Sunday, March 27, 2011

ಗುಸು ಗುಸು ಪ್ರಸಂಗ !

ಮೊನ್ನೆ ಹೀಗೇ ಕಾರನ್ನು ಪಾರ್ಕ್ ಮಾಡಿ ಧೂಮಪಾನ ಕ್ಷೇತ್ರವನ್ನು (smoking area) ದಾಟಿ ಹೋಗುತ್ತಿದ್ದೆ. ಸ್ವಲ್ಪವೇ ದೂರದಲ್ಲಿ ಇವರಿಬ್ಬರನ್ನು ಕಂಡೆ. ಒಬ್ಬ ಧೂಮಪಾನಿ ಮತ್ತೊಬ್ಬ ಆ ಧೂಮದ ಪಾನಿ. ಏನೋ ಮಾತನಾಡುತ್ತಿದ್ದವರು ಸುಮ್ಮನಾದರು. ಅಲ್ಲಿ ಸಿಗರೇಟ್ ಹೊಗೆ ಆಡುತ್ತಿದ್ದರೆ ನನಗೆ ಅನುಮಾನದ ಹೊಗೆಯಾಡಲು ಶುರುವಾಗಿದ್ದು ಅಂದೇ !

ನನಗೆ ಮೊದಲಿಂದಲೂ ಸ್ವಲ್ಪ ಅನುಮಾನ ಇತ್ತು ... ಅಂದಿನ ಘಟನೆ ನನ್ನ ಅನುಮಾನವನ್ನು ನಂಬಲು ಪ್ರೇರೇಪಿಸಿತು.

ನನ್ನ ಕಂಡರೆ ಮಾತ್ರ ಹೀಗೆ ಆಡ್ತಾರ ಅಥವಾ ಎಲ್ಲರ ಜೊತೆಯೂ ಹೀಗೇನಾ? ಬೇರೆಯವರು ಇದನ್ನು ತಲೆಗೆ ಹಚ್ಚಿಕೊಳ್ಳದೇ ಇರಬಹುದು. ಆದರೆ ನನ್ನ ಮನದಲ್ಲಿ ಅನುಮಾನದ ಹುಳ ಹೊಕ್ಕಾಯಿತಲ್ಲ ! ಇನ್ನು ಈ ಅನುಮಾನ ಪರಿಹಾರವಾಗುವ ತನಕ ನೆಮ್ಮದಿಯಿಲ್ಲ ...

ಮತ್ತೊಂದೆರಡು ಬಾರಿ ಹೀಗೇ ಗುಸು ಗುಸು ಪಿಸು ಪಿಸು ಆಯಿತು ...

ಏನೋ ಜಂಟಿ ಕಾರ್ಯಾಚರಣೆ ನೆಡೆದಿದೆ ... ಯಾಕೆ ಅಂದಿರಾ?

ಯಾರಾದರೂ ಇಬ್ಬರು ಸ್ನೇಹಿತರು ಒಟ್ಟಿಗೆ ಊಟಕ್ಕೆ ಹೋಗ್ತಾರೆ ಅಥವಾ ಒಟ್ಟಿಗೆ ಕಾಫಿಗೆ ಹೋಗ್ತಾರೆ ನಿಜ .... ಆದರೆ ಟಾಯ್ಲೆಟ್’ಗೆ ಒಟ್ಟಿಗೆ ಹೋಗೋದನ್ನ ನೋಡಿದ್ದೀರಾ ?

ನನ್ನಲ್ಲಿನ ಶರ್ಲಾಕ್ ಹೋಮ್ಸ್ ಎದ್ದು ನಿಂತ ! ಇನ್ನು ಪತ್ತೆಯಾಗಲೇಬೇಕು ... ಈ ಅನುಮಾನ ಬಗೆ ಹರಿಯುವ ತನಕ ನನ್ನ ತಲೇ ಮೇಲಿನ ಉಳಿದೆರಡು ಕೂದಲನ್ನು ನಾನು ಬಾಚಿಕೊಳ್ಳುವುದಿಲ್ಲವೆಂದು ಪಾಂಚಾಲಿ (ತರಹ) ಶಪಥ ಮಾಡಿ ಆಯಿತು ...

ಮತ್ತೊಮ್ಮೆ ಹೀಗೇ ಆಯಿತು ...

