Sunday, March 27, 2011

ಸಿಹಿಯ ಕಹಿ ಜೀವನ !

ಅಂದು ಶುಕ್ರವಾರ ... ಭೀಮನ ಅಮಾವಾಸ್ಯೆ. ಬೆಳಿಗ್ಗೆಯೇ ಎದ್ದು ಎಣ್ಣೆ ಸ್ನಾನ ಮಾಡಿ ಪೂಜಾದಿ ಕರ್ಮಗಳನ್ನು ಮುಗಿಸಿ ಕಮಲಮ್ಮನವರು, ಸದಾಶಿವರಾಯರನ್ನು ಎಬ್ಬಿಸಿದರು. ಕಣ್ಣು ಬಿಟ್ಟು ಮಡದಿಯ ಮುಖ ನೋಡಿ, ’ಕರಾಗ್ರೇ ವಸತೇ ಲಕ್ಷ್ಮಿ ...’ ಹೇಳಿಕೊಂಡು, ನಿತ್ಯಕರ್ಮಗಳತ್ತ ನೆಡೆದರು. ಬಹಳ ವರ್ಷಗಳಿಂದ ನೆಡೆಸಿಕೊಂಡು ಬಂದಿದ್ದ ಶಿಸ್ತಿನ ಜೀವನದ ಒಂದು ಭಾಗವದು.

ಹೆಸರಾಂತ ವೈದ್ಯರಾದ ಡಾ|ಸದಾಶಿವರಾವ್, ಡಯಾಬಿಟೀಶಿಯನ್. ಪ್ರತಿ ರೋಗಿಯನ್ನು ಕೂಲಂಕುಷವಾಗಿ ಪರೀಕ್ಷಿಸಿ, ಅವರ ಆಹಾರ ಪದ್ದತಿಗಳನ್ನು ಅರಿತು, ಅವರಲ್ಲಿ ಸಕ್ಕರೆ ಖಾಯಿಲೆಯ ಬಗ್ಗೆ ಅರಿವು ಮೂಡಿಸಿ, ವ್ಯಾಯಾಮ ಮತ್ತು ಆಹಾರದ ಮಹತ್ವ ತಿಳಿಸಿ, ದೈನಂದಿನ ಜೀವನ ಶೈಲಿಯಲ್ಲಿ ಬದಲಾವಣೆ ತರಿಸಿ, ರೋಗಿಗಳಿಗೆ ನವ ಚೈತನ್ಯ ತುಂಬುತ್ತಿದ್ದರು.

ರೋಗಿಗಳಲ್ಲಿ ಅರಿವು ಮೂಡಿಸುವ ಕೆಲವು ವಿಷಯವೆಂದರೆ, ಒಂದೇ ಬಾರಿ ರಾಶಿ ಊಟ ಮಾಡುವ ಬದಲು ಆ ಊಟವನ್ನೇ ಕಡಿಮೆ ಪ್ರಮಾಣದಲ್ಲಿ ಹಲವು ಬಾರಿ ತೆಗೆದುಕೊಳ್ಳುವುದು, ನಿತ್ಯ ಜೀವನದಲ್ಲಿ ವ್ಯಾಯಾಮವು ಅವಿಭಾಜ್ಯ ಅಂಗವಾಗಬೇಕು, ಏನಿಲ್ಲದಿದ್ದರೂ ಅತಿ ಕಡಿಮೆ ಶ್ರಮದ ಮತ್ತು ಬಹಳ ಉಪಯುಕ್ತವಾದ ’ನಡಿಗೆ’ಯನ್ನು ಖಂಡಿತ ದಿನವೂ ಅರ್ಧ ಘಂಟೆಯಾದರೂ ಮಾಡುವುದು, ಮೂರು ತಿಂಗಳಿಗೊಮ್ಮೆ ರಕ್ತ ಪರೀಕ್ಷೆ ಮಾಡಿಸಿ A1C ತಿಳಿದುಕೊಳ್ಳುವುದು, ಕಂಗಳು ಮತ್ತು ಪಾದಗಳ ಪರೀಕ್ಷೆ ಇತ್ಯಾದಿ. ಅನ್ನ ತಿನ್ನುವುದು ಕಡಿಮೆ ಮಾಡಿ, ತರಕಾರಿ, ಪ್ರೋಟೀನ್ ಮತ್ತು ಫೈಬರ್’ಯುಕ್ತ ಆಹಾರ ಹೆಚ್ಚು ಸೇವಿಸಿ ಎಂದು ಭೋದನೆ ಮಾಡುತ್ತಿದ್ದರು.

ಮೂವತ್ತು ವರ್ಷದ ತಮ್ಮ ವೈದ್ಯಕೀಯ ವೃತ್ತಿಯಲ್ಲಿ ಬಹಳಷ್ಟು ರೋಗಿಗಳನ್ನು ಕಂಡಿದ್ದರು. ಹಲವು ರೋಗಿಗಳು ಇವರು ಹಾಕಿ ಕೊಟ್ಟ ಕ್ರಮವನ್ನು ಚಾಚೂ ತಪ್ಪದೆ ಪಾಲಿಸಿ, ಆರೋಗ್ಯ ಕಾಪಾಡಿಕೊಂಡು ಉತ್ತಮ ಜೀವನ ನೆಡೆಸುತ್ತಿದ್ದರೆ, ಮತ್ತೆ ಕೆಲವರು ಇಂದಲ್ಲ ನಾಳೆ ಹೋಗೋ ಜೀವಕ್ಕೆ ಇಷ್ಟೆಲ್ಲ ನಿಯಮಗಳನ್ನು ಹೇರಬೇಕೇ ಎಂದು ಲಘುವಾಗಿ ಪರಿಗಣಿಸಿದವರೂ ಇದ್ದಾರೆ.

