Friday, October 23, 2009

ಸಂಸಾರ ಸಾಗರದಲ್ಲಿ ಕಂಪ್ಯೂಟರ್ conceptsಉ - ಭಾಗ ೨

ಅಶೋಕನು ಹೊರದೇಶಕ್ಕೆ ಹೊರಡೋ ಮುನ್ನ, ನನ್ನ, ಅರ್ಥಾತ್ ರಾಮಣ್ಣಿಯ, ತಲೆಯಲ್ಲಿ ಕಂಪ್ಯೂಟರ್ ಹುಳ ಬಿಟ್ಟು ಹೋದಾಗಿನಿಂದ ವಿಚಿತ್ರವಾಗಿ ಆಡಲು ಶುರು ಮಾಡಿದ್ದೀನಿ. ಮನೆಯಲ್ಲಿ ನೆಡೆವ ಸಾಮಾನ್ಯ ಸಂಭಾಷಣೆಯಲ್ಲೂ ಈ ಕಂಪ್ಯೂಟರ್ ಲೋಕದ ಮಾತುಗಳು ಹಾಗೇ ಹೊರಳಿ ಬರುತ್ತಿದೆ.

ಮೊನ್ನೆ ವಿಶಾಲೂ ಜೊತೆ ಮಾರ್ಕೆಟ್’ಗೆ ಹೋಗಿದ್ದೆ. ಅಂಗಡಿಯಾತನಿಗೆ ಒಂದು ಕೇಜಿ ಬೂದುಗುಂಬಳಕಾಯಿ ಕೊಡಲು ಹೇಳಿದೆ. ಅವನು ಒಂದು ಪೀಸ್ ಹೆಚ್ಚಿ ತಟ್ಟೆಗೆ ಹಾಕಿದಾಗ, ಆ ಸ್ಕೇಲಿನ ಕಡ್ಡಿ ಒಂದು ಕೇಜಿಗಿಂತ ಸ್ವಲ್ಪ ದಾಟಿ ನಿಂತಿತು. ಅದಕ್ಕೆ ಅವನು ’ಸ್ವಲ್ಪ ಜಾಸ್ತಿ ಇದೆ, ಹಾಕಿ ಬಿಡ್ಲಾ?" ಅಂದ. ವಿಶಾಲೂ ಜೊತೆಗಿದ್ದಾಳೆ ಎಂಬೋ ಧೈರ್ಯದಿಂದ, ರೇಗಿಕೊಂಡೇ ಕೇಳಿದೆ "ಎಲ್ಲಪ್ಪಾ ಜಾಸ್ತಿ ಇದೆ? ಕಡ್ಡಿ ನೋಡು ಸರಿಯಾಗಿ 1024 grams ತೋರಿಸ್ತಿದೆ." ಅಂಗಡಿಯವನಿಗೆ ಅರ್ಥವಾಗದೆ ಮಿಕ ಮಿಕ ನೋಡತೊಡಗಿದೆ. ಎಲ್ಲಿಂದ ಬಂತು ಈ ಪ್ರಾಣಿ ಅನ್ನೋ ಹಾಗೆ. ವಿಶಾಲೂ ನನ್ನನ್ನು ತಿವಿದು ಕೇಳಿದಳು "ರ್ರೀ, ಒಂದು ಕೇಜಿ ಹೇಗ್ರೀ 1024 grams ಆಗುತ್ತೆ?" ಅಂತ. ನನ್ನ ಬಿಟ್ರೆ ಇರೋ ಇಬ್ಬರಲ್ಲಿ, ಇಬ್ಬರೂ ನನ್ನ ವಿರುದ್ದವಾದ ಮೇಲೆ ತೆಪ್ಪಗಿರುವುದೇ ಲೇಸು ಎಂದು ಸುಮ್ಮನಾದೆ.

