳಿದುಕೊಳ್ಳುವ ಆಸಕ್ತಿ ಇಲ್ಲದ ಈ ಕಾಲದಲ್ಲಿ ಪೂರ್ವಜರ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಅಥವಾ ವ್ಯವಧಾನ ಯಾರಿಗೆ ಇದೆ. ಆದ್ದರಿಂದ, ಹಿರಿಯರು ಅವಕಾಶ ಸಿಕ್ಕಾಗ, ಸ್ವಲ್ಪ ಸ್ವಲ್ಪವೇ ಕಿರಿಯರಿಗೆ ಅವರ ಪೂರ್ವಜರ ಬಗ್ಗೆ ತಿಳಿಸಿಕೊಡಬೇಕಾದ್ದು ಕರ್ತವ್ಯ. ಕಿರಿಯರೇ ಆಸಕ್ರಿವಹಿಸಿ ತಮ್ಮ ಪೂರ್ವಜರ ಬಗ್ಗೆ ತಿಳಿದುಕೊಂಡ ಉದಾಹರಣೆಗಳು ವಿರಳ. ಅಂತಹುದೊಂದು ಉದಾಹರಣೆ ಇಲ್ಲಿದೆ.

ಹಿಂದೆ, ಪುರುಷೋತ್ತಮನಾದ ಶ್ರೀರಾಮಚಂದ್ರನು ಮಹರ್ಷಿ ವಿಶ್ವಾಮಿತ್ರರಲ್ಲಿ ತನ್ನ ಪೂರ್ವಜರ ಬಗ್ಗೆ ತಿಳಿಸಿಕೊಡುವಂತೆ ಕೇಳಿದಾಗ, ವಿಶ್ವಾಮಿತ್ರರು ಅತೀವ ಉತ್ಸುಕತೆಯಿಂದ ಒಬ್ಬೊಬ್ಬ ಮಹಾರಾಜನ ಕಥೆಯನ್ನೂ ವಿಸ್ತಾರವಾಗಿ ತಿಳಿಸಿದರಂತೆ. ಇಲ್ಲಿ ಹೇಳಿರುವುದು, ತನ್ನ ಜೀವನವನ್ನೇ ತನ್ನ ಪೂರ್ವಜರಿಗೆ ಮುಡುಪಾಗಿಟ್ಟ ಒಬ್ಬ ರಾಜಸಂತನ ಕುರಿತು.

***
ಇಳಿದು ಬಾ ತಾಯೀ ಇಳಿದು ಬಾ
ಹರನ ಜಡೆಯಿಂದ ಹರಿಯ ಅಡಿಯಿಂದ ಋಷಿಯ ತೊಡೆಯಿಂದ ನುಸುಳಿ ಬಾ
ದೇವದೇವರನು ತಣಿಸಿ ಬಾ | ದಿಗ್ದಿಗಂತದಲಿ ಹನಿಸಿ ಬಾ | ಚರಾಚರಗಳಿಗೆ ಉಣಿಸಿ ಬಾ


ಭರತ ಖಂಡದ ಇತಿಹಾಸದಲ್ಲಿ ಇಕ್ಷ್ವಾಕು ವಂಶ ಅಥವ ಸೂರ್ಯವಂಶವು ಒಂದು ವಿಶಿಷ್ಟ ಸ್ಥಾನ ಹೊಂದಿದೆ. ಈ ವಂಶದ ದೊರೆಗಳು ಅತ್ಯಂತ ಜನಪ್ರಿಯರೂ, ಉತ್ತಮ ಪ್ರಜಾಪಾಲಕರಾಗಿಯೂ, ಸತ್ಯ-ನ್ಯಾಯ-ನಿಷ್ಠೆಗೆ ಹೆಸರಾದವರು. ಈ ವಂಶದ ದೊರೆಯರಲ್ಲಿ ದಿಲೀಪ, ರಘು, ಹರಿಶ್ಚಂದ್ರ, ನಹುಷ, ಅಂಬರೀಷ, ಯಯಾತಿ, ದಶರಥ ಇವರೇ ಮೊದಲಾದ ಒಬ್ಬೊಬ್ಬರದೂ ಹೆಸರಾಂತ ಚರಿತ್ರೆ. ಮಹಾರಾಜ ರಘುವಿನ ನಂತರ ಈ ವಂಶವು ’ರಘುವಂಶ’ ಎಂದೇ ಖ್ಯಾತಿ ಹೊಂದಿತು.