ಆರೋಗ್ಯವನ್ನು ಲಘುವಾಗಿ ಕಂಡವರಿಗೆ ರಾಯರು ಮನಸ್ಸಿನಲ್ಲೇ "ದೇವಾ, ಇವರೆಲ್ಲ ಅರಿತೂ ತಪ್ಪು ಮಾಡುತ್ತಿದ್ದಾರೆ. ಇವರನ್ನು ಕ್ಷಮಿಸು" ಎಂದುಕೊಳ್ಳುತ್ತಿದ್ದರು.

ಕಮಲಮ್ಮನವರ ಸೋದರ ರಂಗನಾಥ. ಇವರ ಮನೆಯ ಸಮೀಪದಲ್ಲೇ ವಾಸವಾಗಿದ್ದರು. ಮಕ್ಕಳು ಮದುವೆಯಾದ ಮೇಲೆ ಬೇರೆಡೆ ಹೋದ ಮೇಲೆ ದೊಡ್ಡ ಮನೆಯಲ್ಲಿ ಅವರೂ ಮತ್ತವರ ಮಡದಿ ಸಾವಿತ್ರಿ ಇಬ್ಬರೇ ಇದ್ದರು. ಹಬ್ಬಗಳನ್ನು ಎರಡೂ ಮನೆಯವರು ಒಟಾಗಿ ಆಚರಿಸಿ ರೂಢಿ. ಇಂದು ರಾಯರ ಮನೆಯಲ್ಲಿ ಊಟ.

ವಂಶಸ್ತರಿಂದ ಏನು ಆಸ್ತಿ ಬಂತೋ ಅಥವಾ ಬರಲಿಲ್ಲವೋ ಗೊತ್ತಿಲ್ಲ, ಆದರೆ ಸಕ್ಕರೆ ಖಾಯಿಲೆಯಂತೂ ಕೇಳದೆಯೇ ಬಳುವಳಿಯಾಗಿ ಬಂದಿತ್ತು. ಸದಾಶಿವರಾಯರಲ್ಲಿ ಆರೋಗ್ಯದ ಸಲಹೆ ಪಡೆದು ಅವರು ಹೇಳಿದಂತೆ ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದ ಶಿಸ್ತಿನ ರೋಗಿ.

ದಿನವೂ ಬೆಳಿಗ್ಗೆ, ಕಡಿಮೆ ತೂಕದ ಡಂಬಲ್ಸ್ ಹಿಡಿದು ಅರ್ಧ ಘಂಟೆ ನಡಿಗೆ. ನಂತರ ಕಾಫಿ-ತಿಂಡಿ. ಮನೆಯ ತೋಟದ ಕೆಲಸ, ಮಧ್ಯಾನ್ನ ಹನ್ನೆರಡಕ್ಕೆ ಊಟ. ಪತ್ರಿಕೆ, ಪುಸ್ತಕಗಳನ್ನು ಓದುವುದು ಅಥವಾ ಟಿ.ವಿ ನೋಡುವುದು. ಸಂಜೆಗೆ ಕಾಫಿ ಮತ್ತು ಲಘು ಉಪಹಾರ ಮತ್ತು ಆರಾಮವಾಗಿ ಕೈ ಬೀಸುತ್ತ ಮಡದಿಯೊಂದಿಗೆ ನಡಿಗೆ. ಪಾರ್ಕಿನ ಕಡೆ ಹೋಗಿ, ತಮ್ಮ ವಯೋಮಾನದವರೊಂದಿಗೆ ಹರಟೆ. ತಿರುಗಿ ಬಂದು ಸ್ವಲ್ಪ ಹೊತ್ತು ಧ್ಯಾನ ನಂತರ ರಾತ್ರಿ ಏಳೂವರೆಗೆ ಊಟ. ಮಲಗುವ ಮುನ್ನ ಒಂದು ಲೋಟ ಹಾಲು ಕುಡಿದು, ಒಂಬತ್ತೂವರೆಗೆ ನಿದ್ದೆ. ಗುರುವಾರ ಮಾತ್ರ ರಾತ್ರಿ ವೇಳೆ ಊಟ ಮಾಡುತ್ತಿರಲಿಲ್ಲ.

ಅಂದು, ತಮ್ಮ ಆಸ್ಪತ್ರೆಗೆ ತೆರಳುವ ಮುನ್ನ ಸದಾಶಿವರಾಯರು, ಬ್ಯಾಂಕಿನ ಕಡೆ ಹೋಗುವುದಿತ್ತು. ರಂಗನಾಥರೊಂದಿಗೆ ಏನೋ ಕೆಲಸವಿದ್ದುದರಿಂದ, ಅವರೂ ಅದೇ ಹೊತ್ತಿಗೆ ಅಲ್ಲಿಗೆ ಬರುವುದಾಗಿ ಹೇಳಿದ್ದರು. ರಾಯರು ಒಂಬತ್ತಕ್ಕೆ ಸಿದ್ದರಾಗಿ, ಮಡದಿಗೆ ’ಹೋಗಿ ಬರುತ್ತೇನೆ’ ಎಂದು ತಿಳಿಸಿ ಆಕೆ ಬಾಗಿಲು ಹಾಕಿಕೊಂಡ ಮೇಲೆ, ಭದ್ರವಾಗಿದೆಯೇ ಎಂದು ಖಚಿತಪಡಿಸಿಕೊಂಡು, ತಮ್ಮ ಕಾರನ್ನೇರಿ ಬ್ಯಾಂಕಿನತ್ತ ಹೊರಟರು.