ನೆನ್ನೆ ಆಫೀಸಿಗೆ ವಕ್ರ ಮೂತಿ ಸುಂದರೇಶ ಬಂದಿರಲಿಲ್ಲ. ಯಾರೋ ಹೇಳಿದ್ರು ಅವನು ಹಿಂದಿನ ದಿನ ಯಾವುದೋ ಹೋಟಲಿನಲ್ಲಿ ಚೆನ್ನಾಗಿ ತಿಂದು ಬಂದ ಮೇಲೆ ಬೆಳಿಗ್ಗೆಯಿಂದ ಟಾಯ್ಲೆಟ್ಟಿನಲ್ಲೇ ಹಾಸಿಗೆ ಹಾಸಿಕೊಂಡು ಮಲಗಿದ್ದಾನೆ ಅಂತ. ನಾನು "Garbage In Garbage Out" ... ಅಂದೇ ಬಿಟ್ಟೆ ! ಯಾರಿಗೆ ಅರ್ಥವಾಯ್ತೋ ಯಾರಿಗೆ ಇಲ್ವೋ ನನಗೆ ಗೊತ್ತಿಲ್ಲ !!

ಯಾಕೆ ಹೀಗಾಗುತ್ತೆ ಎಂಬುದು ಹೇಳೋದು ಕಷ್ಟ. ಉದಾಹರಣೆಗೆ, ಮೇಜಿನ ಮೇಲೆ ಮಂಟಪ ಇಟ್ಟು ಗಣೇಶನನ್ನು ಕೂಡಿಸಿದಾಗ Desktop ಕಂಪ್ಯೂಟರು, ಪ್ರತಿಷ್ಟಾಪನೆ ಎಂದಾಗ 'Installation' , ವಿಸರ್ಜನೆ ಅಂದಾಗ 'Uninstall' , ಪ್ರಹ್ಲಾದ ಕುಮಾರ ನರಸಿಂಹದೇವರ ತೊಡೆಯ ಮೇಲೆ ಕುಳಿತ ಚಿತ್ರಪಟ ಕಂಡಾಗ Laptop , ರಾಮಾಯಣದ ಲಂಕಿಣಿ ಎಂದಾಗ 'Firewall' ಎಂದೆಲ್ಲಾ ಏಕೆ ನೆನಪಿಗೆ ಬರುತ್ತೆ? ಇದಕ್ಕೆಲ್ಲ ವಿವರಣೆ ಕೊಡಲು ಬಲು ಕಷ್ಟ ನೋಡಿ.

ಇಷ್ಟೆಲ್ಲಾ ಪೀಠಿಕೆ ಯಾಕಪ್ಪಾ ಅಂದರೆ, ಅಂದು ಹೊರದೇಶಕ್ಕೆ ಹೋಗಿದ್ದ ಅಶೋಕ ಇಂದು ವಾಪಸ್ಸು ಬರಲಿದ್ದಾನೆ !!

ಮಗನನ್ನು ಕರೆದುಕೊಂಡು ಹೋಗಲು ಅವನ ತಂದೆ-ತಾಯಿ ಇಬ್ಬಾರೂ ಬೆಳಿಗ್ಗೆ ಊರಿಗೆ ಬಂದಿಳಿದರು. ಅವನಿಗೇನು ದಾರಿ ಗೊತ್ತಿಲ್ಲವೇ? ಎಂದು ನೀವು ಕೇಳಬಹುದು. ಆದರೆ, ಈ ನೆಪದಲ್ಲಾದರೂ ಬೆಂಗಳೂರಿನ ಧೂಳು ಕುಡಿಯುವ ಉದ್ದೇಶ ಅವರದು, ಅಷ್ಟೇ.

ಅಶೋಕನು, ಅವರನ್ನು ಊರಾಚೆ ಇರೋ ಏರ್ಪೋರ್ಟಿಗೆ ಬರುವುದು ಬೇಡ ಎಂದು ಹೇಳಿದ್ದರಿಂದ ಇವರುಗಳು ಅವನು ಬರುವ ದಿನ ಬೆಳಿಗ್ಗೆ ನಮ್ಮಲ್ಲಿ ಬಂದಿಳಿದರು. ಬಿಸಿ ಬಿಸಿ ಉಪ್ಪಿಟ್ಟು ಮಾಡಿದ್ದಳು ವಿಶಾಲೂ. ಬೆಳಿಗ್ಗೆಯೇ ಬಂದಿಳಿದ ಅಶೋಕ ಇವರುಗಳು ಬರುವ ತನಕ ಸ್ವಲ್ಪ ಅಡ್ಡಾಗಿದ್ದ. ನಾನೇ ಹಾಗೆ ಹೇಳಿದ್ದೆ, ಇಲ್ದಿದ್ರೆ ನನ್ನ ನಿದ್ದೆ ಹಾಳಾಗುತ್ತೆ ನೋಡಿ !

