Sunday, March 27, 2011

ದೂರದರ್ಶನದ ಆ ದಿನಗಳು ...

ಸಂಜೆ ನಾಲ್ಕು ಘಂಟೆ ಐವತ್ತೈದು ನಿಮಿಷ. ಮನೆಯ ಕಪ್ಪು ಬಿಳುಪು ಟಿ.ವಿ ಆನ್ ಆಯಿತು. ಅಂದು ನಮಗೆ ಕಲರ್ ಟಿ.ವಿ ಅಂದ್ರೆ ಆಗ್ತಿರಲಿಲ್ಲ ... ಯಾಕೆ ಅಂದ್ರ? ನಮ್ಮ ಮನೆಯಲ್ಲಿ ಇರಲಿಲ್ಲವಲ್ಲ ಅದಕ್ಕೆ !

ಹೋಗ್ಲಿ ಬಿಡಿ, ಗಿಜಿ ಗಿಜಿ ಗಿಜಿ ಸದ್ದಿನೊಂದಿಗೆ ಗಿಜಿ ಗಿಜಿ ದರ್ಶನ. ಪ್ರತಿ ಹದಿನೈದು ಸೆಕೆಂಡ್’ಗೆ ಘಂಟೆ ನೋಡೋದು.
"ಒಂದೆರಡು ನಿಮಿಷ ಬೇಗ ಶುರು ಮಾಡಿದರೆ ಇವರ ಗಂಟೇನು ಹೋಗುತ್ತೆ?" "ಸ್ಕ್ರೀನ್ ಮೇಲೆ ಬರೋ ಮುಂಚೆ ಮುಖಕ್ಕೆ ಪೌಡರ್ ಬಳಿದುಕೊಳ್ಳಬೇಡವೇ?" "ನೋಡು ಆಗಲೇ ಐದಾಯ್ತು. ಇನ್ನೂ ಬರಲಿಲ್ಲ ಜನ" "ಮನೆ ಗಡಿಯಾರ ಸ್ವಲ್ಪ ಮುಂದಿದೆ" "ಶುರು ಮಾಡೋದು ಈ ಲಕ್ಷಣ. ಜೊತೆಗೆ ಪ್ರತೀ ಸಾರಿ ಜಾಹೀರಾತು ಆದ ಮೆಲೆ ಒಂದು ನಿಮಿಷ ಆಗಿರೋದನ್ನೇ ತೋರಿಸೋದು. ಕೊನೆಗೆ ಸಮಯ ಸಾಕಾಗಲಿಲ್ಲ ಅಂತ ಕಟ್ ಮಾಡೋದು"
ಅಕ್ಕಿ-ಕಾಳುಗಳ ದರ್ಶನ ಮಾಯವಾಗಿ, ಪಟಾ-ಪಟಿ ಮೂಡಿತು. ಜೊತೆಗೆ ಕುಯ್ಯ್ ಅಂತ ಶಬ್ದ.
"ಅಬ್ಬ, ಅಂತೂ ಶುರುವಾಯ್ತು ನೋಡು"
ನಂತರ ದೂರದರ್ಶನದ ಚಿನ್ಹೆಯು ದೂರದಲ್ಲಿ ಕಾಣಿಸ ತೊಡಗಿ, ಅದರೊಂದಿಗೆ ಇಂಪಾದ ಸಂಗೀತವೂ ಶುರುವಾಯ್ತು. ನಮ್ಮಜ್ಜಿ ಟಿ.ವಿ. ಬದಿಯಲ್ಲಿ ಚೇರ್ ಹಾಕಿಕೊಂಡು ಕೂತಿದ್ದರು. ಪರದೆಯ ಮೇಲೆ ’ಅಪರ್ಣ’ ಅವರ ಮುಖ ಮೂಡಿದ ಕೂಡಲೇ ಇವರೂ ಮುಂದೆ ಬಗ್ಗಿದರು "ಸ್ವಲ್ಪ ಹಿಂದೆ ಬನ್ನಿ ಅಜ್ಜೀ ... ಬರೀ ನಿಮ್ಮ ತಲೆ ಕಾಣ್ತಿದೆ". ಸೋಫಾ ಅಲಂಕರಿಸಿದ್ದವರಲ್ಲಿ ಒಂದಿಬ್ಬರು ತಾವಾಗೇ ಕೆಳಗಿಳಿದರು.