ಆಗಲೇ ಬಂದು ಕಾದಿದ್ದ ರಂಗನಾಥರೊಡನೆ, ಬ್ಯಾಂಕಿನೊಳಗೆ ಅಡಿ ಇಡುತ್ತಿದ್ದಂತೆಯೇ ನಾಲ್ಕಾರು ಪರಿಚಿತ ಮುಖಗಳು ಇವರತ್ತ ನಸು ನಗೆ ಬೀರಿ ಕುಶಲ ವಿಚಾರಿಸಿದರು. ಇವರಿಗೆ ಮೇನೇಜರ್ ಬಳಿ ಕೆಲಸವಿದ್ದುದರಿಂದ ಅವರಿಗಾಗಿ ಕಾಯುತ್ತ ಕುಳಿತಿದ್ದರು.

ಅರ್ಧ ಘಂಟೆ ಕಳೆಯಿತು. ಅಂದೇಕೋ ಮೇನೇಜರ್ ತಡವಾಗಿ ಬಂದರು. ಅಲ್ಲಿಯವರೆಗೂ ಇಬ್ಬರೂ ಅಲ್ಲೇ ಇದ್ದ ಪುಸ್ತಕಗಳನ್ನು ಓದುತ್ತಿದ್ದರು. ಶಿಸ್ತಿಗೆ ಹೆಸರಾದ ವೈದ್ಯರಿಗೆ ಮೇನೇಜರ್ ಕೆಲಸಕ್ಕೆ ತಡವಾಗಿ ಬರುವುದೇ ಅಲ್ಲದೇ ತಾವು ರೋಗಿಗಳನ್ನು ನೋಡುವುದು ತಡವಾಗುತ್ತಿರುವುದು ಹಿಂಸೆಯಾಗುತ್ತಿತ್ತು. ಆದರೂ ಸಂಯಮ ಕಳೆದುಕೊಳ್ಳಲಿಲ್ಲ. ಎಷ್ಟೇ ಆಗಲಿ ವೈದ್ಯರಲ್ಲವೇ?

ಮತ್ತೈದು ನಿಮಿಷಕ್ಕೆ ಮೇನೇಜರ್ ಬಂದು, ಕೆಲವು ಮುಖ್ಯ ಕಾಗದ ಪತ್ರಗಳನ್ನು ನೋಡಿದ ಮೇಲೆ, ಮೊದಲು ಇವರಿಬ್ಬರನ್ನು ಒಳಗೆ ಕರೆಸಿದರು. ಹೆಡ್ ಆಫೀಸಿನಲ್ಲಿ ತುರ್ತು ಮೀಟಿಂಗ್ ಕರೆದಿದ್ದರಿಂದ ಬೆಳಿಗ್ಗೆ ಮೊದಲು ಅಲ್ಲಿಗೆ ಹೋಗಿ ನಂತರ ಇಲ್ಲಿಗೆ ಬಂದಿದ್ದರಿಂದ ತಡವಾಯಿತು ಎಂದು ಕ್ಷಮೆ ಕೋರಿದರು. ಹೆಸರಾಂತ ಡಾಕ್ಟರ್ ತಮ್ಮ ಬ್ಯಾಂಕಿನ ಗ್ರಾಹಕ ಎಂಬುದು ಅವರಿಗೂ ಒಂದು ಹೆಮ್ಮೆ. ಸದ್ಯಕ್ಕೆ ಮೇನೇಜರ್ ರೂಮಿನಲ್ಲಿ ಈ ಮೂವರು.

ಆದರೆ ಹೊರಗೆ ?

ನಗರದ ಹೊರವಲಯದಲ್ಲಿನ ಪ್ರತಿಷ್ಟಿತ ಕಾಲೋನಿಯೊಂದರಲ್ಲಿ ರಾಯರ ಮನೆ. ಅಲ್ಲಿಂದ ಕೆಲವೇ ಕಿಲೋಮೀಟರ್ ದೂರದಲ್ಲಿ ಇದ್ದುದು ಈ ಬ್ಯಾಂಕ್. ಮನೆಯಿಂದ ತಮ್ಮ ಆಸ್ಪತ್ರೆಗೆ ತೆರಳುವ ಹಾದಿಯಲ್ಲೇ ಇದ್ದ ಆ ಬ್ಯಾಂಕಿಗೆ ಅಂದೇಕೋ ಗ್ರಹಚಾರ ಸರಿಯಾಗಿರಲಿಲ್ಲ !!

ಹತ್ತು ಘಂಟೆಗೆ ಸರಿಯಾಗಿ ಒಂದು ಕಪ್ಪು ಬಣ್ಣದ ವ್ಯಾನ್ ಬ್ಯಾಂಕಿನ ಮುಂಭಾಗದಲ್ಲಿ ನಿಂತಿತು. ವ್ಯಾನಿನಿಂದ ಇಳಿದವರ ಮೊದಲ ಬಲಿ ಗೇಟಿನ ಬಳಿ ಇದ್ದ ಗಾರ್ಡ್. ಒಬ್ಬ ಅವನ ಕೈಯಲ್ಲಿನ ಗನ್ ಕಿತ್ತುಕೊಂಡಿದ್ದರೆ ಮತ್ತೊಬ್ಬ ಅವನ ತಲೆಗೆ ಬಲವಾಗಿ ಪೆಟ್ಟುಕೊಟ್ಟು ಅವನನ್ನು ದರ ದರ ಎಳೆದುಕೊಂಡು, ಒಳಗಿ ನೂಕಿ, ಮುಂಬಾಗಿಲು ಜಡಿದ !!!