ಈಗ ನಿತ್ಯಕರ್ಮಗಳನ್ನು ಮುಗಿಸಲು ಹಿಂದುಗಡೆ ಹೋಗಿದ್ದಾನೆ. "'Download' ಆದ ಮೇಲೆ, 'Upload'’ಗೆ ಬಾರಪ್ಪ" ಎಂದು ಹೇಳಬೇಕೂ ಅಂದುಕೊಂಡೆ, ಆದರೆ ಹೇಳಲಿಲ್ಲ. ತಿಂಡಿ ಕಾಫೀ ಎಲ್ಲಾ ಆದ ಮೇಲೆ, ನಾನೂ ಅಶೋಕ ಹಾಗೇ ಮಾತಿಗೆ ಕುಳಿತೆವು. ಸ್ವಭಾವತಹ ಮೂಕ ಪ್ರಾಣಿಯಾದ ನನ್ನ ನೆಂಟ ಅಲ್ಲೇ ಒಂದು ಮೂಲೆಯಲ್ಲಿ ಮುಖಕ್ಕೆ ಪೇಪರ್ ಅಡ್ಡ ಇಟ್ಟುಕೊಂಡು ಕುಳಿತಿದ್ದ.

ನಾನು ಕೇಳಿದೆ "ಇಲ್ಲಿಂದ ಅಲ್ಲೀ ತನಕ ಹೋಗಿ ಇಷ್ಟು ದಿನಗಳಲ್ಲೇ ಕೆಲಸ ಮುಗಿದು ಹೋಯ್ತೇ?" ಅಶೋಕ ಹೇಳಿದ "ಅದು ಹಾಗಲ್ಲ. ನಾನು ಹೋಗಿದ್ದು ಪ್ರಾಜಕ್ಟ್ ಕನ್ಸಲ್ಟೆಂಟಾಗಿ .." ನಾನು ಮಧ್ಯೆ ಬಾಯಿ ಹಾಕಿ "ಏನು? ಕನ್ಸ್ನಲ್ ಟೆಂಟೇ ?" ಅಶೋಕ "ಕನ್ಸಲ್ ಟೆಂಟ್ ಅಲ್ಲ Consultant.... ಒಂದು ರೀತಿಯಲ್ಲಿ, ನೀವು ಹೇಳಿದ್ದೂ ಸರಿಯಾಗಿದೆ ಅಂಕಲ್. ಹೊರ ದೇಶದಲ್ಲಿ Consultant ಜೀವನ ಹರಿಯೋ ನದಿ ಇದ್ದ ಹಾಗೆ ... ಸ್ಥಿರವಾಗಿರೋಲ್ಲ. ಆರು ತಿಂಗಳು ಒಂದು ಊರಿನಲ್ಲಾದರೆ ಇನ್ನಾರು ತಿಂಗಳು ಮತ್ತಿನ್ಯಾವುದೋ ಊರು ಆಗಿರುತ್ತೆ. ಹೆಂಡತಿ ಮಕ್ಕಳು ಒಂದು ಊರಿನಲ್ಲಿದ್ದರೆ ಗಂಡ ಇನ್ನೆಲ್ಲೋ ಇರ್ತಾನೆ. ಹೀಗಾಗಿ, Consultant ಆಗಿರುವವನಿಗೆ ಕನಸಿನಲ್ಲೊ ಟೆಂಟ್ ಕಾಣೋದು ಸಹಜ. ಒಂದು ರೀತಿ Nomads ಇದ್ದ ಹಾಗೆ" ಅಂದ.

ಹೊರಗೆ ಅಶೋಕನ ಅಮ್ಮ ಸುಮತಿ ಮತ್ತು ವಿಶಾಲೂ ಮಾತನಾಡುತ್ತಿದ್ದರು. ಅವರುಗಳು, ನಾವು ಕುಳಿತ ರೂಮಿನ ಕಿಟಕಿಯಾಚೆ ಇದ್ದುದರಿಂದ, ಅಗತ್ಯಕ್ಕಿಂತ ಹೆಚ್ಚೇ ಸ್ಪಷ್ಟವಾಗಿ ಕೇಳಿಸುತ್ತಿತ್ತು.

