Sunday, March 27, 2011

ಚು(ಕು)ಟುಕು ಕಥೆಗಳು 01

ಸಮ್ಮಿಲನ:

ಅದೊಂದು ದೊಡ್ಡ ಸಮಾರಂಭ. ಹಲವಾರು ಕ್ಷೇತ್ರದ ಡಾಕ್ಟರ್’ಗಳ ಮಹಾ ಸಮ್ಮಿಲನ. ಆಹ್ವಾನಿತರಿಗೆ ಮಾತ್ರ ಪ್ರವೇಶ. ಹಾಲ್ ದೊಡ್ಡದಿದ್ದರೂ ಜನ ಹೆಚ್ಚು ಇದ್ದುದರಿಂದ ಉಸುರುಗಟ್ಟಿದಂತಾಗಿ ಬಂದವರಲ್ಲೊಬ್ಬರು ನಿತ್ರಾಣಗೊಂಡು ಒರಗಿದರು. ಅದನ್ನು ಗಮನಿಸಿದ ಡಾಕ್ಟರುಗಳಿಗೆ ಕೈಕಾಲು ಆಡಲಿಲ್ಲ! ಆಸ್ಪತ್ರೆಗೆ ಕರೆ ಮಾಡಿ ಆಂಬ್ಯುಲನ್ಸ್ ತರಿಸಿದರು. ಬಿದ್ದವರನ್ನು ಹೊತ್ತ ಆಂಬ್ಯುಲನ್ಸ್ ಕೆಂಪು ದೀಪ ಮಿಣುಕಿಸಿಕೊಂಡು ಬೊಬ್ಬೆ ಹೊಡೆದರೂ ಟ್ರಾಫಿಕ್ ಕೃಪೆದೋರಲಿಲ್ಲ. ಆಸ್ಪತ್ರೆ ತಲುಪುವ ಮೊದಲೇ ಪ್ರಾಣಪಕ್ಷಿ ಹಾರಿಹೋಗಿತ್ತು !! ಸಭೆಯಲ್ಲಿ ಅಷ್ಟು ಜನ ಡಾಕ್ಟರುಗಳು ಇದ್ದೂ ಏನೂ ಮಾಡಲಾಗಲಿಲ್ಲವೇ ಎಂದಿರಾ? ಅವರುಗಳು, ತಮ್ಮ ವೈಯುಕ್ತಿಕ ಸಾಧನೆ ಅಥವಾ ರಾಜಕೀಯ ವಶೀಲಿಯಿಂದ ಆದ ’ಡಾಕ್ಟರೇಟ್’ ಡಾಕ್ಟರುಗಳು ಅಷ್ಟೇ ಹೊರತು ಜೀವ ಉಳಿಸುವ ಧನ್ವಂತರಿಗಳಲ್ಲ !!!

ಸ್ಮರಣೆ:

ಸಾಯುವ ಕಾಲದಲ್ಲಿ ಭಗವನ್ನಾಮ ಸ್ಮರಣೆ ಮಾಡಿದರೆ ಮೋಕ್ಷ ಪ್ರಾಪ್ತಿ ಎಂದು ಕೇಳಿದ್ದೇವೆ. ಸತ್ತವರನ್ನು ಕೇಳೋಣವೆಂದರೆ ಅವರು ಕೈಗೆ ಸಿಕ್ಕೋಲ್ಲ. ಅಕಸ್ಮಾತ್ ಸಿಕ್ಕು ನಮಗೆ ಹೇಳಿದರೆ ಎದೆ ನಿಂತು ನಾವೇ ಢಾಮಾರ್ ಎಂದಿರುತ್ತೇವೆ !! ಹೋಗ್ಲಿ ಬಿಡಿ, ಮೋಕ್ಷ ಸಿಗಲೆಂದು, ಹಿಂದಿನ ಕಾಲದವರು ಮಕ್ಕಳಿಗೆ ದೇವರ ಹೆಸರನ್ನಿಡುತ್ತಿದ್ದರು ಎಂದು ಹಲವರ ಅಂಬೋಣ. ಅದೇ ಹಿರಿಯರು, ಈಗಿನ ಕಾಲದವರು ಇಡುವ ಹೆಸರಿನ ಬಗ್ಗೆ ಕುಹಕವಾಡುತ್ತಾರೆ. "ಏನು ಹೆಸರು ಇಡ್ತಾರೋ ನಾಲಿಗೇನೇ ತಿರುಗೋಲ್ಲ. ಹೋಗೋ ಕಾಲಕ್ಕೆ ಆ ಹೆಸರು ಹೇಳಲು ಹೊರಟರೆ ನಾಲಿಗೆ ಸಿಕ್ಕಿಹಾಕಿಕೊಂಡು ನಾಳೆ ಹೋಗೋ ಜೀವ ಇಂದೇ ಹೋಗುತ್ತದೆ" ಅಂತ. ಈ ಮಾತನ್ನು ಇಂದಿನವರು ಏನೆಂದು ಸಮರ್ಥಿಸಿಕೊಳ್ಳುತ್ತಾರೆ ಗೊತ್ತೇ? "ದಿನಕ್ಕೊಂದು ರೀತಿ ಖಾಯಿಲೆ ಹುಟ್ಟಿಕೊಳ್ಳುವ ಈಚಿಗಿನ ದಿನಗಳಲ್ಲಿ ಆರೋಗ್ಯವಂತರಾಗಿ ಪ್ರಾಣ ಕಳೆದುಕೊಳ್ಳುವವರು ಅಪರೂಪ. ವಯಸ್ಸಾಗುತ್ತಿದ್ದಂತೆಯೇ ರೋಗರುಜಿನಗಳು ಕ್ಯೂ ನಿಂತು ಅಪ್ಪಿಕೊಳ್ಳುತ್ತೆ. ಆ ಸ್ಥಿತಿಯಲ್ಲಿ ಮಾತಾಡೋ ಶಕ್ತಿ ಇರೋಲ್ಲ. ಆ ಸ್ಥಿತಿಯಲ್ಲಿ ಮಕ್ಕಳು ನಮ್ಮನ್ನು ನೋಡಿಕೊಳ್ಳುತ್ತಾರೆ ಎಂಬೋ ಅದೃಷ್ಟವೂ ಇರುತ್ತೋ ಇಲ್ಲವೋ ಗೊತ್ತಿಲ್ಲ. ಇನ್ನು ಅವರ ಹೆಸರು ಹಿಡಿದು ಕೂಗೋದು ಎಲ್ಲಿಂದ ಬಂತು? ಇದೆಲ್ಲಕ್ಕೂ ಪರಿಹಾರವೆಂದರೆ ಮಾತ್ರೆ, ಔಷದಿಗಳಿಗೆ ದೇವರ ಹೆಸರು ಇಡುವುದು" .... ಏನಂತೀರಾ?

ಸಮರ್ಥನೆ:

ಗಂಡ-ಹೆಂಡತಿ ಇಬ್ಬರೂ ಟೆಕ್ಕಿಗಳು. ಇಬ್ಬರಿಗೂ ಒಳ್ಳೆಯ ಕಂಪನಿಗಳಲ್ಲಿ ಕೆಲಸ. ಕೈತುಂಬಾ ಸಂಬಳ, ಮೈತುಂಬಾ ಸಾಲ. ಹೊಸದಾಗಿ ಒಂದು ಅಪಾರ್ಟ್ಮೆಂಟ್ ಖರೀದಿ ಮಾಡಿದರು. ತಮ್ಮ ಅಪ್ಪ-ಅಮ್ಮಂದಿರ ಗಲಾಟೆಗೆ ಗೃಹಪ್ರವೇಶ ಮಾಡಿಸಿದರು. ಭಟ್ಟರಿಗೆ "ನೀವೇನು ಮಾಡುತ್ತೀರೋ ಮಾಡಿಕೊಳ್ಳಿ, ನಮ್ಮಿಂದ ಪೂಜೆ ಮಾಡಿಸಬೇಕು ಹಂಗೆ ಹಿಂಗೆ ಅಂತ ಕರೀಬೇಡಿ. ಆ ದಿನ ನಮ್ಮ ಮನೆಗೆ ದೊಡ್ಡ ಮನುಷ್ಯರೆಲ್ಲ ಬರ್ತಾರೆ..." ಇತ್ಯಾದಿ ಇತ್ಯಾದಿ ಕಂಡೀಷನ್’ಗಳನ್ನು ಹಾಕಿದರು. ಎರಡೂ ಕಡೆ ಹಿರಿಯರು ಏನೂ ಮಾತನಾಡಲಾಗದೆ ಸುಮ್ಮನಿದ್ದರು. ಎಲ್ಲ ಕೆಲಸ ಮುಗಿದು ಭಟ್ಟರು ಹೊರಟರು. ಟೆಕ್ಕಿ ಗಂಡ ಕೇಳಿದ "ಒಂದು ಪೂಜೆ ಮಾಡೋದು ಬಿಟ್ಟು ಅದೇನು ವಿದ್ಯೆಗೊಂದು, ಶಕ್ತಿಗೊಂದು, ಶಾಂತಿಗೊಂದು ಅಂತೆಲ್ಲ ನೂರಾರು ದೇವರುಗಳಿಗೆ ಪೂಜೆ ಮಾಡ್ತೀರಾ. ಸುಮ್ಮನೆ ನಮ್ಮಂತಹವರಿಂದ ದುಡ್ಡು ಕಿತ್ತುಕೊಳ್ಳಲು ಅಲ್ಲವೇ?" ಅಂತ. ಟೆಕ್ಕಿ ಹೆಂಡತಿ ಕಿಸಕ್ಕೆಂದು ನಕ್ಕಳು. ಭಟ್ಟರು ಖಾರವಾಗೇ ನುಡಿದರು "ನೀವುಗಳು, ಕಂಪ್ಯೂಟರ್’ನಲ್ಲಿ ಮಾಡೋ ಒಂದು ಕೆಲಸಕ್ಕೆ ನೂರಾರು ಸಾಫ್ಟ್-ವೇರ್ ಬಳಸುತ್ತೀರಲ್ಲ ಹಾಗೇ ಇದೂ ಕೂಡ" ಅಂತ ನುಡಿದು ತಮ್ಮ ಕಾರಿನಲ್ಲಿ ಕುಳಿತು ಹೊರಟರು.