ಒಳಗೆ ನುಗ್ಗಿದ ಮುಸುಕುಧಾರಿ ಜನ ಎಲ್ಲೆಡೆ ಹಂಚಿ ಹೋಗಿ ’ಯಾರೂ ಅಲುಗಾಡ ಕೂಡದು’ ಎಂದು ತಾಕೀತು ಮಾಡಿದರು. ಅಷ್ಟರಲ್ಲೇ ತನ್ನ ಮೊಬೈಲಿಗೆ ಕೈ ಹಾಕಿದ ಒಬ್ಬನ ತಲೆಗೆ ಬಿರುಸಾಗಿ ಹೊಡೆದು, ಮೊಬೈಲಿಗೆ ಕೈ ಹಾಕಿದರೆ ಪ್ರಾಣ ಹೋಗುತ್ತದೆ ಎಂದು ಬೆದರಿಸಿದರು. ನಿಂತವರನ್ನು, ತಮ್ಮ ಕೈಗಳನ್ನು ಹಿಂದುಗಡೆ ಕಟ್ಟಿಕೊಂಡು ಕೂಡುವಂತೆ ಆದೇಶಿಸಿದರು. ಒಬ್ಬಾತ ಗನ್ ಹಿಡಿದು ಕ್ಯಾಶಿಯರ್ ಬಳಿ ನಿಂತಿದ್ದರೆ ಮತ್ತೊಬ್ಬ ಮೇನೇಜರ್ ರೂಮಿನ ಬಳಿ ಅಡಿ ಇರಿಸಿದ್ದ.

ಹೊರಗೇನೋ ನೆಡೆಯುತ್ತಿದೆ ಎಂದರಿವಾಗಿ ಮೇನೇಜರ್ ಇಂಟರ್ ಕಾಮ್ ಮಾಡಿ ವಿಷಯ ತಿಳಿದುಕೊಳ್ಳಲು ಫೋನ್ ಎತ್ತಿದರೆ, ಬಿಜಿ ಸಿಗ್ನಲ್ ಬಂತು.

ಅದೇ ಹೊತ್ತಿಗೆ ಬಾಗಿಲು ತೆರೆದುಕೊಂಡಿತು. ಇವರ ಹಣೆಗೆ ನೇರವಾಗಿ ಪಿಸ್ತೂಲ್ ಹಿಡಿದು ನಿಂತಿದ್ದ ಯಮ ಕಿಂಕರ ಸ್ವರೂಪಿ ಮುಸುಕುಧಾರಿ !!

ಬಂದವ ರಂಗನಾಥರನ್ನು ಮತ್ತು ರಾಯರನ್ನು ಗದರಿ, ಒಂದೊಂದು ಮೂಲೆಗೆ ಹೋಗಿ ಕೈಗಳನ್ನು ಹಿಂದಕ್ಕೆ ಕಟ್ಟಿಕೊಂಡು ಕೂಡಿರೆಂದು ಆದೇಶಿಸಿದನು. ನಂತರ ಅವರಿಂದ ಮೊಬೈಲನ್ನು ಕಿತ್ತುಕೊಂಡು, ಮೇನೇಜರ್ ತಲೆಗೆ ಪಿಸ್ತೂಲು ಹಿಡಿದು ಹೊರಗೆ ಎಳೆದುಕೊಂಡು ಹೋದ. ರಾಯರಿಗೆ ಘಾಬರಿಯಾಗಿತ್ತು. ಮುಂದೇನು ಎಂದು?

ರಂಗನಾಥರಿಗೆ, ಆ ಟೆನ್ಷನ್’ಗೆ ತಲೆ ಧಿಮ್ ಎಂದಿತು. ಹಾಗೇ ಕಣ್ಣು ಮುಚ್ಚಿ ಕುಳಿತಿದ್ದರು.

ಹಿಂದಿನ ದಿನ ಗುರುವಾರ. ಒಪ್ಪತ್ತು ಊಟ. ಮಧ್ಯಾನ್ನದ ಹಬ್ಬದ ಊಟಕ್ಕೆ ರಾಯರ ಮನೆಗೆ ಹೋಗುವುದಿತ್ತು. ಹಾಗಾಗಿ ಲಘು ಉಪಹಾರ ಮಾತ್ರ ಸೇವಿಸಿದ್ದರು. ಇದ್ದಕ್ಕಿದ್ದಂತೆ ಬಂದೊದಗಿದ ಈ ಪರಿಸ್ಥಿತಿಗೆ ಟೆನ್ಷನ್ ಹೆಚ್ಚಾಗಿ, ಸಣ್ಣಗೆ ಹಸಿವೆಯೂ ಶುರುವಾಗಿತ್ತು.

ಹೊರಗೇನು ನೆಡೆಯುತ್ತಿದೆ ಎಂಬ ಅರಿವಿಲ್ಲ. ರಾಯರು ಮೆಲ್ಲಗೆ ತಲೆ ಎತ್ತಿ ಗಾಜಿನ ಮೂಲಕ ಹೊರಗೆ ನೋಡಿದರು. ಹೊರಗೆ ಗ್ರಾಹಕರು ನೆಲದ ಮೇಲೆ ಕೈಗಳನ್ನು ಹಿಂದಕ್ಕೆ ಕಟ್ಟಿಕೊಂಡು ಭೀತಿ ವದನರಾಗಿ ಕುಳಿತಿದ್ದರು. ಎಲ್ಲರಲ್ಲೂ ಆತಂಕ ಮನೆ ಮಾಡಿತ್ತು. ಯಾವ ಕ್ಷಣದಲ್ಲಿ ಏನಾಗುತ್ತೋ ಎಂಬ ಭಯ.