ಸುಮತಿ ಕೇಳಿದರು "ಹೊಸದಾಗಿ ಕಾಂಪೌಂಡ್ ಹಾಕಿಸಿದಿರಾ ?" ವಿಶಾಲೂ ಉವಾಚ "ಹೌದ್ರಿ ಸುಮತಿ.... ಮಳೆಗೆ ಕಾಂಪೌಂಡ್ ಕುಸಿದು ಬಿತ್ತು. ಹಾಗಾಗಿ ಹೊಸದಾಗಿ ಕಟ್ಟಿಸಿದ್ದು. ಎದುರಿಗೆ ಮನೆ ಕಟ್ತಾ ಇದ್ದಾರಲ್ಲ ಅಲ್ಲಿನ ಕೂಲಿಯವರ ಕೈಯಲ್ಲಿ ಮಾಡಿಸಿದ್ದು. ಆ ಮನೆ ಮುಗಿಯುವವರೆಗೆ ಇಲ್ಲಿ ಇರ್ತಾರೆ. ಇನ್ನೊಂದು ಮನೆ ಕಾಂಟ್ರಾಕ್ಟ್ ಸಿಕ್ಕಲ್ಲಿ ಇಲ್ಲಿಂದ ಎತ್ತಂಗಡಿ ಇನ್ನೊಂದು ಕಡೆ. ಈ ದಿನಗೂಲಿಗಳದು ಅಲೆಮಾರಿ ಜೀವನ ಪಾಪ" ಎಂದು ನೊಂದು ಕೊಂಡಳು. ಇಲ್ಲಿ ನಾನು ಕಣ್ಣೊರೆಸಿಕೊಂಡೆ.

ಆಮೇಲೆ ಅಂದೆ "Consultant, nomad, ಅಲೆಮಾರಿ ಎಲ್ಲ ಒಂದೇ. ಉಪಯೋಗಿಸುವ ಸಂದರ್ಭ ಬೇರೆ ಅಷ್ಟೇ ಅಲ್ವಾ ಅಶೋಕ!". ಬಿಳೀ ಕಾಲರ್ ಬದುಕಿನ ತೇಜೋವಧೆಯನ್ನು ಕಷ್ಟಪಟ್ಟು ತಡೆದುಕೊಂಡಿದ್ದ ಅಶೋಕ ಏನೂ ಉತ್ತರ ಕೊಡಲಿಲ್ಲ.

ಛಲ ಬಿಡದ ವಿಕ್ರಮನಂತೆ ಮುಂದುವರೆಸಿದ ಅಶೋಕ "ಸೂಕ್ಷ್ಮವಾಗಿ ಒಂದು ಪ್ರಾಜಕ್ಟ್ ಹೇಗೆ ನೆಡೆಯುತ್ತೆ ಅಂತ ಹೇಳ್ತೀನಿ ಕೇಳಿ ಅಂಕಲ್. ದೊಡ್ಡ ಕಂಪನಿ ಅಂದರೆ Client ಅಂತ ಕರೆಯೋಣ, ಒಂದು ಕೆಲಸವಾಗಬೇಕಾದರೆ, ಮೂರು-ನಾಲ್ಕು solution providers ಗಳನ್ನು ಸಂಪರ್ಕಿಸಿ, ವಿಚಾರ ಮಾಡ್ತಾರೆ. ಕೆಲಸ ಮುಗಿಸಲು ಬೇಕಾದ ಅವಧಿ, ದುಡ್ಡು ಇತ್ಯಾದಿಗಳನ್ನು ಲೆಕ್ಕ ಹಾಕಿ ಯಾರಾದರೂ ಒಬ್ಬರಿಗೆ ಕೊಡ್ತಾರೆ. ದೊಡ್ಡ ಪ್ರಾಜೆಕ್ಟ್ ಆದರೆ ನಾ ಮುಂದು ತಾ ಮುಂದು ಅಂತ ಈ solution providersಗಳು ಆಸಕ್ತಿವಹಿಸಿ ಬರ್ತಾರೆ. maintenance project ಆದರೆ ಸ್ವಲ್ಪ ಹಿಂದು ಮುಂದು ನೋಡ್ತಾರೆ. ಇವರುಗಳು ತಮ್ಮ ಜನರನ್ನು ಕೆಲಸಕ್ಕೆ ಕಳಿಸಿ ಕೆಲಸ ಮಾಡಿಸುತ್ತಾರೆ. Client ಇವರ ಕೆಲಸವನ್ನು monitor ಮಾಡ್ತಾ ಇರ್ತಾರೆ. ಇವರು ಮಾಡಿದ ಒಟ್ಟು ಕೆಲಸವನ್ನು ಇವರ ಕಂಪನಿಯವರು, ಆ Clientಗೆ ಬಿಲ್ ಮಾಡ್ತಾರೆ. ಎಷ್ಟೊ ಸಾರಿ ಆರು ತಿಂಗಳಿಗೆ ಆಗುವ ಕೆಲಸವನ್ನು ಮೂರೇ ತಿಂಗಳಲ್ಲಿ ಮಾಡಿ ಮುಗಿಸುತ್ತೇವೆ ಎಂದು ಕೊಚ್ಚಿಕೊಂಡು ಆಮೇಲೆ ಹತ್ತು ತಿಂಗಳವರೆಗೂ ಎಳೀತಾರೆ."

