Sunday, March 27, 2011

ನಾನ್ಯಾಕೆ ಸಿನಿಮಾ ಸೇರೋಲ್ಲ?

ನಾನು ಅಂದರೆ ನಾನಲ್ಲ .... ನನ್ನ ಹೆಸರನ್ನು ಮೊದಲೇ ಹೇಳಿಬಿಡುತ್ತೇನೆ ... ಅರುಣ ... ಅಪ್ಪ ಅಮ್ಮನ ಏಕ ಮಾತ್ರ ಸಂತಾನ


ಸೊಗಸಾದ ಹೆಸರು ...


ನನ್ನೀ ಕಥೆ ಬಹಳ ಸೂಕ್ಷ್ಮವಾಗಿದೆ ... ಒಂದು ವಿಲಕ್ಷಣ ಅನುಭವ ... ಮೃದು ಹೃದಯಿಗಳು, ಹೆಂಗೆಳೆಯರು ಓದುವಾಗ ಗಟ್ಟಿ ಮನಸ್ಸು ಮಾಡಿಕೊಳ್ಳಿ .. ಪ್ಲೀಸ್ ... ಕಡೆಗೆ ಏನೂ ಅನ್ನಿಸದಿದ್ದರೆ, ಪರವಾಗಿಲ್ಲ ಬಿಡಿ. ನನಗೇನೂ ಬೇಸರವಿಲ್ಲ.


ಹೆಸರಿಗೆ ತಕ್ಕಂತೆ ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಹಾಸಿಗೆಗೆ ಬೀಳೋ ತನಕ ನಿರಂತರ ಲವಲವಿಕೆ .. ಅದೆಲ್ಲಿರುತ್ತೋ ಚೈತನ್ಯ ಗೊತ್ತಿಲ್ಲ... ನನ್ನ ಕಂಡರೆ ಹಲವರಿಗೆ ಹೊಟ್ಟೆಕಿಚ್ಚು ಈ ಕಾರಣಕ್ಕಾಗಿಯೇ ...


ಓದಿನಲ್ಲಿ ಸದಾ ಮುಂದು, ಆಟ ಸ್ವಲ್ಪ ಹಿಂದೆ. ಬಿಸಿಲಲ್ಲಿ ಆಡಿದರೆ ಕಪ್ಪಾಗುತ್ತೀಯ, ಆಮೇಲೆ ಯಾರೂ ಮದುವೆ ಆಗೋಲ್ಲ ಅಂದರೆ ಅಜ್ಜಿ ಹೆದರಿಸಿದ್ದರು. ಆದರೆ ಚಿತ್ರಕಲೆ, ಸಂಗೀತ, ನಾಟಕ ಅಂತ ಎಲ್ಲದರಲ್ಲೂ ಆಸಕ್ತಿ. ನನ್ನ ಲಲಿತ ಕಲೆಗಳಿಗೆ ಮನೆಯಲ್ಲಿ ಒಳ್ಳೆಯ ಪ್ರೋತ್ಸಾಹ ಇತ್ತು. ನಿಭಾಯಿಸೋ ಶಕ್ತಿ ಇದ್ದಲ್ಲಿ ಯಾಕೆ ಬೇಡ ಅಂತ ... ನಮಗೇನು ಹಣ ಬಲವೇ, ಜಾತಿ ಬಲವೇ ಅಥವಾ ರಾಜ(ಕಾರಣಿ) ಬಲವೇ? ಒಂದೂ ಇಲ್ಲ. ಎಷ್ಟು ಸಾಧ್ಯವೋ ಅಷ್ಟು ಕಲಿತಲ್ಲಿ ಯಾವಾಗಲಾದರೂ ಉಪಯೋಗಕ್ಕೆ ಬರುತ್ತೆ. ಅಲ್ಲವೇ?