ಸಮರ್ಪಣೆ:

ಒಂದಾನೊಂದು ನಗರದಲ್ಲಿ ಅತ್ಯಂತ ದೊಡ್ಡದಾದ ದೇವಾಲಯ ಒಂದಿತ್ತು. ಅದ್ಬುತವಾದ ವಿನ್ಯಾಸದಿಂದ ಕೂಡಿದ ಆ ದೇವಾಲಯವನ್ನು ನೋಡುವುದೇ ಒಂದು ಹಬ್ಬ ಎನ್ನಬಹುದಾದ ಸೊಬಗು. ಒಂದು ಕರಾಳ ದಿನದಂದು ಇದ್ದಕ್ಕಿದ್ದಂತೆ ದೇವಾಲಯವು ನಿಧಾನವಾಗಿ ಭೂಮಿಯ ಒಳಗೆ ಇಳಿಯುತ್ತ ಮುಳುಗೇ ಹೋಯಿತು. ಭೂಮಿಯ ಒಳಗೆ ಸರಿಯುತ್ತಿರುವುದನ್ನು ಕಂಡು ಜನತೆಗೆ ಎನೂ ಮಾಡಲು ತೋಚಲಿಲ್ಲ. ಕಡೀ ಘಳಿಗೆಯಲ್ಲಿ ಅಶರೀರವಾಣಿಯೊಂದು ಮೂಡಿತು. "ರಾಜಕೀಯ ವಲಯದಲ್ಲಿ ಅನ್ಯಾಯ, ಅಕ್ರಮಗಳು ಹೆಚ್ಚಿವೆ. ಇದರ ಪರಿಣಾಮವಾಗಿ ದೇವಾಲಯ ಮುಳುಗಿದೆ. ರಾಜಕೀಯ ಹಿರಿಯರು ತಮ್ಮ ತಮ್ಮ ದುಷ್ಕಾರ್ಯಗಳನ್ನು ಜನತೆಯ ಮುಂದೆ ಒಪ್ಪಿಕೊಂಡಲ್ಲಿ, ದೇವಾಲಯ ಮೇಲೆದ್ದು ಬರುತ್ತದೆ" ಎಂದು. ಜನರ ಒತ್ತಾಯಕ್ಕೆ ಮಣಿದು, ಉನ್ನತ ಮಟ್ಟದ ಅಧಿಕಾರಿಗಳಿಂದ ಹಿಡಿದು ಕಾರಕೂನನವರೆಗೂ ದೇವನ ಕೆಲಸ ಮಾಡುವ ಪ್ರತಿ ಒಬ್ಬರೂ ನುಡಿಯುತ್ತಾ ಹೋದರು. ದೇವಾಲಯವು ಸಂಪೂರ್ಣ ಮೇಲೆದ್ದು ನಿಂತು. ಎಲ್ಲರೂ ಹರ್ಷೋದ್ಗಾರದಿಂದ ತಮ್ಮ ನಾಯಕರಿಗೆ ಜೈಕಾರ ಹಾಕುತ್ತ ಮುಖ್ಯದ್ವಾರವನ್ನು ತೆರೆದು ಒಳಗೆ ಹೋದರು. ದೇವಾಲಯ ಮೇಲೆದ್ದಿತ್ತು, ಆದರೆ ದೇವನು ಮಾತ್ರ ಒಳಗೆ ಇರಲಿಲ್ಲ. ದೇವನಿಲ್ಲದ ಆ ಗುಡಿಯಲ್ಲಿ ಇಂದಿಗೂ ದಾನವರು ವಾಸಿಸುತ್ತಿದ್ದಾರೆ. ಆ ದೇವಾಲಯಕ್ಕೆ ’ವಿಧಾನ ಸೌಧ’ ಎಂದೂ ಹೆಸರಿದೆ !!!


No comments:

Post a Comment