ರಾಯರು ಹಾಗೇ ನೋಡುತ್ತಿರಲು, ಇದ್ದಕ್ಕಿದ್ದಂತೆ ಒಬ್ಬ ಮುಸುಕುಧಾರಿ ಇವರತ್ತ ನೋಡಿ ಗನ್ ತೋರಿಸಿದ. ಇವರು ಹಾಗೇ ಕುಳಿತರು. ಅವನು ಹಾಗೇ ನೆಡೆದು ಬಂದು ಮೇನೇಜರ್ ರೂಮಿನ ಸುತ್ತಲಲ್ಲೇ ನಿಂತು ಇವರೀರ್ವರನ್ನು ಮತ್ತು ಇತರರನ್ನೂ, ಗಮನಿಸುತ್ತಾ ನಿಂತ.

ರಾಯರು ಏನೂ ಮಾಡಲು ತೋಚದೆ ಹಾಗೇ ತಮ್ಮ ದೃಷ್ಟಿಯನ್ನು ರಂಗನಾಥರತ್ತ ಹರಿಸಿದರು. ಒಂದು ಕ್ಷಣ ಆತಂಕವಾಯಿತು ಅವರಿಗೆ. ರಂಗನಾಥರ ಹಣೆಯ ಮೇಲೆ ಬೆವರ ಹನಿಗಳು. ಮುಖದಲ್ಲಿ ಸುಸ್ತು. ಸೂಕ್ಷ್ಮವಾಗಿ ಕೈ ನಡುಕ. ರಂಗನಾಥಾರಿಗೆ sugar level ಕಡಿಮೆಯಾಗುತ್ತಿದೆ ಎಂದು ರಾಯರಿಗೆ ಅರಿವಾಯಿತು !!

ಏನಾದರೂ ಮಾಡಬೇಕು. ಮೆಲ್ಲಗೆ ಕರೆದರು "ರಂಗ, ಏನಾಗ್ತಿದೆ?" ... ರಂಗನಾಥ "ಸುಸ್ತಾಗ್ತಿದೆ" .. "ಬೆಳಿಗ್ಗೆ ಏನೂ ತಿನ್ನಲಿಲ್ವಾ?" ... "ನೆನ್ನೆ ರಾತ್ರಿ ಊಟ ಮಾಡಲಿಲ್ಲ. ಇವತ್ತು ಬೆಳಿಗೆ ಎರಡು ಸ್ಲೈಸ್ ಬ್ರೆಡ್ ಮತ್ತು ಹಾಲು ಅಷ್ಟೇ" ...

ರಾಯರಿಗೆ ಆ ಸಮಯದಲ್ಲಿ ಬೇಸರವಾಯ್ತು ಮತ್ತು ರೇಗಿತು "ಆರೋಗ್ಯ ಸರಿ ಇಲ್ಲ ಅಂದ ಮೇಲೆ ಅದೆಂಥಾದ್ದು ಉಪವಾಸ, ವ್ರತ ಎಲ್ಲ. ಮಾಡೋ ಕೆಲಸದಲ್ಲಿ ದೇವರನ್ನು ಕಾಣಬೇಕು. ದೀನ ದಲಿತರಲ್ಲಿ ದೇವರನ್ನು ಕಾಣಬೇಕು. ಹಿರಿಯರ ಸೇವೆಯಲ್ಲಿ ದೇವರನ್ನು ಕಾಣಬೇಕು. ಅದು ಬಿಟ್ಟು ಹೊಟ್ಟೆ ಸುಟ್ಟರೆ ಈಗ ಅನುಭವಿಸುತ್ತಿರುವವರು ಯಾರು?" ಅಂತ ಹೇಳಲು ಬಾಯಿ ತೆರೆದವರು ಸುಮ್ಮನಾದರು.

ತಮ್ಮ ಯೋಚನೆ ತಮಗೆ ಸರಿ ಇರಬಹುದು ಆದರೆ ಅದನ್ನು ಆಡಲು ಇದು ಸಂದರ್ಭವಲ್ಲ. ಈಗ ಏನು ಮಾಡಬೇಕು? ಏನೋ ಹೇಳಲು ಹೊರಟವರಿಗೆ ಹೊರಗೆ ನಿಂತಿದ್ದವನ ಗನ್ ಸುಮ್ಮನಾಗಿಸಿತು. ರಾಯರ ’ಕಿಟ್’ ಟೇಬಲ್ ಮೇಲಿತ್ತು. ಅದರಲ್ಲಿ sugar gel ಇತ್ತು. ಒಂದು ಹನಿ ಬಾಯಿಗೆ ಹಾಕಿಕೊಂಡಲ್ಲಿ ಥಟ್ಟನೆ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗಿ, ದೇಹ ಸುಸ್ಥಿತಿಗೆ ಬರುತ್ತದೆ.

ಆದರೆ ಬ್ಯಾಗನ್ನು ಟೇಬಲ್ ಮೇಲಿನಿಂದ ತೆಗೆದುಕೊಳ್ಳುವುದು ಹೇಗೆ? ತಾವು ರಂಗನ ಜೀವ ಉಳಿಸಲು ಟೇಬಲ್ ಬಳಿ ಹೋದರೆ ಆ ರಕ್ಕಸ ನನ್ನ ಜೀವ ತೆಗೆದಾನು. ತಮ್ಮ ಜೀವ ಹೋದರೂ ರಂಗನ ಜೀವವಂತೂ ಉಳಿಯೋಲ್ಲ. ಮಾಡುವ ಪ್ರಯತ್ನ ನಿರರ್ಥಕವಾಗುತ್ತದೆ. ಹಾಗಿದ್ರೆ ಏನು ಮಾಡಲಿ?