ಅತ್ತ ಕಡೆ ವಿಶಾಲೂ ತನ್ನ ಮಾತನ್ನು ಮುಂದುವೆರಿಸಿದಳು "ಮನೆ ಕಟ್ಟೋ ಕಾಂಟ್ರಾಕ್ಟರುಗಳು, ’ಬರೀ ಕಾಂಪೌಂಡ್ ಕೆಲಸ, ಇದು ಪೀಸ್ ವರ್ಕ್”’ ಅಂತ ಹೇಳಿ ಬೇಗ ಒಪ್ಪಿಕೊಳ್ಳಲೇ ಇಲ್ಲ. ಮೂರು-ನಾಲ್ಕು ಜನರ ಹತ್ತಿರ ಮಾತನಾಡಿ ಕೊನೆಗೆ ಈ ಎದುರು ಮನೆ ಕೆಲಸ ಮಾಡಿಕೊಡ್ತಿರೋ ಕಂಟ್ರಾಕ್ಟರನ್ನೇ ಹಿಡಿದ್ವಿ ಅನ್ನಿ. ಅವನೋ ಒಂದು ತಿಂಗಳಲ್ಲಿ ಮಾಡಿ ಕೊಡ್ತೀನಿ ಅಂತ ಮೂರು ತಿಂಗಳು ಮಾಡಿದ. ಇವರು ಸರಿಯಾಗಿ ಕೆಲಸ ಮಾಡ್ತಾರೋ ಇಲ್ವೋ ಅಂತ ನೋಡಿಕೊಳ್ಳೋದು, ಸಿಮೆಂಟು, ಮರಳು, ಕಲ್ಲು, ವಾರದ ಕೊನೆಗೆ ಬಟವಾಡೆ, ಹೀಗೆ ಒಂದಾ ಎರಡಾ. ಕೊನೆಗೆ ಕೆಲಸ ಮುಗಿಯುವ ಹೊತ್ತಿಗೆ, ನಾವು ಅಂದುಕೊಂಡಿದ್ದಕ್ಕಿಂತ ಎರಡರಷ್ಟು ಖರ್ಚಾಯಿತು."