"ಟಿ.ವಿ ಮೇಲೆ ಸರಿಯಾಗಿ ಲೈಟ್ ಬೀಳ್ತಿದೆ. ಆ ಓಣಿ ಲೈಟ್ ಆರಿಸ್ರೋ". ಒಂದು ನಿಮಿಷ ಕಳೆಯಿತು. "ಯಾರಿಗೂ ಏಳೋಕ್ಕೆ ಕೈಲಾಗೋಲ್ಲ. ನಾನೇ ಏಳ್ತೀನಿ. ಈ ಗೋಡೆ ಕಡೆ ನನ್ನ ಜಾಗ. ಯಾರೂ ಕೂತ್ಕೋಕೂಡ್ದು". ಸಿಡುಗುಟ್ಟಿಕೊಂಡೇ ಎದ್ದು ದೀಪವಾರಿಸಿ ಮತ್ತೆ ಕುಳಿತುಕೊಂಡರವರು.
ಇದು ಅಂದಿನ ದಿನಗಳ ಒಂದು ಸಣ್ಣ ನೋಟವಷ್ಟೇ.... ಇಂದು, ಆರದ ನಂದಾದೀಪದಂತೆ ಇಪ್ಪತ್ತು ನಾಲ್ಕು ಘಂಟೆ, ನೂರಾರು ಚಾನಲ್’ಗಳಲ್ಲಿ, ಒಂದಲ್ಲಾ ಒಂದು ಕಾರ್ಯಕ್ರಮಗಳು ಮೂಡಿ ಬರುತ್ತಲೇ ಇರುವಾಗ ಇಂತಹ ದೃಶ್ಯಗಳು ಮತ್ತೆ ಬರಲಾರವು ಅಲ್ಲವೇ?
ದಿನ ನಿತ್ಯದಲ್ಲಿ, ಸಂಜೆ ಐದಕ್ಕೆ ಕಾರ್ಯಕ್ರಮಗಳು ಶುರುವಾದರೆ ರಾತ್ರಿ ಎಂಟೂವರೆಗೆ (ಅಥವಾ ಎಂಟೂ-ನಲವತ್ತು?) ರಾಷ್ಟ್ರೀಯ ಕಾರ್ಯಕ್ರಮಕ್ಕೆ ಬಿಟ್ಟು ಕೊಡಲೇಬೇಕು. ಮಧ್ಯೆ ಏಳೂವರೆಗೆ ’ಕನ್ನಡದಲ್ಲಿ ವಾರ್ತೆ ”ಕೃಷ್ಣಾ ಗಲಗಲಿ ಅಥವಾ ಈಶ್ವರ್ ದೈತೋಟ’ ಅವರಿಂದ’.
ಎಷ್ಟೋ ಬಾರಿ, ಕಡೆಯಲ್ಲಿ ಕನ್ನಡದವರು ಇನ್ನೂ ಏನೋ ಹೇಳುತ್ತಿರುವಾಗಲೇ ರಾಷ್ಟ್ರೀಯ ಚಾನಲ್’ನವರು ಮುಖಕ್ಕೆ ಅಪ್ಪಳಿಸಿದಂತೆ ರಪ್ಪನೆ ಮುಖ ತೋರುತ್ತಿದ್ದರು. ನಮ್ಮ ಮನೆಯ ಸಕಲ ಕನ್ನಡ ಪ್ರೇಮಿಗಳೂ ಯಥಾಶಕ್ತಿ ಬೈದು ಕೊಂಡು, ಅದರಲ್ಲಿ ಒಬ್ಬರು ತಮ್ಮ ಕೋಪವನ್ನು ಆನ್/ಆಫ್ ನಾಬ್ ಮೇಲೆ ತೋರುತ್ತಿದ್ದರು.
ತಕ್ಷಣವೇ ಹಿಂದಿನಿಂದ ಹಿರಿಯರು "ಮೆತ್ತಗೆ ... ಸ್ವಿಚ್ ಕೈಗೇ ಬಂದೀತು" "ವಾಲ್ಯೂಮ್ ಕಡಿಮೆ ಮಾಡದೆ ಆರಿಸಬೇಡಿ ಎಂದು ಎಷ್ಟು ಹೇಳಿದರೂ ಯಾರಿಗೂ ಅರ್ಥವೇ ಆಗೋಲ್ಲ" "ಮೊನ್ನೆ ಸುಬ್ಬಣ್ಣನ ಮನೆಯಲ್ಲಿ ಹೀಗೇ ಆಗಿ ಟಿ.ವಿ ಆನ್ ಮಾಡಿದ ಕೂಡಲೇ ಹೈ-ವೋಲ್ಟೇಜ್’ನಿಂದಾಗಿ ಜೋರಾಗಿ ಶಬ್ದ ಬಂದು, ಟಿ.ವಿ ಕೆಟ್ಟೇ ಹೋಯ್ತಂತೆ" "ಅದೇನೋ ಹೊಸದಾಗಿ ಸ್ಟೆಬಿಲೈಜರ್ ಅಂತ ಬಂದಿದೆಯಂತೆ? ಅದನ್ನು ತರಬೇಕು"