ಎಲ್ಲ ಸರಿ, ಒಂದೇ ಒಂದು ವಿಷಯದಲ್ಲಿ ಮಾತ್ರ ಮನೆಯವರ ಅನುಮತಿ ದೊರಕಿರಲಿಲ್ಲ .... ಅದು ’ನಟನೆ’ !!!


ಶಾಲಾ-ಕಾಲೇಜುಗಳಲ್ಲಿ ರಂಗದ ಮೇಲಿದ್ದರೂ ಸಿನಿಮಾ ಬಿಡಿ, ಕಿರು-ತೆರೆಯ ಮೇಲೆ ಕಾಣಿಸಿಕೊಳ್ಳಲು ಇಚ್ಚೆ ತೋರಿದರೂ ಅದಕ್ಕೆ ನಕಾರ ಸಿದ್ದವಾಗಿರುತ್ತಿತ್ತು !!
ನಾನು ಅಡ್ಡ ಹಾದಿ ಹಿಡಿಯುವುದಿಲ್ಲ ಎಂಬ ನಂಬಿಕೆ ಇದ್ದರೂ ಹೃದಯದ ಮೂಲೆಯಲ್ಲಿ ಅಳುಕು ಇದ್ದೇ ಇತ್ತು, ಅಪ್ಪ-ಅಮ್ಮನಿಗೆ.


ಯಾವಾಗ ಈ ವಿಷಯ ಬಗ್ಗೆ ಪ್ರಸ್ತಾವನೆ ಮಾಡಿದರೂ, ಅವರುಗಳು ಹೇಳೋದು ’ವಿದ್ಯೆಯಿದೆ, ವಿನಯ ಇದೆ. ನಿಷ್ಟೆ ಇದೆ. ಸಂಸ್ಕಾರವಿದೆ. ಯಾವ ಕೆಲಸವನ್ನೂ ಸಾಧಿಸುವ ಆತ್ಮ ವಿಶ್ವಾಸ ಇದೆ. ನಾಲ್ಕು ಜನರಿಗೆ ಮಾದರಿಯಾಗಿ ದಾರಿದೀಪವಾಗುವ ಹಾಗೆ ಬದುಕಿದರೆ ಚೆನ್ನ" ಎಂದು ಶುರು ಮಾಡಿ ನಂತರ ಮಾತನ್ನು ಮದುವೆ, ಮೊಮ್ಮಕ್ಕಳಿಗೆ ತಿರುಸಿ ಪುಟ್ಟ ಭಾಷಣವೇ ಬಿಗಿದಿರುತ್ತಾರೆ.


ನನಗೆ ನಟನೆಯಲ್ಲಿ ಆಸಕ್ತಿ ಇದೆ ಆದರೆ ಸುಮ್ಮನೆ ಅವರ ಇಚ್ಚೆಗೆ ವಿರುದ್ದವಾಗಿ ನಟಿಸಲೇ ಬೇಕು ಎಂಬ ಕೆಟ್ಟ ಆಸೆ ಇಲ್ಲ !


ಈ ನಡುವೆ, ನನ್ನ ಮದುವೆಗೆ ತಯಾರಿ ನೆಡೆಯುತ್ತಿದೆ ಎಂದೂ, ಕೆಲವು ಕಡೆಯಿಂದ ಪ್ರಸ್ತಾವನೆ ಬರುತ್ತಿರುವ ವಿಷಯವೂ ನನಗೆ ಗೊತ್ತು. ಇಷ್ಟಕ್ಕೂ ನಾನೇನೂ ಮದುವೆ ವಿರೋಧಿಯೂ ಅಲ್ಲ, ಹಾಗಾಗಿ ಆ ವಿಷಯದ ಬಗ್ಗೆ ತಕರಾರಿಲ್ಲ.


ಹೋಗ್ಲಿ, ಅದರ ವಿಷಯ ಬಿಡಿ. ಈಗ ನಟನೆ ವಿಷಯಕ್ಕೆ ಬರೋಣ.


