Sunday, March 27, 2011

ಹಿರಿಯನಾಗಿ ನಾ ಗಳಿಸಿದ್ದೇನು?

ಅಲಾರಂ ಗಡಿಯಾರ ಹೊಡ್ಕೊಂಡಾಗ

ಅಮ್ಮ ಎಬ್ಬಿಸಲಿ ಎಂದು ಮಲಗಿರಲಾರೆ


ಸೋಂಬೇರಿತನದಿ ಸಿಂಕ್ ಬಳಿ ನಿಂತು

ಅಪ್ಪ ಹಲ್ಲುಜ್ಜಲಿ ಎಂದು ಕಾಯಲಾರೆ


ಲೇಟಾಗಿದ್ದರೂ ಮೈ-ಕೈಗೆ ನೀರು

ಸೋಕಿಸದೆ ಹೊರಗೆದ್ದು ಹೋಗಲಾರೆ


ಹೊಟ್ಟೇ ಚುರುಗುಟ್ಟಿ ಕೈಕಾಲು ಸೋಲುತ್ತಿದ್ದರೂ

ಮಕ್ಕಳು ತಿನ್ನುವವರೆಗೂ ತಿನ್ನಲಾರೆ


ಲೋಟದಲ್ಲಿನ ಕಾಫಿಯನ್ನು ಸೊರ ಸೊರ

ಶಬ್ದ ಮಾಡಿಕೊಂಡು ಹೀರಲಾರೆ


ಮನದಲ್ಲಿ ಹುಡುಗನಾಗಿದ್ದರೂ

ಹೊರಗೆ ಚಿನ್ನಿ-ದಾಂಡು ಆಡಲಾರೆ


ಕಳ್ಳ-ಪೋಲೀಸ್ ಆಟವಾಡುತ್ತ

ತೊಟ್ಟಿಯೊಳಗೆ ಅವಿತು ಕೂರಲಾರೆ


ನಾಳೆ ಹೇಗೋ ಎಂದು ಅಳುಕೋದ್ರಿಂದ

ಇಂದಿನ ಸೊಗಸನು ಸವಿಯಲಾರೆ


ಏನೆಲ್ಲಾ ಕೊಂಡು ತಿನ್ನಲು ಹಣವಿದ್ದರೂ

ಎಲ್ಲವನ್ನೂ ತಿಂದು ಅರಗಿಸಿಕೊಳ್ಳಲಾರೆ


ಮನದಾಳದ ನೋವುಗಳನ್ನು ಬದಿಗೊತ್ತಿ

ನಿರ್ಮಲವಾದ ಹೂನಗೆಯೊಂದ ಬೀರಲಾರೆ


ಮೆತ್ತನೆಯಾ ಹೂ ಹಾಸಿಗೆ ಇದ್ದೂ

ಕಣ್ ತುಂಬಾ ನಿದ್ದೆಯ ಮಾಡಲಾರೆ


ಬಸ್ಸಲ್ಲಿ ಕೂತು ಕಿಟಕೀ ಕಡೆ ಸೀಟಿಗಾಗಿ

ಯಾರೊಂದಿಗೂ ನಾ ಕಿತ್ತಾಡಲಾರೆ


ವಯಸ್ಸಿನಲ್ಲಿ ಹಿರಿಯನಾಗಿ ನಾ ಗಳಿಸಿದ್ದೇನು?

ಕಿರಿಯನಾಗೇ ಇದ್ದಲ್ಲಿ ಕಳೆದುಕೊಳ್ಳುತ್ತಿದ್ದುದೇನು?


No comments:

Post a Comment