Sunday, March 27, 2011

ವರ - Worry

ವೆಂಕಜ್ಜಿ ಗಟ್ಟಿಯಾದ ನಿರ್ಧಾರದ ದನಿಯಲ್ಲಿ ತಮ್ಮ ಅಂತಿಮ ನಿರ್ಧಾರ ಪ್ರಕಟಿಸಿಯೇ ಬಿಟ್ಟರು ’ನೋಡೋ ರಾಮೂ. ನಿನ್ನ ಮಗಳು ಆ ಡಬ್ಬದ ಎಂಜಿಲ್ನ್ನೀರೇ ಆಗಿರಬಹುದು. ಕೈ ತುಂಬಾ ಸಂಪಾದನೇನೇ ಮಾಡಬಹುದು. ಆದರೆ ಹೊಟ್ಟೇಪಾಡೇ ಬೇರೆ, ಶಾಸ್ತ್ರ ಸಂಪ್ರದಾಯಾನೇ ಬೇರೆ. ನಾನು ನಿಮ್ಮ ಮನೆಯಲ್ಲೇ ಇರಬೇಕೂ ಅಂದರೆ ಈ ವಿಷಯದಲ್ಲಿ ನಾನ್ ಹೇಳಿದ ಹಾಗೆ ಕೇಳು. ಇಲ್ಲಾ ಅಂದರೇ ಗೋಪಾಲನ ಮನೆಗೆ ಹೊರಟು ಹೋಗ್ತೀನಿ’.

