Sunday, March 27, 2011

ದಂಗೆ ಎದ್ದವರು !

{ ಇಲ್ಲಿ ಬಂದಿರುವ ಪಾತ್ರಗಳೆಲ್ಲ ಕೇವಲ ಕಲ್ಪನೆ ಮಾತ್ರ .. ಅಸಂಭವ ಎನ್ನಬಹುದಾದ ಸನ್ನಿವೇಶಗಳು. ನಿಜವಾಗದಿರಲಿ ಎಂಬ ಆಶಯ ಮಾತ್ರ. ನಿಜವೇ ಆಗಿಬಿಟ್ಟರೆ? }

ಹಲವು ದಿನಗಳ ಹಿಂದೆ ನೆಡೆದ ಘಟನೆಯಿದು.

ಕೊನೆಗೂ ತನ್ನ ವಶೀಲಿಯಿಂದಾಗಿ, ನಗರದ ಹೊರವಲಯದಲ್ಲಿ, ದಟ್ಟಡಿಯಂತೆ ತೋರುತ್ತಿದ್ದ ಪ್ರಾಂತ್ಯವೊಂದರ ಒಡೆತನದ ಕಾಗದ ಪತ್ರಗಳು, ಒಬ್ಬ ದೊಡ್ಡ ಮನುಷ್ಯನ ಕೈಗೆ ಹಸ್ತಾಂತರವಾಯಿತು. ತನ್ನ ಯೋಜನೆಯ ಪ್ರಕಾರ ಆ ಪ್ರಾಂತ್ಯದ ಸುತ್ತಲಿನ ಜನರನ್ನು ಅಲ್ಲಿಂದ ಎಬ್ಬಿಸಿ, ಮರಗಿಡಗಳನ್ನು ಕಿತ್ತೊಗೆದು, ದೇಶದಲ್ಲೇ ಅತಿ ದೊಡ್ಡದಾದ ವಿದೇಶೀ ಮಾದರಿಯ ಥೀಮ್ ಪಾರ್ಕ್ ಕಟ್ಟುವ ಉದ್ದೇಶ ಹೊಂದಿದ್ದ.


ತನ್ನ ಥೀಮ್ ಪಾರ್ಕಿನ ಪ್ರಮುಖ ಕಛೇರಿಯನ್ನು ನಗರದ ಸ್ವಲ್ಪವೇ ಹೊರಗಿರುವ ಪುರಾತನವಾದ ಆಲದ ಮರವಿರುವ ಸ್ಥಳದಲ್ಲೇ ಕಟ್ಟಬೇಕೆನ್ನುವ (ದುರ್)ಉದ್ದೇಶವನ್ನೂ ಹೊಂದಿದ್ದ.


ಪರಿಣಾಮ ....


ಪೂಜನೀಯವಾದ ಆಲದ ಮರವನ್ನು ಎಬ್ಬಿಸುವುದರ ವಿರುದ್ದವಾಗಿ ಧಾರ್ಮಿಕ ಜನರ ಕೂಗು ಎದ್ದಿತು. ಹೊರವಲಯದ ಗಿಡ ಮರಗಳನ್ನು ಉರುಳಿಸುವುದರ ವಿರುದ್ದ ಪರಿಸರ ಪ್ರೇಮಿಗಳು ಎದ್ದು ನಿಂತರು. ಥೀಮ್ ಪಾರ್ಕ್ ಬಂದಾದ ನಂತರ ಸಿಬ್ಬಂದಿಗಾಗಿ ತಮ್ಮ ರಾಜ್ಯದವರಿಗೆ ಮೊದಲು ಆದ್ಯತೆ ನೀಡಬೇಕೆಂದು ಭಾಷಾ ಪ್ರೇಮಿಗಳು ಭುಗಿಲೆದ್ದರು. ಬೇರೆ ರಾಜ್ಯದವರಿಗೆ ಪ್ರಮುಖ ಸ್ಥಾನ ನೀಡಿದರೆ ತಲೆಗಳು ಉರುಳುತ್ತವೆ ಎಂದು ಹೇಗಾದರೂ ಸರಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂದು ಬಯಸಿದ್ದ ಮೂರನೆಯ ಪಕ್ಷದರ ಕೂಗು. ದೊಡ್ಡ ಮನುಷ್ಯನಿಂದ ಆಯಾ ಖಾತೆಯವರು ತಕ್ಕ ಮಟ್ಟಿಗೆ ಜೋರಾಗಿಯೇ ದುಡ್ಡು ಇಳಿಸಿದ್ದಾರೆಂದೂ, ತಮ್ಮನ್ನು ಆ ಖಾತೆಯಿಂದ ವರ್ಗಾಯಿಸಿದ ಮೇಲೆ ಈ ಡೀಲಿಂಗ್ ನೆಡೆದಿದೆ ಎಂದೂ, ಆಡಲಿತ ಪಕ್ಷದ ಕೆಲವರು ಒಳಗೊಳಗೇ ಗುಲ್ಲೆಬ್ಬಿಸಿದ್ದರು. ಅನ್ಯಾಯವಾಗಿ ತಮ್ಮ ಕೈ ತಪ್ಪಿತಲ್ಲ ಎಂದು ಕೊರಗಿ ’ದುಡ್ಡು ಕಸಿದು ಭೂಮಿ ಬಿಟ್ಟಿದ್ದಾರೆ’ ಎಂದು ವಿರೋಧಪಕ್ಷದವರು ಆಡಳಿತ ಪಕ್ಷದವರ ಮೇಲೆ ಆರೋಪ ಹೊರಿಸಿದ್ದರು.


ಇದೆಲ್ಲದರ ಮಧ್ಯೆ ದನಿ ಎತ್ತಲಾರದೆ ಮೂಕವೇದನೆ ಅನುಭವಿಸುತ್ತಿರುವ ಇನ್ನೊಂದು ಗುಂಪಿದೆ ! .....


ಯಾರು ಕೂಗಾಡಿದರೇನು, ಯಾರು ಹೋರಾಡಿದರೇನು ಎಂಬಂತಿದ್ದ ಈ ದೊಡ್ಡ ಮನುಷ್ಯ, ಅಂತಿಮವಾಗಿ ತನ್ನ ಡಿಸೈನ್’ಅನ್ನು ಪರಿಷ್ಕರಿಸಿಕೊಳ್ಳಲು ಅಮೇರಿಕದ ಪಂಚತಾರಾ ಹೋಟೆಲ್ಲಿನಲ್ಲಿ ಕುಳಿತು ಯಾರೊಂದಿಗೋ ಚರ್ಚಿಸುತ್ತಿದ್ದ. ಈತನಿಗೆ ರಾಜಕೀಯ ಬೆಂಬಲವಿತ್ತು, ಹಣದ ಬೆಂಬಲವಿತ್ತು. ಜನರನ್ನು ಕೊಳ್ಳುವುದೂ ಗೊತ್ತು, ಕೊಲ್ಲುವುದೂ ಗೊತ್ತು. ತನ್ನ ಯೋಜನೆಯ ಕಾರ್ಯಾಚರಣೆಯ ಮೊದಲ ದಿನವಾದ ಸೋಮವಾರದಂದು ನೆಡೆಯಬೇಕಾಗಿರುವ ಸಮಾರಂಭಕ್ಕೆ ಮಾಡಬೇಕಾಗಿರುವ ಬಂದೋಬಸ್ತಿಗಾಗಿ ಅಲ್ಲಿಂದಲೇ ಕಾಯಿಗಳನ್ನು ನೆಡೆಸುತ್ತಿದ್ದ.


ಇಂತಹ ಮಹತ್ಕಾರ್ಯದ ಉದ್ಘಾಟನಾ ಸಮಾರಂಭಕ್ಕೆಂದೇ ಮಂತ್ರಿಮಂಡಲದ ಸಕಲ ಮಂತ್ರಿ-ಮಹೋದಯರೂ ಬರುವವರಿದ್ದರು. ಈ ಸಮಾರಂಭಕ್ಕೆ ಕರೆಯೋಲೆ ಬಂದಿರುವುದೇ ತಮ್ಮ ಸೌಭಾಗ್ಯ ಎಂದವರೂ ಇದ್ದಾರೆ. ಸಾಮಾನ್ಯ ಜನರನ್ನು ದೂರ ಇಡುವ, ದಂಗೆ ಕೋರರನ್ನು ಹತ್ತಿಕ್ಕುವ ಸಲುವಾಗಿ ಬಂದೋಬಸ್ತು ಭರ್ಜರಿಯಾಗಿತ್ತು.


ಇದಿಷ್ಟು ಸತ್ವಯುತ ಜೀವದವರ ಕಥೆಯಾದರೆ ಈಗ ಜೀವ ಸತ್ತವರಾದ ’ಆ ಇನ್ನೊಂದು ಗುಂಪಿನ’ ಬಗ್ಗೆ ಸ್ವಲ್ಪ ತಿಳಿಸುತ್ತೇನೆ.


ಹಗಲು ಇರುಳೆನ್ನದೆ, ಪ್ರತಿ ದಿನದ ಪ್ರತಿ ಕ್ಷಣವೂ, ನೆಡೆವ ದಬ್ಬಾಳಿಕೆಗೆ ಸೋತು, ಶರಣಾಗಲೂ ಮನಬಾರದೆ, ದನಿ ಎತ್ತಲಾರದೆ, ಸಣ್ಣ ಪುಟ್ಟ ರೀತಿಯಲ್ಲೇ ಸಮಯ ಸಿಕ್ಕಾಗ ಪ್ರತಿರೋಧ ತೋರುತ್ತ ಸಾವನ್ನಪ್ಪುವ, ಕೆಳಗೆ ಉರುಳಿದವರತ್ತ ದೈನ್ಯತೆಯ ದೃಷ್ಟಿ ಬೀರುತ್ತ, ಕೈ ಹಿಡಿದೆತ್ತಲಾರದೆ, ನಿಂತೆಡೆಯೇ ಕಣ್ಣೀರು ಸುರಿಸುತ್ತಿರುವ, ಸಾಮಾನ್ಯರಿಗೆ ಅರಿವಾಗದ ಸಂವೇದನಾಶೀಲರಾದ ಜೀವಿಗಳಿವರು.


ಪ್ರತೀ ಬಾರಿ ಇವರನ್ನು ಕಂಡರೆ ಎನಗೆ, ಕೈಗಳನ್ನೆತ್ತಿ ಆಕಾಶಕ್ಕೆ ಚಾಚಿ ’ಎಂದು ಬರುವೆಯೋ ಕರುಣಾಕರಾ’ ಎಂಬಂತೆ ಸದಾ ಮೊರೆಯಿಡುತ್ತಿರುವಂತೆ ಭಾಸವಾಗುತ್ತದೆ. ಯಾರೊಡನೆಯೂ ಮಾತನಾಡಲಾರದೆ ಬಂದದ್ದನ್ನು ಅನುಭವಿಸದೇ ವಿಧಿಯಿಲ್ಲ ಎಂಬ ಮನೋಭಾವ ಹೊತ್ತಿದ್ದ ಈ ಜೀವಿಗಳ ಸಹನೆಯ ಕಟ್ಟೆ ಇಂದು ಒಡೆದಿದೆ.
ತಾವು ನೀಡುತ್ತಿರುವ ಆಹಾರ ತಿಂದು, ತಮ್ಮ ಒಡಲನ್ನೇ ಬಗೆಯುತ್ತಿರುವವರ ವಿರುದ್ದ ತಿರುಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಲಿದ್ದಾರೆ ! ಒಗ್ಗಟ್ಟಿನಲ್ಲಿ ಬಲವಿದೆ ಎಂದು ತೋರಿಸಲು ಮುಂದಾಗಿದ್ದಾರೆ !! ಎಲ್ಲರೂ ಕೈಜೋಡಿಸಿ ಒಟ್ಟಾಗಿ ತಿರುಗಿ ಬಿದ್ದು ’ಉಳಿದರೆ ಎಲ್ಲರೂ ಉಳಿಯೋಣ ಇಲ್ಲವಾದಲ್ಲಿ ಎಲ್ಲರೂ ಅಳಿಯೋಣ’ ಎಂಬ ಧ್ಯೇಯ ಹೊತ್ತಿದ್ದಾರೆ !!! ಪ್ರಳಯವಾದರೆ ಅದು ಇನ್ನೆರಡು ದಿನದಲ್ಲೇ, ಇಲ್ಲಿಂದಲೇ ಆರಂಭ ಎಂಬುದು ಖಚಿತವಾಗಿದೆ.


ಎಲ್ಲೆಲ್ಲೂ ಕಗ್ಗತ್ತಲು. ಭೀಕರ ಮೌನ. ಕ್ರಿಮಿ ಕೀಟಗಳ ಸದ್ದು ಮಾತ್ರ ಕೇಳಿ ಬರುತ್ತಿದೆ. ಈ ವಾತಾವರಣಕ್ಕೆ ಹೊಂದಿಕೊಳ್ಳಲಾರದ, ಅನುಭವವಿಲ್ಲದ ಜೀವಿ, ಹತ್ತೇ ನಿಮಿಷದಲ್ಲಿ ಪ್ರಾಣ ಬಿಟ್ಟರೂ, ಒಂದು ಮೃಗದ ಅಹಾರವಾಗುತ್ತಾನೆಯೇ ವಿನಹ ಬದುಕಿರುವ ಮತ್ತೊಬ್ಬನಿಗೆ ಅರಿವಾಗಲು ಅವಕಾಶ ಕಡಿಮೆ.


ಎತ್ತೆತ್ತರಕ್ಕೆ ನಿಂತವರ ಮೈಮೇಲೆ ಸರ್ಪಗಳು ಓಡಾಡುತ್ತಿವೆ. ಗಾಜಿನ ಕಂಗಳನ್ನು ತೋರುತ್ತ ಒಮ್ಮೆ ನಾಲಿಗೆ ಹೊರಹಾಕಿ ಬುಸ್ ಎಂದಲ್ಲಿ ಎದೆ ನಡುಗಿ ಪ್ರಾಣವೇ ಹೋಗುತ್ತದೆ.


ಇಂತಹ ಭೀಕರ ವಾತಾವರಣದಲ್ಲಿ ನೆಲೆಸಿರುವ ಜೀವಿಗಳಿಗೆ, ನಗರದಿಂದ, ಒಂದು ಪಕ್ಷಿಯ ಮೂಲಕ ಸಂದೇಶ ಬಂದಿತ್ತು. ಎಲ್ಲರೂ ಕೈಜೋಡಿಸಿ ದಬ್ಬಾಳಿಕೆಯ ವಿರುದ್ದ ಸೆಣೆಸಲು ಸಿದ್ದವಾಗಬೇಕೆಂದೂ, ಕಾರ್ಯಾಚರಣೆ ಬಹಳ ಗೌಪ್ಯವಾಗಿರಬೇಕೇಂದೂ ಸೂಚನೆ ಇತ್ತು.


ಕಾರ್ಯಾಚರಣೆಯು ಏನಿದ್ದರೂ ರಾತ್ರಿಯ ವೇಳೆಯಲ್ಲಿ, ಈ ಸ್ಥಳದಿಂದಲೇ, ಅದೂ ಈ ರಾತ್ರಿಯಿಂದಲೇ ನೆಡೆಯಬೇಕು ಎಂಬುದು ನಿಶ್ಚಿತವಾಗಿತ್ತು... ಅಂದರೇ, ಹೆಚ್ಚು ಸಮಯವಿಲ್ಲ. ಎಂದಿನಿಂದಲೋ ನೆಡೆಸಬೇಕಿದ್ದ ಸಮರಕ್ಕೆ ಇಂದು ರಣವೀಳ್ಯ ದೊರತಿದೆ. ಈ ಕಾರ್ಯಾಚರಣೆಯ ಮೂಲ ಮಂತ್ರ "ಮಾಡು ಇಲ್ಲವೇ ಮಡಿ"
ಭೂಮಿಯ ಕೆಳಗಿನಿಂದಲೇ ಒಬ್ಬರನ್ನೊಬ್ಬರು ಸಂಪರ್ಕಿಸಿ ಒಂದು ಶುಭ ಘಳಿಗೆಯಲ್ಲಿ ದುಷ್ಟ ಮಾನವನ ಮೇಲೆ ಮುಗಿಬೀಳುವ "ಮರ-ಗಿಡ"ಗಳ ಈ ಗುಪ್ತ ಕಾರ್ಯಾಚರಣೆ ಆ ಘಳಿಗೆಯಿಂದಲೇ ಆರಂಭವಾಯಿತು !


ಅನಾದಿ ಕಾಲದಿಂದಲೂ ಪೂಜಿಸಲ್ಪಟ್ಟ ಅತಿ ದೊಡ್ಡ ಆಲದ ಮರದ ಬೇರುಗಳು ಎಷ್ಟರ ಮಟ್ಟಿಗೆ ಆಳವಾಗಿ ಹೋಗಿದೆ, ಎಷ್ಟರ ಮಟ್ಟಿಗೆ ಅಗಲವಾಗಿ ಹರಡಿದೆ ಎಂಬುದು ಭೂಮಿಯನ್ನು ಹೊಕ್ಕು ನೋಡಿದವರಿಗಷ್ಟೇ ಗೊತ್ತು. ತನ್ನ ಬೇರುಗಳ ಹಾದಿಯಲ್ಲಿ ಬರುವ ಇತರ ಬೇರುಗಳೊಡನೆ ಹೆಣೆದುಕೊಂಡು ಹಾಗೇ ಮುಂದುವರೆದಲ್ಲಿ ಇಡೀ ನಗರದ ಭೂತಳದಲ್ಲಿ ಬೇರುಗಳ ಒಂದು ಜಾಲವೇ ಏರ್ಪಡುತ್ತದೆ. ಈ ಆಲದ ಮರವನ್ನು ಉರುಳಿಸಲು ನೆಡೆಸುವ ಪ್ರಯತ್ನದಲ್ಲಿ, ಮರವನ್ನು ಹಿಡಿದೆಳೆದಾಗ ಇಡೀ ಭೂತಳದ ಜಾಲವೇ ಎದ್ದು ಬಂದಲ್ಲಿ, ಬೇರುಗಳ ತಳದ ಭೂಮಿ ಸಡಿಲಗೊಳ್ಳುತ್ತದೆ. ಸಡಿಲಗೊಂಡ ಭೂಮಿಯು ಭೂಕುಸಿತಕ್ಕೆ ಕಾರಣವಾಗುತ್ತದೆ. ಎಲ್ಲೆಡೆ ತಲೆ ಎತ್ತಿರುವ ಕಾಂಕ್ರೀಟು ಕಟ್ಟಡಗಳ ಭಾರದಿಂದಾಗಿ, ಭೂಕುಸಿತ ಹೆಚ್ಚಾಗಿ ಭೂಮಿ ಅಗಲವಾಗಿ ಬಾಯ್ತೆರೆದು ನಿಂತರೆ ಉಳಿಸಲು ಯಾರು ಬಂದಾರು !!!


ಒಂದು ಪ್ರಯತ್ನ ಯಶಸ್ವಿಯಾದಲ್ಲಿ, ಇಂತಹ ಕಾರ್ಯಾಚರಣೆ, ಇಡೀ ರಾಜ್ಯದಲ್ಲಿ, ಇಡೀ ದೇಶದಲ್ಲಿ ಹಾಗೂ ಇಡೀ ಜಗತ್ತಿನಲ್ಲೇ ಹರಡಿದರೆ, ಮನುಷ್ಯನಿಗೆ ಉಳಿಗಾಲವೇ ಇರುವುದಿಲ್ಲ !!!


ಕೊನೆಗೆ ಎಲ್ಲರೂ, ಎಲ್ಲವೂ ಬೀಳುವುದು ತನ್ನ ಮೈಮೇಲಾದರೂ, ಮರಗಿಡಗಳ ಈ ಆಂದೋಳನಕ್ಕೆ ಸಂಪೂರ್ಣ ಒಪ್ಪಿಗೆ ನೀಡಿರುವುದೇ ಭೂಮಿ. ತನ್ನಲ್ಲಿರುವ ಹತ್ತು ಹಲವು ರೀತಿಯ ನಿಧಿಗಾಗಿ ಈ ಮನುಜರು ನಿರಂತರವಾಗಿ ಬಗೆಯುತ್ತಿರುವುದು ಅವಳಿಗೂ ಸಹಿಸಲಾಗುತ್ತಿಲ್ಲ. ಸಹನೆಗೂ ಒಂದು ಮಿತಿ ಇದೆ, ಅಲ್ಲವೇ?


ನೀರು ಉಕ್ಕೇರಿ ಹರಿದರೇ ಪ್ರಳಯವೇ? ಇದೂ ಒಂದು ರೀತಿ ಪ್ರಳಯ ತಾನೇ?


ಒಂದೊಂದು ಮರಕ್ಕೂ ಎಷ್ಟು ಬೇರುಗಳಿವೆಯೋ ಅವಕ್ಕೇ ಗೊತ್ತಿಲ್ಲ!! ಪ್ರತಿ ಮರವೂ ತಮ್ಮ ಇಕ್ಕೆಲಗಳಲ್ಲೂ ಸಾಧ್ಯವಾದಷ್ಟೂ ಕಾಲು ಚಾಚಿ, ಸುತ್ತಲಿನವರನ್ನು ಜಟೆಯಂತೆ ಹೆಣೆದು ಬಿಗಿದುಕೊಳ್ಳಲು ತೊಡಗಿದವು. ತಮ್ಮ ಬಲಿಷ್ಟ ಬೇರುಗಳಿಂದ ಮತ್ತೊಂದು ಬಲಿಷ್ಟ ಬೇರನ್ನು ಹೆಣೆದುಕೊಳ್ಳುವುದರ ಜೊತೆಗೆ ಮಧ್ಯೆ ಮಧ್ಯೆ ನುಸುಳುವ ಸಣ್ಣ ಪುಟ್ಟ ಬೇರುಗಳನ್ನು ಸೇರಿಸಿಕೊಂಡು ಇನ್ನಷ್ಟು ಗಟ್ಟಿಯಾದವು.


ಇಷ್ಟೆಲ್ಲ ಭೂಮಿಯ ಕೆಳಗೆ ನೆಡೆಯುತ್ತಿದ್ದರೂ ಭೂಮಿಯ ಮೇಲೆ ಮಾತ್ರ ಪ್ರಶಾಂತವಾದ ಗಾಳಿಗೆ ಮರ ಗಿಡಗಳ ಎಲೆಗಳು ಹಾಗೂ ರೆಂಬೆ-ಕೊಂಬೆಗಳು ತೂಗಾಡುತ್ತಿತ್ತು. ಪ್ರತಿ ಮರದ ಎದೆಯಲ್ಲಿ ದಳ್ಳುರಿ ಎದ್ದಿದ್ದರೂ ಮುಖದ ಮೇಲೆ ಪ್ರಶಾಂತತೆ ಹರಡಿತ್ತು.


ಒಂದೇ ರಾತ್ರಿಯಲ್ಲಿ ನಗರದ ಸುತ್ತಲಿದ್ದ ಮರಗಳೆಲ್ಲವೂ ಒಬ್ಬರನ್ನೊಬ್ಬರು ಹೆಣೆದುಕೊಂಡು ಒಟ್ಟಾದವು. ಒಂದು ಮರಕ್ಕೆ ಹಗ್ಗ ಕಟ್ಟಿ ಬೇರನ್ನು ಎಳೆಯುತ್ತಿದ್ದಂತೆಯೇ ಅದರ ಹಿಂದೆ ಸಾಲಾಗಿ ಮರಗಳು ಉರುಳುತ್ತವೆ.


ಭಾನುವಾರ ರಾತ್ರಿ ಕಳೆದು ಸೋಮವಾರದ ಸೋಮದೇವ ಮೂಡುವ ವೇಳೆಗೆ ನಗರ ಸಕಲ ಮರಗಳೂ ಒಟ್ಟಾಗಿದ್ದವು. ಇಂದಲ್ಲ ನಾಳೆ ಉರುಳುವ ಸಮಯ ಬಂದಾಗ, ಪರಿಸ್ಥಿತಿ ವಿಕೋಪಕ್ಕೆ ಹೋಗುವುದರ ಬಗ್ಗೆ ಅನುಮಾನವೇ ಇರಲಿಲ್ಲ.


ಮೊದಲು ವನಪ್ರಾಂತ್ಯಕ್ಕೆ ಹೊರಟು, ಅಲ್ಲಿ ಸಣ್ಣ ಸಭೆ, ಭಾಷಣ, ಯೋಜನೆಯ ವಿವರಣೆ ಮುಂತಾದ ಕಾರ್ಯಕ್ರಮಗಳಾದ ಮೇಲೆ, ಮಧ್ಯದಲ್ಲಿ ಒಂದಿಷ್ಟು ಸಣ್ಣ ಪುಟ್ಟ ಮರಗಳನ್ನು ಪ್ರಮುಖರ ಎದುರಿಗೆ ಕತ್ತರಿಸುವ ಮೂಲಕ ಕೆಲಸ ಆರಂಭಿಸಿ, ನಂತರದ ದಿನಗಳಲ್ಲಿ, ಜಾಗ ಬಂದೋಬಸ್ತು ಮಾಡಿಸಿ ಕೆಲಸ ಮುಂದುವರೆಸುವುದು ಪ್ಲಾನ್ ಪ್ರಕಾರ ನೆಡೆಯಬೇಕಿದ್ದ ಕೆಲಸ. ಸಂಜೆಗೆ ಆಲದ ಮರದ ಬಳಿ ಮತ್ತೆ ಸಣ್ಣ ಸಭೆ, ರಾಜಕೀಯ ಪಕ್ಷಗಳ ಆಶ್ವಾಸನೆಯ ಭಾಷಣ ಹೀಗೆ.


ಆಹ್ವಾನಿತರೆಲ್ಲ ಹೊರ ವಲಯದ ಪ್ರದೇಶಕ್ಕೆ ಹೊಕ್ಕಂತೆ ಎಲ್ಲೆಲ್ಲೂ ಮರಗಳು ಸ್ವಾಗತಿಸಿದವು. ಹರಕೆಯ ಕುರಿಗಳೇ ಬನ್ನಿ ಎಂಬಂತೆ. ವ್ಯಾನಗಳು ಹೋಗಲೆಂದೆ ಮಾಡಿಕೊಂಡ ಕಚ್ಚಾ ರಸ್ತೆ. ಮಧ್ಯದಲ್ಲಿ ಸಣ್ಣ ಬಯಲಿನಂತಹ ಪ್ರದೇಶದಲ್ಲಿ ಶಾಮಿಯಾನ, ಸಣ್ಣ ವೇದಿಕೆ, ಊಟ ತಿಂಡಿ ವ್ಯವಸ್ಥೆ ಎಲ್ಲ ಇತ್ತು.


ಒಂದು ತಂಡ ಬಿಟ್ಟು ಮಿಕ್ಕೆಲ್ಲರೂ ಸೇರಿದ್ದರು. ಮೊದಲೇ ಬಂದರೆ ಪತ್ರಕರ್ತರ ಬಾಯಿಗೆ ಸಿಕ್ಕಿಕೊಳ್ಳಬೇಕಾಗುತ್ತದೆ ಎಂಬ ಉದ್ದೇಶದಿಂದ ಅರಣ್ಯ ಇಲಾಖೆಯ ಮಂತ್ರಿ ತಮ್ಮ ಇಲಾಖೆಯ ಮುಖ್ಯ ಅಧಿಕಾರಿಗಳೊಂದಿಗೆ ತಡವಾಗಿ ಹೊರಟು ಬರುತ್ತಿದ್ದರು. ಪ್ರದೇಶದ ಒಳಗೆ ಕಾರು ಧೂಳೆಬ್ಬಿಸಿಕೊಂಡು ಬರುತ್ತಿದ್ದಂತೆಯೇ, ಚಾಲಕನಿಗೆ ದಾರಿ ಕಾಣಲಿಲ್ಲವೋ ಏನಾಯ್ತೋ ಗೊತ್ತಿಲ್ಲ, ಕಾರು ಸೀದ ಹೋಗಿ ದೊಡ್ಡದಾದ ಮರವೊಂದಕ್ಕೆ ಗುದ್ದಿತು. ಇದರ ಹಿಂದೆ ಬರುತ್ತಿದ್ದ ಮತ್ತೊಂದು ವ್ಯಾನು ಹಾಗೂ ಇನ್ನೊಂದು ಕಾರುಗಳೆರಡೂ ಗುದ್ದಿಕೊಂಡು ಮತ್ತೆರಡು ಮರಕ್ಕೆ ಗುದ್ದಿದವು.


ಸಣ್ಣ ಪುಟ್ಟ ತರಚುವಿಕೆ ಬಿಟ್ಟರೆ ಹೆಚ್ಚಿಗೆ ಪೆಟ್ಟಾಗಲಿಲ್ಲ. ಆದರೆ .... ತಮ್ಮನ್ನೇ ಹೆಣೆದುಕೊಂಡಿದ್ದರ ಪ್ರಭಾವವೋ ಏನೋ, ಗುದ್ದಿದ ಆ ರಭಸಕ್ಕೇ ಎರಡು ಮೂರು ಮರಗಳು ಬುಡ ಮೇಲಾಗಿ ಉರುಳಿದವು. ಆದರೆ ಅವರಿಗೆ ಸೋಜಿಗವೆಂದರೆ ಈ ಮರಗಳು ಉರುಳುವಾಗ, ಹಗ್ಗ ಹಿಡಿದು ಎಳೆದಂತಾಗಿ ಇಪ್ಪತ್ತು ಅಡಿ ದೂರದಲ್ಲಿದ್ದ ಮತ್ತೊಂದು ಮರವೂ ಉರುಳಿತು. ಮಿಕ್ಕ ಕೆಲವು ಮರಗಳು ಅಲುಗಾಡಿದವು. ಬಿದ್ದ ಮರದ ಜಾಗದಲ್ಲಿ ದೊಡ್ಡ ಹಳ್ಳವೇ ಏರ್ಪಾಡಾಯಿತು.


ಮಂತ್ರಿಗಳಿಗೆ ಏನರಿವಾಯಿತೋ ಇಲ್ಲವೋ ಗೊತ್ತಿಲ್ಲ, ತಮ್ಮ ಚೇಲಾಗಳೊಂದಿಗೆ ಅವರಂತೂ ಸಮಾರಂಭದ ಕಡೆ ನೆಡೆದರು.


ಇಲಾಖೆಯ ಹಿರಿಯರಿಗೆ ಏನೋ ಅನುಮಾನವಾಯಿತು. ಹಿಂದೆಂದೂ ಆಗಿರದ ಅನುಭವ. ಮರಗಳು ತರಗೆಲೆಗಳಂತೆ ಉರುಳಿದ್ದು ನೋಡಿ ಮೂಕಸ್ಮಿತರಾದರು. ಹಳ್ಳ ಹೇಗಾಯ್ತು ಎನ್ನುವುದಕ್ಕಿಂತ ಸಣ್ಣ ಅಪಘಾತಕ್ಕೇ ಎಲ್ಲಾದರೂ ನಾಲ್ಕು ಮರ ಉರ್ಳುತ್ತದೆಯೇ ಎಂಬುದು. ಅರ್ಥವಾಗದೆ ತಲೆ ಕೆರೆದುಕೊಳ್ಳ ಹತ್ತಿದರು. ಬುಡ ಮೇಲಾದ ಮರಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ತಲೆ ತಿರುಗಿದಂತಾಯ್ತು. ತಕ್ಷಣವೇ ತುರ್ತು ಕರೆ ನೀಡಿ ಇಲಾಖೆಯ R&D department ತಜ್ಞ್ನರನ್ನು ಕರೆಸಿದರು.


ಸದಾ ಮರಗಳನ್ನು ರೋಗರುಜಿನಗಳಿಂದ ತಡೆಗಟ್ಟುವ, ಆರೋಗ್ಯ ವೃದ್ದಿಸುವ, ಹಣ್ಣು, ಬೀಜ, ಕಾಂಡದ ಗುಣ ಅಭಿವೃದ್ದಿ ಪಡಿಸುವ ವಿಷಯಗಳತ್ತಲೇ ಗಮನ ನೀಡುವ R&D department ಜನಕ್ಕೆ ಹೊಸ ವಿಷಯ ದೊರೆಯಿತು.


ಜೀವಮಾನದಲ್ಲೇ ಇಂತಹ ದೃಶ್ಯವನ್ನು ಅವರ್ಯಾರೂ ಕಂಡಿರಲಿಲ್ಲ. ಮರಗಲ ನಡುವಿನ ಇಪ್ಪತ್ತು ಅಡಿ ದೂರದವರೆಗೂ ಇದ್ದ ಹಾದಿಯ ಉದ್ದಗಲವನ್ನು ಪರಿಶೀಲಿಸಿ ನೋಡಿದಾಗ ನಂಬಲಾಗದಿದ್ದರೂ ನಂಬಲೇಬೇಕಾಯ್ತು.


ಒಂದೆರಡು ಘಂಟೆಗಳು ಕಳೆಯುತ್ತಿದ್ದಂತೆಯೇ ನಿಖರ ಎನ್ನಬಹುದಾದಂತಹ ಕೆಲವು ಮಾಹಿತಿಗಳು ದೊರೆತವು. ನಂಬಬೇಕೋ ಇಲ್ಲವೋ ಅರಿವಾಗದೇ ಇದ್ದರೂ, ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಉತ್ತಮ ಎನ್ನಿಸಿತು.


ತಕ್ಷಣವೇ ಶಾಮಿಯಾನದಲ್ಲಿದ್ದ ಮಂತ್ರಿಗಳ ಬಳಿ ಚರ್ಚಿಸಿ, ಅಲ್ಲಿ ಸೇರಿದ್ದ ಜನರನ್ನು ಹೊರಗೆ ಕಳಿಸುವ ಕೆಲಸ ಶುರು ಮಾಡಿದರು. ಒಮ್ಮೆ ಸುದ್ದಿ ಹರಡುತ್ತಿದ್ದಂತೆಯೇ, ಇನ್ನೆಂತಹ ತುರ್ತು ಏರ್ಪಟ್ಟಿತೆಂದರೆ, ಮರಗಳನ್ನು ಮುಟ್ಟಲೂ ಅಲ್ಲಿದ್ದ ಜನರ ಹೆದರ ತೊಡಗಿದರು. ಯಾವ ಮರ ಒರಗಿ ತಮ್ಮ ಮೇಲೆ ಬೀಳುವುದೋ ಎಂದು, ತಮ್ಮ ತಮ್ಮ ಗಾಡಿಗಳನ್ನೇರಿ ಅತ್ಯಂತ ಎಚ್ಚರಿಕೆಯಿಂದ ಸಾಧ್ಯವಾದಷ್ಟು ಬೇಗ ಅಲ್ಲಿಂದ ಜಾಗ ಖಾಲಿ ಮಾಡಿದರು.


ಗಿಜಿ ಗಿಜಿ ಎಂತಿದ್ದ ಪ್ರದೇಶದಲ್ಲಿ ಸ್ಮಶಾನ ಮೌನ ಏರ್ಪಟ್ಟಿತು.


ಸೊಂಪಾದ ಪ್ರದೇಶ ಇನ್ನೂ ಸೊಂಪಾಗಿಯೇ ಇದ್ದರೂ, ಸಂಜೆಯೊಳಗೆ ನಿಷೇದಿಸಲ್ಪಟ್ಟ ಪ್ರದೇಶವಾಗಿ ಪರಿವರ್ತಿತವಾಯ್ತು. ಘಟನೆ ನೆಡೆದ ಕೆಲವೇ ಘಂಟೆಗಳಲ್ಲಿ ಸರ್ಕಾರದವತಿಯಿಂದ ’ಯಾರೂ ಎಲ್ಲೂ ಮರಗಳನ್ನು ಕಡಿಯಕೂಡದು’ ಎಂಬ ಆದೇಶ ಹೊರಟಿತು. ಪದೇ ಪದೇ ಟಿವಿಯಲ್ಲಿ ತಮ್ಮ ಮುಖ ತೋರಿಸಿ ಜನರಿಗೆ ಎಚ್ಚರಿಕೆ ಕೊಡಲು ತೊಡಗಿದರು.


ಜಾತಿ-ಭೇದವಿಲ್ಲದೆ, ವರ್ಣ ಭೇದವಿಲ್ಲದೇ, ಗಂಡು-ಹೆಣ್ಣೆನ್ನದೆ ತಮಗೆ ಕಂಡ ಮರದ ಕಡೆ ತಿರುಗಿ ನಿಂತು ಕೈ-ಮುಗಿದು ರಕ್ಷಿಸೆನ್ನುತ್ತ, ದೂರದಿಂದಲೇ ಶಿರಬಾಗಿದರು. ಭೂಮಿಗೆ ಪೂಜೆ ಮಾಡಿದರು. ತಮ್ಮ ಮನೆ-ಮಠದ ಸುತ್ತಲೂ ಮರಗಳನ್ನು ಬೆಳೆಸಿರುವವರ ಬಿ.ಪಿ ಏರಿತ್ತು. ಎಷ್ಟೋ ಜನರಿಗೆ ಇದೇ ತಮ್ಮ ಜೀವನದ ಕಡೇ ದಿನ ಎನ್ನುವಂತಾಗಿತ್ತು.


ತನ್ನಾಶ್ರಯದಲ್ಲಿರುವ ಮರ-ಗಿಡಗಳಿಗೆಲ್ಲ ’ಕ್ಷಮಯಾ ಧರಿತ್ರಿ’ಯಾದ ಭೂಮಿ ವಿನಂತಿಸಿತು. ನಿಮ್ಮಂತೆಯೇ ನನಗೂ ಅನ್ಯಾಯವಾಗಿದೆ. ನನ್ನನೂ ಬಗೆದು ನನ್ನೊಡಲನ್ನು ಖಾಲಿ ಮಾಡುತ್ತಿರುವ ಈ ಮನುಜರಿಗೆ ಒಳ್ಳೇ ಪಾಠವನ್ನು ಕಲಿಸಿದ್ದೀರ. ಇದು ನಿಮ್ಮ ಪ್ರತಿರೋಧದ ಮೊದಲ ಹೆಜ್ಜೆ. ಸಹನೆ ಇರಲಿ ಎಂದು ಮನ ಒಲಿಸಿತು.


ಭೂತಾಯಿಯ ಕೋರಿಕೆ ಇಲ್ಲವೆನ್ನಲಾಗುತ್ತದೆಯೇ? ಮರಗಳು ತಮ್ಮ ಬೇರುಗಳು ತಮ್ಮ ತಮ್ಮನ್ನು ನಿಧಾನವಾಗಿ ಸಡಿಲಿಸಿಕೊಳ್ಳುತ್ತ, ಭೂಮಿಯನ್ನು ಅಪ್ಪಿ ಹಿಡಿದು, ವಿಜಯ ಗರ್ವದಿಂದ ಶಾಂತಿಯ ಉಸಿರು ಬಿಟ್ಟವು.


----ಉಪಾಂತ್ಯ:
ಮೇಜಿನ ಮೇಲಿನ ಸುಂದರ ಹೂಕುಂಡದಲ್ಲಿ, ತಮ್ಮವರಿಂದ ಬೇರಾಗಿ ಕೊನೆ ಉಸಿರು ಎಳೆಯುತ್ತಿರುವ, ಬಣ್ಣ ಬಣ್ಣದ ಪುಷ್ಪಗಳು ತಾವಿದ್ದ ಕಛೇರಿಯಲ್ಲಿ ನೆಡೆಯುತ್ತಿದ್ದ ಭಾರೀ ಉನ್ನತ ಮಟ್ಟದ ಸಭೆಯ ಮೂಕ ಪ್ರೇಕ್ಷಕರಾಗಿದ್ದವು.


ಆ ಸಭೆಯಲ್ಲಿ, ಹತ್ತು ಹಲವು ದೇಶದ ಬುದ್ದಿಜೀವಿ ಮಾನವರು, ಭೂಮಿಯ ಒಳಗಿನ ಬೇರುಗಳ ಮೇಲಿನ ಹತೋಟಿ ಸಾಧಿಸುವ ಬಗೆಯನ್ನು ಚರ್ಚಿಸುತ್ತಿದ್ದರು !
ದುಂಬಿ ಬಂದಲ್ಲಿ ತಾವು ತಿಳಿದುಕೊಂಡ ವಿಷಯವನ್ನು ರವಾನಿಸಲು ಕಾದಿದ್ದವು ಆ ಪುಷ್ಪಗಳು.


ಅಯ್ಯೋ ಮರುಳೇ! ಅತ್ಯಾಧುನಿಕ ತಂತ್ರಜ್ಞ್ನಾನದ ಈ ಕಛೇರಿಯಲ್ಲಿ ಕ್ರಿಮಿ-ಕೀಟಗಳು ಅಡಿ ಇಡಲು ಸಾಧ್ಯವೇ?


ಗುಟ್ಟನ್ನು ಹೊರಚೆಲ್ಲಲಾರದೆ, ತನ್ನಲ್ಲೇ ಉಳಿಸಿಕೊಂಡು ನಾಳೆಯ ವೇಳೆಗೆ ಕಸದಬುಟ್ಟಿಯ ಸೇರೋ ಇಂತಹ ಪುಷ್ಪಗಳು ಎಷ್ಟೋ?


ಹಸಿರನ್ನು ಉಳಿಸಿ, ಹಸಿರನ್ನು ಬೆಳಸಿ.


No comments:

Post a Comment