ಇಂತಹ ಇಕ್ಷ್ವಾಕು ವಂಶದಲ್ಲಿ ಜನಿಸಿದ, ಅಯೋಧ್ಯೆಯ ಮಹಾರಾಜ ಸಾಗರನು ಇಬ್ಬರು ಪತ್ನಿಯರಾದ ಕೇಶಿನಿ ಮತ್ತು ಸುಮತಿಯರೊಡನೆ ಗುಣೋತ್ತಮನಾಗಿದ್ದು ದಕ್ಷ ಪ್ರಜಾಪಾಲಕನಾಗಿದ್ದನು. ಕೀರ್ತಿವಂತನಾಗಿ ಸಕಲೈಶ್ವರ್ಯ ಹೊಂದಿದವನಾದರೂ ಮಕ್ಕಳಿಲ್ಲವೆಂಬ ಕೊರತೆ ಉಳ್ಳವನಾಗಿದ್ದನು. ಪ್ರಜಾಪಾಲನೆಯನ್ನು ದಕ್ಷ ಮಂತ್ರಿವರ್ಗಕ್ಕೆ ಒಪ್ಪಿಸಿ, ತನ್ನ ಪತ್ನಿಯರೊಡನೆ ಕೂಡಿಕೊಂಡು ಭೃಗು ಮಹರ್ಷಿಯನ್ನು ಕುರಿತು ತಪಸನ್ನಾಚರಿಸಿದನು. ಹಲವಾರು ವರ್ಷಗಳ ಅವರ ತಪಸ್ಸಿನ ನಂತರ, ಪ್ರೀತನಾದ ಭೃಗು ಮಹರ್ಷಿಯು ವಂಶವನ್ನು ಬೆಳೆಸುವ ಒಬ್ಬ ಮಗನನ್ನು ಒಬ್ಬಳಿಗೂ ಅರವತ್ತು ಸಹಸ್ರ ಬಲಾಢ್ಯ ಮಕ್ಕಳನ್ನು ಇನ್ನೊಬ್ಬಳಿಗೂ ಹರಸುವುದಾಗಿ ವಚನವಿತ್ತನು. ಯಾರು ಯಾವುದನ್ನಾದರೂ ಆಯ್ಕೆ ಮಾಡಬಹುದಾದ್ದರಿಂದ ಮೊದಲ ಪತ್ನಿ ಕೇಶಿನಿಯು ವಂಶವನ್ನು ಬೆಳೆಸುವ ಒಬ್ಬ ಮಗನನ್ನು ಪಡೆಯುವುದಾಗಿಯೂ ಮತ್ತು ಸುಮತಿಯು ಅರವತ್ತು ಸಹಸ್ರ ಬಲಿಷ್ಠ ಮಕ್ಕಳನ್ನು ಪಡೆಯುವುದಾಗಿ ನಿವೇದಿಸಿಕೊಂಡು, ಸಾಗರ ಮಹಾರಾಜನೊಡನೆ ಸಂತಸದಿಂದ ನಗರಕ್ಕೆ ಹಿಂದುರಿಗಿದರು.

ಅರವತ್ತು ಸಹಸ್ರ ಮಕ್ಕಳೂ ಬೆಳೆದಂತೆ ಬಲಾಢ್ಯರೂ, ಉತ್ತಮ ಗುಣವುಳ್ಳವರಾದರು. ಆದರೆ ಕುಲೋದ್ಧಾರಕ ಪುತ್ರನಾದ ’ಅಸಮಂಜ’, ಇನ್ನೊಬ್ಬರನ್ನು ಹಿಂಸಿಸುವುದರಲ್ಲೇ ಆನಂದ ಕಾಣುತ್ತಿದ್ದ ವಿಕೃತ ಮನಸ್ಸುಳ್ಳವನಾಗಿದ್ದನು. ವಿವಾಹ ಮಾಡಿದರೆ ಅವನ ಬುದ್ದಿ ಸರಿ ಹೋಗಬಹುದು ಎಂಬ ಆಶಾಭಾವನೆಯಿಂದ ಮಹಾರಾಜನು ಅವನಿಗೆ ಮದುವೆ ಮಾಡಿಸಿದನು. ’ಅಂಶುಮಾನ್’ ಎಂಬ ಮಗನ ತಂದೆಯಾದರೂ ಅವನ ವರ್ತನೆ ಮಾತ್ರ ಸರಿಹೋಗಲಿಲ್ಲ. ಇದರಿಂದ ಬೇಸತ್ತ ಮಹಾರಾಜನು ಅವನನ್ನು ಗಡೀಪಾರು ಮಾಡಿದನು. ಮೊಮ್ಮಗನಾದ ಅಂಶುಮಾನನು ಕುಲಕ್ಕೆ ತಕ್ಕ ಪುತ್ರನಾಗಿ ತಾತನ ಆಶ್ರಯದಲ್ಲೇ ಬೆಳೆದು ದೊಡ್ಡವನಾದನು.

ಕಾಲ ಕಳೆದಂತೆ ಮಹಾರಾಜ ಸಾಗರನು ’ಅಶ್ವಮೇಧ’ ಯಾಗವನ್ನು ಮಾಡಲು ನಿಶ್ಚಯಿಸಿದನು. ಅದರ ಪದ್ದತಿಯಂತೆ ಯಜ್ಞ್ನಾಶ್ವವನ್ನು ಒಂದು ವರ್ಷಕಾಲ ಅಡ್ಡಾಡಿ ಬರಲು ಬಿಟ್ಟನು. (ಕೆಲವೆಡೆ, ಸಾಗರನು ಈ ಯಾಗವನ್ನು ತೊಂಬತ್ತೊಂಬತ್ತು ಬಾರಿ ಯಶಸ್ವಿಯಾಗಿ ಮಾಡಿ ಮುಗಿಸಿದ್ದನು ಎಂದೂ ಹೇಳಲಾಗಿದೆ) ಈ ವಿಷಯ ತಿಳಿದ ದೇವೇಂದ್ರನು ಅಸೂಯೆಯಿಂದ ಕುದುರೆಯನ್ನು ಕದ್ದು ಬಚ್ಚಿಟ್ಟನು. ಯಾಗದ ಕುದುರೆ ಇಲ್ಲದೆ ಯಾಗವನ್ನು ಪೂರ್ಣಗೊಳಿಸುವುದಾದರೂ ಹೇಗೆ? ಮಹಾರಾಜನ ಆಣತಿಯಂತೆ ಅರವತ್ತು ಸಹಸ್ರ ಮಕ್ಕಳೂ ಹಾಗೂ ಅಂಶುಮಾನನು ಕುದುರೆಯನ್ನು ಹುಡುಕುತ್ತಾ ಇಡೀ ಭೂಮಂಡಲ ಸುತ್ತಿದರು. ಭೂಮಿಯ ಅಡಿಯಲ್ಲಿ ಇರಬಹುದೆಂದು ಭೂಮಿಯನ್ನೂ ಅಗೆದು ಹುಡುಕಿದರು. ಹಿಮಾಲಯ ಪರ್ವತ ಶ್ರ್‍ಏಣಿಯಲ್ಲಿ ಕಂಡು ಬಂದ ಅಶ್ವವನ್ನು ಅಂಶುಮಾನನು ಹಿಡಿದು ತಂದು ಮಹಾರಾಜನಿಗೆ ಒಪ್ಪಿಸಿದನು. ಆದರೆ ವಿಘ್ನಗಳು ಅಲ್ಲಿಗೇ ಮುಗಿಯಲಿಲ್ಲ !

