Sunday, March 27, 2011

ಮಾತು, ಮಾತು, ಮಾತು ...

ಆರ್ಕಿಮಿಡಿಸ್’ಗೆ ಸ್ನಾನದ ತೊಟ್ಟಿಯಲ್ಲಿದ್ದಾಗ ಮಹಾ ಆಲೋಚನೆ ಬಂತಂತೆ. ನಾನೂ ದಿನಾ ಸ್ನಾನ ಮಾಡ್ತೀನಿ... ಮೈ’ಯಿಂದ ಕೊಳೆ ಹೊರಗೆ ಬಂತೇ ವಿನಹ ತಲೆಯಿಂದ ಹೊಸ ಆಲೋಚನೆ ಹೊರಗೆ ಬರಲಿಲ್ಲ ಕಣ್ರಿ....


ಮೈ ಇದೆ ಕೊಳೆ ಬಂತು, ತಲೆ ಇದ್ದಿದ್ದ್ರೆ .... ಅಂತೀರಾ ... ಹೋಗ್ಲಿ ಬಿಡಿ


ನಮ್ಮಲ್ಲೊಬ್ಬರು ಹೇಳ್ತಿದ್ರು, ಅವರಿಗೆ ಯಾವಾಗಲೂ ಹೊಸ ಆಲೋಚನೆಗಳು ಪಾಯಿಖಾನೆಯಲ್ಲೇ ಬರುತ್ತಿತ್ತಂತೆ... ಅಲ್ಲಾ, ಈ ಕಂಪ್ಯೂಟರ್ ಯುಗದಲ್ಲಿ ಪಾಯಿಖಾನೆ, ಸಂಡಾಸ್ ಎಂದೆಲ್ಲ ಅಂದಲ್ಲಿ ಯಾರಿಗೆ ಅರ್ಥವಾದೀತು? ಲಕ್ಷಣವಾಗಿ ಕನ್ನಡದಲ್ಲಿ ’ಟಾಯ್ಲೆಟ್’ ಅನ್ನೋಣ ... ಏನಂತೀರ ??


ಹೋಗ್ಲಿ ಬಿಡಿ ... ನಾನೆಲ್ಲಿದ್ದೆ? ಟಾಯ್ಲೆಟ್’ನಲ್ಲಿ ... ಛೇ, ಛೆ ಅಲ್ಲ ಅದರ ಬಗ್ಗೆ ಹೇಳುತ್ತಿದ್ದೆ. ಟಾಯ್ಲೆಟ್’ನಲ್ಲಿ ಹೊಸಾ ಅಲೋಚನೆ ಬಂತು ಅನ್ನೋದನ್ನ ನಾನು ಸ್ವಲ್ಪ ಪಾಲಿಶ್ ಮಾಡಿ ಹೇಳಿದರೆ, ಏಕಾಂತದಲ್ಲಿದ್ದಾಗ ಹೊಸ ಅಲೋಚನೆಗಳು ಬರುತ್ತವೆ. ಕೆಲವರಿಗೆ ಜನರ ಮಧ್ಯೆ ಇದ್ದಾಗಲೂ ಹೊಸ ವಿಚಾರಗಳು ತಲೆಗೆ ಬರುತ್ತವೆ. ಅಂತಹವರು ಒಂದು ರೀತಿ ಸ್ಪೆಷಲ್ ಕೇಸು ಬಿಡಿ. ಈಗ ಈ ವಿಷಯ ಯಾಕೆ ಬಂತು ಅಂತೀರ?