ಸಿನಿಮದಲ್ಲಿ ನಟಿಸಿದ ಮಾತ್ರಕ್ಕೆ ಜೀವನ ಹಾಳಾಗುತ್ತದೆ ಎಂದೇಕೆ ಇವರ ಅಳುಕು ಅಂತೀರಾ?


ಸಿನಿಮಾ ರಂಗಕ್ಕೂ ಅಪ್ಪನಿಗೂ ಒಂದು ರೀತಿ ನಂಟು ಇದ್ದೇ ಇದೆ. ಹಲವಾರು ಜನರೂ ಗೊತ್ತು. ಅಲ್ಲಿನ ಮಾಯಾ ಜಗತ್ತೂ ಗೊತ್ತು. ತೆರೆಯ ಮೇಲೆ ನೋಡುವ ಮಂದಿಗೂ ನಿಜ ಜೀವನದಲ್ಲಿ ನಾವು ಕಾಣುವ ಅದೇ ಮಂದಿಗೂ ಅಜಗಜಾಂತರ ವ್ಯತ್ಯಾಸ ಇರುತ್ತದೆ. ರಂಗು ರಂಗಾದ ಕಥೆಗಳು ಅವರ ಸುತ್ತಮುತ್ತ ಇರುವುದೂ, ಹಲವಾರು ಬಾರಿ ಕೊಳಕು ಕಥೆ ಎಂದು ಸಮಯ ಸಿಕ್ಕಾಗಲೆಲ್ಲ ಹೇಳುತ್ತಿದ್ದರು. ಬರೀ ಥಳುಕು-ಬಳುಕು ನೋಡಿ ಸಿನಿಮಾ ಸೇರುತ್ತೇವೆ ಎಂದು ಬಂದು ಹಾಳಾದವರ ಪಟ್ಟಿ ಸಾಕಷ್ಟು ಉದ್ದ ಇದೆ ಎಂದು ಆಗಾಗ ಹೇಳುತ್ತಿದ್ದರು.


ಇರಲಿ, ಚಿತ್ರರಂಗದ ಜನ ಅಪ್ಪನಿಗೆ ಪರಿಚಯ ಇದ್ದುದರಿಂದ ನನಗೆ ಅವಕಾಶ ಸಿಗುವ ಬಗ್ಗೆ ಅನುಮಾನವಿಲ್ಲ. ಆದರೆ ಸಿನಿಮಾ ರಂಗವನ್ನು ಹತ್ತಿರದಿಂದ ನೋಡಿರುವ ಅಪ್ಪನಿಗೆ, ನಾನು ಅಲ್ಲಿ ಹೋಗುವುದು ಇಷ್ಟವಿರಲಿಲ್ಲ.


ಹೀಗೇ ಒಂದು ಸಂಜೆ ಮನೆಗೆ ಹೊರಟಿದ್ದೆ. ನೋಡಿದರೇ, ನಿಲ್ಲಿಸಿದ್ದ ಕಾರು ಪಂಚರ್ ಆಗಿತ್ತು. ಮನೆಗೆ ಬೇಗ ಹೋಗೋದಿತ್ತು ಅಂತ ಕಾರನ್ನು ಅಲ್ಲೇ ಬಿಟ್ಟು, ಆಟೋಗಾಗಿ ಹುಡುಕುತ್ತಿದ್ದೆ. ಅದೇ ದಾರಿಯಲ್ಲಿ ಬಂದ ಒಂದು ಕಾರು ನನ್ನನ್ನು ನೋಡಿ ನಿಲ್ಲಿಸಿತು.


ರಾಧಿಕ ....


ನನ್ನ ಚಿಕ್ಕಪನ ಮಗಳು ...


