Sunday, March 27, 2011

ಹೀಗಿದ್ದರು ನನ್ನಮ್ಮ ಎಂದಳಾ ತಾಯಿ ..,

(ನಮ್ಮನ್ನು ಅಗಲಿದ ನನ್ನತ್ತೆಗೆ ಈ ಕವನದ ಮೂಲಕ ಅಶ್ರು ತರ್ಪಣ ಅರ್ಪಿಸುತ್ತಿದ್ದೇನೆ. ಕಳೆದ ಹಲವು ವರ್ಷಗಳಿಂದ ಅವರ ಬಗ್ಗೆ ನನ್ನಾಕೆ ಹೇಳುತ್ತಿದ್ದ ಮಾತುಗಳಿಗೆ ಕವನ ರೂಪ ಕೊಟ್ಟು ನಿಮ್ಮ ಮುಂದಿಟ್ಟಿದ್ದೇನೆ)

ತಗ್ಗಿ ಬಗ್ಗಿ ನೆಡೀಬೇಕು, ಬಗ್ಗಿ ನೆಡೆಯೋ ತನಕ

ಬಗ್ದಾಗ್ ತುಳ್ಯೋಕ್ ಬಂದ್ರೆ, ನೀ ಸೆಟೆದು ನಿಲ್ಲೇ ಕನಕ

ಕಂಡದ್ದೆಲ್ಲ ಕೊಡಿಸ್ಲಿಲ್ಲ ಅಂತ ಕೇಳಬೇಡಾ ’ನೀನಾ ಹೆತ್ತವಳು?’

ಕಷ್ಟ ಅರಿತು ಸುಖವ ಪಡಿ, ಅಡ್ಡಿಯಿಲ್ಲ ನಾನಾದ್ರೂ ಕೆಟ್ಟವಳು

ಮಾಡಿದೋವ್ರ ತಪ್ಪು ಆಡೊದ್ಯಾಕೆ, ನಿನ್ ಬಾಯಲ್ಲಿ

ತಿದ್ದೋಕ್ ಮುಂಚೆ ಇರಲಿ, ನಿನ್ ಬುದ್ದಿ ನಿನ್ ಕೈಯಲ್ಲಿ

ಆಡೋವ್ರ ಮುಂದೆ ಎಡವದಿರಿ, ಆಡಿದೋವ್ರು ಎಡವಿದಾಗ ಚುಚ್ಚದಿರಿ

ಎಡವಿದವರ ಕಂಡು ಕಿಸಿಯದಿರಿ, ಎಡವಿದ್ದಕ್ಕೇ ನೀವು ಎಡವದಿರಿ


ಹಿರಿಯರ ಅವಹೇಳನೆ ತರವಲ್ಲ, ಕಿರಿಯನೆಂದೂ ಕಿರಿಯನೇ ಅಲ್ಲ

ಗುರು ನಿಂದನೆ ಯೋಗ್ಯವಲ್ಲ, ಭವ ಬಂಧನ ಶಾಶ್ವತವಲ್ಲ


ಆರೋ ಮುನ್ನ ಜ್ಯೋತಿಯದು ಎದ್ದೆದ್ದು ಉರಿಯುವುದಂತೆ

ಹೋಗೋ ಮುನ್ನ ಚೈತನ್ಯವದು ಹುಚ್ಚೆದ್ದು ಕುಣಿವುದಂತೆ


ನಾ ಹೋಗೋ ಕಾಲ ಬಂದಾಯ್ತು, ಕಟ್ಟಾಯ್ತು ನನ್ನ ಬುತ್ತಿ

ಮನೆಯ ಜನರ ಸುಖಕ್ಕೇ ಬದುಕಿದ್ದ ಎಣ್ಣೆ ಇಂಗಿದಾ ಬತ್ತಿ


ಹೋಗೋವರೆಗೂ ಬಾಳಬೇಕು ಎಂದುಕೊಂಡಿದ್ದೆ ಹಂಗಿಲ್ಲದ ಬಾಳು

ಮನುಷ್ಯಳಾಗಿ ಹುಟ್ಟಿದ್ ಮೇಲೆ ಹಂಗಿಲ್ಲದೇ ಇರೋದ್ ಹೆಂಗೆ ಹೇಳು?


ನಾ ಹೋದೆನೆಂದು ಸುರಿಸದಿರಿ ನೀವು ದಿನವೂ ಕಣ್ಣೀರ

ಹೆತ್ತವಳ ಹೆಸರುಳಿಸೋದು ನಿಮ್ಮ ಕೈಯಲ್ಲಿದೆ ಕಂಡೀರಾ?


ತಿದ್ದದೇ ಹೋದ ’ಹಲವು’ಗಳನ್ನು ತಿಳಿಸಿಕೊಡುವ ಸಲುವಾಗಿ

ನಾ ಮರಳಿದರೆ ಹುಟ್ಟಿ ಬರುವೆ ನಿಮ್ಮಲ್ಲೊಬ್ಬರ ಮಗಳಾಗಿ


’ತಪ್ಪಿದ್ದರೆ ಮನ್ನಿಸು’ ಎನ್ನಲಾರೆ, ತಪ್ಪು ಮಾಡೋದು ಸಹಜ

ಎನಗೇ ಪೂರ್ಣ ಅರಿವಿಲ್ಲ, ಇನ್ನೊಬ್ಬರ ತಿದ್ದೋದ್ ಹೇಗೋ ಮನುಜ?


No comments:

Post a Comment