ನನ್ನ ಹತ್ತಿರದ ಸ್ನೇಹಿತರೊಬ್ಬರು ಲಲಿತ ಪ್ರಬಂಧ ಬರೆದು ಕೊಡಿ ಎಂದರು .... ಹತ್ತಿರದ ಸ್ನೇಹಿತರು ಅಂದರೆ ನನ್ನ ಕಛೇರಿಯಲ್ಲಿ ಎದುರಿಗೋ ಪಕ್ಕಕ್ಕೋ ಕುಳಿತುಕೊಳ್ಳುವವರಲ್ಲ. ಅಂದ ಹಾಗೆ ಕಛೇರಿಯಲ್ಲಿರುವವರು ಸ್ನೇಹಿತರೂ ಅಲ್ಲ .... ಕೊಲೀಗ್ಸ್ ಅಂತ ನಾನು ಹೇಳಿದ್ದು ... ಎಂದಾಗ ನಾನು ನನ್ನ ಅತ್ಯಂತ ಪ್ರಿಯವಾದ ಅಜ್ಞ್ನಾನವನ್ನು ಪ್ರದರ್ಶಿಸಿದೆ. ಆಗ ಅವರು ಹೇಳಿದ್ದು ’ಲಲಿತಳ ಮೇಲೆ ಪ್ರಬಂಧ’ ಬರೆದರೆ ಅದು ಲಲಿತ ಪ್ರಬಂಧ ಅಂತ.


ನಾನು ಅದನ್ನೇ ಸೀರಿಯಸ್ಸಾಗಿ ತೆಗೆದುಕೊಂಡು ಆಲೋಚನೆ ಮಾಡಿದೆ ’ಲಲಿತಳ ಮೇಲೆ’ ಪ್ರಬಂಧ ಬರೆಯೋಣ ಅಂತ. ಆಗಲೇ ಮತ್ತೊಂದು ಯೋಚನೆಯೂ ಬಂತು. ಹಾಗಂತ ಲಲಿತಳನ್ನು ಕೇಳಲು ಹೋದರೆ, ನನ್ನ ಮುಖಕ್ಕೆ ಮಂಗಳಾರತಿ ಮಾಡಿ ’ನಾಚಿಕೆ ಆಗೋಲ್ವೇ. ನಿಮಗೆ ಏನನ್ನಿಸುತ್ತೋ ಅದನ್ನು ಪೇಪರ್ ಮೇಲೆ ಬರೀರಿ ಅಥವಾ ಕೀಬೋರ್ಡ್ ತೊಗೊಂಡ್ ಕುಟ್ಟಿ’ ಅಂತ ಅಂದುಬಿಟ್ರೆ??


ಅಯ್ಯಯ್ಯೋ .... ಮರ್ಯಾದೆ ಪ್ರಶ್ನೆ! ಸದ್ಯಕ್ಕೆ ಅಲ್ಪ ಸ್ವಲ್ಪ ಉಳಿದುಕೊಂಡಿದೆ. ನಾನು ನೂರು ವರ್ಷ ಬದುಕಿದರೆ, ಉಳಿದಿರುವ ಮರ್ಯಾದೆಯನ್ನು ಇನ್ನೂ ಹಲವಾರು ವರ್ಷಗಳ ಕಾಲ ಕಾಪಾಡಿಕೊಳ್ಳಬೇಕು !! ಅದೇನು ಗಾಡೀಲ್ಲಿರೋ ಪೆಟ್ರೋಲೇ?... ದುಡ್ಡು ಕೊಟ್ಟು ತುಂಬಿಕೊಳ್ಳಲಿಕ್ಕೆ?


ಆಗ ಬೆಪ್ಪುತಕ್ಕಡಿ ಬೋಳೇಶಂಕರನಾದ ನನ್ನ ಮನಸ್ಸಿಗೆ ಹೊಳೆದದ್ದು ಅವರು ’ಜೋಕ್’ ಹೇಳಿದ್ದು ಅಂತ. ವಿಷಯ ಅರ್ಥವಾದ ಮೇಲೆ, ಒಂದು ದಿನ ಬಿಟ್ಟು ಇಡೀ ದಿನ ಸಿಕ್ಕಾಪಟ್ಟೆ ನಕ್ಕಿದ್ದೆ ಬಿಡಿ!!


ಅವತ್ತೇ ಯಾಕೆ ನಗಲಿಲ್ಲ ಅಂದಿರಾ? ನಾನು ರಾತ್ರಿ ಹತ್ತು ಘಂಟೆ ದಾಟಿದ ಮೇಲೆ ನಗೋಲ್ಲ. ನಮ್ಮಮ್ಮ ಬೈತಾರೆ. ನಿನ್ನ ಒಡಕಲು ದನಿಯಲ್ಲಿ ನಕ್ಕು ಮಲಗಿರೋ ಮಕ್ಕಳನ್ನ ಎಬ್ಬಿಸಿಬಿಡಬೇಡಾ ಅಂತ !!