ಅಲ್ಲಿನ ಸಂಭಾಷಣೆ ಪೂರ್ತಿಯಾಗಿ ಕಿವಿಗೆ ಬಿದ್ದರೂ, ಅಶೋಕ ತನಗೇನೂ ಕೇಳಿಸಲಿಲ್ಲವೆಂದೇ ಮುಂದುವರೆಸಿದ "ಈ solution provider ಮತ್ತು Client ಕಂಪನಿಯವರು ಮೊದಲು Project Initiation ಅಂತ ಮಾಡಿಕೊಳ್ಳುತ್ತಾರೆ. ನಂತರ ಇಬ್ಬರೂ ಪ್ರಾಜಕ್ಟ್’ನಲ್ಲಿ ಏನು ಬೇಕು, ಏನು ಬೇಡ, ಯಾವಾಗ ಬೇಕು ಹೀಗೆ ಅಂತ Requirements ತಯಾರು ಮಾಡ್ತಾರೆ. ಇದಕ್ಕಾಗಿ solution provider ಕಂಪನಿಯವರು client ಕಂಪನಿಯ ಹಲವಾರು ಜನರ ಹತ್ತಿರ ಮಾತನಾಡಿ ಕೆಲಸದ ಒಳ-ಹೊರಗೆ ತಿಳಿದುಕೊಂಡು ಹೀಗೆ ಮಾಡಬೇಕು, ಹಾಗೆ ಮಾಡಬೇಕು ಅಂತ ಡಿಸೈನ್ ತಯಾರು ಮಾಡುತ್ತಾರೆ. ಅದೆಲ್ಲ ಮುಗಿದ ಮೇಲೆ ಕೋಡ್ ಬರೆದು, ಟೆಸ್ಟ್ ಮಾಡುತ್ತಾರೆ. client ಕಂಪನಿಯವರು ಇಂತಹ ದಿನ ರಿಲೀಸ್ ಮಾಡಬೇಕೆಂಬ ಶೆಡ್ಯೂಲ್ ತಯಾರು ಮಾಡಿರುತ್ತಾರೆ. ಮಧ್ಯೆ ಏನಾದರೂ ತೊಡಕಾದಲ್ಲಿ ರಿಲೀಸ್ ಡೇಟ್ ಮುಂದೆ ಹೋಗುತ್ತೆ. ರಿಲೀಸ್ ಮಾಡೊ ಮುನ್ನ ಎಲ್ಲ ರೀತಿ testing ಮಾಡಿದ್ದರೂ ಏನೋ ಹುಳುಕು ಇದ್ದೇ ಇರುತ್ತೆ."

ವಿಶಾಲೂ ಮುಂದುವರೆಸಿದ್ದಳು "ಕೆಲಸ ಶುರು ಮಾಡೋ ಮುನ್ನ ಆ ಕಾಂಟ್ರಾಕ್ಟರನ್ನ ಕೇಳಿದ್ವಿ. ಯಾವ ಸಿಮೆಂಟ್ ಬೇಕು, ಎಲ್ಲಿಂದ ಮರಳು ತರಿಸಬೇಕು ಅಂತೆಲ್ಲ. ಅವನೂ ಎಲ್ಲ ಹೇಳಿದ್ದ. ಅಷ್ಟೆಲ್ಲ ಮಾಡಿ ಹಗಲಿರುಳೂ ಆ ಕೆಲಸದವರ ಜೊತೆ ಏಗಿ, ನಿಂತು ಕೆಲಸ ಮಾಡಿಸಿ ನೋಡಿಕೊಂಡಿದ್ದರೂ ಆಗಲೇ ಗೋಡೆಯಲ್ಲಿ ಕ್ರಾಕ್ ಬಂದಿದೆ". ಅದಕ್ಕೆ ಸುಮತಿ "ಏನು ಮಾಡಲಿಕ್ಕೆ ಆಗುತ್ತೆ ಹೇಳಿ ವಿಶಾಲೂ. ಕ್ರಾಕ್ ಬಂತು ಅಂತ ನೀವು ತಲೆ ಕೆಡಿಸಿಕೊಳ್ಳಬೇಡಿ. ಅದಿರಲಿ ರಂಗರಾಯರ ಮಗಳ ಮದುವೆ ವಿಷಯ ಎಲ್ಲಿಗೆ ಬಂತು ?" ಎಂದು ಟಾಪಿಕ್ ಬದಲಾಯಿಸಿದರು.