ನಾನು ಯಾವುದೋ ಮೀಟಿಂಗ್ ಎಂದು ನೆಡೆದು ಅತ್ತ ಹೋಗುತ್ತಿದ್ದೆ ... ದೂರದಲ್ಲಿ ಅವರು ಮಾತನಾಡುತ್ತ ನಿಂತಿದ್ದರು ... ನನ್ನ ಮುಂದೆ ಒಬ್ಬ ನೆಡೆದು ಹೋಗುತ್ತಿದ್ದ. ಆತ ಅವರತ್ತ ನೆಡೆದು ಹೋಗುವಾಗ ಆ ಇಬ್ಬರೂ ಗುಸು ಗುಸು ನಿಲ್ಲಿಸಿ, ಸ್ವಲ್ಪ ಜೋರಾಗಿ ಕೆಲಸ ವಿಷಯ ಏನೋ ಮಾತನಾಡಲು ಶುರು ಮಾಡಿದರು. ಇಷ್ಟು ಹೊತ್ತೂ ಮೆಲ್ಲಗೆ ಮಾತನಾಡುತ್ತಿದ್ದವರು ಈಗೇನು ಜೋರು?

ಅದಕ್ಕಿಂತ ಮುಖ್ಯ ವಿಷಯವೆಂದರೆ, ಅವರ ಈ ನಡುವಳಿಕೆ ನನಗೆ ಮಾತ್ರ ಸೀಮಿತವಾಗಿಲ್ಲ ! ಅಂದರೆ, ಸತ್ಯವಾಗಲೂ ಏನೋ ಸರಿ ಇಲ್ಲ !!

ಈ ವಿಷಯ ತಲೆ ಹೊಕ್ಕಾಗಿನಿಂದ ಸರಿಯಾಗಿ ನಿದ್ದೆ ಇರಲಿಲ್ಲ. ನನ್ನನ್ನು ಮಾತ್ರವಲ್ಲದೇ, ಯಾರನ್ನು ಕಂಡರೂ ಹೀಗೇ ಆಡ್ತಾರೆ ಎಂದು ತಿಳಿದ ಮೇಲೆ, ಸದ್ಯ ಒಂದು ಕಣ್ಣಲ್ಲಿ ನಿದ್ದೆ ಮಾಡಬಹುದು ಎನ್ನಿಸಿತು !

ಆಯ್ತು ... ಈಗ ನನ್ನ ಮುಂದಿನ ಹೆಜ್ಜೆ ಏನು?

ಇವರೀರ್ವರೂ ಕ್ಯಾಂಟೀನಿಗೆ ಊಟಕ್ಕೆ ಹೋಗುವ ಸಮಯವನ್ನು ಗಮನಿಸಿ, ಒಮ್ಮೆ ನಾನೂ ಹಿಂಬಾಲಿಸಿ, ಅವರು ಕುಳಿತ ಟೇಬಲ್’ಗೆ ಸಮೀಪದ ಮತ್ತೊಂದು ಟೇಬಲ್ ಬಳಿ, ಅವರಿಗೆ ಬೆನ್ನು ಹಾಕಿ ಕುಳಿತೆ. ಸದ್ಯಕ್ಕಂತೂ ಏನೋ ಮಾತಿಲ್ಲ. ಕೆಲವು ನಿಮಿಷದ ನಂತರ ಏನೋ ಗುಸು ಗುಸು.

ಮೊದಲೇ ನನಗೆ ಅಷ್ಟಾಗಿ ಕೇಳಿಸೋಲ್ಲ ! ಸ್ವಲ್ಪ ಮೆಲು ದನಿಯಲ್ಲಿ ಮಾತನಾಡಿದರೆ, ಅದು amplify ಆಗದೆ ನನ್ನ ಕಿವಿ ಸೇರೋ ಹೊತ್ತಿಗೆ faded signal ಆಗಿ ಸತ್ತಿರುತ್ತದೆ. ಅದರ ಜೊತೆ ಡಬ್ಬಿಯಲ್ಲಿನ ಬಿಸಿಬೇಳೆಬಾತ್ ಜೊತೆಗೆ ಕರಿದ ಸಂಡಿಗೆಗಳು !

ಇನ್ನೆರಡು ನಿಮಿಷ ಏನೂ ಕೇಳಲಿಲ್ಲ. ಹುಷಾರಾಗಿ ಕೇಳಿಸಿಕೊಳ್ಳುತ್ತಿದ್ದೆ. ಆಹಾ! ಕೇಳಿಸಿಯೇ ಬಿಡ್ತು ... ನನಗೆ ನಗು ತಡೆಯಲಾಗಲಿಲ್ಲ ...