ಲಲಿತ ಪ್ರಬಂಧ ಬರೆವ ಕೆಲಸ ಪಕ್ಕಕ್ಕೆ ಇಟ್ಟು ಲಘು ಹರಟೆ ಬರೆಯೋಣ ಅನ್ನಿಸಿತು.


ಸರಿ, ಹೀಗೆ ಅಂತರ್ಜಾಲದಲ್ಲಿ ಹಳೆಯ ಕನ್ನಡ ಹಾಡುಗಳನ್ನು ಕೇಳುತ್ತಿದ್ದೆ. ಮುನಿಯನ ಮಾದರಿ ಚಿತ್ರದ ’ಮಾತೂ ಒಂದು ಮಾತು, ಮಾತು ಸಿಹಿ ಮಾತು’ ಗೀತೆ ಅಲೆ ಅಲೆಯಾಗಿ ಮೂಡಿ ಬರುತ್ತಿತ್ತು. ಏನೋ ಐಡಿಯಾ ಬಂತು .. ’ಯುರೇಕಾ’ ಎಂದು ಕೂಗಿದೆ.


ನನ್ನ ಮಡದಿ ’ಬಂದೇ, ಒಂದು ನಿಮಿಷ. ತಂದು ಕೊಡ್ತೀನಿ’ ಎಂದು ಹೇಳಿ ಎರಡೇ ನಿಮಿಷದಲ್ಲಿ ’ಯುರೇಕ’ ಹೆಸರು ಹೊತ್ತ ಎಲೆಕ್ಟ್ರಿಕ್ ಕಸಪೊರಕೆ ತಂದಿಟ್ಟು ನಸುನಗುತ್ತಾ ಹೊರಗೆ ನೆಡೆದಳು !!!


ನಾನೇನೋ ಹೇಳಿದರೆ ಇನ್ನೇನೋ ಅರ್ಥ ಮಾಡಿಕೊಂಡಳಲ್ಲಾ ಅಂತ ಮನಸ್ಸು ಸಿಕ್ಕಾಪಟ್ಟೆ ರೇಗಿ, ಧಡ ಧಡ ಆ ’ಯುರೇಕ’ವನ್ನು ಕೈಗೆ ತೆಗೆದುಕೊಂಡು, ಮನೆಯಲ್ಲ ಗುಡಿಸಿ ನಂತರ ಬರೆಯಲು ನಿಂತೆ !


ಇದೇನ್ರೀ ’ನಿಂತೆ’ ಅಂದ್ರ? ನನಗೆ ಜಾಸ್ತಿ ಹೊತ್ತು ಒಂದೆಡೆ ಕೂತರೆ ಆಗೊಲ್ಲ .... ಕಂಪ್ಯೂಟರ್ ಸ್ಲೀಪ್ ಮೋಡ್’ಗೆ ಹೋದಂತೆ ನಾನು ಕೂತಲ್ಲೇ ನಿದ್ದೆ ಮಾಡಿಬಿಡುತ್ತೇನೆ !! ಈಗ ವಿಷಯಕ್ಕೆ ಬರೋಣ ...


ಏನು, ಯಾವ ವಿಷಯ ಬರೆಯಲು ಹೊರಟೆ ಅಂದಿರಾ? ಏನೂ ಇಲ್ಲ. ವಿಷಯ ಹಾಗೇ ಸುಮ್ಮನೆ ಹರಟೆ ಅಷ್ಟೇ!


ನಾನ್ಯಾಕೆ ಈ ನಡುವೆ ಯಾವುದೇ ಸ್ವಾಮಿಗಳ ಪ್ರವಚನ ಕೇಳಲು ಹೋಗೋಲ್ಲ ಅಂತ ಗೊತ್ತ ನಿಮಗೆ? ಕೇಳಿ ಹೇಳ್ತೀನಿ.