ಯಾಗವು ಮುಂದುವರೆದಿರಲು, ಸೂಕ್ತ ಸಮಯ ನೋಡಿ, ಈ ಬಾರಿ ರಕ್ಕಸನ ವೇಷದಲ್ಲಿ ಬಂದ ಇಂದ್ರನು ಯಜ್ಞ್ನಾಶ್ವವನ್ನು ಮತ್ತೆ ಕದ್ದೊಯ್ದನು. ವಿಷಯ ತಿಳಿದ ಸಾಗರನು ಕುಪಿತನಾದರೂ ಯಜ್ಞ್ನವನ್ನು ಮಾಡುತ್ತಿದ್ದುದರಿಂದ ಮಧ್ಯದಲ್ಲಿ ಬಿಟ್ಟೇಳುವಂತೆ ಇರಲಿಲ್ಲ. ಹಾಗಾಗಿ ತನ್ನ ಮಕ್ಕಳನ್ನು ಕರೆದು ’ಇಡೀ ಭೂಮಂಡಲವನ್ನು ಮತ್ತೆ ಹುಡುಕಿ. ಸಿಕ್ಕದೇ ಹೋದಲ್ಲಿ, ಪ್ರತಿಯೊಬ್ಬರೂ ಒಂದು ಯೋಜನದಷ್ಟು ಭೂಪ್ರದೇಶವನ್ನು ಅಗೆದು ಹುಡುಕಿ. ನಿಮ್ಮ ಹಾದಿಗೆ ಅಡ್ಡ ಬಂದ ಯಾವುದೇ ರೀತಿಯ ಜೀವಿಯಾಗಲಿ, ಬಿಡದೆ ಕೊಲ್ಲಿ. ಯಜ್ಞ್ನಾಶ್ವ ಸಿಗುವ ತನಕ ಹಿಂದಿರುಗಿ ಬಾರದಿರಿ’ ಎಂದು ಆಜ್ಞ್ನಾಪಿಸಿದನು. ಮತ್ತೊಮ್ಮೆ ಇಡೀ ಭೂಮಂಡಲ ಪ್ರದಕ್ಷಿಣೆ ಮಾಡಿ, ಯಜ್ಞ್ನಾಶ್ವ ಕಾಣದೆ ತಂದೆಯ ಆಣತಿಯಂತೆ, ಪ್ರತಿಯೊಬ್ಬರೂ ಒಂದೊಂದು ಯೋಜನ ವಿಸ್ತೀರ್ಣದಂತೆ ಇಡೀ ಭೂಮಿಯನ್ನು ಅಗೆಯುತ್ತಾ ಹೋದರು. ಇವರ ಹಾದಿಗೆ ಅಡ್ಡ ಬಂದ ವನ್ಯ ಪ್ರಾಣಿಗಳು, ಸರ್ಪಗಳು, ಅಸುರರೇ ಮೊದಲಾಗಿ ಯಾವುದೂ ಇವರುಗಳ ಪ್ರಚಂಡ ಶಕ್ತಿಯ ಮುಂದೆ ಉಳಿಯಲಿಲ್ಲ. ಈ ರೀತಿಯ ಹತ್ಯಾಕಾಂಡವನ್ನು ಹಾಗೂ ಭೂಮಿಯು ಛಿದ್ರ ಛಿದ್ರವಾಗುವುದ ಕಂಡು ದೇವಾನುದೇವತೆಗಳು ಬ್ರಹ್ಮನಲ್ಲಿ ಮೊರೆ ಹೋದರು. ಆಗ ಬ್ರಹ್ಮನು ಅವರಲ್ಲಿ ’ಭೂದೇವಿಯು ಮಹಾವಿಷ್ಣುವಿಗೆ ಸೇರಿದವಳಾದ್ದರಿಂದ ಅವಳನ್ನು ರಕ್ಷಿಸಲು ಅವನೇ ಸೂಕ್ತ’ ಎಂದು ನುಡಿದು ಅವರನ್ನು ಕರೆದುಕೊಂಡು ವಿಷ್ಣುವಿನ ಬಳಿ ಹೋದನು.

ಇತ್ತ ಭೂಮಿಯನ್ನು ಧ್ವಂಸ ಮಾಡಿಯೂ ಅಶ್ವವು ಕಾಣದೆ ಹೋದ್ದರಿಂದ, ಸಾಗರನ ಪುತ್ರರು ರಾಜ್ಯಕ್ಕೆ ಹಿಂದಿರುಗಿ ಸಾಗರನಲ್ಲಿ ಆ ವಿಷಯ ನಿವೇದಿಸಿದರು. ಸಾಗರ ಮಹಾರಾಜನು ಕ್ಷುದ್ರನಾಗಿ ’ಭೂಮಿಯ ಯಾವ ಭಾಗವನ್ನೂ ಬಿಡದೆ ಅಗೆಯಿರಿ. ಅಶ್ವವು ಸಿಗುವವರೆಗೂ ನಿಮ್ಮ ಮುಖಗಳನ್ನು ನನಗೆ ತೋರಿಸದಿರಿ’ ಎಂದು ಕಟುವಾಗಿ ನುಡಿದನು. ತಂದೆಯ ಕಟು ನುಡಿಯಿಂದ ಅವಮಾನಿತರಾಗಿ ಹಿಂದುರುಗಿದ ಅವರುಗಳು ಇನ್ನಷ್ಟು ರೋಷಾಯುಕ್ತರಾಗಿ ಅತಲ, ವಿತಲ, ಸುತಲ, ತಲಾತಲ, ರಸಾತಲ, ಪಾತಾಲಗಳನ್ನೂ ಬಿಡದೆ ಅಗೆಯ ತೊಡಗಿದರು.

ಆಗ ಮಹಾವಿಷ್ಣುವು ಮಹರ್ಷಿ ಕಪಿಲನಂತೆ ರೂಪ ಬದಲಿಸಿ ಹಿಮಾಲಯದಲ್ಲಿ ಕುಳಿತುಕೊಂಡು ಸಾಗರನ ಪುತ್ರರ ಅಲ್ಲಿಗೆ ಬರುವಂತೆ ಮಾಡಿದನು. ಅವರುಗಳು ಅಲ್ಲಿಗೆ ಬಂದಾಗ ಅವರ ಕಣ್ಣಿಗೆ ಕಪಿಲ ಮುನಿಯ ಹಿಂದೆ ಅಶ್ವವು ಹುಲ್ಲು ಮೇಯುವುದು ಕಾಣಿಸಿತು. ಅದನ್ನು ಕಂಡು ಅತೀ ಆಕ್ರೋಶದಿಂದ ಕಪಿಲಮುನಿಯ ಆಶ್ರಮಕ್ಕೆ ನುಗ್ಗಿ ಮುನಿವರ್ಯನನ್ನು ಕಳ್ಳನೆಂದು ಜರೆದು ಆತನನ್ನು ಹತ್ಯೆ ಮಾಡಲೂ ಮುಂದುವರೆದರು. ಆಗ ತನ್ನ ಯೋಗಮಾಯೆಯಿಂದ ವಿಷ್ಣು ಸುಮ್ಮನೆ ಒಮ್ಮೆ ’ಹೂಂ’ಕರಿಸಲು ಸಾಗರನ ಅರವತ್ತೂ ಸಹಸ್ರ ಮಕ್ಕಳು ಸುಟ್ಟು ಭಸ್ಮವಾದರು!!! ಅಲ್ಲಿಯವರೆಗೂ ಗಲಭೆಯಿಂದ ಕೂಡಿದ್ದ ಆ ಪ್ರದೇಶ ಒಮ್ಮೆಗೇ ನಿಶಬ್ದವಾಯಿತು. ಸಾಗರನ ಮಕ್ಕಳು ಭಸ್ಮರಾದ ಆ ಪ್ರದೇಶದಲ್ಲಿ ಬೂದಿಯ ಬೆಟ್ಟವೇ ನಿರ್ಮಾಣವಾಯಿತು.

ಎಷ್ಟು ದಿನಗಳಾದರೂ ತನ್ನ ಮಕ್ಕಳು ಅಶ್ವದೊಡನೆ ಹಿಂದಿರುಗದೆ ಇರುವುದ ಕಂಡು ಚಿಂತಿತನಾದ ಸಾಗರ ಮಹಾರಾಜನು ತನ್ನ ಮೊಮ್ಮಗನಾದ ಅಂಶುಮಾನನಿಗೆ ಅಶ್ವವನ್ನು ಹಾಗೂ ಚಿಕ್ಕಪ್ಪಂದಿರನ್ನೂ ಹುಡುಕಿಕೊಂಡು ಬರುವಂತೆ ಹೇಳಿ ಕಳಿಸಿದನು. ಅಪ್ರತಿಮ ವೀರನಾದ ಅಂಶುಮಾನನು ತನ್ನ ಚಿಕ್ಕಪ್ಪಂದಿರು ಹೋದ ಜಾಡನ್ನು ಅನುಸರಿಸಿ ಹೋಗುತ್ತಿರಲು ಹಾದಿಯಲ್ಲಿ ಎಲ್ಲೆಡೆ ಅವನಿಗೆ ಅಶ್ವವು ದೊರೆಯುವಂತಹ ಶುಭಲಕ್ಷಣಗಳು ಕಾಣಿಸಿದವು ಆದರೆ ಚಿಕ್ಕಪ್ಪಂದಿರ ಸುಳಿವು ಮಾತ್ರ ಸಿಗಲಿಲ್ಲ. ಆಶ್ರಮದ ಬಳಿ ಹೋಗುತ್ತಿರುವಂತೆಯೇ ಅವನ ಕಣ್ಣಿಗೆ ಬಿದ್ದಿದ್ದು ಬೂದಿಯ ಬೆಟ್ಟ !!! ಅದನ್ನು ಕಂಡು ಏನಾಗಿರಬಹುದೆಂದು ಊಹಿಸಿದ ಅವನಿಗೆ ಅತೀವ ದು:ಖವಾಯಿತು. ಪಿತೃವಾಕ್ಯ ಪರಿಪಾಲನೆ ಮಾಡಿಯೂ ಇಂತಹ ದುರ್ಗತಿ ಇವರಿಗೇಕೆ ಬಂತೆಂದು ಅರಿಯದೆ, ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತ ನೀರನ್ನು ಹಾಕಲು ನೀರು ಹುಡುಕಿದಾಗ ಅವನಿಗೆ ನೀರೇ ಸಿಗಲಿಲ್ಲ.