ಅವರಲ್ಲಿ ಒಬ್ಬನಿಗೆ ಹೆಣ್ಣು ದನಿ .... ಹ್ಹ ಹ್ಹ ಹ್ಹ ... ಅದಕ್ಕೇ ಯಾರಿಗೂ ಕೇಳದಿರಲಿ ಅಂತ ಮೆಲ್ಲಗೆ ಮಾತನಾಡುತ್ತಾನೆ. ಊಟ ನಿಲ್ಲಿಸಿ ಹಾಗೇ ಕೇಳಿಸಿಕೊಂಡೆ ... ಮತ್ತೊಬ್ಬನದು ಮಹಾ ಕರ್ಕಶ ದನಿ .... ಅಯ್ಯೋ ಪಾಪ ... ಏನು ಮಾಡಲಾಗುತ್ತೆ ಬಿಡಿ ಅಂತ ಸಮಾಧಾನ ಹೇಳಲು ಮನಸ್ಸಾಗಿ, ಏಳುವ ಮುನ್ನ ತಲೆ ತಿರುಗುಸಿ ನೋಡಿ .... ಹಾಗೇ ಮತ್ತೆ ತಲೆ ತಿರುಗಿಸಿದೆ ...

ಸಂಡಿಗೆ ತಿನ್ನುವಾಗ ಹಿಂದೆ ಏನು ನೆಡೆದಿತ್ತೋ ಕೇಳಿಸಿರಲಿಲ್ಲ ... ಅಲ್ಲಿ, ಆ ಇಬ್ಬರ ಬದಲಿಗೆ ಯಾವುದೋ ಗಂಡು-ಹೆಣ್ಣು ಕುಳಿತಿದ್ದರು !!! ನಾನು ತಲೆ ತಿರುಗಿಸಿ ನೋಡಿದ್ದಕ್ಕೆ ಆತ ನನ್ನನ್ನು ಕೆಕ್ಕರಿಸಿಕೊಂಡು ನೋಡಿದ ...

ಹಾಗಿದ್ರೆ ಇವರಿಬ್ಬರೆಲ್ಲಿ ?

ಆ ಕಡೆ ಈ ಕಡೆ ಹುಡುಕುತ್ತ ನೋಡಿದರೆ ಮತ್ತೊಂದೆಡೆ ಕುಳಿತು ಅವರೂ ನನ್ನತ್ತ ಕೆಕ್ಕರಿಸಿಕೊಂಡು ನೋಡುವುದೇ?

ಪತ್ತೇದಾರಿಕೆ ತೋಪಾಗಿತ್ತು. ಇನ್ನು ಮುಂದೆ ಅವರಿಗೆ ಎದುರಾಗಿ ಕುಳಿತುಕೊಳ್ಳಬೇಕು .... ಆದರೆ, ಅವರ ಕಡೆ ನನಗೆ ಗಮನ ಇದೆ ಅಂತ ಇನ್ಮುಂದೆ ತೋರಿಸಿಕೊಳ್ಳಬಾರದು ....

ಅಲ್ಲಾ, ಹೀಗೆ ಮಾಡಿದರೆ ಹೇಗೆ?

ಅವರು ಟಾಯ್ಲೆಟ್’ಗೆ ಹೋದಾಗ ನಾನೂ ಹೋದರೆ ಏನಾದರೂ ತಿಳಿಯಬಹುದು ... ಆಹಾ .. ಏನು ಘನಂಧಾರಿ ಆಲೋಚನೆ? ಅವರು ಎಷ್ಟು ಹೊತ್ತಿಗೆ ಹೋಗ್ತಾರೆ ಎಂದು ನಾನು ಲೆಕ್ಕ ಇಡಲು ಹೋದರೆ ನನ್ನ ಪ್ರಾಜಕ್ಟ್ ಕೆಲಸ ಯಾರು ಮಾಡ್ತಾರೆ? ಈ ಐಡಿಯಾ ಸರಿ ಕಾಣಲಿಲ್ಲ.

ಸಾಮಾನ್ಯವಾಗಿ ಮಧ್ಯಾನ್ನ ಕಾಫಿ ಕುಡಿಯೋ ಸಮಯ ... ಕಾಫೀ ರೂಮಿನಲ್ಲಿ ಇವರನ್ನು ಹಿಡಿದು ಹಾಕಿದರೆ ಹೆಂಗೆ?

ಒಳ್ಳೇ ಐಡಿಯಾ ...

ಮರುದಿನ ಮಧ್ಯಾನ್ನ ಎರಡು ಘಂಟೆಯಿಂದ ನಾಲ್ಕೂವರೆವರೆಗೂ ಒಂದು ನಾಲ್ಕು ಬಾರಿ ಕಾಫೀ ರೂಮಿಗೆ ಹೋಗಿ ಬಂದೆ. ಅವರ ಸುಳಿವೇ ಇಲ್ಲ. ಏನಾದರಾಗಲಿ ಎಂದುಕೊಂಡು ಕೊನೆಗೆ ಐದು ಘಂಟೆ ಮತ್ತೊಮ್ಮೆ ಹೋದೆ. ನನ್ನ ಸಹೋದ್ಯೋಗಿ ಒಬ್ಬ ಕೇಳಿದ Are you alright? Looks like you are kind of lost ... ಅಂದ .. ನಾನು "ಹಾಗೇನಿಲ್ಲ ಕಣಣ್ಣಾ ... ಮೊನ್ನೆ ತಾನೇ ಚಂದ್ರ ದೊಡ್ಡದಾಗಿ ಬಂದಿದ್ನಲ್ಲ ಆಮೇಲಿಂದ ಹೀಗಾಯ್ತು" ಅನ್ನೋಣ ಅಂತಿದ್ದೆ. ಅವನಿಗೆ ನನ್ನ ಭಾಷೆ ಬರೋಲ್ಲ ಅಂತ ಸುಮ್ಮನಾದೆ!