ಅಷ್ಟರಲ್ಲಿ, ಮತ್ತೊಬ್ಬ ದಾನವ ಮೇನೇಜರ್ ತಲೆಗೆ ಪಿಸ್ತೂಲ್ ಹಿಡಿದು ಒಳಗೆ ಬಂದ. ಏನು ವಾಗ್ವಾದ ನೆಡೆದಿತ್ತೋ ಏನೋ, ಮೇನೇಜರ್ ಅಲ್ಲಿ ಇಲ್ಲಿ ಏನೋ ಹುಡುಕುತ್ತಿದ್ದರು. ಸಿಗಲಿಲ್ಲವೋ ಅಥವಾ ಬೇಕೆಂದೇ ಸಿಗಲಿಲ್ಲ ಎಂದು ನಾಟಕವಾಡುತ್ತಿದ್ದರೋ ಗೊತ್ತಾಗಲಿಲ್ಲ. ಪಿಸ್ತೂಲುಧಾರಿ ಜೋರು ಜೋರಾಗಿ ಏನೇನೋ ಬೈದಾಡುತ್ತ, ಟೇಬಲ್ ಮೇಲಿನ ವಸ್ತುಗಳನ್ನು ಅತ್ತ ಇತ್ತ ಸರಿಸುತ್ತ ನಂತರ ಡ್ರಾಯರ್’ ನಲ್ಲೆಲ್ಲಾ ತಡಕಾಡಿ, ಕೊನೆಗೊಂದು ಬೀಗದ ಕೈ ತೆಗೆದುಕೊಂಡು, ದುರುಗುಟ್ಟಿ ನೋಡಿ, ಮೇನೇಜರ್’ನನ್ನು ಎಳೆದುಕೊಂಡು ಹೋದ.

ಹತ್ತು ನಿಮಿಷಗಳ ಈ ಗಲಭೆಯಲ್ಲಿ ತಲೆ ಎತ್ತಿ ನೋಡಲೂ ಭಯ. ಯಾರ ಸಿಟ್ಟು ಯಾರ ಮೇಲೆ ತಿರುಗುತ್ತೋ ಎಂದು. ಎಲ್ಲರೂ ಹೊರಗೆ ಹೋದ ಮೇಲೆ ರಂಗನಾಥರತ್ತ ನೋಡಿದರೆ, ಕೈಗಳನ್ನು ಹಿಂದಕ್ಕೆ ಕಟ್ಟಿಕೊಂಡೆ ನೆಲಕ್ಕೆ ಒರಗಿದ್ದಾರೆ. ರಾಯರಿಗೆ ಯೋಚನೆ ಆಯ್ತು.

ಮೆಲ್ಲಗೆ "ರಂಗಾ" ಎಂದರು. ಉತ್ತರವಿಲ್ಲ. "ರಂಗಾ, ಏನಾಗ್ತಿದೆ?" .... ರಂಗನಾಥ "ಯಾರೂ ಇಲ್ಲ, ಏನೋ, ಹೋಗ್ಲಿ" ಅಂದರು. ರಾಯರು ಇನ್ನೊಮ್ಮೆ ಕೇಳಿದರು "ರಂಗ, ಏನಾಗ್ತಿದೆ?" ... ರಂಗನಾಥ "ಏನಿಲ್ಲ ... ಚೆನ್ನಾಗಿದ್ದೀನಿ"

ರಾಯರಿಗೆ ಅರ್ಥವಾಗಿತ್ತು, ರಂಗನಾಥರಿಗೆ ಅರೆಬರೆ ಪ್ರಜ್ಞ್ನಾವಸ್ತೆ ಎಂದು. ಹೀಗೇ ಬಿಟ್ಟರೆ ಸ್ಟ್ರೋಕ್ ಆಗಬಹುದು ಎಂದೂ ಅವರಿಗೆ ಗೊತ್ತು. ಬೇಗ ಏನಾದರೂ ಮಾಡಬೇಕು.

"ವೈದ್ಯೋ ನಾರಾಯಣೋ ಹರಿ: " ಎನ್ನುತ್ತಾರೆ ನಿಜ. ವೈದ್ಯನು ನಾರಾಯಣ ಸ್ವರೂಪನೇ ಹೊರತು ನಾರಾಯಣನೇ ಅಲ್ಲ ! ಈ ಮಾತು ರಾಯರಿಗೂ ಒಪ್ಪುತ್ತೆ. ತಾವು ಕುಳಿತಲ್ಲಿಂದ ಅನತಿ ದೂರದಲ್ಲೇ ಇರುವ ಒಂದು ಬ್ಯಾಗ್ ತೆಗೆದುಕೊಳ್ಳಲಾಗಲಿಲ್ಲ .... ಜೀವನ್ಮರಣಗಳ ನಡುವೆ ಹೋರಾಡುತ್ತಿರುವ ಒಬ್ಬ ಮನುಷ್ಯನನ್ನು ಉಳಿಸಲಾಗುತ್ತಿಲ್ಲ ....