ಆಗ ಅಲ್ಲಿಗೆ ಬಂದ ಗರುಡದೇವನು ಅಂಶುಮಾನಿಗೆ ಹೇಳಿದನು ’ಲೋಕಕಲ್ಯಾಣಕ್ಕಾಗಿಯೇ ನಿನ್ನ ಚಿಕ್ಕಪ್ಪಂದಿರು ಹತರಾಗಬೇಕಾಯಿತು. ಅದಕ್ಕಾಗಿ ನೀನು ಚಿಂತಿಸಬೇಕಿಲ್ಲ. ಬದಲಿಗೆ ಅವರಿಗೆ ಸದ್ಗತಿ ಕೊಡುವತ್ತ ಆಲೋಚಿಸು. ಬೂದಿಯಾಗಿರುವ ಇಷ್ಟೂ ಜನರನ್ನು ಒಟ್ಟಾಗಿ ಸ್ವರ್ಗವನ್ನು ಸೇರಿಸುವಂತೆ ಮಾಡಲು ದೇವಗಂಗೆಗೆ ಮಾತ್ರ ಸಾಧ್ಯ’ ಎಂದು ನುಡಿದನು. ಅಂಶುಮಾನನು ಅಲ್ಲಿ ಮೇಯುತ್ತಿದ್ದ ಯಜ್ಞ್ನಾಶ್ವವನ್ನು ಕರೆದುಕೊಂಡು ರಾಜ್ಯಕ್ಕೆ ಹಿಂದಿರುಗಿ ಮಹಾರಾಜನ ಬಳಿ ಎಲ್ಲವನ್ನೂ ನಿವೇದಿಸಿದನು. ಯಜ್ಞ್ನವೇನೋ ಮುಗಿಯಿತು ಆದರೆ ಗಂಗೆಯನ್ನು ಭೂಮಿಗೆ ತರುವ ಪ್ರಯತ್ನ ಮಾತ್ರ ಮುಂದುವರೆಯುತ್ತಲೇ ಇತ್ತು.

ಸಾಗರನಿಗಾಗಲಿ, ಅವನ ಮೊಮ್ಮಗನಾದ ಅಂಶುಮಾನನಿಗಾಗಲೀ ಅಥವಾ ಅವನ ಪುತ್ರನಾದ ದಿಲೀಪನಿಗಾಗಲಿ ಗಂಗೆಯನ್ನು ಭೂಮಿಗೆ ತರುವ ಮಹತ್ಕಾರ್ಯ ಸಾಧ್ಯವಾಗಲಿಲ್ಲ. ದಿಲೀಪನಿಗೆ ನಿತ್ಯವೂ ಅದೇ ಚಿಂತೆಯಾಗಿತ್ತು. ಈ ಚಿಂತೆಯನ್ನು ಬಗೆಹರಿಸುವೆನೆಂದು ಪಣತೊಟ್ಟು ನಿಶ್ಚಲವಾದ ನಿಸ್ವಾರ್ಥ ಮನಸ್ಸಿನಿಂದ ತಪಸ್ಸಿಗೆ ಹೊರಟವನು ದಿಲೀಪನ ಮಗನಾದ ಭಗೀರಥ !!!

ಕೆಲಸದ ವಿಷಯದಲ್ಲಿ ಜನರಲ್ಲಿ ಹಲವು ಪೈಕಿ. ತಮ್ಮ ಕೈಯಲ್ಲಿ ಆಗುವುದಿಲ್ಲವೆಂದು ಹೆದರಿ ಕಠಿಣ ಕೆಲಸಕ್ಕೆ ಕೈಹಾಕದೆ ದೂರವುಳಿಯುವ ಪೈಕಿ ಒಂದಾದರೆ, ಮತ್ತೊಂದು ಪೈಕಿಯಲ್ಲಿ ಕೆಲಸವನ್ನು ಶುರು ಮಾಡಿ ಮಧ್ಯದಲ್ಲಿ ಕೈಬಿಡುವುದು. ತಾವು ಕೈ ಹಾಕಿದ ಕೆಲಸವು ಎಷ್ಟೇ ಕಠಿಣವಾದರೂ ಬಿಡದೆ ಸಾಧಿಸುವವರು ಕೊನೆಯ ಪೈಕಿಯ ಜನ. ಆರಂಭದಿಂದ ಉತ್ಸುಕರಾಗಿ ಎಷ್ಟೇ ಕಷ್ಟ ಬಂದರೂ ಅದನ್ನು ಎದುರಿಸಿ, ಹಿಡಿದ ಕೆಲಸ ಸಾಧಿಸುವ ಛಲದ ಮಂದಿಯ ಸಾಲಿಗೆ ಸೇರುವವನು ಈ ಭಗೀರಥ !! ’ಭಗೀರಥ ಪ್ರಯತ್ನ’ ಎಂಬ ನುಡಿ ಈಗಲೂ ಚಾಲ್ತಿಯಲ್ಲಿದೆ. ಈತನನ್ನು ರಾಜರ ಸಾಲಿಗೆ ಸೇರಿಸುವುದಕ್ಕಿಂತ ಒಬ್ಬ ಕರ್ಮಯೋಗಿಯ ಸಾಲಿಗೆ ಸೇರಿಸಬಹುದು.