ಹೀಗೇ ಒಮ್ಮೆ ಎರಡು ಘಂಟೆಗಳ ಕಾಲ ಪ್ರವಚನ ಕೇಳಿದ ಮೇಲೆ ನನ್ನ ಮನದ ಮೂಲೆಯಲ್ಲಿ ಎದ್ದ ಸಂದೇಹ "ನಾನು ಯಾರು? ನಾನು ಇಲ್ಲಿಗೇಕೆ ಬಂದೆ?" ಹೀಗೆ, ಬರೀ ಆಧ್ಯಾತ್ಮಿಕ ಚಿಂತನೆಗಳು. ವಾಹ್! ಎಂತಹ ಅಲೋಚನೆ ! ಅಲ್ಲೇ ಇದ್ದ ಹಲವರೊಂದಿಗೆ ಈ ವಿಷಯ ಹಂಚಿಕೊಂಡೆ. ಒಬ್ಬರು ಮತ್ತೊಬ್ಬರನ್ನು ಕೇಳಿದರು ’ಎಷ್ಟು ದಿನದಿಂದ ಹೀಗೆ’ ಅಂತ. ನನ್ನೀ ದಿವ್ಯ ಜ್ಞ್ನಾನದ ಬಗ್ಗೆ ಎದ್ವಾ ತದ್ವಾ ಕುತೂಹಲ ಇರಬೇಕು ಅಂತ ನಾನು ಅಂದುಕೊಳ್ಳುವಷ್ಟರಲ್ಲೇ ಆ ಮತ್ತೊಬ್ಬರು ನುಡಿದರು ’ಚೆನ್ನಾಗೇ ಇದ್ದರು. ಪಾಪ Alzheimer ಇರಬೇಕು ಅಂತ’. ಎರಡು ಘಂಟೆಗಳ ಕಾಲದ ಮಾತುಗಳನ್ನು ಎರಡೇ ಘಳಿಗೆಯ ಈ ಮಾತುಗಳು ನುಂಗಿ ನೀರು ಕುಡಿದಿತ್ತು ಕಣ್ರೀ !!
ಎಲ್ಲ ಮಾತಿಗೂ ಅರ್ಥವಿರುತ್ತದೆ. ಅರ್ಥವಿಲ್ಲದಿದ್ದರೂ ಅನರ್ಥವಂತೂ ಇದ್ದೇ ಇರುತ್ತೆ ಬಿಡಿ. ಅನೇಕ ಅರ್ಥ ಕೊಡುವ ಮಾತಿಗೆ ಚಿಕ್ಕದಾಗಿ ’ಅನರ್ಥ’ ಎಂದೂ ಹೇಳಬಹುದು. ಬೇಕಿದ್ರೆ ಜಗ್ಗೇಶ್, ಕಾಶೀನಾಥ್ ಇವರನ್ನು ಕೇಳಿ ...


ಹೀಗೇ ಯಾರದೋ ಮನೆಗೆ ಪೂಜೆಗೆ ಹೋಗಿದ್ದೆ. ಮನೆಯ ಯಜಮಾನ ನನ್ನ ಸ್ನೇಹಿತ. ಮತ್ತೊಂದು ಊರಿನಿಂದ ಪೂಜೆಗೆ ಬಂದಿದ್ದ ತಮ್ಮ ಬಂಧುವನ್ನು ನನಗೆ ಪರಿಚಯಿಸಿ ’ತುಂಬಾ ಚೆನ್ನಾಗಿ ಡಬಲ್ ಮೀನಿಂಗ್ ಮಾತಾಡ್ತಾರೆ’ ಅಂದ ಜೋರಾಗಿ ನುಡಿದ. ಆ ಮಾತು ಕೇಳಿ ಎಲ್ಲರಿಗೂ ಶಾಕ್ ! ಆ ಬಂಧುಗಳ ವಿಷಯ ಬಿಡಿ, ಪಾಪ ಇನ್ನೂ ಮೂರ್ಛೆ ಹೋಗಿರಲಿಲ್ಲ. ನಾನು ಕೇಳಿದೆ ’ಲೋ! ಏನೋ ಹಾಗಂದ್ರೆ?’ ಅಂತ. ಅವನು ಹೇಳಿದ ’ಇವರು ಲಾಂಗ್ವೇಜ್ ಟೀಚರ್ ಕಣೋ. ಒಂದೇ ಶಬ್ದವನ್ನ ಎರಡು ರೀತಿಯಲ್ಲಿ ಅರ್ಥ ಬರೋ ಹಾಗೆ ಬಳಸುತ್ತಾರೆ. ಅದಕ್ಕೇ ಡಬಲ್ ಮೀನಿಂಗ್ ಅಂದಿದ್ದು. ಮೊನ್ನೆ, ಒಂದು ಕವನ ಬರೆದಿದ್ದರು ... "ಅತ್ತೆ, ನೀನೇಕೆ ಅತ್ತೆ" ... ಅಂತ .. ಅರ್ಥ ಆಯ್ತಲ್ಲ’ ಅಂತ ಹೇಳಿ ಇಷ್ಟಗಲ ಬಾಯಿ ತೆರೆದು ನಿಂತ. ಮೊದಲು ಆ ಬಂಧು ನಂತರ ಮಿಕ್ಕವರು ’ಉಸ್’ ಅಂತ ಉಸಿರು ಬಿಟ್ಟರು.