ಅಂದು ಸೋಮವಾರ ... ಯಾಕೋ ಬೆಳಿಗ್ಗೆಯಿಂದ ತಲೆ ನೋಯುತ್ತಿತ್ತು ... ಒಂದು ಮಾತ್ರೆ ಹಾಕಿಕೊಂಡು, ಕಾಫೀ ರೂಮಿಗೆ ಹೋದೆ ... ಆ ಇಬ್ಬರೂ ಅಲ್ಲೇ ಸಮೀಪದ ಟೇಬಲ್ ಬಳಿ ನಿಂತಿದ್ದರು ... ಯಥಾಪ್ರಕಾರ, ಕಾಫೀ ಕುಡಿಯುತ್ತ ಏನೋ ಗುಸು ಗುಸು ... ಮೊದಲೇ ತಲೆ ನೋಯುತ್ತಿತ್ತು. ಸದ್ಯಕ್ಕೆ ಇವರ ಉಸಾಬರಿ ಬೇಡವೆಂದು ನಾನು ಸುಮ್ಮನೆ ಲೋಟಕ್ಕೆ ಡಿಕಾಕ್ಶನ್ ಬಗ್ಗಿಸಿಕೊಂಡು, ಕ್ರೀಮ್ ಹಾಕಿ, ಸಕ್ಕರೆ ಹಾಕಿ, ಬಿಸಿ ಬಿಸಿ ಕಾಫೀ ಸಿದ್ದಮಾಡಿಕೊಂಡೆ ....

ಆಗ, ಲಘುವಾಗಿ ಅವರ ಮಾತು ಕೇಳಿಸಿಯೇಬಿಡ್ತು .... ಮಾತುಗಳು ಅರ್ಥವಾದಂತೆ, ಕಿವಿ ನೆಟ್ಟಗಾಯಿತು ... ಸ್ವಲ್ಪ ಓರೇಗಣ್ಣಿನಲ್ಲೇ ಮಾತನಾಡುತ್ತಿರುವುದು ಅವರೇನಾ ಎಂದು ಖಚಿತಪಡಿಸಿಕೊಂಡೆ ... ಅವರ ಮಾತು ಕೇಳಿ ಏನೂ ಮಾಡಲು ತಿಳಿಯದಾಯಿತು ...

ಅವರು ಏನಂತ ಮಾತನಾಡುತ್ತಿದ್ದರು ಗೊತ್ತೇ? "ಇವನಿಗೆ ಬೇರೆ ಕೆಲ್ಸ ಇಲ್ವಾ ಗುರೂ? ನಮ್ಮ ಮಾತು ಕದ್ದು ಕೇಳೊ ತರಹ ನಿಂತಿದ್ದಾನೆ? ಸುಮ್ಮನೆ ಕಾಫೀ ಸುರ್ಕೊಂಡ್ ಹೋಗೋದ್ ತಾನೇ?" "ಲೋ! ಸುಮ್ಮನೆ ಇರೋ. ಆ ಮನುಷ್ಯನಿಗೆ ಕನ್ನಡ ಅರ್ಥವಾದ್ರೆ ಏನಂದುಕೊಳ್ತಾರೆ?" "ಹಂಗಂತೀಯಾ? ಹೋಗ್ಲಿ ನೆಡಿ" ....

ಹೊರದೇಶದ ಜನ ಯಾರಾದ್ರೂ ಕೇಳಿಸಿಕೊಂಡರೆ ಏನಂದುಕೊಳ್ಳುತ್ತಾರೋ ಎಂದುಕೊಂಡು ಮೆಲು ದನಿಯಲ್ಲಿ ಅವರು ’ಕನ್ನಡ’ದಲ್ಲಿ ಮಾತನಾಡುತ್ತಿದ್ದರು !!! ಬಹುಶ: ಇಷ್ಟೂ ದಿನ.

ಈಗ, ನಾನು ಅವರನ್ನು ಪರಿಚಯ ಮಾಡಿಕೊಳ್ಳಲಾ? ಬೇಡವಾ?


No comments:

Post a Comment