ಗಂಗೆಯನ್ನು ಭೂಮಿಗೆ ತರುವ ಪ್ರಯತ್ನದಲ್ಲಿ ತಾನು ಸೋತೆನೆಂಬ ಚಿಂತೆಯಲ್ಲೇ ಅಸುನೀಗಿದ ತಂದೆಯನ್ನು ಕಂಡ ಸಂತಾನಹೀನನಾದ ಭಗೀರಥನು ರಾಜ್ಯದ ಕ್ಷೇಮವನ್ನು ತನ್ನ ಮಂತ್ರಿಮಂಡಲಕ್ಕೆ ಒಪ್ಪಿಸಿ ಬ್ರಹ್ಮನನ್ನು ಕುರಿತು ತಪವನ್ನಾಚರಿಸಲು ಹಿಮಾಲಯಕ್ಕೆ ಹೊರಟನು. ಅಲ್ಲಿ ಪುಷ್ಕರಣಿಯಲ್ಲಿ ಮಿಂದು, ಪದ್ಮಾಸನ ಹಾಕಿ ಕುಳಿತು ತಪವನ್ನು ಆರಂಭ ಮಾಡಿದನು. ಚಳಿಗಾಲದಿ ಥಣ್ಣಗೆ ಕೊರೆವ ನೀರಿನಲ್ಲಿ ಎದೆಯ ಮಟ್ಟದವರೆಗೂ ನಿಂತು ತಪವ ಮಾಡಿದರೆ, ಬೇಸಿಗೆಯಲ್ಲಿ ಪಂಚಾಗ್ನಿಯ (ನಾಲ್ಕು ದಿಕ್ಕಿನಲ್ಲಿ ಅಗ್ನಿ ಹಾಗೂ ನೆತ್ತಿಯ ಮೇಲಿನ ಸೂರ್ಯ) ಮಧ್ಯೆ ನಿಂತು ನಿದ್ರಾಹಾರ ತ್ಯಜಿಸಿ ಕಠೋರ ತಪಸ್ಸನ್ನು ಆಚರಿಸಿದನು. ಹಲವಾರು ವರ್ಷ ಹೀಗೇ ಕಳೆಯಲು, ಅವನ ತಪೋಗ್ನಿಯಿಂದ ಉಂಟಾದ ಶಾಖ ತಡೆಯಲಾರದೆ ದೇವಾನುದೇವತೆಗಳೂ ಬ್ರಹ್ಮನಲ್ಲಿ ಹೋಗಿ ನಿವೇದಿಸಿಕೊಂಡರು. ಆಗ ಬ್ರಹ್ಮದೇವನು ಭಗೀರಥನ ಮುಂದೆ ಪ್ರತ್ಯಕ್ಷನಾದನು. ಭಗೀರಥನು ಸೃಷ್ಟಿಕರ್ತನಾದ ಬ್ರಹ್ಮನನ್ನು ಕುರಿತು ತನಗೆ ಸಂತಾನ ಭಾಗ್ಯ ಕರುಣಿಸುವಂತೆಯೂ ಹಾಗೂ ಬೂದಿಯಾಗಿರುವ ತನ್ನ ಪೂರ್ವಜರಿಗೆ ಮುಕ್ತಿ ಕಾಣಿಸಲು ಗಂಗೆಯನ್ನು ಭೂಮಿಗೆ ಕಳಿಸುವಂತೆಯೂ ಪ್ರಾರ್ಥನೆ ಮಾಡಿದನು. ಭಗೀರಥನ ತಪಸ್ಸಿನಿಂದ ಪ್ರೀತನಾಗಿದ್ದ ಬ್ರಹ್ಮನು ಸಂತಾನ ಯೋಗವನ್ನು ಕರುಣಿಸಿದನು. ಹಾಗೆಯೇ, ಹಿಮವಂತನ ಪುತ್ರಿಯು ಭೂಮಿಗೆ ಹರಿವ ರಭಸವನ್ನು ತಡೆವ ಶಕ್ತಿ ತ್ರಿನೇತ್ರನಿಗೆ ಮಾತ್ರ ಇರುವುದರಿಂದ ಅವನನ್ನು ಕುರಿತು ತಪಸನ್ನಾಚರಿಸಲು ತಿಳಿಸಿದನು.

ಶಿವನನ್ನು ತಪದಿಂದ ಒಲಿಸಿಕೊಳ್ಳಲು ಭಗೀರಥನು ತನ್ನ ಕಾಲ ಹೆಬ್ಬರಳಿನ ಮೇಲೆ ನಿಂತು ಒಂದು ವರ್ಷದ ಕಾಲ ಘೋರ ತಪಸ್ಸನ್ನು ಆಚರಿಸಿದನು. ಅವನ ತಪಸ್ಸಿಗೆ ಮೆಚ್ಚಿ ಅವನ ಮುಂದೆ ಪ್ರತ್ಯಕ್ಷನಾದ ಶಿವನು, ಸ್ವರ್ಗಲೋಕದಿಂದ ಧುಮ್ಮಿಕ್ಕಿ ಹರಿಯುವ ಜಲಧಾರೆಯನ್ನು ತನ್ನ ತಲೆಯ ಮೇಲೆ ತೆಗೆದುಕೊಂಡು ಭೂಮಿಗೆ ಕಳಿಸುವುದಾಗಿ ವಚನವಿತ್ತನು. ಸಾಟಿಯಿಲ್ಲದ ರಭಸಕ್ಕೆ ಹೆಸರಾದ ಆ ಗಂಗೆಯು ಸ್ವರ್ಗದಿಂದ ಹರಿದು ಶಿವನ ತಲೆಯ ಮೇಲೆ ಬೀಳಲು ಬರುತ್ತಿರುವಾಗ ಮುಕ್ಕಣ್ಣನನ್ನು ತನ್ನ ರಭಸದಿಂದ ಕೊಚ್ಚಿ ಹಾಕುವೆನೆಂಬ ಅಹಂಕಾರದಿಂದ ಧುಮುಕಿದಳು. ಗಂಗೆಯ ಇಂಗಿತ ಅರಿತ ಶಿವನು ಅವಳಿಗೆ ಬುದ್ದಿ ಕಲಿಸುವ ಸಲುವಾಗಿ, ತಲೆಯ ಮೇಲೆ ಬಿದ್ದವಳನ್ನು ತನ್ನ ಜಟೆಯಲ್ಲೇ ಬಂಧಿಸಿಬಿಟ್ಟನು. ಗಂಗೆಯು ಜಟೆಯಿಂದ ಹೊರಬರಲು ಎಷ್ಟೇ ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ಆಗ ಭಗೀರಥನು ಮತ್ತೊಮ್ಮೆ ತಪವನ್ನಾಚರಿಸಿ ಶಿವನಲ್ಲಿ ಪ್ರಾರ್ಥನೆ ಮಾಡಿ ಗಂಗೆಯನ್ನು ಬಿಟ್ಟುಕೊಡುವಂತೆ ಕೇಳಿದನು.