ಇಂದಿನವರಿಗೆ ನಗು ಬರಬಹುದು. ಅಂದಿನ ಹಲವು ಟಿ.ವಿ.ಗಳಿಗೆ ಬಾಗಿಲು/ಬೀಗ ಇತ್ತು. ಶಾಲೆಗಳಲ್ಲಿ ನನ್ನ ಕೆಲವು ಸ್ನೇಹಿತರು ಅದೇನು ನಾಟಕ ಆಡುತ್ತಿದ್ದರು ಎಂದರೇ ’ನಮ್ಮಪ್ಪ ಟಿ.ವಿ. ನೋಡಿದರೆ ಹಾಳಾಗ್ತೀರ ಅಂತ ಹೇಳಿ ಬೀಗ ಹಾಕಿ, ಕೀ ಆಫೀಸ್’ಗೆ ತೊಗೊಂಡು ಹೋಗ್ತಾರೆ ಗೊತ್ತಾ’ ಅಂತ ಒಬ್ಬ ಅಂದರೆ, ಮತ್ತೊಬ್ಬ ’ನಮಗೆ ಪರೀಕ್ಷೆ ಇದ್ದರೂ ಸರಿ, ಕ್ವಿಜ್ ಕಾರ್ಯಕ್ರಮ ನೋಡಲೇಬೇಕು. ಇಲ್ದೆ ಇದ್ರೆ ನಮ್ಮಪ್ಪ ಬೈತಾರೆ ಗೊತ್ತಾ’ ಅಂತ ಇನ್ನೊಬ್ಬ.
ಬರೀ ಇತರೇ ಪುರಾಣ ಅಯ್ತು ಅಂದಿರಾ? ಈ ದೃಶ್ಯಗಳು ಅಂದಿನ ಮಧ್ಯಮವರ್ಗದವರ ಮನೆಯಲ್ಲಿ ಸಾಮಾನ್ಯ ದೃಶ್ಯ. ಹೋಗ್ಲಿ ಬಿಡಿ, ಅಂದಿನ ಕೆಲವು ಕಾರ್ಯಕ್ರಮಗಳತ್ತ ಒಂದು ಕಿರುನೋಟ ಬೀರೋಣ ....
ಸೋಮವಾರ ಸಂಜೆ ಏಳು ಘಂಟೆಗೆ ’ಶ್ರೀ. ಬಾಲಮುರುಳಿಕೃಷ್ಣ’ ಅವರು ನೆಡೆಸಿ ಕೊಡುತ್ತಿದ್ದ ಒಂದು ಕಾರ್ಯಕ್ರಮ ’ನಾದಲಹರಿ’ (?). ಪ್ರತಿ ವಾರ ಒಂದೊಂದು ರಾಗದ ಬಗ್ಗೆ ಮಾಹಿತಿ ನೀಡುತ್ತ, ಆ ರಾಗವನ್ನು ಸಿನಿಮಾದಲ್ಲಿ ಹೇಗೆ ಅಳವಡಿಸಿಕೊಳ್ಳಲಾಗಿದೆ ಎಂದು ಒಂದೆರಡು ಹಾಡುಗಳ ಉದಾಹರಣೆ ಕೊಡುತ್ತಿದ್ದರು. ರಾಗದ ಬಗ್ಗೆ ಹೇಳುವಾಗ ಇರದ ಆಸಕ್ತಿ ಸಿನಿಮಾ ಹಾಡುಗಳು ಮೂಡಿದ ತಕ್ಷಣ ಧಿಡೀರನೆ ಬರುತ್ತಿತ್ತು !
ವಾರದ ಐದು ದಿನಗಳು ಏಳು ಘಂಟೆಯಿಂದ ಏಳೂವರೆಯವರೆಗೂ ಮೂಡಿ ಬರುತ್ತಿದ್ದ ಕೆಲವು ಧಾರಾವಾಹಿಗಳೆಂದರೆ ಬದುಕು ಜಟಕಾ ಬಂಡಿ, ಬಿಸಿಲುಕುದುರೆ, ತಿರುಗುಬಾಣ, ಬೃಂಗದ ಬೆನ್ನೇರಿ ಬಂತು, ರೈತ-ಯೋಧ, ಮಾಸ್ಟರ್ ಮಂಜುನಾಥ್’ರ ಮೆಕ್ಯಾನಿಕ್ ಮುದ್ದ, ಚಂದ್ರು ಅವರ ಕಂಡಕ್ಟರ್ ಕರಿಯಪ್ಪ ಇತ್ಯಾದಿ.
