Sunday, March 27, 2011

ಹಗಲು ಸರಿದು ಇರುಳು ಮೂಡಿದ ಹೊತ್ತು

ಕಳೆದ ತಿಂಗಳು ಕಾರ್ಯ ನಿಮಿತ್ತ ನ್ಯೂ ಆರ್ಲಿಯನ್ಸ್’ಗೆ ಹೋಗಿದ್ದೆ. ಹೊಸ ಜಾಗ. ಹೊಸ ವಾತಾವರಣ. ಹಲವು ಬೀದಿಗಳಲ್ಲಿ ಅಡ್ಡಾಡುವಾಗ, ಕಂಡ ದೃಶ್ಯಗಳು ಕವನ ರೂಪದಿ ನಿಮ್ಮ ಮುಂದೆ:

ಸುಂದರ ಮಡದಿಯ ಕೈ ಪಿಡಿದೂ ಎದುರಿಗೆ ಬಂದ ಹುಡುಗಿಯ ನೋಡುವಾತ
ಯಾರು ಕೇಳಿದರೇನು ಕೇಳದಿರಲೇನೆಂದು ಬೀದಿ ಬದಿಯ ವಾದ್ಯ ನುಡಿಸುವಾತ

ಒಪ್ಪೊತ್ತಿನ ಊಟಕ್ಕೆ ಹಣ ಸಿಗುವುದೇನೋ ಎಂಬ ಆಸೆ ಕಂಗಳ ಕರಿ ಹುಡುಗ
ನಾಯಿ ಮರಿಯನು ಬಿಸ್ಕೇಟ್ ಎಸೆಯುತ್ತ ಕರೆದೊಯ್ಯುತ್ತಿದ್ದ ಮೋಟು ಚಡ್ಡಿ ಹುಡುಗಿ

ಕೋಟು-ಹ್ಯಾಟು ಹಾಕಿಕೊಂಡು ಹೊಗೆ ಬಿಡುತ್ತ ಚುಟ್ಟ ಸೇದುವ ಮುದುಕ
ಮೂಲೆಯ ATM ಡಬ್ಬದ ಬಳಿ help me ಫಲಕ ಹೊತ್ತ ತಿರುಕ

ಭವಿಷ್ಯದ ಚಿಂತೆ ಇಲ್ಲದೆ ಮತ್ತೊಬ್ಬರ ಭವಿಷ್ಯ ಹೇಳೋ ಮುದುಕಿಯರು
ಜನರ ತುಳಿತಕ್ಕೆ ಸಿಕ್ಕದೆ ನುಸುಳಿ ಹೋಗುವ ಕಾತುರದ ಜಿರಳೆಗಳು

ಬಾಟ್ಲಿಗೆ ಕಂದು ಕಾಗದ ಸುತ್ತಿ ಸಾರಾಯಿ ಹೀರುವ ಪರದೇಶಿ ಹುಡುಗ
ರೇಶ್ಮೆ ವಸ್ತ್ರ ತೊಟ್ಟು ಗಾಜಿನ ಕೋಣೆಯಲಿ ನಿಂತ ನಿಸ್ತೇಜ ಸುಂದರ ಹುಡುಗಿ

ಖಾನಾವಳಿ ಅರಸುತ್ತ ಬೀದಿ ತಿರುಗುತ್ತಿದ್ದ ಹಸಿದ ಸೂಟುಧಾರಿ ಜನರು
ಬುಟ್ಟಿಯಲ್ಲಿ ನಾಯಿ ಮರಿಯನ್ನು ಹೊತ್ತು ಸೈಕಲ್’ನಲ್ಲಿ ಬೀದಿ ಸುತ್ತೋರು

ಹಳ್ಳಕೊಳ್ಳಗಳು, ನಿಂತ ನೀರು, ಗಬ್ಬು ನಾರುವ ಕಸದ ಡಬ್ಬಗಳು
ಮುಚ್ಚಿದ ಬಾಗಿಲುಗಳು, ತೆರೆದ ಕಿಟಕಿಗಳು, ಭಾವನೆ ಕೆರಳಿಸೋ ತೈಲಪಟಗಳು

ಸಂಜೆಯಾದರೆ ಬಾಗಿಲು ಮುಚ್ಚೋ ಅಂಗಡಿಗಳು, ಹೆಬ್ಬಾಗಿಲು ತೆರೆಯೋ ಬಾರುಗಳು
ಒತ್ತೊತ್ತಾದ ಮನೆಗಳು, ಬೀಗ ಜಡಿದ ಗೇಟುಗಳು, ಅದರ ಹಿಂದೆ ದುಬಾರಿ ಕಾರುಗಳು

ಕುದುರೆ ಗಾಡಿಯಲ್ಲಿ ಕುಳಿತೋ, ಬೀದಿಯಲ್ಲಿ ನೆಡೆಯುತ್ತಲೋ ಊರು ನೋಡುವ ಪ್ರವಾಸಿಗರು
ಮಂದ ಬೆಳಕಿನಲಿ,ಮುರುಕಲು ಕುರ್ಚಿಗಳಲಿ, ಅಬ್ಬರದ ಸಂಗೀತದಲಿ ಕುಡಿಯುವವರು

ಗಗನ ಚುಂಬಕಗಳು, ತೆರೆದ ಕಂದಕಗಳು, ಕಂಬಕ್ಕೆ ಚೈನು ಕಟ್ಟಿದ ಸೈಕಲ್ಲುಗಳು
ಬೀದಿ ಸುತ್ತೋ ಪೋಲೀಸರು, ಅರಿವು ತಾಗಿದಾಗ ಮುಚ್ಚುವ ಕಿರುಗುಟ್ಟೋ ಬಾಗಿಲುಗಳು

ಕಿವಿಯ ಸೇರದ ಮೊಬೈಲಿನ ಕರೆಗಳೆಷ್ಟೋ, ಜೋರು ಗಂಟಳಿನ ಮಲ್ಯರ ದಾಸರೆಷ್ಟೋ
ಜನರ ಹೊಟ್ಟೆ ಹೊರೆಯಲು ಕೊಲ್ಲಲ್ಪಟ್ಟ ಪ್ರಾಣಿಗಳೆಷ್ಟೋ, ಖಾಲಿಯಾದ ಬಾಟ್ಲಿಗಳೆಷ್ಟೋ

ಮುಂಜಾನೆ ಘಂಟೆ ಒಂದಕ್ಕೆ ಎಲ್ಲೆಡೆ ಶಾಂತ, ಮತ್ತೆ ಮುಸ್ಸಂಜೆವರೆಗೆ ಎಲ್ಲೆಡೆ ಮೌನ
ಮತ್ತದೇ ಮುಂಜಾನೆ, ಇರುಳಿನ ಪಾಪ ಕಳೆಯಲು ಬೆಳಕಿನ ಸ್ನಾನ, ಮುಸ್ಸಂಜೆ ಕಡೆಗೆ ಗಮನ

No comments:

Post a Comment