ರಾಮರಾಯರದು ಪೌರೋಹಿತ್ಯ. ಅವರಿವರ ಮನೆಯಲ್ಲಿ ಪೂಜೆ ಪುನಸ್ಕಾರ, ಗೃಹಪ್ರವೇಶ, ಸತ್ಯನಾರಾಯಣ ಪೂಜೆ ಹೀಗೆ. ಯಾರಿಗೋ ಮೈಯಲ್ಲಿ ಆರೋಗ್ಯ ಸರಿ ಇಲ್ಲದೆ ಹೋಗಿ ಇವರನ್ನು ಕರೆಸಿ ’ಮೃತ್ಯುಂಜಯ ಜಪ’ ಮಾಡಿಸಿದರು. ಕೆಲವು ದಿನಗಳು ಬೇರೆಲ್ಲಿಗೋ ಹೋಗುವುದಿತ್ತು. ಹೋಗಿ ಬಂದ ಕೂಡಲೆ ಪಕ್ಕದ ಮನೆಯವರು ಹೇಳಿದರು "ನೀವು ಮೃತ್ಯುಂಜಯ ಜಪ ಮಾಡಿದ್ರಲ್ಲ ಅವರು ಹೋಗಿಬಿಟ್ರು". ಪಾಪ ರಾಮರಾಯರಿಗೆ ಯೋಚನೆ ಶುರುವಾಯ್ತು. ತಾವು ಜಪ ಮಾಡಿದ್ದಕ್ಕೆ ತೀರಿಕೊಂಡರೇ ಅಥವಾ ಅನಾರೋಗ್ಯ ಹೆಚ್ಚಿ ತೀರಿಕೊಂಡರೇ ಅಂತ. ಯಾವ ವಿಷಯ ತಿಳಿಸುವುದಕ್ಕೂ ಒಂದು ರೀತಿ ರಂಗು ಇರುತ್ತೆ ಅಂತ ಹೇಳಿದೆ.


ಹೀಗೇ ಯಾರದೋ ಮನೆಯಲ್ಲಿ ಒಬ್ಬ ಹಿರಿಯರು ತೀರಿಕೊಂಡರು. ಸಾಂಗೋಪಾಂಗವಾಗಿ ವೈಕುಂಠ ಸಮಾರಾಧನೆಯೂ ಆಯಿತು. ಅಲ್ಲಿ ಸೇರಿದ್ದವರಾರೋ ಅಲವತ್ತುಕೊಳ್ಳುತ್ತಿದ್ದರು ’ಪಾಪ, ಹಿರಿಯ ಜೀವ. ಒಬ್ಬರಿಗೆ ಕಷ್ಟ ಕೊಟ್ಟವರಲ್ಲ. ಹಾಗಾಗಿ ಒಂದೂ ಕೊಂಕಿಲ್ಲದೆ ಎಷ್ಟು ಚೆನ್ನಾಗಿ ನೆಡೀತು ನೋಡಿ ಇವತ್ತಿನ ವೈಕುಂಠ. ಇವತ್ತು ಅವರಿರಬೇಕಿತ್ತು. ಎಷ್ಟು ಸಂತೋಷಪಡುತ್ತಿದ್ದರು’!!!


ನನ್ನ ಪ್ರಾಜಕ್ಟ್’ಗೆ ಹೊಸದಾಗಿ ಒಬ್ಬ ಹುಡುಗಿ ಸೇರಿದಳು. ಇನ್ನೂ ಆಗೇ ತಾನೇ ಕಾಲೇಜು ಮುಗಿಸಿ ಕೆಲಸಕ್ಕೆ ಕಾಲಿಟ್ಟಿದ್ದರಿಂದ ಎಲ್ಲವೂ ಹೊಸದಾಗಿ, ಸೊಗಸಾಗಿ ಕಾಣುತ್ತಿತ್ತು ಅವಳಿಗೆ. ಸೋಜಿಗ ಅಂದರೆ ನಮ್ಮ ಕಾಂಟೀನ್ ಕೂಡ ಅದರಲ್ಲಿ ಒಂದು!!! ಒಂದು ದಿನ ನಾವೆಲ್ಲ ಸಾಲಿನಲ್ಲಿ ನಿಂತಿರುವಾಗ ಬಹಳ ಹುರುಪಿನಲ್ಲಿ ಹೇಳಿದಳು ’ಎಷ್ಟು ಚೆನ್ನಾಗಿ ಇರುತ್ತೆ ಊಟ ಅಲ್ವಾ? ನೆನ್ನೆ ಈ ಊಟ ಮಾಡಿದಾಗ ನಮ್ಮಮ್ಮನ ಅಡಿಗೆ ನೆನಪಾಯ್ತು’ ಅಂತ. ಅಲ್ಲೇ ಇದ್ದ ನನ್ನ ಸ್ನೇಹಿತ ಕೇಳಿಯೇಬಿಟ್ಟ "ನಿಮ್ಮಮ್ಮ ಇಷ್ಟು ಕೆಟ್ಟದಾಗಿ ಅಡುಗೆ ಮಾಡ್ತಾರಾ?" ಅಂತ.


ಮಾತಿನ ಚಟಾಕಿ ಅಂದರೆ ಪಟಾಕಿಯಂತೆ ಥಟ್ಟನೆ ಸಿಡಿಯಬೇಕು. ಕೇಳಿದ ಅಥವ ಓದಿದ ಕೂಡಲೆ ಮುಖ ಮೇಲೆ ಕಿರು ನಗು ಮೂಡಬೇಕು. ಹೇಗೆ ಅಂದರೆ, ಹೀಗೇ ಗಂಡ-ಹೆಂಡತಿ ನಡುವೆ ಏನೋ ಜಗಳವಾಯ್ತಂತೆ. ಹೆಂಡತಿ ಜೋರಾಗಿ ಸಿಡಿದಳು ’ಪ್ರತಿ ಗಂಡಸಿನ ಯಶಸ್ಸಿನ ಹಿಂದೆ ಒಬ್ಬ ಹೆಣ್ಣು ಇರ್ತಾಳೆ’ ಅಂತ. ಗಂಡ ನುಡಿದ ’ಹೌದು ಕಣೆ, ವಿಕ್ರಮಾದಿತ್ಯನ ಬೆನ್ನ ಹಿಂದೆ ಬೇತಾಳ ಇದ್ದ ಹಾಗೆ’ ಅಂತ.


ಮಾತಿನ ಬಗ್ಗೆ ಬರೀತಾ ಹೋದರೆ ಅದಕ್ಕೆ ಕೊನೆಯೇ ಇಲ್ಲ. ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು. ಈ ಗಾದೆ ನೋಡಿ ಇಂದಿಗೂ ನಿಜ. ಗ್ಯಾಸ್ ಸ್ಟೊವ್ ಮೇಲೆ ಹಾಲು ಕಾಯಲು ಇಟ್ಟು ಪಕ್ಕದ ಮನೆ ರಂಗಮ್ಮನ ಜೊತೆ ಮಾತಾಡುತ್ತಾ ಇದ್ದಾಗ, ಹಾಲು ಉಕ್ಕಿ ಹರಿದು, ಬರ್ನರ್’ನ ತೂತುಗಳೆಲ್ಲ ಕೆನೆಗಟ್ಟಿ ನಿಂತಾಗ ಒಲೆ ಕೆಟ್ಟಿತಲ್ವೇ?


ಇನ್ನು ಮಾತು ಬೆಳ್ಳಿ ಮೌನ ಬಂಗಾರ. ಹುಡುಗಿಯನ್ನು ನೋಡಲು ಹುಡುಗನ ಕಡೆಯವರು ಬಂದರಂತೆ. ಎಲ್ಲ ಮಾತೂ ದಳ್ಳಾಳಿಯೇ ಆಡುತ್ತಿದ್ದರೂ ಗಂಡಿನ ಅಪ್ಪ-ಅಮ್ಮ ಸುಮ್ಮನೆ ಕುಳಿತಿದ್ದರಂತೆ. ಅವರು ಹೋದ ಮೇಲೆ ಹುಡುಗಿಯ ಅಪ್ಪ ಹೇಳಿದರಂತೆ ’ಎಷ್ಟು ಒಳ್ಳೇ ಜನ ಅಲ್ವೇ? ಏನೊಂದೂ ತಗಾದೆ ಎತ್ತಲಿಲ್ಲ’ ಅಂತ. ಪತ್ನಿ ನುಡಿದಳಂತೆ ’ನಿಮಗೆ ಏನೂ ಅರ್ಥವಾಗಲ್ಲ ಅನ್ನೋದು ಅದಕ್ಕೇ. ಮಾತು ಬೆಳ್ಳಿ ಮೌನ ಬಂಗಾರ. ಏನು ಡಿಮ್ಯಾಂಡ್ ಬರುತ್ತೋ ಕಾದು ನೋಡೋಣ ತಡೀರೀ’!!!


ಮದುವೆ ವಿಷಯ ತೆಗೆದುಕೊಂಡರೆ. ಹಿಂದಿನ ದಿನಗಳಲ್ಲಿ ಮನೆ ಮನೆಗೂ ಹೋಗಿ ಕನಿಷ್ಟ ಅರ್ಧ ಘಂಟೆ ಕೂತು, ಕಾಫಿ ಕುಡಿದು, ಮನೆಯಲ್ಲಿ ಹಿರಿಯರು, ಚೋಟೂ-ಮೋಟೂ ಗಳಿಗೂ ಅಕ್ಷತೆ ನೀಡಿ ಕರೆಯೋಲೆ ಕೊಟ್ಟು ಬರುತ್ತಿದ್ದರು. ಮಾತು, ಮಾತು ಮಾತು. ಮದುವೆ ದಿನದ ಹೊತ್ತಿಗೆ ಗಂಟಲು ಕಟ್ಟಿ ಹಾಳಾಗಿರುತ್ತಿತ್ತು.
ಈಗ? ಅದೇನೋ ಗೊತ್ತಿಲ್ಲ. Face-Face ಕರೆಯದೆ Facebook’ನಲ್ಲೇ ಹಾಕಿಬಿಡ್ತಾರೇನೋ?


ಇಂದಿಗೂ ಮೌನ ಬಂಗಾರ ಅನ್ನೋ ಮಾತು ಸತ್ಯ ನೋಡಿ. Smart Phone, Text Messaging ಅಂತೆಲ್ಲ ಆಗಿ ಕಿರಿಯರು ಮಾತು ನಿಲ್ಲಿಸಿದ್ದಾರೆ. WikiLeak ಬಂದು ’ಅತೀ’ ದೊಡ್ಡವರು ಮಾತು ನಿಲ್ಲಿಸಿದ್ದಾರೆ. ಸದ್ಯಕ್ಕೆ ಮಾತನಾಡುತ್ತಿರುವವರು ನನ್ನಂತಹವರು ಮಾತ್ರ !!!!


ಹೀಗೇ ನಗ್ತಾ ನಗ್ತಾ ಮಾತಾಡಿಕೊಂಡು, ಜೀವನದಲ್ಲಿ ಅತಿ ಟೆನ್ಶನ್ ಮಾಡಿಕೊಳ್ಳದೆ, ಬಂದದ್ದೆಲ್ಲ ಬರಲಿ ಗೋವಿಂದನ ದಯೆ ಒಂದಿರಲಿ ಎಂದೆನ್ನುತ್ತ ಈ ವರ್ಷವನ್ನು ಇತಿಹಾಸಕ್ಕೆ ಕಳಿಸೋಣವೇ?

No comments:

Post a Comment