ಹಲವು ಧಾರಾವಾಹಿಗಳು ಎಂಟು ಘಂಟೆಯಿಂದ ಎಂಟೂವರೆಯವರೆಯ ತನಕ ಬರುತ್ತಿದ್ದವು. ನಾಗಾಭರಣರ ಕುತೂಹಲಕಾರಿ ಧಾರಾವಾಹಿಯಾದ ’ಗುಡ್ಡದಭೂತ’, ಅಜಿತನ ಸಾಹಸಗಳು, ರಮೇಶ್ ಭಟ್ ಅವರ ’ಕ್ರೇಜಿ ಕರ್ನಲ್’ ಹೀಗೆ.
ಬುಧವಾರದ ರಾಷ್ಟ್ರೀಯ ಕಾರ್ಯಕ್ರಮ ಮಾತ್ರ ಎಂಟಕ್ಕೇ ಶುರು. ಅದು ’ಚಿತ್ರಹಾರ್’ ಕಾರ್ಯಕ್ರಮ. ಸೊಗಸಾದ ಹಿಂದಿ ಹಾಡುಗಳನ್ನು ಈ ಮುನ್ನ ಕೇಳಿದ್ದರೂ ಆ ಹಾಡುಗಳನ್ನು ನೋಡುವ ಭಾಗ್ಯ ಸಿಕ್ಕಿದ್ದು ಇಲ್ಲಿ.
ದಿನ ನಿತ್ಯ ಒಂಬತ್ತು ಘಂಟೆಯವರೆಗೂ ನಮ್ಮ ಮನೆಯಲ್ಲಿ ನೆಡೆಯುತ್ತಿದ್ದ ಟ್ಯೂಷನ್ನಿಂದಾಗಿ ಗಿಜಿ ಗಿಜಿ ಎನ್ನುತ್ತಿದ್ದರೂ, ಗುರುವಾರದಂದು ಮಾತ್ರ ಬೆಂಗಳೂರು ಬಂದ್ ರೀತಿ ಬಿಕೋ ಎನ್ನುತ್ತಿದ್ದವು. ಟೀಚರ್’ಗೆ ಬಿಡುವಿದ್ದರೂ ಮಕ್ಕಳು ಬ್ಯುಸಿ !!!
ಆರೂವರೆಗೆ ಟಿ.ವಿಯನ್ನು He-Man, the master of the universe ಎಂಬ ಅನಿಮೇಶನ್ ಧಾರಾವಾಹಿ ದಾಳಿ ಮಾಡಿದರೆ, ಎಂಟಕ್ಕೆ ಅತ್ಯಂತ ಜನಪ್ರಿಯ ’ಚಿತ್ರಮಂಜರಿ’ ಅಡಿಯಿಡುತ್ತಿತ್ತು. ಎಲ್ಲಿದ್ದರೂ ಅಷ್ಟು ಹೊತ್ತಿಗೆ ಮನೆ ಸೇರುವ ತವಕ. ಸೊಗಸಾದ ಹಾಡುಗಳನ್ನು ನೋಡಿ ಆನಂದಪಡುತ್ತಿದ್ದು, ಎಂಟೂವರೆಗೆ ’ಇನ್ನರ್ಧ ಘಂಟೆ ಹಾಕಿದ್ದರೆ ಇವರಪ್ಪನ ಮನೆ ಗಂಟೇನು ಹೋಗುತ್ತಿತ್ತು’ ಎಂದು ಬೈದುಕೊಳ್ಳದೇ ಇರುತ್ತಿರಲಿಲ್ಲ. ಸಾಧಾರಣ ಯಶಸ್ಸು ಕಂಡಿದ್ದ ಚಿತ್ರವೊಂದರ ಹಾಡು, ಚಿತ್ರಮಂಜರಿಯಲ್ಲಿ ಪ್ರಥಮ ಬಾರಿಗೆ ಮೂಡಿ ಬಂತು. ಮರು ದಿನದಿಂದ ಆ ಸಿನಿಮಾ ನೋಡಲು ನೂಕು ನುಗ್ಗಲು. ’ಹೌಸ್ ಫುಲ್’ ಬೋರ್ಡ್ ಅಂತೂ ಸಾಮಾನ್ಯ ದೃಶ್ಯ. ಚಿತ್ರ ಇಪ್ಪತ್ತೈದು ವಾರ ಓಡಿ, ಕನ್ನಡ ಚಿತ್ರರಂಗದಲ್ಲಿ ಹೊಸ ಶಕೆ ಆರಂಭವಾಯಿತು. ಸಿನಿಮಾ ಹೆಸರು ಗೊತ್ತಲ್ಲ?
ರಾಷ್ಟ್ರೀಯ ವಾರ್ತೆಗೆ ’ನೀತಿ ರವೀಂದ್ರನ್’ ಅಥವಾ ’ಗೀತಾಂಜಲಿ ಅಯ್ಯರ್’ ಬಂದಾಗ ಸ್ವಲ್ಪ ಹೊತ್ತು ನೋಡಿ ಆಮೇಲೆ ಸ್ವಲ್ಪ ಹೊತ್ತು ಟಿ.ವಿ ಬಂದ್.