ಭಗೀರಥನ ನಿಸ್ವಾರ್ಥ ಮನಸ್ಸಿನ ಧ್ಯೇಯವನ್ನು ಅರಿತ ಗಂಗಾಧರನು ಗಂಗೆಯನ್ನು ತನ್ನ ಜಟೆಯಿಂದ ಮುಕ್ತಗೊಳಿಸಿ, ಭಗೀರಥನನ್ನು ಹಿಂಬಾಲಿಸಲು ತಿಳಿಸಿದನು. ಶಿವನ ತಲೆಯ ಮೇಲಿನಿಂದ ಭೂಮಿಗೆ ಬಿದ್ದ ಗಂಗೆ ಏಳು ಭಾಗವಾಗಿ ಹರಿದಳೆಂದು, ಅದರಲ್ಲಿ ಒಂದು ಭಾಗದಲ್ಲಿ ಮಾತ್ರ ಭಗೀರಥನನ್ನು ಹಿಂಬಾಲಿಸಿದಳು ಎಂದು ಹೇಳಲಾಗಿದೆ.

ಗಂಗೆಯು ಸ್ವರ್ಗದಿಂದ ಬಂದಿಳಿದಾಗ ತನ್ನೊಡನೆ ಸಹಸ್ರಾರು ಜಲಚರಗಳನ್ನೂ ಕರೆತಂದಳು. ಶಿವನ ಜಟೆಯಿಂದ ಭುವಿಗೆ ಹರಿದು ಬರುವ ರುದ್ರರಮಣೀಯ ದೃಶ್ಯವನ್ನು ದೇವಾನುದೇವತೆಗಳು ಕುತೂಹಲದಿಂದ ನೋಡುತ್ತ ನಿಂತರು. ಧುಮ್ಮಿಕ್ಕಿ ಹರಿವ ನೀರಿನಲ್ಲಿ ಥಳ ಥಳನೆ ಹೊಳೆವ ಪ್ರಾಣಿಗಳೂ ಹರಿದು ಬರುತ್ತಿರಲು, ಅಲ್ಲಿ ಕೋಟಿ ಸೂರ್ಯಪ್ರಭೆಯೇ ಉಂಟಾಗಿತ್ತು. ಯಕ್ಷರು, ಕಿನ್ನರರು ತಮ್ಮ ವಾಹನಗಳನ್ನೇರಿ ಭುವಿಗೆ ಬಂದು ಭಗೀರಥನ ಒಡಗೂಡಿ ಕೈಮುಗಿದು ಗಂಗೆಯನ್ನು ಸ್ವಾಗತಿಸಿದರು.

ದಂ ದಂ ಎನ್ದನ್ತೆ ದುಡುಕಿ ಬಾ | ನಿನ್ನ ಕಂದನ್ನ ಹುಡುಕಿ ಬಾ | ಹುಡುಕಿ ಬಾ ತಾಯೆ ದುಡುಕಿ ಬಾ |
ಹರನ ಹೊಸತಾಗಿ ಹೊಳೆದು ಬಾ | ಬಾಳು ಬೆಳಕಾಗಿ ಬೆಳೆದು ಬಾ | ಕೈ ತೊಳೆದು ಬಾ ಮೈ ತೊಳೆದು ಬಾ
ಇಳಿದು ಬಾ ತಾಯಿ ಇಳಿದು ಬಾ | ಇಳೆಗಿಳಿದು ಬಾ ತಾಯಿ ಇಳಿದು ಬಾ

ಶಿವನ ದೇಹದ ಮೇಲೆ ಹರಿದಿಳಿದಿದ್ದರಿಂದ ಆಕೆ ಲೋಕಪಾವನೆಯೂ ಆದಳು. ಹಿಮಾಲಯದಿಂದ ಸ್ವರ್ಗಲೋಕಕ್ಕೆ, ಅಲ್ಲಿಂದ ಶಿವನ ತಲೆಯ ಮೇಲೆ ಹಾಗೂ ಕೊನೆಗೆ ಮತ್ತೆ ಭೂಮಿಗೆ ಹರಿದಿದ್ದರಿಂದ ಆಕೆಯನ್ನು ’ತ್ರಿ-ಪಥ’ ಎಂದು ಕರೆಯುತ್ತಾರೆ.

ತಲೆಬಗ್ಗಿಸಿ ರಭಸದಿಂದ ಭಗೀರಥನ ರಥದ ಹಿಂದೆಯೇ ಸಾಗುತ್ತಿದ್ದ ಭಾಗೀರಥಿಯು ಹಾದಿ ಬದಿಯಲ್ಲಿದ್ದ ಆಶ್ರಮಗಳನ್ನು ಕೆಡವುತ್ತಾ ಸಾಗಿದ್ದಳು. ಇದೇ ತುಂಟುತನದಿಂದ ತನ್ನ ಅರಿವಿಲ್ಲದೇ ’ಜಹ್ನು’ ಮುನಿಯ ಆಶ್ರಮವನ್ನೂ ಕೆಡವಿದಳು. ಜಹ್ನು ಮುನಿಯು ಇದರಿಂದ ಕುಪಿತಗೊಂಡು, ಇಡೀ ಗಂಗೆಯನ್ನು ಒಂದೇ ಗುಟುಕಿನಲ್ಲಿ ಕುಡಿದುಬಿಟ್ಟನು. ವಿಘ್ನಗಳಿಗೆ ಈಗಾಗಲೇ ಹೊಂದಿಕೊಂಡಿದ್ದ ಭಗೀರಥನು ಈ ಬಾರಿ ಜಹ್ನು ಮುನಿಯಲ್ಲಿ ತನ್ನ ಉದ್ದೇಶವನ್ನು ನಿವೇದಿಸಿಕೊಂಡು, ಗಂಗೆಯನ್ನು ಬಿಡುವಂತೆ ಕೇಳಿಕೊಂಡನು. ಜಹ್ನು ಮುನಿಯು ಅವನ ಉದ್ದೇಶವನ್ನು ಅರಿತು, ತನ್ನ ಕಿವಿಗಳ ಮೂಲಕ ಆಕೆಯನ್ನು ಬಿಟ್ಟನು (’ತೊಡೆ’ಯಿಂದ ಎಂದು ಕೆಲವೆಡೆ ಹೇಳಲಾಗಿದೆ). ಜಹ್ನುವಿನಿಂದ ಹೊರಬಂದ ಗಂಗೆಯು ’ಜಾಹ್ನವಿ’ ಎಂದೇ ಪ್ರಸಿದ್ದಳಾದಳು.