ಭಗವನ್ನಾಮ ಸ್ಮರಣೆ ಮಾಡಿ, ಆಗಿದ್ದಾಗಲಿ ಎಂದುಕೊಂಡು, ಕೈ ಜೋಡಿಸಿ ಒಮ್ಮೆ ಆ ಮುಸುಕುಧಾರಿಯತ್ತ ನೋಡಿದರು. ಅವನಿಗೆ ಒಮ್ಮೆಲೇ ಗಲಿಬಿಲಿ ಆಯಿತು. ತಕ್ಷಣವೇ ವೈದ್ಯರತ್ತ ಗುರಿ ಇಟ್ಟು, ಟ್ರಿಗರ್ ಒತ್ತಲು ಸಿದ್ದನಾದ. ದೈನ್ಯತೆ ಆ ವದನ, ಮುಗಿದ ಕೈಗಳು, ತನ್ನತ್ತ ನೋಡಿ ನಂತರ ಇನ್ನೊಬ್ಬಾತ ನೋಡಿದ ಆ ನೋಟ ಅವನನ್ನು ವಿಚಲಿತಗೊಳಿಸಿತು.

ಗನ್ ಕೆಳಗಿಳಿಸಿದ ... ರೂಮಿನೊಳಗೆ ಬಂದ ... ವೈದ್ಯರತ್ತ ಒಂದು ಕಣ್ಣಿಟ್ಟು, ಸೂಕ್ಷ್ಮವಾಗಿ ರಂಗನಾಥರತ್ತ ನೋಡಿದ. ವೈದ್ಯರತ್ತ ತಿರುಗಿ ನೋಡಿ "ಏನಾಯ್ತು" ಎಂದ. ರಾಯರು ಮೆಲ್ಲಗೆ ನುಡಿದರು "ಶುಗರ್ ಲೆವಲ್ ಕಡಿಮೆ ಆಗಿದೆ. ಪ್ರಜ್ಞ್ನೆ ತಪ್ಪುತ್ತಿದೆ. ನಾನು ಡಾಕ್ಟರ್. ಒಂದು ನಿಮಿಷ ಸಮಯ ಕೊಟ್ರೆ ಅವರನ್ನು ಬದುಕಿಸಬಹುದು" ಎಂದು ಒಂದೇ ಉಸುರಿಗೆ ತಿಳಿಸಿದರು.

ಒಮ್ಮೆ ಯೋಚನೆ ಮಾಡಿ, ಇನ್ನೊಬ್ಬ ಮುಸುಕುಧಾರಿಯತ್ತ ನೋಡಿ ಏನೋ ಸನ್ನೆ ಮಾಡಿದ. ನಂತರ ರಾಯರತ್ತ ನೋಡಿ "ನೀವು ಅಲ್ಲೇ ಇರಿ. ನಿಮಗೆ ಏನು ಬೇಕು" ಅಂದ. "ಟೇಬಲ್ ಮೇಲಿರೋ ಬ್ಯಾಗ್" ಎಂದರು ರಾಯರು ... ಅನುಮಾನದಿಂದಲೇ ತೆಗೆದುಕೊಟ್ಟ. ಮೊದಲು ರಾಯರು ಅದರಿಂದ blood glucose meter ತೆಗೆದು ರಂಗನಾಥರ ಬೆರಳಿನಿಂದ ಒಂದು ಹನಿ ರಕ್ತ ತೆಗೆದುಕೊಂಡು ಪರೀಕ್ಷೆ ಮಾಡಿದಾಗ ೩೪ ಅಂತ ತೋರಿಸಿತು. ಜೊತೆಗೆ DANGER ಎಂದೂ ತೋರಿಸಿತು. ನಂತರ ಬ್ಯಾಗಿನಿಂದ ಶುಗರ್ ಜೆಲ್ ತೆಗೆದುಕೊಂಡು ಒಂದು ಹನಿ ರಂಗನಾಥರ ನಾಲಿಗೆ ಮೇಲೆ ಹಾಕಿದರು.

ರಂಗನಾಥರು ಸ್ವಲ್ಪ ಚೇತರಿಸಿಕೊಂಡರು. ಎದ್ದು ಕುಳಿತ ಮೇಲೆ ರಾಯರು ತಮ್ಮ ಬ್ಯಾಗಿನಿಂದ ಒಂದು ಜ್ಯೂಸ್ ಪ್ಯಾಕೆಟ್ ತೆಗೆದು ಕುಡಿಯಲು ಕೊಟ್ಟರು. ರಂಗನಾಥರಿಗೆ ಮಾತನಾಡುವಷ್ಟು ಚೇತರಿಕೆ ಕಂಡು ಬಂತು. ನಂತರ ಅವರಿಗೆ ತಾವು ಇನ್ನೂ ಬ್ಯಾಂಕಿನಲ್ಲೇ ಇರುವುದು ಅರಿವಾಯಿತು. ರಾಯರನ್ನು ಮೆಲ್ಲಗೆ ಕೇಳಿದರು "ಈಗ ಏನಾಗ್ತಿದೆ" ಅಂತ

ರಾಯರು ಮುಸುಕುಧಾರಿಯತ್ತ ಕೈ ತೋರಿಸಿ "ಈತನೇ ನಿನ್ನನ್ನು ಕಾಪಾಡಿದ್ದು" ಎಂದರು. ರಂಗನಾಥ ಆತನಿಗೆ ಕೈ ಮುಗಿದು ಧನ್ಯವಾದ ತಿಳಿಸಿದರು.