ದಿನ ನಿತ್ಯ ಹಿಂದಿ ವಾರ್ತೆಯ ನಂತರ ಮೂಡಿ ಬರುತ್ತಿದ್ದ ಹಲವು ಸೊಗಸಾದ ಹಿಂದೀ ಧಾರಾವಾಹಿಗಳೆಂದರೆ ’ನುಕ್ಕಡ್’, ’ಯಾತ್ರಾ’, ’ಬುನಿಯಾದ್’, ’ಸರ್ಕಸ್’, ’ಫೌಜಿ’, ’ಏ ಜೋ ಹೇ ಜಿಂದಗಿ’ ಇತ್ಯಾದಿಗಳು
ಇದೆಲ್ಲಕ್ಕೂ ಕಳಶಪ್ರಾಯದಂತೆ, ಕನ್ನಡಿಗನೊಬ್ಬ ರಾಷ್ಟ್ರಮಟ್ಟ ಏರಿ ಅಲ್ಲಿ ತನ್ನ ಛಾಪನ್ನು ಮೂಡಿಸಿದ ’ಮಾಲ್ಗುಡಿ ಡೇಸ್’. ಆರ್.ಕೆ.ನಾರಾಯಣ್ ಅವರ ಹಲವು ಪುಸ್ತಕಗಳಿಂದ ಆಯ್ದ ಕಥೆಗಳ ಸರಣಿ ಇದು. ಶೀರ್ಷಿಕೆ ಗೀತೆ ಶುರುವಾದರೇ ಮೈ ಪುಳಕ. ಆರ್.ಕೆ.ಲಕ್ಷ್ಮಣ್ ಅವರ ವ್ಯಂಗ್ಯಚಿತ್ರವನ್ನೊಳಗೊಂಡ ಶೀರ್ಷಿಕೆ ಕಾರ್ಡ್ ತುಂಬಾ ಭಿನ್ನವಾಗಿತ್ತು. ಕೊನೆಯ ಕಾರ್ಡ್’ನಲ್ಲಿ ’ಶಂಕರ್ ನಾಗ್’ ಹೆಸರು ಕಂಡ ಕೂಡಲೇ ಏನೋ ಆನಂದ. ಹದಿಮೂರು ಎಪಿಸೋಡ್’ಗಳು ಮುಗಿದಾಗ, ಯಾಕೆ ಮುಂದುವರೆಸಬಾರದು ಎಂಬ ಪ್ರಶ್ನೆಗೆ ಯಾರಿಗೂ ಉತ್ತರ ಸಿಗಲಿಲ್ಲ.
ಇನ್ನು ಶನಿವಾರ. ಕನ್ನಡ ಚಲಚಿತ್ರದ ದಿನ. ಐದು ಘಂಟೆಗೆ ಮನೆಯ ಎಲ್ಲ ಕೆಲಸ ಮುಗಿದಿರಬೇಕು. ಇಲ್ಲವೆಂದರೆ ಅದು ಪಕ್ಕಕ್ಕೆ. ಆಮೇಲೆ ನೋಡಿಕೊಂಡರಾಯಿತು ಅಂತ. ನಂತರ ಬರುವ ದೃಶ್ಯವೇ, ಈ ಲೇಖನದ ಮೊದಲಿಗೆ ಹೇಳಿದ್ದು !!
ಆರಂಭದಲ್ಲಿ ಕೆಲವರ ಮನೆಯಲ್ಲಿ ಮಾತ್ರ ಟಿ.ವಿ.ಗಳಿದ್ದವು. ಇದ್ದುದರಲ್ಲಿ ಹೆಚ್ಚು ಮಂದಿಯ ಮನೆಯಲ್ಲಿ ಕಪ್ಪು-ಬಿಳುಪು ಟಿ.ವಿ. ಶನಿವಾರ ಸಂಜೆ ಚಲನಚಿತ್ರಕ್ಕೆ ಟಿ.ವಿ. ಇರದವರು ಇರುವವರ ಮನೆಯಲ್ಲಿ ಸೇರುತ್ತಿದ್ದೆವು. ಒಮ್ಮೆ ಹೀಗೇ ಆಯ್ತು. ಹೀಗೇ ಯಾರದೋ ಮನೆಯಲ್ಲಿ ಸೇರಿದ್ದೆವು. ಸೊಗಸಾದ ರಾಜಕುಮಾರ್ ಚಿತ್ರ ಬರುತ್ತಿತ್ತು. ಜೋರಾಗಿ ಟಿ.ವಿ ಹಾಕಿ ಎಲ್ಲರೂ ತಲ್ಲೀನರಾಗಿದ್ದೆವು. ಬಾಗಿಲು ಯಾರೋ ತಟ್ಟುತ್ತಿದ್ದರು. ಅವರು ಏಳಲಿ ಇವರು ಏಳಲಿ ಎಂದುಕೊಂಡು ಜನ ಸುಮ್ಮನೆ ಇದ್ದರು. ಇದ್ದಕ್ಕಿದ್ದಂತೆ ಮನೆ ಯಜಮಾನಿ ಸಮಯ ನೋಡಿ ಧಡಾರನೆ ಎದ್ದು ಹೋಗಿ, ಹತ್ತು ನಿಮಿಷ ಮನೆಯ ಬಾಗಿಲು ಬಡಿದ ಯಜಮಾನರಿಗೆ ಬಾಗಿಲು ತೆರೆದರು !
ಹಲವು ಕುಟುಂಬಗಳು ಒಂದೆಡೆ ಸೇರಿ ಅವರ ಮನೆಯನ್ನು ಮಿನಿ ಸಿನಿಮಾ ಮಂದಿರ ಮಾಡುತ್ತಿದ್ದೆವು. ಕೆಲವರು ಸಿನಿಮಾ ನೋಡುವಾಗ ಎಷ್ಟರ ಮಟ್ಟಿಗೆ ಮುಳುಗಿ ಹೋಗಿರುತ್ತಾರೆ ಎಂದು ನಾನು ನೋಡಿದ್ದು ಆ ದಿನಗಳಲ್ಲಿ.
ನಮ್ಮ ಮನೆಯ ಹಿಂದಿನ ಬೀದಿಯಲ್ಲಿ ’ಕಸ್ತೂರಿ’ ಆಂಟಿಯ ಮನೆ. ಯಾವ ಹೆಂಗಸರೂ ಅವರ ಪಕ್ಕದಲ್ಲಿ ಕುಳಿತು ಸಿನಿಮಾ ನೋಡಲು ಅಂಜುತ್ತಿದ್ದರು. ಖಳನಾಯಕನು ನಾಯಕಿಯನ್ನು ಅಟ್ಟಿಸಿಕೊಂಡು ಹೋಗುತ್ತಿದ್ದ ದೃಶ್ಯ ಬಂದಾಗ, ಇವರ, ಪಕ್ಕದಲ್ಲಿದ್ದವರ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡು ಬಿಡುತ್ತಿದ್ದರು. ಹಾಗೆ ಅಟ್ಟಿಸಿಕೊಂಡು ಹೋಗುವಾಗ ನಾಯಕಿ ಬೆಡ್ ರೂಮಿನ ಕಡೆ ಹೋದರಂತೂ ಇವರು ಕಣ್ಣೀರು ಹಾಕುತ್ತ ’ಬೇಡ ಕಣೆ, ಬೇಡ ಕಣೆ ಹೋಗಬೇಡಾ’ ಎನ್ನುತ್ತಿದ್ದರು. ಆ ಸಮಯಕ್ಕೆ ದೇವರಂತೆ ನಾಯಕ ಬಂದರಂತೂ ಇವರ ಆನಂದಕ್ಕೆ ಪಾರೇ ಇಲ್ಲ. ಅವನು ಖಳನಾಯಕನಿಗೆ ಒಂದೊಂದು ಬಾರಿ ಹೊಡೆದಾಗಲೂ ಇವರು ಪಕ್ಕದವರ ತೊಡೆಯ ಮೇಲೆ ಫಟೀರೆಂದು ಹೊಡೆಯುತ್ತ ’ಹೊಡಿ ಕಣೋ ನೀನು. ಇನ್ನೂ ಹೊಡಿ’ ಎಂದು.
ಭಾನುವಾರ ಬೆಳಿಗ್ಗೆ ಸುಪ್ರಭಾತವಾಗುತ್ತಿದ್ದುದು "ರಂಗೋಲಿ"ಯಿಂದ. ಶಶಿಕಪೂರ್, ಶಮ್ಮಿಕಪೂರ್ ಇತ್ಯಾದಿ ನಟರ ಕುಣಿತಕ್ಕೆ ಮಾರುಹೋಗಿದ್ದು ಅಂದೇ !
ಅದು ಮುಗಿದ ಕೂಡಲೇ, ಧಡ ಧಡ ಎದ್ದು ನಿತ್ಯಕರ್ಮಗಳನ್ನು ಮುಗಿಸಿ ಎಂಟೂವರೆಗೆ ಮತ್ತೆ ಟಿ.ವಿ ಮುಂದೆ ಪ್ರತ್ಯಕ್ಷ.
ಈಗ ’ಮುನ್ನೋಟ’ - ವಾರದ ಕಾರ್ಯಕ್ರಮಗಳತ್ತ ಒಂದು ಕಿರುನೋಟ ಎಂದು ಅವರು ಹೇಳುತ್ತಿದ್ದರೇ, ಗುರುವಾರ ಯಾವ ಹಾಡು, ಶನಿವಾರ ಯಾವ ಸಿನಿಮಾ ಎಂದೇ ತವಕ. ಗುರುವಾರ ಎಂಟು ಘಂಟೆಗೆ ಚಿತ್ರಮಂಜರಿ ಎಂದು ಹೇಳಿ ಶುಕ್ರವಾರಕ್ಕೆ ಹೋದರೆ ಅರ್ಧ ಉತ್ಸಾಹ ಕಡಿಮೆಯಾಗುತ್ತಿತ್ತು. ಶನಿವಾರದ ಸಿನಿಮ ಹೆಸರು ಹೇಳದೆ ಇದ್ದರಂತೂ ಮುಂದಿನ ಶನಿವಾರ ಪೇಪರ್ ಬರುವ ತನಕ ಕಾಯಬೇಕಲ್ಲ ಎಂಬ ವ್ಯಥೆ.
ಮುನ್ನೋಟದ ನಂತರ ’ಸುತ್ತ-ಮುತ್ತ’ ನಂತರ ಏ.ಎಸ್.ಮೂರ್ತಿಗಳ ’ಬೊಂಬೇ ಆಟ’, ’ನಗೆಲೇಸು’ ಹೀಗೆ ಕೆಲವು ಕಾರ್ಯಕ್ರಮಗಳು ಮುಗಿದರೆ, ಅಲ್ಲಿಗೆ ಕನ್ನಡ ಕಾರ್ಯಕ್ರಮಗಳು ಮುಗಿದಂತೆ. ರಾತ್ರಿ ಏಳೂವರೆಯ ನಿತ್ಯ ವಾರ್ತೆಯ ತನಕ ಮತ್ತೇನಿಲ್ಲ.
ರಾಷ್ಟ್ರೀಯ ಚಾನಲ್’ನ ಮತ್ತೊಂದು ವಿಶೇಷ ಕಾರ್ಯಕ್ರಮವೆಂದರೆ ಭಾನುವಾರ ಮಧ್ಯಾನ್ನ ಒಂದೂವರೆಗೆ ಮೂಡಿ ಬರುತ್ತಿದ್ದ ’ಪ್ರಶಸ್ತಿ ವಿಜೇತ ಪ್ರಾದೇಶಿಕ ಚಲನಚಿತ್ರ’ ಪ್ರಸಾರ. ಹಲವಾರು ಭಾಷೆಯ ಸಿನಿಮಾ ನೋಡಿ ಕನ್ನಡೇತರ ಭಾಷೆಗೂ ಮನ ತೆರೆದುಕೊಂಡದ್ದು ಇಲ್ಲಿ.
ಆಗಲೇ ಹೇಳಿದಂತೆ, ಭಾನುವಾರ ಹೆಚ್ಚು ಕಮ್ಮಿ ರಾಷ್ಟ್ರೀಯ ಕಾರ್ಯಕ್ರಮಗಳದ್ದೇ ಆರ್ಭಟ. ’ಏಕ್-ದೋ-ತೀನ್-ಚಾರ್’, ’ಭಾರತ್ ಏಕ್ ಖೋಜ್’ ’ಕಹಾ ಗಯೇ ವೋ ಲೋಗ್’, ’ದಾದಾ ದಾದಿ ಕಿ ಕಹಾನಿ’, ’ವಿಕ್ರಮ್ ಔರ್ ಬೇತಾಳ್’ ಇತ್ಯಾದಿ
ಹಿಂದೀ ಬಾರದವರೂ ಭಾನುವಾರದಂದು ಟಿ.ವಿ ಮುಂದೆ ಕುಳಿತುಕೊಳ್ಳುವಂತೆ ಮಾಡಿದ್ದು ರಮಾನಂದ್ ಸಾಗರ್ ಅವರ ’ರಾಮಾಯಣ’ ನಂತರ ಬಂದ ’ಬಿ.ಆರ್ ಚೋಪ್ರ’ ಅವರ ’ಮಹಾಭಾರತ್’
ಈ ಎರಡು ಧಾರಾವಾಹಿಗಳು ಮೂಡಿ ಬರುತ್ತಿದ್ದ ಸಮಯದಲ್ಲಿ, ಬೀದಿಗಳಲ್ಲಿ ಜನರೇ ಇಲ್ಲದೆ ಬಿಕೋ ಎನ್ನುತ್ತಿದ್ದವು. ಆ ಸಮಯದಲ್ಲಿ ವಿದ್ಯುತ್ ನಿಲುಗಡೆಯಾದರಂತೂ, ಮಂಡಲಿಯ ಕಛೆರಿಗಳಿಗೆ ಬೆಂಕಿ ಹಚ್ಚಿದ ಘಟನೆಗಳು ಇದೆ. ರಾಮ, ಕೃಷ್ಣ ತೆರೆಯ ಮೇಲೆ ಮೂಡಿ ಬಂದಾಗ ಮಂಗಳಾರತಿ ಮಾಡಿದ್ದೇನು? ನಮಸ್ಕಾರ ಮಾಡಿದ್ದೇನು? ಹಿಂದಿ ಭಾಷೆ ಎಲ್ಲರಿಗೂ ಅರ್ಥವಾಗುವುದಿಲ್ಲ ಎಂದು, ಕನ್ನಡ ಪತ್ರಿಕೆಯವರು ಹಿಂದಿನ ದಿನದ ವಿಶೇಷ ಸಂಚಿಕೆಯಲ್ಲಿ ಮರುದಿನ ಮೂಡಿ ಬರುವ ಎಪಿಸೋಡ್’ನ ಡೈಲಾಗುಗಳನ್ನು ಮುದ್ರಿಸುತ್ತಿದ್ದರು. ಇದೆಲ್ಲಕ್ಕಿಂತ ಆ ಧಾರಾವಾಹಿ ಮುಗಿದ ಮರು ಭಾನುವಾರ ಆ ಸಮಯದಲ್ಲಿ ಶೂನ್ಯ ಆವರಿಸಿದ ಭಾವ...