ಭಗೀರಥನು ಗಂಗೆಯನ್ನು ಬೂದಿಯ ರೂಪದಲ್ಲಿದ್ದ ತನ್ನ ಪೂರ್ವಜರ ಬಳಿ ಕರೆದು ತಂದು ಆಕೆಯನ್ನು ಅದರ ಮೇಲೆ ಹರಿಯಲು ಹೇಳಲು, ಲೋಕಪಾವನೆ ಗಂಗೆಯ ದೆಸೆಯಿಂದ ಅವರೆಲ್ಲರಿಗೂ ಸ್ವರ್ಗಲೋಕ ಪ್ರಾಪ್ತಿಯಾಯಿತು. ತನ್ನ ಪ್ರಯತ್ನ ಕಡೆಗೂ ಫಲ ನೀಡಿದ್ದನ್ನು ಕಂಡು ಅತ್ಯಂತ ಸಂತುಷ್ಟನಾದ ಭಗೀರಥ ಮಹಾರಾಜ.

ಆ ಸಮಯದಲ್ಲಿ ಬ್ರಹ್ಮದೇವನು ಪ್ರತ್ಯಕ್ಷನಾಗಿ ಭಗೀರಥನಿಗೆ ’ನಿನ್ನ ಪ್ರಯತ್ನದಿಂದಾಗಿ ಭುವಿಗೆ ಇಳಿದ ಗಂಗೆಯು ಇನ್ನು ಮುಂದೆ ’ಭಾಗೀರಥಿ’ ಎಂದೂ ಪ್ರಸಿದ್ದಿ ಹೊಂದುತ್ತಾಳೆ. ರಜಸ್ವಲಾ ದೋಷ ಮುಕ್ತಳಾದ ಈ ಗಂಗೆಯಲ್ಲಿ ಮಿಂದವರು ಪಾಪ ಕಳೆದುಕೊಳ್ಳುತ್ತಾರೆ. ಗಂಗೆಯನ್ನು ಉಪಯೋಗಿಸಿ ತರ್ಪಣ ಕೊಟ್ಟಲ್ಲಿ ಪಿತೃಗಳಿಗೆ ಸ್ವರ್ಗ ಪ್ರಾಪ್ತಿಯಾಗುತ್ತದೆ’ ಎಂದು ಆಶೀರ್ವದಿಸಿದನು.

ಅತ್ಯಂತ ಸಂತೃಪ್ತ ಮನಸ್ಸಿನಿಂದ ಭಗೀರಥನು ತನ್ನ ರಾಜ್ಯಕ್ಕೆ ಹಿಂದಿರುಗಿ ತನ್ನ ಬಂಧುವರ್ಗವನ್ನು ಹಾಗೂ ಪ್ರಜೆಗಳನ್ನು ಸೇರಿಕೊಂಡನು. ಇತಿಹಾಸದಲ್ಲಿ ಇವನ ಹೆಸರು ಅಜರಾಮರವಾಯಿತು.

ಗಂಗಾವತರಣದ ಬಗ್ಗೆ ಹಲವು ಕಡೆ ಹಲವು ರೀತಿಯಲ್ಲಿ ಹೇಳಿದೆ. ದಶಾವತರದಲ್ಲಿ ಒಂದಾದ ವಾಮನಾವತಾರದ ಸಮಯದಿ, ವಿಷ್ಣು ತನ್ನ ಪಾದದಿಂದ ಸ್ವರ್ಗಲೋಕವನ್ನು ಮುಚ್ಚಲು, ಬ್ರಹ್ಮದೇವನು ತನ್ನ ಕಮಂಡಲದ ನೀರಿನಿಂದ ವಿಷ್ಣುವಿನ ಪಾದ ತೊಳೆಯಲು ಅದೇ ಭೂಲೋಕಕ್ಕೆ ಹರಿದು ಗಂಗೆಯಾಯಿತು ಎಂದೂ ಹೇಳುತ್ತಾರೆ.

----
"ಸ್ವರ್ಗದಿಂದ ಇಳಿದು ಬಾ" ಎಂದು ಗಂಗೆಯನ್ನು ಕರೆಯುವ ಸನ್ನಿವೇಶವನ್ನು ವರಕವಿ ಡಾ|ದ.ರಾ.ಬೇಂದ್ರೆಯವರು ತಮ್ಮ ಲೇಖನಿಯಲ್ಲಿ ಅದ್ಭುತವಾಗಿ ಮೂಡಿಸಿದ್ದಾರೆ. ಅಷ್ಟೇ ಸೊಗಸಾಗಿ, ಮೈ ಝುಮ್ಮೆನ್ನುವಂತೆ ತಮ್ಮ ಕಂಠಸಿರಿಯಲ್ಲಿ ಡಾ| ಪಿ.ಬಿ.ಶ್ರೀನಿವಾಸ್ ಅವರು ಆ ರಚನೆಯನ್ನು ವಿಜಯಭಾಸ್ಕರ್ ಅವರ ದಕ್ಷ ಸಂಗೀತ ನಿರ್ದೇಶನದಡಿ ಹಾಡಿದ್ದಾರೆ. ಲೇಖನ ಬರೆಯಲು ಪ್ರೇರಣೆಯಾದ ಈ ಎಲ್ಲ ಮಹನೀಯರಿಗೂ ನನ್ನ ಅನಂತ ವಂದನೆಗಳು.


No comments:

Post a Comment