ನನ್ನ ಕಾರಿನ ಕಥೆ ಹೇಳಿದೆ.... ಮನೆಗೆ ಡ್ರಾಪ್ ಕೊಡ್ತೀನಿ ಎಂದಾಗ ನಾನು ಅವಳ ಕಾರಿನಲ್ಲಿ ಕುಳಿತೆ. ಅವಳ ಮುಖದಲ್ಲಿ ಏನೋ ಸಂತೋಷ ಎದ್ದು ಕಾಣುತ್ತಿತ್ತು. ಇಬ್ಬರೂ ಒಂದೇ ವಯಸ್ಸಿನವರು. ಒಟ್ಟಿಗೆ ಆಡಿ ಬೆಳೆದವರು. ’ಏನು ಅಮ್ಮಾವ್ರು ಬಹಳ ಖುಷಿಯಲ್ಲಿರೋ ಹಾಗಿದೆ’ ಅಂದೆ.


ರಾಧಿಕ ಕಾರಣ ಹೇಳಿದಳು !


ಮನೆ ಬಂತು. ಬೇರೆ ಕೆಲಸವಿದ್ದುದರಿಂದ ಅವಳು ಹೊರಟಳು. ನನಗೂ ಅವಳನ್ನು ಒಳಗೆ ಕರೆಯುವ ಮೂಡ್ ಇರಲಿಲ್ಲ. ತಲೆ ಬಿಸಿಯಾದಂತೆ ಅನ್ನಿಸಿ ಸ್ಟ್ರಾಂಗ್ ಕಾಫಿ ಹೀರಿದೆ. ಸ್ವಲ್ಪ ಹಾಯ್ ಅಂತ ಅನ್ನಿಸಿದರೂ ಏನೋ ಕಳೆದುಕೊಂಡ ಭಾವನೆ. ಶಾಸ್ತ್ರಕ್ಕೆ ಊಟವೂ ಆಯ್ತು.


ಮ್ಲಾನವದನ ಕಂಡು ಅಮ್ಮ ಏನಾಯ್ತು ಅಂದರು "ರಾಧಿಕ ಸಿಕ್ಕಿದ್ದಳು" ಅಂದೆ. ಅಮ್ಮ ಸುಮ್ಮನಿದ್ದರು. ಬಹುಶ: ಅವರಿಗೂ ವಿಷಯ ಗೊತ್ತು ಅಂತ ಅನ್ನಿಸಿತು. ನನಗೇನು? ಅಪ್ಪ ಸೋಫಾದ ಮೇಲೆ ಕುಳಿತಿದ್ದರಿಂದ, ಅವರಿಗೂ ಕೇಳಿಸಲಿ ಎಂದು "ರಾಧಿಕಾಗೆ ಸಿನಿಮಾದಲ್ಲಿ ನಟಿಸೋ ಚಾನ್ಸ್ ಸಿಕ್ಕಿದೆಯಂತೆ" ಅಂದೆ.


ಜೋರಾಗಿ ಅಳಬೇಕು ಅನ್ನಿಸಿದರೂ, ಸ್ವಾಭಿಮಾನ ಅಡ್ಡ ಬಂತು.


ಮೊದಲಿಂದಲೂ ಮನೆಯವರಿಗೆಲ್ಲ ಸಿನಿಮಾದಿಂದ ದೂರ ಇರಿ ಎಂದೇ ಹೇಳುತ್ತಿದ್ದುದೂ, ಇಂದು ಇವರ ಮಾತು ಮೀರಿ ರಾಧಿಕ ನಟಿಸಲು ಒಪ್ಪಿದ್ದಾಳೆ ಅಂದಾಗ ಅಪ್ಪನಿಗೂ ರೇಗಿತ್ತು ಅನ್ನಿಸುತ್ತದೆ. ಅವರೂ ತಮ್ಮದೇ ಜೋರು ದನಿಯಲ್ಲಿ ಹೇಳಿದರು ’ಅನುಭವ ಆದ ಹೊರತು ಕೆಲವರಿಗೆ ಬುದ್ದಿ ಬರೋಲ್ಲ ಅನ್ನಿಸುತ್ತೆ. ಅದೂ ನೆಡೆದೇ ಹೋಗಲಿ. ನನ್ನ ಹೆಸರು ಬಳಸುವ ಅವಶ್ಯಕತೆ ಇಲ್ಲ’ ಅಂದುಬಿಟ್ಟರು.


ಸಿಟ್ಟು ಬಂದಾಗ ಅಪ್ಪನ ಮಾತುಗಳು, ಸಿನಿಮಾದಲ್ಲಿ ಇರುವಂತೇ ಕೇಳಿಸುತ್ತದೆ.


ನಾನು ಯಾಕಾದರೂ ಈ ವಿಷಯ ತೆಗೆದೆನೋ ಅನ್ನಿಸಿತು. ಅನುಭವ ಕೆಟ್ಟದಾದರೆ ಆರಂಭದಲ್ಲೇ ನಿಲ್ಲಿಸಿಬಿಡುತ್ತೇನೆ ಎಂದು ನಿರ್ಧಾರ ಮಾಡಿ, ರಾಧಿಕಳಿಗೆ ಕರೆ ಮಾಡಿ ವಿಷಯ ಹೇಳಿದೆ.


ಮುಂದಿನ ಕೆಲವು ದಿನಗಳಲ್ಲಿ ಹಲವಾರು ವಿಷಯಗಳ ಅಪ್ಡೇಟ್ ಕೊಟ್ಟಳು. ತಾನು ನಟಿಸಲಿರುವ ಸಿನಿಮಾದ ಪ್ರಡ್ಯೂಸರ್’ಗೆ ವಿಷಯ ಹೇಳ್ತೀನಿ. ಸದ್ಯದಲ್ಲೇ ಇನ್ನೊಂದು ಪ್ರಾಜಕ್ಟ್ ಶುರು ಮಾಡುತ್ತಿದ್ದಾರೆ. ಅದರಲ್ಲಿ ಅವಕಾಶ ಕೊಡಬಹುದು ಅಂತ.


ಒಂದು ಶುಭ ಘಳಿಗೆಯಲ್ಲಿ ಪ್ರಡ್ಯೂಸರ್ ಕಡೆಯಿಂದ ಕರೆ ಬಂತು. ನಾನು ಭೂಮಿಗಿಂತ ಕೇವಲ ಒಂದು ಇಂಚು ಮೇಲೆ ನೆಡೆಯುತ್ತಿದ್ದೆ ಅನ್ನಿ ! ಏನೇನೋ ಕನಸುಗಳು. ಎಲ್ಲೆಲ್ಲೂ ನನ್ನ ಸಿನಿಮಾ ಪೋಸ್ಟರ್’ಗಳೇ ಕಾಣಿಸುತ್ತಿತ್ತು. ಹಾರಾಡಿಕೊಂಡೇ ಅವರನ್ನು ಭೇಟಿ ಮಾಡಲು ಹೋದೆ.


ಒಂದು ಸಣ್ಣ ಕಛೇರಿ. ದೊಡ್ಡ ಚೇರಿನ ಹಿಂದೆ ಕುಳಿತಿದ್ದ ವ್ಯಕ್ತಿ ಸ್ವಲ್ಪ ದಿಫೆರೆಂಟಾಗಿ ಕಾಣಿಸಿದ. ಸಿನಿಮಾ ಜನವೇ ಹೀಗೇನೋ? ಅವನನ್ನು ನೋಡಿದ ಕೂಡಲೇ ಕಾಲಿಗೆ ಬಿದ್ದು ಗೌರವ ಕೊಡುವ ಹಾಗೇನೂ ಇರಲಿಲ್ಲ. ನಾನು ಪರಿಚಯ ಹೇಳಿಕೊಂಡೆ, ಆದರೆ ಅಪ್ಪನ ಹೆಸರು ಹೇಳಲಿಲ್ಲ. ಆತ ಸುಮ್ಮನೆ ತಲೆ ಆಡಿಸುತ್ತ ನನ್ನನ್ನೇ ನೋಡುತ್ತಿದ್ದ.


ಮುತ್ತಿನಂತಹ ಬೆವರ ಹನಿಗಳು ಮೂಡಿತ್ತು ಎನಗೆ. ಮೇಜಿನಿಂದ ಸ್ವಲ್ಪ ದೂರ ನಿಲ್ಲುವಂತೆ ಸನ್ನೆ ಮಾಡಿ ತೋರಿಸಿದ. ನಾನು ದೂರ ನಿಂತೆ.


ಅಡಿಯಿಂದ ಮುಡಿಯವರೆಗೆ ನುಂಗೋ ಹಾಗೆ ನೋಡುತ್ತಿದ್ದ. ಮೊದಲು ಎಡಕ್ಕೆ ತಿರುಗುವಂತೆ ಸನ್ನೆ ಮಾಡಿದ, ನಂತರ ಬಲಕ್ಕೆ ತಿರುಗುವಂತೆ ಸನ್ನೆ ಮಾಡಿದ. ಒಳಗಿನಿಂದ ಅವನ ಸಹಾಯಕಿ ಬಂದಳು. ಒಂದೆರಡು ಸನ್ನಿವೇಶಗಳನ್ನು ನನಗೆ ಹೇಳಿ ಅದಕ್ಕೆ ನಟಿಸುವಂತೆ ಹೇಳಿದಳು. ನಾನು ನಟಿಸಿ ತೋರಿಸಿದೆ. ಸಹಾಯಕಿಗೆ ಖುಷಿಯಾಯಿತು.


ನಿರ್ಮಾಪಕ ಎಂಬೋ ಪ್ರಾಣಿಗೂ ಇಷ್ಟವಾದಂತೆ ಅನ್ನಿಸಿದರೂ ಅವನ ನೋಟ ಮಾತ್ರ ಯಾಕೋ ಮೈಯೆಲ್ಲ ಮುಳ್ಳು ಬರುವಂತೆ ಮಾಡುತ್ತಿತ್ತು. ಅದೇನು ಹೇಳಿದನೋ ಆ ಹುಡುಗಿಗೆ, ಕಿಸಕ್ಕನೆ ನಕ್ಕು ಒಳಗೆ ಹೋದಳು. ನನಗೆ ಸಿಟ್ಟು ಬರುತ್ತಿತ್ತು. ಆ ಪ್ರಾಣಿ ಚೇರಿನಿಂದ ಎದ್ದ.


ಹೂವಿನ ಚಿತ್ತಾರದ ಶರಟು, ಅದರ ಮೇಲೆ ಅರ್ಧ ತೋಳಿನ ನೇರಳೇ ಬಣ್ಣದ ಕೋಟ್, ಟೈಟ್ ಜೀನ್ಸ್ ಶಾರ್ಟ್ಸ್. ಹತ್ತು ಬೆರಳುಗಳಲ್ಲಿ ಕನಿಷ್ಟ ಆರು ಉಂಗುರಗಳು. ಮೂಗಿನ ಹೊಳ್ಳೆಗಳನ್ನು ಅಪ್ಪಿ ಹಿಡಿದಂತಹ ಕನ್ನಡಕ, ಅದರ ಎರಡೂ ಕಡ್ಡಿಗಳನ್ನು ಹಿಡಿದಿಡುವ ಒಂದು ಬಂಗಾರದ ಸರ ಕುತ್ತಿಗೆಯ ಹಿಂದಿನಿಂದ ಸಾಗಿತ್ತು. ಇಷ್ಟೆಲ್ಲದ ಹಿಂದಿನ ಅಂದರೆ ಆತನ ಕೊಡುಗೆ ಅಲ್ಲದ ಒಂದೇ ಅಂಶವೆಂದರೆ ಅವನ ಬಣ್ಣ.


ಹಾಲಿನಲ್ಲಿ ಅದ್ದಿ ತೆಗೆದಂತಿದ್ದ. ಸುರದ್ರೂಪಿ ಆದರೆ ತಿಕ್ಕಲ ಅನ್ನಿಸಿತು. ಚೇರಿನಿಂದ ಎದ್ದು ಬಂದು ನನ್ನ ಸುತ್ತಲೂ ಒಂದು ಪ್ರದಕ್ಷಿಣೆ ಹಾಕಿದ. ’ನನ್ನನ್ನು ಮುಟ್ಟಬೇಡ ನೀನು’ ಎಂದು ಅಂದುಕೊಳ್ಳುತ್ತಿದ್ದೆ.


ಅಂತೂ ಇಂತೂ ನನ್ನನ್ನು ನೋಡಿ ಮುಗಿಸಿ, ನಾಳೆ ಸೆಟ್’ಗೆ ಬಾ ಎಂದು ಒಂದು ರೀತಿ ಕೆಟ್ಟದಾಗಿಯೇ ಹೇಳಿದಂತಿತ್ತು. ಅದು ಅವನ ಮೊದಲ ಮಾತು. ನನಗೆ ಇನ್ನು ಕೇಳಬಾರದು ಎನ್ನಿಸಿದ ಸ್ವರ ಮಾಧುರ್ಯ. ಸರಿ ಎಂದು ಹೇಳಿ ಅಲ್ಲಿಂದ ನೇರವಾಗಿ ಮನೆಗೆ ಬಂದೆ.


ಅಲ್ಲಿಗೆ ನನ್ನ ಸಿನಿಮಾ ಆಸೆ ಸತ್ತಿತ್ತು !


ಎಲ್ಲಿಯೋ ಹೊರಗೆ ಹೋಗಿದ್ದ ಅಪ್ಪ-ಅಮ್ಮ ಬಂದರು. ನನ್ನ ಮುಖದ ಚರ್ಯೆ ನೋಡಿಯೇ ಏನಾಗಿದೆ ಎಂದು ಊಹಿಸಿದರೂ ಅಮ್ಮ ’ಏನಾಯ್ತು’ ಎಂದು ಕೇಳಿದರು.
ನನ್ನ ಮಾತು ಪೂರ್ತಿ ಆಲಿಸಿ, ಅಲ್ಲಿರಲು ಹಿಂಸೆಯಾಗಿ ಒಳಗೆ ನೆಡೆದರು.


ಅಪ್ಪನ ಕಡೆ ನೋಡಿದೆ.


ಅಪ್ಪ ... ಬಿದ್ದುಬಿದ್ದು ನಗುಲು ಶುರು ಮಾಡಿದರು !!!!


"ಬೇಕಿತ್ತೇನೋ ನಿನಗೆ. ನಿನ್ನ ರೂಪಿಗೆ ಸಾಲು ಸಾಲು ಹುಡುಗಿಯರು ಬೀಳ್ತಾರೆ ಅದರಿಂದ ಹಾಳಾಗ್ತೀಯ ಅಂತ ನಾನು ಹೆದರಿದ್ದೆ. ಈಗ ನೋಡಿದರೆ ಈ ಗಂಡು ಪ್ರಡ್ಯೂಸರ್ ಬಿದ್ನಾ ನಿನಗೆ? ಅಲ್ವೋ ಮಂಕೆ, ಹೆಣ್ಣಾಗಿ ರಾಧಿಕ ಗೆದ್ದುಗೊಂಡು ಬಂದಿದ್ದಾಳೆ ಗಂಡಾಗಿ ನಿನಗೇನಾಗಿತ್ತೋ?"


ಅರುಣಕುಮಾರನಾದ ನಾನು ಮೆಲ್ಲನೆ ನುಡಿದೆ "ಹೌದಪ್ಪ, ರಾಧಿಕ ಹೆಣ್ಣಾಗಿದ್ದಕ್ಕೆ ಗೆದ್ದುಗೊಂಡು ಬಂದಿದ್ದು"


No comments:

Post a Comment