ಭಾನುವಾರ ಸಂಜೆ ಆರು ಘಂಟೆಗೆ ಹಿಂದಿ ಚಲಚಿತ್ರ. ಹಲವಾರು ಸೊಗಸಾದ ಹಿಂದಿ ಚಿತ್ರಗಳನ್ನು ನೋಡಿ ಆನಂದಿಸಿದ್ದೇನೆ. ಭಾನುವಾರದ ಮತ್ತೆರಡು ಕಾರ್ಯಕ್ರಮಗಳೆಂದರೆ ’ಸಿದ್ದಾರ್ಥ ಬಸು’ ಅವರ Quiz Time. IIT ಬುದ್ದಿವಂತರನ್ನು ನೋಡುತ್ತ ನಾವು ಅವರಂತೆ ಆಗುತ್ತೇವಾ ಎಂಬ ಚಿಂತೆ ಆವರಿಸಿದ್ದು ಸುಳ್ಳಲ್ಲ. ಅಂದು, ಒಂದು ವಿಷಯವಂತೂ ಮನದಲ್ಲಿ ದಟ್ಟವಾಗಿ ಕುಳಿತಿತು ’ಕನ್ನಡಕ ಹಾಕಿದವರು ಬುದ್ದಿವಂತರು’ ಅಂತ !!!
ಇರಲಿ, ಮತ್ತೊಂದು ಕಾರ್ಯಕ್ರಮವೆಂದರೆ, ನಮ್ಮ ದೇಶದ ಸಂಸ್ಕೃತಿಯತ್ತ ಬೆಳಕು ತೋರುವ ರೇಣುಕಾ ಸಹಾನಿ ನೆಡೆಸಿಕೊಡುತ್ತಿದ್ದ ’ಸುರಭಿ’.
ಅಂದಿನ ಟಿ.ವಿ ಕಾರ್ಯಕ್ರಮಗಳ ಮಧ್ಯೆ fillers ಎಂಬಂತೆ ಮೂಡಿ ಬರುತ್ತಿದ್ದುದು ಗೀತ ಚಿತ್ರಗಳು. ’ಎಕ್ ತಿತಲೀ ಅನೇಕ್ ತಿತಲಿಯಾ’, ’ಕಪ್ಪು ಕಾಗೆ - ಬಿಳೀ ಗುಬ್ಬಿ’ ಇತ್ಯಾದಿಗಳನ್ನು ಎಷ್ಟು ಸಾರಿ ನೋಡಿದರೂ ಬೇಸರವಾಗುತ್ತಿರಲಿಲ್ಲ. ಇದಲ್ಲದೇ ಭಾವಗೀತೆಗಳನ್ನು ಒಳಗೊಂಡ ಗೀತ ಚಿತ್ರಗಳು.
ಎಷ್ಟೊಂದು ನೆನಪುಗಳು ...
ಇಂದಿಗಿಂತ ಅಂದೇ ಚೆನ್ನ ಅನ್ನೋ ಮಾತು ಹೇಳುತ್ತಿಲ್ಲ ... ಹಲವು ವಿಷಯಗಳ ಬಗ್ಗೆ ನೆನಪೂ ಮಾಸಿರಬಹುದು. ಅದನ್ನು ನಿಮ್ಮನಿಸಿಕೆಗಳಲ್ಲಿ ತಿದ್ದಿ.
ನಾನಿನ್ನು ಬರಲೇ?

No comments:

Post a Comment