ವಿಶಾಲೂ "ಸಿಕ್ಕಾಪಟ್ಟೆ ಹುಡುಕಿದ ಮೇಲೆ ಹೋದ ತಿಂಗಳು ಗಂಡು ಸಿಕ್ಕಿದನಪ್ಪ ಸದ್ಯ. ಎಲ್ಲೆಲ್ಲೋ ಹುಡುಕಿ ಕೊನೆಗೆ ಅವರ ಬೀದಿ ಕೊನೆಯ ಮನೆಯಲ್ಲೇ ಇರೋ ಹುಡುಗ ಸಿಕ್ಕಿದ್ದು. ಎರಡೂ ಪಾರ್ಟಿಯವರೂ ಕುಳಿತು ಮಾತನಾಡಿ ಒಪ್ಪಂದ ಮಾಡಿಕೊಂಡಿದ್ದಾರಂತೆ. ಏನು ಕೊಡಬೇಕು, ಎಷ್ಟು ಕೊಡಬೇಕು ಅಂತೆಲ್ಲ. ಒಂದೇ ಬೀದಿಯಲ್ಲಿದ್ದರೂ ಸಹ, ಇವರೂ ಹಲವಾರು ಜನರ ಬಳಿ ವಿಚಾರಿಸಿ ಹುಡುಗನ ಬಗ್ಗೆ ತಿಳಿದುಕೊಂಡಿದ್ದಾರೆ. ದಿನ ಗೊತ್ತು ಮಾಡಿ, ಛತ್ರ ಸಿಕ್ಕಿ, ಬುಕ್ ಮಾಡಿದ ಮೇಲೆ ಮೊನ್ನೆ ದಿನ ಲಗ್ನಪತ್ರಿಕೇನೂ ಆಯ್ತು. ಜನವರಿಯಲಿ ಮದುವೆ. ರಂಗರಾಯರ ಅಮ್ಮನಿಗೆ ಮೈಯಲ್ಲಿ ಸರಿ ಇಲ್ಲವಂತೆ. ಸದ್ಯ ಮದುವೆ ಮುಂದೆ ಹೋಗದಿದ್ದರೆ ಸಾಕು ಅನ್ನೋ ಟೆನ್ಷನ್ನು ಇವರಿಗೆ. ಎಲ್ಲ ಸರಿಯಾಗಿ ನೆಡೆದರೆ ಸಾಕು".

ಸುಮತಿ ನುಡಿದರು "ದೇವರ ಮೇಲೆ ಭಾರ ಹಾಕ ಬೇಕು ಅಷ್ಟೇ! ನೋಡಿ ಮಾಡಿ ಮಾಡುವ ಮದುವೆಯಾದರೂ ನಮ್ಮ ಹಣೆ ಬರಹ ಚೆನ್ನಾಗಿರಬೇಕಲ್ಲಾ?".

ಅಲ್ಲಾ, ಈ ಸುಮತಿ ನುಡಿದದ್ದು ರಂಗರಾಯರ ಮಗಳ ಮದುವೆ ಬಗ್ಗೇನಾ, ಇಲ್ಲ ಅವರ ಮದುವೆ ಬಗ್ಗೇನಾ ಅಥವಾ ನನ್ನ ಬಗ್ಗೇನಾ?

ಇರಲಿ, ನಾನು ಅಶೋಕನನ್ನು ಕೇಳಿದೆ "ನಾನು ಹಾಕಿಸಿದ ಕಾಂಪೌಂಡು, ರಂಗರಾಯರ ಮಗಳ ಮದುವೆ, ನಿನ್ನ ಪ್ರಾಜೆಕ್ಟ್ ನೆಡೆಯೋ procedure ... ಇವೆಲ್ಲ ಹೆಚ್ಚು ಕಮ್ಮಿ ಒಂದೇ ಅಲ್ಲವೇ?"

ಅಶೋಕನ ಕಣ್ಣಿಗೆ ಪ್ರಾಜಕ್ಟ್ ಮೇನೇಜರ್ ಒಬ್ಬ ಮೇಸ್ತ್ರಿಯಾಗಿ, Consultant ಕೂಲಿಯಾಗಿ, client ಹೆಣ್ಣು ಕೊಡೋ ಮಾವನಾಗಿ, consulting company’ಯವರು ಗಂಡಿನ ಕಡೆಯವರ ಹಾಗೆ, ಲಗ್ನಪತ್ರಿಕೆ 'Design Document' ಆಗಿ ಕಾಣತೊಡಗಿ ತಲೆ ತಿರುಗ ಹತ್ತಿತು.

ನಾನು "ಪಾಪ, ಜೆಟ್ಲ್ಯಾಗ್ ಇರಬೇಕು, ಸ್ವಲ್ಪ ರೆಸ್ಟ್ ತೊಗೋ" ಅಂತ ಹೇಳಿ ಎದ್ದೆ.

ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಎನ್ನುವುದರ ಜೊತೆಗೆ ಪ್ರಾಜಕ್ಟ್ ಮಾಡಿ ನೋಡು ಎಂದೂ ಸೇರಿಸಬೇಕೇನೋ ?

1 comment: