Sunday, March 27, 2011

ದಕ್ಷ ನಾಯಕ ಬರಲಿದ್ದಾನೆ !

ದಿನ ನಿತ್ಯ ನೆಡೆವ ರಾಜಕೀಯ ಆಟಗಳಿಗೆ ಬೇಸತ್ತು, ಹೊಲಸು ರಾಜಕೀಯದಿಂದ ತಲೆಕೆಟ್ಟು, ಕರ್ನಾಟಕದ ಬಡ ಜನತೆಗೆ ಒಂದು ಶಾಶ್ವತ ಪರಿಹಾರ ಕೊಡಿಸುವ ಸದುದ್ದೇಶದಿಂದ, ಒಬ್ಬ ಸರಕಾರೀ ನೌಕರ ದೇವರನ್ನು ಕುರಿತು ತಪಸ್ಸು ಮಾಡಲು ಯೋಚಿಸಿದ.


ಆಯ್ತು, ಏನು ಮಾಡಬೇಕು ಎಂಬುದು ನಿರ್ಧಾರವಾಯ್ತು. ಸ್ಥಳ ಯಾವುದು ಎಂಬುದರ ಬಗ್ಗೆ ಯೋಚಿಸಿದ ಅವನಿಗೆ, ಒಂದು ಅದ್ಬುತವಾದ ಸ್ಥಳ ತಲೆಗೆ ಹೊಳೆಯಿತು. ಎರಡನೇ ಶನಿವಾರದ ಹಿಂದಿನ ದಿನವಾದ ಶುದ್ದ ಶುಕ್ರವಾರ ಸಂಜೆ ಜನರು ಕಂಡಲ್ಲೇ ಸಿಂಕ್ ಆಗುವ ಸಮಯದಿ ಹಳೇ ಕಡತಗಳ ಸೆಕ್ಷನ್’ಗೆ ಹೋಗಿ ಹತ್ತು ಹಲವು ಕಡತಗಳನ್ನು ಜೋಡಿಸಿಟ್ಟುಕೊಂಡು ಅದರ ಮಧ್ಯೆ ಕುಳಿತು ತಪಸ್ಸು ಆರಂಭಿಸಿದ.

ಉದ್ದೇಶ ಅದ್ಬುತವಾಗಿದ್ದರಿಂದ, ಹಲವಾರು ಪಕ್ಷಗಳ ಕಡೆಯಿಂದ ರಂಭೆ, ಊರ್ವಶಿಯರು ಇವನ ತಪಸ್ಸನ್ನು ಕೆಡಿಸಲು ಬಂದರು. ಥಕ ಧಿಮಿ ಎಂದು ಎರಡು ಹೆಜ್ಜೆ ಹಾಕಿದರೋ ಇಲ್ಲವೋ, ನೆಲದಿಂದ ಎದ್ದ ಧೂಳು ಅವರನ್ನು ಆವರಿಸಿ, ಮನೆ ಕಟ್ಟುವ ಕೆಲಸ ಮಾಡುವ ತಮಿಳುನಾಡಿನ ಸುಂದರಿಯಂತೆ ಗೋಚರಿಸಿದರು. ಒಂದೆಡೆ ತಮ್ಮ ಸೌಂದರ್ಯ ಕಳೆದುಕೊಂಡು ಇನ್ನೊಂದೆಡೆ ಆ ತಪಸ್ವಿಯೂ ಗೋಚರಿಸದೆ, ಬಂದ ದಾರಿಗೆ ಸುಂಕವಿಲ್ಲ ಎಂದು ಸಿಕ್ಕ ಆಟೋ ಹತ್ತಿ ಹೋದರು.

ಅಂತೂ ಇಂತೂ ಇವನ ತಪ್ಪಸ್ಸು ನಿರ್ವಿಘ್ನವಾಗಿ ಸಾಗಿತು.

ಅರಸು ಕಾಲದಲ್ಲಿ ತಪಸ್ಸಿಗೆ ಕುಳಿತವನಿಗೆ ನೆನ್ನೆ ವಿಧಾನ ಸಭೆಯಲ್ಲಿ ಸಿಕ್ಕಾಪಟ್ಟೆ ಗಲಟೆಯಾದ ಸಮಯದಲ್ಲಿ, ಎಲ್ಲರೂ ಪರಸ್ಪರ ಅವಾಚ್ಯ ಭಾಷೆಯಲ್ಲಿ ಕಿತ್ತಡುವಾಗ, ಭಗವನ್ನಾಮ ಸ್ಮರಣೆ ಮಾಡಲು ಪುರುಸೊತ್ತಿಲ್ಲ ಸಮಯದಲ್ಲಿ, ಭಗವಂತನಿಗೆ ಇವನ ಕಡೆ ಅಟೆಂಡ್ ಮಾಡುವ ಮನಸ್ಸಾಗಿ, ಹಾಗೇ ಲೈಟಾಗಿ, ಸೈಡ್ ಪೋಸಿನಲ್ಲಿ, ಇವನ ಮುಂದೆ ನಿಂತು, ಚಪ್ಪಾಳೆ ತಟ್ಟಿ, ವಾಯು ದೇವನ ಸಹಾಯದಿಂದ ಧೂಳನ್ನು ಹೊಡೆದೋಡಿಸಿ, ’ಸರಕಾರೀ ಕಂದ ಕಣ್ಣು ತೆರೆ’ ಎಂದ.

ಸರಾಕರೀ ಕಛೇರಿಯಲ್ಲಿ ಇಷ್ಟು ಒಳ್ಳೆಯ ಭಾಷೆಯಲ್ಲಿ ತನ್ನನ್ನು ಯಾರೂ ಕರೆಯಲು ಸಾಧ್ಯವಿಲ್ಲ ಎಂದು ಅರಿತಿದ್ದ ಇವನಿಗೆ, ಈ ಕರೆ ಖಂಡಿತ ಭಗವಂತನ ಕೊರಳಿನಾ ಕರೆ ಎಂದು ಅರ್ಥವಾಗಿ, ಕಣ್ಣು ತೆರೆದ. ಬಿಟ್ಟ ಕಣ್ಣನ್ನು ಹಾಗೇ ಬಿಟ್ಟುಕೊಂಡು ನೋಡುತ್ತಿದ್ದವನಿಗೆ ಏನು ಹೇಳಬೇಕೆಂದು ಅರ್ಥವಾಗದೆ ದೇವ ನುಡಿದ ’ಏಕೆ ಮಗೂ. ಖಂಡಿತ ನಾನೇ ಬಂದಿರುವುದು. ಕನಸಲ್ಲ’ ಎಂದ. ನೌಕರ ನುಡಿದ ’ಅಪ್ಪಾ, ತಂದೆ. ನಿನ್ನ ದನಿ ಕೇಳ್ತಿದೆ. ನೀನು ಕಾಣ್ತಿಲ್ಲ. ನನ್ನ ಕನ್ನಡಕ ಎಲ್ಲಿ’ ಎಂದ.

ತನ್ನ ಜ್ಞ್ನಾನ ಔಟ್-ಡೇಟೆಡ್ ಆಗಿರುವುದನ್ನು ಅರಿತ ದೇವ, ಅವನ ಕಣ್ಣನ್ನು ಮೊದಲು ಸರಿಪಡಿಸಿದ. ಅದರ ಜೊತೆಗೆ ಈಚೆಗಿನ ವಿದ್ಯಮಾನಗಳೆಲ್ಲ ಇವನ ಮನಸ್ಸಿಗೆ ಅಪ್-ಲೋಡ್ ಕೂಡ ಮಾಡಿದ ದೇವ ನುಡಿದ ’ಏನು ವರ ಬೇಕು ಕೇಳಿಕೋ’. ನೌಕರ ನುಡಿದ ’ಖಂಡಿತ ಕೇಳಿಕೊಳ್ಳುತ್ತೇನೆ. ಮೊದಲು ನನಗೆ ಕೆಲವು ಡೌಟ್ಸ್ ಇದೆ. ಅದನ್ನು ಕೇಳಲೇ?’... ಬೇರೆ ಯಾವ ಕಾಲ್ಸ್, ಲೈನ್’ನಲ್ಲಿ ಇಲ್ಲ ಎಂದು ಅರಿತ ದೇವ ’ಸರಿ’ ಎಂದ.

’ಇಷ್ಟು ವರ್ಷಗಳಿಂದ ತಪಸ್ಸು ಮಾಡುತ್ತಿದ್ದೇನೆ. ಇಷ್ಟು ಲೇಟಾಗಿ ಬಂದಿದ್ದೀಯಲ್ಲ. ಯಾಕೆ’. ದೇವ ನುಡಿದ ’ಇಲ್ಲವಲ್ಲ. ಹಿಂದಿನ ಯುಗದ ತಪಸ್ವಿಗಳಿಗೆ ಹೋಲಿಸಿದಲ್ಲಿ ನಿನ್ನ ಮುಂದೆ ಬೇಗ ಪ್ರತ್ಯಕ್ಷನಾಗಿದ್ದೇನೆ. ನಮ್ಮಲ್ಲೂ ಕಂಪ್ಯೂಟರ್’ಗಳು ಬಂದು, ತಪಸ್ಸಿನ ಕೇಸ್’ಗಳನ್ನು ಬೇಗ ಕ್ಲಿಯರ್ ಮಾಡುತ್ತಿದ್ದೇವೆ’ ಎಂದ ದೇವ. ಬೆಂಗಳೂರಿಗೆ ಕಾಲಿಟ್ಟ ಪ್ರಭಾವವೋ ಏನೋ, ಒಂದೇ ಘಳಿಗೆಯಲ್ಲಿ, ದೇವ ಭಾಷೆ ಮರೆತು ಬೆಂಗಳೂರಿನ ಕನ್ನಡ ಮಿಶ್ರಿತ ಆಂಗ್ಲ ಸರಾಗವಾಗಿ ಹರಿಯುತ್ತಿತ್ತು.

’ನಿನ್ನ ಲೆಕ್ಕದಲ್ಲಿ, ನಮ್ಮ ಒಂದು ದಿವಸ ಎಷ್ಟು’ ಎಂದು ಎಂಕ್ವೈರಿ ಮಾಡಿದ ಮಾನವ. ’ಪಿತೃ ದೇವತೆಗಳ ಲೆಕ್ಕದಲ್ಲಿ ನಿನ್ನ ಒಂದು ವರ್ಷ, ಅವರುಗಳಿಗೆ ಒಂದು ದಿವಸ’ ಎಂದ ದೇವ. ಮಾನವ ನುಡಿದ ’ಮೊನ್ನೆ ತಾನೇ ಮಹಾಲಯ ಮುಗಿದಿದೆ ಅಂತ ನನಗೆ ಗೊತ್ತು ದೇವ. ನವರಾತ್ರಿ ಸಮಯದಲ್ಲಿ ಈ ಮಾತೇಕೆ. ನನ್ನ ಒಂದು ನಿಮಿಷ ನಿನ್ನ ಲೆಕ್ಕದಲ್ಲಿ ಎಷ್ಟು ಅದನ್ನು ತಿಳಿಸು ಸಾಕು’ ಎಂದ

ಈ ಬಾರಿ ದೇವ ಯೋಚಿಸಿದ ’ನಾನು ನಿಖರವಾಗಿ ಹೇಳಿದರೆ, ಇವನಿಗೆ ಅರ್ಥವಾಗುತ್ತದೋ ಇಲ್ಲವೋ. ಹಾಗಾಗಿ ಇವನಿಗೆ ಅರ್ಥವಾಗುವ ಭಾಷೆಯಲ್ಲಿ ಸಿಂಪಲ್ಲಾಗಿ ಹೇಳಿದರೆ ಹೇಗೇ ಅಂತ. ಮತ್ತೆ ನುಡಿದ ’ನಿನ್ನ ಲೆಕ್ಕದ ಅರವತ್ತು ವರ್ಷಗಳು. ನನಗೆ ಒಂದು ನಿಮಿಷದ ಲೆಕ್ಕ ಅರ್ಥವಾಯಿತೇ?’

ನೌಕರ ನುಡಿದ ’ಓ! ಹಾಗೆ ಸಮಾಚಾರ. ಅಂದರೆ ಭಾರತಕ್ಕೆ ಸ್ವಾತಂತ್ರ್ಯ ಬಂದು, ನಿನ್ನ ಲೆಕ್ಕದ ಒಂದೇ ನಿಮಿಷದಲ್ಲಿ ಎಕ್ಕುಟ್ಟೋಗಿದೆ ಅನ್ನು’. ರಾಜಕೀಯ ವಿಷಯದಲ್ಲಿ ತಲೆ ಹಾಕುವುದು ಬೇಡವೆಂದು ನಿರ್ಧರಿಸಿ ದೇವ ನುಡಿದ ’ಆ ವಿಷಯ ಹಾಗಿರಲಿ. ನನಗೆ ಸಮಯ ಮೀರುತ್ತಿದೆ. ನಿನಗೇನು ವರ ಬೇಕು ಕೇಳಿಕೋ’ ಎಂದು.

ನೌಕರ ನುಡಿದ ’ಸ್ವಾಮೀ. ನನಗೆಂದು ನಾನೇನೂ ಕೇಳಲಾರೆ. ಈ ನಾಡಿಗೆ, ಪರ ಸ್ತ್ರೀಯನ್ನು ತನ್ನ ಸೋದರಿಯಂತೆ ಕಾಣುವ, ಪರರ ಧನವನ್ನು ಕಾರ್ಕೋಟಕ ಸರ್ಪದಂತೆ ಕಾಣುವ, ಪ್ರಜೆಗಳ ಸುಖವನ್ನು ತನ್ನ ಸುಖದಂತೆ ಕಾಣುವ; ಜಾತಿ, ಮತ ಭೇದ ಮಾಡದೆ ನ್ಯಾಯ, ನೀತಿ ತೋರುವ ಒಬ್ಬ ದಕ್ಷ ನಾಯಕನನ್ನು ನೀಡು’ ಎಂದ.

ಅಬ್ಬಬ್ಬ! ಇಂತಹ ಮನುಷ್ಯರೂ ಇದ್ದಾರೆಯೇ ಎಂದು ದಿಗ್ಭ್ರಮೆಗೊಂಡ ದೇವ. ಇವನಿಗೆ ಮೋಕ್ಷ ಗ್ಯಾರಂಟಿ ಎಂದು ನೋಟ್ ಮಾಡಿಕೊಂಡ.

ನಂತರ ಇವನ requirements ಕಡೆ ಮತ್ತೊಮ್ಮೆ ದೀರ್ಘವಾಗಿ ನೋಡಿ, ನುಡಿದ ’ಮಗೂ, ಈ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳಲು, ಒಂದು ತುರ್ತು ಸಮಿತಿಯನ್ನು ರಚಿಸಬೇಕು. ಒಂದು ನಿಮಿಷದಲ್ಲಿ ಬರುತ್ತೇನೆ’ ಎಂದು ಅಂತರ್ಧಾನನಾದ.

ಇಂಗು ತಿಂದ ಮಂಗನಂತೆ ಕುಳಿತಿದ್ದ ಮಾನವ ನುಡಿದ ’ದೇವಾ ... ನಿನ್ನ ಒಂದು ನಿಮಿಷವೋ, ಇಲ್ಲಾ ನನ್ನ ಒಂದು ನಿಮಿಷವೋ?’


No comments:

Post a Comment