ಮುಸುಕುಧಾರಿಯು ಸಂಪೂರ್ಣ ವಿಚಲಿತನಾಗಿದ್ದ ... ಗಲಿಬಿಲಿಗೊಂಡಿದ್ದ ... ದಿಗ್ಮೂಢನಾಗಿದ್ದ ... ತನ್ನ ಕಣ್ಣ ಮುಂದೆ ವೈದ್ಯನೊಬ್ಬ ಹೋಗುತ್ತಿದ್ದ ಜೀವವನ್ನು ತಡೆದಿದ್ದ ... ಅದಕ್ಕೆ ಪರೋಕ್ಷವಾಗಿ ತಾನು ಕಾರಣನಾಗಿದ್ದ ... ತನ್ನಿಂದ ಹೀಗಾಗಿದ್ದೋ ಅಥವಾ ತನ್ನಿಂದ ಪ್ರಾಣ ಉಳಿದಿದ್ದೋ ಅವನಿಗೆ ಅರ್ಥವೇ ಆಗಲಿಲ್ಲ ...

ಇಬ್ಬರನ್ನೂ ಮೊದಲಿನ ಸ್ಥಾನಕ್ಕೆ ಕಳಿಸಿ, ರಾಯರ ಬ್ಯಾಗಿನಿಂದ ಪ್ಯಾಡ್ ಮತ್ತು ಪೆನ್ ತೆಗೆದುಕೊಂಡು, ಏನನ್ನೋ ಬರೆದು ಇಟ್ಟು, ರಾಯರತ್ತ ತಿರುಗಿ ಕೈ ಜೋಡಿಸಿ, ಹಾಗೇ ಹೊರ ನೆಡೆದ ...

ಮುಂದಿನ ಐದು ನಿಮಿಷದಲ್ಲಿ ಮುಸುಕುಧಾರಿಗಳೆಲ್ಲ ಬ್ಯಾಂಕಿನಿಂದ ಹೊರ ನೆಡೆದಿದ್ದರು ... ಭರ್ರನೆ ಗಾಡಿ ಹೊರಗೆ ಹೋಗಿದ್ದರ ಶಬ್ದವೂ ಕೇಳಿಸಿತು ... ಮೇನೇಜರ್ ರೂಮಿನಲ್ಲಿ ನೆಡೆದ ಕಥೆ ಯಾರಿಗೂ ಗೊತ್ತಾಗಲಿಲ್ಲ. ಜೀವ ಹಾನಿಯಾಗದೆ ಎಲ್ಲರೂ ಉಳಿದುಕೊಂಡಿದ್ದರಿಂದ ಎಲ್ಲರಿಗೂ ಒಮ್ಮೆಲೇ ನಿರಾಳವಾಗಿ, ಬದುಕುಳಿದಿದ್ದಕ್ಕೆ ಒಬ್ಬರನ್ನೊಬ್ಬರು ಅಭಿನಂದಿಸುತ್ತಿದ್ದರು.

ಮಾನಸಿಕವಾಗಿ ಸುಸ್ತಾಗಿದ್ದ ಇಬ್ಬರೂ ಕಾರನ್ನೇರಿ ರಾಯರ ಮನೆಯತ್ತಲೇ ನೆಡೆದರು. ವಾರಾಂತ್ಯಕ್ಕೆ ತಾಮ್ಮೂರಿನ ಮನೆಯ ದೇವರ ದರ್ಶನ ಮಾಡಿ ಬಂದರು.

ಬ್ಯಾಂಕಿನ ದರೋಡೆ ನಂತರ ನಗರದ ಹೊರವಲಯದಲ್ಲಿ ಪೋಲೀಸರು ಅವರನ್ನು ಅಟ್ಟಿಸಿಕೊಂಡು ಹೋಗಿ, ಗುಂಡಿನ ಚಕಾಮಕಿ ನೆಡೆದು ದರೋಡೆಕೋರರಲ್ಲಿ ಒಂದಿಬ್ಬರು ಸತ್ತರೆಂದೂ ಸುದ್ದಿ ತಿಳಿಯಿತು. ಮಿಕ್ಕವರು ಜೈಲು ಸೇರಿದ್ದರಂತೆ.

ಸುದ್ದಿ ತಿಳಿದ ಕೂಡಲೇ, ರಾಯರಿಗೆ ಆ ಮುಸುಕುಧಾರಿ ತಮ್ಮ ಕಾಗದದಲ್ಲಿ ಏನೋ ಬರೆದದ್ದು ನೆನಪಾಯ್ತು. ತಕ್ಷಣವೇ ಬ್ಯಾಗಿನಿಂದ ತಮ್ಮ ಪೇಪರ್ ಪ್ಯಾಡ್ ತೆಗೆದುಕೊಂಡು ನೋಡಿದರು

"ದಯವಿಟ್ಟು ನನ್ನ Diabetic ತಂದೆಯನ್ನು ಕಾಪಾಡಿ. ಧನ್ಯವಾದಗಳು" ಎಂದು ಬರೆದು ಹೆಸರು ಮತ್ತು ದೂರವಾಣಿ ಸಂಖ್ಯೆಯನ್ನೂ ಕೊಟ್ಟಿದ್ದ.

ರಾಯರು ಆ ನಂಬರ್’ಗೆ ಕರೆ ಮಾಡಿ ಪರಿಸ್ಥಿತಿ ಹೇಗಿದೆ ಎಂದು ತಿಳಿದುಕೊಳ್ಳೋಣ ಎಂದುಕೊಂಡರು .... ಆದರೆ ....

ಎರಡು ದಿನಗಳ ಹಿಂದೆ ಮಗನು ಕಾಲವಾಗಿದ್ದ.....

ಆ ದು:ಖ ಭರಿಸಲಾಗದೆ ಆಹಾರವೂ ಸೇರದೆ ಆ ತಂದೆಯೂ ಕಾಲವಾದರು ಎಂದು ಸುದ್ದಿ ತಿಳಿಯಿತು....


No comments:

Post a Comment