ಯಾವಾಗ್ಲೂ ಗೋಪಾಲನ ಮನೆಗೆ ಹೋಗ್ತೀನಿ ಅಂತ ಹೇಳ್ತಾರೆಯೇ ಹೊರತು, ಹೋಗೋಲ್ಲ. ಒಂದು ವೇಳೆ ಹೋದರೂ, ಗೋಪಾಲನ ಹೆಂಡತಿ ಅಂದರೆ ಇವರ ಎರಡನೇ ಸೊಸೆಗೂ ಇವರಿಗೂ ಅಷ್ಟಕ್ಕಷ್ಟೇ. ಎರಡು ಇದ್ದು ಇಲ್ಲಿಗೇ ವಾಪಸ್ಸು ಓಡಿ ಬರ್ತಾರೆ.
ಮೊಮ್ಮಕ್ಕಳಿಗೂ ಒಮ್ಮೊಮ್ಮೆ ರೇಗುತ್ತೆ. ಆದರೆ ದೊಡ್ಡವರು ಅಂತ ಸುಮ್ಮನಿದ್ದು ಬಿಡ್ತಾರೆ. ಆದರೆ ಇಂದು ಮೊಮ್ಮಗಳಿಗೂ ರೇಗಿತ್ತು "ಅಜ್ಜೀ. ನಾನು ಡಬ್ಬದ ಎಂಜಿಲ್ನೀರ್ ಅಲ್ಲ. ಕಂಪ್ಯೂಟರ್ ಇಂಜಿನಿಯರ್ ! ಹಂಗೆಲ್ಲ ಅನ್ನಬೇಡಿ."
ಪಾಪ, ರಾಮೂ ಇಂಜಿನೀರ್ ಅಂತ ಹೇಳಿಕೊಟ್ಟರೂ ಅಜ್ಜಿ ಮಾತ್ರ ಎಂಜಿಲ್ನೀರ್ ಅನ್ನೋದು ಬಿಟ್ಟಿರಲಿಲ್ಲ.
ಹಿರಿಯರಿಗೆ ತಾವು ದೊಡ್ಡವರು ಅನ್ನೋ ಅಹಂ ಇದ್ದೇ ಇರುತ್ತೆ ತಾನೇ? ಅದೂ ಅಲ್ಲದೇ ಹುಟ್ಟಿನಿಂದ ನೋಡಿದ್ದು ಈಗ ಎದೆ ಎತ್ತರಕ್ಕೆ ನಿಂತ ಮಾತ್ರಕ್ಕೆ ಎದುರಾಡಿದರೆ ಬಿಡ್ತರಾ? ಅದರಲ್ಲೂ ತಮ್ಮ ಮಾತು ಇನ್ನೂ ನೆಡೀತಿದೆ ಅನ್ನೋವಾಗ!
"ಕೇಳಿಸ್ಕೊಂಡ್ಯೇನೋ ರಾಮೂ. ಈ ಮನೆಯಲ್ಲಿ ಆ ಡಬ್ಬಕ್ಕೆ ಇರೋ ಮರ್ಯಾದೆ ನನಗೆ ಇಲ್ಲ. ಸದಾ ಆ ಡಬ್ಬದ ಮುಂದೆ ಕೂತು ಸಿನಿಮಾ ನೋಡ್ತಾರೆ. ಆ ಉದ್ದನೆ ತಟ್ಟೇ ಮೇಲೆ ಏನೋ ಕುಟ್ಟ ಕುಟ್ಟ ಅಂತಾರೆ ಕುಟ್ತಾರೆ. ಈ ವಯಸ್ಸಿನಲ್ಲಿ ನಾನು ದಿನಕ್ಕೆ ಐದು ಸೇರು ಮೆಣಸಿನಕಾಯಿ ಕುಟ್ಟುತ್ತಿದ್ದೆ... ಮೆಣಸಿನಪುಡಿಗೆ. ಈಗಿನ ಕಾಲದ ಹುಡುಗರು ಏನಾದ್ರೂ ಅಂದರೆ ನನಗೇ ತಿರುಗಿಸಿ ಅಂತಾರೆ. ಸಾಕಪ್ಪಾ ಸಾಕು ಈ ಹಂಗಿನ ಜೀವನ. ಪರಮಾತ್ಮಾ ಬೇಗ ಕರೆಸಿಕೊಳ್ಳೋ" ಅಂತ ಶುರು ಹಚ್ಚಿದರು.
ಬಡಪಾಯಿ ರಾಮೂ’ಗೆ ಇದು ಮಾಮೂಲಿ. ತೊಂಬತ್ತರ ಆಸುಪಾಸಿನ ತಾಯಿ. ಸಮಾಧಾನ ಮಾಡಿದರು "ಹೋಗ್ಲಿ ಬಿಡಮ್ಮ. ಹುಡುಗರು. ನೀನು ಇಂಜಿನೀರ್’ನ ತೊಗೊಂಡು ಎಂಜಿಲ್ನೀರು ಅಂತಲೂ ಕಂಪ್ಯೂಟರ್’ನ ಡಬ್ಬ ಅಂತಲೂ ಅಂದರೆ ಅವರಿಗೆ ಬೇಜಾರೋಗೋಲ್ವೇ? ಇಲ್ಲಿದ್ದುಗೊಂಡು ಆ ವಿದೇಶಿ ಕಂಪನಿಗೆ ಕೆಲ್ಸ ಮಾಡ್ತಾರೆ. ಹಾಗಾಗಿ, ರಾತ್ರಿ ಎಲ್ಲ ಆ ಸ್ಕ್ರೀನ್ ಮುಂದೆ ಕೂತು ಮಾಡೊ ಕೆಲಸಕ್ಕೆ ನೀನು ಸಿನಿಮಾ ನೋಡ್ತಾರೆ ಅಂದರೆ ಅವರಿಗೂ ಬೇಜಾರಾಗೋಲ್ವೇ? ನಾನು ಅವರಿಗೆ ಹೇಳ್ತೀನಿ ನೀನು ರಾಮಾ-ಕೃಷ್ಣ ಅಂತ ಸುಮ್ಮನಿರು"
"ಏನಾದ್ರೂ ಮಾಡಿಕೋ. ಆ ಸುಟ್ಟ ಟಿ.ಬಿ ಹಾಕು. ನೋಡ್ತಿರ್ತೀನಿ" ಅಂದು ಟಿ.ವಿ ಸಮೀಪಕ್ಕೆ ಕೂತರು. ರಾಮೂ ಟಿ.ವಿ ಅಂತ ಹೇಳಿಕೊಟ್ಟರೂ ಅಜ್ಜಿ ಟಿ.ಬಿ ಅನ್ನೋದು ಬಿಟ್ಟಿರಲಿಲ್ಲ. ಯಥಾಪ್ರಕಾರ ಬರೀ ಜಾಹೀರಾತುಗಳು. "ಈ ಸುಂದರೀರು ಹಲ್ಲುಜ್ಜಿ, ಮುಖ ತೊಳ್ಕೊಂಡು, ಸ್ನಾನ ಮಾಡಿದ್ದು ಮುಗಿದ್ರೆ ತಾನೇ ಏನಾದ್ರೂ ನಾನು ನೋಡೋಕ್ಕೆ? ಏನು ತಿಕ್ಕಿಕೊಂಡರೂ ಹುಣಿಸೇಹಣ್ಣಿನ ಬಣ್ಣ ಮಾತ್ರ ಹೋಗೋಲ್ಲ" ಅಂತ ಅದರ ಮೇಲೆ ಹರಿಹಾಯ್ದರು.
ಏನೋ, ಅಂತೂ, ಸದ್ಯಕ್ಕೆ ಅಜ್ಜಿ ಗಲಾಟೆ ನಿಂತಿತು. ಎಲ್ಲ ಘಟನೆಗಳನ್ನೂ ಸದಾ ಹಸನ್ಮುಖಿಯಾಗಿ ನೋಡುತ್ತ ಸುಮ್ಮನೆ ನಗುತ್ತಾ ಇರುತ್ತಾರೆ ರಾಮೂ ಪತ್ನಿ ... ಫೋಟೋದಲ್ಲಿ.....
ರಾಮೂ ಮಗಳ ಬಳಿ ಹೋಗಿ ’ನೋಡು ಸೌಮ್ಯ. ಹೀಗೆ ಮಾತು ಮಾತಿಗೆ ನೀನು ಅಜ್ಜಿ ಮೇಲೆ ರೇಗ್ತಾ ಇದ್ರೆ ಹೇಗೆ ಹೇಳು. ಅಮ್ಮ ಇಲ್ಲದ ನಿಮ್ಮಿಬ್ಬರನ್ನ ಸಾಕಿಲ್ವಾ ಅವರು. ಏನೋ ದೊಡ್ಡವರು ಈಗಿನ ಕಾಲದ ಜ್~ಝ್ನಾನ ಇಲ್ಲ ... ಹೇಳ್ತಾರೆ ... ಕೇಳಿಬಿಡು ... ಏನು ಗಂಟು ಹೋಗುತ್ತೆ?’
ಮಗಳು ತನ್ನ ವಾದ ಮಂಡಿಸಿದಳು "ಅಲ್ಲಪ್ಪ. ನನ್ನ ಕೆಲಸದ ಬಗ್ಗೆ ಏನಾದ್ರೂ ಅಂದುಕೊಳ್ಳಲಿ. ಅವರಿಗೆ ಅರ್ಥವಾಗೋಲ್ಲ ಅಂತ ನನಗೂ ಗೊತ್ತು. ಆದರೆ ಈಗಿನ ಕಾಲದಲ್ಲೂ ಅವರು ಹೇಳೋ ಈ ಸಂಪ್ರದಾಯಗಳು ಮಾಡಬೇಕಾ ಹೇಳಿ?"
ವಿಷಯ ಇಷ್ಟೇ ! ಸೌಮ್ಯ ಮದುವೆ ವಯಸ್ಸಿಗೆ ಬಂದ ಹುಡುಗಿ. ಕಂಪ್ಯೂಟರ್ ಇಂಜಿನಿಯರ್. ಜೀನ್ಸ್ ತೊಟ್ಟರೂ ಅವಳ ಜೀನ್ಸ್’ನಲ್ಲಿ ಅಲ್ಪ ಸ್ವಲ್ಪ ಸಂಪ್ರದಾಯ ಇದೆ. ಅವಳಿಗೆ ರೇಗಿದ್ದು ಏನೆಂದರೆ, ಇಂದು ಸಂಜೆ ಅವಳನ್ನು ನೋಡಲು ಬರುವ ವರ ಅನ್ನೋ ಮನುಷ್ಯನಿಗೆ (ಅವಳ ಭಾಷೆಯಲ್ಲಿ ಪ್ರಾಣಿಗೆ) ನಮಸ್ಕಾರ ಮಾಡಬೇಕಂತೆ. ಅಜ್ಜಿಯ ಈ ಆರ್ಡರ್, ಅವಳಲ್ಲಿನ ಇಂಜಿನಿಯರ್’ಗೆ ಉರಿದಿತ್ತು.
ರಾಮೂ ಉವಾಚ "ನೋಡೂ, ಸುಮ್ಮನೆ ಬಗ್ಗಿದಂತೆ ಮಾಡು. ಅವರು ಆಗ ’ಇರ್ಲಿ ಇರ್ಲಿ ಪರವಾಗಿಲ್ಲ’ ಅಂದ ತಕ್ಷಣ ಸುಮ್ಮನಾಗೊಬಿಡು. ನೀನೇನು, ಸಾಷ್ಟಾಂಗ ಬೀಳು ಅಂದೆನೇ?"
ಮಗಳ ಕಡೆಯಿಂಡ ಒಂದು ಬೆದರಿಕೆ ಬಂತು "ಈಗ್ಲೇ ಹೇಳಿದ್ದೀನಿ. ಏನಾದ್ರೂ ಅವರುಗಳು ವರದಕ್ಷಿಣೆ ಅದೂ ಇದೂ ಅಂತ ಶುರು ಮಾಡಿದ್ರೆ, ಸ್ಪಾಟ್’ನಲ್ಲೇ ಕೀ-ಬೋರ್ಡ್ ತೊಗೊಂಡು ತಲೆ ಚಚ್ಚಿಬಿಡ್ತೀನಿ. ಓ.ಕೇ?"
ಇವಳಿಗೆ ಸೌಮ್ಯ ಅಂತ ಹೆಸರಿಡೋ ಬದಲು ಫೂಲನ್ ದೇವಿ ಅಂತ ಹೆಸರಿಡಬೇಕಿತ್ತು ಅಂದುಕೊಂಡು ರಾಮೂ, ಸದ್ಯ ಇಷ್ಟರ ಮಟ್ಟಿಗಾದರೂ ರಾಜಿ ಆದಳಲ್ಲ ಎಂದುಕೊಂಡು ಸುಮ್ಮನಾದರೂ.
ಸಂಜೆ ಆಯಿತು. ಆರಾಮವಾಗಿ ಹೊರಗೆ ಪಾನಿಪುರಿ ತಿನ್ನೋ ಹೊತ್ತಲ್ಲಿ ಈ ಶೋ ಬೇರೆ ಅಂದು ಸಿಡಿಮಿಡಿ ಮಾಡಿಕೊಂಡೇ ತಯಾರಾದಳು. ಮೊದಲೇ ಆಸಕ್ತಿ ಇರಲಿಲ್ಲ. ಅದಕ್ಕೇ ಗಂಡಿನ ಬಗ್ಗೆ ಏನೂ ತಿಳಿದುಕೊಂಡಿರಲಿಲ್ಲ. ಮನಸ್ಸಿಗೆ ಹಿಡಿಸಿದರೆ ಆಮೇಲೆ ತಲೆ ಕೆಡಿಸಿಕೊಂಡರಾಯ್ತು ಅಂತ.
ಹೊರಗೆ ಕಾರಿನ ಸದ್ದು. ಹೇಗಿದ್ದಾನೆ ಎಂದು ನೊಡೋ ಕುತೂಹಲ ಅನ್ನೋದಕ್ಕಿಂತಾ ಹೊರಾಡೋದಕ್ಕೆ mentally prepare ಆಗುತ್ತಿದ್ದಳು.
ಒಂದು ದೊಡ್ಡ ದೇಹ, ಇನ್ನೊಂದು ತೆಳ್ಳಗಿನ ದೇಹ ಅವರ ಜೊತೆ ಯಾರೋ ದಳ್ಳಾಲಿ ಮತ್ತು ಒಬ್ಬ ಚಿಕ್ಕ ಹುಡುಗ. ಸರಿಸಿದ ಕರ್ಟನ್ ಮುಚ್ಚಿ, ಬರುವ ಕರೆಗಾಗಿ ಕಾದು ಕುಳಿತಳು.
ಅಣ್ಣನಿಗೆ ಇವೆಲ್ಲ ಬಹಳ ಹಿಂಸೆ. ಯಾವಾಗಲೋ ಮಧ್ಯಾನ್ನ ಹೊರಗೆ ಹೋದವನು, ಸ್ವಲ್ಪ ಹೊತ್ತಿಗೆ ಮುಂಚೆ ಇವಳ ಮೊಬೈಲಿಗೆ ಕರೆ ಮಾಡಿ ’ಆಲ್ ದ ಬೆಸ್ಟ್’ ಹೇಳಿದ್ದ.
ಅಷ್ಟರಲ್ಲಿ, ದಳ್ಳಾಲಿಯ ಸ್ವರ ಕೇಳಿಸಿತು. ಅಜ್ಜಿಗೆ ಜೋರಾಗಿ ಹೇಳ್ತಿರಬೇಕು. ಇವರ ಮನೆಯವರಿಗೆ ಮೈ ಹುಷಾರಿಲ್ಲವಂತೆ ಅದಕ್ಕೇ ಬರಲಿಲ್ಲ, ಮೂವರು ಯಾಕೆ ಅಂತ ನನ್ನ ಮಗನನ್ನು ಕರೆದುಕೊಂಡು ಬಂದೆ ಅಂತ.
ಅಜ್ಜಿ ಕೂಗಿದರು ’ಸೌಮ್ಯಾ ತಿಂಡಿ ತೊಗೊಂಡು ಬಾ’ ಅಂತ. ಸೌಮ್ಯಳಿಗೆ ಕೋಪ ನೆತ್ತಿಗೇರಿತ್ತು. ತಾವು ಹಿರಿಯರು ಅನ್ನೋ ಗತ್ತು ಆ ದನಿಯಲ್ಲೇ ಗೊತ್ತಾಗುತ್ತೆ ಅಂತ.
ಟ್ರೇ ಹಿಡಿದು ಹಾಲ್’ಗೆ ಹೋದಾಗ ಮತ್ತೆ ಅಜ್ಜಿಯ ಆಣತಿ. ’ತಿಂಡಿ ತಟ್ಟೆ ಅಲ್ಲಿಟ್ಟು. ಮೊದಲು ನಮಸ್ಕಾರ ಮಾಡು. ಆಮೇಲೆ ತಿಂಡಿ ಕೊಡು’. ಅಪ್ಪನ ಮುಖ ಒಮ್ಮೆ ನೋಡಿದಳು. ಅಪ್ಪ ಭಾಳಾ ಹುಷಾರು. ಅವಳು ನೋಡುತ್ತಿದ್ದಂತೆಯೇ ಅವರು ಏನೋ ಮಾತಾಡುವವರ ಹಾಗೆ ಆ ದಳ್ಳಾಳಿಗಳ ಕಡೆ ತಿರುಗಿದರು.
ಸರಿ ಅಂತ ಸೀದ ಹೋಗಿ ಆ ಧಡೂತಿ ದೇಹದ ಬಳಿ ಹೋಗಿ ಕಾಲ ಮುಂದೆ ಬಗ್ಗಿದಳು ... ’ಇರಲಿ, ಇರಲಿ’ ಅಂತಾರೇನೋ ಅಂತ ಕಾದಿದ್ದೇ ಬಂತು. ಏನಿಲ್ಲ !!! ಕೂತೇ ಇತ್ತು ಆ ದೇಹ. ಮಂಡಿಯೂರಿ, ತಲೆ ನೆಲಕ್ಕೆ ತಾಕಿಸಿ ಪೂರ್ತಿ ನಮಸ್ಕಾರ ಮಾಡಲೇಬೇಕಾಯ್ತು !! ಹೋಗಲಿ ಹಿರಿಯರು ಅಂತ ಸುಮ್ಮನಿದ್ದಳು.
ಅಷ್ಟರಲ್ಲೇ ಹಿಂದಿನಿಂದ ಅಜ್ಜಿ ’ಅವರಿಗೂ ನಮಸ್ಕಾರ ಮಾಡು’ ಅಂದರು. ಸೌಮ್ಯಳಿಗೆ ಬಿ.ಪಿ ಏರಿತ್ತು. ಬಿಳಿಯ ಮುಖ ಕೆಂಪೇರಿತ್ತು. ಕಂಡವರು ನಾಚಿಕೆಗೆ ಅಂದುಕೊಂಡರು !
ಈ ಮಹಾಶಯ ನನ್ನ ಗಂಡನಾಗುವವನೇ ಇರಬಹುದು ... ಆದರೆ ಕಾಲಿಗೆ ಬಿದ್ದು ಯಾಕೆ ನಮಸ್ಕಾರ ಮಾಡಬೇಕು ತಾನು ಅಂತ. ಈ ಟೈಮಿನಲ್ಲಿ ಏನೂ ಹೇಳುವ ಹಾಗೆ ಇರಲಿಲ್ಲ. ಸೆರಿ ಎಂದು, ಅವರಿಗೂ ಅಡ್ಡ ಬಿದ್ದಳು. ’ಇರಲಿ ಇರಲಿ ಪರವಾಗಿಲ್ಲ’ ಅಂದರು !!! ಅರ್ಧ ಬಗ್ಗಿದವಳೇ ಹಾಗೇ ಸೆಟೆದು ನಿಂತಳು.
ಇಬ್ಬರನ್ನೂ ಒಮ್ಮೆ ನೋಡುವ ಮನಸ್ಸಾಯಿತು. ನೋಡಿದಳು. ಲಕ್ಷಣವಾಗಿ ಡ್ರೆಸ್ ಮಾಡಿಕೊಂಡಿದ್ದರು ತೆಳ್ಳಗಿನ ದೇಹಧಾರಿ. ಕಣ್ಣಿಗೆ ಗೋಲ್ಡನ್ ಫ್ರೇಮಿನ ಕನ್ನಡಕ. ಮುಖದಲ್ಲಿ ಸ್ವಲ್ಪ ಅಲ್ಲಲ್ಲಿ ಸುಕ್ಕು ಕಂಡು ಬಂದರೂ ಗೊತ್ತಾಗುತ್ತಿರಲಿಲ್ಲ. ಪರವಾಗಿಲ್ಲ ಸ್ಮಾರ್ಟ್. ದಿಟ್ಟಿಸಿ ನೋಡಿದರೆ ತಲೆಗೆ ಬಣ್ಣ ಹಾಕಿದಂತಿದೆ. ಕೈಗೆ ಗೋಲ್ಡನ್ ವಾಚ್. ಸ್ವಲ್ಪ ವಯಸ್ಸು ಜಾಸ್ತಿ ಇರಬೇಕೇನೋ ಆಮೇಲೆ ವಿಚಾರಿಸೋಣ ಅಂತ ಸುಮ್ಮನಾದಳು.
ಮುದುರಿ ಕುಳಿತ ಧಡೂತಿ ದೇಹಕ್ಕೆ ಕೆದರಿದ ಬಕ್ಕ ತಲೆ ಇತ್ತು. ಜೊತೆಗೆ ಅಲ್ಲಲ್ಲೇ ಕರಿಗೂದಲು ಮತ್ತು ದಪ್ಪ ಕನ್ನಡಕ. ಹೊಟ್ಟೆ ನೋಡಿದರೆ ಐದು ತಿಂಗಳ ಗರ್ಭಿಣಿಯಂತೆ. ಆಂಟಿ ಪುಣ್ಯ ಮಾಡಿದ್ದರು ನಿಮ್ಮನ್ನ ಕಟ್ಟಿಕೊಳ್ಳೋಕ್ಕೆ ಅಂತ ಮನದಲ್ಲೇ ಅಂದುಕೊಂಡು, ಎಲ್ಲರಿಗೂ ತಿಂಡಿ ಕೊಟ್ಟಳು.
ಇಷ್ಟೆಲ್ಲ ಆದರೂ, ಅವರ ಹೆಸರೇನು, ಇವರು ಹೆಸರೇನು, ಎಂದೇನೂ ಪರಿಚಯವೇ ಮಾಡಿಕೊಡಲಿಲ್ಲ, ಈ ಹಿರಿಯರು. ತಮಗೆ ತಿಳಿದಿದ್ದರೆ ಸಾಕು, ಇವಳಿಗೇನು ಹೇಳೋದು ಅಂತ ಇರಬೇಕು. ಇಂತಹ ಹೊತ್ತಿನಲ್ಲೇ ಅಮ್ಮನ ನೆನಪು ದಟ್ಟವಾಗಿ ಕಾಡೋದು. ಕಣ್ಣಾಲಿಗಳಲ್ಲಿ ನೀರು ತುಂಬಿತು.
ವರ ಮಹಾಶಯ ಸ್ಪೂನಿನಲ್ಲಿ ನಿಶ್ಯಬ್ದವಾಗಿ ತಿಂದರೇ, ಧಡೂತಿ ಮಾವ ಒಂದೇ ನಿಮಿಷದಲ್ಲಿ ಇಡೀ ತಟ್ಟೆ ಉಪ್ಪಿಟ್ಟು ಮುಗಿಸಿ ಕುಳಿತು ಬಿಡುವುದೇ? ಕಾಫೀ ಕೊಡಲು ಹೋದರೆ, ಮೆಲ್ಲಗೆ ಏನೋ ನುಡಿದರು. ಅರ್ಥವಾಗಲಿಲ್ಲ. ದಳ್ಳಾಲಿ ಮಹಾಶಯರು ನುಡಿದರು ’ಕೂಲ್ ಡ್ರಿಂಕ್ಸ್ ಇದ್ರೆ ಕೊಡಮ್ಮ’ ಅಂದರು. ಒಳಗೆ ಹೋಗಿ ಫ್ರಿಡ್ಜ್’ನಿಂದ ಪೆಪ್ಸಿಯ ಕ್ಯಾನ್ ಮತ್ತು ಒಂದು ಲೋಟ ತಂದು ಕೊಟ್ಟಳು. ಇನ್ನೇನೋ ಪಿಸುಗುಟ್ಟಿದರು. ’ಐಸ್ ಇದ್ರೆ ಕೊಡಮ್ಮ ಅಂದರು’ ಈತ. ಆ ಸೇವೇನೂ ಆಯಿತು. ಒಂದೊಂದೇ ಸಿಪ್ ಕುಡಿಯುತ್ತ, ನೆಲವನ್ನೇ ದಿಟ್ಟಿಸಿ ನೋಡುತ್ತ ಕುಳಿತರವರು.
ನಿಜಕ್ಕೂ ಆಂಟಿ’ಗೆ ಮೈ ಹುಷಾರಿಲ್ಲವೋ ಅಥವಾ ಇವರ ಜೊತೆ ಬಂದರೆ ತಮಗೆ ಮರ್ಯಾದೆ ಕಡಿಮೆ ಆಗುತ್ತದೆ ಅಂತ ಅರೋಗ್ಯ ಸರಿ ಇಲ್ಲ ಅನ್ನೋ ಕಾರಣವೋ?
’ಪ್ರಾಣಿ’ ಎಂದುಕೊಂಡಳು ಸೌಮ್ಯ.
ಮಿಕ್ಕೆಲ್ಲರಿಗೂ ಕಾಫೀ ಕೊಟ್ಟು ತಾನು ಒಳಗೆ ಹೋದಳು. ಸ್ವಲ್ಪ ಹೊತ್ತಾದ ಮೇಲೆ ಅವರಿಬ್ಬರ ನಿರ್ಗಮನ. ದಳ್ಳಾಳಿ ಮತ್ತು ಅವರ ಮಗ ಉಳಿದುಕೊಂಡರು. ಈಗ ಅಪ್ಪ ಕರೆದರು.
ಅಪ್ಪ ಕೇಳಿದರು "ಏನಮ್ಮ ಏನನ್ನಿಸಿತು ಹುಡುಗನ್ನ ನೋಡಿ?".
ಸೌಮ್ಯ "ಹುಡುಗ? ಹುಡುಗ ಅನ್ನೋದಕ್ಕಿಂತ ಮಧ್ಯ ವಯಸ್ಕ ಅನ್ನಬಹುದು. ಇರಲಿ ಸ್ಮಾರ್ಟ್ ಆಗಿ ಇದ್ದಾರೆ."
ದಳ್ಳಾಳಿ ನುಡಿದರು "ಮಧ್ಯ ವಯಸ್ಕ ಅಲ್ಲಮ್ಮ. ವಯಸ್ಸು ಇಪ್ಪತ್ತೆಂಟು ಅಷ್ಟೇ. ಕಾಲ್-ಸೆಂಟರ್’ನಲ್ಲಿ ಕೆಲಸ. ಕೈ ತುಂಬಾ ಸಂಬಳ. ಅಪ್ಪ, ಅಮ್ಮ ಮಗ ಅಷ್ಟೇ ಆ ದೊಡ್ಡ ಮನೆಯಲ್ಲಿ. ಚಿಕ್ಕ-ಚೊಕ್ಕ ಸಂಸಾರ. ಹುಡುಗನ ಅಪ್ಪ ..." ಅಷ್ಟರಲ್ಲಿ ಅವರ ಮೊಬೈಲ್ ಕಿರುಚಿತು. ಯಾರು ಎಂದು ನೋಡಿ, ಒಂದು ನಿಮಿಷ ಬಂದೆ ಎಂದು ಹೊರಗೆ ನೆಡೆದರು.
ಮಗಳು ಅಪ್ಪನ ಬಳಿ ಮೆಲ್ಲನೆ ನುಡಿದಳು "ಅವರೇನೋ ಸರಿ ಅಪ್ಪ. ಆ ಮಾವ ಸ್ವಲ್ಪ ಹಿಂಸೆ ಅನ್ನಿಸುತ್ತೆ ನನಗೆ. ಅಲ್ಲಾ... ಒಂದು ತಟ್ಟೆ ಉಪ್ಪಿಟ್ಟನ್ನ ಒಂದೇ ನಿಮಿಷದಲ್ಲಿ ಮುಗಿಸಿಬಿಡೋದೇ? ಜೊತೆಗೆ ಅದೆಷ್ಟು ಮೆಲ್ಲಗೆ ಮಾತಾಡ್ತಾರೆ. ಅರ್ಥವೇ ಆಗೋಲ್ಲ"
ಅಜ್ಜಿಗೆ ಏನು ಕೇಳಿಸಿತೋ ಏನಿಲ್ಲವೋ, ನುಡಿದರು "ಮಾವ ದಪ್ಪ. ಅತ್ತೆ ಸಣ್ಣ, ಎಲ್ಲ ಮುಖ್ಯವಲ್ಲ. ಹುಡುಗ ಒಪ್ಪಿಗೇನಾ?"
ಸೌಮ್ಯ ಸಿಡಿದಳು "ಏನು? ಒಪ್ಪಿಗೆ’ನಾ? ಏನಜ್ಜೀ ಡೀಟೈಲ್ ಆಗಿ ವಿಚಾರಿಸದೆ ಸುಮ್ಮನೆ ಒಪ್ಪಿಗೆ ಕೊಟ್ಟುಬಿಡೋಕ್ಕೆ ಆಗುತ್ತ?"
ರಾಮೂ ಉವಾಚ "ಹೌದಮ್ಮ. ಅಮ್ಮ ಹೇಳೋದೂ ಸೆರೀನೇ. ಮಾವ ದಪ್ಪ, ಮೆಲು ದನಿ ಮಾತು ಅಂತೆಲ್ಲ ಅಂದರೂ ನೀನ್ಯಾಕೆ ಅಷ್ಟು ತಲೆ ಕೆಡಿಸಿಕೊಳ್ಳುತ್ತೀಯಾ ? ಹುಡುಗನಿಗೆ ಒಳ್ಳೇ ಕೆಲಸ ಇದೆ. ಕೈ ತುಂಬಾ ಸಂಬಳ. ಗೊತ್ತಿರೋ ಕಡೆ. ಒಳ್ಳೇ ಮನೆತನ. ಯೋಚನೆ ಮಾಡಮ್ಮ"
ಸೌಮ್ಯಳಿಗೆ ಅರ್ಥವೇ ಆಗಲಿಲ್ಲ. ಒಂದು ಮದುವೆ ಮನೆಯಲ್ಲಿ ನೋಡಿಲ್ಲ, ಮುಂಜಿ ಮನೆಯಲ್ಲಿ ನೋಡಿಲ್ಲ. ಗೊತ್ತಿರೋವ್ರು ಹೇಗಾದ್ರು ಸಡನ್ನಾಗಿ ಅಂತ
ಅಜ್ಜಿ ಮತ್ತೆ ನುಡಿದರು "ನಮ್ ಗೋಪಾಲೂ ಹೆಂಡತಿಯ ಮೂರನೇ ತಮ್ಮನ ಹೆಂಡತಿಯ ಷಡ್ಕನ ಕಡೆ ಸಂಬಂಧ"
ಸಂಬಂಧ ಕೇಳಿ ಸೌಮ್ಯ ತಲೆ ತಿರುಗಿ ಬೀಳುವಷ್ಟರಲ್ಲಿ, ದಳ್ಳಾಲಿ ಒಳಗೆ ಬಂದರು "ನಾನೇನು ಹೇಳ್ತಿದ್ದೆ? ಹಾ! ಹುಡುಗನ ಅಪ್ಪನದು ಬಿಸಿನೆಸ್ಸು. ಸದಾ ಓಡಾಟ. ದೊಡ್ಡ ದೊಡ್ಡ ಜನರ ಜೊತೆ ಸಹವಾಸವಾದರೂ ಮನುಷ್ಯ ಬಹಳ ಶುದ್ದ ನೋಡಿ. ಮಿತ ಆಹಾರ, ವ್ಯಾಯಾಮ ಎಲ್ಲ ಶಿಸ್ತಾಗಿ ಪಾಲಿಸ್ತಾರೆ. ಮದುವೆಗೆ ಬಂದಿರೋ ಮಗನಿದ್ದೂ ನೋಡಿ ಹೇಗಿದ್ದಾರೆ? ಇನ್ನು ಹುಡುಗನಿಗೆ ಕಾಲ್ ಸೆಂಟರ್’ನಲ್ಲಿ ಕೆಲಸ. ಊಟಕ್ಕೂ ಸಮಯ ಇರೋದಿಲ್ಲ. ಕೂತ ಕಡೆ ಮಿಸುಕಾಡದಂತೆ ನೊಡ್ಕೋತಾರೆ ಕಂಪನಿಯವರು ... ಜೊತೆಗೆ ಅಷ್ಟು ಕೆಲಸಾನೂ ಇರುತ್ತೆ. ಡಬ್ಬಿ ಊಟ ತಂದರೆ ಎಲ್ಲೆಡೆ ವಾಸನೆ ಅಂತ ಅವರೇ ಪಿಜ್ಜ ಕೊಡುತ್ತಾರೆ. ಕೂತ ಕಡೆ ಕೆಲ್ಸ ಮಾಡ್ಕೊಂಡೇ ತಿನ್ನೋದು. ಅದೂ ಏನು ಐದು ನಿಮಿಷದಲ್ಲಿ ಮುಗಿಸಿಬಿಡಬೇಕು. ಬೇಕೆಂದಾಗಲೆಲ್ಲ ಪೆಪ್ಸಿ, ಕೋಕ್ ಅಂತ ಇದ್ದೇ ಇರುತ್ತೆ ಸೇವೆ. ಇವರು ಬಚ್ಚಲಿಗೆ ಹೋಗಬೇಕು ಅಂದಾಗ ಮಾತ್ರ ಸೀಟು ಬಿಟ್ಟು ಏಳೋದು. ಬರೀ ಫೋನಿನಲ್ಲಿ ಮಾತು ಆದ್ದರಿಂದ ಮೆಲು ದನಿ ಅಷ್ಟೇ !" ಅಂದರು
ಮನೆಯಲ್ಲಿ ಸಂಪೂರ್ಣ ನಿಶ್ಯಬ್ದ. ಸ್ಮಶಾನ ಮೌನ.
ದಳ್ಳಾಳಿಗೆ ಏನೂ ಅರ್ಥವಾಗಲಿಲ್ಲ.
ಅಜ್ಜಿ ಬಿಟ್ಟ ಬೊಚ್ಚು ಬಾಯಿ ಮುಚ್ಚಲಿಲ್ಲ. ಇಷ್ಟಕ್ಕೆ ಬೆಳಗ್ಗಿನಿಂದ ಮನೆಯಲ್ಲಿ ಗಲಭೆಯೇ?
ಅಪ್ಪನ ಮುಖದಲ್ಲಿ ಗಂಭೀರ ಮುದ್ರೆ, ಅಚ್ಚು ಒತ್ತಿತ್ತು.
ಸೌಮ್ಯಳ ಬಿಳೀ ವದನ ಮತ್ತೆ ಕೆಂಪಾಗಿತ್ತು. ಕಣ್ಣುಗಳು ಕೀ-ಬೋರ್ಡ್ ಕಡೆ ನೆಟ್ಟಿತ್ತು.
ಮಾವ ಯಾರು, ಮದುವೆ ಗಂಡು ಯಾರು ಅಂತ ಊಹೆ ಮಾಡಿದ್ದು ಇವರ ತಪ್ಪೋ ? ಅಥವಾ ನೋಡಿದ್ರೆ ಗೊತ್ತಾಗುತ್ತೆ ಅಂತ ಅಂದುಕೊಂಡಿದ್ದು ದಳ್ಳಾಳಿಯ ತಪ್ಪೋ?
ಇಷ್ಟೂ ಹೊತ್ತಿನ ನಿರರ್ಥಕ ನಾಟಕಕ್ಕೆ ಸೂತ್ರಧಾರರಾದ ದಳ್ಳಾಲಿ ಗತಿ ಏನಾಯ್ತು ಎಂಬುದು ಇಲ್ಲಿ ಅಪ್ರಸ್ತುತ.

ಯಾವಾಗ್ಲೂ ಗೋಪಾಲನ ಮನೆಗೆ ಹೋಗ್ತೀನಿ ಅಂತ ಹೇಳ್ತಾರೆಯೇ ಹೊರತು, ಹೋಗೋಲ್ಲ. ಒಂದು ವೇಳೆ ಹೋದರೂ, ಗೋಪಾಲನ ಹೆಂಡತಿ ಅಂದರೆ ಇವರ ಎರಡನೇ ಸೊಸೆಗೂ ಇವರಿಗೂ ಅಷ್ಟಕ್ಕಷ್ಟೇ. ಎರಡು ಇದ್ದು ಇಲ್ಲಿಗೇ ವಾಪಸ್ಸು ಓಡಿ ಬರ್ತಾರೆ.

ಮೊಮ್ಮಕ್ಕಳಿಗೂ ಒಮ್ಮೊಮ್ಮೆ ರೇಗುತ್ತೆ. ಆದರೆ ದೊಡ್ಡವರು ಅಂತ ಸುಮ್ಮನಿದ್ದು ಬಿಡ್ತಾರೆ. ಆದರೆ ಇಂದು ಮೊಮ್ಮಗಳಿಗೂ ರೇಗಿತ್ತು "ಅಜ್ಜೀ. ನಾನು ಡಬ್ಬದ ಎಂಜಿಲ್ನೀರ್ ಅಲ್ಲ. ಕಂಪ್ಯೂಟರ್ ಇಂಜಿನಿಯರ್ ! ಹಂಗೆಲ್ಲ ಅನ್ನಬೇಡಿ."

ಪಾಪ, ರಾಮೂ ಇಂಜಿನೀರ್ ಅಂತ ಹೇಳಿಕೊಟ್ಟರೂ ಅಜ್ಜಿ ಮಾತ್ರ ಎಂಜಿಲ್ನೀರ್ ಅನ್ನೋದು ಬಿಟ್ಟಿರಲಿಲ್ಲ.

ಹಿರಿಯರಿಗೆ ತಾವು ದೊಡ್ಡವರು ಅನ್ನೋ ಅಹಂ ಇದ್ದೇ ಇರುತ್ತೆ ತಾನೇ? ಅದೂ ಅಲ್ಲದೇ ಹುಟ್ಟಿನಿಂದ ನೋಡಿದ್ದು ಈಗ ಎದೆ ಎತ್ತರಕ್ಕೆ ನಿಂತ ಮಾತ್ರಕ್ಕೆ ಎದುರಾಡಿದರೆ ಬಿಡ್ತರಾ? ಅದರಲ್ಲೂ ತಮ್ಮ ಮಾತು ಇನ್ನೂ ನೆಡೀತಿದೆ ಅನ್ನೋವಾಗ!

"ಕೇಳಿಸ್ಕೊಂಡ್ಯೇನೋ ರಾಮೂ. ಈ ಮನೆಯಲ್ಲಿ ಆ ಡಬ್ಬಕ್ಕೆ ಇರೋ ಮರ್ಯಾದೆ ನನಗೆ ಇಲ್ಲ. ಸದಾ ಆ ಡಬ್ಬದ ಮುಂದೆ ಕೂತು ಸಿನಿಮಾ ನೋಡ್ತಾರೆ. ಆ ಉದ್ದನೆ ತಟ್ಟೇ ಮೇಲೆ ಏನೋ ಕುಟ್ಟ ಕುಟ್ಟ ಅಂತಾರೆ ಕುಟ್ತಾರೆ. ಈ ವಯಸ್ಸಿನಲ್ಲಿ ನಾನು ದಿನಕ್ಕೆ ಐದು ಸೇರು ಮೆಣಸಿನಕಾಯಿ ಕುಟ್ಟುತ್ತಿದ್ದೆ... ಮೆಣಸಿನಪುಡಿಗೆ. ಈಗಿನ ಕಾಲದ ಹುಡುಗರು ಏನಾದ್ರೂ ಅಂದರೆ ನನಗೇ ತಿರುಗಿಸಿ ಅಂತಾರೆ. ಸಾಕಪ್ಪಾ ಸಾಕು ಈ ಹಂಗಿನ ಜೀವನ. ಪರಮಾತ್ಮಾ ಬೇಗ ಕರೆಸಿಕೊಳ್ಳೋ" ಅಂತ ಶುರು ಹಚ್ಚಿದರು.

ಬಡಪಾಯಿ ರಾಮೂ’ಗೆ ಇದು ಮಾಮೂಲಿ. ತೊಂಬತ್ತರ ಆಸುಪಾಸಿನ ತಾಯಿ. ಸಮಾಧಾನ ಮಾಡಿದರು "ಹೋಗ್ಲಿ ಬಿಡಮ್ಮ. ಹುಡುಗರು. ನೀನು ಇಂಜಿನೀರ್’ನ ತೊಗೊಂಡು ಎಂಜಿಲ್ನೀರು ಅಂತಲೂ ಕಂಪ್ಯೂಟರ್’ನ ಡಬ್ಬ ಅಂತಲೂ ಅಂದರೆ ಅವರಿಗೆ ಬೇಜಾರೋಗೋಲ್ವೇ? ಇಲ್ಲಿದ್ದುಗೊಂಡು ಆ ವಿದೇಶಿ ಕಂಪನಿಗೆ ಕೆಲ್ಸ ಮಾಡ್ತಾರೆ. ಹಾಗಾಗಿ, ರಾತ್ರಿ ಎಲ್ಲ ಆ ಸ್ಕ್ರೀನ್ ಮುಂದೆ ಕೂತು ಮಾಡೊ ಕೆಲಸಕ್ಕೆ ನೀನು ಸಿನಿಮಾ ನೋಡ್ತಾರೆ ಅಂದರೆ ಅವರಿಗೂ ಬೇಜಾರಾಗೋಲ್ವೇ? ನಾನು ಅವರಿಗೆ ಹೇಳ್ತೀನಿ ನೀನು ರಾಮಾ-ಕೃಷ್ಣ ಅಂತ ಸುಮ್ಮನಿರು"

"ಏನಾದ್ರೂ ಮಾಡಿಕೋ. ಆ ಸುಟ್ಟ ಟಿ.ಬಿ ಹಾಕು. ನೋಡ್ತಿರ್ತೀನಿ" ಅಂದು ಟಿ.ವಿ ಸಮೀಪಕ್ಕೆ ಕೂತರು. ರಾಮೂ ಟಿ.ವಿ ಅಂತ ಹೇಳಿಕೊಟ್ಟರೂ ಅಜ್ಜಿ ಟಿ.ಬಿ ಅನ್ನೋದು ಬಿಟ್ಟಿರಲಿಲ್ಲ. ಯಥಾಪ್ರಕಾರ ಬರೀ ಜಾಹೀರಾತುಗಳು. "ಈ ಸುಂದರೀರು ಹಲ್ಲುಜ್ಜಿ, ಮುಖ ತೊಳ್ಕೊಂಡು, ಸ್ನಾನ ಮಾಡಿದ್ದು ಮುಗಿದ್ರೆ ತಾನೇ ಏನಾದ್ರೂ ನಾನು ನೋಡೋಕ್ಕೆ? ಏನು ತಿಕ್ಕಿಕೊಂಡರೂ ಹುಣಿಸೇಹಣ್ಣಿನ ಬಣ್ಣ ಮಾತ್ರ ಹೋಗೋಲ್ಲ" ಅಂತ ಅದರ ಮೇಲೆ ಹರಿಹಾಯ್ದರು.

ಏನೋ, ಅಂತೂ,ಸದ್ಯಕ್ಕೆ ಅಜ್ಜಿ ಗಲಾಟೆ ನಿಂತಿತು. ಎಲ್ಲ ಘಟನೆಗಳನ್ನೂ ಸದಾ ಹಸನ್ಮುಖಿಯಾಗಿ ನೋಡುತ್ತ ಸುಮ್ಮನೆ ನಗುತ್ತಾ ಇರುತ್ತಾರೆ ರಾಮೂ ಪತ್ನಿ ... ಫೋಟೋದಲ್ಲಿ.....

ರಾಮೂ ಮಗಳ ಬಳಿ ಹೋಗಿ ’ನೋಡು ಸೌಮ್ಯ. ಹೀಗೆ ಮಾತು ಮಾತಿಗೆ ನೀನು ಅಜ್ಜಿ ಮೇಲೆ ರೇಗ್ತಾ ಇದ್ರೆ ಹೇಗೆ ಹೇಳು. ಅಮ್ಮ ಇಲ್ಲದ ನಿಮ್ಮಿಬ್ಬರನ್ನ ಸಾಕಿಲ್ವಾ ಅವರು. ಏನೋ ದೊಡ್ಡವರು ಈಗಿನ ಕಾಲದ ಜ್ಞ್ನಾನ ಇಲ್ಲ ... ಹೇಳ್ತಾರೆ ... ಕೇಳಿಬಿಡು ... ಏನು ಗಂಟು ಹೋಗುತ್ತೆ?’

ಮಗಳು ತನ್ನ ವಾದ ಮಂಡಿಸಿದಳು "ಅಲ್ಲಪ್ಪ. ನನ್ನ ಕೆಲಸದ ಬಗ್ಗೆ ಏನಾದ್ರೂ ಅಂದುಕೊಳ್ಳಲಿ. ಅವರಿಗೆ ಅರ್ಥವಾಗೋಲ್ಲ ಅಂತ ನನಗೂ ಗೊತ್ತು. ಆದರೆ ಈಗಿನ ಕಾಲದಲ್ಲೂ ಅವರು ಹೇಳೋ ಈ ಸಂಪ್ರದಾಯಗಳು ಮಾಡಬೇಕಾ ಹೇಳಿ?"

ವಿಷಯ ಇಷ್ಟೇ ! ಸೌಮ್ಯ ಮದುವೆ ವಯಸ್ಸಿಗೆ ಬಂದ ಹುಡುಗಿ. ಕಂಪ್ಯೂಟರ್ ಇಂಜಿನಿಯರ್. ಜೀನ್ಸ್ ತೊಟ್ಟರೂ ಅವಳ ಜೀನ್ಸ್’ನಲ್ಲಿ ಅಲ್ಪ ಸ್ವಲ್ಪ ಸಂಪ್ರದಾಯ ಇದೆ. ಅವಳಿಗೆ ರೇಗಿದ್ದು ಏನೆಂದರೆ, ಇಂದು ಸಂಜೆ ಅವಳನ್ನು ನೋಡಲು ಬರುವ ವರ ಅನ್ನೋ ಮನುಷ್ಯನಿಗೆ (ಅವಳ ಭಾಷೆಯಲ್ಲಿ ಪ್ರಾಣಿಗೆ) ನಮಸ್ಕಾರ ಮಾಡಬೇಕಂತೆ. ಅಜ್ಜಿಯ ಈ ಆರ್ಡರ್, ಅವಳಲ್ಲಿನ ಇಂಜಿನಿಯರ್’ಗೆ ಉರಿದಿತ್ತು.

ರಾಮೂ ಉವಾಚ "ನೋಡೂ, ಸುಮ್ಮನೆ ಬಗ್ಗಿದಂತೆ ಮಾಡು. ಅವರು ಆಗ ’ಇರ್ಲಿ ಇರ್ಲಿ ಪರವಾಗಿಲ್ಲ’ ಅಂದ ತಕ್ಷಣ ಸುಮ್ಮನಾಗೊಬಿಡು. ನೀನೇನು, ಸಾಷ್ಟಾಂಗ ಬೀಳು ಅಂದೆನೇ?"

ಮಗಳ ಕಡೆಯಿಂಡ ಒಂದು ಬೆದರಿಕೆ ಬಂತು "ಈಗ್ಲೇ ಹೇಳಿದ್ದೀನಿ. ಏನಾದ್ರೂ ಅವರುಗಳು ವರದಕ್ಷಿಣೆ ಅದೂ ಇದೂ ಅಂತ ಶುರು ಮಾಡಿದ್ರೆ, ಸ್ಪಾಟ್’ನಲ್ಲೇ ಕೀ-ಬೋರ್ಡ್ ತೊಗೊಂಡು ತಲೆ ಚಚ್ಚಿಬಿಡ್ತೀನಿ. ಓ.ಕೇ?"

ಇವಳಿಗೆ ಸೌಮ್ಯ ಅಂತ ಹೆಸರಿಡೋ ಬದಲು ಫೂಲನ್ ದೇವಿ ಅಂತ ಹೆಸರಿಡಬೇಕಿತ್ತು ಅಂದುಕೊಂಡು ರಾಮೂ, ಸದ್ಯ ಇಷ್ಟರ ಮಟ್ಟಿಗಾದರೂ ರಾಜಿ ಆದಳಲ್ಲ ಎಂದುಕೊಂಡು ಸುಮ್ಮನಾದರೂ.

ಸಂಜೆ ಆಯಿತು. ಆರಾಮವಾಗಿ ಹೊರಗೆ ಪಾನಿಪುರಿ ತಿನ್ನೋ ಹೊತ್ತಲ್ಲಿ ಈ ಶೋ ಬೇರೆ ಅಂದು ಸಿಡಿಮಿಡಿ ಮಾಡಿಕೊಂಡೇ ತಯಾರಾದಳು. ಮೊದಲೇ ಆಸಕ್ತಿ ಇರಲಿಲ್ಲ. ಅದಕ್ಕೇ ಗಂಡಿನ ಬಗ್ಗೆ ಏನೂ ತಿಳಿದುಕೊಂಡಿರಲಿಲ್ಲ. ಮನಸ್ಸಿಗೆ ಹಿಡಿಸಿದರೆ ಆಮೇಲೆ ತಲೆ ಕೆಡಿಸಿಕೊಂಡರಾಯ್ತು ಅಂತ.

ಹೊರಗೆ ಕಾರಿನ ಸದ್ದು. ಹೇಗಿದ್ದಾನೆ ಎಂದು ನೊಡೋ ಕುತೂಹಲ ಅನ್ನೋದಕ್ಕಿಂತಾ ಹೊರಾಡೋದಕ್ಕೆ mentally prepare ಆಗುತ್ತಿದ್ದಳು.

ಒಂದು ದೊಡ್ಡ ದೇಹ, ಇನ್ನೊಂದು ತೆಳ್ಳಗಿನ ದೇಹ ಅವರ ಜೊತೆ ಯಾರೋ ದಳ್ಳಾಲಿ ಮತ್ತು ಒಬ್ಬ ಚಿಕ್ಕ ಹುಡುಗ. ಸರಿಸಿದ ಕರ್ಟನ್ ಮುಚ್ಚಿ, ಬರುವ ಕರೆಗಾಗಿ ಕಾದು ಕುಳಿತಳು.

ಅಣ್ಣನಿಗೆ ಇವೆಲ್ಲ ಬಹಳ ಹಿಂಸೆ. ಯಾವಾಗಲೋ ಮಧ್ಯಾನ್ನ ಹೊರಗೆ ಹೋದವನು, ಸ್ವಲ್ಪ ಹೊತ್ತಿಗೆ ಮುಂಚೆ ಇವಳ ಮೊಬೈಲಿಗೆ ಕರೆ ಮಾಡಿ ’ಆಲ್ ದ ಬೆಸ್ಟ್’ ಹೇಳಿದ್ದ.
ಅಷ್ಟರಲ್ಲಿ, ದಳ್ಳಾಲಿಯ ಸ್ವರ ಕೇಳಿಸಿತು. ಅಜ್ಜಿಗೆ ಜೋರಾಗಿ ಹೇಳ್ತಿರಬೇಕು. ಇವರ ಮನೆಯವರಿಗೆ ಮೈ ಹುಷಾರಿಲ್ಲವಂತೆ ಅದಕ್ಕೇ ಬರಲಿಲ್ಲ, ಮೂವರು ಯಾಕೆ ಅಂತ ನನ್ನ ಮಗನನ್ನು ಕರೆದುಕೊಂಡು ಬಂದೆ ಅಂತ.

ಅಜ್ಜಿ ಕೂಗಿದರು ’ಸೌಮ್ಯಾ ತಿಂಡಿ ತೊಗೊಂಡು ಬಾ’ ಅಂತ. ಸೌಮ್ಯಳಿಗೆ ಕೋಪ ನೆತ್ತಿಗೇರಿತ್ತು. ತಾವು ಹಿರಿಯರು ಅನ್ನೋ ಗತ್ತು ಆ ದನಿಯಲ್ಲೇ ಗೊತ್ತಾಗುತ್ತೆ ಅಂತ.
ಟ್ರೇ ಹಿಡಿದು ಹಾಲ್’ಗೆ ಹೋದಾಗ ಮತ್ತೆ ಅಜ್ಜಿಯ ಆಣತಿ. ’ತಿಂಡಿ ತಟ್ಟೆ ಅಲ್ಲಿಟ್ಟು. ಮೊದಲು ನಮಸ್ಕಾರ ಮಾಡು. ಆಮೇಲೆ ತಿಂಡಿ ಕೊಡು’. ಅಪ್ಪನ ಮುಖ ಒಮ್ಮೆ ನೋಡಿದಳು. ಅಪ್ಪ ಭಾಳಾ ಹುಷಾರು. ಅವಳು ನೋಡುತ್ತಿದ್ದಂತೆಯೇ ಅವರು ಏನೋ ಮಾತಾಡುವವರ ಹಾಗೆ ಆ ದಳ್ಳಾಳಿಗಳ ಕಡೆ ತಿರುಗಿದರು.

ಸರಿ ಅಂತ ಸೀದ ಹೋಗಿ ಆ ಧಡೂತಿ ದೇಹದ ಬಳಿ ಹೋಗಿ ಕಾಲ ಮುಂದೆ ಬಗ್ಗಿದಳು ... ’ಇರಲಿ, ಇರಲಿ’ ಅಂತಾರೇನೋ ಅಂತ ಕಾದಿದ್ದೇ ಬಂತು. ಏನಿಲ್ಲ !!! ಕೂತೇ ಇತ್ತು ಆ ದೇಹ. ಮಂಡಿಯೂರಿ, ತಲೆ ನೆಲಕ್ಕೆ ತಾಕಿಸಿ ಪೂರ್ತಿ ನಮಸ್ಕಾರ ಮಾಡಲೇಬೇಕಾಯ್ತು !! ಹೋಗಲಿ ಹಿರಿಯರು ಅಂತ ಸುಮ್ಮನಿದ್ದಳು.

ಅಷ್ಟರಲ್ಲೇ ಹಿಂದಿನಿಂದ ಅಜ್ಜಿ ’ಅವರಿಗೂ ನಮಸ್ಕಾರ ಮಾಡು’ ಅಂದರು. ಸೌಮ್ಯಳಿಗೆ ಬಿ.ಪಿ ಏರಿತ್ತು. ಬಿಳಿಯ ಮುಖ ಕೆಂಪೇರಿತ್ತು. ಕಂಡವರು ನಾಚಿಕೆಗೆ ಅಂದುಕೊಂಡರು !

ಈ ಮಹಾಶಯ ನನ್ನ ಗಂಡನಾಗುವವನೇ ಇರಬಹುದು ... ಆದರೆ ಕಾಲಿಗೆ ಬಿದ್ದು ಯಾಕೆ ನಮಸ್ಕಾರ ಮಾಡಬೇಕು ತಾನು ಅಂತ. ಈ ಟೈಮಿನಲ್ಲಿ ಏನೂ ಹೇಳುವ ಹಾಗೆ ಇರಲಿಲ್ಲ. ಸೆರಿ ಎಂದು, ಅವರಿಗೂ ಅಡ್ಡ ಬಿದ್ದಳು. ’ಇರಲಿ ಇರಲಿ ಪರವಾಗಿಲ್ಲ’ ಅಂದರು !!! ಅರ್ಧ ಬಗ್ಗಿದವಳೇ ಹಾಗೇ ಸೆಟೆದು ನಿಂತಳು.

ಇಬ್ಬರನ್ನೂ ಒಮ್ಮೆ ನೋಡುವ ಮನಸ್ಸಾಯಿತು. ನೋಡಿದಳು. ಲಕ್ಷಣವಾಗಿ ಡ್ರೆಸ್ ಮಾಡಿಕೊಂಡಿದ್ದರು ತೆಳ್ಳಗಿನ ದೇಹಧಾರಿ. ಕಣ್ಣಿಗೆ ಗೋಲ್ಡನ್ ಫ್ರೇಮಿನ ಕನ್ನಡಕ. ಮುಖದಲ್ಲಿ ಸ್ವಲ್ಪ ಅಲ್ಲಲ್ಲಿ ಸುಕ್ಕು ಕಂಡು ಬಂದರೂ ಗೊತ್ತಾಗುತ್ತಿರಲಿಲ್ಲ. ಪರವಾಗಿಲ್ಲ ಸ್ಮಾರ್ಟ್. ದಿಟ್ಟಿಸಿ ನೋಡಿದರೆ ತಲೆಗೆ ಬಣ್ಣ ಹಾಕಿದಂತಿದೆ. ಕೈಗೆ ಗೋಲ್ಡನ್ ವಾಚ್. ಸ್ವಲ್ಪ ವಯಸ್ಸು ಜಾಸ್ತಿ ಇರಬೇಕೇನೋ ಆಮೇಲೆ ವಿಚಾರಿಸೋಣ ಅಂತ ಸುಮ್ಮನಾದಳು.

ಮುದುರಿ ಕುಳಿತ ಧಡೂತಿ ದೇಹಕ್ಕೆ ಕೆದರಿದ ಬಕ್ಕ ತಲೆ ಇತ್ತು. ಜೊತೆಗೆ ಅಲ್ಲಲ್ಲೇ ಕರಿಗೂದಲು ಮತ್ತು ದಪ್ಪ ಕನ್ನಡಕ. ಹೊಟ್ಟೆ ನೋಡಿದರೆ ಐದು ತಿಂಗಳ ಗರ್ಭಿಣಿಯಂತೆ. ಆಂಟಿ ಪುಣ್ಯ ಮಾಡಿದ್ದರು ನಿಮ್ಮನ್ನ ಕಟ್ಟಿಕೊಳ್ಳೋಕ್ಕೆ ಅಂತ ಮನದಲ್ಲೇ ಅಂದುಕೊಂಡು, ಎಲ್ಲರಿಗೂ ತಿಂಡಿ ಕೊಟ್ಟಳು.

ಇಷ್ಟೆಲ್ಲ ಆದರೂ, ಅವರ ಹೆಸರೇನು, ಇವರು ಹೆಸರೇನು, ಎಂದೇನೂ ಪರಿಚಯವೇ ಮಾಡಿಕೊಡಲಿಲ್ಲ, ಈ ಹಿರಿಯರು. ತಮಗೆ ತಿಳಿದಿದ್ದರೆ ಸಾಕು, ಇವಳಿಗೇನು ಹೇಳೋದು ಅಂತ ಇರಬೇಕು. ಇಂತಹ ಹೊತ್ತಿನಲ್ಲೇ ಅಮ್ಮನ ನೆನಪು ದಟ್ಟವಾಗಿ ಕಾಡೋದು. ಕಣ್ಣಾಲಿಗಳಲ್ಲಿ ನೀರು ತುಂಬಿತು.

ವರ ಮಹಾಶಯ ಸ್ಪೂನಿನಲ್ಲಿ ನಿಶ್ಯಬ್ದವಾಗಿ ತಿಂದರೇ, ಧಡೂತಿ ಮಾವ ಒಂದೇ ನಿಮಿಷದಲ್ಲಿ ಇಡೀ ತಟ್ಟೆ ಉಪ್ಪಿಟ್ಟು ಮುಗಿಸಿ ಕುಳಿತು ಬಿಡುವುದೇ? ಕಾಫೀ ಕೊಡಲು ಹೋದರೆ, ಮೆಲ್ಲಗೆ ಏನೋ ನುಡಿದರು. ಅರ್ಥವಾಗಲಿಲ್ಲ. ದಳ್ಳಾಲಿ ಮಹಾಶಯರು ನುಡಿದರು ’ಕೂಲ್ ಡ್ರಿಂಕ್ಸ್ ಇದ್ರೆ ಕೊಡಮ್ಮ’ ಅಂದರು. ಒಳಗೆ ಹೋಗಿ ಫ್ರಿಡ್ಜ್’ನಿಂದ ಪೆಪ್ಸಿಯ ಕ್ಯಾನ್ ಮತ್ತು ಒಂದು ಲೋಟ ತಂದು ಕೊಟ್ಟಳು. ಇನ್ನೇನೋ ಪಿಸುಗುಟ್ಟಿದರು. ’ಐಸ್ ಇದ್ರೆ ಕೊಡಮ್ಮ ಅಂದರು’ ಈತ. ಆ ಸೇವೇನೂ ಆಯಿತು. ಒಂದೊಂದೇ ಸಿಪ್ ಕುಡಿಯುತ್ತ, ನೆಲವನ್ನೇ ದಿಟ್ಟಿಸಿ ನೋಡುತ್ತ ಕುಳಿತರವರು.

ನಿಜಕ್ಕೂ ಆಂಟಿ’ಗೆ ಮೈ ಹುಷಾರಿಲ್ಲವೋ ಅಥವಾ ಇವರ ಜೊತೆ ಬಂದರೆ ತಮಗೆ ಮರ್ಯಾದೆ ಕಡಿಮೆ ಆಗುತ್ತದೆ ಅಂತ ಅರೋಗ್ಯ ಸರಿ ಇಲ್ಲ ಅನ್ನೋ ಕಾರಣವೋ?
’ಪ್ರಾಣಿ’ ಎಂದುಕೊಂಡಳು ಸೌಮ್ಯ.

ಮಿಕ್ಕೆಲ್ಲರಿಗೂ ಕಾಫೀ ಕೊಟ್ಟು ತಾನು ಒಳಗೆ ಹೋದಳು. ಸ್ವಲ್ಪ ಹೊತ್ತಾದ ಮೇಲೆ ಅವರಿಬ್ಬರ ನಿರ್ಗಮನ. ದಳ್ಳಾಳಿ ಮತ್ತು ಅವರ ಮಗ ಉಳಿದುಕೊಂಡರು. ಈಗ ಅಪ್ಪ ಕರೆದರು.

ಅಪ್ಪ ಕೇಳಿದರು "ಏನಮ್ಮ ಏನನ್ನಿಸಿತು ಹುಡುಗನ್ನ ನೋಡಿ?".

ಸೌಮ್ಯ "ಹುಡುಗ? ಹುಡುಗ ಅನ್ನೋದಕ್ಕಿಂತ ಮಧ್ಯ ವಯಸ್ಕ ಅನ್ನಬಹುದು. ಇರಲಿ ಸ್ಮಾರ್ಟ್ ಆಗಿ ಇದ್ದಾರೆ."

ದಳ್ಳಾಳಿ ನುಡಿದರು "ಮಧ್ಯ ವಯಸ್ಕ ಅಲ್ಲಮ್ಮ. ವಯಸ್ಸು ಇಪ್ಪತ್ತೆಂಟು ಅಷ್ಟೇ. ಕಾಲ್-ಸೆಂಟರ್’ನಲ್ಲಿ ಕೆಲಸ. ಕೈ ತುಂಬಾ ಸಂಬಳ. ಅಪ್ಪ, ಅಮ್ಮ ಮಗ ಅಷ್ಟೇ ಆ ದೊಡ್ಡ ಮನೆಯಲ್ಲಿ. ಚಿಕ್ಕ-ಚೊಕ್ಕ ಸಂಸಾರ. ಹುಡುಗನ ಅಪ್ಪ ..." ಅಷ್ಟರಲ್ಲಿ ಅವರ ಮೊಬೈಲ್ ಕಿರುಚಿತು. ಯಾರು ಎಂದು ನೋಡಿ, ಒಂದು ನಿಮಿಷ ಬಂದೆ ಎಂದು ಹೊರಗೆ ನೆಡೆದರು.

ಮಗಳು ಅಪ್ಪನ ಬಳಿ ಮೆಲ್ಲನೆ ನುಡಿದಳು "ಅವರೇನೋ ಸರಿ ಅಪ್ಪ. ಆ ಮಾವ ಸ್ವಲ್ಪ ಹಿಂಸೆ ಅನ್ನಿಸುತ್ತೆ ನನಗೆ. ಅಲ್ಲಾ... ಒಂದು ತಟ್ಟೆ ಉಪ್ಪಿಟ್ಟನ್ನ ಒಂದೇ ನಿಮಿಷದಲ್ಲಿ ಮುಗಿಸಿಬಿಡೋದೇ? ಜೊತೆಗೆ ಅದೆಷ್ಟು ಮೆಲ್ಲಗೆ ಮಾತಾಡ್ತಾರೆ. ಅರ್ಥವೇ ಆಗೋಲ್ಲ"

ಅಜ್ಜಿಗೆ ಏನು ಕೇಳಿಸಿತೋ ಏನಿಲ್ಲವೋ, ನುಡಿದರು "ಮಾವ ದಪ್ಪ. ಅತ್ತೆ ಸಣ್ಣ, ಎಲ್ಲ ಮುಖ್ಯವಲ್ಲ. ಹುಡುಗ ಒಪ್ಪಿಗೇನಾ?"

ಸೌಮ್ಯ ಸಿಡಿದಳು "ಏನು? ಒಪ್ಪಿಗೆ’ನಾ? ಏನಜ್ಜೀ ಡೀಟೈಲ್ ಆಗಿ ವಿಚಾರಿಸದೆ ಸುಮ್ಮನೆ ಒಪ್ಪಿಗೆ ಕೊಟ್ಟುಬಿಡೋಕ್ಕೆ ಆಗುತ್ತ?"

ರಾಮೂ ಉವಾಚ "ಹೌದಮ್ಮ. ಅಮ್ಮ ಹೇಳೋದೂ ಸೆರೀನೇ. ಮಾವ ದಪ್ಪ, ಮೆಲು ದನಿ ಮಾತು ಅಂತೆಲ್ಲ ಅಂದರೂ ನೀನ್ಯಾಕೆ ಅಷ್ಟು ತಲೆ ಕೆಡಿಸಿಕೊಳ್ಳುತ್ತೀಯಾ ? ಹುಡುಗನಿಗೆ ಒಳ್ಳೇ ಕೆಲಸ ಇದೆ. ಕೈ ತುಂಬಾ ಸಂಬಳ. ಗೊತ್ತಿರೋ ಕಡೆ. ಒಳ್ಳೇ ಮನೆತನ. ಯೋಚನೆ ಮಾಡಮ್ಮ"

ಸೌಮ್ಯಳಿಗೆ ಅರ್ಥವೇ ಆಗಲಿಲ್ಲ. ಒಂದು ಮದುವೆ ಮನೆಯಲ್ಲಿ ನೋಡಿಲ್ಲ, ಮುಂಜಿ ಮನೆಯಲ್ಲಿ ನೋಡಿಲ್ಲ. ಗೊತ್ತಿರೋವ್ರು ಹೇಗಾದ್ರು ಸಡನ್ನಾಗಿ ಅಂತ?

ಅಜ್ಜಿ ಮತ್ತೆ ನುಡಿದರು "ನಮ್ ಗೋಪಾಲೂ ಹೆಂಡತಿಯ ಮೂರನೇ ತಮ್ಮನ ಹೆಂಡತಿಯ ಷಡ್ಕನ ಕಡೆ ಸಂಬಂಧ"

ಸಂಬಂಧ ಕೇಳಿ ಸೌಮ್ಯ ತಲೆ ತಿರುಗಿ ಬೀಳುವಷ್ಟರಲ್ಲಿ, ದಳ್ಳಾಲಿ ಒಳಗೆ ಬಂದರು "ನಾನೇನು ಹೇಳ್ತಿದ್ದೆ? ಹಾ! ಹುಡುಗನ ಅಪ್ಪನದು ಬಿಸಿನೆಸ್ಸು. ಸದಾ ಓಡಾಟ. ದೊಡ್ಡ ದೊಡ್ಡ ಜನರ ಜೊತೆ ಸಹವಾಸವಾದರೂ ಮನುಷ್ಯ ಬಹಳ ಶುದ್ದ ನೋಡಿ. ಮಿತ ಆಹಾರ, ವ್ಯಾಯಾಮ ಎಲ್ಲ ಶಿಸ್ತಾಗಿ ಪಾಲಿಸ್ತಾರೆ. ಮದುವೆಗೆ ಬಂದಿರೋ ಮಗನಿದ್ದೂ ನೋಡಿ ಹೇಗಿದ್ದಾರೆ? ಇನ್ನು ಹುಡುಗನಿಗೆ ಕಾಲ್ ಸೆಂಟರ್’ನಲ್ಲಿ ಕೆಲಸ. ಊಟಕ್ಕೂ ಸಮಯ ಇರೋದಿಲ್ಲ. ಕೂತ ಕಡೆ ಮಿಸುಕಾಡದಂತೆ ನೊಡ್ಕೋತಾರೆ ಕಂಪನಿಯವರು ... ಜೊತೆಗೆ ಅಷ್ಟು ಕೆಲಸಾನೂ ಇರುತ್ತೆ. ಡಬ್ಬಿ ಊಟ ತಂದರೆ ಎಲ್ಲೆಡೆ ವಾಸನೆ ಅಂತ ಅವರೇ ಪಿಜ್ಜ ಕೊಡುತ್ತಾರೆ. ಕೂತ ಕಡೆ ಕೆಲ್ಸ ಮಾಡ್ಕೊಂಡೇ ತಿನ್ನೋದು. ಅದೂ ಏನು ಐದು ನಿಮಿಷದಲ್ಲಿ ಮುಗಿಸಿಬಿಡಬೇಕು. ಬೇಕೆಂದಾಗಲೆಲ್ಲ ಪೆಪ್ಸಿ, ಕೋಕ್ ಅಂತ ಇದ್ದೇ ಇರುತ್ತೆ ಸೇವೆ. ಇವರು ಬಚ್ಚಲಿಗೆ ಹೋಗಬೇಕು ಅಂದಾಗ ಮಾತ್ರ ಸೀಟು ಬಿಟ್ಟು ಏಳೋದು. ಬರೀ ಫೋನಿನಲ್ಲಿ ಮಾತು ಆದ್ದರಿಂದ ಮೆಲು ದನಿ ಅಷ್ಟೇ !" ಅಂದರು

ಮನೆಯಲ್ಲಿ ಸಂಪೂರ್ಣ ನಿಶ್ಯಬ್ದ. ಸ್ಮಶಾನ ಮೌನ.

ದಳ್ಳಾಳಿಗೆ ಏನೂ ಅರ್ಥವಾಗಲಿಲ್ಲ.

ಅಜ್ಜಿ ಬಿಟ್ಟ ಬೊಚ್ಚು ಬಾಯಿ ಮುಚ್ಚಲಿಲ್ಲ. ಇಷ್ಟಕ್ಕೆ ಬೆಳಗ್ಗಿನಿಂದ ಮನೆಯಲ್ಲಿ ಗಲಭೆಯೇ?

ಅಪ್ಪನ ಮುಖದಲ್ಲಿ ಗಂಭೀರ ಮುದ್ರೆ, ಅಚ್ಚು ಒತ್ತಿತ್ತು.

ಸೌಮ್ಯಳ ಬಿಳೀ ವದನ ಮತ್ತೆ ಕೆಂಪಾಗಿತ್ತು. ಕಣ್ಣುಗಳು ಕೀ-ಬೋರ್ಡ್ ಕಡೆ ನೆಟ್ಟಿತ್ತು.

ಮಾವ ಯಾರು, ಮದುವೆ ಗಂಡು ಯಾರು ಅಂತ ಊಹೆ ಮಾಡಿದ್ದು ಇವರ ತಪ್ಪೋ ? ಅಥವಾ ನೋಡಿದ್ರೆ ಗೊತ್ತಾಗುತ್ತೆ ಅಂತ ಅಂದುಕೊಂಡಿದ್ದು ದಳ್ಳಾಳಿಯ ತಪ್ಪೋ?

ಇಷ್ಟೂ ಹೊತ್ತಿನ ನಿರರ್ಥಕ ನಾಟಕಕ್ಕೆ ಸೂತ್ರಧಾರರಾದ ದಳ್ಳಾಲಿ ಗತಿ ಏನಾಯ್ತು ಎಂಬುದು ಇಲ್ಲಿ ಅಪ್ರಸ್ತುತ.

No comments:

Post a Comment